ಯಾವ ಕಾಲಕ್ಕೂ ಮಾಧ್ಯಮಕ್ಕೆ ಸಾವಿಲ್ಲ!

ಅಶ್ಚರ್ಯ ಮತ್ತು ಸಂತಸದ ವಿಷಯವೆಂದರೆ; ದೇಶದಲ್ಲಿನ ಕೆಲವೇ ಬರಳೆಣಿಕೆಯ ಪತ್ರಿಕೆ ಮತ್ತು ವಾಹಿನಿಗಳು ಪ್ರತಿಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವುದು. ಅಂಥವುಗಳ ಸಂಖ್ಯೆ ಜಾಸ್ತಿ ಆಗಬೇಕಿದೆ.

-ಜೆ ಸು ನಾ

ಭಾರತದ ರಾಜಕಾರಣದ ಗತಿ ಮತ್ತು ವೇಗ ಪಡೆದುಕೊಂಡಿದ್ದೇ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆಯೊಂದಿಗೆ. ಆಗ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಅಧಿಕಾರಕ್ಕೇ ಚ್ಯುತಿ ಬರುವ ಅಪಾಯದ ಸೂಚನೆಗಳು ಸಿಗುತ್ತಿದ್ದಂತೆಯೇ ದೇಶದಲ್ಲಿ “ಆಂತರಿಕ ವಿಧ್ವಂಸಕ ಕೃತ್ಯಗಳ” ನೆಪ ಒಡ್ಡಿ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಾಗ ಜನ ಹೌಹಾರಿದರು. ಇಪ್ಪತ್ತೊಂದು ತಿಂಗಳುಗಳ ಕಾಲ ದೇಶದ ಪ್ರಾಣವಾಯುವನ್ನು ತಡೆ ಹಿಡಿಯಲಾಗಿತ್ತು. ಪ್ರತಿ ಪಕ್ಷಗಳ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಬಂದಿಸಿ ಜೈಲುಗಳಲ್ಲಿ ಕೂಡಿಹಾಕಲಾಯಿತು.

ಇಂಥ ಘನ ಘೋರ ಸ್ಥಿತಿಯಲ್ಲಿ ಪತ್ರಿಕೆಗಳು ಪ್ರಬಲ ಪ್ರತಿರೋಧ ಒಡ್ಡಿದರೂ ಅದು ಬಹುಕಾಲ ಜೀವಂತವಾಗಿ ಇರಲಿಲ್ಲ. ಪ್ರಭುತ್ವದ ಕಣ್ಗಾವಲಿನಲ್ಲಿ ಪತ್ರಿಕೆಗಳನ್ನು ಮುದ್ರಿಸಬೇಕಾದ ದಯನೀಯ ಸ್ಥಿತಿ ಸಂಭವಗೊಂಡಿತು.

ಹಾಗೆ ನೋಡಿದರೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರುವ ನಡೆ ನಮಗೆ ಹೊಸದೇನೂ ಆಗಿರಲಿಲ್ಲ. 1962 ರಲ್ಲಿ ಭಾರತ-ಚೀನ ಯುದ್ಧ ಮತ್ತು 1971 ರಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧಗಳು ನಡೆದಾಗಲೂ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು ಹಾಗೂ ಅದು ಆಗ ಅನಿವಾರ್ಯವೂ ಆಗಿತ್ತು. ಆದರೆ 1975 ರ ತುರ್ತು ಪರಿಸ್ಥಿತಿಯ ಘೋಷಣೆ ಇಂದಿರಾ ಗಾಂಧಿ ಅವರ ಸರ್ವಾಧಿಕಾರದ ನಿರಂಕುಶ ನಡೆಯಾಗಿತ್ತು.  ಇದಿಷ್ಟು ಹಿನ್ನೆಲೆಯೊಂದಿಗೆ ಚರ್ಚೆಯನ್ನು ಮುಂದುವರಿಸೋಣ.

ಬದಲಾದ ಮಾಧ್ಯಮ

ಎಂಬತ್ತರ ದಶಕದ ಪ್ರಥಮ ಪಾದದಲ್ಲೇ ಮಾಧ್ಯಮ ಲೋಕ ತೀವ್ರ ಬೆಳವಣಿಗೆಗೆ ತನ್ನನ್ನು ಒಡ್ಡಿಕೊಂಡಿತ್ತು. ಅಲ್ಲಿಯವರೆಗೂ ಮುದ್ರಣ ಮಾಧ್ಯಮ ಸರ್ಕಾರವನ್ನು ಪ್ರಶ್ನಿಸುತ್ತಲೇ ಹೋಗುವ ನೈತಿಕ ಸ್ಥೈರ್ಯವನ್ನು ದೃಢವಾಗಿಯೇ ಧಾರಣೆ ಮಾಡಿಕೊಂಡಿತ್ತು. ಆದರೆ ಯಾವಾಗ ವಿದ್ಯುನ್ಮಾನ ಮಾಧ್ಯಮ ವ್ಯಾಪಕವಾಗಿ ದೇಶದ ತುಂಬೆಲ್ಲಾ ಹರಡಿಕೊಳ್ಳಲು ಪ್ರಾರಂಭಿಸಿತೊ ಆಗಿನಿಂದಲೇ ಮುದ್ರಣ ಮಾಧ್ಯಮದ ಪ್ರಭಾವ ಕುಸಿಯತೊಡಗಿತು ಎಂದು ಹೇಳಬಹುದು. ಇದರ ನಂತರದ ದಿನಗಳಲ್ಲಿ ವಾಹಿನಿಗಳ ಪ್ರಬಲ ಪೈಪೋಟಿಯಿಂದ ಪತ್ರಿಕೆಗಳು   ಜಾಹೀರಾತು ಮತ್ತು ಪ್ರಸಾರ ಸಂಖ್ಯೆಯ ಕುಸಿತದಿಂದ ಕಂಗಾಲುಗೊಂಡವು. ರಾಜ್ಯ ಮಟ್ಟದ ದೈನಿಕಗಳಿಗೆ ವಾಹಿನಿಗಳ ಹೊಡೆತವನ್ನು ತಡೆದುಕೊಳ್ಳಲು ಈ ಕ್ಷಣದವರೆಗೂ ಸಾಧ್ಯವಾಗುತ್ತಲೇ ಇಲ್ಲ. ಹೀಗಾಗಿ ಪತ್ರಿಕೆಗಳು ‘ಜನಸೇವೆ’ ಸಿದ್ಧಾಂತದ ಜಗುಲಿಯಿಂದ ಕೆಳಗಿಳಿದು ಅದನ್ನು ಉದ್ಯಮವಾಗಿ ರೂಪಾಂತರಗೊಳಿಸಿದ್ದನ್ನು  ನಿಚ್ಚಳವಾಗಿಯೇ ಕಾಣಬಹುದಾಗಿದೆ.

ಯಾವುದೇ ದಿನಪತ್ರಿಕೆಯಾಗಲಿ ಅಥವಾ ನಿಯತಕಾಲಿಕವಾಗಲಿ ಅದರ ಅಭಿಪ್ರಾಯ, ಸಿದ್ಧಾಂತದ ಧ್ವನಿ ಹೊರಡುವುದೇ ಅವುಗಳ ಸಂಪಾದಕೀಯಗಳ ಮೂಲಕ. ಅವುಗಳ ಸಾಮಾಜಿಕ ಬದ್ಧತೆ, ಕಾಳಜಿಗಳು ಪ್ರತಿದಿನ ಜೀವ ಪಡೆಯುವುದು ಸಂಪಾದಕೀಯಗಳಲ್ಲೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಅಧಿಕಾರ ಚಲಾಯಿಸುವ ಸರ್ಕಾರಗಳೂ ಅಂಜುವುದು, ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಈ ಸಂಪಾದಕೀಯಗಳ ತೀಕ್ಷ್ಣ ಬರಹಗಳಿಂದಲೆ. ಇದೆಲ್ಲಾ ಸಂದುಹೋದ ಕಾಲದ ಚಹರೆ. ಈಗ ಪರಿಸ್ಥಿತಿ ಹಾಗಿಲ್ಲ. ಸಂಪಾದಕೀಯ ಆಗಲಿ; ಗಂಭೀರ ವಿಷಯಕ್ಕೆ ಸಂಬಧಿಸಿದ, ಸಾಕ್ಷಿ ಸಹಿತ ವಿಸ್ತೃತ ಲೇಖನ/ವರದಿ ಬರೆದರೂ ಸರ್ಕಾರಗಳು ವಿಚಲಿತಗೊಳ್ಳುವುದಿಲ್ಲ. ಸಂವೇದನೆಯನ್ನೇ ಕಳೆದುಕೊಂಡ ಸ್ಥಿತಿ ಅದು.

ಇದರ ನಡುವೆ ಪತ್ರಿಕೆ/ ನಿಯತಕಾಲಿಕೆಗಳು ಆರ್ಥಿಕವಾಗಿ ವಿದ್ಯುನ್ಮಾನ ವಾಹಿನಿಗಳ ಜೊತೆ ಹೋರಾಟ ನಡೆಸಬೇಕಿದೆ. ಮೊದಲಾದರೆ ಪತ್ರಿಕೆಗಳಿಗೆ ಸೋಪಿನಿಂದ ಕಾಸ್ಮೆಟಕ್ ವರೆಗಿನ ಎಲ್ಲ ಜಾಹೀರಾತುಗಳು ಅಪಾರ ಪ್ರಮಾಣದಲ್ಲಿ ಬರುತ್ತಿದ್ದವು. ಹೀಗಾಗಿ ಪತ್ರಿಕೆಗಳು ತನ್ನ ನೌಕರರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ದೇಶದ ಎಲ್ಲ ರಾಜ್ಯಗಳಲ್ಲೂ ಸ್ಥಳೀಯ ಕಛೇರಿಗಳನ್ನು ಆರಂಭಿಸಿದವು. ಈಗ ಬದಲಾದ ಕಾಲಘಟ್ಟದಲ್ಲಿ ಅವುಗಳ ಆದಾಯ ಸಂಪೂರ್ಣ ನೆಲ ಕಚ್ಚಿದೆ. ಬರುತ್ತಿದ್ದ ಎಲ್ಲ ಜಾಹೀರಾತುಗಳು ವಿದ್ಯುನ್ಮಾನ ವಾಹಿನಿಗಳತ್ತ ಹರಿದುಹೋಗುತ್ತಿವೆ. ಇದರ ಜೊತೆಗೆ ಜಗತ್ತಿನಲ್ಲಿ ಘಟಿಸಿದ ಸಚಿತ್ರ ಸುದ್ದಿಗಳು ಆ ಕ್ಷಣವೇ ವಾಹಿನಿಗಳ ಮೂಲಕ ಜನರನ್ನು ತಲುಪುತ್ತಿರುವಾಗ ದಿನಪತ್ರಿಕೆಗಳ ಅವಶ್ಯಕತೆ ಓದುಗರಿಗೆ ಇಲ್ಲವಾಯಿತು. ಇದು ಪತ್ರಿಕೆಗಳ ಪ್ರಾಮುಖ್ಯಕ್ಕೆ ಧಕ್ಕೆ ತಂದ ಪ್ರಮುಖ ಕಾರಣ.

ಇನ್ನು ಎರಡನೆಯ ಕಾರಣ ಬಹುತೇಕ ದೈನಿಕ/ ನಿಯತಕಾಲಿಕೆಗಳು ಮಾಲೀಕರ ಲಹರಿಯನ್ನು ಅವಲಂಬಿಸಿರುವಂಥದ್ದು. ಎಲ್ಲೋ ಬೆರಳೆಣಿಕೆಯ ಪತ್ರಿಕೆಗಳು ಟ್ರಸ್ಟ್ ಮೂಲಕ ನಡೆಯುತ್ತಿರುವುದನ್ನು ಬಿಟ್ಟರೆ ಮಿಕ್ಕದ್ದೆಲ್ಲ ಮಾಲೀಕರದ್ದೆ. ಅಂದಮೇಲೆ ಅಲ್ಲಿ ವ್ಯವಹಾರವೇ ಮೇಲೆದ್ದು, ಸಿದ್ಧಾಂತ, ಸಾಮಾಜಿಕ ಬದ್ಧತೆ ಅರ್ಥ ಕಳೆದುಕೊಳ್ಳುತ್ತದೆ.

ಮುದ್ರಣ ಮಾಧ್ಯಮವಾಗಲಿ, ವಾಹಿನಿಗಳಲ್ಲಾಗಲಿ ಕನಿಷ್ಠ ಇನ್ನೂರರಿಂದ ಸಾವಿರದವರೆವಿಗೂ ನೌಕರರು ಇರುತ್ತಾರೆ. ಆದಾಯ ಕಮ್ಮಿಯಾಗುತ್ತಿದ್ದಂತೆ ನೌಕರರ ಸಂಖ್ಯೆಯನ್ನು ಕಡಿತಗೊಳಿಸಬೇಕಾಗುತ್ತದೆ. ಹೇಗೆ?  ನೌಕರನಿಗೆ ರಾಜೀನಾಮೆ ನೀಡಲು ಒತ್ತಡ ಹಾಕಲಾಗುತ್ತದೆ. ಕೊಡದಿದ್ದರೆ ದೂರದ ಯಾವುದೋ ರಾಜ್ಯಕ್ಕೆ ಸಾಗಹಾಕಿ ಪ್ರತಿದಿನ ಕಿರುಕುಳ ನೀಡಲಾಗುತ್ತದೆ. ಕಿರುಕುಳ ತಡೆಯಲಾರದೆ ನೌಕರ ರಾಜೀನಾಮೆ ಕೊಟ್ಟು ಆಚೆ ಬರುತ್ತಾನೆ. ಆಡಳಿತ ಕೇಳಿದ ಕೂಡಲೆ ರಾಜೀನಾಮೆ ಸಲ್ಲಿಸಿದವನಿಗೆ ಗುತ್ತಿಗೆ ಆಧಾರದಲ್ಲಿ ಮರು ನೇಮಕ ಮಾಡಿಕೊಳ್ಳಲಾಗುತ್ತದೆ. ಇದು ಈಗಿನ ಪರಿಸ್ಥಿತಿ.

ಮೂರನೆಯದು ತೀರಾ ಖಾಸಗಿಯದ್ದು. ಪತ್ರಿಕಾ ಮಾಲೀಕ ಬೇರೆ ವ್ಯವಹಾರಗಳಿಗೆ ತೊಡಗಿಕೊಂಡು ಅದಕ್ಕೆ ಸರ್ಕಾರದ ಎಲ್ಲ ನೆರವು ಪಡೆಯುವುದು. ಇದು ದೊಡ್ಡದೇ ಆದ ವ್ಯವಹಾರ. ಇದನ್ನು ಎಲ್ಲರೂ ಮಾಡಲ್ಲ; ಕೆಲವರದ್ದು ಇದೇ ದಂಧೆ. ಯಾವುದೇ ಸರ್ಕಾರದ ನೆರವು ಪಡೆದ ಸಂಸ್ಥೆ ಹೇಗೆತಾನೆ ಅದರ ವಿರುದ್ಧ ಕತ್ತಿ ಹಿಡಿದು ನಿಲ್ಲುತ್ತೆ? ಸರ್ಕಾರದ ಮುಂದೆ ಮಂಡಿ ಊರೋದು ಅಂದ್ರೆ ಇದೇನೆ.

ನಿರ್ಭೀತ ಪತ್ರಿಕೋದ್ಯಮ

ನಿರ್ಭೀತ ಪತ್ರಿಕೋದ್ಯಮವೇ ಮೂಲಧಾರೆಯಾದ ದೈನಿಕ/ ನಿಯತಕಾಲಿಕ ಯಾವ ಕಾಲಕ್ಕೂ ಸರ್ಕಾರದ ಮುಂದೆ ನಡು ಬಗ್ಗಿಸುವುದೇ ಇಲ್ಲ. ಅದು ಯಾವುದೇ ಸ್ಥಿತಿಯಲ್ಲೂ ಪ್ರಭುತ್ವದೊಂದಿಗೆ ನಿರಂತರ ಸಂಘರ್ಷ ಮಾಡುತ್ತಲೇ ಇರುತ್ತದೆ. ತಾನು ನಂಬಿದ ಸಿದ್ಧಾಂತಕ್ಕಾಗಿ ಜೀವಕೊಡಲೂ ಅದು ಹಿಂಜರಿಯುವುದೇ ಇಲ್ಲ. ಹೀಗಾಗಿ ಭವಿಷ್ಯದಲ್ಲೂ ಅಂಥ ಪತ್ರಿಕೆಗಳು ಜೀವಂತವಾಗಿದ್ದು ಸರ್ಕಾರಗಳನ್ನು ತುದಿಗಾಲಲ್ಲಿ ಸಿಕ್ಕಿಸುವುದಂತೂ ದಿಟ.

ಇಂಥ ಪತ್ರಿಕೆಗಳು ಆರ್ಥಿಕವಾಗಿ ಬಲಾಢ್ಯ ಅಂತ ಅನಿಸಿಕೊಳ್ಳದಿದ್ದರೂ ಉಸಿರಾಡುವಷ್ಟು ಶಕ್ತಿ ಅದಕ್ಕೆ ಸಮಾಜವೇ ಪೂರೈಸುತ್ತಿರುತ್ತದೆ. ಹೀಗಾಗಿ ಅಂಥವುಗಳಿಗೆ ತಂತಾನೆ ಘನತೆಯೂ ಪ್ರಾಪ್ತವಾಗಿರುತ್ತದೆ. ಈ ಘನತೆಯೇ ಅವುಗಳ ಪ್ರಾಣವಾಯು.

ಸುದ್ದಿ ವಾಹಿನಿಗಳ ಕಥಾನಕ

ಎಂಬತ್ತರ ದಶಕದಲ್ಲಿ ಸುನಾಮಿಯ ರೂಪದಲ್ಲಿ ದೇಶದ ತುಂಬಾ ಹರಡಿಕೊಂಡ ಮನರಂಜನೆ/ ಸುದ್ದಿ ಪ್ರಸಾರದ ಧ್ಯೇಯ ಹೊತ್ತ ವಿದ್ಯುನ್ಮಾನ ವಾಹಿನಿಗಳ ಮೂಲ ಉದ್ದೇಶ ಹಣ ಮಾಡುವುದೇ ಆಗಿತ್ತು. ಸಾಮಾಜಿಕ ಹೊಣೆಗಾರಿಕೆ ಎಂಬ ಪದ ಇರುವುದೂ ಅವಕ್ಕೆ ಗೊತ್ತಿರಲಾರದು. ಸರ್ಕಾರದ ದೂರದರ್ಶನ ಮಾತ್ರ ಜನಪರವಾಗಿಯೇ ಇತ್ತೆನ್ನಬೇಕು. ನಾನೂ ಕೆಲಕಾಲ ಇಲ್ಲಿನ ಸುದ್ದಿ ಮನೆಯಲ್ಲಿ ಕೆಲಸ ಮಾಡಿದವನಾದ್ದರಿಂದ ಖಚಿತವಾಗಿ ಹೇಳುತ್ತಿದ್ದೇನೆ.

ಖಾಸಗಿ ವಾಹಿನಿಗಳಿಗೆ ಯಾವುದೇ ಆದರ್ಶವಾಗಲಿ, ಸಿದ್ಧಾಂತವಾಗಲಿ ಆಗಲೂ ಈಗಲೂ ಕಂಡುಬರುತ್ತಿಲ್ಲ.  ಹೀಗಾಗಿ ಅಲ್ಲಿ ಕೆಲಸಕ್ಕೆ ಸೇರಿದವರಿಗೂ, ಪತ್ರಿಕೋದ್ಯಮಕ್ಕೂ ಯಾವುದೇ ಬಾದರಾಯಣ ಸಂಬಂಧವೂ ಇರಲಿಲ್ಲ. ಬಹುತೇಕರಿಗೆ ಇದು ಹಣ ಮಾಡಬಹುದಾದ ಕೊಪ್ಪರಿಗೆ ಅನಿಸಿದ್ದಂತೂ ದಿಟ. ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ಕೋಟಿಗಟ್ಟಲೆ ದೋಚಿಕೊಂಡು ಅದೃಶ್ಯರಾದವರಿಗೂ ಕೊರತೆ ಇಲ್ಲ. ಅದು ಪಕ್ಕಾ ಬ್ಲಾಕ್‍ಮೇಲ್ ಕಸಬುಗಾರಿಕೆ. ಈಗಲೂ ಅದು ನಿಂತಿಲ್ಲ. ಇದಾವುದರ ಅವಕಾಶ ಇಲ್ಲದವರು ಕೊಟ್ಟ ಸಂಬಳವನ್ನು ಕಣ್ಣಿಗೆ ಒತ್ತಿಕೊಂಡು ದಿನ ದೂಡುತ್ತಿದ್ದಾರೆ. ಇಲ್ಲಿನ ಬಹುತೇಕರಿಗೆ ನಾಳಿನ ದಿನಗಳು ಕತ್ತಲೆಯಿಂದ ಕೂಡಿವೆಯೆಂಬ ಅರಿವು ನಿಚ್ಚಳವಾಗಿದೆ.

ವಾಹಿನಿಗಳು ಅಲ್ಲಿನ ಕೆಲವರಿಗೆ ಹೇಗೆ ನಿಧಿಯಾಗಿದೆಯೋ ರಾಜಕಾರಣಿಗಳು ಮತ್ತು ಸರ್ಕಾರಗಳಿಗೂ ಅಡಗುತಾಣಗಳಾಗಿ ದಕ್ಕಿದೆ. ಮುದ್ರಣ ಮಾಧ್ಯಮದಲ್ಲಿ ರಾಜಕಾರಣಿಗಳಿಗೆ ಮೈಲೇಜ್ ಸಿಗ್ತಾ ಇರಲಿಲ್ಲ. ಸುದ್ದಿವಾಹಿನಿ ಒಂಥರಾ ಅಕ್ಷಯ ಪಾತ್ರೆ ಇದ್ದಹಾಗೆ. ಅಲ್ಲಿನ ಮುಖ್ಯಸ್ಥರನ್ನು ಬುಕ್ ಮಾಡಿಕೊಂಡರೆ; ಅವರು ಕೂತಿದ್ದು, ನಿಂತದ್ದೆಲ್ಲಾ ಸುದ್ದಿಯಾಗಿ ಪ್ರಸಾರ ಆಗುತ್ತೆ. ಅದೇ ಕ್ಷಣದಲ್ಲಿ ಹೊಲದಲ್ಲಿ ಇರುವ ರೈತನಿಗೂ ನಾಯಕ ದರ್ಶನ ಕೊಡುತ್ತಾನೆ. ಮತದಾರರನ್ನು ಅತಿ ಸುಲಭವಾಗಿ ತಲುಪುವ ಮಾರ್ಗ ಸಿಕ್ಕಿದ್ದನ್ನು ಯಾರುತಾನೆ ಕಳೆದುಕೊಳ್ಳುತ್ತಾರೆ?

ಇನ್ನು ಹಲವು ಕೋಟಿಗಳನ್ನು ಸುರಿದು ವಾಹಿನಿ ಆರಂಭಿಸಿದ ಮಾಲೀಕ ಸುಮ್ಮನೆ ಕೂರುತ್ತಾನ? ನೇರವಾಗಿ ಸರ್ಕಾರಕ್ಕೆ ತನ್ನ ವಾಹಿನಿಯನ್ನು ಅಡವಿಟ್ಟು ತನ್ನ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ. ಇದು ನಿಜ ಚಿತ್ರಣ. ಎಲ್ಲೋ ಕೆಲವು ಇದಕ್ಕೆ ಅಪವಾದ ಇರಬಹುದು; ಇಲ್ಲವೆಂತಲ್ಲ. ಅಂಥವುಗಳನ್ನು ಹೊರಗಿನ ಶಕ್ತಿಗಳು ನಿಯಂತ್ರಣದಲ್ಲಿ ಇರಿಸಿಕೊಂಡಿರುತ್ತವೆ.

ಈಗಂತೂ ಸುದ್ದಿ ವಾಹಿನಿಗಳು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ; ಅವು ಕೇವಲ ಕೂಗುಮಾರಿಗಳು ಅಂತಲೇ ಅನ್ನಿಸೋದು. ರಾಜಕಾರಣಿಗಳು ಕೇವಲ ತಮ್ಮ ಪ್ರಚಾರಕ್ಕಾಗಿ ಈ ಎರಡೂ ಮಾಧ್ಯಮಗಳನ್ನು ಬಳಸಿಕೊಳ್ಳುವುದಷ್ಟಕ್ಕೇ ಅದು ಸೀಮಿತ ಆಗಿರುವುದಿಲ್ಲ. ಅವರಿಗೆ ರಿಯಲ್ ಎಸ್ಟೇಟ್ ಜೊತೆಗೆ ಬೇರೆ ವ್ವವಹಾರಗಳೂ ಇರುತ್ತವೆ. ಕೆಲವು ಕಾನೂನು ಬಾಹಿರವೂ ಆಗಿರುತ್ತೆವೆ. ಅಂಥ ಪ್ರಕರಣಗಳು ಹೊರಬಾರದಂತೆ ರಕ್ಷಿಸಿಕೊಳ್ಳಲೂ ಮಾಧ್ಯಮಗಳು ಬೇಕಾಗುತ್ತವೆ. ಹಣ ಮಾಡಬಯಸುವ ಮಾಧ್ಯಮಗಳಿಗೂ ಇಂಥದೇ ಬೇಕಿರುತ್ತದೆ.

ಇದು ಜಾಗತಿಕ ರೋಗ

ಸುದ್ದಿ ಮಾಧ್ಯಮಗಳು ಪ್ರಭುತ್ವಕ್ಕೆ ಶರಣಾಗುವುದಾಗಲಿ; ಪ್ರಭುತ್ವವೇ ಮಾಧ್ಯಮಗಳನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಕ್ರಿಯೆಯಾಗಲಿ ಹೊಸ ಬೆಳವಣಿಗೆಯೇನೂ ಅಲ್ಲ. ಎಲ್ಲ ಕಾಲದಲ್ಲೂ ಇದ್ದದ್ದೆ. ಆಗ ಅದರ ಪ್ರಮಾಣ ಕಡಿಮೆ ಇದ್ದದ್ದು ಈಗ ದೊಡ್ಡ ಪ್ರಮಾಣಕ್ಕೆ ತಲುಪಿದೆ ಅಷ್ಟೆ.

ಇಲ್ಲಿ ಮತ್ತೊಂದು ಕುತೂಹಲಕರ ಬೆಳವಣಿಗೆಯನ್ನೂ ನಾವು ಗಮನಿಸಬಹುದಾಗಿದೆ. ಅಂತರರಾಷ್ಟ್ರೀಯವಾಗಿ ಹೆಸರು ಮಾಡಿರುವ ಕೆಲ ಮಾಧ್ಯಮಗಳು ಕಾಣದ ಶಕ್ತಿಗಳ ಜೊತೆಗೆ ಕೈ ಜೋಡಿಸಿ ಮತ್ತೊಂದು ದೇಶದ ವಿರುದ್ಧ ಕಾರ್ಯಾಚರಣೆ ನಡೆಸುವುದೂ ಇದೆ. ಈ ಸಂಗತಿ “ಸಮಾಜಮುಖಿ” ಒಡ್ಡಿರುವ ವಿಷಯಕ್ಕೆ ಹೊರತಾದರೂ; ಕನಿಷ್ಠ ಅದನ್ನು ಗುರುತು ಮಾಡುವುದು ಅನಿವಾರ್ಯ ಅನಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಭಾರತದ ರಾಜಕಾರಣದಲ್ಲಿ ಕೆಲ ವಿದೇಶಿ ಪತ್ರಿಕೆಗಳು ಪ್ರವೇಶಿಸಿ ಗೊಂದಲ ನಿರ್ಮಿಸುತ್ತಿವೆ. ಅಲ್ಲಿ ಪ್ರಕಟಗೊಂಡಿದ್ದೇ ಅಂತಿಮ ಸತ್ಯ ಎಂದು ಕೆಲ ಎಡೊಂಥೀಯರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸುವ ಮೂಲಕ ದೇಶದಲ್ಲಿ ಅಶಾಂತಿ ಹರಡುವ ಕೆಲಸ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ.

ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುತ್ತಿದೆ ಅಂತ ಅರಿವಿಗೆ ನಿಖರತೆ ಸಿಕ್ಕಿದಾಗ ರಾಜಕೀಯ ಪ್ರತಿಪಕ್ಷಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಅದು ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುವುದು ಕಣ್ಣಿಗೆ ರಾಚುವಂತೆ ಕಂಡುಬರುತ್ತದೆ.

ದೇಶದ ಬದುಕಿನ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರುವ ಸಮರ್ಥ ಪ್ರತಿಪಕ್ಷದ ನಾಯಕನೇ ಇಲ್ಲ! ಇದ್ದವರು ಸ್ವಯಂ ಮೂಲೆಗೆ ಸೇರಿದ್ದಾರೆ. ಇನ್ನು ಕೆಲವರು ಹಗರಣಗಳಲ್ಲಿ ಸಿಲುಕಿ ಅದರಿಂದ ಹೊರಬರುವ ಮಾರ್ಗಗಳ ಹುಡುಕಾಟದಲ್ಲಿ ಇದ್ದಾರೆ.

ಇದು ನಿಜಕ್ಕೂ ವಿಚಿತ್ರ ಅನ್ನಿಸುತ್ತದೆ. ಇಷ್ಟು ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬ ಸಮರ್ಥ ಪ್ರತಿಪಕ್ಷದ ನಾಯಕ ಇಲ್ಲ ಅನ್ನವುದೇ; ನಮ್ಮ ವ್ಯವಸ್ಥೆಯ ಒಳಪದರುಗಳಲ್ಲಿನ ಲೋಪವೂ ಆಗಿ ಗೋಚರವಾಗುತ್ತದೆ ಅಲ್ಲವಾ?

ಹೀಗಿದ್ದರೂ ಪ್ರತಿಪಕ್ಷದ ಕೆಲ ವೀರರು ಅರ್ಥವಿಲ್ಲದ, ತೂಕವೇ ಇಲ್ಲದ ಕ್ಷುಲ್ಲಕ ಸಂಗತಿಗಳನ್ನು ಉದುರಿಸುತ್ತಾ ಕಾಲಹರಣ ಮಾಡುತ್ತಿರುವುದು ಸಾಮಾನ್ಯ ಜನರ  ಅರಿವಿಗೂ ಬಂದಿದೆ.

ಸ್ವತಂತ್ರ ಮಾಧ್ಯಮ

ಪ್ರಜಾಪ್ರಭುತ್ವದ ಉಳಿಯಬೇಕೆಂದರೆ ಸ್ವತಂತ್ರ ಪತ್ರಿಕೋದ್ಯಮ ಅನಿವಾರ್ಯವಾಗುತ್ತದೆ. ಅದು ಮಾತ್ರ ತನ್ನ ವೃತ್ತಿಗೆ ಸಂಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯ. ಈಗಿನ ದಿನಗಳಲ್ಲಿ ಯಾರು ನೂರಾರು ಕೋಟಿ ರೂಪಾಯಿಗಳನ್ನು ಹೂಡುವ ಧೈರ್ಯ ಮಾಡುತ್ತಾರೆ?

ಅಶ್ಚರ್ಯ ಮತ್ತು ಸಂತಸದ ವಿಷಯವೆಂದರೆ; ದೇಶದಲ್ಲಿನ ಕೆಲವೇ ಬರಳೆಣಿಕೆಯ ಪತ್ರಿಕೆ ಮತ್ತು ವಾಹಿನಿಗಳು ಪ್ರತಿಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವುದು. ಅವು ಆರ್ಥಿಕವಾಗಿಯೂ ಬಲಾಢ್ಯವಾಗಿವೆ. ಅಂಥವುಗಳ ಸಂಖ್ಯೆ ಜಾಸ್ತಿ ಆಗಬೇಕಿದೆ. ಅದಕ್ಕೆ ಸಣ್ಣ ದಾರಿಗಳನ್ನು ಮೊದಲಿಗೆ ಹುಡುಕಿಕೊಳ್ಳಬೇಕು. ಸಾಧ್ಯವೆ?  ಪ್ರಯತ್ನಿಸಿದರೆ ಆದರೂ ಆಗಬಹುದು.

ಸಮಾನ ಮನಸ್ಕರ ಗುಂಪೊಂದು ರೂಪುಗೊಳ್ಳಬೇಕು. ಸಹಕಾರ ತತ್ವದಲ್ಲಿ ಸಂಸ್ಥೆ ಆರಂಭಿಸಿ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಬೇಕು. ಮೊದಲು ಸಣ್ಣದಾಗಿ ಆರಂಭಿಸಿದರೆ ನಾಳಿನ ದಿನಗಳಲ್ಲಿ ದೊಡ್ಡದಾಗಿ ಬೆಳೆಯಬಹುದು.

ಇಂಥ ಅನುಪಮ ಸಹಕಾರ ತತ್ವದ ಸಂಸ್ಥೆಗಳು ದೇಶದ ಎಲ್ಲಾ ಭಾಷಾ ಪ್ರದೇಶಗಳಲ್ಲಿ ಒಂದು ಆಂದೋಲನ ರೀತಿಯಲ್ಲಿ ಆರಂಭಗೊಳ್ಳುವಂತಾಗಬೇಕು. ಇದು ಪ್ರಗತಿಪರ ಯುವ ಶಕ್ತಿಯಿಂದ ಸಾಧ್ಯವಾಗುತ್ತದೆಂಬ ನಂಬಿಕೆ ನನ್ನದು.   

ಇಷ್ಟಂತು ಸತ್ಯ. ಪತ್ರಿಕಾ ಮಾಧ್ಯಮ ಕಾಲ ಪ್ರವಾಹದಲ್ಲಿ ಕೆಲ ಬಾರಿ ಕೆಲ ಅನಿರೀಕ್ಷಿತ ಕಾರಣಗಳಿಂದಾಗಿ ಕುಸಿತ ಕಂಡರೂ ಅದು ಬೇರು ಸಹಿತ ನಿರ್ಮೂಲನ ಆಗುವುದೇ ಇಲ್ಲ; ಅದು ಒಂದು ನಮೂನೆ ಗರಿಕೆ ಇದ್ದಹಾಗೆ.  ಅದು ಯಾವುದೇ ಪ್ರದೇಶದ ಜೀವನೋತ್ಕರ್ಷದ ಕಷಾಯ.

*ಲೇಖಕರು ಮೂಲತಃ ಕೋಲಾರ ಜಿಲ್ಲೆ ಕಿರುಮಣಿ ಗ್ರಾಮದವರು; ಐದು ದಶಕಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಸಕ್ರಿಯ. ಸಾಹಿತ್ಯ ರಚನೆ, ಸಾಕ್ಷ್ಯಚಿತ್ರ, ಪುಸ್ತಕ ಪ್ರಕಟಣೆಯಲ್ಲಿಯೂ ತೊಡಗಿಸಿಕೊಂಡಿದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತರು.

 

ದೇಶದ ಕೆಲವು ಮಾಧ್ಯಮ ಸಮೂಹಗಳು

  1. ಟೈಮ್ಸ್ ಸಮೂಹ: ಟೈಮ್ಸ್ ಆಫ್ ಇಂಡಿಯಾ ಮತ್ತು ಎಕನಾಮಿಕ್ ಟೈಮ್ಸ್ ಪತ್ರಿಕೆಗಳು ಹಾಗೂ ಟೈಮ್ಸ್ ನೌ ಮತ್ತಿತರ ಚಾನೆಲ್‍ಗಳ ಸಮೀರ್ ಜೈನ್ ಒಡೆತನದ ಈ ಸಮೂಹ ಮೊದಲಿನಿಂದಲೂ ಅಧಿಕಾರರೂಢರ ಪರವಾಗಿದೆ. ಈಗಂತೂ ಸಂಪೂರ್ಣವಾಗಿ ಬೆಜೆಪಿ ಪರಕ್ಕೆ ನಿಂತಿದೆ.
  2. ಟಿವಿ 18 ಸಮೂಹ: ಮುಖೇಶ್ ಅಂಬಾನಿ ಒಡೆತನದ ಈ ಸಮೂಹವೂ ಸಂಪೂರ್ಣವಾಗಿ ಆಡಳಿತಾರೂಢ ಬಿಜೆಪಿ ಪರವಾಗಿದೆ.
  3. ಟುಡೇ ಸಮೂಹ: ಅರುಣ್ ಪುರಿ ಒಡೆತನದ ಈ ಸಮೂಹ ತಕ್ಕಮಟ್ಟಿಗೆ ಸಮತೋಲನ ಕಾಯ್ದುಕೊಳ್ಳುವ ಹವಣಿಕೆಯಲ್ಲಿದೆ. ಆದರೂ ಕನ್ನಡಿಗ ರಾಜ್ ಚೆಂಗಪ್ಪ ಮುಖ್ಯಭೂಮಿಕೆಯ ಪತ್ರಿಕೆ ಮತ್ತು ಚಾನೆಲ್‍ಗಳು ಬಿಜೆಪಿಯ ಹಿಡಿತದಲ್ಲಿಯೇ ಇದೆ.
  4. ಎನ್‍ಡಿಟಿವಿ ಸಮೂಹ: ಪ್ರಣವ್ ರಾಯ್ ಒಡೆತನದ ಮತ್ತು ಮೊದಲಿನಿಂದಲೂ ಕಾಂಗ್ರೆಸ್ ಸಖ್ಯದ ಈ ಸಮೂಹ ಈಗ ಕೇಂದ್ರ ಸರ್ಕಾರದಿಂದ ಹಲವು ಪ್ರಕರಣಗಳ ತನಿಖೆ-ಹಿಂಸೆಗೆ

ಒಳಪಟ್ಟಿದೆ.

  1. ದಿ ಹಿಂದೂ ಸಮೂಹ: ಚೆನ್ನೈನ ಎನ್.ರಾಮ್ ಕುಟುಂಬದ ಒಡೆತನದ ಈ ಪತ್ರಿಕೆ ಆದಷ್ಟು ಎಡರಂಗದ ಚಿಂತನೆಗಳನ್ನು ಪ್ರದಿಪಾದಿಸುತ್ತಿದೆ.
  2. ಎಕ್ಸ್‍ಪ್ರೆಸ್ ಸಮೂಹ: ರಾಮನಾಥ್ ಗೋಯೆಂಕಾ ಪುತ್ರನ ಒಡೆತನದ ಈ ಪತ್ರಿಕೆ ಇದುವರೆಗೆ ತನ್ನ ನಿರ್ಭೀತ ಪತ್ರಿಕೋದ್ಯಮಕ್ಕೆ ಸಾಕ್ಷಿಯಾಗಿದೆ. ಈ ಸಮೂಹದ ಮೇಲೆಯೂ ಹಲವು ಆರೋಪಗಳು ಎದುರಾದರೂ ಇದ್ದುದರಲ್ಲಿ ಈ ಪತ್ರಿಕೆ ಎಲ್ಲಾ ಪ್ರಮುಖ ವಿರೋಧಿ ಮಾತುಗಳಿಗೆ ವೇದಿಕೆಯಾಗಿದೆ.
  3. ಏಷ್ಯಾನೆಟ್-ರಿಪಬ್ಲಿಕ್ ಸಮೂಹ: ರಾಜೀವ ಚಂದ್ರಶೇಖರ್ ಮತ್ತು ಅರ್ಣಬ್ ಗೋಸ್ವಾಮಿ ಒಡೆತನದ ಈ ಸಮೂಹ ಸಂಪೂರ್ಣವಾಗಿ ಬಿಜೆಪಿಯ ಕಿಸುಬಾಯಿಯಾಗಿದೆ.
  4. ಡೆಕ್ಕನ್ ಹೆರಾಲ್ಡ್ ಸಮೂಹ: ದಿವಂಗತ ನೆಟ್ಟಕಲ್ಲಪ್ಪ ಮಕ್ಕಳ ಒಡೆತನದ ಈ ಸಮೂಹ ತನ್ನ ನಿರ್ಭೀತ ಸ್ಥಿತಿಗತಿ ಕಾಪಾಡಿಕೊಳ್ಳಲು ಹೆಣಗುತ್ತಿದೆ. ಆಡಳಿತಾರೂಢ ಪಕ್ಷದ ಒತ್ತಾಯಕ್ಕೆ ಮಣಿದು ಜೀವ ಉಳಿಸಿಕೊಂಡಿದೆ.
  5. ಸಂಕೇಶ್ವರ ಸಮೂಹ: ವಿಜಯ ಸಂಕೇಶ್ವರ ಒಡೆತನದ ಈ ಸಮೂಹ ಸಂಕೇಶ್ವರರವರ ತತ್ಕಾಲೀನ ರಾಜಕೀಯ ಸಂಬಂಧದಂತೆ ನಡೆಯುತ್ತದೆ. ಸದ್ಯಕ್ಕೆ ಬಿಜೆಪಿಯಲ್ಲಿರುವ ಸಂಕೇಶ್ವರ ತಮ್ಮ ಪತ್ರಿಕೆ-ಚಾನೆಲ್ಗಳನ್ನು ಬಿಜೆಪಿ ಪರ ಮಾಡಿದ್ದಾರೆ.

Leave a Reply

Your email address will not be published.