ರಾಗಾಭೈರವಿ ಬಿಡುಗಡೆಯಾಗದ ಸದಭಿರುಚಿ ಸಿನಿಮಾ

ಬಿಡುಗಡೆ ಆಗದ, ಒಟಿಟಿಗೂ ಬಾರದ ಸಿನಿಮಾಗಳು ಹೇಗಿವೆ ಎಂಬ ಕುತೂಹಲ ನನ್ನಂತೆ ಅನೇಕರಿಗೆ ಇರಬಹುದು. ಅಂಥದೊಂದು ಸಿನಿಮಾ ನೋಡುವ ಅವಕಾಶ ಇತ್ತೀಚೆಗೆ ಸಿಕ್ಕಿತು.

ಪ್ರೇಮಕುಮಾರ್ ಹರಿಯಬ್ಬೆ

 

 

 

 ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳ ನಿರ್ಮಾಣ ಹೆಚ್ಚಾಗಿದೆ. ಕಳೆದ ವರ್ಷವೊಂದರಲ್ಲೇ 190 ಸಿನಿಮಾಗಳು ಬಿಡುಗಡೆ ಆಗಿವೆ. ಈ ಸಿನಿಮಾಗಳನ್ನು ಎಷ್ಟು ಜನ ನೋಡಿದರು? ಅವಕ್ಕೆ ಹಾಕಿದ್ದ ಬಂಡವಾಳ ಹಿಂದಕ್ಕೆ ಬಂತೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಯಾರಲ್ಲೂ ಇಲ್ಲ. ಬಿಡುಗಡೆಯೇ ಆಗದ ಸಿನಿಮಾಗಳೂ ಇವೆ. ಅವು ಯಾವಾಗ ಬಿಡುಗಡೆ ಆಗುತ್ತವೆ? ಬಿಡುಗಡೆ ಆಗದಿದ್ದರೆ ಅವುಗಳ ನಿರ್ಮಾಪಕರ ಗತಿ ಏನು?

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಅನೇಕ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ. ಅಪರೂಪಕ್ಕೆ ಬಿಡುಗಡೆ ಆದರೂ ಜನ ನೋಡಲು ಬರುವಷ್ಟರಲ್ಲೇ ಅವು ಚಿತ್ರಮಂದಿರದಿಂದ ಎತ್ತಂಗಡಿ ಆಗಿಬಿಡುತ್ತವೆ. ಇಂಥ ಸಿನಿಮಾಗಳನ್ನು ಜನ ನೋಡುವುದಿಲ್ಲ ಅಂತ ಚಿತ್ರ ಮಂದಿರದವರೇ ಹೇಳುತ್ತಾರೆ. ಬೆಂಗಳೂರು ಬಿಟ್ಟು ರಾಜ್ಯದ ಉಳಿದ ಭಾಗದ ಜನರಿಗೆ ಈ ಪ್ರಶಸ್ತಿ ಪಡೆದ ಸಿನಿಮಾಗಳು ಹೇಗಿವೆ ಎಂಬುದು ಗೊತ್ತೇ ಆಗುವುದಿಲ್ಲ. ಅವುಗಳ ಕುರಿತು ಪ್ರಕಟವಾದ ಸುದ್ದಿ, ವಿಮರ್ಶೆಗಳಷ್ಟೇ ಓದಲು ಸಿಗುತ್ತವೆ.

ಸಂಗೀತ ನಿರ್ದೇಶಕಿ: ಡಾ. ಜಯದೇವಿ ಜಂಗಮಶೆಟ್ಟಿ

ಸಿನಿಮಾ ಮಾಡುವವರ ಲೆಕ್ಕಾಚಾರಗಳೇ ಅರ್ಥವಾಗುವುದಿಲ್ಲ! ಸಿನಿಮಾ ಬಿಡುಗಡೆ ಆಗದಿದ್ದರೂ ಪರವಾಗಿಲ್ಲ ಪ್ರಶಸ್ತಿ ಸಿಕ್ಕರೆ ಸಾಕು. ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾದರೆ ಸಾಕು. ಅದರಿಂದ ಸಬ್ಸಿಡಿ ಸಿಗುತ್ತದೆ. ಸಬ್ಸಿಡಿ ಸಿಕ್ಕರೆ ಸ್ವಲ್ಪ ಮಟ್ಟಿಗೆ ನಾವು ಸೇಫ್ ಆಗುತ್ತೇವೆ ಎಂಬ ಲೆಕ್ಕಾಚಾರ ಹಲವರದು. ಪ್ರಶಸ್ತಿ, ಸಬ್ಸಿಡಿಗೆ ನಡೆಸುವ ಲಾಬಿ, ರಾಜಕೀಯ ಇತ್ಯಾದಿಗಳ ವಿವರ ಕೇಳಿಸಿಕೊಂಡರೂ ಜುಗುಪ್ಸೆ ಹುಟ್ಟುತ್ತದೆ. ಎಲ್ಲವೂ ಸಿನಿಮಾಕ್ಕಾಗಿ ಎಂಬ ಸಮರ್ಥನೆ ಬೇರೆ. ಇನ್ನು ದೊಡ್ಡ ಬಜೆಟ್‌ನ ಸಿನಿಮಾ ಮಾಡಿ ಸೋತವರಿಗೆ ಮತ್ತೊಂದು ಸಿನಿಮಾ ಮಾಡಿ ಗೆಲ್ಲುವ ಹಠ. ಹೀಗೆ ಒಬ್ಬೊಬ್ಬರದು ಒಂದೊಂದು ಲೆಕ್ಕಾಚಾರ. ಈಗ ಕೋವಿಡ್ ಹಾವಳಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. 

ಸಹ ನಿರ್ದೇಶಕ: ಮಾಲತೀಶ್ ಭಟ್

ಆದರೆ ಜನ (ಸಿನಿಮಾಸಕ್ತರು) ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಿನಿಮಾ ನೋಡುವ ಹವ್ಯಾಸ ಬೆಳೆಸಿಕೊಂಡವರಿಗೆ ಈಗ ಟಿವಿಗಳಲ್ಲಿ ಹತ್ತಾರು ಸಿನಿಮಾಗಳು ಸಿಗುತ್ತವೆ. ಚಿತ್ರಮಂದಿರಗಳು ಮುಚ್ಚಿದ್ದರೂ ಮನೆಯಲ್ಲೇ ಕೂತು ಹಲವು ಭಾಷೆಗಳ ಹಳೆಯ, ಹೊಸ ಮತ್ತು ಕನ್ನಡಕ್ಕೆ ಡಬ್ ಆದ ಸಿನಿಮಾಗಳನ್ನು ನೋಡಲು ಒಟಿಟಿ ಎಂಬ ವೇದಿಕೆ ಅವರಿಗೆ ಸಿಕ್ಕಿದೆ! ಈ ಒಟಿಟಿಯಿಂದ ನಮ್ಮ ಸಿನಿಮಾ ಉದ್ಯಮಕ್ಕೆ ಏನಾದರೂ ಪ್ರಯೋಜನ ಇದೆಯೇ? ಅದೂ ಗೊತ್ತಿಲ್ಲ.  

ಒಂದೊಂದು ಸಿನಿಮಾ ನಿರ್ಮಾಣದ ಹಿಂದೆ ಹತ್ತಾರು ಜನರ ಸಾಮೂಹಿಕ ಪರಿಶ್ರಮ ಇರುತ್ತದೆ. ಜೀವನ ನಿರ್ವಹಣೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಬರುವ ಅಸಂಖ್ಯ ಯುವ ಜನರ ಕನಸುಗಳಿವೆ.  ಹೇಗಾದರೂ ಮಾಡಿ ಸಿನಿಮಾ ಮಾಡಬಹುದು. ಆದರೆ ಅದನ್ನು ಜನರಿಗೆ ತಲುಪಿಸುವುದು ಕಷ್ಟ. ಇದು ಬಹುತೇಕ ನಿರ್ಮಾಪಕರ ಅನುಭವ. ಚಿತ್ರಮಂದಿರಗಳ ಬಾಡಿಗೆ ತೆತ್ತು ಸಿನಿಮಾ ಬಿಡುಗಡೆ ಮಾಡುವುದು ಅನೇಕರಿಗೆ ಸಾಧ್ಯವೇ ಇಲ್ಲ. ಇನ್ನು ಸಮುದಾಯಗಳತ್ತ ಸಿನಿಮಾಗಳನ್ನು ಒಯ್ಯುವುದು ಈಗ ಕಷ್ಟ.

ಈಗ ಒಟಿಟಿಯಲ್ಲೂ ಹಿಂದಿ, ಮಲಯಾಳಂ, ಮರಾಠಿ, ಇಂಗ್ಲಿಷ್, ತೆಲುಗು, ತಮಿಳು ಸಿನಿಮಾಗಳದೇ ಅಬ್ಬರ. 2019ರ ಕೆಲ ಕನ್ನಡ ಸಿನಿಮಾಗಳು ಈ ವೇದಿಕೆಗೆ ಬಂದಿವೆ. ನೋಡುಗರಿಗೆ ಅಲ್ಲಿ ಬೇಕಾದಷ್ಟು ಆಯ್ಕೆ ಇರುವುದರಿಂದ ಕನ್ನಡ ಸಿನಿಮಾಗಳು ಹಿಂದೆ ಬೀಳುತ್ತಿವೆ. ಕನ್ನಡದ ಅಭಿಮಾನಕ್ಕಾಗಿ ಸಿನಿಮಾ ನೋಡುವವರು ಈಗಲೂ ಇದ್ದಾರೆಯೇ? ಹೇಳುವುದು ಕಷ್ಟ. 

ಬಿಡುಗಡೆ ಆಗದ, ಒಟಿಟಿಗೂ ಬಾರದ ಸಿನಿಮಾಗಳು ಹೇಗಿವೆ ಎಂಬ ಕುತೂಹಲ ನನ್ನಂತೆ ಅನೇಕರಿಗೆ ಇರಬಹುದು. ಅಂಥದೊಂದು ಸಿನಿಮಾ ನೋಡುವ ಅವಕಾಶ ಈಚೆಗೆ ಸಿಕ್ಕಿತು.

ನಿರ್ಮಾಪಕ: ಸ.ಹರೀಶ್

ಈ ಸಿನಿಮಾ ಹೆಸರು ರಾಗಭೈರವಿ. 2019ರ ಮೈಸೂರು ದಸರಾ ಚಿತ್ರೋತ್ಸವ, 2019ರ ಕೋಲ್ಕತ್ತ ಮತ್ತು 2020ರ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನವಾಗಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಹಿಂದೂಸ್ಥಾನಿ ಗಾಯಕಿಯೊಬ್ಬಳ ಬದುಕನ್ನು ಕಟ್ಟಿಕೊಡುವ ಸಿನಿಮಾ. ಭೈರವಿ ನಾಯಕಿಯ ಹೆಸರು. ಅದು ರಾಗದ ಹೆಸರೂ ಹೌದು. ಅವಳು ಅಮ್ಮನ ಆರೈಕೆಯಲ್ಲಿ ಬೆಳೆದವಳು. ಅಪ್ಪ ಎಳೆಯ ವಯಸ್ಸಿನಲ್ಲೇ ಅವಳಿಂದ ದೂರವಾಗಿದ್ದಾನೆ. ಅವಳನ್ನು, ಅವಳ ಗಾಯನವನ್ನೂ ಇಷ್ಟಪಡುವ ಆನಂದ ಎಂಬ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಸುಂದರ ಬದುಕು ಕಟ್ಟಿಕೊಳ್ಳುವ ಕನಸು ನನಸಾಗುವ ಮೊದಲೇ ಅವಳಿಗೆ ಗಂಟಲು ಕ್ಯಾನ್ಸರ್ ಇರುವುದು ಪತ್ತೆ ಆಗುತ್ತದೆ. ಕ್ಯಾನ್ಸರ್ ತನ್ನನ್ನು ನಾಶ ಮಾಡಿಬಿಡುತ್ತದೆ ಎಂಬ ಭಯ ಅವಳಿಗೆ. ಆನಂದ ಕ್ಯಾನ್ಸರ್ ಗೆಲ್ಲುವ ವಿಶ್ವಾಸವನ್ನು ಅವಳಲ್ಲಿ ಹುಟ್ಟಿಸುತ್ತಾನೆ. ಪ್ರತಿ ಹಂತದಲ್ಲೂ ಅವಳಿಗೆ ಒತ್ತಾಸೆಯಾಗಿ ನಿಲ್ಲುತ್ತಾನೆ. ಈ ಹೋರಾಟದಲ್ಲಿ ವೈದ್ಯರ ಚಿಕಿತ್ಸೆ ಮತ್ತು ಸಂಗೀತ ಅವಳ ಪಾಲಿಗೆ ಸಂಜೀವಿನಿ ಆಗುತ್ತದೆ. ಇದು ಸಿನಿಮಾದ ಹೂರಣ.

ಗ್ರಾಮೀಣ ಪ್ರತಿಭೆ 

ವೆಂಕಟೇಶ್ ಕೊಟ್ಟೂರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನವರು. ಅವರ ತಂದೆ ಆರೋಗ್ಯ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರಿಂದ ಅವರ ಕುಟುಂಬ ಬಳ್ಳಾರಿ, ಕಲಬುರಗಿ, ಅಳಂದ ಮತ್ತಿತರ ಊರುಗಳಲ್ಲಿ ಸುತ್ತಾಡಿ ಕೊನೆಗೆ ಕೊಟ್ಟೂರಿಗೆ ಬಂದು ನೆಲೆಸಿತು. ವೆಂಕಟೇಶ್ ಹೆಸರಿನ ಜತೆ ಕೊಟ್ಟೂರು ಸೇರಿಕೊಂಡಿದ್ದು ಈ ಕಾರಣದಿಂದ.

ವೆಂಕಟೇಶ್ ಬಾಲ್ಯದಿಂದಲೇ ಸಿನಿಮಾ ನೋಡುತ್ತ ಬೆಳೆದವರು. ಕನ್ನಡ, ತೆಲುಗು ಸಿನಿಮಾಗಳನ್ನು ನೋಡುತ್ತ ತಾನೂ ಸಿನಿಮಾ ಸೇರಬೇಕು ಎಂಬ ಕನಸು ಕಂಡರು. ಸಾಮಾನ್ಯ ಕುಟುಂಬದಿಂದ ಬಂದ ಅವರಿಗೆ ಸಿನಿಮಾದ ದಾರಿ ಗೊತ್ತಿರಲಿಲ್ಲ. ತೋರಿಸುವವರೂ ಇರಲಿಲ್ಲ. ಅವರದು ಏಕಲವ್ಯ ಪ್ರಯತ್ನ.

ಮಂಗಳೂರಿನಲ್ಲಿ ಆಗಾಗ ಸಿನಿಮಾ ಶೂಟಿಂಗ್ ನಡೆಯುತ್ತದೆ ಎನ್ನುವುದನ್ನು ಕೇಳಿ ತಿಳಿದಿದ್ದ ವೆಂಕಟೇಶ್ ಅಲ್ಲಿದ್ದ ಅಕ್ಕ, ಭಾವನ ಮನೆಗೆ ಹೋದರು. ಅಲ್ಲಿಯೇ ಒಂದು ಕೆಲಸಕ್ಕೂ ಸೇರಿದರು. ಆಗಾಗ ನಡೆಯುತ್ತಿದ್ದ ಸಿನಿಮಾ ಶೂಟಿಂಗ್ ನೋಡಲು ಹೋಗುತ್ತಿದ್ದರು. ಒಮ್ಮೆ ಅಲ್ಲಿಗೆ ಶೂಟಿಂಗ್‌ಗಾಗಿ ಬಂದ ನಿರ್ದೇಶಕ ಪಿ.ಶೇಷಾದ್ರಿ ಅವರನ್ನು

ಪರಿಚಯ ಮಾಡಿಕೊಂಡು, ಸಿನಿಮಾ ಸೇರುವ ಆಸೆ ಹೇಳಿಕೊಂಡರು. ಶೇಷಾದ್ರಿ ತಮ್ಮ ಸಿನಿಮಾ, ಸೀರಿಯಲ್‌ಗಳಲ್ಲಿ ನೆರವಾಗಲು ಬೆಂಗಳೂರಿಗೆ ಬಾ ಎಂದರು. ವೆಂಕಟೇಶ್ ಹಿಂದೆಮುಂದೆ ನೋಡದೆ ಬೆಂಗಳೂರು ಬಸ್ಸು ಹತ್ತಿದರು.

ಅತಿಥಿ, ಬೇರು, ತುತ್ತೂರಿ ಸಿನಿಮಾಗಳು, ಟಿವಿ ಧಾರಾವಾಹಿಗಳ ನಿರ್ಮಾಣದಲ್ಲಿ ಶೇಷಾದ್ರಿ ಅವರಿಗೆ ನೆರವಾದರು. ಅವರ ಬಳಿ ಕೆಲಸ ಇಲ್ಲದಾಗ ಬೇರೆ ನಿರ್ದೇಶಕರ ಟಿವಿ ಧಾರಾವಾಹಿಗಳತ್ತ ತಿರುಗಿದರು. ಕಣ್ಣಾಮುಚ್ಚಾಲೆ, ನಿಕ್ಷೇಪ, ಉಯ್ಯಾಲೆ, ಮೌನರಾಗ, ಪಾಪ ಪಾಂಡು, ಪ್ರೀತಿ ಇಲ್ಲದ ಮೇಲೆ ಇತ್ಯಾದಿ ಹಲವು ಧಾರಾವಾಹಿಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದರು. ಪುಣ್ಯಕೋಟಿಯ (700ಕ್ಕೂ ಹೆಚ್ಚು) ಸಂಚಿಕೆ ನಿರ್ದೇಶನ ಮಾಡಿದರು. ಚಿತ್ರಲೇಖ ಧಾರಾವಾಹಿಯ ಸ್ವತಂತ್ರ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಲೇ ಸಿನಿಮಾ ನಿರ್ದೇಶನ ಮಾಡುವ ಕನಸು ಕಂಡರು. ರಾಗಭೈರವಿ ಮೂಲಕ ಅವರ ಕನಸು ನನಸಾಗಿದೆ. ಅದರಲ್ಲಿ ಅವರ ಪರಿಶ್ರಮ, ಅಚ್ಚುಕಟ್ಟುತನ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ.

ಅವರು ಇನ್ನೂ ಕೆಲ ಸಿನಿಮಾಗಳನ್ನು ಮಾಡುವ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಗಭೈರವಿ ತೆರೆಯ ಮೇಲೆ ಬಂದರೆ ಅದು ಚಿತ್ರೋದ್ಯಮದ ಗಮನ ಸೆಳೆಯುತ್ತದೆ. ತಮ್ಮಿಂದ ಚಿತ್ರ ಮಾಡಿಸಲು ನಿರ್ಮಾಪಕರು ಮುಂದೆ ಬರುತ್ತಾರೆ ಎಂಬ ಆಸೆ ಅವರದು.

ನಿರ್ದೇಶಕ: ವೆಂಕಟೇಶ್ ಕೊಟ್ಟೂರು

ಸ.ಹರೀಶ್ ಅವರ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವ ಪ್ರಯತ್ನದಲ್ಲಿ ನಿರ್ದೇಶಕ ವೆಂಕಟೇಶ್ ಕೊಟ್ಟೂರು ಅವರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿರುವುದು ಸಂಗೀತ. ಕ್ಯಾನ್ಸರ್ ರೋಗಿಗಳಿಗೆ ಈ ಸಿನಿಮಾ ಭರವಸೆ ಹುಟ್ಟಿಸಬಹುದೇ? ಅದು ಸಿನಿಮಾದ ಆಶಯ. ಈಗ ಬರುತ್ತಿರುವ ಅನೇಕ ಸಿನಿಮಾಗಳಿಗಿಂತ ರಾಗಭೈರವಿ ಖಂಡಿತವಾಗಿಯೂ ಭಿನ್ನವಾಗಿದೆ. ನೋಡುಗರಲ್ಲಿ ಸಂಗೀತದ ರುಚಿ ಹುಟ್ಟಿಸುತ್ತದೆ. ಸಿನಿಮಾದ ಉದ್ದಕ್ಕೂ ಮಂದಗಾಮಿನಿಯಂತೆ ಸಂಗೀತ ಧಾರೆ ಹರಿಯುತ್ತ ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತದೆ. ರಾಗಭೈರವಿ ನೋಡುವಾಗ ಕನ್ನಡದ ಸಂಧ್ಯಾರಾಗ, ತೆಲುಗಿನ ಶಂಕರಾಭರಣಂ ಇತ್ಯಾದಿ ಸಂಗೀತ ಸಿನಿಮಾಗಳು ನೆನಪಾಗುತ್ತವೆ.

ವೆಂಕಟೇಶ್ ಕೊಟ್ಟೂರು ಹಲವು ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ದುಡಿದ ಅನುಭವಿ. ಮೊದಲ ಸಿನಿಮಾದಲ್ಲೇ ಅವರು ಭರವಸೆ ಹುಟ್ಟಿಸುತ್ತಾರೆ. ಟಿವಿ ಧಾರಾವಾಹಿಗಳ ಅನುಭವಿ ಕಲಾವಿದರನ್ನೇ ಬಳಸಿಕೊಂಡು ಸಿನಿಮಾ ಮಾಡುವ ಅವರ ಕನಸಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿರುವುದು ಸಂಗೀತ ಮತ್ತು ಅವರ ಶ್ರಮದ ದುಡಿಮೆ.

ಪ್ರಸಿದ್ಧ ಹಿಂದೂಸ್ಥಾನಿ ಗಾಯಕಿ ಹಾಗೂ ಕಲಬುರಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಜಯದೇವಿ ಜಂಗಮಶೆಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಗಾಯನ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಬಸವಣ್ಣ, ಅಲ್ಲಮ ಪ್ರಭು ಇತ್ಯಾದಿ ಶರಣರ ವಚನಗಳು, ಚೆನ್ನವೀರ ಕಣವಿ ಅವರ ಭಾವಗೀತೆ, ತತ್ವಪದ ಮತ್ತು ಕಾಲಜ್ಞಾನದ ಪದ್ಯಗಳಿಗೆ ರಾಗ ಸಂಯೋಜನೆ ಮಾಡಿ ಜಯದೇವಿ ಸೊಗಸಾಗಿ ಹಾಡಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಗಾಯಕಿಯನ್ನು ತೆರೆಯ ಮೇಲೆ ನಿರೂಪಿಸುವ ಪ್ರಯತ್ನದಲ್ಲಿ ಜಯದೇವಿ ಮತ್ತು ವೆಂಕಟೇಶ್ ಅವರ ಪರಿಶ್ರಮ ಚಿತ್ರದ ಉದ್ದಕ್ಕೂ ಎದ್ದು ಕಾಣುತ್ತದೆ. ಇಬ್ಬರೂ ಅಭಿನಂದನೆಗೆ ಅರ್ಹರು.

ನಾಯಕಿ ಮಹಾಲಕ್ಷ್ಮೀ ಅವರಿಗೆ ಇದು ಮೊದಲ ಸಿನಿಮಾ. ಭರತನಾಟ್ಯದಲ್ಲಿ ಪರಿಣತಿ ಪಡೆದಿರುವ ಅವರು ಚಿತ್ರದಲ್ಲಿ ಹಿಂದೂಸ್ಥಾನಿ ಗಾಯಕಿಯಾಗಿ ಇಷ್ಟವಾಗುತ್ತಾರೆ. ನಾಯಕ ಅಂಬರೀಶ್ ಸಾರಂಗಿ, ಪೋಷಕ ಪಾತ್ರದಲ್ಲಿ ದೀಪಾ ರವಿಶಂಕರ್, ಚಿತ್ಕಲಾ ಬಿರಾದಾರ್ ಅವರ ಅಭಿನಯ ಪ್ರಬುದ್ಧವಾಗಿದೆ. ಗಂಟಲು ಕ್ಯಾನ್ಸರಿಗೆ ಸಂಗೀತ ಥೆರಪಿ ಚಿಕಿತ್ಸೆ ಆಗಬಹುದೇ? ಹಾಗೊಂದು ಅಭಿಪ್ರಾಯವಿದೆ ಎನ್ನುತ್ತಾರೆ ವೆಂಕಟೇಶ್. ಅದು ಸಿನಿಮಾ ಸತ್ಯ. ಸಿನಿಮಾಗಳಲ್ಲಿ ತರ್ಕಕ್ಕೆ ಅವಕಾಶ ಇಲ್ಲವಲ್ಲ. ಕ್ಯಾನ್ಸರ್‌ನಿಂದಾಗಿ ಮಾತಾಡಲೂ ಕಷ್ಟಪಡುವ ನಾಯಕಿ ಕಛೇರಿಯಲ್ಲಿ ಹಾಡುವುದು ಒಂದು ಪವಾಡವೇ ಸರಿ! ಅಂಥ ಪವಾಡದ ಮೂಲಕವೇ ವೆಂಕಟೇಶ್ ಚಿತ್ರವನ್ನು ಸುಖಾಂತಗೊಳಿಸಿದ್ದಾರೆ.

ಕಡಿಮೆ ವೆಚ್ಚದಲ್ಲಿ ಉತ್ತಮ ಸಿನಿಮಾ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಈ ರಾಗಭೈರವಿ ಸಮರ್ಥ ಉತ್ತರ. ಈ ಸಿನಿಮಾ ಬಿಡುಗಡೆಯಾಗಿ ಹೆಚ್ಚಿನ ಸಂಖ್ಯೆಯ ಜನರು ನೋಡುವಂತಾಗಬೇಕು. ಅದು ಒಟಿಟಿಯಲ್ಲೂ ನೋಡಲು ಸಿಗಬೇಕು.

 

 

Leave a Reply

Your email address will not be published.