ಯುವಮನಗಳಲ್ಲಿ ಕನಸು ಬಿತ್ತುವ ದಯಾನಂದ ಅವರ ‘ಹಾದಿಗಲ್ಲು’

-ಮಂಜುನಾಥ ಡಿ.ಡೊಳ್ಳಿನ

ಹಳ್ಳಿಗಾಡಿನ ಬಡ ಪ್ರತಿಭೆಯೊಂದು ಸೌಲಭ್ಯ, ಪೆÇ್ರೀತ್ಸಾಹಗಳ ಕೊರತೆಯ ಮಧ್ಯೆಯೂ ತನ್ನ ಅಂತರಾಳದಲ್ಲಿದ್ದ ಛಲವೊಂದರಿಂದಲೇ ಸಾಧನೆಯ ಹಾದಿಯನ್ನು ಕ್ರಮಿಸಿ, ಗಮ್ಯ ತಲುಪಿದ ಬಗೆಯನ್ನು ಈ ಕೃತಿ ದಾಖಲಿಸಿದೆ. ಇದು ಭವಿಷ್ಯತ್ತನ್ನು ಕಟ್ಟಿಕೊಳ್ಳಲು ಕಾತರರಾಗಿರುವ ಯುವ ಮನಸ್ಸುಗಳಿಗೆ ಕೈ ದೀವಿಗೆಯಂತಿದೆ.

ಹಾದಿಗಲ್ಲು

ಆತ್ಮವೃತ್ತಾಂತದ

ಮೊದಲ ಚರಣ

ಕೆ.ಎ.ದಯಾನಂದ

ಮುದ್ರಣ: 2020

ಪುಟ: 292 ಬೆಲೆ: ರೂ.250

ಸಮನ್ವಿತ ಪ್ರಕಾಶನ

ಮೊ: 9844192952

ಹಿರಿಯ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರ ಆತ್ಮವೃತ್ತಾಂತದ ಮೊದಲ ಚರಣ “ಹಾದಿಗಲ್ಲು”. ಮುದ್ರಣಗೊಂಡ ಕೆಲವೇ ತಿಂಗಳುಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಮರುಮುದ್ರಣಗೊಂಡು ಕನ್ನಡದ ನಾನಾ ವಲಯಗಳ ಓದುಗರನ್ನು ತಲುಪುತ್ತಿದೆ. ಹಳ್ಳಿಗಾಡಿನ ಬಡ ಪ್ರತಿಭೆಯೊಂದು ಸೌಲಭ್ಯ, ಪೆÇ್ರೀತ್ಸಾಹಗಳ ಕೊರತೆಯ ಮಧ್ಯೆಯೂ ತನ್ನ ಅಂತರಾಳದಲ್ಲಿದ್ದ ಛಲವೊಂದರಿಂದಲೇ ಸಾಧನೆಯ ಹಾದಿಯನ್ನು ಕ್ರಮಿಸಿ, ಗಮ್ಯ ತಲುಪಿದ ಬಗೆಯನ್ನು ಈ ಕೃತಿ ದಾಖಲಿಸಿದೆ. ಗುರಿ ತಲುಪಿದ ನಂತರವೂ ತಾನು ಸಾಗಿ ಬಂದ ಹಾದಿಯನ್ನು ಮರೆಯದೇ ವಿವೇಕಪೂರ್ಣವಾಗಿ, ಪ್ರಜ್ಞಾಪೂರ್ವಕವಾಗಿ ಆಡಳಿತಕ್ಷೇತ್ರದ ಚೌಕಟ್ಟುಗಳ ನಡುವೆಯೇ ಜನಪರ ಕಾಳಜಿಯನ್ನು ಕ್ರಿಯೆಗೆ ಇಳಿಸುವ ಹತ್ತು, ಹಲವು ಸಂಗತಿಗಳು ಈ ಕೃತಿಯಲ್ಲಿವೆ. ಭವಿಷ್ಯತ್ತನ್ನು ಕಟ್ಟಿಕೊಳ್ಳಲು ಕಾತರರಾಗಿರುವ ಯುವ ಮನಸ್ಸುಗಳಿಗೆ “ಹಾದಿಗಲ್ಲು” ಕೈ ದೀವಿಗೆಯಂತಿದೆ. ಆಡಳಿತ,ಸೇವಾ ಕ್ಷೇತ್ರದಲ್ಲಿ  ಜನಮುಖಿ ಕಾರ್ಯಗಳ ಅನುμÁ್ಠನದ ಹೊಸ ಸಾಧ್ಯತೆಗಳತ್ತ  ಬೆಳಕು ಚೆಲ್ಲುತ್ತದೆ.

“ಹಾದಿಗಲ್ಲು” ಸುಮಾರು 37 ಬಿಡಿಬರಹಗಳಲ್ಲಿ ಲೇಖಕರ ಆತ್ಮವೃತ್ತಾಂತವನ್ನು ದಾಖಲಿಸಿದೆ. ಗ್ರಾಮ ಬದುಕಿನ ಗಾಢ ಅಸ್ಮಿತೆ ಕೃತಿಯ ಮೊದಲ ಅರ್ಧದಷ್ಟು ಲೇಖನಗಳಲ್ಲಿ ದಟ್ಟವಾಗಿದೆ. ಬಡ ಜೀವವೊಂದರ ಪಯಣ, ಹಳ್ಳಿ ಬದುಕಿನ ಸಹಜ ನೈತಿಕ ನಿಲುವುಗಳು ಓದುಗರ ಮೇಲೆ ಪ್ರಭಾವ ಬೀರುತ್ತವೆ.  ಅತಿರಂಜನೆ, ಕಲ್ಪಿತ ಅಂಶಗಳಿಗೆ ಆಸ್ಪದ ನೀಡದೇ, ಆತ್ಮರತಿ ಮತ್ತು ಆತ್ಮಮರುಕಕ್ಕೆ ಅವಕಾಶ ನೀಡದೇ ಒಟ್ಟಾರೆ ತಾವು ಸಾಗಿ ಬಂದ ಹಾದಿಯನ್ನು ಕೃತಿಕಾರರು ಸರಳವಾಗಿ ಮತ್ತು ಸೊಗಸಾಗಿ ನಿರೂಪಣೆ ಮಾಡಿದ್ದಾರೆ.

ನಾಟಿ, ಕುಯ್ಲು, ಎಮ್ಮೆ, ದನ, ಕುರಿ ಕಾಯುವಿಕೆಯ ಕಾಯಕದ ನಡುವೆ ನಿರಂತರವಾಗಿ ಶಾಲೆಗೆ ಹೋಗಲಾಗದ, ಪಾಠಗಳನ್ನು ಕೇಳಲಾಗದ ಗ್ರಾಮೀಣ ಪರಿಸ್ಥಿತಿಯ ಹಿನ್ನೆಲೆಯಿಂದ ಬಂದ ಕೆ.ಎ.ದಯಾನಂದ ಅವರು ಈ ದೌರ್ಬಲ್ಯಗಳನ್ನೇ ತಮ್ಮ ಸಾಮಥ್ರ್ಯವನ್ನಾಗಿ ಮಾಡಿಕೊಂಡ ಬಗೆಯನ್ನು ಕೃತಿಯ ಮೊದಲ ಬರಹದಲ್ಲಿ ಹೇಳುತ್ತಾರೆ. ಆರನೇ ತರಗತಿಯಲ್ಲಿದ್ದಾಗ ಪರೀಕ್ಷೆ ಬರೆದು ಉತ್ತರ ಪತ್ರಿಕೆಗಳನ್ನು ಗುರುಗಳ ಕೈಗೆ ನೀಡಿ ಮರದ ಅಡಿಯಲ್ಲಿ ಕುಳಿತ ವೇಳೆಯಲ್ಲಿ ಶಾಲೆಯ  ಮುಖ್ಯೋಪಾಧ್ಯಾಯರು ಬಂದು “ಲೇ ಮುಂಡೇದೆ ನೀ ಬರೆದಿರೋದನ್ನ ನೀನೆ ಓದಿದರೂ ಸಾಕು ಪಾಸ್ ಮಾಡಿಬಿಡ್ತೀನಿ” ಎಂದದ್ದನ್ನು ಸ್ಮರಿಸಿಕೊಳ್ಳುತ್ತ ಆಗ ಒಂದರಿಂದ ಒಂಬತ್ತನೆಯ ತರಗತಿವರೆಗೆ ಪರೀಕ್ಷೆಗಳಲ್ಲಿ ಇಂಗ್ಲಿಷಿನ ಪ್ರಶ್ನೆಗಳನ್ನೇ ಹಿಂದು ಮುಂದಾಗಿ ಬರೆಯುತ್ತ, ಪುಟ ತುಂಬಿಸುತ್ತಿದ್ದುದು, ಅರ್ಹತೆಯಿಲ್ಲದಿದ್ದರೂ ಗುರುಗಳು ಫೇಲ್ ಮಾಡದೇ ಪಾಸು ಮಾಡುತ್ತ ಸಾಗಿದ್ದರಿಂದ ಈಗ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಗಿದ್ದು, ಇಲ್ಲವಾದರೆ ಹುಟ್ಟೂರಿನಲ್ಲಿ ಕೂಲಿಯವನಾಗಿಯೇ ಉಳಿಯಬೇಕಾಗುತ್ತಿತ್ತು ಎಂಬುದನ್ನು ನೆನೆಯುತ್ತಾರೆ ಲೇಖಕರು.

ಎಸ್‍ಎಸ್‍ಎಲ್‍ಸಿ ನಂತರ ಮುಂದೆ ಏನು ಓದುವುದು ಎಂದು ತಿಳಿಯದೇ, ತನ್ನ ತಂದೆಯ ಸಹೋದರಿ ಹುಚ್ಚಮ್ಮತ್ತೆಯ ಬೆಂಗಳೂರಿನ ಮನೆಗೆ ತೆರಳುತ್ತಾರೆ. ಅಲ್ಲಿ ಅವರ ಮಾವನವರು ಮನೆಯಲ್ಲಿ ಮಕ್ಕಳಿಗೆ ಉಕ್ತಲೇಖನ ಬರೆಸುವಾಗ, ಇವರ ಬರಹದಲ್ಲಿದ್ದ ಕಾಗುಣಿತ ದೋಷಗಳನ್ನು ಕಂಡು “ಕನ್ನಡವೇ ಬರೆಯಲು ಬಾರದವನು ಪಿಯುಸಿ ಏನು ಓದುತ್ತೀ?” ಎಂದು ಹೇಳಿ ತಮ್ಮ ಪರಿಚಯದ ಇಂಜಿನಿಯರ್ ಒಬ್ಬರಿಗೆ ಹೇಳಿ ವಿದ್ಯುತ್ ಕಂಬ ನೆಡುವ, ಕೇಬಲ್ ಅಗೆದು ರಿಪೇರಿ ಮಾಡುವ ತಾತ್ಕಾಲಿಕ ಕೆಲಸಕ್ಕೆ ಸೇರಿಸುತ್ತಾರೆ. ಮಧ್ಯಾಹ್ನದವರೆಗೆ ಈ ಕೆಲಸ ಮಾಡಿದ ನಂತರ ಸಮಯ ಸಿಗುತ್ತಿದ್ದರಿಂದ ಸರ್ಕಾರಿ ಕಲಾ ಕಾಲೇಜಿಗೆ ಪಿಯುಸಿ ಪ್ರವೇಶ ಪಡೆಯುತ್ತಾರೆ. ಮುಂದೆ ತರಬೇತಿ ಇಲ್ಲದೇ 1998 ಹಾಗೂ 1999 ಎರಡರ ಬ್ಯಾಚಿನಲ್ಲಿಯೂ ಕೆ.ಎ.ಎಸ್. ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುತ್ತಾರೆ.

ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ ಹುದ್ದೆಗೆ ಸೇರಿದ ಬಳಿಕವೂ ಅವರ ಸಹೋದ್ಯೋಗಿಗಳ ಆಧುನಿಕ ಉಡುಗೆ, ತೊಡುಗೆ, ಹಾವಭಾವ, ನಡೆನುಡಿ, ಆರ್ಥಿಕ ಸ್ಥಿತಿ, ಇಂಗ್ಲಿμï ಮಾತು, ಕಂಪ್ಯೂಟರ್ ಬಳಕೆ, ಪರಿಚಯಿಸಿಕೊಳ್ಳುವ ರೀತಿ ನೀತಿಗಳೇ ಅವರಿಗೆ ಒಂದು ಬಗೆಯ ಕೀಳರಿಮೆ ಉಂಟು ಮಾಡುತ್ತಿತ್ತು. ಇವು ಸಾಮಾನ್ಯವಾಗಿ ಹಳ್ಳಿಗಾಡಿನ ಹಿನ್ನೆಲೆಯಿಂದ ಬಂದು ಉನ್ನತ ಶಿಕ್ಷಣ, ಉದ್ಯೋಗ ಪಡೆದವರು ವೃತ್ತಿ ಜೀವನದ ಶುರುವಾತಿನಲ್ಲಿ ಎದುರಿಸುವ ಸಂಗತಿಗಳೇ ಆಗಿರುವುದರಿಂದ ಓದುಗರಿಗೆ ಆಪ್ತವಾಗುತ್ತವೆ.

ನಾವು ಮತ್ತು ನಮ್ಮ ಕುರಿಗಳ ಓಟ ಎಂಬ ಬರಹದಲ್ಲಿ, ಮರದ ಕಾವುಕೋಲು ಹಾಕಿ, ಹುಲ್ಲು ಹೊದಿಕೆ ಹೊಚ್ಚಿ ನಿರ್ಮಿಸಿದ್ದ, ಅಡುಗೆ ಮನೆ, ಪಡಸಾಲೆ, ಎಲ್ಲದಕ್ಕೂ ಒಂದೇ ಒಳಾಂಗಣವಿದ್ದ ಪುಟ್ಟ ಮನೆಯಲ್ಲಿ ಎರಡು ಎತ್ತುಗಳು, ನಾಲ್ಕು ಕುರಿಗಳೊಂದಿಗೆ ಮನೆ ಮಂದಿಯೆಲ್ಲಾ ಒಟ್ಟಿಗೆ ವಾಸಿಸುತ್ತಿದ್ದ ಬದುಕು ಎಂಬತ್ತರ ದಶಕದ ಗ್ರಾಮೀಣ ತಳವರ್ಗಗಳ ಜೀವನದ ಚಿತ್ರಣ ನೀಡುತ್ತವೆ. ಆಧುನಿಕ ಮಾಹಿತಿ ತಂತ್ರಜ್ಞಾನದ ಈ ದಿನಗಳಲ್ಲಿ ಮಾಹಿತಿ, ಮನರಂಜನೆಯ ಮಹಾಪೂರವೇ ಇದೆ. ಇವೆಲ್ಲ ಇಲ್ಲದ ದಿನಗಳಲ್ಲಿ ಗ್ರಾಮದೇವತೆ ಹಬ್ಬ, ಉತ್ಸವಗಳೇ ಮನರಂಜನೆ ಹಾಗೂ ಸಾಂಸ್ಕøತಿಕ ವಿಕಸನಕ್ಕೆ ಮಾರ್ಗಗಳಾಗಿದ್ದವು ಅಂತಹ ಆಚರಣೆಗಳಲ್ಲಿ ಒಂದಾದ ವಾರ್ಷಿಕ ಕುರಿ ಓಟದ ಸವಿಯನ್ನು ಸೊಗಸಾಗಿ ದಾಖಲಿಸಿದ್ದಾರೆ.

“ಚರ್ಮವನ್ನೇ ಚಪ್ಪಲಿಯಾಗಿಸಿಕೊಂಡ ಅಪ್ಪ” ಬರಹ ಆ ಕಾಲದ ಸಂಕಷ್ಟದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ. ಬರಿಗಾಲಿಗೆ ಮುಳ್ಳು ನೆಟ್ಟು ಅದು ಪಾದದಲ್ಲಿ ಕೊಳೆತುಹೋಗುವುದು, ಎμÉ್ಟೀ ದೂರದ ದಾರಿಯಾಗಿದ್ದರೂ ನಡೆದುಕೊಂಡು ಹೋಗಿಯೇ ತಲುಪುತ್ತಿದ್ದ ಅಪ್ಪ ಓರ್ವ ಆಧ್ಯಾತ್ಮಿಕ ಫಕೀರನಂತೆ ಕಂಡಿರುವುದು ಸ್ವಾಭಿಮಾನ ಮತ್ತು ಸಂಯಮದ ಬದುಕಿನ ಪರಂಪರೆಯನ್ನು ಬಿಂಬಿಸುತ್ತದೆ.

ಲೇಖಕರು ಐದನೇ ತರಗತಿಯಲ್ಲಿದ್ದಾಗ ತಮ್ಮೂರಿನ ನೆರೆಮನೆಯ ಲಕ್ಕಮ್ಮನ ಮನೆಯ ಕೋಳಿ ಕದ್ದು, ತಪ್ಪಿನ ಅರಿವಾಗಿ ಒಪ್ಪಿಕೊಳ್ಳಲೂ ಸಾಧ್ಯವಾಗದೇ ಕಳ್ಳತನ ಮುಚ್ಚಿಡಲು ಕೋಳಿಯನ್ನು ಮಡಕೆಯೊಂದರಲ್ಲಿ ಹಾಕಿ ತಿಪ್ಪೆಯಲ್ಲಿ ಹೂತು ಹಾಕುತ್ತಾರೆ. ಈ ಘಟನೆ ನಡೆದು ಮೂವತ್ತೆರಡಕ್ಕೂ ಹೆಚ್ಚು ವರ್ಷಗಳ ಬಳಿಕವೂ ಅವರಲ್ಲಿ ಕಾಡುತ್ತಿದ್ದು ಇತ್ತೀಚೆಗμÉ್ಟೀ ಅದನ್ನು ಬಹಿರಂಗಪಡಿಸಿದಾಗ ತಮ್ಮ ಮನಸ್ಸು ಹಗುರಾಯಿತು ಎಂಬ ಸಂಗತಿಯನ್ನು “ಮಂಗ ಕೋಳಿಯ ಕೊಲೆ” ಬರಹದಲ್ಲಿ ರಸವತ್ತಾಗಿ ಹೇಳಿಕೊಂಡಿದ್ದಾರೆ.

“ಮಳೆಯೆಂಬ ಮಹಾಮಾರಿ” ಬರಹದ ಶೀರ್ಷಿಕೆಯ ಬಗ್ಗೆ ಪ್ರಾರಂಭದಲ್ಲಿಯೇ ಮಳೆಯನ್ನು ಆ ರೀತಿ ಕರೆದುದಕ್ಕೆ ಸ್ಪಷ್ಟನೆ ನೀಡುತ್ತಾರೆ ಲೇಖಕರು. ಮಳೆ ಬಾರದಿದ್ದರೆ ಬೆಳೆ ಬರದೇ ಮಣ್ಣು ತಿನ್ನಬೇಕಾಗುತ್ತದೆ ಎಂದು ಅವ್ವ ಗೊಣಗಾಡುತ್ತಿದ್ದರೂ 10 ವರ್ಷದ ಬಾಲಕನಾಗಿದ್ದ ಲೇಖಕರು ಮಾತ್ರ ಮಳೆ ಬರುವುದು ಬೇಡ ಎಂದೇ ಅಂತರಂಗದಲ್ಲಿ ಪ್ರಾರ್ಥಿಸುತ್ತಿದ್ದರು. ಇದಕ್ಕೆ 10 ಘಿ 6 ಅಡಿಯ ಕೊಠಡಿಯಲ್ಲಿ ಮನೆ ಮಂದಿಯೆಲ್ಲ ಬದುಕುವಾಗ ಎದುರಿಸಿದ ಸಂಕಷ್ಟಗಳು ಕಾರಣವಾಗುತ್ತಿದ್ದವು. ಮುಂದೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಲಕ್ಷಾಂತರ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವಾಗ ಅದನ್ನು ನೆನಪಿಸಿಕೊಳ್ಳುತ್ತ ನೊಂದವರಿಗೆ ನೆರವಾಗುವ ಪರಿ, ಕಷ್ಟಗಳು ವ್ಯಕ್ತಿಯೊಬ್ಬನನ್ನು ಗಟ್ಟಿಗೊಳಿಸುವ, ಅಂತಃಕರಣದ ಸಂವೇದನೆ ಬೆಳೆಸುವುದನ್ನು ತೋರಿಸುತ್ತದೆ.

ನಮ್ಮೂರ ಬೇಟೆ, ಮರೆಯಲಾಗದ ತಮ್ಟೆ ಹಣ್ಣು, ಬೇವಿನ ಬೀಜ, ಹಾಲೆಸೊಪ್ಪು ಬರಹಗಳು ಬದುಕು ಕದ್ದು ತಿನ್ನುವ ಹಂತದಿಂದ, ತಿಂದಿದ್ದನ್ನು ಕರಗಿಸುವ ಹಂತಕ್ಕೆ ತಂದು ನಿಲ್ಲಿಸಿರುವ ಬೆಳವಣಿಗೆಯನ್ನು ಹೃದ್ಯವಾಗಿಸುತ್ತವೆ. ಸೈಕಲ್ ಸವಾರಿ, ಸಾಲದ ಶೂಲ, ಹಾವಾಡಿಗ ಮತ್ತು ಸಾವಿನ ಭಯ ಬರಹಗಳಲ್ಲಿ ಬಾಲ್ಯ ಮತ್ತು ಬದುಕಿನ ನಾನಾ ಮುಖಗಳು ಅನಾವರಣಗೊಂಡಿವೆ. ಸಾಲದ ಭಯಕ್ಕೆ, ಭೂಅಭಿವೃದ್ಧಿ ಬ್ಯಾಂಕಿನ ಜಪ್ತಿಯ ಹೆದರಿಕೆಗಳು ಇಂದಿಗೂ ಜಾಗೃತವಾಗಿವೆ. ಸ್ವಾರ್ಥವಿಲ್ಲದೇ, ದುಡ್ಡಿನಾಸೆಯಿಲ್ಲದೇ ನಿಸ್ಪೃಹವಾಗಿ ಪರಸ್ಪರ ನೆರವಾಗುತ್ತಿದ್ದ ಹಾವಾಡಿಗನಂತಹ ಅನಾಮಿಕ ಜನರಿಂದ ಪುನರ್ಜನ್ಮ ಪಡೆದ ಘಟನೆಗಳು ಹೃದಯ ಕಲಕುತ್ತವೆ.

ಲೇಖಕರು ಕೃತಿಯ ಪೂರ್ವಾರ್ಧ ಭಾಗದಲ್ಲಿ ತಮ್ಮ ಬಾಲ್ಯ, ಶಿಕ್ಷಣ, ಆ ಸಂದರ್ಭದ ಸವಾಲುಗಳನ್ನು ದಾಖಲಿಸಿದ್ದಾರೆ. ಉತ್ತರಾರ್ಧದ ಬರಹಗಳಲ್ಲಿ ಕೋಲಾರ ಜಿಲ್ಲೆಯ ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ನಂತರ ಉಪವಿಭಾಗಾಧಿಕಾರಿ ಹುದ್ದೆಗೇರಿದ ಬಳಿಕ ಆದ ಅನುಭವಗಳನ್ನು ಹೃದಯಂಗಮವಾಗಿ ವಿವರಿಸಿದ್ದಾರೆ. ತರಬೇತಿಯಲ್ಲಿದ್ದಾಗ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಡಾ.ಎಸ್.ಎಂ.ಜಾಮದಾರ್ ಅವರು ವಿಧಾನಸೌಧದ ಸಭೆಯೊಂದಕ್ಕೆ ಹಾಜರಾಗುವುದನ್ನೂ ಮೊಟಕುಗೊಳಿಸಿ, “ನನ್ನ ರಾಜ್ಯದ ಭವಿಷ್ಯ ನನ್ನ ಮುಂದಿದೆ” ಎಂದು ಹೇಳಿ ಇವರ ತಂಡಕ್ಕೆ ತರಬೇತಿ ಮುಂದುವರೆಸಿ ಆಡಳಿತದ ಎಬಿಸಿಡಿ ಕಲಿಸಿದ್ದು, ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎನ್.ಎಸ್.ಚನ್ನಪ್ಪಗೌಡರು ತಮ್ಮ ಅನುಭವವನ್ನು ಧಾರೆ ಎರೆದು ಯಾವುದೇ ಸಮಸ್ಯೆಯನ್ನು ಅದರ ಆಳಕ್ಕೆ ಇಳಿದು, ಅಭ್ಯಸಿಸಿದರೆ ಆಮೂಲಾಗ್ರವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ಪಾಠ ಕಲಿಸಿದ ಘಟನೆಗಳು ಆಡಳಿತ ಕ್ಷೇತ್ರದ ಹೊಸಬರಿಗೆ ಸ್ಫೂರ್ತಿದಾಯಕ ಹಾಗೂ ಮಾರ್ಗದರ್ಶಕ ಬರಹಗಳಾಗಿವೆ.

ಸುಲಲಿತ, ಸರಳ ಮತ್ತು ಆಪ್ತ ಶೈಲಿಯಲ್ಲಿ ಮೂಡಿಬಂದಿರುವ ಹಾದಿಗಲ್ಲು ಕೃತಿಯು, ಸಾಮಾನ್ಯ ವ್ಯಕ್ತಿಯೊಬ್ಬ ಸತತ ಪರಿಶ್ರಮದ ಮೂಲಕ ಎತ್ತರದ ಸ್ಥಾನಕ್ಕೇರಿದ ಅಂಶಗಳನ್ನು ಆಸಕ್ತಿದಾಯಕವಾಗಿ ದಾಖಲಿಸಿದೆ. ಜೊತೆಗೆ ಆಡಳಿತ ಕ್ಷೇತ್ರಕ್ಕೆ ಸೇರಬಯಸುವವರಿಗೆ ಸ್ಫೂರ್ತಿಯಾಗಿ, ಈಗಾಗಲೇ ಆಡಳಿತ ರಂಗದಲ್ಲಿ ಇರುವವರಿಗೆ ಹತ್ತುಹಲವು ಆಯಾಮಗಳ ಮಾರ್ಗದರ್ಶನ ನಿಡುತ್ತದೆ. ಮಾನವೀಯತೆ, ಸ್ಪಂದನಶೀಲತೆ ಹಾಗೂ ಸಂವೇದನಾಶೀಲ ಗುಣಗಳೇ ಇಲ್ಲಿನ ಎಲ್ಲ ಬರಹಗಳ ಸ್ಥಾಯಿಭಾವವಾಗಿದೆ.

Leave a Reply

Your email address will not be published.