ರಂಗುರಂಗಾದ ಗುಂಗುಗಳು

ನಮ್ಮ ದೇಶದಲ್ಲಿ ಫೋಷಕರಿಗಾಗಲಿ, ಶಿಕ್ಷಕರಿಗಾಗಲಿ ಮನೋವೈಜ್ಞಾನಿಕವಾಗಿ ಮಕ್ಕಳನ್ನು ಅರಿಯುವ ತರಬೇತಿಯೇ ಅತಿ ವಿರಳವಾಗಿದೆ. ಅಸಹಾಯಕರೂ, ಪರಾವಲಂಬಿಗಳೂ ಮತ್ತು ಮುಗ್ಧರೂ ಆಗಿರುವ ಮಕ್ಕಳಿಗೆ ತಾವೇ ಎಲ್ಲವನ್ನೂ, ಜ್ಞಾನ, ದೃಷ್ಟಿ, ದಾರಿ, ಗುರಿಯನ್ನು ನೀಡುವವರಾಗಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ

ಬಾಲ್ಯವೆಂಬುದು ಸಾಮಾಜಿಕ ರಚನೆಯ ಮೂಲ ತಂತು. ಸಮಾಜದ ಹಿರಿಯರು ಮತ್ತು ಕುಟುಂಬವು ಮಕ್ಕಳನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಮಕ್ಕಳು ಸಮಾಜದ ಹಿರಿಯರನ್ನು ಮತ್ತು ಕುಟುಂಬವನ್ನು ನೋಡುವ ಬಗೆ ನಿರ್ಧರಿತವಾಗುತ್ತದೆ. ಅದೇ ಸಮಾಜದ ರಚನೆಯಲ್ಲಿ ಮುಖ್ಯ ತಂತುವಾಗಿ ಪರಿಣಮಿಸುವುದು. ಮಕ್ಕಳಲ್ಲಿ ಸಮಾಜವು ನಿಧಾನವಾಗಿ ಅರಳುತ್ತಿರುತ್ತದೆ. ಅವರು ವಯಸ್ಕರಾದಾಗ ಅದು ಫಲವಾಗಿ ಪ್ರತಿಫಲಿಸುತ್ತದೆ.

ಕುಟುಂಬದ ಮತ್ತು ಸಮಾಜದ ಹಿರಿಯರು ಮಗುವು ತಾಂತ್ರಿಕವಾಗಿ, ಇನ್ನೂ ಸರಿಯಾಗಿ ಹೇಳುವುದಾದರೆ ಲೌಕಿಕವಾಗಿ ಹೇಗಿರಬೇಕೆಂಬ ದೂರದೃಷ್ಟಿಯನ್ನು ಹೊಂದಲು ಯತ್ನಿಸುತ್ತಾರೆ. ಮಗುವು ದೊಡ್ಡದಾದ ಮೇಲೆ ಅದರ ಕಸುಬು, ಆದಾಯ, ಕುಟುಂಬ ಇತ್ಯಾದಿ ಸ್ಥೂಲ ಸ್ವರೂಪಗಳ ಕಡೆಗೆ ಗಮನ ಕೊಟ್ಟುಕೊಂಡು ಅದರ ಆತ್ಮವಾಗಿರಬಹುದಾದ ವ್ಯಕ್ತಿತ್ವ, ವರ್ತನೆ, ಮನಸ್ಥಿತಿ, ಭಾವನೆಗಳು ಇತ್ಯಾದಿಗಳು ರೂಪುಗೊಳ್ಳುವುದನ್ನು ನಿರ್ಲಕ್ಷಿಸಿಬಿಡುತ್ತಾರೆ. ಯಾವಾಗಲೂ ಸಮಾಜ ಅಥವಾ ಜನರೊಪ್ಪುವ ಅಥವಾ ಒಳ್ಳೆಯದು ಹಾಗೂ ಕೆಟ್ಟದರ ಸ್ಪಷ್ಟವಾದ ರೇಖೆಗಳ ನಡುವೆಯೇ ಹೆಣಗಾಡುವಂತೆ ಮಾಡಿಬಿಡುತ್ತಾರೆ.

ಇನ್ನೂ ವಿಪರ್ಯಾಸದ ಸಂಗತಿಯೆಂದರೆ, ಮೌಖಿಕವಾಗಿ ಅಥವಾ ವಾಚಿಕವಾಗಿ, ಗ್ರಾಂಥಿಕವಾಗಿ ಒಳ್ಳೆಯದು ಎಂಬ ವಿಷಯಗಳನ್ನು ಮುಂದಿಡುತ್ತಾ ಕೆಟ್ಟದು ಎಂದು ಯಾವುದನ್ನು ಹೇಳುತ್ತಾರೋ ಅದರ ಜೀವಂತ ಉದಾಹರಣೆಗಳನ್ನು ನೀಡುತ್ತಿರುತ್ತಾರೆ. ಹಾಗಾಗಿ ಒಳ್ಳೆಯದು ಅಂತ ಯಾವುದಿದೆಯೋ, ನೈತಿಕತೆ ಎಂಬುದು ಯಾವುದಿದೆಯೋ ಅದನ್ನೆಲ್ಲಾ ಪ್ರಶಂಸಿಸಲು ಮೀಸಲಿಟ್ಟು, ತನ್ನ ಬದುಕಿನ ಮಾರ್ಗವನ್ನು ತಾನೇ ಯಾವುದನ್ನು ಕೆಟ್ಟದು ಎನ್ನುವನೋ ಅದನ್ನು ಮಾಡುತ್ತಾ, ಸದಾ ತನ್ನನ್ನು ತಾನು ಅಪ್ರಮಾಣಿಕಗೊಳಿಸಿಕೊಳ್ಳುತ್ತ ಇರುತ್ತಾನೆ.

ಆಗಿನ ಕುಟುಂಬದ ವ್ಯವಸ್ಥೆಯಲ್ಲಿ ಬೆಳೆದವರೂ ಕಳ್ಳರಾಗಿದ್ದು, ಸುಳ್ಳರಾಗಿದ್ದರು, ಅತ್ಯಾಚಾರಿಗಳಾಗಿದ್ದರು, ಮೋಸಗಾರರಿದ್ದರು; ಹೀಗೆ ಯಾವ್ಯಾವುದೆಲ್ಲಾ ಅಪರಾಧಗಳ ಪಟ್ಟಿಯಲ್ಲಿ ಸೇರಿಸಬಹುದೋ ಅದೆಲ್ಲವನ್ನೂ ಮಾಡುವವರಿದ್ದರು. ಕಾನೂನಿನ ವ್ಯವಸ್ಥೆ ಇತ್ತು. ಶಿಕ್ಷೆ ಮತ್ತು ದಂಡಗಳೆಲ್ಲವೂ ಇದ್ದವು.

ಮಕ್ಕಳು ಬೋಧನೆಗಳನ್ನು ಪಾಲಿಸುವುದಿಲ್ಲ. ಏಕೆಂದರೆ ಅದು ಅವರ ಸ್ವಭಾವವಲ್ಲ. ಅವರ ಜೈವಿಕ ಮತ್ತು ಮಾನಸಿಕ ತಾಂತ್ರಿಕತೆಯಲ್ಲಿ ಆ ಪ್ರಕ್ರಿಯೆಗೆ ಅವಕಾಶವೇ ಇಲ್ಲ. ಅವರು ತಮಗೇ ಗೊತ್ತಿಲ್ಲದಂತೆ ಹಿರಿಯರ ಜೀವಂತ ಉದಾಹರಣೆಗಳನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ನಾವು ಮಕ್ಕಳನ್ನು ರೂಪಿಸುವಂತಹ ಉದ್ದೇಶಪೂರ್ವಕ ಪ್ರಯತ್ನವನ್ನೇನೂ ಮಾಡುವುದೇ ಅಗತ್ಯವಿಲ್ಲ. ನಾವು ಮಕ್ಕಳು ಹೇಗಿರಬೇಕು, ಹೇಗಾಗಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುವ ಸ್ಪಷ್ಟತೆ ಇದ್ದರೆ ಅದರಂತೆ ನಡೆದುಕೊಂಡರೆ ಸಾಕು.

ಒಂದು ಮಗುವು ನನ್ನನ್ನು ಗಮನಿಸುತ್ತಿದೆ. ನಾನು ವರ್ತಿಸುವ ರೀತಿಯಲ್ಲಿ ಅದು ಮುಂದೆ ವರ್ತಿಸುತ್ತದೆ. ನಾನು ಹೇಳುವ ಮಾತುಗಳನ್ನು ಅದು ಧ್ವನಿಸುತ್ತದೆ. ಅದರೊಳಗೆ ಅದು ಪ್ರತಿಧ್ವನಿಯಾಗಿ ಪುನರಾವರ್ತಿತವಾಗುತ್ತದೆ. ನನ್ನ ಕ್ರಿಯೆಗಳಿಗೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಗಳು ಅದರಲ್ಲಿ ರೂಪುಗೊಳ್ಳುತ್ತಿರುತ್ತದೆ.

ಸಮಾಜವು ಮಕ್ಕಳನ್ನು ಸಮರ್ಥ ವಯಸ್ಕರನ್ನಾಗಿ ರೂಪಿಸುವುದರಲ್ಲಿ ಇಂದಲ್ಲ, ಹಿಂದೆಂದಿನಿಂದಲೂ ಎಡವುತ್ತಲೇ ಬಂದಿದೆ. ಅಂದು ಇಂದು ಇರುವಂತಹ ಆಧುನಿಕ ತಾಂತ್ರಿಕ, ವೈಜ್ಞಾನಿಕ ಉಪಕರಣಗಳೇನೂ ಇರಲಿಲ್ಲ. ಆಗಿನ ಕುಟುಂಬದ ವ್ಯವಸ್ಥೆಯಲ್ಲಿ ಬೆಳೆದವರೂ ಕಳ್ಳರಾಗಿದ್ದು, ಸುಳ್ಳರಾಗಿದ್ದರು, ಅತ್ಯಾಚಾರಿಗಳಾಗಿದ್ದರು, ಮೋಸಗಾರರಿದ್ದರು; ಹೀಗೆ ಯಾವ್ಯಾವುದೆಲ್ಲಾ ಅಪರಾಧಗಳ ಪಟ್ಟಿಯಲ್ಲಿ ಸೇರಿಸಬಹುದೋ ಅದೆಲ್ಲವನ್ನೂ ಮಾಡುವವರಿದ್ದರು. ಕಾನೂನಿನ ವ್ಯವಸ್ಥೆ ಇತ್ತು. ಶಿಕ್ಷೆ ಮತ್ತು ದಂಡಗಳೆಲ್ಲವೂ ಇದ್ದವು. ಅನುಪಾತಗಳಲ್ಲಿನ ವ್ಯತ್ಯಾಸಗಳಾಗಿವೆ. ಆದರೆ ಎಲ್ಲಾ ಬಗೆಯ ಘೋರಗಳೂ, ದೌರ್ಜನ್ಯಗಳೂ, ಶೋಷಣೆಗಳೂ ಚರಿತ್ರೆಯಲ್ಲಿ ದಾಖಲಾಗಿವೆ ಮತ್ತು ದಾಖಲಾಗುತ್ತಿವೆ. ಎಲ್ಲಾ ಅಪರಾಧಿಗಳೂ ಬಾಲ್ಯದ ಹೊಲದಲ್ಲಿ ಕೃಷಿಯಾಗಿ ಬಂದಿರುವ ಬೆಳೆಯಷ್ಟೇ!

ವಯಸ್ಕನೊಬ್ಬ ಇಂದು ತನ್ನ ಸ್ವಾಭಿಮಾನಕ್ಕೂ, ಅಹಂಕಾರಕ್ಕೂ ನಡುವಿಗೆ ಸ್ಪಷ್ಟ ಗೆರೆಯನ್ನು ಎಳೆದುಕೊಂಡು ನೋಡಿಕೊಳ್ಳಲಾರನೆಂದರೆ, ಲೈಂಗಿಕತೆಯ ಮತ್ತು ಕಾಮುಕತೆಯ ವ್ಯತ್ಯಾಸ ತಿಳಿಯಲಾರನೆಂದರೆ, ಅದರಂತೆ ಪ್ರೇಮಕ್ಕೂ ಕಾಮಕ್ಕೂ, ಬಂಧನಕ್ಕೂ ಅನುಬಂಧಕ್ಕೂ, ಸಂಬಂಧಕ್ಕೂ ವ್ಯಾಮೋಹಕ್ಕೂ, ಅಗತ್ಯಕ್ಕೂ ಆಸೆಗೂ, ಭೀತಿಗೂ ಅವಧಾನಕ್ಕೂ ವ್ಯತ್ಯಾಸವನ್ನು ಕಂಡುಕೊಳ್ಳಲಾಗದಿರುವಷ್ಟು ಗೊಂದಲಕ್ಕೊಳಗಾಗುತ್ತಲೇ ಇದ್ದಾನೆ.

ನಮ್ಮ ದೇಶದಲ್ಲಿ ಫೋಷಕರಿಗಾಗಲಿ, ಶಿಕ್ಷಕರಿಗಾಗಲಿ ಮನೋವೈಜ್ಞಾನಿಕವಾಗಿ ಮಕ್ಕಳನ್ನು ಅರಿಯುವ ತರಬೇತಿಯೇ ಅತಿ ವಿರಳವಾಗಿದೆ. ಅಸಹಾಯಕರೂ, ಪರಾವಲಂಬಿಗಳೂ ಮತ್ತು ಮುಗ್ಧರೂ ಆಗಿರುವ ಮಕ್ಕಳಿಗೆ ತಾವೇ ಎಲ್ಲವನ್ನೂ, ಜ್ಞಾನ, ದೃಷ್ಟಿ, ದಾರಿ, ಗುರಿಯನ್ನು ನೀಡುವವರಾಗಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಇಲ್ಲೇ ಮೊದಲನೆಯ ಮಹಾಪತನ ಆರಂಭವಾಗುವುದು. ರಂಗುರಂಗಾದ ಗುಂಗುಗಳಲ್ಲಿ ಅಮಲೇರಿರುವ ಪೋಷಕರು ಮತ್ತು ಶಿಕ್ಷಕರು ತಮ್ಮ ಮಾದರಿಗಳು ಮಕ್ಕಳ ಭವಿಷ್ಯತ್ತಿನಲ್ಲಿ ಮೂರ್ತಿವೇಳುವುದು ಎಂಬ ಮಹಾವಧಾನವಿದ್ದಲ್ಲಿ ಈಗ ಕಾಣಲಾಗದಿರುವುದನ್ನು ಮುಂದಿನ ಪೀಳಿಗೆಯಲ್ಲಾದರೂ ಕಾಣಬಯಸಬಹುದೇನೋ.

*ಲೇಖಕರು ರಂಗ ನಿರ್ದೇಶಕರಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ಸಂಗೀತಗಾರರಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published.