ರಾಜಕಾರಣಿಗಳು ಏನಂತಾರೇ…?

ವೇಗ ಇರಲಿ

-ಎಚ್.ಕೆ.ಪಾಟೀಲ್, ಮಾಜಿ ಸಚಿವರು.

ಆನ್ ಲೈನ್ ವ್ಯವಸ್ಥೆಯು ಜನರಿಗೆ ಹೊಸ ದಾರಿಯತ್ತ ನಡೆಯಲು ಒಂದು ಅಡಿಪಾಯವನ್ನು ಹಾಕಿದೆ. ಇದು ಉಜ್ವಲ ಭವಿಷ್ಯಕ್ಕೆ ಪೂರಕವಾಗಿರುತ್ತದೆ. ಆದರೆ, ತಂತ್ರಜ್ಞಾನವನ್ನು ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ಅಳವಡಿಸಿಕೊಂಡಾಗ ಮಾತ್ರ ಇದು ಪರಿಪೂರ್ಣವಾಗಿರಲು ಸಾಧ್ಯವಾಗುತ್ತದೆ.

ನಮ್ಮ ಅಪೇಕ್ಷೆ ಏನಿತ್ತೆಂದರೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾರದರ್ಶಕತೆ ಇರಬೇಕು, ಯಾರಿಗೂ ತಾರತಮ್ಯ ಇರಬಾರದು, ಎಲ್ಲಾ ಕೆಲಸಗಳು ವಿಳಂಬವಿಲ್ಲದೇ ಸಕಾಲದಲ್ಲಿ ನಡೆಯಬೇಕೆಂಬುದಾಗಿತ್ತು. ಆಗ ಮಾತ್ರ ಜನಸಾಮಾನ್ಯರಿಗೆ ಅನುಕೂಲ ಆಗಿ ಅವರು ಅಭಿವೃದ್ಧಿ ಹೊಂದುತ್ತಾರೆ. ಜನರು ಅಭಿವೃದ್ಧಿ ಹೊಂದಿದಲ್ಲಿ ರಾಜ್ಯ, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ತಂತ್ರಜ್ಞಾನದ ಈ ಆನ್‌ಲೈನ್ ವ್ಯವಸ್ಥೆಯು ಪರಿಣಾಮಕಾರಿಯಾಗಿರಬೇಕು. ಆನ್‌ಲೈನ್ ವ್ಯವಸ್ಥೆಯಿಂದ ಪ್ರತಿಯೊಬ್ಬ ನಾಗರಿಕನೂ ತಮ್ಮ ತಮ್ಮ ಕೆಲಸಗಳ ದಾಖಲೆಗಳನ್ನು ಆನ್‌ಲೈನ್ ನಲ್ಲಿ ಪಡೆಯಬಹುದು. ಪಾರದರ್ಶಕವಾಗಿ ಬಹುತೇಕ ಎಲ್ಲಾ ದಾಖಲೆಗಳನ್ನು ಖುದ್ದಾಗಿ ಪರಿಶೀಲಿಸಬಹುದು. ತಮ್ಮ ಅರ್ಜಿಗಳು ಅಥವಾ ದಾಖಲೆಗಳನ್ನು ಅತ್ಯಂತ ಜರೂರಾಗಿ ಪಡೆಯಬಹುದು. ಇದರಿಂದ ಕಚೇರಿಗಳಿಗೆ ಅಲೆಯುವುದು ಬಹಳಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ ಮತ್ತು ಜನರ ಸಮಯ ಉಳಿತಾಯವಾಗುತ್ತದೆ. ಇದೆಲ್ಲದರ ಜತೆಗೆ ಭ್ರಷ್ಟಾಚಾರದಂತಹ ಪಿಡುಗು ನಿರ್ಮೂಲನಕ್ಕೆ ಈ ಆನ್‌ಲೈನ್ ವ್ಯವಸ್ಥೆ ಸೋಪಾನವಾಗಲಿದೆ.

ಪ್ರಸ್ತುತ ಕೋವಿಡ್-19 ನಿಂದಾಗಿ ಆನ್‌ಲೈನ್ ವ್ಯವಸ್ಥೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಇದು ಕ್ರಾಂತಿ ಎನ್ನುವುದಕ್ಕಿಂತ ಹೆಚ್ಚಾಗಿ ಕ್ರಾಂತಿಕಾರಿ ಹೆಜ್ಜೆ ಇಡಲು ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿದೆ.

ಇದೇ ವೇಗದಲ್ಲಿ ಆನ್ ಲೈನ್‌ವ್ಯವಸ್ಥೆ ಮುಂದಡಿ ಇಟ್ಟರೆ ಹಳ್ಳಿಹಳ್ಳಿಗೂ ಅತ್ಯಾಧುನಿಕ ತಂತ್ರಜ್ಞಾನಗಳು ಕಾಲಿಟ್ಟು ಜನರ ಜೀವನವನ್ನು ಸುಲಭವಾಗಿ ಮಾಡುವುದರಲ್ಲಿ ಅನುಮಾನವಿಲ್ಲ. ಇದರ ಮೂಲಕ ಹಳ್ಳಿಗಳು ಕ್ಷಿಪ್ರವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತವೆ ಮತ್ತು ಜನರ ಜೀವನ ಹಸನಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ಗ್ರಾಮಾಂತರ ಪ್ರದೇಶಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪೂರಕವಾದ ಯೋಜನೆಗಳನ್ನು ರೂಪಿಸಬೇಕಿದೆ.


ಶಾಶ್ವತ ಅಸಾಧ್ಯ

 

-ಪ್ರೊ.ಬಿ.ಕೆ.ಚಂದ್ರಶೇಖರ್, ಮಾಜಿ ಸಚಿವರು.

ಆನ್‌ಲೈನ್ ವ್ಯವಸ್ಥೆ ಶಾಶ್ವತವಾಗಿರಲು ಸಾಧ್ಯವಿಲ್ಲ. ಏಕೆಂದರೆ, ಇದು ಜನರ ಭಾವನೆಗಳಿಗೆ ಸ್ಪಂದಿಸುವಂತಹ ಒಂದು ಮಾಧ್ಯಮವಾಗಿ ಇನ್ನೂ ಬೆಳೆದಿಲ್ಲ. ಆನ್‌ಲೈನ್ ಶಿಕ್ಷಣದ ವಿಚಾರಕ್ಕೆ ಬಂದರೆ ಈ ಕ್ಷಣದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಲು ಈ ಮಾರ್ಗವನ್ನು ಅನುಸರಿಸಲಾಗುತ್ತಿದೆ. ಆದರೆ, ಕಲೆ, ಸಂಸ್ಕೃತಿ, ಪ್ರಕೃತಿ ಸೇರಿದಂತೆ ಇನ್ನಿತರೆ ವಿಷಯಗಳ ಕಲಿಕೆಗೆ ಇದು ಪೂರಕವಾಗಿರುವುದಿಲ್ಲ. ಆನ್‌ಲೈನ್ ಕೇವಲ ಆನ್‌ಲೈನ್ ಆಗಿರದೇ ಆನ್‌ಲೈನ್ ಪ್ಲಸ್ ಆದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಶಿಕ್ಷಣ ಒಂದು ಭಾವನಾತ್ಮಕ ವಿಚಾರವಾಗಿದೆ. ಇಲ್ಲಿ ಗುರುಗಳಿರುತ್ತಾರೆ. ಅವರಿಗೆ ಒಂದು ಗೌರವ ಇರುತ್ತದೆ. ಆನ್ ಲೈನ್ ಶಿಕ್ಷಣವೆಂಬುದು ಕೇವಲ ಜೀವರಹಿತವಾದ ಬೌದ್ಧಿಕ ಚಿಂತನೆಯಂತಾಗುತ್ತದೆಯೇ ಹೊರತು ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಮತ್ತು ಭಾವನಾತ್ಮಕತೆಯನ್ನು ತಂದುಕೊಡಲು ಸಾಧ್ಯವಿಲ್ಲ.

ಈ ಕೊರೋನಾ ಬಿಕ್ಕಟ್ಟಿನ ನಂತರ ಆನ್‌ಲೈನ್ ವ್ಯವಸ್ಥೆಗೆ ಈ ವೇಗ ಇರುವುದಿಲ್ಲ. ಇದೇ ವೇಗದಲ್ಲಿ ಉಳಿಯದಿರುವುದೇ ಒಳ್ಳೆಯದು. ಏಕೆಂದರೆ, ನಮ್ಮ ಸಾಂಪ್ರದಾಯಿಕ ಶೈಲಿಯ ಶಿಕ್ಷಣ ಮತ್ತು ಕೆಲಸ ಕಾರ್ಯಗಳಲ್ಲಿರುವ ಭಾವನೆಗಳು, ಭಾವನಾತ್ಮಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಬೇಕು.

ಆನ್ ಲೈನ್ ಒಂದು ಅನಿವಾರ್ಯತೆಯನ್ನು ಹುಟ್ಟುಹಾಕಿದೆಯೇ ಹೊರತು, ಇದು ಕ್ರಾಂತಿಯಲ್ಲ. ಅನಿವಾರ್ಯ ಮತ್ತು ಸಂದಿಗ್ಧ ಪರಿಸ್ಥಿತಿಗೆ ತಕ್ಕಂತೆ ನಾವು ಇದನ್ನು ಅಪ್ಪಿಕೊಂಡಿದ್ದೇವೆ. ಆದರೆ, ಇದು ಶಾಶ್ವತವಾಗಿ ನಿಲ್ಲುತ್ತದೆ ಎಂದು ಹೇಳುವುದು ಅಸಾಧ್ಯ.

ರಾಜಕೀಯವಾಗಿ ಆನ್‌ಲೈನ್ ಸಮಾಜದ ಎಲ್ಲರನ್ನೂ ತಲುಪುವಂತಿರಬೇಕು. ಬಹುತೇಕ ನಮ್ಮ ಎಲ್ಲರ ನಡವಳಿಕೆಯಲ್ಲಿ ಪಾರದರ್ಶಕತೆ ಇರಬೇಕು. ಅದನ್ನು ಆನ್ ಲೈನ್ ಇದ್ದರೂ ಮುಚ್ಚಿಡಬಹುದು. ಉದಾಹರಣೆಗೆ ಪಿಎಂ ಕೇರ್ಸ್ ವಿಚಾರದಲ್ಲಿ ಪ್ರಧಾನಿ, ಅಮಿತ್ ಶಾ ಡಿಜಿಟಲೀಕರಣದ ಬಗ್ಗೆ ಭಾಷಣ ಮಾಡುತ್ತಾರೆ. ಪಾರದರ್ಶಕತೆ, ಹೊಸ ಆಡಳಿತ, ಪಾಶ್ಚಿಮಾತ್ಯ ದೇಶಗಳಿಗಿಂತ ಅತ್ಯುತ್ತಮವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಂದಿದ್ದೇವೆ ಎನ್ನುತ್ತಾರೆ. ಆದರೆ, ಪಾರದರ್ಶಕತೆಯ ಬಗ್ಗೆ ಭಾಷಣ ಮಾಡುವ ಇವರು ವಿದೇಶದಿಂದ ಪಿಎಂ ಕೇರ್ಸ್ ಗೆ ಬಂದಿದೆ ಎನ್ನಲಾದ ಒಂದು ಬಿಲಿಯನ್ ದೇಣಿಗೆ ಬಗೆಗಿನ ಮಾಹಿತಿಯನ್ನು ಮುಚ್ಚಿಡುತ್ತಾರೆ. ಹಾಗಾದರೆ ಇವರ ಪಾರದರ್ಶಕತೆ ಎಲ್ಲಿ ಹೋಯಿತು?

ಆದರೆ, ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಗೆ ವಿದೇಶದಿಂದ ಬಂದಿದ್ದ ದೇಣಿಗೆ ವಿಚಾರವನ್ನು ಘೋಷಣೆ ಮಾಡಲಿಲ್ಲ ಎಂಬ ಕಾರಣಕ್ಕೆ ವಿದೇಶಿ ದೇಣಿಗೆಯನ್ನೇ ರದ್ದು ಮಾಡಿದ್ದ ಸರ್ಕಾರ ತನಗೊಂದು ನೀತಿ, ಇತರರಿಗೊಂದು ನೀತಿಯನ್ನು ಅನುಸರಿಸುತ್ತಿದೆಯೇ?

ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಅನುಸರಿಸಿದರೆ ಮಾತ್ರ ಈ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಆದರೆ, ಈ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯವಸ್ಥೆಯನ್ನು ರೂಪಿಸುವವರೂ ಮತ್ತು ಜಾರಿಗೆ ತರುವವರೂ ಮನುಷ್ಯರೇ ಆಗಿರುವುದರಿಂದ ಅಲ್ಲಿ ಲೋಪಗಳು ಇಲ್ಲದೇ ಇರಲಾರವು.

ಈ ಡಿಜಿಟಲೀಕರಣಕ್ಕೂ ಮನುಷ್ಯನೇ ಇತಿಮಿತಿ ಹಾಕಬಲ್ಲವನಾಗಿದ್ದಾನೆ. ಹೀಗಾಗಿ ಆನ್‌ಲೈನ್, ಡಿಜಿಟಲ್ ಎಂಬುದು ಪಾರದರ್ಶಕತೆಗೆ ಪೂರಕವಾಗಿರುವುದಿಲ್ಲ. ಇಲ್ಲಿ ದುಷ್ಟ ಶಕ್ತಿಯೊಂದು ತನ್ನ ಕೈಚಳಕ ತೋರಿಸದೇ ಇರಲಾರದು.

ಆದರೆ, ಸರ್ಕಾರದ ಇಲಾಖೆಗಳೇ ಇದನ್ನು ಪಾಲಿಸುವುದಿಲ್ಲ. ಜನಸಾಮಾನ್ಯರು ಮಾಹಿತಿಗಾಗಿ ಹತ್ತಾರು ಬಾರಿ ಹೋಗಬೇಕಾಗುತ್ತದೆ. ಈ ಮಾಹಿತಿ ಹಕ್ಕು ಕಾಯ್ದೆಗೆ ಪ್ರಧಾನಿ ಕಚೇರಿಯಿಂದಲೇ ಅಡ್ಡ ಹಾಕುತ್ತಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆಯನ್ನು ಆನ್‌ಲೈನ್ ನಲ್ಲಿ ತರಲು ಸಾಧ್ಯವಿಲ್ಲ. ಏಕೆಂದರೆ, ಇದನ್ನು ಜಾರಿಗೆ ತರುವವರು ನಾವೇ, ನಿಯಂತ್ರಣ ಮಾಡುವವರೂ ನಾವೇ. ಹೀಗಾಗಿ ಕಷ್ಟವಾಗುತ್ತದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಪಾಲಿಸಬೇಕಾಗುತ್ತದೆ.

ಸಮಾಜದ ಮುಖ್ಯ ವಿಷಯಗಳಲ್ಲಿ, ನಮ್ಮ ನಾಗರಿಕತೆ ಸಂಸ್ಕೃತಿ ವಿಚಾರದಲ್ಲಿ ಬದ್ಧತೆ ಇಲ್ಲದೇ ಹೋದಲ್ಲಿ ಆನ್ ಲೈನ್ ವ್ಯವಸ್ಥೆ ತಂದರೆ ಏನೂ ಪ್ರಯೋಜನವಾಗಲಾರದು.


ಇದೊಂದು ಹಂಗಾಮಿ ವ್ಯವಸ್ಥೆ

 

ವೈ.ಎಸ್.ವಿ. ದತ್ತ, ಜೆಡಿಎಸ್ ಮುಖಂಡರು.

ಕೋವಿಡ್ ಹಿನ್ನೆಲೆಯಲ್ಲಿ ಜನರು ಹೊರಗೆ ಬರಬಾರದು ಎಂಬ ಉದ್ದೇಶದಿಂದ ಮನೆಯಲ್ಲೇ ಕುಳಿತು ಸೌಲಭ್ಯಗಳನ್ನು ಆನ್‌ಲೈನ್ ಮೂಲಕ ಪಡೆಯುತ್ತಿರುವುದು ಅನಿವಾರ್ಯವಾಗಿದೆ ಮತ್ತು ಈಗಿನ ಪರಿಸ್ಥಿತಿ ಆನ್‌ಲೈನ್ ಗೆ ಇಂಬು ಕೊಟ್ಟಿದೆಯಷ್ಟೆ.

ಆದರೆ, ಈ ಆನ್ ಲೈನ್ ವ್ಯವಸ್ಥೆಗೆ ನಮ್ಮ ಜನ ಮಾನಸಿಕವಾಗಿಯೂ ಮತ್ತು ಬೌದ್ಧಿಕವಾಗಿಯೂ ತಯಾರಾಗಿಲ್ಲ. ಆನ್‌ಲೈನ್ ಕೋಚಿಂಗ್ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಹಳ್ಳಿಗಳ ಲಕ್ಷಾಂತರ ಮಕ್ಕಳಿಗೆ ಇದಕ್ಕೆ ಪೂರಕವಾದ ಯಾವುದೇ ವ್ಯವಸ್ಥೆಗಳು ಇಲ್ಲ. ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಇಂಟರ್ನೆಟ್ ಸೌಲಭ್ಯಗಳಿಲ್ಲ. ಇದರಿಂದ ಅವರು ಭೌದ್ಧಿಕವಾಗಿ ತಯಾರಾಗಿಲ್ಲ. ಹೀಗಾಗಿ ಈ ಆನ್‌ಲೈನ್ ಎಂಬುದು ಈಗಿನ ಪರಿಸ್ಥಿತಿಗೆ ಅನಿವಾರ್ಯ ಎಂದೆನಿಸಿದರೂ ಬಹಳ ದಿನಗಳ ಕಾಲ ಶಾಶ್ವತವಾಗಿ ಬಳಕೆಯಾಗುವಂತಹ ಒಂದು ಪ್ರಕ್ರಿಯೆ ಆಗಲಾರದು. ಇದು ತಕ್ಷಣದ ಒಂದು ವ್ಯವಸ್ಥೆಯಾಗಿದ್ದು, ಕಾಲ ಕ್ರಮೇಣ ಹೊರಟು ಹೋಗುತ್ತದೆ. ತರಗತಿ ಕೊಠಡಿಯ ಬೋಧನೆಯೇ ಮರುಕಳಿಸುತ್ತದೆ.

ಕೊರೋನಾದ ಹಿನ್ನೆಲೆಯಲ್ಲಿ ತೀರಾ ಅನಿವಾರ್ಯವಾದವರು ಮಾತ್ರ ಈ ಆನ್‌ಲೈನ್ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ಕೊರೋನಾ ಪ್ರಮಾಣ ಕಡಿಮೆಯಾದಂತೆ ಆನ್‌ಲೈನ್ ವ್ಯವಸ್ಥೆಯನ್ನು ಬಿಟ್ಟು ಮತ್ತೆ ಯಥಾಸ್ಥಿತಿಯಲ್ಲಿ ತಮ್ಮ ಸಾಂಪ್ರದಾಯಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಲಿದ್ದಾರೆ. ಹೀಗಾಗಿ ಇದು ಕೇವಲ ಹಂಗಾಮಿ ವ್ಯವಸ್ಥೆಯಾಗಿದೆ.

ಇನ್ನು ಇ-ವಿಧಾನಮಂಡಲ ವ್ಯವಸ್ಥೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಇದು ಪರಿಣಾಮಕಾರಿಯಾಗುವುದಿಲ್ಲ. ಜನ ಸಾಮಾನ್ಯರ ಸಮಸ್ಯೆಗಳಿಗೆ ಇದು ಪರಿಹಾರ ಒದಗಿಸಲು ಸಾಧ್ಯವಿಲ್ಲ. ಕೇವಲ ವಿಡಿಯೋ ಕಾನ್ಫರೆನ್ಸ್ ನಡೆಸಿದ ರೀತಿಯಲ್ಲಿ ಇ-ವಿಧಾನಮಂಡಲ ಪ್ರಕ್ರಿಯೆಯನ್ನು ನಡೆಸಲು ಬರುವುದಿಲ್ಲ.

ಸರ್ಕಾರದ ಎಲ್ಲಾ ಕೆಲಸಗಳು ಆನ್‌ಲೈನ್ ಮೂಲಕ ನಡೆಯಲು ಸಾಧ್ಯವಾಗುವುದಿಲ್ಲ. ಎಲ್ಲಾ ಇಲಾಖೆಗಳನ್ನು ಕಾಗದರಹಿತ ಮಾಡುತ್ತಿದ್ದಾರೆ. ಎಲ್ಲವನ್ನೂ ಕಂಪ್ಯೂಟರಿನಲ್ಲಿಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಜನ ಸಾಮಾನ್ಯರಿಗೆ ತಮ್ಮ ಅರ್ಜಿಗಳ ವಿಚಾರಗಳೇ ತಿಳಿಯುತ್ತಿಲ್ಲ. ಹೀಗಾಗಿ ಈ ಆನ್‌ಲೈನ್ ವ್ಯವಸ್ಥೆ ನಮ್ಮ ದೇಶದ ಮಟ್ಟಿಗೆ ಯಶಸ್ಸು ಕಾಣಲು ಸಾಧ್ಯವಿಲ್ಲ.


ಕ್ರಾಂತಿಕಾರಿ ಡಿಜಿಟಲ್ ಇಂಡಿಯಾ

 

ಪಿ.ರಾಜೀವ್, ಬಿಜೆಪಿ ಶಾಸಕರು.

 

ಡಾರ್ವಿನ್ ನಿಯಮದಲ್ಲಿ ಬದಲಾವಣೆಗೆ ಯಾವ್ಯಾವು ಹೊಂದಿಕೊಂಡಿವೆಯೋ ಅವು ಬದುಕಿವೆ. ಹೊಂದಿಕೊಳ್ಳದವು ಅಂತ್ಯಗೊಂಡಿವೆ. ಹೀಗಾಗಿ ಬದಲಾವಣೆಗೆ ಹೊಂದಿಕೊಳ್ಳಲೇಬೇಕು. ಸವಾಲುಗಳನ್ನು ಸ್ಪರ್ಧಾತ್ಮಕವಾಗಿ ಸ್ವೀಕಾರ ಮಾಡಬೇಕು. ಆಗ ಸಾಕಷ್ಟು ದಾರಿಗಳು ತೆರೆದುಕೊಳ್ಳುತ್ತವೆ.

ಆಗುತ್ತೆ, ಆಗುವುದಿಲ್ಲ ಎಂಬ ಮನಸ್ಥಿತಿ ಇರಬಾರದು ಮತ್ತು ಮುಂದೆ ಇಂತಹದ್ದೇ ಆಗುತ್ತದೆ ಎಂಬುದನ್ನೂ ಭವಿಷ್ಯ ನುಡಿಯಬಾರದು. ಆದರೆ, ಇಂದಿನ ಅಗತ್ಯ ಏನೆಂದರೆ, ಆನ್‌ಲೈನ್ ವ್ಯವಸ್ಥೆಗೆ ಹೊಂದಿಕೊಳ್ಳಲೇಬೇಕು. ಇದಕ್ಕಿಂತ ಉತ್ತಮವಾದ ಪರ್ಯಾಯ ಯಾವುದಾದರೂ ಸಿಕ್ಕರೆ ಇದನ್ನು ಬಿಟ್ಟು ಆ ಪರ್ಯಾಯವನ್ನೇ ಆಯ್ಕೆ ಮಾಡಿಕೊಳ್ಳಬಹುದು. ಪ್ರಸ್ತುತ ಉತ್ತಮ ಪರ್ಯಾಯ ಇಲ್ಲದಿರುವುದರಿಂದ ಆನ್‌ಲೈನ್ ಗೆ ಹೊಂದಿಕೊಳ್ಳುವುದು ಒಳ್ಳೆಯದು.

ನರೇಂದ್ರ ಮೋದಿಯವರು 2014 ರಲ್ಲಿ ಡಿಜಿಟಲ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಘೋಷಣೆ ಮಾಡಿದ್ದರು. ಹೀಗಾಗಿ ಅವರ ಆಲೋಚನೆಯೇ ಒಂದು ಕ್ರಾಂತಿಯಾಗಿತ್ತು. ಬಹುತೇಕ ಶೇ.90 ರಷ್ಟು ಆನ್‌ಲೈನ್ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದೇವೆ. ಇಷ್ಟರ ಮಟ್ಟಿಗೆ ಕ್ರಾಂತಿ ಆಗುತ್ತಿದೆ. ಇದಕ್ಕೆ ನರೇಂದ್ರ ಮೋದಿ ಅವರೇ ಕಾರಣ. ಅವರು ಅಂದು ಡಿಜಿಟಲ್ ಇಂಡಿಯಾ ಎಂಬ ಘೋಷಣೆ ಮಾಡದೇ ಹೋಗಿದ್ದಿದ್ದರೆ ನಮ್ಮ ದೇಶ ಡಿಜಿಟಲ್ ಕ್ಷೇತ್ರದಲ್ಲಿ ಶೂನ್ಯ ಸಂಪಾದನೆಯನ್ನು ಮಾಡಬೇಕಿತ್ತು.

ಈ ಹಿನ್ನೆಲೆಯಲ್ಲಿ ಮೋದಿಯವರ ಪರಿಕಲ್ಪನೆಯೇ ಒಂದು ಕ್ರಾಂತಿಕಾರಿಯಾಗಿದೆ.

ಆಡಳಿತದಲ್ಲಿಯೂ ಆನ್ ಲೈನ್ ವ್ಯವಸ್ಥೆಯನ್ನು ತಂದರೆ ಅದಕ್ಕೆ ಪೂರಕವಾದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಅತ್ಯಾಧುನಿಕ ತರಂಗಾಂತರ ಜಾಲ ಇರುವ ಹಿನ್ನೆಲೆಯಲ್ಲಿ ಪ್ರತಿ ಹಳ್ಳಿಗೂ ಮೊಬೈಲ್ ಸೇವೆ ಲಭ್ಯವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಳ್ಳಿ ಮತ್ತು ದಿಲ್ಲಿ ನಡುವೆ ಅಂತರ ಅಥವಾ ವ್ಯತ್ಯಾಸ ಇರುವುದಿಲ್ಲ. ಈ ವ್ಯತ್ಯಾಸ ಇಲ್ಲದ ರೀತಿಯಲ್ಲಿ ಈಗ ಮಾಡಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇದನ್ನು ಮಾಡದೇ ಪರ್ಯಾಯ ಮಾರ್ಗವೇ ಇಲ್ಲ.

 

Leave a Reply

Your email address will not be published.