ರಾಜಕೀಯ ನಿಘಂಟು

-ವೆಂಕಟೇಶ ಮಾಚಕನೂರ

ಆಂಗ್ಲ ಭಾಷೆಯ ಕೋಶಗಳಿಗೆ ಲೆಕ್ಕವಿಲ್ಲ. ಒಂದೊಂದು ಅಕ್ಷರಗಳಿಗೆ ಒಂದು ಕೋಶ ಇವೆ. ಇತರ ಅನೇಕ ಭಾಷೆಗಳಲ್ಲೂ ಇವೆ. ಹೀಗೆ ವಿಷಯವಾರು ನಿಘಂಟುಗಳಿರುವಾಗ ರಾಜಕೀಯ ಪಾರಿಭಾಷಿಕ ಶಬ್ದಕೋಶ ಈವರೆಗೆ ರಚನೆಗೊಳ್ಳದಿರುವುದು ಒಂದು ಲೋಪವೇ ಸರಿ!

 

 

 

 

 

 

 

 

 

 

ರಾಜಕೀಯ ನಂಟು ಅನ್ನುವ ಶಬ್ದವನ್ನು ತಾವು ಕೇಳಿಯೇ ಕೇಳಿರುತ್ತೀರಿ, ಅಥವಾ ದಿನಾಲು ವೃತ್ತ ಪತ್ರಿಕೆಗಳ ಮೇಲೆ ಕಣ್ಣಾಡಿಸುವಾಗ ರಾಜಕೀಯ ನಂಟಿನ ಒಂದೆರಡಾದರು ಸುದ್ದಿ ಸಮಾಚಾರಗಳು ತಮ್ಮ ಗಮನಕ್ಕೆ ನಿಶ್ಚಿತವಾಗಿ ಬಂದಿರುತ್ತವೆ. ರಾಜಕೀಯ ನಂಟಿಲ್ಲದ್ದು ಈಗ ಯಾವುದಿದೆ.

ನನಗೂ ನಿನಗೂ ಅಂಟಿದ ನಂಟಿನ

ಕೊನೆ ಬಲ್ಲವರಾರು ಕಾಮಾಕ್ಷಿಯೆ!

ಎಂದು ವರಕವಿ ಬೇಂದ್ರೆಯವರು ಹಾಡಿದ್ದು ತಮ್ಮ ಕೌಟುಂಬಿಕ ನಂಟು ಕುರಿತು. ಆದರೆ “ನಮಗೂ ರಾಜಕೀಯಕ್ಕೂ ಅಂಟಿದ ನಂಟಿನ ಒಳ ಮರ್ಮದ ಕೊನೆ ಬಲ್ಲವರಾರು ಹೇಳೊ ಧೀರಾ” ಎಂದು ನಮ್ಮ ರಾಜಕೀಯ ಪ್ರಭುಗಳು ಅನ್ನುತ್ತಾರೆ. ಅವರ ರಾಜಕೀಯ ಎಂದೂ ಕೊನೆಗೊಳ್ಳುವುದೇ ಇಲ್ಲ. ಅವರು ಏಳುತ್ತ ಬೀಳುತ್ತ ರಾಜಕೀಯದಲ್ಲಿ ಸದಾ ಚಾಲ್ತಿಯಲ್ಲಿಯಲ್ಲಿರಲು ಹೆಣಗಾಡುತ್ತಿರುತ್ತಾರೆ. ನಾವೇ ಆರಿಸಿ ಅಥವಾ ಬೀಳಿಸಿದ ನಮ್ಮ ಜನಪ್ರತಿನಿಧಿಗಳು ಹಳ್ಳಿಯಿಂದ ದಿಲ್ಲಿವರೆಗೆ ನಾನಾ ಬಗೆಯ ರಾಜಕೀಯ ವರಸೆ, ವರ್ತನೆ, ಮಾತು ಕೃತಿಗಳ ಮೂಲಕ ದಿನಾಲು ನಮ್ಮ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ಅವರ ಹಲವು ಬಗೆಯ ದೈನಂದಿನ ಉವಾಚಗಳು, ಟೀಕೆ ಟಿಪ್ಪಣಿಗಳು, ರಾಜಕೀಯ ಎದುರಾಳಿಗಳನ್ನು ಹಳಿಯಲು, ಹೊಗಳಲು, ತೆಗಳಲು ಬಳಸುವ ಭಾಷೆ, ನುಡಿಗಟ್ಟುಗಳು ನಮ್ಮ ಶಬ್ದಸಂಪತ್ತನ್ನು ವೃದ್ಧಿಸುತ್ತಲೇ ಇರುತ್ತವೆ.

ಚುನಾವಣೆಗಳ ಸಮಯದಲ್ಲಿ ಅವರ ಭಾಷೆಯ ಬೆಡಗು ಬೇರೆಯದೇ ಸ್ತರದಲ್ಲಿರುತ್ತದೆ. ಅದೊಂದು ರಾಜಕೀಯ ಪರಿಭಾಷೆ. ಅದಕ್ಕೆ ಅದರದೇ ಆದ ಲಯ, ಗತ್ತು, ಗಮ್ಮತ್ತು, ಗೈರತ್ತು ಇರುತ್ತದೆ. ಬೇರೆಬೇರೆ ಸಂದರ್ಭಗಳಲ್ಲಿ ಅಂದರೆ ಆಳುವ ಪಕ್ಷದವರು ವಿರೋಧ ಪಕ್ಷದಲ್ಲಿರುವಾಗ, ಅಥವಾ ವಿರೋಧ ಪಕ್ಷದವರು ಆಳುವವರಾಗಿರುವಾಗ ಬಳಸುವ ಪದಗಳು, ಭಾಷೆ ವಿಭಿನ್ನವಾಗಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ವಿಭಿನ್ನ ಧ್ವನಿಗಳು ಹೊರಡುತ್ತವೆ. ರಾಜಕೀಯ ಪರಿಭಾಷೆ ಸಂದರ್ಭಕ್ಕೆ ತಕ್ಕಂತೆ ಹೊಸಹೊಸ ಆಯಾಮ ಪಡೆಯುತ್ತಿರುತ್ತದೆ.

ಎದುರಾಳಿಗಳನ್ನು ಹಳಿಯಲು, ತೇಜೋವಧೆ ಮಾಡಲು ಬಳಸಲಾಗುವ ಶಬ್ದಗಳು ಸ್ವಲ್ಪ ಶಬ್ದಮಾಲಿನ್ಯವೆನಿಸಿದರೂ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ನಾವು ಅಂಥ ಶಬ್ದಗಳಿಗೆ ನಾಚಬಾರದು. ಭಾಷೆಯ ಬೆಡಗಿಗಾಗಿ ಅದನ್ನು ನಾವು ಆಸ್ವಾದಿಸಬೇಕು. ಹೊಸ ಶಬ್ದಗಳನ್ನು, ಪದ ಪ್ರಯೋಗಗಳನ್ನು ಮೆಚ್ಚಬೇಕು. ಇನ್ನು ಸಂಸತ್ತು, ಶಾಸನ ಸಭೆಗಳ ಕಲಾಪಗಳಲ್ಲಿ, ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಬಳಸಲಾಗುವ ಪದಗಳಿಗೆ ನಿಯಮಗಳಿರುತ್ತವೆ. ಸಂಸದೀಯ, ಅಸಂಸದೀಯ ಶಬ್ದಗಳೆಂಬ ಲಕ್ಷ್ಮಣ ರೇಖೆ ಇರುತ್ತದೆ. ಆದರೂ ಅಲ್ಲದ ಪದಗಳನ್ನು ಬಳಸುವುದು, ಅಂಥ ಪದಗಳ ಬಳಕೆಯಿಂದ ಸದನಗಳಲ್ಲಿ ಗದ್ದಲ ಏಳುವುದು, ಸಭೆ ಮುಂದೂಡುವುದು, ಕ್ಷಮೆಗೆ ಪಟ್ಟು ಹಿಡಿಯುವುದು, ಅಸಂಸದೀಯ ಪದಗಳನ್ನು ಸಭಾಪತಿಗಳು ಕಡತದಿಂದ ತೆಗೆದು ಹಾಕುವದು ಇವೆಲ್ಲ ನಡೆಯುತ್ತಲೇ ಇರುತ್ತವೆ. ಮನಬಂದಂತೆ ಮಾತನಾಡುವುದೇ ಪ್ರಜಾಪ್ರಭುತ್ವ!

ಕಳೆದ ಏಳು ದಶಗಳಿಂದ ನಾವು ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಂಡು ಮುನ್ನಡೆದಿದ್ದೇವೆ. ನಮ್ಮ ಸಂವಿಧಾನ ಸರ್ವಶ್ರೇಷ್ಠವಾದುದು ಎಂಬ ಹೆಮ್ಮೆ ಕೂಡ ನಮಗಿದೆ. ಜಗತ್ತಿನಲ್ಲಿ ಈಗ ಇರುವ ಆಡಳಿತ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಉತ್ತಮವಾದದ್ದು ಎನ್ನಲಾಗುತ್ತಿದೆ. ಇದು ಬರಿ ಚುನಾವಣೆಗೆ ಸೀಮಿತವಾದ ವಿಷಯವಲ್ಲ. ಪ್ರಜಾಮೌಲ್ಯಗಳು ಆಡಳಿತದಲ್ಲಿ ಪಾರದರ್ಶಕವಾಗಿ ವ್ಯಕ್ತವಾಗುವ ವ್ಯವಸ್ಥೆ ಇದು. ವಾಸ್ತವಾಂಶ ಬೇರೆ ಇರಬಹುದು. ಆಶಯ ಮಾತ್ರ ಪ್ರಜೆಗಳಿಂದ ಪ್ರಜೆಗಳಿಗಾಗಿ…

ನಮ್ಮದು ತುಡಿಯುವ ಡೆಮಾಕ್ರಸಿ ಎಂಬ ಮಾತುಗಳನ್ನೂ ಕೇಳುತ್ತೇವೆ. ಅದು ಯಾರಿಗಾಗಿ ಏತಕ್ಕೆ ತುಡಿಯುತ್ತದೆ ಎಂಬುದು ಬೇರೆ ಮಾತು. ಚುನಾವಣೆಗಳೆಂಬ ಐದು ವರ್ಷಗಳಿಗೊಮ್ಮೆ ನಡೆಯುವ ಹಬ್ಬಗಳು ನಮ್ಮ ಪ್ರಜಾಪ್ರಭುತ್ವ ತುಡಿಯುವ ಸಂದರ್ಭಗಳು. ಏನೇ ಆಗಲಿ ನಮ್ಮ ಪ್ರಜಾಪ್ರಭುತ್ವದ ಒಟ್ಟಾರೆ ಪ್ರಕ್ರಿಯೆಯಲ್ಲಿ ಬಳಸುವ, ಬಳಕೆಯಾಗುವ ಭಾಷೆ, ಅಪಾರ ಶಬ್ದ ಸಂಪತ್ತು ಕುರಿತು ಒಂದು ರಾಜಕೀಯ ಪರಿಭಾಷೆಯ ನಿಘಂಟು ಇರಬೇಕೆಂಬುದು ನನ್ನ ಬಲವಾದ ಬಯಕೆ. ಬೇರೆಬೇರೆ ಭಾಷೆಯ ರಾಜಕಾರಣಿಗಳು ರಾಜಕೀಯದಲ್ಲಿ ಕಲೆತು ದೇಶವನ್ನು ಮುನ್ನಡೆಸುವುದರಿಂದ ಒಂದು ರೀತಿಯ ಕಲಬೆರಕೆ ನಿಘಂಟು ಇದಾಗಬಹುದು.

ನಮ್ಮಲ್ಲಿ ಅನೇಕ ಬಗೆಯ ನಿಘಂಟುಗಳಿವೆ. ಕನ್ನಡದಲ್ಲಿ ರೆ.ಪರ್ಡಿನಾಂಡ್ ಕಿಟೆಲ್ ಮಹಾಶಯರಿಂದ ಹಿಡಿದು, ವಿವಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಖಾಸಗಿ ಪ್ರಕಾಶಕರು ಅನೇಕ ಬಗೆಯ ಶಬ್ದಕೋಶಗಳನ್ನು ಬಳಕೆಗೆ ತಂದಿದ್ದಾರೆ. ಕನ್ನಡದ ಒಡಲನ್ನು ಹಿಗ್ಗಿಸಿದ್ದಾರೆ. ಕೇವಲ ಶಬ್ದಕೋಶಗಳಲ್ಲದೆ ನಾ ಕಸ್ತೂರಿ ಅಂಥವರು ಅನರ್ಥಕೋಶವನ್ನು ಪ್ರಕಟಿಸಿ ಶಬ್ದಗಳ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿದ್ದಾರೆ. ಹಳಗನ್ನಡ ಶಬ್ದಕೋಶ, ಕಾನೂನು, ವೈದ್ಯಕೀಯ ವಿಷಯಗಳ ನಿಘಂಟುಗಳಿವೆ. ಸರಕಾರಿ ಕಚೇರಿಗಳಿಗಾಗಿಯೇ ಶಬ್ದಕೋಶವಿದೆ. ವೆಂಕಟಸುಬ್ಬಯ್ಯನವರ ಇಗೋ ಕನ್ನಡ ಕೋಶವಂತೂ ಅಪ್ರತಿಮವಾದುದು. ಇನ್ನು ಆಂಗ್ಲ ಭಾಷೆಯ ಕೋಶಗಳಿಗೆ ಲೆಕ್ಕವಿಲ್ಲ. ಒಂದೊಂದು ಅಕ್ಷರಗಳಿಗೆ ಒಂದು ಕೋಶ ಇವೆ. ಇದೇ ರೀತಿಯ ಕ್ರಮ ಇತರ ಅನೇಕ ಭಾಷೆಗಳಲ್ಲೂ ಇದೆ. ಹೀಗೆ ವಿಷಯವಾರು ನಿಘಂಟುಗಳಿರುವಾಗ ರಾಜಕೀಯ ಪಾರಿಭಾಷಿಕ ಶಬ್ದಕೋಶ ಈವರೆಗೆ ರಚನೆಗೊಳ್ಳದಿರುವುದು ಒಂದು ಲೋಪವೇ ಸರಿ. ಅದೊಂದು ಕೊರತೆಯನ್ನು ಸರಿಮಾಡುವ ಸಮಯ ಇದು.

ದಿನಬೆಳಗಾದರೆ ರಾಜಕೀಯ ವಲಯದಲ್ಲಿ ಎಂಥ ಭಾಷೆ, ಏನೆಲ್ಲ ಪದ ಪ್ರಯೋಗಳಾಗುತ್ತವೆ, ಎಷ್ಟು ಹೊಸ ಶಬ್ದಗಳು ಹುಟ್ಟುತ್ತವೆ, ನವೀನ ಅರ್ಥವ್ಯಾಪ್ತಿ ಪಡೆದುಕೊಳ್ಳುತ್ತವೆ, ಭಾಷೆಯ ಒಡಲು ವಿಸ್ತರಿಸುತ್ತಿರುತ್ತದೆ, ಶಬ್ದಗಳು ಅರ್ಥ, ಅನರ್ಥ, ಅಪಾರ್ಥ ರೂಪ ಪಡೆಯುತ್ತಿರುತ್ತವೆ. ಅವಕ್ಕೆ ಪ್ರತಿಶಬ್ದಗಳು ಜನ್ಮ ತಳೆಯುತ್ತವೆ. ಸಮಯ ಸಂದರ್ಭ ಅನುಸಾರ ರಾಜಕೀಯ ಶಬ್ದಗಳಿಗೆ ಹೊಸಹೊಸ ಅರ್ಥ ಪ್ರಾಪ್ತಿಯಾಗುವುದೊಂದು ವಿಶೇಷ. ಶಬ್ದ ಬಳಸುವ ರಾಜಕೀಯ ವ್ಯಕ್ತಿ, ಅವನ ಪಕ್ಷ, ನಿಷ್ಠೆ, ಸ್ಥಾನ ಆಧರಿಸಿ ಒಮ್ಮೆ ಸಮಾನಾರ್ಥ, ಒಮ್ಮೆ ವ್ಯಂಗ್ಯಾರ್ಥ, ಮತ್ತೊಮ್ಮೆ ವಿರುದ್ಧಾರ್ಥ ಹೀಗೆ ರಾಜಕೀಯ ಪರಿಭಾಷೆ, ನುಡಿಗಟ್ಟುಗಳು ಸಮಯ ಸಂದರ್ಭಾನುಸಾರ ಬೇರೆಬೇರೆ ಅರ್ಥ ಹೊಮ್ಮಿಸುತ್ತವೆ.

ಜನಸಾಮಾನ್ಯರಿಗೆ ಅವುಗಳನ್ನು ಅರ್ಥೈಯಿಸಿಕೊಳ್ಳಲು ಒಂದು ರಾಜಕೀಯ ನಿಘಂಟಿನ ಅವಶ್ಯಕತೆ ಅತೀ ಜರೂರಾಗಿದೆ. ಅದು ಕೇವಲ ರಾಜಕೀಯ ಪದಗಳ ಶಬ್ದಶಃ ಅರ್ಥ ನೀಡುವ ಶಬ್ದಕೋಶ ಮಾತ್ರವಾಗಿರದೆ ಆ ಶಬ್ದದ ನಿಷ್ಪತ್ತಿ, ಆ ಶಬ್ದ ಹುಟ್ಟಿ ಬೆಳೆದು ಬಂದ ಬಗೆ, ಕಾಲಕಾಲಕ್ಕೆ ಅದರ ಬಳಕೆಯಲ್ಲಿ ಆದ ಬೆಳವಣಿಗೆ, ಬಳಸಿದವರ ವಿವರ ಎಲ್ಲವನ್ನೂ ಒಳಗೊಳ್ಳಬೇಕಾಗುತ್ತದೆ. ರಾಜಕೀಯ ನುಡಿಗಟ್ಟುಗಳಿಗೆ ಇನ್ನೂ ಹೆಚ್ಚು ಅರ್ಥವ್ಯಾಪ್ತಿ ಇರುತ್ತದೆ. ಉದಾಹರಣೆಗೆ `ಆಯಾರಾಮ ಗಯಾರಾಮ’ ಎಂಬ ಶಬ್ದ ಎಲ್ಲಾ ಭಾಷೆಗಳ ಗಡಿಗಳನ್ನು ಮೀರಿ ಬಳಕೆಯಾಗುವಂಥದ್ದು ಮತ್ತು ಅನುಸರಿಸಲ್ಪಟ್ಟದ್ದು. ಈ ಶಬ್ದದ ವ್ಯೂತ್ಪತ್ತಿಗೆ ಕಾರಣನಾದ ರಾಜಕಾರಣಿ ಒಂದೇ ದಿನ ಮೂರು ಪಕ್ಷಕ್ಕೆ ನಿಷ್ಠೆ ತೋರಿ ಪಕ್ಷಾಂತರ ಮಾಡಿದನಂತೆ. ಇಂಥ ಶಬ್ದಗಳಿಗೆ ಹೆಚ್ಚು ವಿವರಣೆ ಮತ್ತು ಉದಾಹರಣೆಗಳನ್ನು ನೀಡಬೇಕಾಗುತ್ತದೆ. ಆ ಕಾರಣದಿಂದಾಗಿ ಜಾರಿಗೆ ಬಂದ ಪಕ್ಷಾಂತರ ನಿಷೇಧ ಕಾಯ್ದೆ ಕುರಿತು, ಕಾಯ್ದೆ ಇದ್ದರೂ ರಂಗೋಲಿ ಕೆಳಗೆ ನುಸುಳುವುದನ್ನೂ ಹೇಳಬೇಕಾಗುತ್ತದೆ.

`ಭ್ರಷ್ಟಾಚಾರ’ ಎಂಬ ಶಬ್ದದ ಅರ್ಥ ವಿವರಣೆ, ಅದರ ಆಳ, ಅಗಲ, ಎತ್ತರ, ಅದರ ಸ್ವರೂಪ ವಿರೂಪವನ್ನು ವಿವರಿಸಲು ಒಂದು ಶಬ್ದಕೋಶವೇ ಬೇಕಾದೀತು. ಇದು ಆಳುವ ಮತ್ತು ವಿರೋಧ ಪಕ್ಷದವರು ಕೂಡಿಯೆ ಮಾಡುವ ಕ್ರಿಯೆ. ಈ ಶಬ್ದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳನ್ನು ಒಳಗೊಳ್ಳುವುದರಿಂದ ಕೆಲವು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಬೇಕಾಗುತ್ತದೆ. `ಬೆನ್ನಿಗೆ ಚೂರಿ ಹಾಕು’ ಎಂಬುದು ರಾಜಕೀಯದಲ್ಲಿ ಬಹಳ ಬಳಕೆಯಾಗುವ ನುಡಿಗಟ್ಟು. ಇದಕ್ಕೆ ಕೇವಲ ಶಬ್ದಶಃ ಅರ್ಥ ನೀಡಿದರಾಗದು. ಅರವತ್ತರ ದಶಕದಿಂದ ಮೊದಲ್ಗೊಂಡು ಇತ್ತೀಚಿನ ಆಪರೇಶನ್ ಕಮಲದವರೆಗೆ ಯಾರು ಯಾರಿಗೆಲ್ಲಾ ಯಾವ ರೀತಿ ಚೂರಿ ಹಾಕಿದರು ಅಥವಾ ಹಾಕಿಸಿಕೊಂಡರು ಎಂಬುದನ್ನು ವಿವರಿಸಬೇಕಾಗುತ್ತದೆ. ಚೂರಿಯ ಹರಿತ, ಇರಿತದ ಆಳ, ಅದರ ಪರಿಣಾಮಗಳನ್ನು ಹೇಳಬೇಕಾಗುತ್ತದೆ. ತಿರುಗಿ ಚೂರಿ ಹಾಕಿದವರ ಬಗ್ಗೆಯೂ ಹೇಳಬೇಕಾಗುತ್ತದೆ. ಆದ್ದರಿಂದ ರಾಜಕೀಯ ಶಬ್ದಕೋಶ ರಚನೆಗೆ ಅಪಾರವಾದ ರಾಜಕೀಯ ಪರಿಜ್ಞಾನ, ರಾಜಕೀಯ ಒಳಸುಳಿಗಳ ಜ್ಞಾನವೂ ಇರಬೇಕಾಗುತ್ತದೆ. ರಾಜಕೀಯ ಇತಿಹಾಸ, ಘಟನೆಗಳು, ಸಂಗತಿಗಳ ಕುರಿತು ಆಳವಾದ ಅಧ್ಯಯನವೂ ಬೇಕು.

ರಾಜಕೀಯ ನಿಘಂಟು ಪ್ರಾದೇಶಿಕ ಭಾಷೆಗಳ ವ್ಯಾಪ್ತಿಯನ್ನು ಮೀರಿ ದೇಶವ್ಯಾಪಿ ಅರ್ಥವ್ಯಾಪ್ತಿಯನ್ನು ಒಳಗೊಂಡ ಕೋಶವಾಗಿರುತ್ತದೆ. ಏಕೆಂದರೆ ನಮ್ಮಲ್ಲಿ ರಾಷ್ಟ್ರರಾಜಕಾರಣ, ಹೈಕಮಾಂಡ್ ಇದೆಯಲ್ಲ. ಹೀಗಾಗಿ ಹಿಂದಿ ಶಬ್ದಗಳು, ನುಡಿಗಟ್ಟುಗಳು, ಪಡೆನುಡಿಗಳು ಬಳಕೆಯಲ್ಲಿರುತ್ತವೆ. `ಮೌತ್ ಕಾ ಸೌದಾಗರ್’ ಎಂಬ ಶಬ್ದ ವಿವರಿಸಲು ಸ್ವಲ್ಪ ಶ್ರಮಪಡಬೇಕಾಗುತ್ತದೆ. ನೈತಿಕತೆ, ನೈತಿಕ ಜವಾಬ್ದಾರಿ ಇತ್ಯಾದಿ ಶಬ್ದಗಳು ಬಳಸಿ ಬಳಸಿ ಸವಕಲಾಗಿದ್ದರೂ ನೈತಿಕತೆಯ ಪ್ರತಿರೂಪವಾಗಿದ್ದ ಕೆಲವು ಹಳೆತಲೆಮಾರಿನ ಉದಾಹರಣೆಗಳನ್ನು ಕೊಡುತ್ತಲೇ ಹೊಸ ತಲೆಮಾರಿನಲ್ಲಿ ಸದರಿ ಶಬ್ದ ಪಡೆದಿರುವ ವಿಭಿನ್ನ ಅರ್ಥವನ್ನು ನೀಡಬೇಕಾಗುತ್ತದೆ. ಕೆಲವೊಮ್ಮೆ ವಿರುದ್ಧಾರ್ಥವನ್ನು ನೀಡಿ ಅರ್ಥ ಸ್ಪಷ್ಟಗೊಳಿಸಬೇಕಾಗುತ್ತದೆ.

ನೈತಿಕತೆ ಶಬ್ದ ಆಳುವವರಿಗೆ, ವಿರೋಧ ಪಕ್ಷದಲ್ಲಿರುವವರಿಗೆ ಸಂದರ್ಭಾನುಸಾರ ಬೇರೆಬೇರೆ ಅರ್ಥ ನೀಡುವುದನ್ನು ಗಮನಿಸಬೇಕು. ಆದ್ದರಿಂದ ರಾಜಕೀಯ ನಿಘಂಟು ಒಂದು ಶಬ್ದದ ಅರ್ಥವನ್ನು ಎಲ್ಲರ ದೃಷ್ಟಿಕೋನದಿಂದಲೂ ಗಮನಿಸಿ ನೀಡಬೇಕಾಗುತ್ತದೆ. ಅದೇ ರೀತಿ ಸೆಕ್ಯುಲರ್ ಮತ್ತು ಕಮ್ಯುನಲ್ ಪದಗಳ ಅರ್ಥವ್ಯಾಪ್ತಿ ಸಂದರ್ಭಾನುಸಾರ ಬೇರೆಬೇರೆಯಾಗಿರುತ್ತದೆ. ಹೈಕಮಾಂಡ್ ಅನ್ನುವ ಶಬ್ದ ಪಕ್ಷದಿಂದ ಪಕ್ಷಕ್ಕೆ ಬೇರೆ ಅರ್ಥ ನೀಡುತ್ತದೆ. ಸ್ಥಳೀಯ ನಿಯಂತ್ರಕಗಳು, ಕೇಂದ್ರ ನಿಯಂತ್ರಕಗಳನ್ನು ವ್ಯಾಖ್ಯಾನಿಸಬೇಕಾಗುತ್ತದೆ. ನಿಯಂತ್ರಣದ ಸ್ವರೂಪವನ್ನು ಹೇಳಬೇಕಾಗುತ್ತದೆ.

ರಾಜಕೀಯ ಶಬ್ದಕೋಶ ನಾವು ದಿನಾಲು ಬಳಸುವ ಶಬ್ದಗಳನ್ನೇ ಒಳಗೊಂಡಿದ್ದರೂ ಅವುಗಳ ಅರ್ಥ ಮಾತ್ರ ಭಿನ್ನವಾಗಿರುತ್ತದೆ. ಅನರ್ಥ ಶಬ್ದಕೋಶಕ್ಕಿಂತಲೂ ರಾಜಕೀಯ ಶಬ್ದಕೋಶ ಹೆಚ್ಚಿನ ಅರ್ಥವ್ಯಾಪ್ತಿ ಹೊಂದಿ ಅನಾಹುತಕೋಶವಾಗಬಹುದು. ರಾಜಕೀಯ ಅಧೋಗತಿಗಿಳಿದಂತೆ ರಾಜಕೀಯ ಶಬ್ದಕೋಶ ಹೆಚ್ಚೆಚ್ಚು ಶಬ್ದಗಳನ್ನು ಒಳಗೊಳ್ಳುತ್ತ ನಿಘಂಟುವಿನ ಗಾತ್ರಕೂಡ ಹೆಚ್ಚುತ್ತ ಹೋಗುತ್ತದೆ.

ಹೆಚ್ಚು ಬಳಕೆಯಾಗುವ ಸ್ವಜನ ಪಕ್ಷಪಾತ, ರಾಜೀನಾಮೆಯಂತಹ ಶಬ್ದಗಳು ನೈತಿಕ, ಅನೈತಿಕ ಭ್ರಷ್ಟಾಚಾರ ಕಾರಣಗಳಿಗಾಗಿ ರಾಜೀನಾಮೆ, ಪಕ್ಷಪಾತ ಎಂದು ಬೇರೆಯೆ ಅರ್ಥ ವಿವರಣೆ ಬೇಡುತ್ತವೆ. ಬಹುಮತ ಕಳೆದುಕೊಂಡ ಕಾರಣಕ್ಕಾಗಿ ರಾಜೀನಾಮೆ ಶಬ್ದಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಬೇಕಾಗುತ್ತದೆ. ಇಗೋ ಕನ್ನಡದ ವೆಂಕಟಸುಬ್ಬಯ್ಯನವರು ಒಂದು ಶಬ್ದದ ವ್ಯುತ್ಪತ್ತಿ, ಅದರ ಬಳಕೆ, ಅರ್ಥವ್ಯಾಪ್ತಿ ಕುರಿತು ವಿವರಿಸಿದಂತೆ ರಾಜಕೀಯ ಶಬ್ದಕೋಶ ಅಂತಹ, ಅಥವಾ ಅದಕ್ಕೂ ಹೆಚ್ಚಿನ ವಿವರಣೆ ಬೇಡುತ್ತವೆ. ವಿಶ್ವಾಸ ಮತ, ಅವಿಶ್ವಾಸ ಗೊತ್ತುವಳಿ ಶಬ್ದಗಳು, ಶಬ್ದಶಃ ಅರ್ಥಕ್ಕಿಂತಲೂ ಒಳಾರ್ಥಗಳ ಕಡೆ ಗಮನಹರಿಸಬೇಕಾಗುತ್ತದೆ.

ಮತದಾರ, ಮತದಾನ, ಮತಯಂತ್ರ, ಮತಪತ್ರ, ಮತಎಣಿಕೆ, ಅಲ್ಪಮತ, ಬಹುಮತದಂತಹ ಶಬ್ದಗಳಿಗೆ ಹೆಚ್ಚು ವಿವೇಚನೆಯಿಂದ ಅರ್ಥ ನೀಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಾಧಾರ ಮತದಾರ. ಚುನಾವಣೆ ಪೂರ್ವ ಆತನಿಗೆ ಅತ್ಯಂತ ಬಲ ಮತ್ತು ಬೆಲೆ ಇರುತ್ತದೆ. ಮತ ಚಲಾಯಿಸುವ ಒಂದೈದು ನಿಮಿಷದ ಕ್ರಿಯೆ ಮುಗಿದ ಕೂಡಲೇ ಮತದಾರ ನೇಪಥ್ಯಕ್ಕೆ ಸರಿಯುತ್ತಾನೆ. ನಂತರ ಅವನ ಮತ ಪಡೆದು ಅಧಿಕಾರಕ್ಕೆ ಬಂದವರ ಅಟಾಟೋಪ, ರಿಸಾರ್ಟ್ ರಾಜಕಾರಣದ ಪರಿಗಳನ್ನು, ವಿವಿಧ ವಿನೋದಾವಳಿಗಳನ್ನು ನೋಡುತ್ತ ಕೈಕೈ ಹಿಸುಕಿಕೊಳ್ಳುತ್ತ ಕೂಡ್ರಬೇಕಾಗುತ್ತದೆ.

ಮತ್ತೊಂದು ಚುನಾವಣೆಯಲ್ಲಿ ಇವನಲ್ಲದಿದ್ದರೆ, ಇವನಂಥ ಇನ್ನೊಬ್ಬನಿಗೆ ಮತದಾನ ಮಾಡಲೇಬೇಕು. ಏಕೆಂದರೆ ಚುನಾವಣೆಗೆ ಮುನ್ನ ಮತದಾನದ ಮಹತ್ವ, ಪಾವಿತ್ರ್ಯ ಕುರಿತು ಅಭಿಯಾನಗಳು ನಡೆಯುತ್ತವೆ. `ನೋಟಾ’ ಮತದಾನಕ್ಕಿಂತ ನೋಟು ಪಡೆದು ಮತದಾನ ಮಾಡುವುದು ಮೇಲೆಂಬ ಪ್ರಚಾರ ಕೂಡ ಪಕ್ಷಗಳಿಂದ ನಡೆಯುವುದರಿಂದ ಕೆಲವು ಪ್ರಜೆಗಳು ತಮ್ಮ ಪವಿತ್ರ ಮತವನ್ನು ಹಣಕ್ಕೆ ವಿನಿಮಯ ಮಾಡಿಕೊಳ್ಳುತ್ತಾರೆ. ಚುನಾವಣೆ ಅಕ್ರಮಗಳ ಕುರಿತು ರಾಜಕೀಯ ಅರ್ಥಕೋಶ ವಿಶೇಷ ಗಮನವಹಿಸಬೇಕು. ಮತಯಂತ್ರಗಳ ಕುರಿತು ವಿವಾದದ ಇತಿಹಾಸವನ್ನೇ ನೀಡಬೇಕಾಗುತ್ತದೆ. ರಾಜಕೀಯ ಶಬ್ದಕೋಶ ಕೇವಲ ಒಂದು ಶಬ್ದದ ಅರ್ಥ ನೀಡುವ ಕೋಶವಾಗದೆ, ಶಬ್ದದ ಇತಿಹಾಸ, ಅದರ ಆಕಾರ ವಿಕಾರಗಳನ್ನೆಲ್ಲ ನೀಡುತ್ತ ಓದುಗರಿಗೆ ರಾಜಕೀಯ ಜ್ಞಾನ ನೀಡುವ ಕೋಶವೆನಿಸಬೇಕು.

ರಾಜಕೀಯ ಶಬ್ದಕೋಶದಲ್ಲಿ ಸೇರಬಹುದಾದ ತೀರ ಇತ್ತೀಚಿನ ಶಬ್ದಗಳಾದ ಜಂಗಲ್ ರಾಜ, ಶಹಜಾದೆ, ಹುಲಿಯಾ, ಟಗರು, ರಾಜಾಹುಲಿ, ಮಣ್ಣಿನ ಮಗ, ಜೋಡೆತ್ತು, ಕುಂಟೆತ್ತು, ಕವಲೆತ್ತು, ಸೆರಗೊಡ್ಡಿಬೇಡು, ಅನುಕಂಪದ ಅಲೆ, ಕಣ್ಣೀರು, ನಿಕಮ್ಮೆ, ನೀಚ, ಐಟಂ, ಚಾಯ್‍ವಾಲಾ, ರಿಸಾರ್ಟ್, ನಿಗಮ, ಮಂಡಳಿ, ಕೃಷಿಕಾಯ್ದೆಯಂತಹ ರಾಜಕೀಯ ವಾಸನೆ ಇರುವ ಎಲ್ಲಾ ಶಬ್ದಗಳೂ ಒಳಗೊಳ್ಳುತ್ತವೆ. ರಾಜಕೀಯ ತಂತ್ರ, ಕುತಂತ್ರ, ಷಡ್ಯಂತ್ರ, ಗಾಳ, ಪುಡಾರಿ, ಟಾಂಗ್‍ದಂತಹ ಶಬ್ದಗಳು, ನಾಚಿಕೆಯಾಗಬೇಕು, ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ, ಅವರಿಂದ ನಾವು ಪಾಠಕಲಿಯಬೇಕಿಲ್ಲ, ಪಕ್ಷದ ಶಿಸ್ತಿನ ಸಿಫಾಯಿ, ಭೂತದ ಬಾಯಲ್ಲಿ ಭಗವದ್ಗೀತೆ, ಕುಂಬಳ ಕಾಯಿಕಳ್ಳ, ಮೆಂಟಲ್ ಆಸ್ಪತ್ರೆಗೆ ಹೋಗಲಿ, ರಾಜಕೀಯ ಕುತಂತ್ರ, ನನ್ನ ಹೇಳಿಕೆಯನ್ನು ತಪ್ಪಾಗಿ ವರದಿಸಲಾಗಿದೆ, ರಾಜಕೀಯ ಪಿತೂರಿ, ಅಧಿಕಾರ ದುರ್ಬಳಕೆ, ಸಬ್ ಕಾ ಸಾಥ್…, ಗರೀಬಿ ಹಠಾವೊ. ಮಾಟಮಂತ್ರದಂತಹ ಜೋಡುನುಡಿಗಳು ನಿಘಂಟುವಿನ ಭಾಗಗಳಾಗುತ್ತವೆ.

ಮಠಗಳು, ಮಠಾಧಿಪತಿಗಳು, ಹೋಮ ಹವನ, ಯಜ್ಞಯಾಗಾದಿ, ಆಣೆಪ್ರಮಾಣಗಳು, ಲಿಂಬೆಹಣ್ಣು, ತೀರ್ಥಪ್ರಸಾದಗಳು, ಕೆಲವು ಮಠಮಂದಿರಗಳು, ಜೋತಿಷಿಗಳೂ ರಾಜೋಧಾರ್ಮಿಕ ಶಬ್ದಗಳಾಗಿ ನಿಘಂಟುವಿನಲ್ಲಿ ಸೇರ್ಪಡೆಗೊಳ್ಳುತ್ತವೆ. ರಾಜಕೀಯ ಕಾರಣಗಳಿಗಾಗಿ ಘೋಷಿಸಲಾದ ಯೋಜನೆಗಳು, ಅನುದಾನ, ನಿಗಮ ಮಂಡಲಿಗಳು, ಅವುಗಳ ಏಳುಬೀಳು ಅವಾಂತಾರಗಳು ನಿಘಂಟುವಿನ ಭಾಗಗಳಾಗಬೇಕಾಗುತ್ತದೆ.

ಪಾರದರ್ಶಕ ಆಡಳಿತ, ರಾಜಕೀಯ ಮುತ್ಸದ್ದಿ, ಮೌಲ್ಯಯುತ ರಾಜಕಾರಣ, ಸೈದ್ಧಾಂತಿಕ ರಾಜಕಾರಣ, ಸಮಾಜವಾದ, ಪ್ರಾಮಾಣಿಕ ರಾಜಕಾರಣಿ, ಅಭಿವೃದ್ಧಿ, ಜನಪರ ಆಡಳಿತ, ಜಾತ್ಯತೀತದಂತಹ ಮರೆತು ಹೋದ ಶಬ್ದಗಳ ಅರ್ಥವನ್ನು ತಿಳಿದವರಿಂದ ತಿಳಿದುಕೊಳ್ಳಬೇಕಾಗುತ್ತದೆ. ವಂಶಾಡಳಿತ, ಬಹುತ್ವ, ಅರ್ಬನ್ ನಕ್ಷಲ್, ದೇಶದ್ರೋಹ, ಬುದ್ಧಿಜೀವಿ, ಬಲಪಂಥ, ಎಡಪಂಥ, ತುಷ್ಟೀಕರಣ, ಲವ್ಹ ಜಿಹಾದ್, ಗೋಹತ್ಯ ಲಿಂಚಿಂಗ್, ಆತ್ಮಸಾಕ್ಷಿ, ಚೇಲಾದಂತಹ ಶಬ್ದಗಳು, ನಿರ್ಭಯಾ, ಹಾಥರಸಾ, ಉನ್ನಾವ, ಬಲರಾಮಪುರ, ಖೈರ್ಲಾಂಜಿದಂತಹ ಘಟನೆಗಳು, ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳು ನಮ್ಮ ರಾಜಕಾರಣದೊಡನೆ ಹೊಂದಿದ ಸಂಬಂಧಗಳಿಂದಾಗಿ ವಿವರಗಳೊಂದಿಗೆ ರಾಜಕೀಯ ಶಬ್ದಕೋಶ ಸೇರಲೇಬೇಕಾಗುತ್ತವೆ.

ಅನರ್ಥ ಕೋಶದಲ್ಲಿ ನಾ ಕಸ್ತೂರಿಯವರು ಕೆಲವು ರಾಜಕೀಯ ಶಬ್ದಗಳಿಗೆ ಅರ್ಥವನ್ನು ನೀಡಿದ್ದಾರೆ. ಉದಾ: ಆಶ್ವಾಸನೆ=ಹಲ್ಲು ತೊಳೆಯದ ಆಶಾಳ ಬಾಯಿಂದ ಬರುವ ವಾಸನೆ. ತಿಲಾಂಜಲಿ=ಅಂಜಲಿ ಎಂಬಾಕೆ ಎಳ್ಳು ಬೀರಿದ್ದು. ನಿರ್ವಾಹಕಿ= ನೀರು ತರುವಾಕೆ. ನರಹರಿ= ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆ. ಸಂಪಾದಕರು=ಚನ್ನಾಗಿ ಬೆಳೆದವರು. ಬರಹ=ನೀರಿಲ್ಲದ ಜನರ ಹಾಹಾಕಾರ. ದುಶ್ಯಾಸನ=ದುಷ್ಟಕಾನೂನು, ಇತ್ಯಾದಿ. ರಾಜಕೀಯ ಕೋಶ ಇವುಗಳಿಗೆ ಮೀರಿದ ವಿಶಾಲಾರ್ಥವನ್ನು ನೀಡಬೇಕಾಗುತ್ತದೆ.

ರಾಜಕೀಯ ನಿಘಂಟುವಿನಲ್ಲಿ ಒಳಗೊಳ್ಳಬಹುದಾದ ಕೆಲ ಶಬ್ದಗಳು ಮತ್ತು ಅವುಗಳ ಅರ್ಥ, ಆಯಾಮಗಳ ಕುರಿತು ನನ್ನ ಮಿತಿಯೊಳಗೆ ಕೆಲವು ಉದಾಹರಣೆಗಳನ್ನು ನೀಡಿದೆ ಅಷ್ಟೆ. ಮಿಕ್ಕಿದ್ದು ನಿಘಂಟು ರಚನೆ ತಜ್ಞರ ಕೆಲಸ. ವಿವಿಗಳು, ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳು ನಿಘಂಟುವಿನ ಕಾರ್ಯ ಕೈಗೆತ್ತಿಕೊಳ್ಳಬಹುದು. ಅಲ್ಲೂ ಕೂಡ ಈಗ ರಾಜಕೀಯ ಪ್ರವೇಶಿಸಿರುವುದರಿಂದ ನಿಘಂಟುವಿನ ಸ್ವರೂಪ, ಅರ್ಥವ್ಯಾಪ್ತಿಯನ್ನು ಅವು ಅರಿಯಬಲ್ಲವು. ತಜ್ಞರ ಸಮಿತಿಯಲ್ಲಿ ಭಾಷಾ ತಜ್ಞರಲ್ಲದೆ ರಾಜಕೀಯ ತಜ್ಞರು, ಪೂರ್ಣಕಾಲಿಕ ರಾಜಕಾರಣಿಗಳು, ಚುನಾವಣೆಗಳಲ್ಲಿ ಗೆದ್ದು, ಬಿದ್ದು, ಎದ್ದಿರುವವರು, ಪಕ್ಷಾಂತರ ಪ್ರವೀಣರಿದ್ದರೆ ಶಬ್ದಗಳ ಅರ್ಥ, ಒಳಾರ್ಥ, ಗೂಡಾರ್ಥಗಳ ವಿವರಣೆಗೆ ಸಹಕಾರಿಯಾಗಬಲ್ಲರು. ಭ್ರಷ್ಟ ನಿವೃತ್ತ ಅಧಿಕಾರಿಗಳು, ಸಮಿತಿಯಲ್ಲಿರುವುದು ಅಪೇಕ್ಷಣೀಯ. ರಾಜಕೀಯ ನಿಘಂಟುವಿನಲ್ಲಿ ಅನೇಕ ಕಾನೂನು ಶಬ್ದಗಳು, ಪಾರಿಭಾಷಿಕ ಪದಗಳು ಕೂಡ ಒಳಗೊಳ್ಳುವುದರಿಂದ ಕೋರ್ಟು, ಕಾನೂನುಗಳ ಆಟ ಬಲ್ಲವರು ಸಮಿತಿಯಲ್ಲಿರಬೇಕಾಗುತ್ತದೆ.

`ಅಕಟಕಟಾ, ಶಬ್ದದ ಲಜ್ಜೆಯನೋಡಾ!’ ಎಂದು ಅಲ್ಲಮನೆಂದಂತೆ ನುಡಿಯುವ ಭಾಷೆ, ಶಬ್ದಗಳು ನಾಚುವಂತೆ ರಾಜಕೀಯ ನಾಯಕರ ಮಾತುಗಳು ಇರುತ್ತವೆ. `ಸಂಸದೀಯ ಸಜ್ಜನಿಕೆ ಮತ್ತು ಪ್ರಜಾಸತ್ತಾತ್ಮಕ ಪರಿಭಾಷೆ’ ಮಾಯವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ನಿಘಂಟು ರಚನೆಗೊಂಡು ಎಲ್ಲರಿಗೂ ಮಾದರಿ ಆಗಬೇಕೆಂಬ ಆಶಯ ನನ್ನದು.

*ಲೇಖಕರು ನಿವೃತ್ತ ಕೆಎಎಸ್ ಅಧಿಕಾರಿ, ಖ್ಯಾತ ಪ್ರಬಂಧಕಾರರು. ಧಾರವಾಡದಲ್ಲಿ ನೆಲೆಸಿದ್ದಾರೆ.

Leave a Reply

Your email address will not be published.