ರತ್ನಾಕರವರ್ಣಿಯ ಮಹಾಕಾವ್ಯ ‘ಭರತೇಶವೈಭವ’

ಹಳಗನ್ನಡ ಕಾವ್ಯಗಳ ಸಾಲಿನಲ್ಲಿ ಕೃತಿಯನ್ನು ಗುರುತಿಸಿದರೂ ಕೃತಿಯಲ್ಲಿ ಬಳಸಿರುವ ಕನ್ನಡವು ಹಳಗನ್ನಡದ ಪ್ರಭಾವದಿಂದ ಮುಕ್ತವಾಗಿದ್ದು ಹೊಸಗನ್ನಡಕ್ಕೆ ಹತ್ತಿರದಲ್ಲಿದೆ. ಇದನ್ನು ನಡುಗನ್ನಡದ ಕೃತಿಯೆಂದು ಪರಿಗಣಿಸಲಾಗಿದೆ. ಮಹಾಕಾವ್ಯವು ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದಗೊಂಡಿರುವುದು ಕೃತಿಯ ಲೋಕಪ್ರಿಯತೆಗೆ ಸಾಕ್ಷಿ.

ಜೈನ ಮಹಾಕವಿ ರತ್ನಾಕರವರ್ಣಿಯಿಂದ ರಚಿಸಲ್ಪಟ್ಟಿರುವ ಅದ್ಭುತ ಕೃತಿ ‘ಭರತೇಶವೈಭವ’. ಲೌಕಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಸಮನ್ವಯದ ಕೃತಿಯಾಗಿ ಇದು ಹೊರಹೊಮ್ಮಿದೆ. ತ್ಯಾಗ-ಭೋಗ ಸಮನ್ವಯದ ಕೃತಿಯಾಗಿಯೂ ‘ಭರತೇಶವೈಭವ’ ವಿಜೃಂಭಿಸುತ್ತದೆ ಎಂದರೂ ಅದು ಯಾವುದೇ ವೈಭವೀಕರಣದ ಮಾತಾಗದು; ಕೃತಿಯನ್ನು ಓದಿದಾಗ ಇದು ಸತ್ಯವೆಂದು ಅರಿವಿಗೆ ಬಾರದಿರದು. ಶೃಂಗಾರವಿದೆ, ಅಧ್ಯಾತ್ಮವಿದೆ, ಯೋಗವಿದೆ, ಭೋಗವಿದೆ, ತ್ಯಾಗವೂ ಇದೆ. ಭೈರವರಸರಿಂದ ‘ಶೃಂಗಾರ ಕವಿ ಹಂಸರಾಜ’ ಎಂಬ ಬಿರುದಿಗೆ ಪಾತ್ರನಾದವನು ರತ್ನಾರವರ್ಣಿ. ‘ಭರತೇಶ ವೈಭವ’ ಅದೊಂದು ರಸರತ್ನಾಕರವೆಂದರೂ ಅನ್ವರ್ಥಕವೇ ಆಗಿದೆ. ಮಾತೃಪ್ರೇಮದ ಛಾಪು ಇದೆ; ಸರಸಾಂಗಿಯರ ಸಲ್ಲಾಪದ ಸಂಭ್ರಮವೂ ಇದೆ. ರಾಷ್ಟಕವಿ ಕುವೆಂಪುರವರು ‘ಭರತೇಶ ವೈಭವ’ವನ್ನು ಒಂದು ಜಗತ್ಕೃತಿ ಎಂದು ಎಂದು ಬಣ್ಣಿಸಿರುವುದು ಕೃತಿಯ ಘನತೆಗೆ ಸಾಕ್ಷಿ ಎಂದೇ ಹೇಳಬಹುದು.

ರತ್ನಾಕರವರ್ಣಿಯು ಹದಿನಾರನೆ ಶತಮಾನದ ಜೈನ ಕವಿ. ಕನ್ನಡ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯ. ‘ಭರತೇಶವೈಭವ’, ‘ತ್ರಿಲೋಕಶತಕ’, ‘ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರ ಶತಕ’ ಕೃತಿಗಳ ಕರ್ತೃ ರತ್ನಾಕರವರ್ಣಿಗೆ ರತ್ನಾಕರ, ರತ್ನಾಕರ ಅಣ್ಣ, ರತ್ನಾಕರ ಸಿದ್ಧ ಎಂಬ ಹೆಸರುಗಳೂ ಇದ್ದು ರತ್ನಾಕರಸಿದ್ಧ ತನಗೆ ಅತ್ಯಂತ ಪ್ರಿಯವಾದುದೆಂದು ಹೇಳಿಕೊಂಡಿದ್ದಾನೆ.

ಕವಿ ರತ್ನಾಕರವರ್ಣಿಗೆ ತಾನು ರಚಿಸುವ ಮಹಾಕಾವ್ಯದ ಉತ್ಕೃಷ್ಟತೆಯ ಬಗ್ಗೆ ಅಭಿಮಾನ, ಆತ್ಮವಿಶ್ವಾಸಗಳಿರುವುದನ್ನು ಕವಿವಾಣಿಯಲ್ಲೇ ಗಮನಿಸಬಹುದಾಗಿದೆ. ‘ಭರತೇಶವೈಭವ’ ಮಹಾಕಾವ್ಯ ಕೇವಲ ಕನ್ನಡಿಗರಿಗೆ ಸೀಮಿತವಾಗಿರದೆ ಅದು ತೆಲುಗರಿಗೆ, ತುಳುವರಿಗೆ ಹೇಗೆ ಆಕರ್ಷಣೀಯ ಎಂಬುದನ್ನು ಪದ್ಯವೊಂದರಲ್ಲಿ ಬಲುಸೊಗಸಾಗಿ ನಿರೂಪಿಸುತ್ತಾನೆ. ‘’ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು ರಯ್ಯಾ ಮಂಚಿದಿಯೆನೆ ತೆಲುಗಾ ಅಯ್ಯಯ್ಯ ಎಂಚ ಪೊರ್ಲಾಂಡೆAದು ತುಳುವರು ಮೈಯ್ಯುಬ್ಬಿ ಕೇಳಬೇಕಣ್ಣಾ’’ ಎನ್ನುವ ಮೂಲಕ ತನ್ನ ಕಾವ್ಯವು ಭಾಷೆಯ ಎಲ್ಲೆಯನ್ನು ಮೀರಿ ಹೇಗೆ ಜನಮಾನಸವನ್ನು ಮುಟ್ಟಬಲ್ಲುದು, ತಟ್ಟಬಲ್ಲುದು ಎಂಬುದನ್ನು ನೇರವಾಗಿಯೇ ಕವಿ ಹೇಳಿಕೊಳ್ಳುವುದನ್ನು ನಾವು ಕಾಣುತ್ತೇವೆ.

ಆದಿತೀರ್ಥಂಕರ ವೃಷಭನಾಥನ ಹಿರಿಯ ಮಗ ಭರತ ಈ ಕಾವ್ಯದ ನಾಯಕ. ಈತನು ತನ್ನ ತೊಂಬತ್ತಾರು ಸಾವಿರ ರಾಣಿಯರ ಜೊತೆಗೆ ಭೋಗಜೀವನದಲ್ಲಿ ನಿರತನಾಗಿದ್ದ. ಈತನ ಆಯುಧಾಗಾರದಲ್ಲಿ ಪವಿತ್ರ ಚಕ್ರರತ್ನವೊಂದು ಉದಯಿಸಿ, ದಿಗ್ವಿಜಯಕ್ಕೆ ಹೊರಡಲು ಸೂಚಿಸುತ್ತದೆ. ಭರತ ವಿಜಯಯಾತ್ರೆ ಮಾಡುತ್ತ ತನ್ನ ತಮ್ಮನಾದ ಬಾಹುಬಲಿಯ ರಾಜಧಾನಿ ಪೌದನಪುರಕ್ಕೆ ಬರುತ್ತಾನೆ. ಚಕ್ರರತ್ನ ಅಲ್ಲಿ ನಿಲ್ಲುತ್ತದೆ. ಬಾಹುಬಲಿ ಅಣ್ಣನೊಡನೆ ಹೋರಾಡುತ್ತಾನೆ. ಭರತ ಬಾಹುಬಲಿಯ ಮನಸ್ಸನ್ನು ಒಲಿಸುತ್ತಾನೆ. ಬಾಹುಬಲಿ ವಿರಕ್ತನಾಗಿ ಜಿನದೀಕ್ಷೆ ಪಡೆದು ತಪಸ್ಸಿಗೆ ತೆರಳುತ್ತಾನೆ. ತನ್ನ ರಾಜಧಾನಿಗೆ ಮರಳಿದ ಭರತ ತಾನೂ ವಿರಕ್ತನಾಗಿ ತಪಸ್ಸಿಗೆ ತೆರಳಿ ಮೋಕ್ಷ ಸಂಪಾದಿಸುತ್ತಾನೆ. ಇದಿಷ್ಟು ಕತೆಯ ತಿರುಳಾಗಿದೆ.

ಕಥೆಯ ಮೂಲರೇಖೆಗಳನ್ನು ರತ್ನಾಕರನು ಬಳಸಿಕೊಂಡಿರುವನಾದರೂ ಅವುಗಳಲ್ಲಿ ಅಲ್ಲಲ್ಲಿ ಕೆಲವು ವ್ಯತ್ಯಾಸಗಳನ್ನು ಮಾಡಿಕೊಂಡಿರುವುದು ಗೋಚರಿಸುತ್ತದೆ. ಜಿನಸೇನನೇ ಮೊದಲಾಗಿ ಎಲ್ಲ ಮಹಾಪುರಾಣ ಕರ್ತೃಗಳೂ ಭರತನ ಕಥೆಯನ್ನು ಆದಿಜಿನನ ಕಥೆಗೆ ಅಂಗವಾಗಿ ತರುತ್ತಾರಾದರೆ, ಭರತನ ಕಥೆಯನ್ನೇ ಪ್ರತ್ಯೇಕವಾಗಿ ತೆಗೆದುಕೊಂಡು ಪ್ರತಿಪಾದಿಸುವ ಗೋಜಿಗೆ ಹಿಂದಿನ ಯಾವ ಕವಿಯೂ ಕೈ ಹಾಕಿದ್ದಿಲ್ಲ. ಆದರೆ ಅಂತಹ ಕೀರ್ತಿಗೆ ರತ್ನಾಕರವರ್ಣಿ ಭಾಜನನಾಗುತ್ತಾನೆ ಮತ್ತು ಯಶಸ್ಸನ್ನೂ ಪಡೆಯುತ್ತಾನೆ.

ರತ್ನಾಕರವರ್ಣಿಯು ಮೂಲದಿಂದ ಮಾಡಿಕೊಂಡಿರುವ ಬದಲಾವಣೆಗಳು ಮುಖ್ಯವಾಗಿ ಎರಡು ರೀತಿಗಳಲ್ಲಿ ಕಂಡುಬರುತ್ತವೆ. ಅವು ಗ್ರಂಥದಲ್ಲಿ ಇದ್ದ ಭಾಗಗಳ ವಿವರಣೆಗಳಲ್ಲಿಯೇ ಮಾಡಿಕೊಂಡಿರುವ ಬದಲಾವಣೆಗಳು ಮತ್ತು ಹೊಸದಾಗಿ ಸೃಷ್ಟಿಸಿ ಗ್ರಂಥಕ್ಕೆ ಸೇರಿಸಿರುವ ಭಾಗಗಳು. ಮೊದಲಜಾತಿಗೆ ಸೇರಿದ ಬದಲಾವಣೆಗಳು ಮುಖ್ಯವಾಗಿ ಕಥಾನಾಯಕನ ಹಿರಿಮೆಯನ್ನು ಹೆಚ್ಚಿಸುವಲ್ಲಿ ಉಪಯುಕ್ತವೆನಿಸಿವೆ. ಗ್ರಂಥವಿಭಾಗದಲ್ಲಿಯೇ ಕವಿ ತನ್ನ ಕಥಾನಾಯಕನಿಗೆ ಹಿರಿದೊಂದು ಸ್ಥಾನ ನೀಡಿರುವುದು ಗಮನಿಸಬೇಕಾದ ಸಂಗತಿ.

ಭರತನ ಜನನ, ಬಾಲ್ಯ, ಕೌಮಾರ್ಯ ಮೊದಲಾದ ವಿಚಾರಗಳಲ್ಲಿ ಪೂರ್ವಗ್ರಂಥಗಳು ಸಾಕಷ್ಟು ವಿವರಿಸಿರುವುದರಿಂದ ಅವುಗಳನ್ನು ಮರುವಿವೇಚಿಸುವ ಅಗತ್ಯ ಕವಿಗೆ ಕಂಡು ಬರಲಿಲ್ಲವೆನ್ನಬಹುದು. ಹೀಗಾಗಿಯೇ ರತ್ನಾಕರವರ್ಣಿ ತನ್ನ ಕಾವ್ಯದ ಕಥೆಗೆ ನೇರವಾಗಿ ಭರತನ ಭೋಗಸಾಮ್ರಾಜ್ಯದಿಂದ ಬಣ್ಣನೆಯಿಂದಲೇ ನಾಂದಿ ಹಾಡುತ್ತಾನೆ.

ರತ್ನಾಕರವರ್ಣಿಯ ಕೈಯಲ್ಲಿ ಭರತನ ಪಾತ್ರ ಔನ್ನತ್ಯವನ್ನು ಮುಟ್ಟುತ್ತದೆ. ಲೌಕಿಕದಲ್ಲಿ ಅಂಕುರಿಸಿದ ಈ ಪಾತ್ರ ಅಲೌಕಿಕತೆಯಲ್ಲಿ ಅರಳುವುದನ್ನು ಕಾಣಬಹುದು. ಕಣ್ಣಿಗೆ ಕಾಣಿಸದ, ಶ್ರವ್ಯೇಂದ್ರಿಯಕ್ಕೆ ಮಾತ್ರ ಗೋಚರಿಸಬಲ್ಲ ವಿಷಯಗಳನ್ನು ವರ್ಣಿಸುವುದರಲ್ಲೂ ಕವಿಯು ಅಸಾಮಾನ್ಯ ಪ್ರತಿಭೆಯನ್ನು ಮೆರೆದಿರುವುದು ಕಾವ್ಯಾಸ್ವಾದನೆ ಮಾಡುವ ಓದುಗನಿಗೆ ತಿಳಿದುಬರುತ್ತದೆ.

‘ಭರತೇಶವೈಭವ’ವು ಎಂಬತ್ತು ಸಂಧಿಗಳನ್ನು ಹೊಂದಿರುವ, ಸುಮಾರು ಹತ್ತು ಸಾವಿರ ಪದ್ಯ (9969)ಗಳಿಂದ ಕೂಡಿರುವ ಮಹಾಕಾವ್ಯವಾಗಿದೆ. ಹಳೆಗನ್ನಡ ಕಾವ್ಯಗಳ ಸಾಲಿನಲ್ಲಿ ನಾವು ಈ ಕೃತಿಯನ್ನು ಗುರುತಿಸಿದರೂ ಭಾಷಾಶೈಲಿಯ ಬಗ್ಗೆ ಹೇಳಬೇಕೆಂದರೆ ಈ ಕೃತಿಯಲ್ಲಿ ಬಳಸಿರುವ ಕನ್ನಡವು ಹಳೆಗನ್ನಡದ ಪ್ರಭಾವದಿಂದ ಮುಕ್ತವಾಗಿದ್ದು ಹೊಸಗನ್ನಡಕ್ಕೆ ಹತ್ತಿರದಲ್ಲಿದೆ. ಇದನ್ನು ನಡುಗನ್ನಡದ ಕೃತಿಯೆಂದು ಗುರುತಿಸಲಾಗಿದೆ.

ಈ ಮಹಾಕಾವ್ಯವು ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದಗೊಂಡಿರುವುದು ಕೃತಿಯ ಲೋಕಪ್ರಿಯತೆಗೆ ಸಾಕ್ಷಿ.

ಕನ್ನಡ ಸಾಹಿತ್ಯಪ್ರಪಂಚದಲ್ಲಿ ರತ್ನಾಕರವರ್ಣಿಯು ಸಾಂಗತ್ಯ ಪ್ರಕಾರದಲ್ಲಿ ಕಾವ್ಯ ರಚಿಸಿದ ಪ್ರಮುಖ ಹಿರಿಯ ಕವಿಗಳಲ್ಲಿ ಓರ್ವ ಎಂಬ ಮನ್ನಣೆ ಗಳಿಸಿದ್ದಾನೆ. ಪುರಾಣಾಂತರ್ಗತವಾದ ವಸ್ತುವೊಂದನ್ನು ಹೊರ ತೆಗೆದು ತನ್ನ ದರ್ಶನದಂತೆ ಭರತ ಚಕ್ರವರ್ತಿಯ ಕತೆಯನ್ನು ನಿರೂಪಿಸುವ ಹೆಚ್ಚುಗಾರಿಕೆ ರತ್ನಾಕರವರ್ಣಿಯದು. ಇದೊಂದು ಹಾಡುಗಬ್ಬವೂ ಹೌದು, ವರ್ಣಕ ಕಾವ್ಯವೂ ಹೌದು.

‘ಭರತೇಶವೈಭವ’ದಲ್ಲಿ ಬರುವ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಮೋಕ್ಷವಿಜಯ ಹಾಗೂ ಅರ್ಕಕೀರ್ತಿವಿಜಯ- ಪಂಚವಿಜಯಗಳೆAದು ಗುರುತಿಸಲ್ಪಡುತ್ತವೆ. ಯೋಗವಿಜಯದ ಒಳಹೊಕ್ಕರೆ ‘ಜನನಿವಿಯೋಗ ಸಂಧಿ’, ಭೋಗವಿಜಯದಲ್ಲಿ ಸಂಸಾರದ ಸಾಗರದ ಬಣ್ಣನೆ, ದಿಗ್ವಿಜಯ ಭಾಗದಲ್ಲಿ ಭರತನ ಯುದ್ಧದ ಹಾಗೂ ಕಪ್ಪಕಾಣಿಕೆ ಪಡೆದ ಸಂಗತಿಗಳ ದರ್ಶನವಾಗುತ್ತದೆ. ಯೋಗ ವಿಜಯಕ್ಕೆ ಬಂದಾಗ ಒಂದು ಮಹತ್ತರವಾದ ಆಧ್ಯಾತ್ಮಿಕ ನಡೆ ಗೋಚರಿಸುತ್ತದೆ.

ಜೈನ ಸಾಂಪ್ರದಾಯಿಕ ಕಾವ್ಯ ಪದ್ಧತಿಗಿಂತ ಭಿನ್ನವಾಗಿ ಕಾವ್ಯ ರಚನೆಗೆ ತೊಡಗುವ ರತ್ನಾಕರವರ್ಣಿ, ‘ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ ನಿನ್ನನಾದಿಯ ಮಾಡಿಕೊಂಡು ಕನ್ನಡದೊಳಗೊಂದು ಸುಕಥೆಯ ಪೇಳುವೆ’ ಎಂದು ಹೇಳಿಕೊಳ್ಳುತ್ತಾನೆ. ಅಷ್ಟಾದಶ ವರ್ಣನೆಗಳ ವಿಚಾರ ಬಂದಾಗಲೂ ಇತಿಮಿತಿಯ ಹದಮುದದ ನಡೆ ಕಂಡು ಬರುತ್ತದೆ. ‘ಸಕಲ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು ವಿಕಳವಾದರೂ ದೋಷವಿಲ್ಲ ಸಕಲ ಲಕ್ಷಣಕ್ಕಾಗಿ ಬಿರುಸು ಮಾಡಿದರೆ ಪುಸ್ತಕದ ಬದನೆಕಾಯಾಗಬಹುದು’ ಎಂಬುದು ಮಹಾಕವಿಯ ಧೋರಣೆ. ಆದುದರಿಂದ ‘ರಳಕುಳಶಿಥಿಲ ಸಮಾಸಗಳ ಕೋಟಲೆ ಹಾಡುವ ಕಾವ್ಯದಲ್ಲಿ ಬೇಡವೆಂಬುದು ಕವಿಯ ಆಶಯವಾಗಿ ಮೂಡುತ್ತದೆ.

‘ಭರತೇಶವೈಭವ’ವು ಪಂಚವಿಜಯಗಳಲ್ಲಿ ವರ್ಗೀಕರಣಗೊಂಡಿದ್ದು, ಅವುಗಳಲ್ಲಿ ಒಟ್ಟು ಎಂಬತ್ತು ಸಂಧಿಗಳು ಕಂಡು ಬರುತ್ತವೆ. ಆಸ್ಥಾನ ಸಂಧಿ, ಕವಿವಾಕ್ಯ ಸಂಧಿ, ಮುನಿಭುಕ್ತಿ ಸಂಧಿ, ಆರೋಗಣೆ ಸಂಧಿ, ಉಪ್ಪರಿಗೆಯ ಸಂಧಿ, ರಾಜಲಾವಣ್ಯ ಸಂಧಿ, ಅರಗಿಳಿಯಾಳಾಪ ಸಂಧಿ, ಮನ್ನಣೆ ಸಂಧಿ, ಸರಸ ಸಂಧಿ, ಸನ್ಮಾನಸಂಧಿ, ವೀಣಾಸಂಧಿ, ಪೂರ್ವನಾಟಕ ಸಂಧಿ, ಉತ್ತರ ನಾಟಕ ಸಂಧಿ, ತಾಂಡವ ವಿನಯ ಸಂಧಿ, ಶಯ್ಯಾಗೃಹಸಂಧಿ, ಪರ್ವಾಭಿಷೇಕ ಸಂಧಿ, ತತ್ವೋಪದೇಶ ಸಂಧಿ, ಪರ್ವಯೋಗಸಂಧಿ, ಪಾರಣೆಸಂಧಿ, ನವರಾತ್ರಿ ಸಂಧಿ, ಪಟ್ಟಣಪಯಣದ ಸಂಧಿ, ದಶಮಿ ಪ್ರಸ್ಥಾನ ಸಂಧಿ, ಪೂರ್ವಸಾಗರ ಸಂಧಿ, ರಾಯಸದ ಅಂಬೆಚ್ಚ ಸಂಧಿ, ಆದಿರಾಜೋದಯ ಸಂಧಿ, ವರತನುಸಾಧ್ಯ ಸಂಧಿ, ಪ್ರಭಾಸಾಮರಚಿಹ್ನ ಸಂಧಿ, ವಿಜಯಾರ್ಧ ದರ್ಶನ ಸಂಧಿ, ಕವಾಟಸ್ಫೋಟ ಸಂಧಿ, ಕುಮಾರ ವೈಹಾಳಿ ಸಂಧಿ, ಖೇಚರಿಯರ ವಿವಾಹ ಸಂಧಿ, ಭೂಚರಿಯರ ವಿವಾಹಸಂಧಿ, ಮೈದುನ ಮಾತಿನ ಸಂಧಿ, ವೃಷ್ಟಿ ನಿವಾರಣ ಸಂಧಿ, ಸಿಂಧುದೇವಿಯಾಶೀರ್ವಾದ ಸಂಧಿ, ಅಂಕಮಾಲಾಸAಧಿ, ಮಂಗಲಯಾನ ಸಂಧಿ, ಉಂಗುರುಡಿಗೆಯ ಸಂಧಿ, ನಮಿರಾಜ ವಿನಯ ಸಂಧಿ, ಸುಭದ್ರಾ ಪರಿಣಯ, ಸ್ತಿçÃರತ್ನ ಸಂಭೋಗ ಸಂಧಿ, ಸೇಸೆಯ ಸಂಧಿ, ಪುತ್ರವೈವಾಹ ಸಂಧಿ, ಜಿನದರ್ಶನ ಸಂಧಿ, ತೀರ್ಥಾಗಮನ ಸಂಧಿ, ಅಂಬಿಕಾದರ್ಶನ ಸಂಧಿ, ಕಾಮದೇವನ ಆಸ್ಥಾನ, ಸಂಧಾನ ಭಂಗ, ಕಟಕವಿನೋದ ಸಂಧಿ, ಮದನ ಸನ್ನಾಹ ಸಂಧಿ, ರಾಜೇಂದ್ರ ಗುಣವಾಕ್ಯ ಸಂಧಿ,  ಚಿತ್ರಜ ನಿರ್ವೇಗ ಸಂಧಿ, ನಗರೀ ಪ್ರವೇಶ ಸಂಧಿ, ಶ್ರೇಣ್ಯಾರೋಹಣ ಸಂಧಿ, ಸ್ವಯಂವರ ವರ್ಣನೆ ಸಂಧಿ, ಲಕ್ಷಿö್ಮÃಮತಿಯ ವಿವಾಹ, ನಾಗರ ಸಲ್ಲಾಪ ಸಂಧಿ, ಜನಕ ಸಂದರ್ಶನ ಸಂಧಿ, ಜನನೀ ವಿಯೋಗ ಸಂಧಿ,  ಬ್ರಾಹ್ಮಣನಾಮ ಸಂಧಿ, ಷೋಡಷ ಸ್ವಪ್ನ ಸಂಧಿ, ಜಿನವಾಸ ನಿರ್ಮಾಣ ಸಂಧಿ, ಸಾಧನೆಯ ಸಂಧಿ, ವಿದ್ಯಾಗೋಷ್ಠಿ ಸಂಧಿ, ಕುಮಾರರ ವಿರಕ್ತಿ ಸಂಧಿ, ಸಮವಸರಣ ವರ್ಣನೆ, ದಿವ್ಯ ಧ್ವನಿ ಸಂಧಿ, ತತ್ವಾರ್ಥ ಸಂಧಿ, ಮೋಕ್ಷ ಮಾರ್ಗ ಸಂಧಿ, ದೀಕ್ಷಾ ಸಂಧಿ,  ಕುಮಾರ ವಿಯೋಗ ಸಂಧಿ, ಪಂಚೈಶ್ರ‍್ಯ ಸಂಧಿ, ತೀರ್ಥೇಶಪೂಜಾ ಸಂಧಿ, ಜಿನಮುಕ್ತಿ ಸಂಧಿ, ರಾಜ್ಯಪಾಲನ ಸಂಧಿ, ಭರತೇಶ ನಿರ್ವೇಗ ಸಂಧಿ, ಧ್ಯಾನ ಸಾಮರ್ಥ್ಯ ಸಂಧಿ, ಚಕ್ರೇಶ ಕೈವಲ್ಯ ವರ್ಣನೆ, ಅರ್ಕಕೀರ್ತಿ ವಿಜಯ: ಸರ್ವನಿರ್ವೇಗ ಸಂಧಿ ಮತ್ತು  ಸರ್ವರ ಮೋಕ್ಷ ಸಂಧಿ ಎಂಬ ಹೆಸರುಗಳಲ್ಲಿ ಮಹಾಕಾವ್ಯ ಸಾಕ್ಷಾತ್ಕಾರಗೊಂಡಿದೆ.

ಯಾವುದೇ ಒಂದು ಕಾವ್ಯವು ಮಹತ್ತ÷್ವವೆನಿಸುವುದು ಅದು ಪ್ರತಿಯೊಂದು ವಾಚನ ಅಥವಾ ಓದಿನಲ್ಲೂ ನಿತ್ಯ ಹೊಸತನವನ್ನು ಕಾಯ್ದುಕೊಂಡಾಗ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕೃತಿಯೊಂದು ಜನರ ಮನದಾಳದಲ್ಲಿ ನಿಲ್ಲಬೇಕಾದರೆ ಅದು ಒಂದೊAದು ಓದಿಗೂ ಹೊಸ ಭಾವಸ್ಫುರಣೆಗೆ, ಅರ್ಥಸೃಜನೆಗೆ ಅನುವು ನೀಡಬೇಕು. ಅಂತಹ ಆಂತರಿಕ ಗುಣ ಕಾವ್ಯದ್ದು. ಒಂದು ಕಾಲಘಟ್ಟದಲ್ಲಿ ಜನರು ತಮ್ಮ ಮನೆಗಳಲ್ಲಿ ಪ್ರತಿದಿನವೂ ಸಂಜೆಯ ವೇಳೆ ‘ಭರತೇಶ ವೈಭವ’ದ ವಾಚನಗೈಯುವ ರೂಢಿ ಇದ್ದುದನ್ನು ಕಾಣಬಹುದಿತ್ತು. ಆದರೆ ಇಂದಿನ ದಿನಮಾನದಲ್ಲಿ ಅಂತಹ ಸಹೃದಯಿ ಓದುವಿಕೆ ಕಣ್ಮರೆಯಾಗಿದೆ.

‘ಭರತೇಶವೈಭವ’ ಕಾವ್ಯವು ಭರತ ಚಕ್ರವರ್ತಿಯ ವೈಭೋಗದ ಚಿತ್ರಣವನ್ನಷ್ಟೇ ನೀಡದೆ ಲೌಕಿಕ ಜಗತ್ತಿನ ಮನೋಜ್ಞ ಚಿತ್ರಣದೊಂದಿಗೆ ಅಲೌಕಿಕವಾದ ಅನಂತ ವಿಚಾರಗಳ ಕಡೆಗೂ ಓದುಗರನ್ನು ಸೆಳೆಯುವ ಮೂಲಕ ಪ್ರತಿ ಓದಿನಲ್ಲೂ ಕಾವ್ಯ ಹೆಚ್ಚುಹೆಚ್ಚು ಆಪ್ಯಾಯಮಾನವೆನಿಸುವಂತೆ ಮಾಡುತ್ತದೆ. ಭಾವ-ರಸ ವಿಶೇಷಗಳ ಒರತೆಗೆ ಕಾರಣವಾಗುವ ಮೂಲಕ ಈ ಕಾವ್ಯದ ಓದು ಅಥವಾ ಶ್ರವಣ ಒಂದು ರೀತಿಯಲ್ಲಿ ದಿವ್ಯಾನುಭೂತಿಯನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ.

ರತ್ನಾಕರವರ್ಣಿಯ ಕಾವ್ಯಗಳಲ್ಲಿ ಮಾನವನ ಅಹಂಕಾರದ ಹಲವು ಮುಖಗಳ ಚಿತ್ರಣವಿದೆ. ಅಹಂಕಾರದ ಅಧಃಪತನವೇ ಅಹಿಂಸೆ ಎಂಬುದನ್ನು ಸಾರುವ ಮೂಲಕ ರತ್ನಾಕರವರ್ಣಿ ಶಾಂತಿಯ ಹರಿಕಾರನೆನಿಸಿಕೊಳ್ಳುತ್ತಾನೆ. ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಹುದೆಂಬ ತತ್ತ÷್ವ ಅವನ ಕಾವ್ಯಗಳಲ್ಲಿ ಗೋಚರಿಸುತ್ತದೆ.

ಯಾವುದೇ ಒಂದು ಕಾವ್ಯವಾಗಲಿ, ಕೃತಿಯಾಗಲಿ ಅದು ಹೆಚ್ಚು ಮೌಲಿಕ ಅಥವಾ ಮಹತ್ತ÷್ವದ್ದು ಎನಿಸುವುದು ಹೊಸ ಹೊಸ ವಿಚಾರಗಳಿಗೆ ಪ್ರಚೋದಕವೆನಿಸಿದಾಗ ಮತ್ತು ಅದರ ಬಗ್ಗೆ ಸಾಮಾನ್ಯರಿಂದ ಹಿಡಿದು ವಿದ್ವಾಂಸವರೆಗೂ ಚರ್ಚೆ, ವಿಚಾರಮಂಥನಗಳು ನಡೆದಾಗ. ಈ ನಿಟ್ಟಿನಲ್ಲಿ ‘ಭರತೇಶವೈಭವ’ ಹಲವು ವಿದ್ವಾಂಸರ, ವಿಮರ್ಶಕರ ಗಮನ ಸೆಳೆದಿದೆ. ‘ಭರತೇಶವೈಭವ’ದ ಬಗ್ಗೆಯೇ ಹಲವು ಬರೆಹಗಳು, ಕೃತಿಗಳು ಮೂಡಿಬಂದಿವೆ; ಹಲವು ವಿಮರ್ಶೆ-ವ್ಯಾಖ್ಯಾನಗಳಿಗೆ ಅನುವು ನೀಡಿದೆ. ಕವಿಯ ಹಿನ್ನೆಲೆಯಲ್ಲಿ, ಕಾವ್ಯದ ಹಿನ್ನೆಲೆಯಲ್ಲಿ ಹಲವು ಚರ್ಚೆ-ಸಂವಾದಗಳಿಗೆ ಎಡೆಮಾಡಿಕೊಟ್ಟಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಸ್ಥಾಪನೆಗೊಂಡು ಕಾರ್ಯ ನಿರ್ವಹಿಸುತ್ತಿರುವುದು ಈ ನಿಟ್ಟಿನಲ್ಲಿ ಕವಿಯ ಹಾಗೂ ಆತನ ಕೃತಿಗಳ ಮಹತಿಗೆ ಪ್ರಬಲ ಸಾಕ್ಷಿಯೆನಿಸುತ್ತದೆ.

ಯಾವುದೇ ಒಂದು ಕೃತಿಯು ಪೂರ್ವಕಾಲೀನ, ಸಮಕಾಲೀನ ವಿಚಾರಗಳಿಗೆ ಅವಕಾಶವಿತ್ತು ಪ್ರಸ್ತುತಗೊಂಡಾಗ ಅದು ಸಾರ್ವಕಾಲಿಕ ಕೃತಿ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ವಿಶ್ಲೇಷಿಸುವುದಾದಲ್ಲಿ ರತ್ನಾಕರವರ್ಣಿಯ ‘ಭರತೇಶವೈಭವ’ವು ಪೂರ್ವಕಾಲದ ಕೃತಿಗಳ ಸಾರವನ್ನು ನಿಸ್ಸಾರವಾಗಿಸದೆ ಹೊಸತನದೊಂದಿಗೆ ವಿಭಿನ್ನವಾಗಿ ವಿಶಿಷ್ಟವಾಗಿ ಚಿತ್ರಿತವಾಗಿದೆ ಎನ್ನಬಹುದು. ಸಮಕಾಲೀನ ಚಾರಿತ್ರಿಕ ಅಂಶಗಳನ್ನು ಪುರಾಣದ ಚೌಕಟ್ಟಿನೊಳಗೆ, ಕಾಲ್ಪನಿಕ ಅಂಶಗಳೊAದಿಗೆ ವೈಭವೀಕರಿಸುತ್ತ ಸಾರ್ವಕಾಲಿಕಗೊಳಿಸುವ ವಿಶಿಷ್ಟತೆ ‘ಭರತೇಶವೈಭವ’ದಲ್ಲಿ ಕಾಣಸಿಗುತ್ತದೆ.

‘ಭರತೇಶವೈಭವ’ ಕಲಾತ್ಮಕವಾಗಿರುವ ಅನುಭವದ ಅಭಿವ್ಯಕ್ತಿಯಾಗಿ ಹೊರಹೊಮ್ಮಿದೆ. ಅರ್ಥಶಾಸ್ತç, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ ಹೀಗೆ ಎಲ್ಲವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಒಂದು ಶೃಂಗಾರ ಕೃತಿಯೂ ಹೌದೆನ್ನಬಹುದು. ಈ ಕೃತಿಯ ಮೂಲಕ ಕವಿ ಸಾಮಾಜಿಕ ಸಂದೇಶವನ್ನೂ ನೀಡುವ ಮೂಲಕ ಸಾಹಿತ್ಯದ ಸಂಹಿತೆಯನ್ನು ಮರೆತಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತಾನೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ‘ಭರತೇಶವೈಭವ’ ಒಂದು ಮಹತ್ತ÷್ವದ ಕಾವ್ಯಕೃತಿ. ಈ ಕೃತಿಯ ಬಗ್ಗೆ ನಾಡಿನ ಹಲವು ವಿದ್ವಾಂಸರು, ಆಸಕ್ತರು ವೈಚಾರಿಕವಾಗಿ ಸಂಶೋಧನಾತ್ಮಕವಾಗಿ ಇಂದಿಗೂ ವಿಶ್ಲೇಷಿಸುತ್ತಿದ್ದಾರೆ. ಮಾತ್ರವಲ್ಲದೆ ಕಾವ್ಯದ ಒಳನೋಟಗಳನ್ನು ಅನಾವರಣಗೊಳಿಸುವಲ್ಲಿ ವೈವಿಧ್ಯಮಯ ಚಿಂತನೆಗಳ ಧಾರೆಯನ್ನು ಹರಿಯಬಿಡುತ್ತಿದ್ದಾರೆ. ಕಾವ್ಯದ ನಿತ್ಯ ಜೀವಂತಿಕೆಗೆ ತನ್ಮೂಲಕ ಕಾರಣರಾಗುತ್ತಿದ್ದಾರೆ.

ಸಾಹಿತ್ಯಾಸಕ್ತರಾಗಿ, ಸೃಜನಶೀಲರಾಗಿ ಒಟ್ಟಿನಲ್ಲಿ ಕನ್ನಡದ ಮಕ್ಕಳಾಗಿ ನಾವು ಈ ಕೃತಿಯನ್ನು ಓದಲೇಬೇಕು. ಕಾವ್ಯಲೋಕದಲ್ಲಿ ವಿಹರಿಸುವ, ವಿಚಾರಗಳಿಗೆ ಚೋದನೆ ನೀಡುವ ಸಹೃದಯತೆಯನ್ನು ಅರಳಿಸಿಕೊಳ್ಳಬೇಕು. ‘ಭರತೇಶವೈಭವ’ದ ವೈಭವಾಂತರ್ಗತ ತಿರುಳನ್ನು, ವಿಭಿನ್ನ ಆಯಾಮಗಳ ಮರ್ಮವನ್ನು ಮುಂದಿನ ಪೀಳಿಗೆಗೂ ದಾಟಿಸುವ ಜವಾಬ್ದಾರಿ ನಮ್ಮದೆಂದುಕೊಳ್ಳಬೇಕು.

*ಲೇಖಕರು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.