ಯಾರು ಹಿತವರು ಈ ಮೂವರೊಳಗೆ…?

-ಪದ್ಮರಾಜ ದಂಡಾವತಿ

ಪರ್ಯಾಯ ನಾಯಕತ್ವ ಕಾಣದ ಬಿಜೆಪಿ

ಇಷ್ಟೆಲ್ಲ ಆಂತರಿಕ ತಿಕ್ಕಾಟ ಇರುವ, ಹಾದಿಬೀದಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಅವರ ಪಕ್ಷದ ನಾಯಕರೇ ಎಲ್ಲ ಬಗೆಯ ಆರೋಪ ಮಾಡುತ್ತಿರುವಾಗ ಜನರು ಮತ್ತೆ ಅದೇ ಪಕ್ಷಕ್ಕೆ, ನಾಯಕತ್ವಕ್ಕೆ ಜನಾದೇಶ ಕೊಡುತ್ತಾರೆಯೇ? ಮುಂದಿನ ಚುನಾವಣೆಯ ನಾಯಕತ್ವವನ್ನು ಲಿಂಗಾಯತರ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ವಹಿಸುವುದಿಲ್ಲ!

ವರ್ತಮಾನದಲ್ಲಿ ಮತ್ತು ಇತಿಹಾಸದಲ್ಲಿ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳಿಗೆ ಅನೇಕ ಪಾಠಗಳು ಇವೆ. ವರ್ತಮಾನದಿಂದಲೇ ಪಾಠ ಕಲಿಯದವರು ಇತಿಹಾಸದಿಂದ ಕಲಿಯುತ್ತಾರೆಯೇ?

ಒಬ್ಬ ನಾಯಕ ಒಂದು ಪಕ್ಷಕ್ಕೆ ಬೇಕಾಗಿರುವುದು ಬೇರೆ; ಅನಿವಾರ್ಯವಾಗಿರುವುದು ಬೇರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈಗ ಬಿಜೆಪಿಗೆ ಬಹಳ ಬೇಕಾದವರು ಅಲ್ಲ. ಆದರೆ, ಅನಿವಾರ್ಯರು. ಬೇಕಾದವರು ಆಗಿದ್ದರೆ ಅವರ ವಿರುದ್ಧ ಇಷ್ಟು ಮಂದಿ ಶಾಸಕರು ಬಾಯಿಗೆ ಬಂದAತೆ ಮಾತನಾಡುತ್ತಿರಲಿಲ್ಲ. ಮತ್ತು ಅವರ ಮಾತುಗಳನ್ನು ಕೇಳಿಸಿಕೊಂಡು ಪಕ್ಷದ ಹೈಕಮಾಂಡ್ ಸುಮ್ಮನೆ ಇರುತ್ತಿರಲಿಲ್ಲ. ಬಿಜೆಪಿಗೆ, ಯಡಿಯೂರಪ್ಪ ನುಂಗಲೂ ಆಗದ ಉಗುಳಲೂ ಆಗದ ಅನಿವಾರ್ಯ ನಾಯಕ. ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಹಾಕಿದರೆ ನಷ್ಟವೇ ಹೆಚ್ಚು ಎಂದು ಮುಂದುವರಿಸಿದAತೆ ಕಾಣುತ್ತದೆ. ಆದರೆ, ಭದ್ರವಾಗಿ ತಳವೂರಬಾರದು ಎಂದು ಒಂದು ಕಡೆ ಯತ್ನಾಳರನ್ನು ಛೂ ಬಿಟ್ಟಿದ್ದರೆ ಇನ್ನೊಂದು ಕಡೆ ವಿಶ್ವನಾಥರು ತಾವೇ ಆ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಇವರ ಆಚೆ ಈಚೆ ಇನ್ನೂ ಅನೇಕ ಅತೃಪ್ತ ಆತ್ಮಗಳು ಪಕ್ಷವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.

ಯಾವುದೇ ಒಂದು ಪಕ್ಷ ಜನಾದೇಶವಿಲ್ಲದೇ ಅಡ್ಡ ಮಾರ್ಗದಿಂದ ಅಧಿಕಾರ ಹಿಡಿದರೆ ಹೀಗೆಯೇ ಆಗುತ್ತದೆ. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 104 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಿಕ್ಕಿತ್ತು. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿ ಎದುರಿಸಿದ ಚುನಾವಣೆಯದು. ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಅವರ ಕನಸಿಗೆ ಭಂಗ ತಂದು ತರಾತುರಿಯಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ (ಎಸ್) ಸೇರಿಕೊಂಡು ಸರ್ಕಾರ ರಚನೆ ಮಾಡಿದುವು. 78 ಸೀಟುಗಳಲ್ಲಿ ಗೆದ್ದಿದ್ದರೂ ಕೇವಲ 37 ಸೀಟುಗಳಲ್ಲಿ ಗೆದ್ದಿದ್ದ ಜೆ.ಡಿ(ಎಸ್)ಗೆ ಕಾಂಗ್ರೆಸ್ಸು ಅಧಿಕಾರದ ನಾಯಕ ಗದ್ದುಗೆಯನ್ನು ಬಿಟ್ಟುಕೊಟ್ಟಿತು. ಅವರಲ್ಲಿ 14 ಜನ ಕಾಂಗ್ರೆಸ್ಸಿಗರನ್ನು ಮತ್ತು ಮೂವರು ಜೆ.ಡಿ (ಎಸ್)ನವರನ್ನು ರಾಜೀನಾಮೆ ಕೊಡಿಸಿ ಬಿಜೆಪಿಯು ಸರ್ಕಾರ ರಚನೆ ಮಾಡಿದೆ.

ಇದು ವಾಮಮಾರ್ಗದಿಂದ ಹಿಡಿಯುತ್ತಿರುವ ಅಧಿಕಾರ ಎಂಬುದು ಪಕ್ಷದ ಹೈಕಮಾಂಡ್‌ಗೂ ಗೊತ್ತಿತ್ತು ಮತ್ತು ರಾಜ್ಯದ ನಾಯಕರಿಗೂ ಗೊತ್ತಿತ್ತು. ಹಾಗೆ 17 ಜನರನ್ನು ಪಕ್ಷ ಬಿಡಿಸುವಾಗ ಅವರು ಯಾವ ಜಿಲ್ಲೆಯವರು, ಯಾವ ಸಮುದಾಯವರು ಎಂದು ಯಾರೂ ನೋಡಿರಲಿಲ್ಲ. ಬಿಜೆಪಿಯ ಪಾಶಕ್ಕೆ ಸಿಲುಕುವವರು ಯಾರು ಎಂಬುದನ್ನು ಮಾತ್ರ ನೋಡಿ ಅವರಿಗೆ ಬಲೆ ಬೀಸಲಾಗಿತ್ತು. ಹೀಗೆ ಪಕ್ಷ ಬಿಟ್ಟು ಬಂದವರಲ್ಲಿ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ನಾಗೇಶ್ ಅವರಂಥ ಸಚಿವರೂ ಇದ್ದರು ಎಂಬುದು ಗಮನಾರ್ಹ. ಅಂದರೆ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಮರಳಿ ಸಚಿವರಾಗುವುದಕ್ಕಿಂತ ಬೇರೆ ಕಾರಣ (ಆಮಿಷ?) ಇದ್ದುವು ಎಂದು ಅರ್ಥ. ಎಚ್.ವಿಶ್ವನಾಥ್ ಅವರು ಜೆ.ಡಿ (ಎಸ್) ಅಧ್ಯಕ್ಷರೇ ಆಗಿದ್ದರು ಮತ್ತು ಆ ಪಕ್ಷದ ವತಿಯಿಂದಲೇ ಅವರು ವಿಧಾನಸಭೆಗೆ ಆಯ್ಕೆಯಾಗಿ ರಾಜಕೀಯ ಮರುಹುಟ್ಟು ಪಡೆದಿದ್ದರು. ಹಾಗೆ ಒಂದು ಪಕ್ಷದ ಅಧ್ಯಕ್ಷರೇ ಆಗಿದ್ದವರು ಅದೇ ಪಕ್ಷದ ನೇತೃತ್ವದ ಸರ್ಕಾರವನ್ನು ಕೆಡವುವ ಹುನ್ನಾರದ ನಾಯಕತ್ವ ವಹಿಸುತ್ತಾರೆ ಎಂದರೆ ಏನೆಲ್ಲ ಕಾರಣ ಇರಬಹುದು ಎಂದು ಊಹಿಸಬಹುದು.

ಕೇವಲ ಒಬ್ಬ ವ್ಯಕ್ತಿ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಈಡೇರಿಸಲು ರಚಿತವಾದ ಒಂದು ಸರ್ಕಾರ ಏನೆಲ್ಲ ತ್ಯಾಗ ಮಾಡಬೇಕಾಗುತ್ತದೆ, ಏನೆಲ್ಲ ಬೆಲೆ ಕೊಡಬೇಕಾಗುತ್ತದೆ ಎಂಬುದನ್ನು “ತತ್ವನಿಷ್ಠ” ಎಂದು ಹೇಳುವ ಒಂದು ಪಕ್ಷ ಯೋಚಿಸಬೇಕಿತ್ತು. ಯೋಚಿಸಲಿಲ್ಲ ಎಂದು ಹೇಳುವುದು ಕಷ್ಟ. ವಿರೋಧಿ ಪಕ್ಷದ ಸರ್ಕಾರಗಳು ಅಸ್ತಿತ್ವದಲ್ಲಿ ಇರಬಾರದು ಎಂದು ಆ ಪಕ್ಷ ನಿರ್ಣಯಿಸಿದೆ. ಆ ನಿರ್ಣಯದ ಭಾಗವಾಗಿಯೇ ಕುಮಾರಸ್ವಾಮಿ ಅವರಿಗೆ ಬಿಜೆಪಿಯ ಅತ್ಯುನ್ನತ ನಾಯಕ, ‘ಕಾಂಗ್ರೆಸ್ ಸಖ್ಯ ತೊರೆದು ಬಂದರೆ

ಐದು ವರ್ಷ ಕಾಯಂ ಆಗಿ ನೀವೇ ಮುಖ್ಯಮಂತ್ರಿ ಆಗಿರಬಹುದು’ ಎಂಬ ಆಮಂತ್ರಣ ಕೊಟ್ಟಿದ್ದರು. ತಮ್ಮ ಪ್ರಮಾಣ ವಚನಕ್ಕೆ ದೇಶದ ಎಲ್ಲ ಕಡೆಯ ಬಿಜೆಪಿ ವಿರೋಧಿ ನಾಯಕರನ್ನು ಕರೆಸಿದ್ದ ತಮ್ಮ ತಂದೆ ದೇವೇಗೌಡರನ್ನು ಹೇಗೆ ಸಮಾಧಾನ ಮಾಡುವುದು ಎಂದು ತಿಳಿಯದೇ ಕುಮಾರಸ್ವಾಮಿ ಆ ಆಮಂತ್ರಣವನ್ನು ಬಿಟ್ಟುಕೊಟ್ಟರು. ಅವರು ಬಿಜೆಪಿ ಆಶ್ರಯಕ್ಕೆ ಬಾರದ ಕಾರಣ ಯಡಿಯೂರಪ್ಪ ಮುಖ್ಯಮಂತ್ರಿ ಆದರು.

ಯಡಿಯೂರಪ್ಪ ಅವರ ಮುಂದೆ ಹಲವು ಸವಾಲು ಇವೆ. ಅವರು ಒಳ್ಳೆಯ ಆಡಳಿತವನ್ನು ಕೊಡಬೇಕು. ತನ್ಮೂಲಕ ಮರಳಿ ಬಿಜೆಪಿ ಸರ್ಕಾರವನ್ನೇ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಹಾಗೂ, 2024ರಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಈಗ ಬಿಜೆಪಿ ಗೆದ್ದಿರುವ 25 ಸೀಟುಗಳ ಗೆಲುವನ್ನು ಖಾತ್ರಿಪಡಿಸಬೇಕು. ಬಿಜೆಪಿಯ ರಾಷ್ಟಿçÃಯ ನಾಯಕರಿಗೆ 2024ರ ಲೋಕಸಭೆ ಚುನಾವಣೆ ಹೆಚ್ಚು ಮುಖ್ಯ. ಅದೇ ಕಾರಣಕ್ಕಾಗಿ ಲಿಂಗಾಯತ ನಾಯಕನೊಬ್ಬನನ್ನು ಎದುರು ಹಾಕಿಕೊಳ್ಳಲು ಅವರು ಸಿದ್ಧವಿಲ್ಲ.

2013ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕ ಜನತಾ ಪಕ್ಷ (ಕೆ.ಜೆ.ಪಿ.) ಕಟ್ಟಿದ್ದ ಯಡಿಯೂರಪ್ಪನವರು ಬಿಜೆಪಿಗೆ ಎಷ್ಟು ಅಪಾಯಕಾರಿ ವ್ಯಕ್ತಿಯಾಗಿ ಪರಿಣಮಿಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಆ ಚುನಾವಣೆಯಲ್ಲಿ ಬಿಜೆಪಿ ಕೇವಲ 40 ಸೀಟುಗಳಲ್ಲಿ ಗೆದ್ದಿತ್ತು. ಅದಕ್ಕೆ ಮುಂಚಿನ 2008ರ ವಿಧಾನಸಭೆ ಚುನಾವಣೆಯಲ್ಲಿ ಶೇಕಡ 33.86ರಷ್ಟು ಮತ ಗಳಿಸಿ 110 ಸೀಟುಗಳಲ್ಲಿ ಗೆದ್ದಿದ್ದ ಬಿಜೆಪಿಯ ಮತಗಳಿಕೆ ಪ್ರಮಾಣ ಶೇಕಡ 19.89ಕ್ಕೆ ಕುಸಿದಿತ್ತು. ಆ ಚುನಾವಣೆಯಲ್ಲಿ ಕೇವಲ ಆರು ಸೀಟುಗಳಲ್ಲಿ ಗೆದ್ದಿದ್ದ ಕೆ.ಜೆ.ಪಿ ಶೇಕಡ 9.79ರಷ್ಟು ಮತ ಗಳಿಸಿತ್ತು. ಅಂದರೆ, ಶೇಕಡ ಹತ್ತರ ಆಸುಪಾಸಿನ ಈ ಮತ ಗಳಿಕೆ ಬಿಜೆಪಿಗೆ ಕನಿಷ್ಠ 70 ಸೀಟುಗಳು ಕಳೆದು ಹೋಗುವಂತೆ ಮಾಡಿತ್ತು.

2018ರ ವಿಧಾನಸಭೆ ಚುನಾವಣೆಗಿಂತ ಮುಂಚೆ ಮರಳಿ ಬಿಜೆಪಿ ತೆಕ್ಕೆಗೆ ಬಂದ ಯಡಿಯೂರಪ್ಪ, ಬಿಜೆಪಿ ಗೆದ್ದ ಸೀಟುಗಳ ಸಂಖ್ಯೆಯನ್ನು 104 ಕ್ಕೆ ತೆಗೆದುಕೊಂಡು ಹೋದರು ಮತ್ತು ಆ ಪಕ್ಷ ಆ ಚುನಾವಣೆಯಲ್ಲಿ ಗಳಿಸಿದ ಮತಗಳ ಪ್ರಮಾಣ 31.22ಕ್ಕೆ ಏರುವಂತೆ ಮಾಡಿದರು. ಬಿಜೆಪಿಯನ್ನು ಗೆಲ್ಲಿಸಬಲ್ಲ ಹಾಗೆಯೇ ಅದನ್ನು ಸೋಲಿಸಬಲ್ಲ ಶಕ್ತಿಯೂ ತಮಗಿದೆ ಎಂಬುದನ್ನು ತಿಳಿಯದಷ್ಟು ದಡ್ಡತನವನ್ನು ಪಕ್ಷದ ಹೈಕಮಾಂಡ್ ಮಾಡಲಾರದು ಎಂಬುದು ಯಡಿಯೂರಪ್ಪನವರಿಗೆ ಗೊತ್ತಿದೆ. ಅವರು ಕರ್ನಾಟಕ ಕಂಡ ಒಳ್ಳೆಯ ಆಡಳಿತಗಾರ ಅಲ್ಲದೇ ಇರಬಹುದು. ಆದರೆ, ಅತ್ಯಂತ ಚಾಣಾಕ್ಷ ಮತ್ತು ಜನಪ್ರಿಯ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೂ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತಾರೆಯೇ? ಅವರ ಪಕ್ಷದ ನಾಯಕರು ಮತ್ತು ಸ್ವತಃ ಯಡಿಯೂರಪ್ಪನವರು ಎಷ್ಟೇ ಆಶಾವಾದದ ಮಾತು ಆಡಲಿ. ಕರ್ನಾಟಕದ ಚುನಾವಣೆಯ ಇತಿಹಾಸದ ಪುಟಗಳನ್ನು ನಾವು ತಿರುಗಿ ಹಾಕಿದರೆ ಕಳೆದ ಮೂರೂವರೆ ದಶಕಗಳ ಇತಿಹಾಸದಲ್ಲಿ ಅದಕ್ಕೆ ಯಾವ ಆಧಾರವೂ ಸಿಗುವುದಿಲ್ಲ.

1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಗಿ ಅಧಿಕಾರಕ್ಕೆ ಬಂದ ರಾಮಕೃಷ್ಣ ಹೆಗಡೆ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ 1985ರ ಚುನಾವಣೆಯಲ್ಲಿ ಮತ್ತೆ ಅಭೂತಪೂರ್ವ ಎನ್ನುವಂಥ ಸಕಾರಾತ್ಮಕ ಜನಾದೇಶ ಸಿಕ್ಕುದು ಬಿಟ್ಟರೆ ನಂತರದ ಎಲ್ಲ ಚುನಾವಣೆಗಳಲ್ಲಿ ಜನರು ಹಿಂದೆ ಆಡಳಿತ ಮಾಡಿದ ಸರ್ಕಾರಗಳನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಅದು ಆಡಳಿತ ಮಾಡಿದ ಪಕ್ಷ ಎದುರಿಸಿದ ಪ್ರತಿರೋಧ (ಂಟಿಣi-iಟಿಛಿumbeಟಿಛಿಥಿ).

1999ರಲ್ಲಿ ಅಧಿಕಾರಕ್ಕೆ ಬಂದಿದ್ದ ಎಸ್.ಎಂ.ಕೃಷ್ಣ ಮತ್ತು 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರಗಳು ಒಳ್ಳೆಯ ಆಡಳಿತಕ್ಕೆ ಹೆಸರಾಗಿದ್ದರೂ ಆ ಪಕ್ಷಕ್ಕೆ ಅಥವಾ ಆ ನಾಯಕತ್ವಕ್ಕೆ ಮರಳಿ ಆಡಳಿತ ಮಾಡುವ ಜನಾದೇಶ ಸಿಗಲಿಲ್ಲ ಎಂಬುದು ಗಮನಾರ್ಹ ಮತ್ತು ಕುತೂಹಲಕರ. ಹಾಗಿರುವಾಗ ಇಷ್ಟೆಲ್ಲ ಆಂತರಿಕ ತಿಕ್ಕಾಟ ಇರುವ, ಹಾದಿ ಬೀದಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಅವರ ಪಕ್ಷದ ನಾಯಕರೇ ಎಲ್ಲ ಬಗೆಯ ಆರೋಪ ಮಾಡುತ್ತಿರುವಾಗ ಜನರು ಮತ್ತೆ ಅದೇ ಪಕ್ಷಕ್ಕೆ, ನಾಯಕತ್ವಕ್ಕೆ ಜನಾದೇಶ ಕೊಡುತ್ತಾರೆಯೇ? ಮುಂದಿನ ಚುನಾವಣೆಯ ನಾಯಕತ್ವವನ್ನು ಲಿಂಗಾಯತರ ಪ್ರಶ್ನಾತೀತ

ನಾಯಕರಾಗಿರುವ ಯಡಿಯೂರಪ್ಪ ವಹಿಸುವುದಿಲ್ಲ ಎಂಬುದನ್ನೂ ಇಲ್ಲಿ ನೆನಪಿಡಬೇಕು. ಆ ವೇಳೆಗೆ ಅದೇ ಸಮುದಾಯದ ಹೊಸ ನಾಯಕತ್ವವನ್ನು ರಾಷ್ಟಿçÃಯ ಬಿಜೆಪಿ ಸಿದ್ಧಪಡಿಸಿರಬೇಕು. ಕರ್ನಾಟಕದ ಬಿಜೆಪಿಯ ಕ್ಷಿತಿಜದಲ್ಲಿ ಅಂಥ ನಾಯಕ ಕಾಣುತ್ತಿದ್ದಾರೆಯೇ? ಚುಕ್ಕೆಯ ಗಾತ್ರದಲ್ಲಿಯೂ ಕಾಣುತ್ತಿಲ್ಲ.

ಒಡೆದ ಮನೆಯಾಗಿರುವ ಕಾಂಗ್ರೆಸ್

1999ರಿAದ 2018ರ ನಡುವೆ ನಡೆದ ಐದು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ ಗರಿಷ್ಠ ಶೇಕಡಾವಾರು ಮತಗಳು ಇದೇ ಅವಧಿಯಲ್ಲಿ ಕಾಂಗ್ರೆಸ್ಸು ಗಳಿಸಿದ ಕನಿಷ್ಠ ಮತಗಳಿಗಿಂತ ಕಡಿಮೆ ಎಂಬುದನ್ನು ಕನಿಷ್ಠ ಪಕ್ಷ ಕಾಂಗ್ರೆಸ್ ನಾಯಕರಾದರೂ ಮರೆಯಬಾರದು!

ಹಾಗಾದರೆ ಪರ್ಯಾಯವನ್ನು ಒದಗಿಸಬೇಕಾದ ಕಾಂಗ್ರೆಸ್ ಸ್ಥಿತಿ ಹೇಗಿದೆ? ಬಿಜೆಪಿಯಲ್ಲಿ ಯಾದವೀ ಕಲಹ ಇದ್ದರೆ ಕಾಂಗ್ರೆಸ್ಸು ಹಲವು ನಾಯಕರ ಮಹತ್ವಾಕಾಂಕ್ಷೆಯಿAದಾಗಿ ಒಡೆದ ಮನೆಯಂತೆ ಗೋಚರಿಸುತ್ತದೆ. ರಂಗದ ಮೇಲೆ ಇರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆಯೇ ಸಾಕಷ್ಟ ಮನಸ್ತಾಪ ಇದ್ದಂತೆ ಕಾಣುತ್ತದೆ. ಅದಕ್ಕೆ ಕಾರಣ ಒಂದು ವೇಳೆ, 2023ರ ಚುನಾವಣೆಯಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಪ್ರಶ್ನೆ ಇತ್ಯರ್ಥವಾದಂತೆ ಇಲ್ಲ. ಸಿದ್ದರಾಮಯ್ಯ ಅವರಿಗೆ ಇದ್ದಕ್ಕಿದ್ದಂತೆ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಬೀಳುತ್ತದೆ. ಅದು ತಪ್ಪು ಇರದೆ ಇರಬಹುದು. ಆದರೆ, ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಕುರಿತು ಕಾಂಗ್ರೆಸ್ಸಿನಲ್ಲಿ ಐಕಮತ್ಯ ಮೂಡಬೇಕು ಮತ್ತು ಅದಕ್ಕೆ ಎಲ್ಲರೂ ಸ್ವಾರ್ಥತ್ಯಾಗ ಮಾಡಬೇಕು ಎಂಬ ಕನಿಷ್ಠ ತಿಳಿವಳಿಕೆಯೂ ಹಿರಿಯ ನಾಯಕರಲ್ಲಿ ಇದ್ದಂತೆ ಕಾಣುವುದಿಲ್ಲ.

1999ರಿಂದ ಇದುವರೆಗೆ ನಡೆದ ಐದು ಚುನಾವಣೆಗಳ ಅಂಕಿ ಅಂಶಗಳನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಬಹಳ ಬಲವಾದ ಬುನಾದಿ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 2008ರ ಚುನಾವಣೆಯಲ್ಲಿ ಅತ್ಯಂತ ಕನಿಷ್ಠ ಎಂದರೆ ಶೇಕಡ 34.76ರಷ್ಟು ಮತ ಗಳಿಸಿದ್ದ ಆ ಪಕ್ಷ ಗರಿಷ್ಠ ಎಂದರೆ 1999ರ ಚುನಾವಣೆಯಲ್ಲಿ ಶೇಕಡ 40.84 ರಷ್ಟು ಮತ ಗಳಿಸಿತ್ತು. ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯು ಈ ಐದು ಚುನಾವಣೆಗಳ ಪೈಕಿ 2008ರಲ್ಲಿ ಗಳಿಸಿದ ಶೇಕಡ 33.86 ಮತಗಳು ಅತಿ ಗರಿಷ್ಠ ಮತಗಳು. ಮತ್ತು 2013ರಲ್ಲಿ ಅದು ಗಳಿಸಿದ್ದ ಶೇಕಡ 19.89 ಮತಗಳು ಅತಿ ಕನಿಷ್ಠ ಮತಗಳು. ಅಂದರೆ ಬಿಜೆಪಿ ಗಳಿಸಿದ ಗರಿಷ್ಠ ಶೇಕಡಾವಾರು ಮತಗಳು ಇದೇ ಅವಧಿಯಲ್ಲಿ ಕಾಂಗ್ರೆಸ್ಸು ಗಳಿಸಿದ ಕನಿಷ್ಠ ಮತಗಳಿಗಿಂತ ಕಡಿಮೆ ಎಂಬುದನ್ನು ಕನಿಷ್ಠ ಪಕ್ಷ ಕಾಂಗ್ರೆಸ್ ನಾಯಕರಾದರೂ ಮರೆಯಬಾರದು!

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇಕಡ 38.04 ಮತಗಳು ಬಂದಿದ್ದುವು. ಆದರೆ, ಅದು ಗೆದ್ದ ಸೀಟುಗಳ ಸಂಖ್ಯೆ ಕೇವಲ 78 ಮಾತ್ರ. ಕಾಂಗ್ರೆಸ್‌ಗಿAತ ಶೇಕಡ 7ರಷ್ಟು ಮತಗಳನ್ನು ಕಡಿಮೆ ಪಡೆದೂ ಬಿಜೆಪಿ 104 ಸೀಟುಗಳಲ್ಲಿ ಗೆದ್ದಿತ್ತು. ತಾನು ಗಳಿಸಿದ ಮತಗಳು ಸೀಟುಗಳಾಗಿ ಏಕೆ ಪರಿವರ್ತನೆ ಆಗಲಿಲ್ಲ ಎಂಬ ಲೆಕ್ಕ ಈಗಾಗಲೇ ಕಾಂಗ್ರೆಸ್ಸಿಗೆ ಸಿಕ್ಕಿರಬಹುದು. ಕಾಂಗ್ರೆಸ್ ನಾಯಕರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಠೇಂಕಾರಗಳನ್ನು, ವೈಮನಸ್ಸುಗಳನ್ನು ಬಿಟ್ಟು ಒಂದೇ ವೇದಿಕೆ ಮೇಲೆ ಬಂದು ಅತ್ಯಂತ ನಮ್ರವಾಗಿ ಜನರ ಆದೇಶ ಕೇಳಬೇಕು. ಮತ್ತು ಕಾಲಹರಣದ ವಿವಾದಗಳಲ್ಲಿ ಕಾಲ ಕಳೆಯಬಾರದು. ಏಕೆಂದರೆೆ ಅಂಕಿ ಅಂಶಗಳು ಅದರ ಪರವಾಗಿ ಇವೆ!

ಕಾರ್ಯಕರ್ತರನ್ನು ಮರೆಯುವ ಜೆಡಿಎಸ್

‘ಯಾರನ್ನು ನಂಬಿದರೂ ಇಬ್ರಾಹಿಂನನ್ನು ನಂಬಬೇಡಿ’ ಎಂದು ರಾಮಕೃಷ್ಣ ಹೆಗಡೆ ತಮಗೆ ಹೇಳಿದ್ದರು ಎಂದು ಕೆಲವು ವರ್ಷಗಳ ಹಿಂದೆ ದೇವೇಗೌಡರು ಕನ್ನಡದ ಪ್ರಸಿದ್ಧ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು!

ಕರ್ನಾಟಕದ ರಾಜಕಾರಣದಲ್ಲಿ 1999ರಲ್ಲಿ ಹುಟ್ಟಿಕೊಂಡ ಜಾತ್ಯತೀತ ಜನತಾದಳ ಎಂಬ ದೇವೇಗೌಡರ ಪಕ್ಷ ತನ್ನನ್ನು ಬಿಟ್ಟು ರಾಜ್ಯದ ರಾಜಕಾರಣ ನಡೆಯದಂತೆ ನೋಡಿಕೊಂಡಿದೆ. ‘ಕಾಂಗ್ರೆಸ್ಸು ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವ’ ವಚನದೊಂದಿಗೆ ಹುಟ್ಟಿಕೊಂಡಿದ್ದ ಈ ಪಕ್ಷ ಕೇವಲ ಐದು ವರ್ಷಗಗಳ ಅಂತರದಲ್ಲಿ ಅಂದರೆ 2004ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ನಡೆಸಿದರೆ ಮತ್ತೆ ಎರಡೇ ವರ್ಷಗಳ ಅಂತರದಲ್ಲಿ ಅಂದರೆ 2006ರಲ್ಲಿ ಬಿಜೆಪಿ ಜೊತೆಗೆ ಸೇರಿಕೊಂಡು ಅಧಿಕಾರ ನಡೆಸಿತ್ತು!

ಇದು ಆ ಪಕ್ಷದಲ್ಲಿ ಇರುವ ತಾತ್ವಿಕ ತಾಕಲಾಟ ಮತ್ತು ಸೈದ್ಧಾಂತಿಕ ಎಡಬಿಡಂಗಿತನದ ಸಂಕೇತ. ತಾನು ಜನತಾ ಪರಿವಾರವನ್ನು ತೊರೆದು ಪ್ರತ್ಯೇಕ ಪಕ್ಷವಾದ ವರ್ಷವೇ ಅಂದರೆ 1999 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಶೇಕಡ 10.42ರಷ್ಟು ಮತ ಗಳಿಸಿ ಹತ್ತು ಸ್ಥಾನಗಳಲ್ಲಿ ಗೆದ್ದಿದ್ದ ಜೆ.ಡಿ(ಎಸ್) ತನ್ನ ಮತ ಗಳಿಕೆ ಪ್ರಮಾಣವನ್ನು ಶೇಕಡ 20-21 ರ ಆಸುಪಾಸಿನಲ್ಲಿ ಮಾತ್ರ ಉಳಿಸಿಕೊಂಡಿದೆ. 2004 ರ ಚುನಾವಣೆಯಲ್ಲಿ ಶೇಕಡ 21.10ರಷ್ಟು ಮತಗಳೊಡನೆ ಅದು ಗಳಿಸಿದ 58 ಸೀಟುಗಳೇ ಇದುವರೆಗಿನ ಇತಿಹಾಸದಲ್ಲಿ ಅದು ಪಡೆದ ಅತಿ ದೊಡ್ಡ ಗೆಲುವು.

ಆದಾಗ್ಯೂ 2023ರ ಚುನಾವಣೆಯಲ್ಲಿ ಏಕಾಕಿಯಾಗಿ ಅಧಿಕಾರಕ್ಕೆ ಬರುವ ಮಾತುಗಳನ್ನು ಎಚ್.ಡಿ.ಕುಮಾರಸ್ವಾಮಿ ಆಡುತ್ತಿದ್ದಾರೆ. ಕಳೆದ ಐದು ಚುನಾವಣೆಗಳ ಅವಧಿಯಲ್ಲಿ ತನ್ನ ಪಕ್ಷದ ಅನೇಕ ನಾಯಕರನ್ನು ಬಿಜೆಪಿಗೆ ಮತ್ತು ಕಾಂಗ್ರೆಸ್ಸಿಗೆ ಕಳೆದುಕೊಂಡಿರುವ ಜೆ.ಡಿ(ಎಸ್) ಮುಂದಿನ ಚುನಾವಣೆ ವೇಳೆಗೆ ಇನ್ನೂ ಕೆಲವು ನಾಯಕರನ್ನು ಕಳೆದುಕೊಳ್ಳುವಂತೆ ಕಾಣುತ್ತದೆ. ಅದಕ್ಕಿಂತ ಮುಖ್ಯವಾಗಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ಗಳಿಸುತ್ತಿದ್ದ ಆ ಪಕ್ಷ “ಬಿಜೆಪಿಯ ‘ಬಿ’ ತಂಡ” ಎಂಬ ಆರೋಪ ಎದುರಿಸುತ್ತಿರುವ ಕಾರಣ 2018ರ ಚುನಾವಣೆಯಲ್ಲಿಯೇ ಆ ಮತಗಳನ್ನೂ ಕಳೆದುಕೊಂಡಿದೆ.

ಅದೇ ಕಾರಣಕ್ಕಾಗಿ ಸಿ.ಎಂ.ಇಬ್ರಾಹಿA ಅವರನ್ನು ಪಕ್ಷದ ತೆಕ್ಕೆಗೆ ಮರಳಿ ಕರೆತರುವ ಯತ್ನಕ್ಕೆ ದೇವೇಗೌಡರು ಮತ್ತು ಕುಮಾರಸ್ವಾಮಿ ಮುಂದಾಗಿದ್ದಾರೆ. ಇದು ಹತಾಶೆಯ ಅತಿರೇಕದಂತೆ ಕಾಣುತ್ತದೆ. ಏಕೆಂದರೆ ಇಬ್ರಾಹಿಂ ಅವರಿಗೆ ತನ್ನದೇ ಆದ ಒಂದು ವಿಧಾನಸಭಾ ಕ್ಷೇತ್ರ ಎಂಬುದು ಕೂಡ ಇಲ್ಲ. ಅವರು ಈಗ ಕೇವಲ ಮನರಂಜಕ ಭಾಷಣಕಾರ ಮತ್ತು ನಿರಂತರವಾಗಿ ಹುಲ್ಲುಗಾವಲು ಇರುವ ಕಡೆ ವಲಸೆ ಹೋಗುವ ವಾಚಾಳಿ. ಅವರ ನಾಲಿಗೆಗೆ ನಿಷ್ಠೆ ಎಂಬುದೇ ಇಲ್ಲ. ದೇವೇಗೌಡರು ಪ್ರಧಾನಿ ಆಗಿದ್ದಾಗ ಅವರ ಸಂಪುಟದಲ್ಲಿ ವಿಮಾನಯಾನ ಸಚಿವರಾಗಿದ್ದ ಇಬ್ರಾಹಿಂ, ಗೌಡರನ್ನು ತೊರೆದು ಕಾಂಗ್ರೆಸ್ ಸೇರಿದ್ದರು. ಕಾರಣ ತಿಳಿಯದು. ‘ಯಾರನ್ನು ನಂಬಿದರೂ ಇಬ್ರಾಹಿಂನನ್ನು ನಂಬಬೇಡಿ’ ಎಂದು ರಾಮಕೃಷ್ಣ ಹೆಗಡೆ ತಮಗೆ ಹೇಳಿದ್ದರು ಎಂದು ಕೆಲವು ವರ್ಷಗಳ ಹಿಂದೆ ದೇವೇಗೌಡರು ಕನ್ನಡದ ಪ್ರಸಿದ್ಧ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು!

ಈಗ ಅದೇ ಇಬ್ರಾಹಿಂ ಮನೆ ಬಾಗಿಲಿಗೆ ಕುಮಾರಸ್ವಾಮಿ ಹೋಗಿದ್ದಾರೆ. ಅವರನ್ನು ನಂಬಿಕೊAಡು ಮುಸಲ್ಮಾನರು ಜೆ.ಡಿ(ಎಸ್)ಗೆ ಮತ ಹಾಕುವುದಿಲ್ಲ. ಅಭದ್ರತೆಯಿಂದ ಬಳಲುತ್ತಿರುವ ಒಂದು ಸಮುದಾಯ ಗೆಲ್ಲುವ ಪಕ್ಷಕ್ಕೆ ಮತ ಹಾಕುತ್ತದೆಯೇ ಹೊರತು ಅತಂತ್ರ ಪಕ್ಷಕ್ಕೆ ಹಾಕುವುದಿಲ್ಲ. ಇದು ದೇವೇಗೌಡರಿಗೆ ಮತ್ತು ಕುಮಾರಸ್ವಾಮಿ ಅವರಿಗೆ ತಿಳಿಯದ ಸಂಗತಿಯೂ ಅಲ್ಲ. ಅದರ ಇನ್ನೊಂದು ಸಮಸ್ಯೆ ಎಂದರೆ ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರನ್ನು ಮರೆಯುವ ಆ ಪಕ್ಷ (ಹಾಗೆಂದು ಈಚೆಗೆ ದೇವೇಗೌಡರೇ ಅನೇಕ ಸಾರಿ ಹೇಳಿದ್ದಾರೆ) ಅಧಿಕಾರ ಹೋದ ಕೂಡಲೇ ಅವರನ್ನು ನೆನಪಿಸಿಕೊಳ್ಳುತ್ತದೆ. ಪಕ್ಷ ತೊರೆದ ನಾಯಕರನ್ನು ಚುನಾವಣೆ ಬಂದಾಗಲೆಲ್ಲ ಮರಳಿ ಕರೆಯುವ ಈ ಪಕ್ಷದ ನಾಯಕರು ಅಧಿಕಾರದಲ್ಲಿ ಇದ್ದಾಗ ಅವರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ.

ಈಚೆಗೆ 14 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಸರ್ಕಾರದಲ್ಲಿ ಲಿಂಗಾಯತರಾದ, ಉತ್ತರ ಕರ್ನಾಟಕದವರಾದ ಮತ್ತು ಪಕ್ಷ ನಿಷ್ಠೆಗೆ ಹೆಸರಾದ ಎಂ.ಸಿ.ಮನಗೂಳಿ ಅವರು ತೋಟಗಾರಿಕೆ ಖಾತೆಗೆ ತೃಪ್ತರಾಗಬೇಕಾಯಿತು! ಅದೇ ತರಹದ ಇನ್ನೊಬ್ಬ ನಾಯಕ ಬಸವರಾಜ ಹೊರಟ್ಟಿ ಸಂಪುಟದ ಒಳಗೆ ಬರಲೇ ಇಲ್ಲ.

ಆಗ ಆ ಸರ್ಕಾರದಲ್ಲಿ ಯಾರ ಬಳಿ ಯಾವ ಯಾವ ಖಾತೆಗಳು ಇದ್ದುವು ಎಂಬುದನ್ನು ತಿಳಿಯಲು ದೊಡ್ಡ ಸಂಶೋಧನೆ ಏನೂ ಬೇಕಾಗಿಲ್ಲ. ಸ್ವತಂತ್ರವಾಗಿ ಸರ್ಕಾರ ರಚಿಸಲು ಬಯಸುವ ಒಂದು ಪಕ್ಷಕ್ಕೆ ಇದೆಲ್ಲ ಬಹಳ ದುಬಾರಿ ವಿಚಾರ.

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯ ನಿರ್ವಾಹಕ ಸಂಪಾದಕರು. ಅನೇಕ ಕೃತಿಗಳನ್ನು ಪ್ರಕಟಿಸಿರುವ ಅವರು ಈಚೆಗೆ ಹೆಸರಾಂತ ಲೇಖಕ ಡಾ.ದೇವದತ್ತ ಪಟ್ಟನಾಯಕ್ ಅವರ ‘ಸೀತಾ ರಾಮಾಯಣ’ ಕೃತಿಯನ್ನು ಇಂಗ್ಲಿಷ್‌ನಿAದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

Leave a Reply

Your email address will not be published.