ರಾಜಕಾರಣ ವ್ಯಾಪಾರವೇ?

ಇತ್ತೀಚೆಗಿನ ಬೆಳವಣಿಗೆಗಳಿಂದ ಬೇಸರಗೊಂಡು ನಾನು ಈ ಸದನದಲ್ಲಿ ಇರುವುದಕ್ಕಿಂತ ಕ್ಷೇತ್ರದ ಮತದಾರರ ನಡುವೆ ಇದ್ದು ಕೆಲಸ ಮಾಡುವುದು ವಾಸಿ ಎಂದು ಭಾವಿಸಿದೆ. ಅದಕ್ಕಾಗಿ ಸದನಕ್ಕೆ ಗೈರಾಗಿರಲು ಅನುಮತಿ ನೀಡುವಂತೆ ಸಭಾಧ್ಯಕ್ಷರಿಗೆ ಪತ್ರ ಬರೆದೆ.

ವಿಧಾನ ಮಂಡಲ ಅಧಿವೇಶನ ಇರುವುದು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ, ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು. ದುರಂತವೆಂದರೆ ಕಳೆದ ಬಜೆಟ್ ಅಧಿವೇಶನದಲ್ಲಿ ನಾಡಿನ ಹಲವು ಜ್ವಲಂತ ಸಮಸ್ಯೆಗಳನ್ನು ಬದಿಗೊತ್ತಿ ಶಾಸಕರ ನಡವಳಿಕೆ ಬಗ್ಗೆ ಚರ್ಚಿಸುವಂತಾಯಿತು. ಅವರು ಅಲ್ಲಿ ಹೋದರು, ಇವರು ಇಲ್ಲಿ ಹೋದರು ಇಂಥವೇ ವಿಚಾರಗಳು ಹೆಚ್ಚು ಪ್ರಾಮುಖ್ಯ ಪಡೆದುಕೊಂಡವು. ಇದರಿಂದ ಸದಸ್ಯರ ಹಕ್ಕಿಗೆ ಧಕ್ಕೆಯಾಗಿದೆ. ಸದನದ ಗೌರವ-ಘನತೆಗೆ ಚ್ಯುತಿ ಉಂಟಾಗಿದೆ. ಈ ಬೆಳವಣಿಗೆಗಳಿಂದ ಬೇಸರಗೊಂಡು ನಾನು ಈ ಸದನದಲ್ಲಿ ಇರುವುದಕ್ಕಿಂತ ಕ್ಷೇತ್ರದ ಮತದಾರರ ನಡುವೆ ಇದ್ದು ಕೆಲಸ ಮಾಡುವುದು ವಾಸಿ ಎಂದು ಭಾವಿಸಿದೆ. ಅದಕ್ಕಾಗಿ ಸದನಕ್ಕೆ ಗೈರಾಗಿರಲು ಅನುಮತಿ ನೀಡುವಂತೆ ಸಭಾಧ್ಯಕ್ಷರಿಗೆ ಪತ್ರ ಬರೆದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಕಾರದಷ್ಟೇ ಜವಾಬ್ದಾರಿ ಪ್ರತಿಪಕ್ಷಗಳಿಗೂ ಇದೆ. ಸರಕಾರ ತಪ್ಪು ಮಾಡಿದಾಗ ಅದರ ವಿರುದ್ಧ ಪ್ರತಿಭಟಿಸಲು ಮತ್ತು ಆಡಳಿತದಲ್ಲಿ ವಿಫಲವಾದಾಗ ಅದನ್ನು ಎತ್ತಿ ತೋರಿಸಲು ಪ್ರತಿಪಕ್ಷಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅತಿ ಹೆಚ್ಚು ಸದಸ್ಯರನ್ನು ಹೊಂದಿ ಪ್ರಬಲ ಪ್ರತಿಪಕ್ಷವಾಗಿರುವ ಬಿಜೆಪಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ.

ಆಪರೇಷನ್ ಕಮಲದ ಧ್ವನಿಸುರುಳಿ ವಿವಾದ ಉಂಟಾದಾಗ, ಈ ಪ್ರಕರಣದಲ್ಲಿ ವಿಧಾನಸಭಾಧ್ಯಕ್ಷರ ಹೆಸರು ಪ್ರಸ್ತಾಪವಾಗಿದ್ದರಿಂದ ಸಭಾಧ್ಯಕ್ಷರು ಸ್ವಯಂಪ್ರೇರಿತವಾಗಿ ಚರ್ಚೆಗೆ ಅವಕಾಶ ನೀಡಿದರು. ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿಗಳು ಮೊದಲ ದಿನವೇ ಸಭಾಧ್ಯಕ್ಷರು ಸೂಚಿಸುವ ಯಾವುದೇ ತನಿಖೆಗೂ ಸರಕಾರ ಸಿದ್ಧವಿದೆ ಎಂದು ಹೇಳಿದರು. ಎಸ್.ಐ.ಟಿ. ತನಿಖೆ ನಡೆಸುವುದು ಸೂಕ್ತ ಎಂಬ ಸಲಹೆಗಳು ಬಂದವು. ಅದರಂತೆ ಭೊಜನ ವಿರಾಮಕ್ಕೂ ಮೊದಲು ಸಭಾಧ್ಯಕ್ಷರು ಎಸ್.ಐ.ಟಿ. ತನಿಖೆ ನಡೆಸಲು ಸೂಚಿಸಿ ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ ಎಂದು ಹೇಳಿದ್ದರು. ಆದರೆ ಭೋಜನ ಮುಗಿಸಿ ಬಂದ ನಂತರ ಬಿಜೆಪಿ ಸದಸ್ಯರು ಮತ್ತೆ ಅದೇ ವಿಷಯದ ಚರ್ಚೆ ಮಾಡಲಾರಂಭಿಸಿದರು. ಮಾರನೇ ದಿನವೂ ಅದೇ ಚರ್ಚೆ ನಡೆಯಿತು. ಹೀಗೆ ಮೂರು ದಿನಗಳ ಕಾಲ ಶಾಸಕರ ನಡವಳಿಕೆಗಳ ಬಗ್ಗೆಯೇ ಚರ್ಚೆ ನಡೆಯುವಂತಾಯಿತು.

ಎ.ಟಿ. ರಾಮಸ್ವಾಮಿ ಅವರು ಸ್ಪೀಕರ್ ಅವರಿಗೆ ಬರೆದ ಪತ್ರ

104 ಸದಸ್ಯರ ಬಲವನ್ನು ಹೊಂದಿರುವ ಪ್ರತಿಪಕ್ಷ ಬಿಜೆಪಿ ಚರ್ಚೆಯ ಮೂಲಕ ಸರಕಾರದ ಲೋಪಗಳನ್ನು ಎತ್ತಿ ತೋರಿಸಬಹುದಿತ್ತು. ಆದರೆ ಮೂರು ದಿನಗಳ ಕಾಲ ಧರಣಿ ಪ್ರತಿಭಟನೆ ನಡೆಸುವ ಮೂಲಕ ಸದನ ನಡೆಯದಂತೆ ಅಡ್ಡಿಪಡಿಸಿದ್ದು ರಾಜ್ಯದ ಮತ್ತು ಸದನದ ಗೌರವವನ್ನು ಹಾಳು ಮಾಡಿತು. ಸಾರ್ವಜನಿಕರ ತೆರಿಗೆ ಹಣದ ಬಳಕೆಗೆ ಸಂಬಂಧಿಸಿದ ‘ಧನ ವಿನಿಯೋಗ ವಿಧೇಯಕ’ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರವಾಯಿತು. ಇದು ಬಿಜೆಪಿಗೆ ಶೋಭೆ ತರುವಂತಹದ್ದಲ್ಲ ಎಂಬುದು ನನ್ನ ಭಾವನೆ.

 

ಒಂದು ದಿನವೂ ಪ್ರಶ್ನೋತ್ತರ ಕಲಾಪ ನಡೆಯಲಿಲ್ಲ. ಪ್ರಶ್ನೆ ಕೇಳುವುದು, ಸರಕಾರದಿಂದ ಉತ್ತರ ಪಡೆಯುವುದು ಸದಸ್ಯರ ಹಕ್ಕು. ಆದರೆ ಪ್ರಶ್ನೋತ್ತರ ಕಲಾಪ ನಡೆಯದಿದ್ದರಿಂದ ಸದಸ್ಯರ ಹಕ್ಕು ಮೊಟಕಾಗುವಂತಾಯಿತು. ಕನಿಷ್ಟ ಪ್ರಶ್ನೋತ್ತರ ಕಲಾಪಕ್ಕೆ ಯಾರೂ ಅಡ್ಡಿ ಮಾಡಬಾರದು. ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪವನ್ನು ಕಡ್ಡಾಯವಾಗಿ ನಡೆಸಲಾಗುತ್ತದೆ. ಅದೇ ರೀತಿ ಇಲ್ಲಿ ನಡೆಯಬೇಕಿತ್ತು. ಅದು ಆಗಲಿಲ್ಲ.

ಬಿಜೆಪಿ ಸದಸ್ಯರು ಸದನ ನಡೆಯುವಾಗ ಮುಖ್ಯಮಂತ್ರಿ ವಿರುದ್ಧ ‘ಯು ಗೋ ಬ್ಯಾಕ್’ ಎಂದು ಕೂಗಿದರು. ಒಂದು ವೇಳೆ ಅವರಿಗೆ ಬಹುಮತ ಇಲ್ಲ ಎನ್ನುವುದಾದರೆ ಬಿಜೆಪಿ ಸದಸ್ಯರು ‘ಅವಿಶ್ವಾಸಮತ ನಿರ್ಣಯ’ ಮಂಡಿಸಬಹುದಿತ್ತು. ಅದರ ಬದಲಾಗಿ ಕೂಗಿ ಸದನದಲ್ಲಿ ಗದ್ದಲ ಎಬ್ಬಿಸಿದ್ದು ಕೆಟ್ಟ ಇತಿಹಾಸ. ಬಿಜೆಪಿ ಸೈದ್ಧಾಂತಿಕ ಪಕ್ಷ ಎಂದು ಹೇಳಲಾಗುತ್ತದೆ. ಹೀಗೆ ಕೂಗಿ ಗದ್ದಲ ಎಬ್ಬಿಸುವುದು ಯಾವ ಸಿದ್ಧಾಂತ? ಇವರು ಸರಕಾರ ಬೀಳಿಸಲು ಸಂಚು ರೂಪಿಸಿದ್ದು ಜಗಜ್ಜಾಹೀರಾಗಿದೆ. ಈಗ ನಾವು ಹಾಗೆ ಮಾಡಿಲ್ಲ, ನಾವು ಯಾರನ್ನೂ ಕರೆದುಕೊಂಡು ಹೋಗಿಲ್ಲ ಎಂದರೆ ಯಾರು ಕೇಳುತ್ತಾರೆ?

ಇದು ಯಾವುದೇ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಇಡೀ ರಾಜ್ಯದ ಘನತೆಗೆ ಸಂಬಂಧಿಸಿದ್ದು. ಅದನ್ನು ಎತ್ತಿ ಹಿಡಿಯಬೇಕಿರುವುದು ಎಲ್ಲರ ಕರ್ತವ್ಯ. ಮೌಲ್ಯಗಳ ಮೂಲಕ, ಸಂವಿಧಾನದ ನಿಯಮಗಳನ್ನು ಪಾಲಿಸುವ ಮೂಲಕ ನಾಡಿನ ಗೌರವವನ್ನು ಎತ್ತಿ ಹಿಡಿಯಬೇಕು. ಅದನ್ನು ಬಿಟ್ಟು ಬರಿ ಅಧಿಕಾರ, ಹಣ ಮಾಡುವುದು ಇವೇ ಆಲೋಚನೆಗಳಾಗಿಬಿಟ್ಟರೆ ಕರ್ನಾಟಕದ ಘನತೆಗೆ ಎಳ್ಳುನೀರು ಬಿಟ್ಟಂತಾಗುತ್ತದೆ.

ರಾಜಕಾರಣ ಎನ್ನುವುದು ಒಂದು ವೃತ್ತಿಯಾಗಿದೆ. ಒಬ್ಬ ಉದ್ಯಮಿ ಬಂಡವಾಳ ಹಾಕಿ ಬಂಡವಾಳ ತೆಗೆದಂತೆ ಶಾಸಕರು ಚುನಾವಣೆಗಳಲ್ಲಿ ಹಣ ಕೊಟ್ಟು ಹಣ ಮಾಡುವ ವೃತ್ತಿಯಾಗಿದೆ. ಜನರು ಈ ಬಗ್ಗೆ ಯೋಚಿಸಬೇಕು. ಪ್ರಾಮಾಣಿಕರನ್ನು, ಯೋಗ್ಯರನ್ನು ಆರಿಸಿ ತರಬೇಕು.

ಸಾರ್ವಜನಿಕರೇ ಪ್ರಜಾಪ್ರಭುತ್ವದ ಮಾಲೀಕರು. ಸಂವಿಧಾನದಲ್ಲೂ ಹಾಗೇ ಇದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಜನರೂ ಚುನಾವಣೆಗಳಲ್ಲಿ ಹಣ ಪಡೆಯುವುದು ಮತ್ತು ಜಾತಿ ನೋಡಿ ಮತ ನೀಡುವುದರಿಂದ ಇದೊಂದು ವ್ಯಾಪಾರವಾಗಿದೆ. ರಾಜಕಾರಣ ಎನ್ನುವುದು ಒಂದು ವೃತ್ತಿಯಾಗಿದೆ. ಒಬ್ಬ ಉದ್ಯಮಿ ಬಂಡವಾಳ ಹಾಕಿ ಬಂಡವಾಳ ತೆಗೆದಂತೆ ಶಾಸಕರು ಚುನಾವಣೆಗಳಲ್ಲಿ ಹಣ ಕೊಟ್ಟು ಹಣ ಮಾಡುವ ವೃತ್ತಿಯಾಗಿದೆ. ಜನರು ಈ ಬಗ್ಗೆ ಯೋಚಿಸಬೇಕು. ಪ್ರಾಮಾಣಿಕರನ್ನು, ಯೋಗ್ಯರನ್ನು ಆರಿಸಿ ತರಬೇಕು. ಹಣ ಕೊಟ್ಟವರನ್ನು, ಜಾತಿಯವರೆಂದು ಆರಿಸಿ ತರುವುದನ್ನು ಬಿಡಬೇಕು. ನಮ್ಮ ಜನ ಇನ್ನೂ ಮುಗ್ಧರು. ಸುಲಭವಾಗಿ ಆಮಿಷಗಳಿಗೆ ಒಳಗಾಗುತ್ತಾರೆ. ಅದಕ್ಕೇ ಬ್ರಿಟಿಷರು ಇವರ ಕೈಯಲ್ಲಿ ಸ್ವಾತಂತ್ರ್ಯ ಕೊಟ್ಟರೆ ಕಳ್ಳಕಾಕರು ಸೇರಿ ವಂಚಿಸುತ್ತಾರೆ ಎಂದು ಹೇಳಿದ್ದರು. ಆ ಮಾತು ಈಗ ನಿಜವಾಗಿದೆ.

ಮಾಧ್ಯಮಗಳು ಕೂಡ ಈಗ ಹಾದಿ ತಪ್ಪಿವೆ. ಕೀಳು ಅಭಿರುಚಿಯ ಸುದ್ದಿಗಳನ್ನು ಪ್ರಮುಖವಾಗಿ ಬಿಂಬಿಸುತ್ತಿವೆ. ಯಾರೋ ಯಾರನ್ನೋ ಹೊತ್ತೊಯ್ದರು ಎಂಬ ಸುದ್ದಿ ಪ್ರಾಮುಖ್ಯ ಪಡೆಯುತ್ತಿದೆ. ಟಿ.ಆರ್.ಪಿ. ವ್ಯಾಪಾರ ಎಂದು ಮಾಧ್ಯಮಗಳೂ ಸಹ ಸಮಾಜದಲ್ಲಿ ಬೇಡವಾದುದಕ್ಕೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಇದು ಕೆಟ್ಟ ನಡವಳಿಕೆಗೆ ಇನ್ನಷ್ಟು ಪ್ರಚೋದನೆ ನೀಡುವಂತಾಗಿದೆ.

Leave a Reply

Your email address will not be published.