ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಯಶಸ್ವಿಯಾದ ವಿನೋದ್ ಪಾಟೀಲ

ಪ್ರಾಥಮಿಕ ಶಾಲೆ ಸೇರುವಾಗ ಆವರಣ ನೋಡಿ ಗಾಬರಿಯಿಂದ ಓಡಿ ಹೋದ ಹುಡುಗನನ್ನು ಎಳೆದು ತಂದು ತರಗತಿಯಲ್ಲಿ ಕೂಡಿಸಿದ್ರು. ಅಂದು ಓಡಿದ್ದ ಹುಡುಗ ವಿನೋದ್ ಪಾಟೀಲ ಸುರತ್ಕಲ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ನೂರ ಇಪ್ಪತ್ಮೂರು, ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾನೆ. ಈ ಹಿಂದೆ 402ನೇ ರ‍್ಯಾಂಕ್ ಪಡೆದು ಐ.ಆರ್.ಎಸ್.ಗೆ ಆಯ್ಕೆಯಾಗಿದ್ದ ಗಂಗಾವತಿಯ ವಿನೋದ್ ಸತತ 5ನೇ ಬಾರಿ ಪರೀಕ್ಷೆ ಎದುರಿಸಿ ಇದೀಗ ಐಎಎಸ್/ಐಪಿಎಸ್ ಗೆ ಅರ್ಹತೆ ಪಡೆದಿದ್ದಾರೆ. ಅವರ ಕಿರು ಸಂದರ್ಶನ…

ಸಂದರ್ಶನ: ಅಜಮೀರ ನಂದಾಪುರ.

ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂಬ ಪ್ರೇರಣೆ ಹೇಗೆ ಬಂತು?

ನನಗೆ ಯುಪಿಎಸ್ಸಿ ಪರೀಕ್ಷೆ ಪಾಸಾಗಬೇಕೆಂಬ ಪ್ರೇರಣೆ ನಮ್ಮ ಕುಟುಂಬದಿಂದಲೇ ಬಂದಿತು. ತಂದೆಯವರ ಒತ್ತಾಸೆಯೂ ಇದಕ್ಕೆ ಕಾರಣ. ಅವರು ಕೂಡ ಪರೀಕ್ಷೆ ಬರೆದಿದ್ದರು. ದೊಡ್ಡವನಾಗುತ್ತಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಹೆಚ್ಚು ಒಲವು ಉಂಟಾಯಿತು. ತಂದೆಯವರೆ ದೊಡ್ಡ ಪ್ರೇರೇಪಕರು.

ನಿಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕುರಿತು ತಿಳಿಸಿ?

ಒಂದರಿಂದ ಹತ್ತನೇ ತರಗತಿಯವರೆಗೆ ಗಂಗಾವತಿಯಲ್ಲಿ ವ್ಯಾಸಂಗ ಮುಗಿಸಿದೆ. ಅಲ್ಲಿ ಅನೇಕ ಗುರುಗಳು ನನಗೆ ಮಾರ್ಗದರ್ಶನ ಮಾಡಿದ್ದಾರೆ. ಅವರನ್ನು ನಾನು ಈ ಸಂದರ್ಭದಲ್ಲಿ ನೆನೆಯಲೇಬೇಕು. ನಮ್ಮ ತಾಯಿಯವರು ನಿತ್ಯ ಶಾಲೆಗೆ ಕರೆದುಕೊಂಡು ಬರುತ್ತಿದ್ದರು. ನನ್ನ ಶೈಕ್ಷಣಿಕ ಪ್ರಗತಿಗೆ ಅವರದು ದೊಡ್ಡ ಕೊಡುಗೆ ಇದೆ.

ಯುಪಿಎಸ್ಸಿ ಪರೀಕ್ಷೆ ತಯಾರಿ ಹೇಗಿತ್ತು?

ಮೊದಲು ಮಾರ್ಗದರ್ಶನ ಇರಲಿಲ್ಲ. ಕೋಚಿಂಗ್‌ಗೆ ಹೋಗುವುದರ ಮೂಲಕ ಸಂಪನ್ಮೂಲ ತಯಾರಿಸಿಕೊಂಡಿದ್ದೆ, ಹಿರಿಯ ಸ್ನೇಹಿತನ ಗೈಡನ್ಸ್ ಪಡೆದಿದ್ದೆ. ನಿರಂತರ ಅಧ್ಯಯನದಲ್ಲಿ ತೊಡಗಿದ್ದೆ. ಮೊದಲು ಹತ್ತು ಹನ್ನೆರಡು ಗಂಟೆ ಅಭ್ಯಾಸ ಮಾಡುತ್ತಿದ್ದೆ.

ಪ್ರಿಲಿಮಿನರಿ ಮತ್ತು ಮೇನ್ಸ್ನಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಂಡಿದ್ದೀರಿ?

ಪ್ರಿಲಿಮಿನರಿಯಲ್ಲಿ ಒಂದೇ ವಿಷಯದಲ್ಲಿ ಸಾಮಾನ್ಯ ಅಧ್ಯಯನ ಮತ್ತು ಆಪ್ಟಿಟ್ಯೂಡ್ ಎಂಬ ಎರಡು ಪೇಪರುಗಳು ಇರುತ್ತವೆ. ಮೆನ್ಸ್ ನಲ್ಲಿ ಕನ್ನಡ ಸಾಹಿತ್ಯ, ಮಾನವಶಾಸ್ತ್ರ, ಇತಿಹಾಸದ ವಿಷಯಗಳಿರುತ್ತವೆ. ಅದರಲ್ಲಿ ಮಾನವ ಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದೆ.

ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿ ಪರೀಕ್ಷೆ ಕಷ್ಟವಾಗಲಿಲ್ಲವೇ?

ಇಲ್ಲ, ನನಗೆ ಕಷ್ಟವಾಗಲಿಲ್ಲ. ಹತ್ತನೇ ತರಗತಿ ಓದುವಾಗ ಇಂಗ್ಲಿಷ್ ಭಾಷೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದೆ. ಆದರೂ ಕನ್ನಡದಲ್ಲಿ ಮಟಿರಿಯಲ್ ಹೊಂದಿಸಿಕೊಳ್ಳುವುದು ತುಂಬ ಕಷ್ಟವೆನಿಸುತ್ತದೆ. ಇಂಗ್ಲಿಷಿನಲ್ಲಿ ಸಿಕ್ಕಷ್ಟು ಸಂಪನ್ಮೂಲಗಳು ಕನ್ನಡದಲ್ಲಿ ದೊರೆಯುವುದಿಲ್ಲ.

ಪರೀಕ್ಷೆಯ ತಯಾರಿಗೆ ಬಳಸಿಕೊಂಡ ಪುಸ್ತಕಗಳು ಯಾವುವು?

ಎನ್.ಸಿ.ಇ.ಆರ್.ಟಿ. ಪುಸ್ತಕಗಳು, ದಿನಪತ್ರಿಕೆಗಳು, ಅಂತರ್ಜಾಲದಲ್ಲಿ ದೊರಕುವ ಸಾಮಗ್ರಿ, ಹತ್ತು ವರ್ಷಗಳ ಪ್ರಶ್ನೆಪತ್ರಿಕೆ ಸಂಗ್ರಹ ನೆರವಾದವು. ಓದಿದ್ದನ್ನು ಬರೆಯುವ ರೂಢಿಯನ್ನು ಮಾಡಿಕೊಳ್ಳಬೇಕು. ಎಷ್ಟು ಓದುತ್ತೇನೆ ಎನ್ನುವುದು ಮುಖ್ಯವಲ್ಲ; ಹೇಗೆ ಓದುತ್ತೇನೆ ಎಂಬುದು ಮುಖ್ಯ. ಇಂಟರ್ನೆಟ್ಟನ್ನು ಒಳ್ಳೆಯ ರೀತಿಯಲ್ಲಿ ಬಳಸಬೇಕು. ಸೋಷಿಯಲ್ ಮೀಡಿಯಾ ಮಿತವಾಗಿರಲಿ. ನಮ್ಮ ಮೊದಲ ಇಪ್ಪತ್ತೈದು ವರ್ಷದ ಬುನಾದಿ ಮುಂದಿನ ಐವತ್ತು ವರ್ಷಗಳನ್ನು ನಿರ್ಧರಿಸುತ್ತದೆ.

ಈಗ ಮುಂದಿನ ಆಯ್ಕೆ ಯಾವುದು?

ಐಪಿಎಸ್ ದೊರೆಯುವ ಸಾಧ್ಯತೆ ಇದೆ. ಐಎಎಸ್ ಆದರೂ ಸರಿಯೇ. ಇವೆರಡರಲ್ಲಿ ಯಾವುದು ಸಿಕ್ಕರೂ ಸಂತೋಷದಿಂದ ಸ್ವೀಕರಿಸುವೆ.

ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ನಿಮ್ಮ ಸಲಹೆ…?

ನಾವು ಯಾವುದೇ ಪ್ರದೇಶದವರಾದರೂ ಆಸಕ್ತಿ ಬಹಳ ಮುಖ್ಯ. ಸತತ ಅಧ್ಯಯನ ಮಾಡಬೇಕು. ಹಿಂದುಳಿದ ಹಣೆಪಟ್ಟಿಯನ್ನು ತೆಗೆದು ಹಾಕಬೇಕು. ನಾವೊಂದು ಶೈಕ್ಷಣಿಕ ಕ್ರಾಂತಿ ಮಾಡಬೇಕು. ಶಾಲೆಯಲ್ಲಿ ನಾವು ಚೆನ್ನಾಗಿ ಫೋಕಸ್ ಮಾಡಬೇಕು, ಸತತ ಪರಿಶ್ರಮ ಪಡಬೇಕು. ಓದುವುದರ ಜೊತೆಗೆ ಒಳ್ಳೆಯ ಹವ್ಯಾಸ, ಪಠ್ಯೇತರ ಚಟುವಟಿಕೆ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ದೊಡ್ಡ ಕನಸು ಕಾಣಬೇಕು, ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕು. ಆದರೆ ಹಗಲುಗನಸು ಬೇಡವೇಬೇಡ.

 

One Response to " ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಯಶಸ್ವಿಯಾದ ವಿನೋದ್ ಪಾಟೀಲ

ಸಂದರ್ಶನ: ಅಜಮೀರ ನಂದಾಪುರ.

"

Leave a Reply

Your email address will not be published.