ರಾಜಕೀಯ ನಾಯಕರಿಗೆ ಜ್ಞಾನೋದಯವಾಗಲಿ

-ಡಾ.ಉಮಾ ವೆಂಕಟೇಶ್

ನಾನೊಬ್ಬಳು ಸಸ್ಯಶಾಸ್ತ್ರ ಸಂಶೋಧಕಿ; ವಿಜ್ಞಾನದಲ್ಲಿ ಆಳವಾದ ನಂಬಿಕೆಯುಳ್ಳವಳು. ಕಳೆದ ಒಂದು ವರ್ಷದಲ್ಲಿ ಈ ಪ್ರಪಂಚದ ಬಹುತೇಕ ದೇಶಗಳಲ್ಲಿ ಕೋವಿಡ್-19 ಎನ್ನುವ ವೈರಸ್ ಜನರನ್ನು ತನ್ನ ಕಬಂಧಬಾಹುಗಳಲ್ಲಿ ಭದ್ರವಾಗಿ ಬಂಧಿಸಿ ನಲುಗಿಸುತ್ತಿದೆ. ಚೈನಾ ದೇಶದ ವುಹಾನ್ ಎನ್ನುವ ಪ್ರಾಂತದಲ್ಲಿ ಪ್ರಾರಂಭವಾದ ಈ ಸೋಂಕು, ಶೀಘ್ರವಾಗಿ ಜಗತ್ತಿನ ಮೂಲೆಮೂಲೆಗಳನ್ನೂ ತಲುಪಿದಾಗ, ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಮಹಾಮಾರಿಯ ದರ್ಜೆ ನೀಡಿತು. ಮೊದಲ 6 ತಿಂಗಳ ಅವಧಿಯಲ್ಲೇ ಸಹಸ್ರಾರು ಜನ ಇದಕ್ಕೆ ಬಲಿಯಾದರು. ತಜ್ಞರು ಸಲಹೆಗಳನ್ನು ಕಡೆಗಣಿಸಿದ ಸಣ್ಣ ಜನಸಮುದಾಯದವರು ಎಲ್ಲಾ ದೇಶಗಳಲ್ಲೂ ಈ ವೈರಸ್ ಹರಡಲು ಕಾರಣರಾದರು.

ಇಷ್ಟಾದರೂ, ಈ ವೈರಸ್ಸಿನ ಗಂಭೀರ ಸೋಂಕಿನ ಬಗ್ಗೆ ವಿಜ್ಞಾನಿಗಳು ಲಭ್ಯವಿರುವ ಆಧುನಿಕ ವೈಜ್ಞಾನಿಕ ವಿಧಾನಗಳ ಸಹಾಯದಿಂದ ಆಳವಾದ ಸಂಶೋಧನೆಯನ್ನು ತ್ವರಿತವಾಗಿ ನಡೆಸಿ, ಕೇವಲ ಹತ್ತು ತಿಂಗಳ ಅವಧಿಯಲ್ಲಿ ಲಸಿಕೆ ಅಭಿವೃದ್ಧಿಗೊಳಿಸಿರುವುದು ನಿಜಕ್ಕೂ ಪ್ರಶಂಸನೀಯ. ಈ ಲಸಿಕೆ ಸುಮಾರು 95% ಪರಿಣಾಮಕಾರಿ ಎನ್ನುವುದು ತಜ್ಞರ ಅಭಿಮತ. ಆದರೆ ಇದರ ದೀರ್ಘಾವಧಿಯ ಪರಿಣಾಮ ಒಂದು ಜನಸಮುದಾಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವುದು ಇನ್ನೂ ವಿಜ್ಞಾನಿಗಳಿಗೆ ತಿಳಿಯದು. ಇಲ್ಲಿ ಹಲವು ಹತ್ತು ಪ್ರಶ್ನೆಗಳಿವೆ.

ಸದ್ಯದಲ್ಲಿ ತಜ್ಞರ ಅಭಿಪ್ರಾಯದ ಪ್ರಕಾರ ಒಂದು ದೇಶದಲ್ಲಿ ಸುಮಾರು 70% ಜನರಿಗೆ ಲಸಿಕೆ ನೀಡಿದರೆ, ಅದರಿಂದ ಸಮುದಾಯ ಪ್ರತಿರೋಧಕ ಶಕ್ತಿ ದೊರೆಯುವ ಸಾಧ್ಯತೆ ಇದೆ ಎನ್ನುತ್ತಾರೆ. ಹಾಗಾಗಿ ಈ ಲಸಿಕೆ ಪ್ರಯೋಗದ ನಂತರವೂ ಜನರು ಮುಖ ಪರದೆಯನ್ನು ಧರಿಸುತ್ತಿರಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಹಾಗೂ ತುರ್ತು ಪ್ರಯಾಣವಲ್ಲದಿದ್ದರೆ, ವಿದೇಶ ಪ್ರಯಾಣಗಳನ್ನು ನಿರ್ಬಂಧಿಸಬೇಕು, ದೊಡ್ಡ ಸಂಖ್ಯೆಯಲ್ಲಿ ನೆರೆಯಬಾರದು ಎನ್ನುವ ಕಟ್ಟಲೆಗಳನ್ನು ಇನ್ನೂ ಒಂದು ವರ್ಷವಾದರೂ ಪಾಲಿಸಿದರೆ, ಬಹುಶಃ ಈ ಮಹಾಮಾರಿಯಿಂದ ವಿಮುಕ್ತಿ ದೊರಕುವ ಸಾಧ್ಯತೆಗಳಿವೆ.

ಇಂದು ಮಾನವ ತನ್ನ ತೀಕ್ಷ್ಣ ಬುದ್ಧಿಮತ್ತೆಯಿಂದ ಸಂಪರ್ಕ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲ್ಪಿಸಿಕೊಂಡಿದ್ದಾನೆ. ಕೋವಿಡ್ ಮಹಾ ಸೋಂಕಿನ ಈ ಕಷ್ಟ ಪರಿಸ್ಥಿತಿಯಲ್ಲೂ, ಝೂಮ್, ಗೂಗಲ್ ಟಾಕ್, ಫೇಸ್-ಬುಕ್, ಟ್ವಿಟ್ಟರ್, ಇನ್ಸ್ಟಗ್ರಾಮ್, ಸ್ಕೈಪ್ ಹೀಗೆ ಹಲವು ಹತ್ತು ಮಾಧ್ಯಮಗಳ ಮೂಲಕ ದೂರದಲ್ಲಿರುವ ಬಂಧು-ಮಿತ್ರರ ಜೊತೆಗೆ ಪರಸ್ಪರ ಸಂವಾದ ನಡೆಸುತ್ತಲೇ ಇದ್ದಾನೆ. ಅಷ್ಟೇ ಅಲ್ಲದೇ ತನ್ನ ವೃತ್ತಿಯನ್ನೂ ಮನೆಯಿಂದಲೇ ಈ ಸಂಪರ್ಕಸಾಧನಗಳನ್ನು ಬಳಸಿ ಅತ್ಯಂತ ಪರಿಣಾಮಕಾರಿಯಾಗಿ ಮುಂದುವರೆಸಿರುವುದು ಮಾನವನ ಉನ್ನತ ಸಾಧನೆಗಳಿಗೆ ನಿದರ್ಶನ ವಾಗಿದೆ.

ಇಷ್ಟಾದರೂ ಹಲವು ಅಲ್ಪಸಂಖ್ಯಾತ ಜನಸಮುದಾಯ, ವಿಜ್ಞಾನವನ್ನು ದಿಕ್ಕರಿಸುತ್ತಿದ್ದಾರೆ; ವೈಜ್ಞಾನಿಕ ಸಾಧನೆಗಳ ಕಡೆಗೆ ತಮ್ಮ ನಿಕೃಷ್ಟ ದೃಷ್ಟಿಯನ್ನು ಹರಿಸುತ್ತಲೇ, ವಿಜ್ಞಾನಿಗಳ ಸಲಹೆಗಳನ್ನು ಕಡೆಗಣಿಸುತ್ತಾ ಬೇಕಾಬಿಟ್ಟಿಯಾಗಿ ವ್ಯವಹರಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಈ ಗುಂಪಿನಲ್ಲಿ ಹಲವಾರು ಮುಂದುವರೆದ, ಮುಂದುವರೆಯುತ್ತಿರುವ ರಾಜಕೀಯ ಧುರೀಣರು ಸೇರಿರುವುದು ದುರದೃಷ್ಟಕರ ಹಾಗೂ ಬಹಳ ಅಪಾಯದ ಸಂಗತಿ. ಒಂದು ದೇಶದ ನಾಯಕರಾಗಿ ಜನತೆಯನ್ನು ಮಹಾಮಾರಿಯ ಸೋಂಕಿನಿಂದ ರಕ್ಷಿಸುವುದು ಅವರ ಜವಾಬ್ದಾರಿ. ಆದರೆ ಅವರು ತಮ್ಮ ರಾಜಕೀಯ ಫಾಯಿದೆಗಳಿಗೆ ಜನರನ್ನು ತಪ್ಪುದಾರಿಗೆಳೆಯುತ್ತಿರುವುದು ಅಪಮಾನದ ಸಂಗತಿ.

ಆದ್ದರಿಂದ 2021ರ ನನ್ನ ನಿರೀಕ್ಷೆಯಲ್ಲಿ, ಇಂತಹ ನಾಯಕರಿಗೆ ಸ್ವಲ್ಪವಾದರೂ ಜ್ಞಾನೋದಯವಾಗಲಿ; ಜನಗಳ ಹಿತದೃಷ್ಟಿಯ ಕಡೆಗೆ ಗಮನವೀಯಲಿ ಎನ್ನುವ ನಿರೀಕ್ಷೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನತೆ ತಮ್ಮ ಏಳಿಗೆಗಾಗಿ, ಆರೋಗ್ಯಕ್ಕಾಗಿ ತಜ್ಞರ ಸಲಹೆ ಪಾಲಿಸಿ ಮೋಜು-ವಿನೋದಾವಳಿ ಚಟುವಟಿಕೆಗಳಿಗೆ ಸ್ವಲ್ಪ ಕಾಲ ತಡೆಹಾಕಿ, ಸರ್ವರ ಹಿತದೃಷ್ಟಿಯ ಬಗ್ಗೆ ಚಿಂತಿಸಲಿ ಎನ್ನುವ ನಿರೀಕ್ಷೆಯಿದೆ; ವೈರಸ್ಸಿನ ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಪರಿಶ್ರಮ ಪಟ್ಟು ಅಭಿವೃದ್ಧಿ ಪಡಿಸಿರುವ ಲಸಿಕೆಯನ್ನು ಸಂಶಯದ ದೃಷ್ಟಿಯಿಂದ ನೋಡದೆ, ಜನತೆ ಅದನ್ನು ವಿಶ್ವಾಸದಿಂದ ಸ್ವೀಕರಿಸಿ, ಆದಷ್ಟು ಬೇಗನೆ ಈ ವೈರಾಣುವಿನ ನಿರ್ಮೂಲನಕ್ಕೆ ಸಹಕಾರ ನೀಡಲಿ ಎನ್ನುವುದು ನನ್ನ ನಿರೀಕ್ಷೆ.

Leave a Reply

Your email address will not be published.