ಯಮರಾಜನ ಸಹೋದರ

ಈ ಬರಹವನ್ನು ವೈದ್ಯಲೋಕದವರು ಹಾಸ್ಯಲೇಖನ ಎಂದು ಪರಿಗಣಿಸುವ, ರೋಗಿಗಳು ಕಟುವಾಸ್ತವ ಎಂದು ಪ್ರತಿಪಾದಿಸುವ ಸಾಧ್ಯತೆ ಇದೆ! ಇದಕ್ಕೆ ಲೇಖಕರು ಹೊಣೆಯಲ್ಲ!

ಸಂಸ್ಕ್ರತದಲ್ಲಿ ಒಂದು ಜನಪ್ರಿಯ ಚಾಟು ಪದ್ಯವಿದೆ. ಅದರರ್ಥ ಹೀಗಿದೆ:

ವೈದ್ಯರಾಜನೇ, ನೀನು ಯಮರಾಜನ ಸಾಕ್ಷಾತ್ ಬ್ರದರ್ರು. ಯಮನಾದರೆ ಪ್ರಾಣ ಮಾತ್ರ ತಗೊಂಡು ಹೋಗ್ತಾನೆ. ವೈದ್ಯನಾದ ನೀನು ಪ್ರಾಣದ ಜೊತೆಗೆ ಹಣಾನೂ ತಗೊಂಡು ಹೋಗ್ತೀಯ!

ಇದನ್ನ ಹಾಸ್ಯಕ್ಕಾಗಿ ಬರೆದರೋ, ಸತ್ಯವನ್ನಿಟ್ಟು ಬರೆದರೋ ಗೊತ್ತಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಇದು ನಿಜವೆಂದು ಎಲ್ಲರ ಅನುಭವಕ್ಕೆ ಬರ್ತಾ ಇದೆ. ಆಸ್ಪತ್ರೆ ದರ್ಶನವಾದರೆ ಬ್ಯಾಂಕ್ ಬ್ಯಾಲೆನ್ಸ್ ಇಳಿಯುತ್ತದೆ. ಇನ್ಶೂರೆನ್ಸ್ ಎಷ್ಟು ಲಕ್ಷಕ್ಕೆ ಮಾಡಿದ್ದೇವೋ ಅಷ್ಟು ಮೊತ್ತಕ್ಕೆ ಎಲ್ಲಾ ಟೆಸ್ಟ್ ಗಳನ್ನೂ ಮುಗಿಸಿಬಿಡುತ್ತಾರೆ. ಗಂಡಸರಿಗೂ ಯೂಟ್ರೆಸ್ ಟೆಸ್ಟ್ ಮಾಡಿದ ಉದಾಹರಣೆಗಳು ಇರಬಹುದು.

ನಾವು ಚಿಕ್ಕವರಿದ್ದಾಗ ಆಸ್ಪತ್ರೆಯೆಂದರೆ ಬಣ್ಣಬಣ್ಣದ ಔಷಧಿಯ ದ್ರಾವಣಗಳನ್ನು ವಿವಿಧ ಗಾಜಿನ ಜಾಡಿಗಳಲ್ಲಿ ತುಂಬಿಟ್ಟ ಜಾಗ. ಗಂಟಲ ನೋವೆಂದರೆ `ಆ’ ಎಂದು ಬಾಯಿ ತೆರೆಸಿ ಕಿರುನಾಲಿಗೆಯ ಸುತ್ತ ಟಿಂಚರ್ ಮಾದರಿಯ ಔಷಧಿ ಹಚ್ಚುತ್ತಿದ್ದ ಕಾಂಪೌಡರ್ ನೆನಪಾಗುತ್ತಾರೆ. ನಾವು ಒಯ್ಯುತ್ತಿದ್ದ ಬಾಟಲಿಗೆ ಸೂಕ್ತ ದ್ರಾವಣವನ್ನು ತುಂಬಿ ಬಾಟೆಲ್ ಮೇಲೆ ಡೋಸೇಜ್ ಗೆರೆಯ ಚೀಟಿ ಅಂಟಿಸಿ ಕಳಿಸುತ್ತಿದ್ದರು. ಡಾಕ್ಟರ್ ಕೊಟ್ಟ ಔಷಧಿಗಳಿಂದ ಯಾವುದೇ ಸೈಡ್ ಎಫೆಕ್ಟ್ ಆಗುತ್ತಿರಲಿಲ್ಲ. ಆದರೆ ಈಗ ಕೊಡುವ ಮಾತ್ರೆಗಳು ಮತ್ತು ಇಂಜೆಕ್ಷನ್‍ಗಳಿಂದ ಯಾವ ರೀತಿಯ ತೊಂದರೆ ಕಾಣಿಸಿಕೊಳ್ಳಬಹುದು ಎಂಬುದು ವೈದ್ಯರಿಗೇ ಗೊತ್ತಿರುವುದಿಲ್ಲ. ಆಗ ಆಸ್ಪತ್ರೆಗೆ ಖಾಲಿ ಶೀಷೆ ಒಯ್ಯುತ್ತಿದ್ದೆವು. ಈಗ ಭರ್ತಿ ಪರ್ಸು ಒಯ್ಯಬೇಕಿದೆ.

ನನ್ನ ಬಂಧು ಒಬ್ಬರು ಮೋಟರ್ ಸೈಕಲ್‍ನಲ್ಲಿ ಎಂದಿನಂತೆ ಬಂದು ಟಾರ್ ಡಬ್ಬಗಳಿಗೆ ಢಿಕ್ಕಿ ಕೊಟ್ಟು ಸೊಂಟ ಮುರಿದುಕೊಂಡು ಆಸ್ಪತ್ರೆ ಪಾಲಾದರು. ಆಪರೇಷನ್ ಆಯಿತು. ಅದಾದ ಮೇಲೆ ಹತ್ತು ವರುಷದಲ್ಲಿ ನಾಲ್ಕು ಆಪರೇಷನ್ ಆದವು.

15 ವರ್ಷಗಳ ಹಿಂದಿನ ಮಾತು. ಕಬ್ಬನ್ ರೋಡ್‍ಗೆ ಟಾರ್ ಹಾಕಿದ್ದರು. ಟಾರ್ ಹಸಿ ಇದೆಯೆಂದು ರಸ್ತೆಯ ಮೇಲೆ ಟಾರ್ ಡಬ್ಬಗಳನ್ನು ಜೋಡಿಸಿಟ್ಟಿದ್ದರು. ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಯಾವುದೇ ರಿಫ್ಲೆಕ್ಟರ್ಸ್ ಇರಲಿಲ್ಲ. ನನ್ನ ಬಂಧು ಒಬ್ಬರು ಮೋಟರ್ ಸೈಕಲ್‍ನಲ್ಲಿ ಎಂದಿನಂತೆ ಬಂದು ಟಾರ್ ಡಬ್ಬಗಳಿಗೆ ಢಿಕ್ಕಿ ಕೊಟ್ಟು ಸೊಂಟ ಮುರಿದುಕೊಂಡು ಆಸ್ಪತ್ರೆ ಪಾಲಾದರು. ಆಪರೇಷನ್ ಆಯಿತು. ಅದಾದ ಮೇಲೆ ಹತ್ತು ವರುಷದಲ್ಲಿ ನಾಲ್ಕು ಆಪರೇಷನ್ ಆದವು. ನೋವನ್ನು ತಡೆಗಟ್ಟಲು ಸ್ಟಿರಾಯ್ಡ್ಸ್ ಇಂಜೆಕ್ಷನ್ ಕೊಟ್ಟು ಕೊಟ್ಟೂ ಕಡೆಗೆ ಲಿವರ್ ಮತ್ತು ಪ್ಯಾಂಕ್ರಿಯಾಸ್‍ಗಳು ಸಂಪೂರ್ಣ ಹಾಳಾಗಿ ಇತ್ತೀಚೆಗೆ ಅಸುನೀಗಿದರು. ಔಷಧಿ ಮನುಷ್ಯನ್ನ ಉಳಿಸುತ್ತೋ, ಔಷಧಿ ಮನುಷ್ಯನ್ನ ಕೊಲ್ಲುತ್ತೋ ತಿಳಿಯದು.

ದೊಡ್ಡ ಎಂ.ಎನ್.ಸಿ. ಆಸ್ಪತ್ರೆಗಳ ಹೈಫೈ ವಾತಾವರಣ ನೋಡುತ್ತಿದ್ದಂತೆಯೇ ಪಲ್ಸ್ ರೇಟ್ ಜಾಸ್ತಿ ಆಗುತ್ತದೆ. ಉದ್ಯೋಗ ಅರಸಿ ಇಂಟರ್ ವ್ಯೂಗೆ ಹೋದಂತೆ ಇರುತ್ತದೆ. ಈ ಬಗ್ಗೆ ನಗೆಸಾಹಿತಿ ಬೀಚಿಯವರು ಬಹಳ ಹಿಂದೆಯೇ ಬರೆದಿದ್ದರು. ತಿಮ್ಮನಿಗೆ ತಲೆನೋವು ಆದಾಗ ಆತ ಸ್ಪೆಷಲಿಸ್ಟ್ ಡಾಕ್ಟರ್‍ಗಳ ಬಳಿಗೆ ಹೋಗುತ್ತಾನೆ. ಬ್ಲಡ್ ಟೆಸ್ಟು, ಎಕ್ಸರೇ, ಇಸಿಜಿ ಇವೇ ಮೊದಲಾದ ಸಮಸ್ತವನ್ನೂ ಆತ ಮುಗಿಸಿ ಕಡೆಗೆ ಇದು ಹಲ್ಲಿನ ದೋಷ. ಯಾವುದೋ ಹಲ್ಲಲ್ಲಿ ದೋಷವಿದೆ ಎಂದು ಒಂದೊಂದೇ ಹಲ್ಲನ್ನು ಕಿತ್ತು ನೋಡುತ್ತಾರೆ. ಎಲ್ಲಾ ಹಲ್ಲುಗಳೂ ಸರಿಯಾಗಿರುತ್ತವೆ. `ನಿನಗೆ ಏನೂ ತೊಂದರೆ ಇಲ್ಲ ಹೋಗು’ ಎನ್ನುವ ವೇಳೆಗೆ ತಿಮ್ಮ ಬಾಯಲ್ಲಿರುವ ಎಲ್ಲಾ ಹಲ್ಲುಗಳನ್ನೂ ಕಳೆದುಕೊಂಡಿರುತ್ತಾನೆ.

ಪ್ರಾಣ ಹೋಗಿದೆಯೆಂದು ಶವಾಗಾರಕ್ಕೆ ಬಾಡಿಯನ್ನು ಹಾಕಿದ್ದಾಗ ಆ ವ್ಯಕ್ತಿ ಬದುಕಿ ಎದ್ದು ಬಂದ ಘಟನೆಗಳಿವೆ. “ನಾನು ಬದುಕಿದ್ದೀನಿ ಡಾಕ್ಟರ್’’ ಎಂದು ರೋಗಿ ಬೇಡಾಡಿದರೂ ಒಪ್ಪದ ನರ್ಸ್, “ಡಾಕ್ಟರ್ ಹೇಳಿದ ಮೇಲೆ ಮುಗೀತು, ನೀನು ಸತ್ತಿದ್ದೀಯ, ಬಿದ್ಕೋ’’ ಎಂದು ಶವಾಗಾರಕ್ಕೆ ಸಾಗಿಸಿದ ಉದಾಹರಣೆಗಳಿವೆ.

ನಾವು ಜ್ವರವೆಂದು ಯಾವುದೇ ದೊಡ್ಡ ಆಸ್ಪತ್ರೆಗೆ ಹೋದರೂ, `ಇದು ಡೆಂಗ್ಯೂ ಜ್ವರ. ಬದುಕೋದು ಕಷ್ಟ’ ಎಂದು ಹೇಳಿ ಐ.ಸಿ.ಯು.ನಲ್ಲಿ ಮಲಗಿಸಿ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿಬಿಡುತ್ತಾರೆ. ಯಾವ ಆಸ್ಪತ್ರೆಗೆ ಹೋದರೂ ರೋಗಿ ಬದುಕುವ ಬಗ್ಗೆ ಖಾತ್ರಿ ಕೊಡುವುದಿಲ್ಲ. ಸರ್ಕಾರಿ ಆಸ್ಪತ್ರೆಗಳು ಒಂದು ಕಾಲಕ್ಕೆ ಜನರಿಗೆ ತುಂಬಾ ಸಹಾಯ ಮಾಡುತ್ತಿದ್ದವು. ನಮ್ಮಲ್ಲಿ ಬಹುಮಂದಿ ಹಿರಿಯರು ಹುಟ್ಟಿದ್ದು ಸರ್ಕಾರಿ ಆಸ್ಪತ್ರೆಗಳಲ್ಲೇ. ಬೆಂಗಳೂರಿನ `ವಾಣಿವಿಲಾಸ್’ ಆಸ್ಪತ್ರೆ ಆ ಕಾಲಕ್ಕೆ ಹೆರಿಗೆಗಳಿಗೆ ಹೆಸರುವಾಸಿ ಆಸ್ಪತ್ರೆಯಾಗಿತ್ತು. ಇನ್ನು `ವಿಕ್ಟೋರಿಯಾ’ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರಗಳು ಸುಸ್ಥಿತಿಯಲ್ಲಿ ಇರುವುದಿಲ್ಲ. ಯಂತ್ರ ಕೆಟ್ಟಿರುವುದರಿಂದ ಸರ್ಕಾರಿ ಅಧಿಕಾರಿಗಳೇ ಖಾಸಗಿ ವೈದ್ಯರ ಬಳಿ ರೋಗಿಯನ್ನು ಕಳಿಸುತ್ತಾರೆ. ಆಸ್ಪತ್ರೆ ಶೌಚಾಲಯಗಳ ದುಸ್ಥಿತಿಯ ಬಗ್ಗೆ ಹೇಳುವಂತೆಯೇ ಇಲ್ಲ.

ಹಿಂದಿನ ಕಾಲದಲ್ಲಿ ವೈದ್ಯರು ರೋಗಿಯ ಮನೆಯವರಿಗೆ ಏನೂ ಆಗುವುದಿಲ್ಲ ಎಂದು ಧೈರ್ಯ ಹೇಳುತ್ತಿದ್ದರು. ಆದರೆ ಈಗ ಒಂದು ಸಣ್ಣ ಉಗುರಿನ ಆಪರೇಷನ್ ಆದರೂ ರೋಗಿ ಸತ್ತರೆ ತಮ್ಮ ತಪ್ಪೇನೂ ಇಲ್ಲ ಎಂದು ವೈದ್ಯರು ಪತ್ರಕ್ಕೆ ಸಹಿ ಮಾಡಿಸಿಕೊಂಡುಬಿಡುತ್ತಾರೆ. ಇನ್ನು ಹೆರಿಗೆ ಕೇಸುಗಳನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದಾಗ ಡಾಕ್ಟರ್ ಬಂದು ಕೇಳುವುದು ತಾಯಿಯನ್ನು ಉಳಿಸುವುದೋ ಅಥವಾ ಮಗುವನ್ನು ಉಳಿಸುವುದೋ ಎಂದು. ತಂದೆಯಾದವನು ಬಾಯಿಬಾಯಿ ಬಡಿದುಕೊಂಡು ಇಬ್ಬರನ್ನೂ ಉಳಿಸಿ ಎನ್ನುತ್ತಾನೆ. ಅದಕ್ಕೆ ವಿಶೇಷವಾದ ಫೀಸನ್ನು ಕಟ್ಟಿದ ಮೇಲೆ ಇಬ್ಬರೂ ಉಳಿಯುತ್ತಾರೆ.

Leave a Reply

Your email address will not be published.