ರಬ್ಬರ್ ಇಡ್ಲಿ!

ಇಡೀ ಕ್ಲಾಸುರೂಂಗೆ ಕಮಟು ವಾಸನೆ ಬೀರುತ್ತಿದ್ದ ಅಂಗೈ ತುಂಬುವ ರಬ್ಬರ್ ಇಡ್ಲಿಯನ್ನು ಎತ್ತಿ ಎತ್ತಿ ಶಾಂತಣ್ಣ ಕಾಗದದ ಮೇಲಿನ ಅಕ್ಷರಗಳನ್ನು ಉಜ್ಜುವಾಗ ಆನಂದ ಮೇಷ್ಟ್ರ ಕೈಗೆ ಸಿಕ್ಕಿ ಹಾಕಿಕೊಂಡ. ಸೋಂಪ ಎಷ್ಟೇ ಪ್ರಯತ್ನಿಸಿ ಹೇಳಿದ್ರು ಅಂಥ ಒಂದು ರಬ್ಬರ್ ಮರದಿಂದ ಸಿಗುತ್ತದೆ, ಅದು ಗಿಡಗಳಲ್ಲಿ ಸುರಿಯುತ್ತದೆ, ಆ ಇಡ್ಲಿ ಕರಗಿ ಮುಂದೆ ಏನೇನೋ ಆಗುತ್ತದೆ ಎಂಬುದು ಮೇಷ್ಟ್ರಿಗೂ ಅರ್ಥವಾಗಲಿಲ್ಲ!

ನಮ್ಮದೇ ಮನೆ ಹಿಂದಿನ ಬೃಹತ್ ಕಾಡು ಸವರಿ ಬೋಳಾಗಿಸಿ ಅಲ್ಲೆಲ್ಲಾ ಲಕ್ಷಾಂತರ ರಬ್ಬರ್ ಗಿಡಗಳನ್ನು ಒಮ್ಮೆಲೇ ನೆಟ್ಟಾಗ ಊರೊಟ್ಟಿಗೆ ನಾವೆಲ್ಲಾ ಏನೋ ಅನಾಹುತ, ಪ್ರಳಯವೇ ಆಗಿಬಿಡುತ್ತದೆ ಎಂದು ಭ್ರಮಿಸತೊಡಗಿದೆವು. ಆವರೆಗೆ ನಮಗೆ ರಬ್ಬರ್ ಅಂದ್ರೆ ಕಾಗದದ ಮೇಲೆ ಪೆನ್ಸಿಲ್‌ನಲ್ಲಿ ತಪ್ಪು ತಪ್ಪು ಬರೆದಾಗ ಅದನ್ನು ಅಳಿಸಲು ಬಳಸುವಂತಹುದು ಮಾತ್ರ. ಅಂಥ ತುಂಡು ತುಂಡು ರಬ್ಬರ್‌ನ್ನು ಗಿಡದಲ್ಲಿ ಬೆಳೆಸುತ್ತಾರೋ ಎಂಬ ಚೋದ್ಯ ನನ್ನಂಥ ಏಳೆಂಟು ವರ್ಷದ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಇತ್ತು.

ಗಿಡ ನೆಟ್ಟು ಎಷ್ಟು ವರ್ಷಗಳಲ್ಲಿ ಅಂಥ ತುಂಡು ತುಂಡು ರಬ್ಬರ್ ಆ ಸಸ್ಯದ ರೆಂಬೆಕೊಂಬೆಗಳಲ್ಲಿ ನೇತಾಡುತ್ತದೋ ಎಂದು ಶಾಂತಣ್ಣ ಒಂದು ಬಾರಿ ಗಾರ್ಡರಲ್ಲಿ ಕೇಳಿಯೇ ಬಿಟ್ಟಿದ್ದ. ‘‘ಅಲ್ಲ ರಬ್ಬರ್‌ನ್ನು ಯಾರಾದ್ರೂ ಗಿಡಮರಗಳಲ್ಲಿ ಬೆಳೆಸುತ್ತಾರೋ’’ ಎಂಬುದು ಊರೊಟ್ಟಿಗೆ ರೈತಾಪಿಗಳು ಪರಸ್ಪರ ಮುಖಾಮುಖಿಯಾದಾಗ ಕೇಳುವ ಪ್ರಶ್ನೆ, ಮಾತಾಗಿತ್ತು.

ಹತ್ತಾರು ಲಾರಿಗಳಲ್ಲಿ ಎಲ್ಲಿಂದಲೋ ಬಂದ ರಬ್ಬರ್ ಗಿಡಗಳು ಭೂಮಿಯ ಮೇಲಿನ ತೂತು ತೂತುಗಳಲ್ಲಿ ಕೂತು ಚಿಗುರೊಡೆಯತೊಡಗಿದಾಗ ಅದನ್ನೆಲ್ಲಾ ಕಾಯಲು; ಬುಡ ಬುಡಗಳ ಹೆಚ್ಚುವರಿ ಚಿಗುರು ಚಿವುಟಲು, ಗೊಬ್ಬರ ಹಾಕಲು, ಬಿಸಿಲುಬೆನ್ನಿಗೆ ಸುಣ್ಣ ಹಚ್ಚಲು ನೇಮಕಗೊಂಡ ಹೆಚ್ಚಿನವರೆಲ್ಲಾ ನಮ್ಮವರೇ, ನಮ್ಮೂರವರೇ. ನಿನ್ನೆ ಮೊನ್ನೆಯವರೆಗೆ ಲುಂಗಿ ಉಟ್ಟುಕೊಂಡು ಸಾದಾಸೀದಾ ಮನುಷ್ಯರಂತೆ ಬರೀ ಮೈಯಲ್ಲೇ ಊರು ಸುತ್ತುತ್ತಿದ್ದ ಇವರೆಲ್ಲಾ ಖಾಕಿ ಪ್ಯಾಂಟು, ಶರ್ಟು ಹಾಕಿ ಕೈಯಲ್ಲೊಂದು ಕೋಲು, ಕುತ್ತಿಗೆಗೆ ಬಿಗಿಲು ನೇತಾಡಿಸಿಕೊಂಡು ಲೆಫ್ಟ್ರೈಟ್ ಓಡಾಡುವಾಗ ಕಾಲಡಿಯ ಭೂಮಿಯಂತೆ ಅದರ ಮೇಲಿನ ಇವರ ಸ್ವರೂಪ, ಮನಸ್ಥಿತಿಯೂ ಬದಲಾದಂತೆ ಭಾಸವಾಯಿತು.

ಸರಕಾರವನ್ನೇ ಆವಾಹಿಸಿಕೊಂಡು ಕಾನೂನು-ನಿಯಮ ಪಾಲಕರಾಗಿ ಮೇಲಾಧಿಕಾರಿಗಳ ಆಜ್ಞಾಪಾಲಕರಾಗಿ ಇವರೆಲ್ಲಾ ದುಡಿಯತೊಡಗಿದರು. ಅವರವರ ಮನೆಗೆ ಬಂದ ಮೇಲೂ ಜಗಲಿ-ಚಾವಡಿಯಲ್ಲಿ ಕೂತು ಖಾಕಿಯಲ್ಲೇ ಹೆಂಡ್ತಿಮಕ್ಕಳಲ್ಲಿ ದರ್ಪ-ಅಧಿಕಾರ ತೋರಿಸುತ್ತಿದ್ದರು. ಸಹಪಾಠಿ ಶೀನಪ್ಪ ಯಾಕೆ ನನ್ನಪ್ಪ ರಬ್ಬರ್ ವಾಚರ್ ಆದ್ರೊ ಎಂದು ಶಪಿಸುತ್ತಿದ್ದ. ಗಾರ್ಡ ಸೋಮಪ್ಪರ ಧರ್ಮಪತ್ನಿ ಕಮಲಕ್ಕ ಇಡೀ ಊರಿಗೆ ಈ ರಬ್ಬರ್ ಮಹಾಶಾಪ ಎಂದು ದಿನಾ ಮರ‍್ಯೋ ಇಡುತ್ತಿದ್ದರಂತೆ.

ರಬ್ಬರ್ ಗಿಡ-ತೋಟಕ್ಕೆ ಶೈಶವ ಬಾಲ್ಯ ಕಳೆದು ಏಳೆಂಟು ತುಂಬುವಾಗ ನಮಗೆ ಗುರ್ತುಪರಿಚಯವೇ ಇಲ್ಲದ ನೂರಾರು ಕುಟುಂಬಗಳು ಊರೊಳಗೆ ಅವತರಿಸಿದವು. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಅವರನ್ನು ನಮ್ಮೂರಿಗೆ ಬರಮಾಡಿಕೊಳ್ಳಲು ಕಾರಣ ಇಂದಿರಾ ಗಾಂಧಿಯವರು. ನಿರಾಶ್ರಿತ ಟಿಬೇಟಿಯನ್ನರು ಪಕ್ಕದ ಕುಶಾಲನಗರಕ್ಕೆ ಬಂದಂತೆ ತಮಿಳು ಸಿಂಹಳಿಯವರು ನಮ್ಮೂರಿಗೆ ಬಂದು ಸರಕಾರವೇ ಅವರಿಗಾಗಿ ಕಟ್ಟಿಸಿಟ್ಟಿದ್ದ ಕಾಲೋನಿಯಲ್ಲಿ ಮನೆ ಮನೆ ತುಂಬಿದರು

ಹಳ್ಳಿ-ಊರೊಟ್ಟಿಗೆ ಸಹವಾಸ-ಸಂಬಂಧಗಳು ಹೇಗಿರುತ್ತವೆ ಎಂದರೆ ನೂರಾರು ಬಿಡಿ, ಒಂದೇ ಒಂದು ಕುಟುಂಬ, ಅದೂ ಬೇಕಾಗಿಲ್ಲ ಹೊರಗಿನವ ಗುರ್ತು ಪರಿಚಯವಿಲ್ಲದ ಒಬ್ಬನೇ ಒಬ್ಬ ಬಂದರೂ ಸಾಕು ಅವನನ್ನು ಊರಿಡೀ ಆಪಾದಮಸ್ತಕ ಅನುಮಾನದಿಂದಲೇ ನೋಡುವುದು. ಊರು-ಗ್ರಾಮ ಸಂಬಂಧಗಳೇ ಹಾಗೆ.

ಇದ್ದಕ್ಕಿದ್ದಂತೆ ಬೇರೆ ಬಣ್ಣ ರೂಪ ಭಾಷೆಯ, ಉಡುಗೆ ತೊಡುಗೆಯ ಅವರೆಲ್ಲಾ ನಮ್ಮ ಊರುಗಳಿಗೆ ಬಂದು ಬೀಡು ಬಿಟ್ಟು ಮರಕ್ಕೆ ಗೆರೆ ಹಾಕಿ ಹಾಲು ಬಸಿಯಲು ಸನ್ನದ್ಧರಾದಾಗ, ಬಿದ್ದ ಹಾಲನ್ನು ಚಿಪ್ಪು ಚಿಪ್ಪುಗಳಿಂದ ಸಂಗ್ರಹಿಸಿ ಅಲ್ಯೂಮಿನಿಯಂ ಬಾಲ್ದಿಗೆರೆದು ಅದನ್ನು ತಲೆಹೊರೆಯಾಗಿ ಸಂಗ್ರಹಾಲಯಕ್ಕೆ ಹೊತ್ತು ತರುವ ಭಾವಭಂಗಿ ನೋಡಿ ನಮ್ಮೂರು ಪೆರ್ಚಿಕಟ್ಟಿ ಹೋಯಿತು. ಕೂಪು ಪಕ್ಕ ನಿಂತು ಹೊನ್ನಮ್ಮ, ಕಮಲಮ್ಮ, ಮಲ್ಲು, ಚೋಮು ಇವರೆಲ್ಲಾ ತಮಿಳು ಹೆಂಗಸರು ತಲೆಹೊರೆಯಾಗಿ ರಬ್ಬರ್ ಹಾಲು ಹೊತ್ತು ಬೆಟ್ಟ ಇಳಿಯುವ ವೇಗ ನೋಡಿಯೇ ದಂಗಾದರು. ಇವರೆಲ್ಲಾ ಭೂಮಿಯ ಮೇಲೆ ಅವತರಿಸಿರುವುದೇ ರಬ್ಬರ್ ಹಾಲು ಬಸಿಯುವುದಕ್ಕೆ, ಇದೆಲ್ಲ ನಮ್ಮೂರವರಿಗೆ ಜನ್ಮದಲ್ಲೂ ಸಾಧ್ಯವಿಲ್ಲವೆಂದು ವಲಸಿಗರನ್ನು ಪರಮವೈರಿಗಳನ್ನು ನೋಡುವಂತೆ ನೋಡುತ್ತಿದ್ದರು.

ಮರದ ತೊಗಟೆಗೆ ಹಾಕಿದ ಗೀಟು ಮೇಲೆಯೇ ಓರೆಯಾಗಿ ಕೊಯ್ದಾಗ ಮಾತ್ರ ತೆಂಗಿನ ಗೆರಟೆಯ ಮೇಲೆ ರಬ್ಬರ್ ಹಾಲು ಜಿನುಗಿ ಜಿನುಗಿ ಶೇಖರವಾಗುತ್ತದೆ. ಜಾಸ್ತಿ ಆಳವಾಗಿ ಗೀರಿದ್ರೆ ಮರಕ್ಕೆ ಪೆಟ್ಟಾಗಿ ಸಾಯುತ್ತದೆ. ನೇರವಾಗಿ ಕೊಯ್ದರೆ ಹಾಲು ಜಾರದೆ ಅಲ್ಲೇ ತೊಗಟೆಯ ಮೇಲೆಯೇ ಜಿನುಗಿ ಹಾಳಾಗುತ್ತದೆ. ಹೆಂಗಳೆಯರ ಮೃದು ಮಧುರ ಕೈಯಲ್ಲಿ ಮಾತ್ರ ಸುಲಭ ಸಾಧ್ಯವಾಗುವ ಕುಸುರಿಯಿದು. ಬೆಳಗಾಗುವ ಮುಂಚೆಯೇ ಇವರೆಲ್ಲಾ ಕಾಲೋನಿ ಬಿಟ್ಟು ಬೆಟ್ಟಗುಡ್ಡ ಸೇರಬೇಕು. ಸೂರ್ಯೋದಯವಾಗಿಬಿಟ್ಟರೆ ಬಿಸಿಲ ಝಳಕ್ಕೆ ಜಿನುಗುವ ಹಾಲು ಅಲ್ಲೇ ಗಟ್ಟಿಯಾಗಿ ಬಿಡುತ್ತದೆ. ಎರಡು-ಮೂರು ಗಂಟೆ ಬಿಸಿಲ ಪ್ರಖರತೆ ಇಲ್ಲದಿದ್ದರೆ ಬೀಳುವ ಹಾಲಲ್ಲೇ ಚಿಪ್ಪು ತುಂಬಿರುತ್ತದೆ. ಚಿಪ್ಪಿನಲ್ಲಿ ಚೂರೂ ಹಾಲು ಉಳಿಯದಂತೆ ಬಾಲ್ದಿಗೆ ಬಗ್ಗಿಸಿ ಅದನ್ನು ತೋರುಬೆರಳಲ್ಲಿ ಒರಸಿ ಜಾರಿಸಬೇಕು. ಅಸಹನೀಯ ವಾಸನೆ. ನಿಗದಿತ ಮರಗಳನ್ನು ಕೊಯ್ದಾದಾಗ ಮೇಲೆ ಮನೆಯಿಂದ ತಂದು ಮರಕ್ಕೆ ಕಟ್ಟಿದ ಗಂಟು ಇಳಿಸಿ ಇವರೆಲ್ಲಾ ಅಲ್ಲಲ್ಲೇ ಚಹ ಕುಡಿಯುತ್ತಾರೆ, ತಿಂಡಿ ತಿನ್ನುತ್ತಾರೆ.

ಹತ್ತರಿಂದ ಹನ್ನೊಂದು ಘಂಟೆಯೊಳಗಡೆ ಇವರ ಕೆಲಸ ಪೂರ್ಣಗೊಳ್ಳುತ್ತದೆ. ಶೇಖರಣ ಕೇಂದ್ರಕ್ಕೆ ಹಾಲು ಸುರಿದು ಲೆಕ್ಕ ಬರೆಸಿ ಮನೆಗೆ ಹೋದ್ರೆ ಮತ್ತೆ ಮರುದಿನ ದುಡಿಮೆ. ಒಂದು ರೀತಿ ನಿಶಾಚರಿಗಳಿವರು. ಕಾಲೋನಿಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದವರೆಗೆ ನಡೆದೇ ಹೋಗಿ ತಮತಮಗೆ ನಿಗದಿಪಡಿಸಿದ ಮರಗಳನ್ನು ಕೊಯ್ಯಬೇಕು. ಒಂದು ಕಾಲದಲ್ಲಿ ಮನುಷ್ಯರೇ ಸುಳಿದಾಡದ, ಕ್ರೂರ ಮೃಗಗಳಿಂದ ತುಂಬಿದ್ದ, ಪ್ರೇತ ರಣ ಪಿಶಾಚಿಗಳಿವೆಯೆಂದು ಜನ ಭಯಭೀತರಾಗಿದ್ದ ಕಾಡುಭಾಗದಲ್ಲಿ ಇಂದು ಯಾವುದೋ ಊರಿಂದ ಯಾವುದೋ ಭಾಷೆ, ಸಂಸ್ಕೃತಿಯ ತಮಿಳರು ಹಗಲಲ್ಲ ರಾತ್ರಿಯೇ ಓಡಾಡುವಂತಾದುದು ನಮ್ಮ ಸ್ಥಳೀಯರಿಗೆ ಸುಲಭವಾಗಿ ಅರಗಿಸಲಾಗದಂತೆ ಆಯಿತು.

ಇವರೆಲ್ಲಾ ಹಾಲು ಬಸಿದು ತಲೆಗಿಟ್ಟು ಬೆಟ್ಟ ಗುಡ್ಡ ಇಳಿದು ಕಾಲೋನಿಗೆ ಹೋದ ಮೇಲೆ ಸಂಜೆಯ ಹೊತ್ತಿಗೆ ಅದೇ ಕೂಪಿಗೆ ನಾವು ಒಂದಷ್ಟು ಮಕ್ಕಳು ಹೋಗುತ್ತಿದ್ದೆವು. ಯಾವುದೋ ಊರು, ದೇಶದಿಂದ ನಮ್ಮೂರ ಗುಡ್ಡಕ್ಕೆ ಏರಿ ಬಂದ ರಬ್ಬರ್‌ನ್ನು ನಮಗೆ ಗೊತ್ತಿದ್ದ ರೀತಿಯಲ್ಲಿ ಬಳಸುವ ಪ್ರಯೋಗ ಆಗ ನಮ್ಮ ನಮ್ಮಲ್ಲೇ ನಡೆಯುತ್ತಿತ್ತು. ರಬ್ಬರ್‌ನಿಂದ ಪೇಪರ್ ಮೇಲಿನ ಅಕ್ಷರಗಳನ್ನಷ್ಟೇ ಉಜ್ಜಲಾಗುತ್ತದೆ ಎಂಬ ಏಕೈಕ ಪ್ರಾಥಮಿಕ ಜ್ಞಾನವನ್ನಷ್ಟೇ ತಿಳಿದಿದ್ದ ಶಾಂತಣ್ಣ ಬಸಿದ ಮೇಲೆ ಹನಿಹನಿ ಜಿನುಗಿ ಸಂಜೆ ತೆಂಗಿನ ಗೆರಟೆಯ ತಳಸೇರಿ ಅಲ್ಲೇ ಇಡ್ಲಿಯಂತೆ ಗಟ್ಟಿಯಾಗಿದ್ದ ರಬ್ಬರ್‌ನ್ನು ಎಬ್ಬಿಸಿ ಕಿಸೆಯಲ್ಲಿಟ್ಟುಕೊಂಡು ಮರುದಿನ ಮಾಡಾವು ಶಾಲೆಗೆ ಒಯ್ದು ಮೇಷ್ಟುç ಕ್ಲಾಸಿನಲ್ಲಿರುವಾಗಲೇ ಅದನ್ನು ಮೆಲ್ಲ ಕಿಸೆಯಿಂದ ತೆಗೆದು ಅಕ್ಷರ ಉಜ್ಜುವ ಪ್ರಯೋಗಕ್ಕೆ ಇಳಿದಿದ್ದ. ಅತ್ಯಂತ ಹೆಚ್ಚು ತಪ್ಪು ತಪ್ಪು ಬರೆಯುತ್ತಿದ್ದ ಅವನಿಗೆ ಅಂಥ ಉಚಿತ ರಬ್ಬರ್‌ನ ಅಗತ್ಯವೂ ಇತ್ತು. ಅಸಹನೀಯ ವಾಸನೆಯ ಆ ರಬ್ಬರ್ ಇಡ್ಲಿ ತರಗತಿಯಲ್ಲಿ ಸೃಷ್ಟಿಸಿದ ಅವಾಂತರವನ್ನು ನೆನೆದಾಗಲೆಲ್ಲಾ ಇಡೀ ರಬ್ಬರ್ ಕೂಪೇ ನನ್ನ ಕಣ್ಣಮುಂದೆ ಬರುತ್ತದೆ.

ಇದನ್ನು ಓದುವ ಬಹಳಷ್ಟು ಮಂದಿ ನಿಮಗೀಗ ರಬ್ಬರ್ ಮರದ ಫಲ-ಹಾಲು, ಉತ್ಪನ್ನವೆಂದು ಗೊತ್ತಿರಬಹುದು. ಆದರೆ ಅದು ವಾಹನಗಳ ಟೈರಾಗಿ, ಮಗು ಮಲಗುವ ಹಾಳೆಯಾಗಿ, ಆಟದ ಚೆಂಡಾಗಿ ಇನ್ನು ಏನೇನೋ ಆಗಿ ಬಳಕೆದಾರರ ಕೈಸೇರುವ ಮುಂಚೆ ಬಹುಬಗೆಯ ಸಂಸ್ಕರಣೆಗೆ ಒಳಗಾಗುತ್ತದೆ. ಅದಕ್ಕೆ ಬಣ್ಣ, ಸುವಾಸನೆ ಸೇರುತ್ತದೆ. ಆದರೆ ಮರದಿಂದ ಜಿನುಗಿದ ಕ್ಷಣಕ್ಕೆ ಮೂಲ ಕಚ್ಚಾ ರಬ್ಬರ್‌ಗೆ ಇರುವ ವಾಸನೆ ಅತ್ಯಂತ ಅಸಹನೀಯವಾದುದು. ವಾಕರಿಕೆ ಬರುವಂತಹ ಕಮಟು ನಾತ ಅದರ ಸಖ್ಯ. ಒಂದು ರೀತಿ ಮಲ್ಲಿಗೆ, ಮೀನು ಮಾರುವವರ ಕಥೆಯಂತಹ ಬದುಕು.

ಇಡೀ ಕ್ಲಾಸುರೂಂಗೆ ಕಮಟು ವಾಸನೆ ಬೀರುತ್ತಿದ್ದ ಅಂಗೈ ತುಂಬುವ ರಬ್ಬರ್ ಇಡ್ಲಿಯನ್ನೆತ್ತಿ ಎತ್ತಿ ಶಾಂತಣ್ಣ ಕಾಗದದ ಮೇಲಿನ ಅಕ್ಷರಗಳನ್ನು ಉಜ್ಜುವಾಗ ಆನಂದ ಮೇಷ್ಟ್ರ ಕೈಗೆ ಸಿಕ್ಕಿ ಹಾಕಿಕೊಂಡ. ಅವರಿಗೆ ಆ ವಸ್ತುವನ್ನು ರಬ್ಬರ್ ಎಂದು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಸೋಂಪ ಎಷ್ಟೇ ಪ್ರಯತ್ನಿಸಿ ಹೇಳಿದ್ರು ಅಂಥ ಒಂದು ರಬ್ಬರ್ ಮರದಿಂದ ಸಿಗುತ್ತದೆ, ಅದು ಗಿಡಗಳಲ್ಲಿ ಸುರಿಯುತ್ತದೆ, ಆ ಇಡ್ಲಿ ಕರಗಿ ಮುಂದೆ ಏನೇನೋ ಆಗುತ್ತದೆ ಎಂದು ಮೇಷ್ಟ್ರಿಗೂ ಆ ಕ್ಲಾಸಲ್ಲಿದ್ದ, ಶಾಲೆಯಲ್ಲಿದ್ದ ನೂರಾರು ಮಕ್ಕಳಿಗೂ ಅರ್ಥವೇ ಆಗಲಿಲ್ಲ.

ಹಿಂದಿನ ಬೆಂಚಲ್ಲಿ ಕೂತಿದ್ದ ಶೋಭಾ ವಾಕರಿಕೆ ತಡೆಯಲಾಗದೆ ವಾಂತಿ ಮಾಡಲು ತರಗತಿಯಿಂದ ಹೊರಗಡೆ ಓಡಿದ್ಲು. ಒಬ್ಬಳು ವಾಂತಿ ಮಾಡಲು ಓಡಿದ್ದೇ ತಡ, ಲತ, ವಿಜಯ, ಕುಸುಮ, ಸರಸ್ವತಿ ವಾಂತಿಗೆ ಕ್ಯೂ ನಿಂತರು. ಹುಡುಗರು ಸಿಕ್ಕಿದ್ದೇ ಅವಕಾಶವೆಂದು ಬೆಂಚು ಬೆಂಚುಗಳ ಮೇಲೇರಿ ಹಾರಿಕೊಂಡೇ ಜಾಗ ಖಾಲಿ ಮಾಡಿದ್ರು. ಮೂಗು ಬಾಯಿಗೆ ಟೇವಲ್ ಕಟ್ಟಿಕೊಂಡ ಆನಂದ, ಉಗ್ಗಪ್ಪ, ಜಯಮ್ಮ ಟೀಚರ್ ರಬ್ಬರ್‌ನ್ನು ಗುಪ್ತವಾಗಿ ಹೊತ್ತು ತಂದ ಶಾಂತಣ್ಣನ ಖಾಕಿ ಚಡ್ಡಿಯನ್ನು ತನಿಖೆ ಮಾಡಲು ಮುಂದಾದರು. ಸದಾ ರಜೆಯನ್ನೇ ಬಯಸುವ ಶಾಂತಣ್ಣನಿಗೆ ಬಾಸುಂಡೆಯ ಜತೆಗೆ ಮಧ್ಯಾಹ್ನದ ಅನಂತರ ಅರ್ಧ ದಿನ ರಜೆಯನ್ನು ಶಾಲಾಡಳಿತ ದಯಪಾಲಿಸಿತು.

ನಮ್ಮ ಸಂಶೋಧನೆ ಅಷ್ಟಕ್ಕೇ ನಿಲ್ಲಲಿಲ್ಲ. ರಬ್ಬರ್ ಇಡ್ಲಿ ಪರಿಣಾಮ ಒಂದೆರಡು ದಿನ ಶಾಂತಣ್ಣ ನಮ್ಮೊಂದಿಗೆ ಕೂಪಿನ ಕಡೆ ತಲೆಹಾಕದಿದ್ದರೂ ಉಳಿದ ನಾವೆಲ್ಲ ಏರಡ್ಕ ದಾಟಿ ಸಂಜೆ ಅಜ್ಜಿಕಲ್ಲು ದಾರಿಯಲ್ಲಿ ಮೆರವಣಿಗೆ ಹೋಗುತ್ತಿದ್ದೆವು. ರಬ್ಬರ್ ತೋಟದೊಳಗೆ ಯಾರೂ ಇಲ್ಲವೆಂದು ಖಾತ್ರಿಯಾದ ಮೇಲೆ ಒಂದೊಂದು ಸಾಲಲ್ಲಿ ಒಬ್ಬೊಬ್ಬರು ನಿಂತು ರಬ್ಬರ್‌ದಾರವನ್ನು ಸುರುಳಿ ಸುತ್ತಿ ಚೆಂಡು ಮಾಡುತ್ತಿದ್ದೆವು. ಇದೇನು ಮಹಾತ್ರಾಣದ ಕೆಲಸವಲ್ಲ. ಮರದ ಬೊಡ್ಡೆಯನ್ನು ಇಳಿಜಾರಾಗಿ ಅರ್ಧ ಸುತ್ತು ಕೊಯ್ಯುತ್ತಾರಲ್ಲ, ಆ ಭಾಗದಲ್ಲಿ ಜಿನುಗಿ ಗಟ್ಟಿಯಾದ ಅಂಟು ದಾರವನ್ನು ಬೆರಳಲ್ಲಿ ಎಬ್ಬಿಸಿ ಎಳೆಯುವುದು. ಒಂದಡಿ ಉದ್ದದ ಗೆರೆದಾರ ನಾಲ್ಕೈದು ಅಡಿಯಾಗುತ್ತದೆ. ಅದನ್ನು ಮನೆಯಿಂದ ಒಯ್ದ ಇಡೀ ಕೆಂಪಡಿಕೆಯನ್ನು ಅಂಗೈಯಲ್ಲಿಟ್ಟುಕೊಂಡು ಅದಕ್ಕೆ ಸುತ್ತುವುದು, ಒಂದಷ್ಟು ರಬ್ಬರ್ ಅಂಟುದಾರವನ್ನು ಅಡಿಕೆಗೆ ಸುತ್ತಿದ ಮೇಲೆ ಆ ಉಂಡೆ ಚೆಂಡಿನ ಪೌರುಷ ನೋಡಬೇಕು.

ಇಂಥ ಚೆಂಡನ್ನು ನೋಡದ, ಮಾಡದ, ಅದರಿಂದ ಎಂದೂ ಆಡದ ನಿಮಗೆ ಊಹಿಸಲು ಸಾಧ್ಯವಿಲ್ಲ. ಆ ಚೆಂಡನ್ನು ನೆಲಕ್ಕೆ ಇಕ್ಕುವಂತಿಲ್ಲ. ಅದು ಪುಟಿದು ಏರುವ, ಓಡುವ ವೇಗ ಕಲ್ಪನಾತೀತ. ಮಾಮೂಲು ಚೆಂಡಲ್ಲಿ ಆಟ ಆಡಿ ಅದು ಹೀಗೆಯೇ ಎಂದು ನಿಯಂತ್ರಿಸುತ್ತಿದ್ದ ಕೈ-ಮನಸ್ಸಿಗೆ ಈ ಚೆಂಡು ಹತೋಟಿಗೆ ಸಿಗುವುದೇ ಇಲ್ಲ. ಈ ಕಾರಣಕ್ಕಾಗಿಯೇ ಸಂಜೆಯ ಆಟಕ್ಕೆಂದು ಒಂದೊಂದು ಚೆಂಡು ಒಯ್ದರೆ ಅದು ಮನೆಗೆ ಮುಟ್ಟುತ್ತಲೇ ಇರಲಿಲ್ಲ. ಕೂಪು ಇಳಿಯುವಾಗ ಕೈತಪ್ಪಿ ಇಳಿಜಾರಲ್ಲಿ ಬಿದ್ದರೆ ಮುಗಿದೇ ಹೋಯಿತು. ಕ್ಷಣಾರ್ಧದಲ್ಲಿ ಜಂಪು ಹೊಡೆದು ಗುಡ್ಡ ಗುಡ್ಡಗಳಿಂದ ಗುಡ್ಡಕ್ಕೆ ಪಲ್ಟಿ ಹೊಡೆದು ಅದು ಪಾತಾಳ ಸೇರುತ್ತಿತ್ತು. ಬಣ್ಣ ರೂಪ ಯಾವುದೂ ಇಲ್ಲದ ಅಂಥ ಚೆಂಡನ್ನು ಹುಡುಕಿ ಹುಡುಕಿ ಪತ್ತೆ ಮಾಡುವ ಗೋಜಿಗೆ ಹೋಗದೆ ನಾವು ಅದೇ ಹೊತ್ತಿಗೆ ಬೇರೆ ನಾಲ್ಕೈದು ಚೆಂಡುಗಳನ್ನು ಮಾಡಿಕೊಂಡು ಮನೆದಾರಿ ಹಿಡಿಯುತ್ತಿದ್ದೆವು.

ಸಾಮಾನ್ಯವಾಗಿ ಅಂತ ರಬ್ಬರ್ ಚೆಂಡು ಬಳಸಿ ನಾವು ಆಡುತ್ತಿದ್ದುದು ಎರಡೇ ಆಟ. ಲಗೋರಿ ಮತ್ತು ಕ್ರಿಕೆಟ್. ಕ್ರಿಕೆಟ್ಟೇ ಹೆಚ್ಚು. ಕೊತ್ತಳಿಂಗೆಯ ಬ್ಯಾಟು. ಆಟಗಾರರು ತುಂಬ ಕಮ್ಮಿ. ಅದಕ್ಕೆ ವಿಕೆಟ್‌ಕೀಪರ್‌ನ್ನು ಉಳಿಸುವ ಉದ್ದೇಶದಿಂದ ಮನೆಯ ಜಗಲಿಯನ್ನೇ ಗೆರೆ ಹಾಕಿ ಗುರುತಿಸಿ ವಿಕೆಟ್ ಮಾಡಿ ಆಟ ಆಡುತ್ತಿದ್ದೆವು. ಒಂದು ಸಂಜೆ ನಾನು ಬ್ಯಾಟಿಂಗ್ ಮಾಡುತ್ತಿದ್ದೆ. ಶಾಂತಣ್ಣ ಬೌಲಿಂಗ್. ಫೀಲ್ಡಿಂಗ್ ನಿಂತವ ಏಕೈಕ ಸೋಂಪ. ನಮ್ಮ ಮನೆಯ ಟಾಮಿಗೆ ರಬ್ಬರ್ ವಾಸನೆ ತುಂಬಾ ಆಪ್ಯಾಯಮಾನವಾದ ಕಾರಣ ಅದು ಆಲ್‌ರೌಂಡರ್ ಆಗಿ ಅಂಗಳ ತುಂಬಾ ದಾಂಗುಡಿ ಇಡುತ್ತಿತ್ತು. ಆಗಾಗ ಶಾಂತಣ್ಣ ಸಿಕ್ಸರ್ ಹೊಡೆದ್ರು ಗುಡ್ಡೆ, ತೋಡಿಗೆ ಇಳಿದು ರಬ್ಬರ್ ಚೆಂಡು ತಂದು ಕೊಡುತ್ತಿತ್ತು.

ನಮ್ಮ ಬಿರುಸಿನ ಆಟವನ್ನು ಅಕ್ಕ ಮನೆಯೊಳಗೆ ನಿಂತೇ ನೋಡುವವರು ಯಾಕೋ ಅವತ್ತು ಜಗಲಿಗೆ ಬಂದು ಅಪ್ರಜ್ಞಾಪೂರ್ವಕವಾಗಿ ವಿಕೆಟ್ ಹತ್ತಿರವೇ ಮೇಲೆ ಜಗಲಿಯಲ್ಲಿ ನಿಂತಿದ್ದರು. ಬಹಳ ದೂರದಿಂದ ಶಾಂತಣ್ಣ ಓಡಿಕೊಂಡು ಬಂದು ಹಾಕಿದ ಅತ್ಯಂತ ವೇಗದ ಬೌಲ್ ಅಕ್ಕನ ಬಾಯಿಗೆ ಬಿತ್ತು. ಆ ಕ್ಷಣಕ್ಕೆ ಒಂದು ಹಲ್ಲು ರಟ್ಟಿದ್ದಕ್ಕೆ ಅವರಿಗೆ ಅಷ್ಟೇನೂ ನೋವು ಆದ ಹಾಗೆ ಕಾಣಿಸಲಿಲ್ಲ. ಆದರೆ ಟಾಮಿ ತೋಡು, ಗುಡ್ಡೆ ಎಂದು ಎಲ್ಲೆಲ್ಲೋ ಬಿದ್ದಿದ್ದ ಚೆಂಡನ್ನು ಬಾಯಿಯಲ್ಲಿ ಕಚ್ಚಿ ತಂದಿದ್ದ ಆ ಬಾಲ್‌ನ ಸಹಜ ಕಮಟು ವಾಸನೆ ಮತ್ತು ನಾಯಿ ಎಂಜಲು ವಾಕರಿಕೆ ತರಿಸಿತ್ತು. ಒಂದು ಕಡೆ ಸಹಜವಾಗಿ ವಸಡಿನಿಂದ ಜಿನುಗುವ ರಕ್ತ, ಮತ್ತೊಂದು ಕಡೆ ಅದೆಲ್ಲಾ ನೆನಪಾಗಿ ವಾಂತಿಗಾಗಿ ವಾಕರಿಕೆ. ಅಲ್ಲಿಗೆ ಅಮ್ಮ, ಕೆಲಸದ ನಾರ್ಣಣ್ಣ ಓಡಿ ಬಂದು ಆ ಸಂದರ್ಭ, ಸನ್ನಿವೇಶ ಅಯೋಮಯವಾಗಿ ಕ್ಷಣದಲ್ಲಿ ಅಂಗಳದಲ್ಲಿದ್ದ ಪುಂಡರ ಕ್ರಿಕೆಟ್ ಟೀಮ್ ನಾಪತ್ತೆಯಾಗಲೇ ಬೇಕಾಯಿತು. ಮುಂದೆ ಯಾವತ್ತೂ ಅಕ್ಕ, ಅಮ್ಮ, ಮನೆಮಂದಿ ನಾವು ಆಡುವಾಗ ಜಗಲಿ ಗ್ಯಾಲರಿಗೆ ಬರಲೇ ಇಲ್ಲ.                       

 

*ಲೇಖಕರು ಪುತ್ತೂರು ತಾಲೂಕಿನ ದೇರ್ಲ ಗ್ರಾಮದವರು; ಕನ್ನಡ ಪ್ರಾಧ್ಯಾಪಕರು. ಪತ್ರಕರ್ತರಾಗಿ, ಅಂಕಣಕಾರರಾಗಿ ಪರಿಚಿತರು. ಪರಿಸರ, ಕೃಷಿ ಆಸಕ್ತಿಯ ಕ್ಷೇತ್ರಗಳು. ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

Leave a Reply

Your email address will not be published.