ಯೋಗರಾಜ್ ಭಟ್ಟರ ಸಿನಿ ಸಾಹಿತ್ಯ

ಶರೀಫ್ ಕಾಡುಮಠ

ಯೋಗರಾಜ್ ಭಟ್ ಸಾಹಿತ್ಯದ ಬಗ್ಗೆ ಅರೆಬರೆ ಗೊತ್ತಿರುವ ನಿರ್ದೇಶಕ ಎಂದು ಟೀಕಾಕಾರರು ಭಾವಿಸಿದ್ದಾರೋ ಏನೊ. ಆದರೆ ಉಡುಪಿಯ ಮಂದಾರ್ತಿ ಮೂಲದ ಭಟ್ಟರು ಬೆಳೆದದ್ದೇ ಸಾಹಿತ್ಯದ ವಾತಾವರಣದಲ್ಲಿ. ಅಪಾರ ಓದಿನ ಅನುಭವ ಹೊಂದಿರುವ ಭಟ್ಟರ ಹಾಡುಗಳನ್ನು ಗಮನಿಸಿದರೆ ಅಲ್ಲಿ ಜಿ.ಪಿ ರಾಜರತ್ನಂ ಅವರ ಸಾಹಿತ್ಯದ, .ರಾ. ಬೇಂದ್ರೆ ಅವರ ಪದ್ಯಗಳ ಪ್ರಭಾವವನ್ನು ಕಾಣಬಹುದು.

ಯೋಗರಾಜ್ ಭಟ್ ಹೆಸರು ಕೇಳಿದಾಕ್ಷಣ ಮುಂಗಾರು ಮಳೆ, ಗೋಲ್ಡನ್ ಸ್ಟಾರ್ ಗಣೇಶ್, ಎಂದಿಗಿಂತ ಭಿನ್ನವಾಗಿ ಕಂಡ ಜೋಗ ಜಲಪಾತ, ಅನಿಸುತಿದೆ ಯಾಕೋ ಇಂದು ಎಂಬ ಜಯಂತ್ ಕಾಯ್ಕಿಣಿ ಅವರ ಹಾಡು, ಸೋನು ನಿಗಂ ಅವರ ಮಧುರವಾದ ಧ್ವನಿ, ಮನೋಮೂರ್ತಿ ಅವರ ಮನಮುಟ್ಟುವ ಸಂಗೀತಹೀಗೆ ಒಂದು ಸಿನಿಮಾದ ಸಂಪೂರ್ಣ ಚಿತ್ರಣವೇ ಕಣ್ಣ ಮುಂದೆ ಬರುತ್ತದೆ. ಭಟ್ಟರು ಇನ್ನು ಎಷ್ಟೇ ಚಿತ್ರಗಳನ್ನು ನಿರ್ದೇಶಿಸಲಿ, ಆದರೆ ಜನರು ಅವರನ್ನು ಮುಂಗಾರು ಮಳೆ ಭಟ್ರು ಅಂತಾನೇ ಕರೀತಾರೆ. ವಿಪರ್ಯಾಸ ಅಂದ್ರೆ ಅದೆಷ್ಟೇ ಉತ್ತಮ ಕಥಾಹಂದರ ಹೊಂದಿದ್ರೂ ಮುಂಗಾರು ಮಳೆಯಷ್ಟು ಸೂಪರ್ ಹಿಟ್ ಆಗಿ ಯೋಗರಾಜ್ ಭಟ್ಟರ ಯಾವ ಸಿನಿಮಾ ಕೂಡಾ ಕಾಣಲೇ ಇಲ್ಲ, ಅಥವಾ ಪ್ರೇಕ್ಷಕ ಅದನ್ನು ಮಟ್ಟಕ್ಕೆ ಸ್ವೀಕರಿಸಿಲ್ಲವೇನೊ. ನಿರ್ದೇಶಕರಾಗಿ ಭಟ್ಟರ ಸಿನಿಜರ್ನಿಯನ್ನು ಆಗಾಗ ಮಾಧ್ಯಮಗಳು ಮೆಲುಕು ಹಾಕುತ್ತಲೇ ಇರುತ್ತವೆ. ಆದರೆ ಯೋಗರಾಜ್ ಭಟ್ ಎಂಬ ವಿಕಟ ಕವಿ, ಭಿನ್ನ ಶೈಲಿಯ ಗೀತರಚನೆಕಾರನನ್ನು ವಿಶೇಷವಾಗಿ ಗುರುತಿಸಿದ್ದು ಕಡಿಮೆ.

ಭಟ್ಟರು ಸಿನಿಮಾ ನಿರ್ದೇಶನ, ಕಥೆ, ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದಷ್ಟೇ ಸಿನಿಮಾ ಹಾಡುಗಳನ್ನೂ ರಚಿಸಿದ್ದಾರೆ. ಭಟ್ಟರ ಹಾಡು ಇದೆ ಅಂದ್ರೆ ಸಿನಿಮಾ ಅರ್ಧಕ್ಕರ್ಧ ಗೆದ್ದ ಹಾಗೆ ಎನ್ನುವ ಮಾತು ಸ್ಯಾಂಡಲ್ ವುಡ್ ನಲ್ಲಿದೆ. ಅದರಿಂದಲೇ ಹಲವು ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಒಂದಾದರೂ ಹಾಡನ್ನು ಭಟ್ಟರ ಕೈಯಲ್ಲಿ ಬರೆಸುತ್ತಾರೆ. ನಿರ್ದೇಶಕರು ಹಾಡು ರಚಿಸುವುದು ಹೊಸತೇನಲ್ಲ. ಆದರೆ ಹಾಡು ಎಷ್ಟರ ಮಟ್ಟಿಗೆ ಗೆಲ್ಲುತ್ತದೆ ಎಂಬುದು ಮುಖ್ಯ. ನಿಟ್ಟಿನಲ್ಲಿ ನೋಡಿದರೆ, ಯೋಗರಾಜ್ ಭಟ್ಟರು ಒಬ್ಬ ಯಶಸ್ವಿ ಗೀತರಚನೆಕಾರ ಎಂದು ಹೇಳಬಹುದು. ಅದಕ್ಕೆ ಸಾಕ್ಷಿ ಎನ್ನುವಂತೆ ಒಂದು ಅವಧಿಯಲ್ಲಿ ಸ್ಯಾಂಡಲ್ ವುಡ್ ಬಹುಬೇಡಿಕೆಯ ಗೀತರಚನೆಕಾರರಾಗಿದ್ದರು ಯೋಗರಾಜ್ ಭಟ್. ನಂತರದ ಸ್ಥಾನದಲ್ಲಿ ಕಾಯ್ಕಿಣಿ ಇದ್ದದ್ದು.

ಕನ್ನಡ ಚಿತ್ರಗಳಿಗೆ ತಮ್ಮ ಸುಂದರ ಸಾಹಿತ್ಯದ ಮೂಲಕ ಹೊಸತನವನ್ನು ತಂದು ಕೊಟ್ಟವರು ಸಾಹಿತಿ ಜಯಂತ್ ಕಾಯ್ಕಿಣಿ. ಮುಂಗಾರು ಮಳೆಯಿಂದ ಹಿಡಿದು ಭಟ್ಟರ ಹಲವಾರು ಸಿನಿಮಾಗಳಿಗೆ ಕಾಯ್ಕಿಣಿ ಹಾಡು ರಚಿಸಿದ್ದಾರೆ. ಅಂತಹ ಕಾಯ್ಕಿಣಿ ಕೂಡಾ ಬೆರಗುಗೊಳ್ಳುವಂತಹ ಹಾಡನ್ನು ಯೋಗರಾಜ್ ಭಟ್ ರಚಿಸಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ.

ಸೌಂದರ್ಯ ಸಮರ

ಸೋತವನೆ ಅಮರ

ಕಳೆದುಕೊಳ್ಳಲು ಬೇರೆ ಏನೂ ಇಲ್ಲ ಇಲ್ಲಿ

ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ

ಕಳೆದು ಪಡೆದುಕೊಳ್ಳಿ

ಭಟ್ಟರು ಕಡ್ಡಿಪುಡಿ ಚಿತ್ರಕ್ಕೆ ಬರೆದ ಹಾಡಿನ ಮೊದಲ ಸಾಲುಗಳಿವು. ಸೂಪರ್ ಹಿಟ್ ಎನಿಸಿಕೊಂಡ ಹಾಡಿನ ಬಗ್ಗೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಹಾಡನ್ನು ಮೊದಲ ಬಾರಿಗೆ ಕೇಳಿಸಿಕೊಂಡ ಬಹುತೇಕರು ಭಾವಿಸಿದ್ದು ಇದು ಕಾಯ್ಕಿಣಿ ರಚನೆಯ ಹಾಡು ಅಂತ. ಯೋಗರಾಜ್ ಭಟ್ ಬರೆದ ಇಂತಹ ಹಲವು ಗೀತೆಗಳ ಕ್ರೆಡಿಟ್ ಕಾಯ್ಕಿಣಿ ಅವರಿಗೆ ಸಿಕ್ಕಿದೆ. ಭಟ್ಟರ ಹಾಡು ಎಂದರೆ ಟಪ್ಪಾಂಗುಚ್ಚಿ ಹಾಡುಗಳೇ ಎಂದುಕೊಂಡ ಹಲವರಿದ್ದಾರೆ. ಅಲ್ಲಾಡ್ಸು ಅಲ್ಲಾಡ್ಸು, ಖಾಲಿ ಕ್ವಾರ್ಟರ್ ಬಾಟ್ಲಿ ಹಂಗೆ ಲೈಫು ಎಂಬಂತಹ ಹುಚ್ಚೆಬ್ಬಿಸುವ ಹಾಡುಗಳನ್ನು ಕೇಳಿಸಿಕೊಂಡವರಿಗೆ ಭಟ್ಟರ ಸಾಹಿತ್ಯದ ಪರಿಚಯ ಅಷ್ಟೇ. ಭಟ್ಟರ ಸಾಹಿತ್ಯಕ್ಕೆ ಹೀಗೊಂದು ಮೋಹಕ ಮುಖವಿರುವುದು ಸ್ಯಾಂಡಲ್ ವುಡ್ನಲ್ಲಿ ಹೆಚ್ಚು ಸುದ್ದಿಯಾಗಿಲ್ಲ.

ಎರಡು ಬಗೆಯ ಸಾಹಿತ್ಯ ರಚನೆಯೇ ಯೋಗರಾಜ್ ಭಟ್ ವೈಶಿಷ್ಟ್ಯ. ಮುಂಗಾರು ಮಳೆ ಚಿತ್ರವನ್ನೇ ತಗೊಂಡರೆ ಅದರಲ್ಲಿ `ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆಎಂಬ ಹಾಡನ್ನು ರಚಿಸಿದ್ದು ಯೋಗರಾಜ್ ಭಟ್. ಆದರೆ ಕಾಯ್ಕಿಣಿ ಅವರ `ಅನಿಸುತಿದೆ ಯಾಕೋ ಇಂದುಎನ್ನುವ ಹಾಡನ್ನು ಎಲ್ಲರೂ ಇಷ್ಟಪಟ್ಟರು. ಆದರೆ ನನಗೆ ಅತ್ಯಂತ ಇಷ್ಟವಾದದ್ದು ಭಟ್ಟರ ರಚನೆಯ ಹಾಡು. ಅದರ ಒಂದು ಸಾಲು

ಯಾವ ಹನಿಗಳಿಂದ,

ಯಾವ ನೆಲವು ಹಸಿರಾಗುವುದೋ

ಯಾರ ಸ್ಪರ್ಶದಿಂದ,

ಯಾರ ಮನವು ಹಸಿಯಾಗುವುದೋ

ಯಾರ ಉಸಿರಲ್ಯಾರ ಹೆಸರೋ, ಯಾರು ಬರೆದರೋ

ಯಾವ ಪ್ರೀತಿ ಹೂವು,

ಯಾರ ಹೃದಯದಲ್ಲರಳುವುದೋ ಯಾರ ಪ್ರೇಮ ಪೂಜೆಗೆ ಮುಡಿಪೆÇ,

ಯಾರು ಬಲ್ಲರೋ

ಪ್ರೀತಿ, ಪ್ರೇಮವನ್ನು ಪರಿಸರದ ಜೊತೆ ಹೋಲಿಸಿ ರಚಿಸಿದ ಹಾಡಿನ ಸಾಹಿತ್ಯ ಆರಂಭದಿಂದ ಕೊನೆವರೆಗೆ ಸುಂದರವಾಗಿಯೇ ಇದೆ. ಅಲ್ಲದೆ ಮುಂಗಾರು ಮಳೆ ಎನ್ನುವ ಚಿತ್ರ ಶೀರ್ಷಿಕೆಗೆ, ಕಥಾವಸ್ತುವಿಗೆ ಒಟ್ಟು ಚಿತ್ರಕ್ಕೆ ಸೂಕ್ತವಾದ ಹಾಡಿದು.

`ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲಬಾರದೇ….’ ಎಂಬ ಜಾಕಿ ಚಿತ್ರದ ಹಾಡು, ಗೂಗ್ಲಿ ಚಿತ್ರದ `ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ‘, ಡ್ರಾಮಾ ಚಿತ್ರದ `ಚಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..’, ಬೆಲ್ ಬಾಟಮ್ ಚಿತ್ರದ `ಏತಕೇಬೊಗಸೆ ತುಂಬ ಆಸೆ ನೀಡುವೆ…’, ಪಂಚತಂತ್ರ ಚಿತ್ರದ `ಶೃಂಗಾರದ ಹೊಂಗೆಮರ ಹೂಬಿಟ್ಟಿದೆ/ ನಾಚಿಕೆಯು ನಮ್ಮ ಜೊತೆ ಟೂ ಬಿಟ್ಟಿದೆ‘, ಮುಗುಳು ನಗೆ ಚಿತ್ರದ, `ನಿನ್ನ ಸ್ನೇಹದಿಂದ ಎಲ್ಲ ಅಂದಚಂದ‘, ರಾಟೆ ಚಿತ್ರದ `ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳಾ ಕಡೆ‘, ಏಪ್ರಿಲ್ ಹಿಮಬಿಂದು ಚಿತ್ರದ `ಇದುವರೆಗೆ ಬದುಕಿದ್ದೆಲ್ಲ ಬದಕು ಅಂತನ್ನಿಸ್ತಿಲ್ಲ‘, ಪರಮಾತ್ಮ ಚಿತ್ರದ `ಹೆಸರು ಪೂರ್ತಿ ಹೇಳದೆ/ ತುಟಿಯ ಕಚ್ಚಿಕೊಳ್ಳಲೇ…’ ಹೀಗೆ ಇನ್ನೂ ಹಲವಾರು ಮಧುರವಾದ ಹಾಡುಗಳನ್ನು ಭಟ್ಟರು ರಚಿಸಿದ್ದಾರೆ.

ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು

ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ

ಮುಂತಿರುಗಿ ಓಡಿದರೆ ಮುಂದೊಂದು ತುದಿ

ಅಂಗಾಲಿಗೆ ಭೂಮಿಯನ್ನೇ ಕಟ್ಟಿ ಕೊಂಡ ಕಾಲು

ಎಲ್ಲಿ ಹೋದರೇನು ಎಲ್ಲಿ ಬಂದರೇನು

ಎಲ್ಲಿ ನಿಂತರೇನು ಎಲ್ಲಿ ಕುಂತರೇನು (ಕೆಂಡಸಂಪಿಗೆ)

ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

ಯಾರಿರದ ವೇಳೆಯಲ್ಲಿ

ನೀ ಏಕೆ ಜೊತೆಗಿರುವೆ..

ತುಸು ಬಿಡಿಸಿ ಹೇಳು ನನಗೆ,

ನನ್ನ ತುಟಿಯೆ ಬೇಕೇ ನಿನಗೆ,

ನನ್ನೆಲ್ಲ ನೋವಿಗೆ ನಗುವೇ

ನೀನೇಕೆ ಹೀಗೆ..? (ಮುಗುಳು ನಗೆ)

ಭಾಷೆಯನ್ನು ಚೆನ್ನಾಗಿ ದುಡಿಸುವ ಭಟ್ಟರು, ಯಾವ ಹಾಡಿಗೆ, ಯಾವ ಸನ್ನಿವೇಶಕ್ಕೆ ಯಾವ ಭಾಷೆ ಸೂಕ್ತ ಎಂಬುದನ್ನು ನಿರ್ಧರಿಸಿ ಹಾಡು ರಚಿಸುತ್ತಾರೇನೋ ಎಂಬಂತೆ, ಸೂಕ್ತವಾದ ಶೈಲಿಯನ್ನೇ ಬಳಸುತ್ತಾರೆ. ತೆಲುಗಿನಲ್ಲಿ ಜನಪ್ರಿಯವಾದ ಗಾಯಕಿ ಮಂಗ್ಲಿ ಹಾಡಿದ `ಕಣ್ಣೇ ಅದಿರಿಂಧಿಹಾಡಿನ ಮೂಲ ಕನ್ನಡ ಹಾಡನ್ನು ರಚಿಸಿದ್ದು ಯೋಗರಾಜ್ ಭಟ್, ಹಾಡಿದ್ದು ಶ್ರೇಯಾ ಘೋಷಾಲ್.

ಕಣ್ಣು ಹೊಡಿಯಾಕ

ಈಗ ಕಲತಾನಿ

ಏನ ಹೇಳಲಿ ಮಗನ

ನಿನ್ನ ನೋಡಿ ಸುಮ್ನ್ ಹೆಂಗಿರ್ಲಿ (ರಾಬರ್ಟ್)

ಇಂತಹ ಬಹಳಷ್ಟು ಹಾಡುಗಳು ಭಟ್ಟರ ಲಿಸ್ಟ್ ನಲ್ಲಿದೆ. ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಇಂತಹ ಹಾಡುಗಳು ಯೋಗರಾಜ್ ಭಟ್ಗೆ ಸಾಕಷ್ಟು ಹೆಸರು ತಂದುಕೊಟ್ಟಿವೆ. ಹಿಂದೆ ಇಂತಹ ಟಪ್ಪಾಂಗುಚ್ಚಿ ಹಾಡುಗಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಅಲ್ಲಿ ಸಾಹಿತ್ಯವನ್ನು ಯಾರೂ ಗಮನಿಸುತ್ತಿರಲಿಲ್ಲ. ಗಮನಿಸುವಂತಹ ಸಾಹಿತ್ಯವೂ ಅಂತಹ ಹಾಡುಗಳಲ್ಲಿರಲಿಲ್ಲ. ಬದಲಾಗಿ ಬಹುಪಾಲು ಕಿವಿಗಡಚಿಕ್ಕುವ, ಕರ್ಕಶವೆನಿಸುವ ಸಂಗೀತವೇ ಹೆಚ್ಚಿದ್ದವು. ಅದು ಹೊತ್ತಿನ ಟ್ರೆಂಡ್ ಎಂದುಕೊಂಡು ಜನ ಅರಗಿಸಿಕೊಳ್ಳುತ್ತಿದ್ದರು. ಆದರೆ ಭಟ್ಟರು ಯಾವಾಗ ಇಂತಹ ಹಾಡುಗಳನ್ನು ಬರೆಯಲು ಶುರು ಮಾಡಿದರೋ ಅಂದಿನಿಂದ ಶೈಲಿಯನ್ನು ಮೆಚ್ಚುವವರ ಸಂಖ್ಯೆ ಇಮ್ಮಡಿಯಾಯಿತು. ಭಟ್ಟರೇನೂ ಅರ್ಥವಿಲ್ಲದ, ತಲೆದಿಂಬಿನೊಳಗೆ ಇದ್ದಬದ್ದ ಬಟ್ಟೆಗಳನ್ನು ತುರುಕಿದಂತೆ, ಸಾಲುಗಳ ನಡುವೆ ಅನಗತ್ಯ ಪದಗಳನ್ನು ತುಂಬಿಸಿ ಮಾಡಿದ ಹಾಡುಗಳಲ್ಲ ಅವು. ಭಟ್ಟರ ನಿಧಾನಗತಿಯಲ್ಲಿ ಸಾಗುವ ಮಧುರಗೀತೆಗಳು ಹೇಗೆ ಅರ್ಥವತ್ತಾಗಿವೆಯೋ, ಇಂತಹ ವೇಗದ ಹಾಡುಗಳೂ ಅರ್ಥವನ್ನು ಒಳಗೊಂಡಿವೆ.

`ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದು ರೀ…’, `ಖಾಲಿ ಕ್ವಾರ್ಟ್ರು ಬಾಟ್ಲಿ ಹಂಗೆ ಲೈಫು, ಆಚೆಗ್ ಹಾಕವ್ಳೆ ವೈಫು‘, `ಜೀವ್ನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು‘, `ಬೊಂಬೆ ಆಡ್ಸೋನು, ಮ್ಯಾಲೆ ಕುಂತವ್ನು‘, `ಏನು ಮಾಡೋದು ಒಂಟಿ ರೋಡಲ್ಲಿ ಹೂವೊಂದು ಸಿಕ್ತು‘, `ಓಪನು ಹೇರು ಬಿಟ್ಕೊಂಡು ಕೂದಲು ಹಾರಾಡಸ್ಕೊಂಡು ಏರ್ಯಾದೊಳ್ಗೆ ಓಡಾಡಬ್ಯಾಡ್ವೇ…’, `ಯೌವನ ಒಂದು ಟಾಂಗಾ ಗಾಡಿ, ಕುದುರೆ ಕಣ್ಣು ಕಾಣಲಿ ಬಿಡ್ಲಿ ಹೊಡಿ ಒಂಬತ್ತ್/ ಮಂಗನಿಂದ ಮಾನವನಾದ ಮಂಗನ ಬಾಲ ಚೆನ್ನಾಗಿರ್ಲಿ ಹೊಡಿ ಒಂಬತ್ತ್‘, `ತುಂಬಾ ನೋಡ್ಬೆಡಿ ಲವ್ವು ಆಯ್ತದೆ, ಲವ್ವು ಮಾಡ್ಬೆಡಿ ನೋವು ಆಯ್ತದೆ‘, `ಸೀರೆಲಿ ಹುಡುಗೀರ ನೋಡಲೆಬಾರದು ನಿಲ್ಲಲ್ಲ ಟೆಂಪ್ರೇಚರು/ ಸ್ಕೂಲಲಿ ಹೇಳಿ ಕೊಡಬಹುದಿತ್ತು, ಹೇಳಿಲ್ಲ ನಮ್ ಟೀಚರು‘, `ವಿಷಯ ಏನಪ್ಪಾ ಅಂತಂದ್ರೆ/ ಬೆಡ್ ರೂಮಲ್ಲಿ ಹೆಗ್ಗಣ ಬಂದ್ರೆ/ ಇಂಟರ್ನೆಟ್ಟಲಿ ದೊಣ್ಣೆ ಹುಡ್ಕಿ/ ಲೈಫು ಇಷ್ಟೇನೆ‘, `ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪ್ವಾಸ‘, `ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ‘, `ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ ಇಲ್ಲ ಕಾಲರ್ರು ಮಾತ್ರ ಮ್ಯಾಲೇ ನಂದು‘, `ಹಳೆ ಹುಬ್ಳಿ ಬಸ್ಟ್ಯಾಂಡ್ ನ್ಯಾಗ ನಿಂತಿದ್ದೆ‘, `ಹೇಳು ಶಿವ ಹೇಳು ಶಿವ ಹೇಳು ಶಿವ ಯಾಕಿಂಗಾದೆ ರೀತಿ ಭಟ್ಟರು ಯದ್ವಾತದ್ವಾ ಗೀಚಿದಂತೆ ಕಂಡರೂ ಇವುಗಳಲ್ಲಿ ಹಲವು ಹಾಡುಗಳು ಬದುಕನ್ನು ವಿಡಂಬಿಸುವ, ಜೀವನ ಶೈಲಿಯ ಕುರಿತು ವ್ಯಂಗ್ಯವಾಡುವ ರೀತಿ ಇವೆ. ಕೆಲವು ಹಾಡುಗಳು ಜೀವನದ ತತ್ವಗಳನ್ನೂ ಹೇಳುತ್ತವೆ. ಡ್ರಾಮಾ ಚಿತ್ರದ `ಬೊಂಬೆ ಆಡ್ಸೋನು ಮ್ಯಾಲೆ ಕುಂತೋನುಎಂಬ ಹಾಡಿನ ಸಾಹಿತ್ಯಕ್ಕಾಗಿ ಭಟ್ಟರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅದರಲ್ಲಿ 2012 ಫಿಲಂಫೇರ್ ಪ್ರಶಸ್ತಿಯೂ ಸೇರಿಕೊಂಡಿದೆ ಎಂಬುದು ಗಮನಾರ್ಹ.

ಪ್ರಶಸ್ತಿಗಳಷ್ಟೇ ಅಲ್ಲ ಭಟ್ಟರ ಇಂತಹ ಹಾಡಿಗೆ ಹಿರಿಯರಿಂದ, ಹಿರಿಯ ಸಾಹಿತಿಗಳು ಕಿಡಿಕಾರಿದ್ದೂ ಉಂಟು. ಕನ್ನಡ ಸಾಹಿತ್ಯವನ್ನು ಭಟ್ಟರು ಹಾಳು ಮಾಡುತ್ತಿದ್ದಾರೆ, ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬಿತ್ಯಾದಿ ಆರೋಪಗಳು ಭಟ್ಟರ ಮೇಲೆ, ಭಟ್ಟರ ಹಾಡಿನ ಮೇಲೆ ಬಿದ್ದವು. ಆದರೆ ಇದೇ ಸಾಹಿತ್ಯ, ಬೇರೆ ಯಾವುದೂ ಸಾಹಿತ್ಯ ಅಲ್ಲ ಎಂಬ ಯಾವ ಲಿಖಿತ ನಿಯಮ ಕೂಡಾ ಸಾಹಿತ್ಯ ಲೋಕದಲ್ಲಿ ಇಲ್ಲ. ಕಾಲಕ್ಕೆ ತಕ್ಕಂತೆ ಸಾಹಿತ್ಯದ ಶೈಲಿ ಬದಲಾಗಬಾರದು ಎಂದೇನೂ ಇಲ್ಲವಲ್ಲ. ಇದಮಿತ್ತಂ ಎಂಬುದಿಲ್ಲ. ಹಾಗಿರುವಾಗ ತೀರಾ ಆಧುನಿಕ ಶೈಲಿಯ ಭಟ್ಟರ ಸಾಹಿತ್ಯವನ್ನು ನಿರಾಕರಿಸುವ ಅಗತ್ಯವೇನಿಲ್ಲ. ಹಳೆ ಕಾಲಘಟ್ಟದಿಂದ ಹೊಸಕಾಲದವರೆಗೆ ಬದುಕು ಬಹಳಷ್ಟು ಬದಲಾಗಿದೆ. ತಂತ್ರಜ್ಞಾನ ಬದಲಾಗಿದೆ. ಉಡುಗೆ ತೊಡುಗೆ ಬದಲಾಗಿದೆ. ಹಳೆಕಾಲದ ಚಪ್ಪಲಿಯನ್ನು ಈಗಲೂ ಧರಿಸುತ್ತೇನೆಂದು ಅಂಗಡಿಯೆಲ್ಲಾ ಹುಡುಕಿ ಧರಿಸುತ್ತಿಲ್ಲವಲ್ಲ ಹಿರಿಯರು. ಭಟ್ಟರು ಬರೆದ ಹೊಸ ಹಾಡುಗಳಿಂದ ಸಾಹಿತ್ಯ ನಶಿಸುವುದಕ್ಕಿಂತ ಅದೇ ಹಳೇ ಶೈಲಿಯನ್ನೇ ಹೊಸ ಬರಹಗಾರರು ಬಳಸುತ್ತ ಕೂತರೆ ಸಾಹಿತ್ಯ ಸಾಯಬಹುದೇನೊ.

ಪ್ರತಿಭಾ ನಂದಕುಮಾರ್ ಅವರು ಒಮ್ಮೆ ಯೋಗರಾಜ್ ಭಟ್ಟರನ್ನು ಕವಿಗೋಷ್ಠಿಗೆ ಅತಿಥಿಯಾಗಿ ಕರೆದದ್ದಕ್ಕೆ `ಅವರು ಸಿನಿಮಾ ನಿರ್ದೇಶಕ, ಸಿನಿಮಾ ಹಾಡು ಬರೆಯುವವರು. ಅವರನ್ನು ಕವಿಗೋಷ್ಠಿಗೆ ಅತಿಥಿಯಾಗಿ ಕರೆದಿದ್ದು ಸರಿಯೇಎಂದು ಹಲವರು ಟೀಕಿಸಿದರಂತೆ. ಯೋಗರಾಜ್ ಭಟ್ ಮಾತ್ರ ಬರೆಯಬಹುದಾದ ಬಲುಸುಂದರ ಸಾಹಿತ್ಯವನ್ನು ಮುಂದಿಟ್ಟುಕೊಂಡು, ಅವರನ್ನು ಕವಿ ಅಲ್ಲ ಎಂದು ಹೇಗೆ ತಾನೆ ಹೇಳಲು ಸಾಧ್ಯ.

ಯೋಗರಾಜ್ ಭಟ್ ಸಾಹಿತ್ಯದ ಬಗ್ಗೆ ಅರೆಬರೆ ಗೊತ್ತಿರುವ ನಿರ್ದೇಶಕ ಎಂದು ಟೀಕಾಕಾರರು ಭಾವಿಸಿದ್ದಾರೋ ಏನೊ. ಆದರೆ ಉಡುಪಿಯ ಮಂದಾರ್ತಿ ಮೂಲದ ಭಟ್ಟರು ಬೆಳೆದದ್ದೇ ಸಾಹಿತ್ಯದ ವಾತಾವರಣದಲ್ಲಿ. ಅಪಾರ ಓದಿನ ಅನುಭವ ಹೊಂದಿರುವ ಭಟ್ಟರ ಹಾಡುಗಳನ್ನು ಗಮನಿಸಿದರೆ ಅಲ್ಲಿ ಜಿ.ಪಿ ರಾಜರತ್ನಂ ಅವರ ಸಾಹಿತ್ಯದ, .ರಾ. ಬೇಂದ್ರೆ ಅವರ ಪದ್ಯಗಳ ಪ್ರಭಾವವನ್ನು ಕಾಣಬಹುದು. ಬೇಂದ್ರೆ ಯೋಗರಾಜ್ ಭಟ್ಟರ ನೆಚ್ಚಿನ ಕವಿ. ಬೇಂದ್ರೆ ಕವಿತೆಯನ್ನು ಭಟ್ಟರು ವಾಚಿಸಿದ ವಿಡಿಯೊಗಳನ್ನು ಯೂಟ್ಯೂಬ್ನಲ್ಲಿ ಕಾಣಬಹುದು. ಅಂದಹಾಗೆ ಇಲ್ಲೊಂದು ಸಾಮ್ಯತೆಯೂ ಇದೆ. ಬೇಂದ್ರೆ ಪದ್ಯಗಳಿಗೆ ಮನಸ್ಸು ನರ್ತಿಸುತ್ತದೆ. ಭಟ್ಟರ ಹಾಡುಗಳಿಗೂ ಹಾಗೆಯೇ. ಮನಸ್ಸು, ಕಾಲು ನಿಲ್ಲುವುದಿಲ್ಲ.

ಭಟ್ಟರ ಮಾತು ಕೂಡಾ ಅಷ್ಟೇ ಸ್ಪಷ್ಟ. ಕೆಲವು ನಿರ್ದಿಷ್ಟ ಕನ್ನಡ ಪದಗಳನ್ನು ಅವರು ಬಹಳ ಸ್ಪಷ್ಟವಾಗಿ ಸರಾಗವಾಗಿ ಉಚ್ಚರಿಸಬಲ್ಲರು. ಭಾಷೆಯ ಮೇಲಿನ ಪ್ರೀತಿಯ ಸುತ್ತಲೇ ಯೋಗರಾಜ್ ಭಟ್ಟರ ಮನಸ್ಸು ಗಿರಕಿ ಹೊಡೆಯುತ್ತಿರುವುದನ್ನು ಇಲ್ಲಿ ಗಮನಿಸಬಹುದು.

Leave a Reply

Your email address will not be published.