ರಾಜಕಾರಣದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕಾದವರು ಯಾರು?

ನಮ್ಮ ನಡುವಿನ ಅಪರೂಪದ ರಾಜಕಾರಣಿ ಬಿ.ಎಲ್.ಶಂಕರ್ ಅವರು ಇತ್ತೀಚೆಗಿನ ಅನರ್ಹ ಶಾಸಕರ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಲೋಪಗಳನ್ನು ಪಕ್ಷಾತೀತ ದೃಷ್ಟಿಕೋನದಲ್ಲಿ ವಿದ್ವತ್ಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ಕರ್ನಾಟಕದ 17 ಶಾಸಕರ ‘ಅನರ್ಹತೆ’ಯಂಥ ಅನೇಕ ಪ್ರಕರಣಗಳು ಈ ಹಿಂದಿನ ಹಲವಾರು ವರ್ಷಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಈವರೆಗೂ ಪೂರ್ಣಪ್ರಮಾಣದ ತೀರ್ಪು ಬಂದಿರಲಿಲ್ಲ. ಈಗಲೂ ಇಷ್ಟೊಂದು ತರಾತುರಿಯಲ್ಲಿ ತೀರ್ಪುನೀಡಬೇಕಾದ ಸಂದರ್ಭವಿರಲಿಲ್ಲ. ಈ ಪ್ರಕರಣವನ್ನು ವಿಸ್ತøತ ಸಾಂವಿಧಾನಿಕ ಪೀಠದ ಪರಾಮರ್ಶೆಗೆ ಒಳಪಡಿಸಿ ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ನಿಭಾಯಿಸಲು ಸಾಧ್ಯವಾಗುವಂತಹ ಪೂರ್ಣಪ್ರಮಾಣದ ತೀರ್ಪು ನೀಡುವ ಸುವರ್ಣಾವಕಾಶವೊಂದು ಸರ್ವೋಚ್ಚ ನ್ಯಾಯಾಲಯದ ಕೈಯಲ್ಲಿತ್ತು; ಅಂತಹ ಅವಕಾಶವನ್ನು ಸರ್ವೋಚ್ಚ ನ್ಯಾಯಾಲಯ ಕೈಚೆಲ್ಲಿತು.

ಒಂದು ಕಡೆಯಿಂದ ವಿಧಾನ ಸಭಾಧ್ಯಕ್ಷರ ತೀರ್ಪನ್ನು ಗೌರವಿಸಿ, ಇನ್ನೊಂದೆಡೆಯಿಂದ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಪ್ರಸ್ತುತ ತೀರ್ಪು ಗೊಂದಲಕ್ಕಂತೂ ಎಡೆಮಾಡಿದೆ. ಜನಪ್ರತಿನಿಧಿ ಮತದಾರರಿಗೆ ಉತ್ತರದಾಯಿಯಾಗಿರಬೇಕು. ಹೀಗಿರುವಲ್ಲಿ ಇದು ಮತದಾರರ ತೀರ್ಪನ್ನೇ ಅಗೌರವಿಸಿದಂತಲ್ಲವೇ? ಚುನಾಯಿತ ಜನಪ್ರತಿನಿಧಿಗಳ ಇಂತಹ ನಡೆ ಶಾಸಕತ್ವದ ಉಳಿದ ಅವಧಿ ಮಾತ್ರವಲ್ಲ; ಮುಂದಿನ ಒಂದು ನಿರ್ದಿಷ್ಟ ಅವಧಿವರೆಗೆ ಚುನಾವಣಾ ಸ್ಪರ್ಧೆಗೆ ನಿಷೇಧಕ್ಕೆ ಒಳಗಾಗಬೇಕು. ಅದಕ್ಕೆ ಅತ್ಯಂತ ಯೋಗ್ಯ ಪ್ರಕರಣವಿದಾಗಿತ್ತು!

ಪ್ರಸ್ತುತ ತೀರ್ಪಿನ ಹಿನ್ನೆಲೆಯಲ್ಲಿ ನೋಡುವುದಾದರೆ; ಈ ತೀರ್ಪಿನಿಂದ ಸಭಾಧ್ಯಕ್ಷರ ನ್ಯಾಯನಿರ್ಣಯ ವ್ಯಾಪ್ತಿಯ ಬಗೆಗಾಗಲೀ; ಮುಂದೆ ಇಂತಹ ನಡವಳಿಕೆ ಕಂಡುಬಂದಲ್ಲಿ ಅಂತಹ ‘ಚುನಾಯಿತ ಶಾಸಕ’ನಿಗೆ ನೀಡಬೇಕಾದ ಶಿಕ್ಷೆಯ ಬಗೆಗಾಗಲೀ ನಿರ್ದಿಷ್ಟ ವ್ಯಾಖ್ಯೆ ಕಂಡುಬರುತ್ತಿಲ್ಲ. ಹಾಗಾದರೆ ‘ಪಕ್ಷಾಂತರ ನಿಷೇಧ ಕಾಯಿದೆ’ಯ ಪ್ರಸ್ತುತತೆಯಾಗಲೀ, ಕಾಯಿದೆಯ ಅಧಿಕಾರವ್ಯಾಪ್ತಿಯಾಗಲೀ ನಿರ್ಧಾರವಾಗಬೇಕಿರುವುದು ಹೇಗೆ ಮತ್ತು ಎಲ್ಲಿ?

ಪಕ್ಷಾಂತರ ನಿಷೇಧ ಕಾಯಿದೆಯ ಅಗತ್ಯ ಪ್ರಥಮವಾಗಿ ಕಂಡುಬಂದಿದ್ದು 1960ರ ದಶಕದಲ್ಲಿ. 1967ರ ಮಹಾಚುನಾವಣೆಯಲ್ಲಿ 16 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ 8 ರಾಜ್ಯಗಳಲ್ಲಿ ಬಹುಮತ ಕಳೆದುಕೊಂಡು, ಉಳಿದ 7 ರಾಜ್ಯಗಳಲ್ಲಿ ಸರ್ಕಾರ ರಚಿಸಲು ವಿಫಲವಾಯಿತು. ಆ ನಂತರವೇ ಪ್ರಾರಂಭವಾದುದು ಕನಿಷ್ಠ ಸಾಮಾನ್ಯ ಕಾರ್ಯಕ್ರಮದ(common minimum programmes) ಮತ್ತು ಸಮ್ಮಿಶ್ರ ಸರ್ಕಾರಗಳ ಕಾಲ.

1967-71ರ ನಡುವಿನ ನಾಲ್ಕು ವರ್ಷಗಳಲ್ಲಿ ದೊಡ್ಡ ಮಟ್ಟದ ಪಕ್ಷಾಂತರಗಳು/ಶಾಸಕರ ವಲಸೆಗಳು ಪ್ರಾರಂಭವಾದುವು. ಅದು ಎಷ್ಟರಮಟ್ಟಿಗೆಂದರೆ; ಸಂಸತ್ತಿನಲ್ಲಿ 142 ಮಂದಿ ಹಾಗೂ ರಾಜ್ಯ ಶಾಸನಸಭೆಗಳಲ್ಲಿ ಒಟ್ಟು 1969 ಮಂದಿ ಪಕ್ಷನಿಷ್ಠೆಯನ್ನು ಬದಲಾಯಿಸಿದರು! ಈ ಪಕ್ಷಾಂತರಗಳು 32 ಸರ್ಕಾರಗಳನ್ನು ಕೆಡವಿದವು ಹಾಗೂ ಸರ್ಕಾರಗಳನ್ನು ಕೆಡವಿದ್ದಕ್ಕೆ 212 ಪಕ್ಷಾಂತರಿಗಳಿಗೆ ಮಂತ್ರಿಪದವಿ ನೀಡಿ ಗೌರವಿಸಲಾಯಿತು!

ಈ ರೀತಿಯ ಮಹಾಪತನಗಳಿಗೆ ನಾಂದಿಹಾಡಿದ್ದು ಹರಿಯಾಣದಲ್ಲಿನ ಕಾಂಗ್ರೆಸ್ ಸರ್ಕಾರ ಉರುಳುವ ಮೂಲಕ. ಸರ್ಕಾರ ಉರುಳಿಸಿದ ಪಕ್ಷಾಂತರಿ ನಾಯಕ, ರಾವ್ ಬೀರೆಂದರ್ ಸಿಂಗ್‍ಗೆ ಮುಖ್ಯಮಂತ್ರಿ ಪದವಿ ಲಭಿಸಿತು! ನಂತರದಲ್ಲಿ ಇನ್ನೊಬ್ಬ ಹರಿಯಾಣ ಶಾಸಕ, ಗಯಾಲಾಲ್ 15 ದಿನಗಳಲ್ಲಿ ಮೂರು ಬಾರಿ ಪಕ್ಷ ನಿಷ್ಠೆ ಬದಲಿಸಿ, ಈಗಿನ “ಆಯಾರಾಂ ಗಯಾರಾಂ” ಘೋಷವಾಕ್ಯದ ಸೃಷ್ಟಿಕರ್ತರಾದರು. ನಂತರದ್ದು ಈಗ ಇತಿಹಾಸ.

1992ರ Kihota Hollohon vs. Zachilhu ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಕಾಯಿದೆಯ ಅಗತ್ಯವನ್ನು ಎತ್ತಿಹಿಡಿಯುತ್ತಾ ‘ಅನರ್ಹತೆ ನಿರ್ಧಾರ ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟೇ ಇರಬೇಕು’ ಎಂದಿತು. ತಮ್ಮ ಸಂವಿಧಾನದತ್ತ ವಾಕ್‍ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಹುದೆಂಬ ಭೀತಿಯಲ್ಲಿ ಈ ಬಗ್ಗೆ ಕಠಿಣ ಕಾಯಿದೆಯನ್ನು ಜಾರಿಗೆ ತರುವಲ್ಲಿ ರಾಜಕೀಯ ಪಕ್ಷಗಳಲ್ಲಿ ಸಾಕಷ್ಟು ದೀರ್ಘ ಸಮಯ ಸಹಮತವಿರಲಿಲ್ಲ. ಕೊನೆಗೂ, 1985ರಲ್ಲಿ ರಾಜೀವ್ ಗಾಂಧಿ ಸರ್ಕಾರ ಅಗತ್ಯ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿ, ಕಾಯಿದೆಯಾಗಿ ಅನುಚ್ಛೇಧ(10)ರಲ್ಲಿ ಸೇರ್ಪಡೆಗೊಂಡಿತು. ಈ ಕಾಯಿದೆ ಪ್ರಕಾರ; ಶಾಸಕರು ಸ್ವಯಂಪ್ರೇರಣೆಯಿಂದ ತಮ್ಮ ಶಾಸಕ/ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ; ಎರಡು ಪಕ್ಷಗಳು ಪರಸ್ಪರ ವಿಲೀನವಾದಾಗ ಹಾಗೂ ಸದನದಲ್ಲಿನ ಪಕ್ಷದ ಶಾಸಕರ ಒಟ್ಟು ಸಂಖ್ಯೆಯ ಮೂರನೇ ಎರಡರಷ್ಟು ಮಂದಿ ಪಕ್ಷಾಂತರಮಾಡಿದಾಗ -ಈ ಮೂರು ಸಂದರ್ಭಗಳಲ್ಲಿ ಶಾಸಕತ್ವ ಅನರ್ಹತೆ ಪ್ರಶ್ನೆ ಅನ್ವಯವಾಗುವುದಿಲ್ಲ. ಪ್ರಾಯಶಃ ಸಂವಿಧಾನ ರಚನೆಯ ಆ ದಿನಗಳಲ್ಲಿ ಮುಂದೊಂದು ದಿನ ಪಕ್ಷದಿಂದ ಪಕ್ಷಕ್ಕೆ ಹಾರಿ ಪಕ್ಷಾಂತರ ಮಾಡುವ ಪಿಡುಗು ಇಷ್ಟೊಂದು ವ್ಯಾಪಕವಾಗಬಹುದು ಎಂಬ ಕಲ್ಪನೆ ಕನಸಲ್ಲೂ ಬಿದ್ದಿರಲಿಕ್ಕಿಲ್ಲ!

ಅಮೆರಿಕದ ಸಂಸತ್ತಿನಲ್ಲಿ ‘ವಿಪ್’ ಕೊಡುವ ಪದ್ಧತಿಯಿಲ್ಲ. ವಿಷಯಗಳ ಮೇಲೆ ಆತ್ಮಸಾಕ್ಷಿಗನುಗುಣವಾಗಿ ಪ್ರತಿನಿಧಿಗಳು ಮತ ಚಲಾಯಿಸಬಹುದು. ಇದು ರಾಜಕೀಯಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವದ ಅತ್ಯುನ್ನತ ಹಂತ. ಈ ಹಂತಕ್ಕೆ ನಮ್ಮ ಭಾರತದ ಸಂಸದೀಯ ಪ್ರಜಾಪ್ರಭುತ್ವವೂ ಏರುವ ದಿನವನ್ನು ನಾವು ನಿರೀಕ್ಷಿಸಬಹುದೇ?

ಪಕ್ಷಾಂತರವೆಂಬುದು ಭಾರತೀಯ ರಾಜಕಾರಣಕ್ಕೆ ಮಾತ್ರ ಸೀಮಿತವೇ? ಅಲ್ಲವಾದಲ್ಲಿ, ವಿಶ್ವದ ಇತರ ರಾಷ್ಟ್ರಗಳು ಇಂತಹ ಸನ್ನಿವೇಶಗಳನ್ನು ಹೇಗೆ ನಿಭಾಯಿಸುತ್ತಿವೆ?

ಎಷ್ಟರಮಟ್ಟಿಗೆ ಈ ಕಾಯಿದೆ ಈಗ ಪ್ರಸ್ತುತವಾಗಿ ಉಳಿದಿದೆ? ಖಂಡಿತವಾಗಿಯೂ ಈ ಕಾಯಿದೆ ಕಳೆದ 34 ವರ್ಷಗಳಲ್ಲಿ ಪಕ್ಷದ ಪ್ರಣಾಳಿಕೆಯೆಡೆಗಿನ ಬದ್ಧತೆ ಹಾಗೂ ಸರ್ಕಾರದ ಸ್ಥಿರತೆಯನ್ನು ಕಾಯ್ದುಕೊಂಡು ಬರುವಲ್ಲಿ ಸಹಕಾರಿಯಾಗಿದ್ದರೂ, ಸಂಸತ್ತು ಯಾ ಶಾಸನಸಭೆಗೆ ಆಡಳಿತಾರೂಢ ಸರ್ಕಾರ ಹೊಂದಿರಬೇಕಾದ ಉತ್ತರದಾಯಿತ್ವ ಹಾಗೂ ಪಕ್ಷದೊಳಗಿನ ನೀತಿ-ನಿರ್ಧಾರಗಳ ಬಗ್ಗೆ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಡಿಮೆಗೊಳಿಸಿದ್ದೂ ಸುಳ್ಳಲ್ಲ. ಪಕ್ಷಾಂತರವೆಂಬುದು ಭಾರತೀಯ ರಾಜಕಾರಣಕ್ಕೆ ಮಾತ್ರ ಸೀಮಿತವೇ? ಅಲ್ಲವಾದಲ್ಲಿ, ವಿಶ್ವದ ಇತರ ರಾಷ್ಟ್ರಗಳು ಇಂತಹ ಸನ್ನಿವೇಶಗಳನ್ನು ಹೇಗೆ ನಿಭಾಯಿಸುತ್ತಿವೆ? ಕುತೂಹಲಕಾರಿ ವಿಚಾರವೇನೆಂದರೆ; ವಿಶ್ವದ ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಸದಸ್ಯರನ್ನು ನಿಯಂತ್ರಿಸುವ ಇಂತಹ ಕಾಯಿದೆಗಳನ್ನೇ ರೂಪಿಸಿಲ್ಲ!

1931ರಲ್ಲಿ ಇಂಗ್ಲೆಂಡಿನಲ್ಲಿ ಪ್ರಥಮ ಲೇಬರ್ ಪ್ರಧಾನಮಂತ್ರಿ, ರಾಮ್ಸೆ ಮೆಕ್‍ಡೊನಾಲ್ಡ್ ದೇಶದ ಆರ್ಥಿಕ ಸಮಸ್ಯೆಗೆ ಸಂಬಂಧಿಸಿದಂತೆ ಪಕ್ಷದ ನೀತಿನಿರೂಪಣೆಯ ವಿರುದ್ಧ ಭಿನ್ನಮತ ಹೊಂದಿದ ಪರಿಣಾಮ ಇನ್ನು ಮೂವರು ಸಹೋದ್ಯೋಗಿ ಮಂತ್ರಿಗಳ ಜತೆ ಪಕ್ಷನಿಷ್ಠೆಯನ್ನು ಬದಲಾಯಿಸಿದ್ದರು. ಇವರಲ್ಲಿ ಯಾರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ ಮಾತ್ರವಲ್ಲ, ಹೊಸದಾಗಿ ಜನಾದೇಶವನ್ನೂ ಪಡೆಯಲಿಲ್ಲ! ಇಂತಹ ಪ್ರಕರಣಗಳು ಆಸ್ಟ್ರೇಲಿಯಾ, ಅಮೆರಿಕಾಗಳಲ್ಲೂ ನಡೆದಿವೆ.

ನಮ್ಮಲ್ಲಿ ಇದು ಯಾಕೆ ಸಾಧ್ಯವಾಗುತ್ತಿಲ್ಲ? ‘ಪಕ್ಷಾಂತರ ನಿಷೇಧ ಕಾಯಿದೆ’ಯ ಈಗಿನ ಪರಿಸ್ಥಿತಿ ಹಲ್ಲಿಲ್ಲದ ಹಾವಿನಂತೆ. ಕಾಯಿದೆ ಚಾಪೆಯಡಿ ನುಸುಳಿದರೆ ರಂಗೋಲಿಯಡಿ ನುಸುಳುವ ಪರಿಣತಿ ರಾಜಕಾರಣಿಯದು! ರಾಜಕಾರಣದಲ್ಲಿ ಸ್ವಲ್ಪಮಟ್ಟಿಗಾದರೂ ನೈತಿಕತೆಯನ್ನು ಪ್ರತಿಷ್ಠಾಪಿಸಬೇಕೆಂಬ ಮಹದಾಶಯದೊಂದಿಗೆ ಜಾರಿಗೆ ತಂದ ‘ಪಕ್ಷಾಂತರ ನಿಷೇಧ ಮಸೂದೆ’ಯನ್ನು ಭಾರತದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಂಡಿವೆ.

ಕರ್ನಾಟಕದಲ್ಲಿ ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ 16 ಶಾಸಕರ ಅನರ್ಹತೆ ವಿಚಾರದಲ್ಲಿ ಅಂದಿನ ವಿಧಾನಸಭಾ ಅಧ್ಯಕ್ಷರು ನಡೆದುಕೊಂಡ ರೀತಿ, ಸಭಾಧ್ಯಕ್ಷರ ಪಕ್ಷಪಾತಿ ನಡವಳಿಕೆಯನ್ನು ಹಾಗೂ ರಾಜಕಾರಣದಲ್ಲಿನ ನೈತಿಕತೆಯನ್ನೇ ಪ್ರಶ್ನಿಸುವಷ್ಟರಮಟ್ಟಿಗೆ ಸಾರ್ವಜನಿಕ ಚರ್ಚೆಗೆ ಒಳಗಾಗಿದ್ದು

ಪಿ.ವಿ.ನರಸಿಂಹರಾವ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಸದರ ಖರೀದಿ ಪ್ರಕರಣ; ಸೋಮನಾಥ ಚಟರ್ಜಿಯವರು ಲೋಕಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿದೇಶ ಪ್ರವಾಸದ ಬಗ್ಗೆ ನಕಲಿಬಿಲ್ಲುಗಳನ್ನು ನೀಡಿದ ಪ್ರಕರಣದಲ್ಲಿ 10 ಲೋಕಸಭಾ ಸದಸ್ಯರನ್ನು ಅಮಾನತುಗೊಳಿಸಿದ ಪ್ರಕರಣ; ಹರಿಯಾಣದಲ್ಲಿ ಭಜನ್‍ಲಾಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಯಾರಾಂ-ಗಯಾರಾಂ ಪ್ರಕರಣ; ತೆಲಂಗಾಣದಲ್ಲಿ ತೆಲುಗುದೇಶಂ ಶಾಸಕರು ಸಾಮೂಹಿಕವಾಗಿ ತೆಲಂಗಾಣ ರಾಷ್ತ್ರೀಯ ಪಕ್ಷವನ್ನು ಸೇರಿದ್ದ ಘಟನೆ; ತೆಲಂಗಾಣ ರಚನೆಗೆ ಒತ್ತಾಯಿಸಿ ಟಿ.ಆರ್.ಎಸ್. ಪಕ್ಷ ತನ್ನ 18 ಲೋಕಸಭಾ ಸದಸ್ಯರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದ ವಿದ್ಯಮಾನ; ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ದ ಹಿನ್ನೆಲೆಯಲ್ಲಿ 23 ಉಪಚುನಾವಣೆಗಳು ನಡೆಯುವಂತಾಗಿದ್ದು; ತಮಿಳುನಾಡಿನಲ್ಲಿ 18 ಮಂದಿ ಶಾಸಕರ ಅನರ್ಹತೆ ಮತ್ತು ತದನಂತರದಲ್ಲಿ ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟಿನಲ್ಲಿ ಎತ್ತಿಹಿಡಿದದ್ದು; ಕರ್ನಾಟಕದಲ್ಲಿ ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ 16 ಶಾಸಕರ ಅನರ್ಹತೆ ವಿಚಾರದಲ್ಲಿ ಅಂದಿನ ವಿಧಾನಸಭಾ ಅಧ್ಯಕ್ಷರು ನಡೆದುಕೊಂಡ ರೀತಿ, ಸಭಾಧ್ಯಕ್ಷರ ಪಕ್ಷಪಾತಿ ನಡವಳಿಕೆಯನ್ನು ಹಾಗೂ ರಾಜಕಾರಣದಲ್ಲಿನ ನೈತಿಕತೆಯನ್ನೇ ಪ್ರಶ್ನಿಸುವಷ್ಟರಮಟ್ಟಿಗೆ ಸಾರ್ವಜನಿಕ ಚರ್ಚೆಗೆ ಒಳಗಾಗಿದ್ದು ಹಾಗೂ ಈ ಪ್ರಕರಣ ನಂತರದಲ್ಲಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಒಳಗಾಗಿದ್ದು -ಇವೆಲ್ಲಾ ಇತಿಹಾಸದಲ್ಲಿ ದಾಖಲಾಗಿವೆ.

ರಾಮಾಯಣ ಕಾಲದಲ್ಲಿ ರಾವಣನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ರಾಮನೊಡನೆ ಕೈಜೋಡಿಸಿದ ವಿಭೀಷಣನಿಂದ ಪ್ರಾರಂಭಿಸಿ ತೀರಾ ಇತ್ತೀಚಿನ ಕರ್ನಾಟಕ-ಗೋವಾ-ತೆಲಂಗಾಣ ರಾಜ್ಯಗಳಲ್ಲಿನ ಹಾಗೂ ರಾಜ್ಯಸಭೆಯಲ್ಲಿ ತೆಲುಗುದೇಶಂ ಪಕ್ಷದ ಸಂಸದರ ಪಕ್ಷಾಂತರದವರೆಗೆ ಇತಿಹಾಸ ಮುಂದುವರಿದುಕೊಂಡು ಬಂದಿದೆ! ಸರಿಸುಮಾರು 60 ವರ್ಷಗಳ ಹಿಂದೆ ಡಾ.ಬಾಬು ರಾಜೇಂದ್ರ ಪ್ರಸಾದರು ಸಂಸತ್ತನ್ನುದ್ದೇಶಿಸಿ; ‘ಸಂವಿಧಾನದ ಮೌಲ್ಯ ಹಾಗೂ ಮಹತ್ವ ಅದರಲ್ಲಿ ಒಳಗೊಂಡ ವ್ಯಕ್ತಿಯ ಮೌಲ್ಯ ಮತ್ತು ಮಹತ್ವವನ್ನು ಅವಲಂಬಿಸಿದೆ’ ಎಂದಿದ್ದರು.

ಇದು ಆಡಳಿತಪಕ್ಷದ ಮರ್ಜಿಗೆ ಒಳಪಡುವ ಅಪಾಯವಿದ್ದು, ಸಾಂವಿಧಾನಿಕ ಮುಖ್ಯಸ್ಥನಾಗಿ ನಿಷ್ಪಕ್ಷಪಾತ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ ಮೂಡುವ ಸಂದರ್ಭವಿಲ್ಲದಿರುವುದು;

ಈಗಿನ ಕಾಯಿದೆಯಲ್ಲಿರುವ ಕೆಳಕಂಡ ಕೆಲವು ಬಹುಮುಖ್ಯ ದೋಷಗಳೇ ಆಡಳಿತ ಪಕ್ಷಗಳಿಗೆ ಆಮ್ಲಜನಕ ನೀಡಿ, ಕಾಯಿದೆಯನ್ನು ಇನ್ನಷ್ಟು ದುರ್ಬಲಗೊಳಿಸಿವೆ.

• ಚುನಾವಣಾಪೂರ್ವದಲ್ಲಿನ ಮೈತ್ರಿಪಕ್ಷವೊಂದು ಚುನಾವಣಾ ನಂತರದಲ್ಲಿ ನಿಷ್ಠೆ ಬದಲಾಯಿಸಿದರೆ ಕೈಗೊಳ್ಳುವ ಕ್ರಮವೇನು ಎಂಬ ಬಗ್ಗೆ ಸ್ಪಷ್ಟತೆಯಿಲ್ಲದಿರುವುದು;

• ಶಾಸಕರ ರಾಜೀನಾಮೆ ಅಂಗೀಕರಿಸುವಲ್ಲಿ ಸಭಾಧ್ಯಕ್ಷ/ಸಭಾಪತಿಗೆ ನಿರ್ದಿಷ್ಟ ಸಮಯದ ನಿಗದಿ ಇಲ್ಲದಿದ್ದು, ಇದು ಆಡಳಿತಪಕ್ಷದ ಮರ್ಜಿಗೆ ಒಳಪಡುವ ಅಪಾಯವಿದ್ದು, ಸಾಂವಿಧಾನಿಕ ಮುಖ್ಯಸ್ಥನಾಗಿ ನಿಷ್ಪಕ್ಷಪಾತ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ ಮೂಡುವ ಸಂದರ್ಭವಿಲ್ಲದಿರುವುದು;

• ನಿಷೇಧ ವೈಯಕ್ತಿಕ ಪಕ್ಷಾಂತರಕ್ಕೆ ಮಾತ್ರ ಸೀಮಿತವಾಗಿ ಸಾಮೂಹಿಕ ಅಥವಾ ಬಹುಸಂಖ್ಯೆಯ ಪಕ್ಷಾಂತರಕ್ಕೆ ನಿಷೇಧ ಅನ್ವಯವಾಗದಿರುವುದು;

• ರಾಜೀನಾಮೆ ನೀಡಿದ ಬಳಿಕದಲ್ಲಿ ತಕ್ಷಣವೇ ಶಾಸಕತ್ವ ಅನರ್ಹತೆ ಅನ್ವಯವಾಗದಿರುವುದು; ಒಂದುವೇಳೆ, ಅನರ್ಹನಾದರೂ ನಿಗದಿತ ಅವಧಿಗಿಂತ ಹೆಚ್ಚು ಸಮಯ ಶಾಸಕತ್ವವನ್ನು ಅನುಭವಿಸುವ ಸಂದರ್ಭ ಅನಾಯಾಸವಾಗಿ ಒದಗಿಬಂದಿರುವುದು ಇತ್ಯಾದಿ.

ಈ ಪಕ್ಷಾಂತರ ವ್ಯಾಧಿಯ ಮೂಲವಿರುವುದೇ ಚುನಾವಣಾ ರಾಜಕಾರಣದಲ್ಲಿ. ಅದೂ ಟಿಕೆಟ್ ಹಂಚಿಕೆ ಸಂದರ್ಭದಲ್ಲಂತೂ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇವಕ್ಕೆ ಪರಿಹಾರ ಸಾಧ್ಯತೆಗಳೇನು?

• ಲೋಕಸಭೆ ಹಾಗೂ ರಾಜ್ಯ ಶಾಸನಸಭೆಗಳಿಗೆ ನಿರ್ದಿಷ್ಟ ಅವಧಿಯನ್ನು (fixed tenure) ನಿಗದಿಗೊಳಿಸಬೇಕು.

• ಬಹುಮತ ಕಳಕೊಂಡಾಗ ಅಧಿಕಾರದಲ್ಲಿರುವ ಸರ್ಕಾರ ಅವಿಶ್ವಾಸಮತವನ್ನು ಹಾಗೂ ಪ್ರತಿಪಕ್ಷಗಳು ವಿಶ್ವಾಸಮತವನ್ನೂ ಏಕಕಾಲದಲ್ಲಿಯೇ ಎದುರಿಸುವಂತಾಗಬೇಕು.

• ಯಾವುದೇ ಶಾಸಕನ ರಾಜೀನಾಮೆ, ಅನರ್ಹತೆ ಅಥವಾ ಸಾವಿನಿಂದ ಸ್ಥಾನ ತೆರವಾದಾಗ ಉಪಚುನಾವಣೆ ನಡೆಸದೆ, ಚುನಾವಣೆಯಲ್ಲಿ ಸ್ಫರ್ಧಿಸಿದ ಎರಡನೇ ಸ್ಥಾನ ಪಡೆದಿದ್ದ ಅಭ್ಯರ್ಥಿಯನ್ನು ಉಳಿದ ಅವಧಿಗೆ ವಿಧಾನಸಭಾ/ಲೋಕಸಭಾ ಸದಸ್ಯನೆಂದು ಚುನಾವಣಾ ಆಯೋಗ ಘೋಷಿಸಬೇಕು.

• ಆರಿಸಿಬಂದ ಶಾಸಕ/ಸಂಸದ ತನ್ನ ಪಕ್ಷಕ್ಕೆ ರಾಜೀನಾಮೆ ನೀಡಿ, ಇನ್ನೊಂದು ಪಕ್ಷದಲ್ಲಿ ಸೇರ್ಪಡೆಯಾದರೆ ಅಂಥವರನ್ನು ತಕ್ಷಣದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು.

• ಜನತಾ ಪ್ರಾತಿನಿಧ್ಯ ಕಾಯಿದೆ ಹಾಗೂ ಚುನಾವಣಾ ಅಕ್ರಮ ಪ್ರಕರಣಗಳು ನ್ಯಾಯಾಲಯದಲ್ಲಿ ತೀರ್ಮಾನವಾಗಲು ಒಂದು ನಿರ್ದಿಷ್ಟ ಕಾಲಮಿತಿಯನ್ನು (ಆರು ತಿಂಗಳು) ನಿಗದಿಪಡಿಸಬೇಕು.

• ರಾಜಕೀಯಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ತರಬೇಕು.

• ಚುನಾವಣೆಯಲ್ಲಿ ಆಯ್ಕೆಯಾಗುವ ‘ಪಕ್ಷೇತರರ’ ಪಾತ್ರದ ಬಗ್ಗೆ ಮರುವ್ಯಾಖ್ಯಾನವಾಗಬೇಕು.

• ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ, ಸರ್ವೋಚ್ಚ ನ್ಯಾಯಾಲಯ, ಕೇಂದ್ರೀಯ ತನಿಖಾ ಸಂಸ್ಥೆಗಳು (CBI,ED), ಕೇಂದ್ರ ವಿಚಕ್ಷಣಾ ಆಯೋಗ (CVC), ಭಾರತೀಯ ರಿಸರ್ವ್ ಬ್ಯಾಂಕು (RBI) ಚುನಾವಣಾ ಸಂದರ್ಭಗಳಲ್ಲಿ ಕಂಡುಬರುವ ಭ್ರಷ್ಟಾಚಾರ ನಿಗ್ರಹ, ಕಪ್ಪುಹಣ ನಿಯಂತ್ರಣ, ಬೇನಾಮಿ ಆಸ್ತಿ ಮುಂತಾದ ಪ್ರಕರಣಗಳನ್ನು ನಿಭಾಯಿಸುವಲ್ಲಿ ಅನುಸರಿಸುವ ವಿಳಂಬನೀತಿಗೆ ಉತ್ತರದಾಯಿತ್ವವನ್ನು ನಿಗದಿಪಡಿಸಬೇಕು.

ಪಕ್ಷದ ಸಿದ್ಧಾಂತದ ಮೇಲೆ ಮತದಾರರಿಂದ ಆಯ್ಕೆಯಾದ ಜನಪ್ರತಿನಿಧಿ ತನ್ನ ಮತದಾರರಿಗೆ ಉತ್ತರದಾಯಿತ್ವವನ್ನು ಹೊಂದಿರುವುದನ್ನು ಬಿಟ್ಟು, ಕೇವಲ ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನೇ ಮುಂದಿಟ್ಟುಕೊಂಡು ಆಡುತ್ತಿರುವ ಈ ಪಕ್ಷಾಂತರದ ಆಟ ಪ್ರಜಾಪ್ರಭುತ್ವದ ಎಲ್ಲಾ ಆಶಯಗಳನ್ನು ಮಣ್ಣುಗೂಡಿಸುತ್ತಿರುವುದಂತೂ ಸತ್ಯ!

ಮೌಲ್ಯಗಳನ್ನು ರೂಢಿಸಿಕೊಂಡ ವ್ಯಕ್ತಿಯೊಬ್ಬ ತನ್ನ ಮುಂದಿರುವ ಹಲವು ಆಯ್ಕೆಗಳಲ್ಲಿ ಎಂದಿಗೂ ಮೌಲ್ಯರಹಿತವಾದುದನ್ನು ಪರಿಗಣಿಸುವುದೇ ಇಲ್ಲ. ಮೌಲ್ಯಾಧಾರಿತ ಆದರ್ಶವನ್ನು ಅಳವಡಿಸಿಕೊಂಡ ವ್ಯಕ್ತಿ ಒಂದೊಮ್ಮೆ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿಕೊಂಡಾಗ ಅವರ ವಿವೇಚನೆ ಆ ಸಂದರ್ಭದ ಶ್ರೇಷ್ಠ ಆಯ್ಕೆಯೆಡೆಗೇ ಅವರನ್ನು ಖಚಿತವಾಗಿಯೂ ಮುನ್ನಡೆಸುತ್ತದೆ. “Ideals are like the stars for we never reach them, but like mariners at the sea we chart our course by them”.

ಸಾರ್ವಜನಿಕ ಜೀವನದಲ್ಲಿ ಸಕ್ರಿಯನಾದ ವ್ಯಕ್ತಿ/ರಾಜಕಾರಣಿಯೊಬ್ಬನ ನೈತಿಕ ಅಧಃಪತನ ಮಾತ್ರವಲ್ಲ; ರಾಷ್ಟ್ರದ ಹಾಗೂ ಸಂವಿಧಾನದ ಅವಹೇಳನವೂ ಹೌದು. John Stuart Mill  ಹೇಳುವಂತೆ; “the worth of a nation is the sum total of the worth of the individuals comprising
it”. ರಾಜಕಾರಣದ ಈ ನೈತಿಕ ಅಧಃಪತನ ಕಾರ್ಯಾಂಗ, ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಬೀರಿದೆ! ವೃತ್ತಿಪರತೆಯನ್ನೂ ಮೀರಿಸಿದ ಲೌಕಿಕವಾದ (Materialism) ರಾಜಕಾರಣವನ್ನಾವರಿಸಿದೆ. ಪಕ್ಷದ ಸಿದ್ಧಾಂತದ ಮೇಲೆ ಮತದಾರರಿಂದ ಆಯ್ಕೆಯಾದ ಜನಪ್ರತಿನಿಧಿ ತನ್ನ ಮತದಾರರಿಗೆ ಉತ್ತರದಾಯಿತ್ವವನ್ನು ಹೊಂದಿರುವುದನ್ನು ಬಿಟ್ಟು, ಕೇವಲ ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನೇ ಮುಂದಿಟ್ಟುಕೊಂಡು ಆಡುತ್ತಿರುವ ಈ ಪಕ್ಷಾಂತರದ ಆಟ ಪ್ರಜಾಪ್ರಭುತ್ವದ ಎಲ್ಲಾ ಆಶಯಗಳನ್ನು ಮಣ್ಣುಗೂಡಿಸುತ್ತಿರುವುದಂತೂ ಸತ್ಯ!

ತಮ್ಮ ನಾಗರಿಕರಿಗೆ ಅಥವಾ ಮಾನವಕುಲಕ್ಕೆ ಸಂಬಂಧಿಸಿದ ವ್ಯಾಪಕ ಸಂಗತಿಗಳಿಗಿಂತ ಹೆಚ್ಚಾಗಿ ತಮ್ಮ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸಿಕೊಂಡಿರುತ್ತಾರೆಂಬ ದಟ್ಟವಾದ ಭಾವನೆಯಿಂದ ಜನಸಾಮಾನ್ಯರಲ್ಲಿ ಚಡಪಡಿಕೆ ಹೆಚ್ಚಾಗುತ್ತಿದ್ದು, ಉತ್ತರದಾಯಿತ್ವ ಮತ್ತು ಪಾರದರ್ಶಕತೆ ವ್ಯವಸ್ಥೆಗಾಗಿ ದನಿಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ‘ಶ್ರೀಮಂತರು ಮತ್ತು ಬಲಿಷ್ಠರಿಂದ’ ‘ಶ್ರೀಮಂತರು ಮತ್ತು ಬಲಿಷ್ಠರಿಗಾಗಿಯೇ’ ಇರುವ ಆಡಳಿತ ಎಂಬಷ್ಟರಮಟ್ಟಕ್ಕೆ ಇಳಿಸಿಬಿಟ್ಟಿದ್ದೇವೆಂಬ ಅಪವಾದವಿದೆ. ಇದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳದ್ದೂ ಸಮಾನ ಪಾಲು! ಪ್ರಜಾಪ್ರಭುತ್ವದ ಆಧಾರಸ್ತಂಭಗಳಾಗಿರಬೇಕಾದ ಸ್ವಾಯತ್ತ ಸಂಸ್ಥೆಗಳು ‘ದೀಪ’ವಿಲ್ಲದ ದಾರಿದೀಪಗಳಂತಾಗಿದ್ದೂ ಇದಕ್ಕೆ ಕಾರಣ.

*ಲೇಖಕರು ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನಪರಿಷತ್ತು.

Leave a Reply

Your email address will not be published.