ಯುಗಾಂತ್ಯ ಕಲ್ಪನೆ ಕಟ್ಟಿಕೊಟ್ಟ ಕಾದಂಬರಿ ದ ಸ್ಕಾರ್ಲೆಟ್ ಪ್ಲೇಗ್

ಒಂದು ಶತಮಾನಕ್ಕೂ ಹಿಂದೆ ರಚಿತಗೊಂಡ ಈ ಹೊತ್ತಿಗೆಯಲ್ಲಿ ಮುನ್ನೆಲೆಗೆ ಬಂದಿರುವ ಹಲವಾರು ಚಿಂತನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ.

‘ವಿಶ್ವ ಸಾಹಿತ್ಯದಲ್ಲಿ ಸಾಂಕ್ರಾಮಿಕ ಪಿಡುಗುಗಳು’ ಸರಣಿಯಲ್ಲಿ ಅಮೆರಿಕದ ಸಾಹಿತಿ ಹಾಗು ಪತ್ರಕರ್ತ ಜಾಕ್ ಲಂಡನ್ ವಿರಚಿತ ‘ದ ಸ್ಕಾರ್ಲೆಟ್ ಪ್ಲೇಗ್’ ಶೀರ್ಷಿಕೆಯ ವಿಶಿಷ್ಟ ಕಾದಂಬರಿಯನ್ನು ಸಹ ಸೇರಿಸಿಕೊಳ್ಳಬಹುದು. ಈ ಕಾಲ್ಪನಿಕ ಕೃತಿ ಮೊದಲು ಪ್ರಕಟಗೊಂಡಿದ್ದು 1912ರಲ್ಲಿ. 2013ರಲ್ಲಿ ಹರಡಿದ ‘ರೆಡ್ ಡೆತ್’ ಹೆಸರಿನ ಕಾಲ್ಪನಿಕ ಪಿಡುಗು ಹೆಚ್ಚೂಕಡಿಮೆ ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ದೂಡುತ್ತದೆ. ಇದಾದ 60 ವರ್ಷಗಳ ನಂತರದ, ಅಂದರೆ 2073ರ, ಕಥನ ಈ ಕಾದಂಬರಿಯ ವಸ್ತು!  ಹಾಗಾಗಿ ಈ ಕಾದಂಬರಿ ಕುತೂಹಲ ಮೂಡಿಸುತ್ತದೆ.  

ಇಟಲಿಯ ಮೈಕೆಲ್ ಅಗುಷ್ಟೋ ರಿವ ಹಾಗು ಈರ್ವರು ಸಹಲೇಖಕರು ‘ಪ್ಯಾಂಡೆಮಿಕ್ ಫಿಯರ್ ಅಂಡ್ ಲಿಟರೇಚರ್: ಅಬ್ಸರ್ವೇಶನ್ಸ್ ಫ್ರಂ ಜಾಕ್ ಲಂಡನ್ಸ್ ದ ಸ್ಕಾರ್ಲೆಟ್ ಪ್ಲೇಗ್’ ಎಂಬ ಲೇಖನದಲ್ಲಿ ಈ ಕೃತಿಯನ್ನು ಕೂಲಂಕಷವಾಗಿ ವಿಮರ್ಶಿಸಿದ್ದಾರೆ.

ಜಾಕ್ ಲಂಡನ್ ತಮ್ಮ ಕೃತಿಯಲ್ಲಿ ಪ್ಲೇಗ್ ಪಿಡುಗಿನ ರೂಢಿಗತ ಆಚಾರ ವಿಚಾರಗಳ ಸಾಂಪ್ರದಾಯಿಕ ಅಂಶಗಳನ್ನು ಪರಾಮರ್ಶಿಸಿದ್ದಾರೆ. ಈ ಅಂಟುರೋಗದ ವೈದ್ಯಕೀಯ ಲಕ್ಷಣಗಳೊಡನೆ ಇದು ಮುನ್ನೆಲೆಗೆ ತಂದ ನೈತಿಕತೆ ಹಾಗು ನ್ಯಾಯಶೀಲತೆಯ ಪ್ರಶ್ನೆಗಳನ್ನು ಸಹ ಚರ್ಚಿಸಿದ್ದಾರೆ. ಈ ಪಿಡುಗಿಗೆ ಜನರು ಪ್ರತಿಕ್ರಿಯಿಸಿದ ರೀತಿಗೆ ವಿಶೇಷವಾಗಿ ಒತ್ತು ನೀಡಿದ್ದಾರೆ. ಮಂದಿಯಲ್ಲಿ ಉದಿಸಿದ ಭೀತಿ, ಅವರ ವಿಚಾರಹೀನತೆ ಮತ್ತು ಸ್ವಾರ್ಥ ಪ್ರವೃತ್ತಿಯನ್ನು ವಿಶ್ಲೇಷಿಸಿದ್ದಾರೆ. ಲೇಖಕರ ಹಿಂದಿನ ಕೃತಿಗಳಿಗೆ ಹೋಲಿಸಿದರೆ, ಈ ಕೃತಿಯಲ್ಲಿ ಪ್ಲೇಗ್ ಪಿಡುಗು ಅತ್ಯಂತ ರೂಕ್ಷತೆಯಿಂದ ಬಿಂಬಿತವಾಗಿದೆ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. 

“ಸೂಕ್ಷ್ಮಾಣುತಜ್ಞರು ಹಿಂದಿನ ಸಂದರ್ಭಗಳಲ್ಲಿ ಸಫಲರಾದಂತೆ ಈ ರೋಗಾಣುವಿನ ನಿಯಂತ್ರಣಕ್ಕೂ ಮಾರ್ಗೋಪಾಯಗಳನ್ನು ಹುಡುಕುತ್ತಾರೆ” ಎಂಬ ಭರವಸೆಯಿಂದ, ಸ್ಕಾರ್ಲೆಟ್ ಪ್ಲೇಗ್ ಪಿಡುಗಿನ ಆರಂಭದಲ್ಲಿ ನಾಗರಿಕರು ಆತಂಕಗೊಳ್ಳುವುದಿಲ್ಲ. ಆದರೆ ಈ ರೋಗಾಣುಗಳು ಮಾನವರನ್ನು ನಾಶಗೊಳಿಸಿದ “ನಿಬ್ಬೆರಗುಗೊಳಿಸುವ ಕ್ಷಿಪ್ರತೆ ಮತ್ತು ರೋಗದ ಲಕ್ಷಣಗಳು ಗೋಚರಿಸಿದ ಕೇವಲ ಒಂದು ತಾಸಿನೊಳಗೆ ಸೋಂಕಿತರನ್ನು ಬಲಿಪಡಿಯುತ್ತಿದ್ದ ವೇಗ” ಕಂಡು ಅವರು ಭಯಭೀತರಾಗುತ್ತಾರೆ. “ರೋಗದ ಮೊದಲ ಲಕ್ಷಣಗಳು ಗೋಚರಿಸಿದ ಒಂದು ಗಂಟೆಯೊಳಗೆ ರೋಗಿಗಳು ಮರಣವನ್ನಪ್ಪುತ್ತಿದ್ದರು. ಕೆಲವರು ಹಲವಾರು ಗಂಟೆಗಳವರೆಗೆ ಬದುಕಿದ್ದರು.  ಬಹುತೇಕರು ರೋಗ ಕಾಣಿಸಿಕೊಂಡ ಹತ್ತು ಹದಿನೈದು ನಿಮಿಷಗಳೊಳಗೆ ಸಾವಿಗೀಡಾಗುತ್ತಿದ್ದರು.” 

ಈ ಅವಧಿಯಲ್ಲಿ ರೋಗಿಯು ಅನುಭವಿಸಿದ ಯಾತನೆಯ ವಿವರಗಳನ್ನು ದಾಖಲಿಸುವ ಮೂಲಕ ಲೇಖಕರು ಪ್ಲೇಗ್ ಹೆಮ್ಮಾರಿಯ ನೈಜ ಹಾಗು ಬೀಭತ್ಸ ಚಿತ್ರಣ ನೀಡುತ್ತಾರೆ. “ಹೃದಯ ಜೋರಾಗಿ ಬಡಿದುಕೊಳ್ಳಲಾರಂಭಿಸಿತು ಮತ್ತು ದೇಹದ ಉಷ್ಣತೆ ಹೆಚ್ಚಾಯಿತು. ನಂತರ ಕಾಣಿಸಿಕೊಂಡ ದದ್ದುಗಳು ಕಾಡ್ಗಿಚ್ಚಿನಂತೆ ಮುಖ ಮತ್ತು ದೇಹವನ್ನು ವ್ಯಾಪಿಸಿದವು. ಬಹುತೇಕರು ಹೃದಯ ಬಡಿತ ಹಾಗು ದೇಹದ ತಾಪ ಹೆಚ್ಚಾಗಿದ್ದನ್ನು ಗಮನಿಸಲೇ ಇಲ್ಲ ಮತ್ತು ಸ್ಕಾರ್ಲೆಟ್ ಗುಳ್ಳೆಗಳು ಕಾಣಿಸಿಕೊಂಡಾಗಲೇ ಅವರಿಗೆ ಮೊದಲಬಾರಿಗೆ (ರೋಗದ) ಅರಿವಾದದ್ದು.  ಸಾಮಾನ್ಯವಾಗಿ, ದದ್ದುಗಳು ಕಾಣಿಸಿಕೊಂಡಾಗ ಅವರಿಗೆ ಸೆಳೆತವೂ ಬರುತ್ತಿತ್ತು.  ಆದರೆ ಈ ಸೆಳೆತ ಹೆಚ್ಚುಕಾಲ ಕಾಡುತ್ತಿರಲಿಲ್ಲ ಮತ್ತು ತೀವ್ರವಾಗಿಯೂ ಇರುತ್ತಿರಲಿಲ್ಲ. ಹಿಮ್ಮಡಿಗಳು ಮೊದಲು ಜಡವಾಗುತ್ತಿದ್ದವು, ನಂತರ ಕಾಲುಗಳು, ಮತ್ತು ಸೊಂಟ, ಮತ್ತು ಹೀಗೆಯೇ ಮೇಲಕ್ಕೆ ಸಾಗಿ ಹೃದಯವೂ ಜಡವಾಗಿ ಅವರು ಸಾವನ್ನಪ್ಪುತ್ತಿದ್ದರು.”

ಶವಗಳು ಬೇಗ ಕೊಳೆಯುತ್ತಿದ್ದುದನ್ನೂ, ಅವು ಕ್ಷಣಮಾತ್ರದಲ್ಲಿ ಬಿಲಿಯನ್‌ಗಟ್ಟಲೆ ಕೀಟಾಣುಗಳನ್ನು ಹೊರಸೂಸುತ್ತಿದ್ದುದನ್ನೂ, ಇದರಿಂದಾಗಿ ಪಿಡುಗು ತ್ವರಿತ ಗತಿಯಲ್ಲಿ ಹರಡಿ ವಿಜ್ಞಾನಿಗಳಿಗೆ ಸವಾಲಾದದ್ದನ್ನೂ ಲಂಡನ್ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ವೈದ್ಯಕೀಯ ಹಾಗು ವೈಜ್ಞಾನಿಕ ಅಭಿವೃದ್ಧಿಯನ್ನು ಪ್ಲೇಗ್ ಪರಾಭವಗೊಳಿಸಿದ್ದರ ಹೃದಯ ವಿದ್ರಾವಕ ವಿವರಣೆ ಇಂತಿದೆ: ಸೂಕ್ಷಾö್ಮಣುವಿಜ್ಞಾನಿಗಳು “ಸ್ಕಾರ್ಲೆಟ್ ಡೆತ್‌ನ ರೋಗಾಣುಗಳ ಅಧ್ಯಯನ ಮಾಡುತ್ತಲೇ ತಮ್ಮ ಪ್ರಯೋಗಶಾಲೆಗಳಲ್ಲಿ ಬಲಿಯಾದರು… ಅವರು ಬಲಿಯಾಗುತ್ತಿದ್ದ ವೇಗದಲ್ಲಿಯೇ ಇತರರು ಆ ಸ್ಥಾನ ತುಂಬುತ್ತಿದ್ದರು.”    

ಪಿಡುಗು ವ್ಯಾಪಕವಾಗಿ ಹರಡುತ್ತಿದ್ದಂತೆ ಅತಂಕಗೊಂಡ ಜನರು ಪ್ರತಿಕ್ರಿಯಿಸಿದ ಪರಿಯನ್ನು, ಭಯಭೀತರಾದ ಜನತೆ ಸಾವಿನ ದವಡೆಯಿಂದ ಪಾರಾಗಲು ಪಟ್ಟಣಗಳಿಂದ ಓಡಿಹೋದದ್ದನ್ನು ಹಾಗು ತಮ್ಮೊಡನೆ ರೋಗಾಣುಗಳನ್ನೂ ಕೊಂಡೊಯ್ದದ್ದನ್ನು, ಲೇಖಕರು ಸವಿವರವಾಗಿ ಚಿತ್ರಿಸಿದ್ದಾರೆ.  

“ನಿಜಕ್ಕೂ ಅವು ಪ್ರಪಂಚದ ಅಂತ್ಯದ ಕಡೆಯ ದಿನಗಳಂತಿದ್ದವು.” ಹೀಗೆ ಹೆಮ್ಮಾರಿಯನ್ನು ‘ಪ್ರಪಂಚದ ಅಂತ್ಯ’ ಎಂದು ಗ್ರಹಿಸಿದ ಮಂದಿ, ತಮ್ಮ ಸಾವು ಸನ್ನಿಹಿತವಾಗುತ್ತಿರುವುದರಿಂದ ಭೀತರಾಗಿದ್ದುದಷ್ಟೇ ಅಲ್ಲದೆ ಯುಗಾಂತ್ಯದ ಕಲ್ಪನೆಯ ಭೀಕರತೆಯಿಂದಲೂ ತತ್ತರಿಸಿದ್ದರು.

ಬಂಡವಾಳಶಾಹಿಯಿಂದ ವೃದ್ಧಿಸಿದ ಜನಸಂಖ್ಯೆ ಜನದಟ್ಟಣೆಗೆ ನಾಂದಿಯಾಯಿತೆಂದೂ, ಇದು ಪ್ಲೇಗ್ ಮಾರಿಗೆ ಕಾರಣವಾಯಿತೆಂದೂ ನಂಬಿದ ಲೇಖಕರು ಬಂಡವಾಳಶಾಹಿಯನ್ನು ಕಟುವಾಗಿ ಟೀಕಿಸಿದ್ದಾರೆ. 

ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಮಾಧ್ಯಮಗಳ ಪಾತ್ರವನ್ನು ಅವಲೋಕಿಸಲು ಈ ಕಾದಂಬರಿ ಪ್ರೇರಣೆ ನೀಡುತ್ತದೆ. ಲಂಡನ್ ವಿರಚಿತ ಈ ಕೃತಿಯಲ್ಲಿ ಹೆಮ್ಮಾರಿಯ ಹರಡುವಿಕೆ ಕುರಿತಂತೆ ಮಾಹಿತಿ ನೀಡಲು ಲಭ್ಯವಿದ್ದ ಸಾಧನಗಳೆಂದರೆ ವೃತ್ತಪತ್ರಿಕೆಗಳು, ತಾರು, ಮತ್ತು ದೂರವಾಣಿ ಮಾತ್ರ. ಈ ಕಾದಂಬರಿಯಲ್ಲಿ ಮಾಧ್ಯಮಗಳು ಪಿಡುಗಿನ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದವು ಎಂಬುದು ವಿಮರ್ಶಕರ ಅನಿಸಿಕೆಯಾಗಿದೆ. 

Leave a Reply

Your email address will not be published.