ರಾಜಕೀಯ ಪಕ್ಷಗಳ ನಿಲುವು-ಒಲವು

ಪೌರತ್ವ (ತಿದ್ದುಪಡಿ) ಕಾಯಿದೆಯ ಕುರಿತ ‘ಮುಖ್ಯಚರ್ಚೆ’ಯ ವಿಷಯಕ್ಕೆ ಸಂಬಂಧಿಸಿ ಹಲವು ಪ್ರಮುಖ ಚಿಂತಕರ ಬರಹಗಳ ಜತೆಗೆ, ಕಾಯಿದೆಯನ್ನು ವಿರೋಧಿಸಿದ, ಬೆಂಬಲಿಸಿದ ಪ್ರಮುಖ ಪಕ್ಷಗಳ ರಾಜಕೀಯ ನಾಯಕರು ಒಟ್ಟಾರೆಯಾಗಿ ಈ ಕಾಯಿದೆಯ ಪರಿಣಾಮಗಳನ್ನು ಗ್ರಹಿಸಿದ ರೀತಿ ಹಾಗೂ ಕಾಯಿದೆ ಕುರಿತ ಅವರಭಿನ್ನ ಅಭಿಪ್ರಾಯಗಳನ್ನು ಓದುಗರ ಮುಂದಿರಿಸುವ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಬಿಜೆಪಿ ಮುಖಂಡ ಗೋ ಮಧುಸೂದನ ಹಾಗೂ ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತಾ ಅವರ ಸಂದರ್ಶನ ಇಲ್ಲಿವೆ.

ಸಂದರ್ಶನ: ಜಯಾತನಯ, ಶಿಶುನಾಳಾಧೀಶ

ದೇಶದೆಲ್ಲೆಡೆ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ನೀವು ಹೇಗೆ ಗ್ರಹಿಸುತ್ತೀರಿ..?

ಯು.ಟಿ.ಖಾದರ್: ದೇಶದಾದ್ಯಂತ ಇಂದು ನಡೆಯುತ್ತಿರುವ ಹೋರಾಟ ಭಾರತೀಯ ಸಂವಿಧಾನ ಹಾಗೂ ಮಹಾತ್ಮ ಗಾಂಧಿಯ ಕನಸಿನ ಭಾರತಕ್ಕಾಗಿ ನಡೆಯುತ್ತಿರುವ ಹೋರಾಟ. ದೇಶದಲ್ಲಿ ಇಂದು ಬಡವರು, ಶ್ರೀಮಂತರು, ದುಡಿಯುವ ವರ್ಗದ ಜನರು ಧೈರ್ಯವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯ
ವರೆಗೆ ಹೋಗುವುದಾದರೆ, ಅವರು ಯಾವುದೇ ಶಾಸ್ತ್ರವನ್ನು ನಂಬಿಕೊಂಡು ಹೋಗುವುದಲ್ಲ, ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಹೋಗುತ್ತಿದ್ದಾರೆ. ಇದನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವುದು ಪ್ರತಿಯೊಬ್ಬರ ಕರ್ತವ್ಯ. ಹಾಗೆ ನಮ್ಮ ಹೋರಾಟ ಸಂವಿಧಾನ ಮತ್ತು ರಾಷ್ಟ್ರದ ಉಳಿವಿಗಾಗಿ. ಎನ್‍ಆರ್‍ಸಿ ಮತ್ತು ಸಿಎಎಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗೊಂದಲಗಳನ್ನು ನಿವಾರಿಸಬೇಕು. ಈ ಸರ್ಕಾರದ ಕಾನೂನಿನಿಂದ ದೇಶದ ಮೂಲನಿವಾಸಿಗಳಿಗೆ ಯಾವುದೇ ಕಾರಣಕ್ಕೂ ಕೂಡಾ ತೊಂದರೆ ಆಗಬಾರದು. ಹಾಗೆಯೇ ಯಾವುದೋ ದೇಶದವರು ಇಲ್ಲಿದ್ದರೆ ಅವರನ್ನು ಅಲ್ಲಿಗೆ ಬಿಟ್ಟು ಬರಲಿ, ನಮಗೇನೂ ಅಭ್ಯಂತರವಿಲ್ಲ. ಎನ್‍ಆರ್‍ಸಿ ಜಾರಿಯಾಗದಿದ್ದಲ್ಲಿ ಸಿಎಎಯಿಂದ ವೈಯಕ್ತಿಕವಾಗಿ ಯಾರಿಗೂ ಕೂಡಾ ತೊಂದರೆಯಿಲ್ಲ. ಯಾವ ರಾಜ್ಯದಲ್ಲಿ ಎನ್‍ಆರ್‍ಸಿ ಜಾರಿಯಾಗುತ್ತದೆಯೋ ಆ ರಾಜ್ಯದಲ್ಲಿ ಸಿಎಎಯಿಂದ ತೊಂದರೆಯಾಗುತ್ತದೆ. ಇಂದು ಅಸ್ಸಾಂನಲ್ಲಿ ಬಿಜೆಪಿ ಪಕ್ಷ ಮತ್ತು ಮಿತ್ರಪಕ್ಷಗಳು ಹಾಗೂ ಅಲ್ಲಿನ ಜನಸಮುದಾಯದ ಹಿಂದೂ ಮುಸ್ಲಿಮರು ಎಲ್ಲರೂ ಸೇರಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಸ್ಸಾಮಿನಲ್ಲಿಯೇ ಇದನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ, ಇನ್ನು ಬೇರೆ ರಾಜ್ಯಗಳ ವಿಷಯ ಬಿಡಿ. ಜನಸಾಮಾನ್ಯರು ಇಂತಹ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಇರಬೇಕು. ಇಂತಹ ಹೋರಾಟಗಳಿಗೆ ನಾವು ಯಾವತ್ತೂ ತಯಾರಾಗಿರಬೇಕು.

ವೈ.ಎಸ್.ವಿ.ದತ್ತಾ: ಸಿಎಎ, ಎನ್‍ಸಿಆರ್, ಎನ್‍ಪಿಆರ್‍ಗಳಿಗೆ ವಿರುದ್ಧವಾಗಿದ್ದೇವೆ. ಅವು ಸಂವಿಧಾನಕ್ಕೆ ವಿರುದ್ಧವಾಗಿವೆ. ಕೇವಲ ಮುಸ್ಲಿಮರಿಗಷ್ಠೆ ತೊಂದರೆ
ಆಗುವುದಲ್ಲ. ಹಿಂದೂಗಳು, ಆದಿವಾಸಿಗಳು, ಅರಣ್ಯವಾಸಿಗಳು, ಬಡವರಿವಗೆ ತೊಂದರೆಯಾಗುತ್ತದೆ. ಅನಕ್ಷರಸ್ಥ ಹಿಂದೂಗಳಿಗೆ ತುಂಬಾ ತೊಂದರೆಯಾಗುತ್ತದೆ. ಅದರಲ್ಲಿ ಕೇಳಲಾಗುವ ದಾಖಲೆಗಳನ್ನು ಒದಗಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಈ ಕಾನೂನು ಸಂವಿಧಾನದ ಉಲ್ಲಂಘನೆಯಾಗಿದೆ. ಮೂರನೇ ಎರಡರಷ್ಟು ಬಹುಮತ ಇದ್ದರೂ ಸಹ ಇಂತಹ ಕಾನೂನುಗಳನ್ನು ಮಾಡುವಂತಿಲ್ಲ.

ಕೇಶವಾನಂದ ಭಾರತಿ ಪ್ರಕರಣದಲ್ಲಿ ಸ್ಪಷ್ಟವಾಗಿ ಸಂವಿಧಾನವನ್ನು ಉಲ್ಲಂಘಿಸುವ ಯಾವುದೇ ಕಾನೂನುಗಳನ್ನು ಬಹುಮತ ಇದ್ದು ಸಂಸತ್ತು ಅನುಮೋದನೆ ನೀಡಿದರೂ ಅವುಗಳು ಕಾನೂನಾಗಿ ಪರಿಗಣನೆ ಆಗುವುದಿಲ್ಲ, ಸಿಂಧುವಾಗುವುದಿಲ್ಲ ಎಂದು ತೀರ್ಪು ಕೊಟ್ಟಿರುವುದರಿಂದ ಇದೂ ಸಹ ಸರ್ವೋಚ್ಛ ನ್ಯಾಯಾಲಯದಲ್ಲಿ ಬಿದ್ದು ಹೋಗಲಿದೆ.

ಕೇವಲ ಸಿಎಎ ಕಾನೂನಿನಲ್ಲಿ ನಿಮಗೆ ಯಾವ ಆಕ್ಷೇಪಣೆಯಿದೆ..? ನೆರೆಹೊರೆಯ ದೇಶಗಳ ಹಿಂದೂ ಹಾಗೂ ಸಿಖ್ ನಿರಾಶ್ರಿತರಿಗೆ ಪೌರತ್ವ ನೀಡುವ ವಿಷಯದಲ್ಲಿ ಸಹಮತವಿದೆಯಲ್ಲವೇ..?

ಖಾದರ್: ನೋಡಿ, ಹಿಂದೂ ಮತ್ತು ಸಿಖ್ಖರಿಗೆ ಪೌರತ್ವ ನೀಡುವ ವಿಚಾರದಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ. ಇಲ್ಲಿ ವಿಷಯ ಏನೆಂದರೆ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾವುದೇ ಕಾನೂನು ದೇಶದಲ್ಲಿ ಬರಬಾರದು. ಪೌರತ್ವ ಹೇಗೆ ನೀಡಬೇಕು, ಅದಕ್ಕೆ ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಈ ಮುಂಚೆಯೇ, ಅಂದರೆ 1950ರಲ್ಲಿಯೇ ನಿರ್ಧರಿಸಲಾಗಿದೆ. ದಾಖಲೆಗಳನ್ನು ಕೇಳುವುದಿದ್ದಿದ್ದರೆ ಆಗಲೇ ಕೇಳಬಹುದಿತ್ತಲ್ಲ. ಅಂದು, ದೇಶದಲ್ಲಿರುವ ಮೂಲನಿವಾಸಿಗಳೆಲ್ಲರೂ ಭಾರತೀಯರೇ ಎಂದು ತೀರ್ಮಾನಿಸಲಾಗಿತ್ತು. ಮುಂದೆ ಪೌರತ್ವ ಬಯಸಿ ಬರುವವರಿಗೆ ಸಮಾನಹಕ್ಕು, ಸಮಾನ ಅವಕಾಶದ ಆಧಾರದಡಿಯಲ್ಲಿ ಯಾವುದೇ ಜಾತಿ, ಧರ್ಮಾಧಾರಿತವಾಗಿ ತಾರತಮ್ಯ ಮಾಡದೆ ಪೌರತ್ವ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಈಗ ಇವರು ಮುಸ್ಲಿಮರನ್ನು ಕೈಬಿಟ್ಟದ್ದಾರೆ.

ಒಂದು ವಿಚಾರವೇನೆಂದರೆ, ಪೌರತ್ವಕ್ಕ ಅರ್ಜಿ ಹಾಕಿದ ತಕ್ಷಣ ಯಾರೂ ಪೌರತ್ವ ಕೊಡುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಕೇವಲ 500 ಜನರಿಗೆ ಪೌರತ್ವ ನೀಡಲಾಗಿದೆ. ಈಗ ನಾವು ಅಮೆರಿಕಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರು ಯಾವುದೇ ಕಾರಣಗಳನ್ನು ನೀಡದೆ ನಮ್ಮ ಅರ್ಜಿಯನ್ನು ತಿರಸ್ಕರಿಸಬಹುದು. ಆದರೆ ಈ ಕಾನೂನಿನ ಸಮಸ್ಯೆ ಎಂದರೆ, ಪಾಕಿಸ್ತಾನದಲ್ಲಿ ಒಂದು ಮುಸ್ಲಿಮ್ ಕುಟುಂಬವಿದೆ. ಅವರಿಗೆ ಇಮ್ರಾನ್‍ಖಾನ್ ಇಷ್ಟವಿಲ್ಲ, ಅವರಿಗೆ ಇಸ್ಲಾಂ ರಾಷ್ಟ್ರ ಇಷ್ಟವಿಲ್ಲ. ಅಲ್ಲಿ ಬದುಕುವುದೂ ಇಷ್ಟವಿಲ್ಲ, ಆದರೆ ಭಾರತದಲ್ಲಿ ಬದುಕಬೇಕೆಂಬ ಆಸೆ ಇದೆ. ಅಂಥವರು ಅರ್ಜಿ ಸಲ್ಲಿಸಿದ ಮೇಲೆ ಅದನ್ನು ಪರಿಶೀಲಿಸಿ ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಅವರು ಮುಸ್ಲಿಮರು ಎನ್ನುವ ಕಾರಣಕ್ಕೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ತಾರತಮ್ಯ ಮಾಡುತ್ತಾರಲ್ಲ, ಇದು ಅಂಬೇಡ್ಕರ್ ಸಂವಿಧಾನಕ್ಕೆ ವಿರುದ್ಧ.

ಎನ್‍ಆರ್‍ಸಿ ಕೇವಲ ಮುಸ್ಲಿಮರಿಗೆ ಸಮಸ್ಯೆ ಅಷ್ಠೆ ಅಲ್ಲ, ಭಾರತದ ಬಡಜನರಿಗೆ, ನಿರ್ಗತಿಕರಿಗೆ, ಆದಿವಾಸಿಗಳಿಗೆ, ಅನಕ್ಷರಸ್ಥರಿಗೆ, ಅಲೆಮಾರಿಗಳಿಗೆ ಮುಂತಾದವರಿಗೂ ಹೊಡೆತ ನೀಡುತ್ತದೆ. ಈ ಮೂಲನಿವಾಸಿಗಳಿಗೆ ಸರ್ಕಾರ ಏಕೆ ಕಷ್ಟ ಕೊಡಬೇಕು? ಅವರನ್ನು ಏಕೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಬೇಕು?

ದತ್ತಾ: ಆಯಾ ದೇಶಗಳ ಕಾನೂನುಗಳು ಬೇರೆ ಬೇರೆಯಾಗಿರುತ್ತವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಜಾತ್ಯತೀತ ರಾಷ್ಟ್ರಗಳಲ್ಲ. ಅವು ಇಸ್ಲಾಮಿಕ್ ರಾಷ್ಟ್ರಗಳು. ಅವುಗಳ ಸಂವಿಧಾನವೇ ಬೇರೆ. ನಮ್ಮ ದೇಶದ ಸಂವಿಧಾನದಲ್ಲಿ ನಾವು ಹಿಂದೂರಾಷ್ಟ್ರ ಎಂದು ಹೇಳಿಕೊಂಡಿಲ್ಲ. ಜಾತ್ಯತೀತ ದೇಶ ಎಂದು ಹೇಳಿಕೊಂಡಿದ್ದೇವೆ. ಹಾಗಾಗಿ ನಮ್ಮ ಸಂವಿಧಾನದ ಪ್ರಕಾರ ನಾವು ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಾಣಬೇಕು ಎಂಬುದನ್ನು ಸಂವಿಧಾನದ 14 ಮತ್ತು 15ನೇ ವಿಧಿಯಲ್ಲಿ ಹೇಳಲಾಗಿದೆ. ಇದರಿಂದ ಸಂವಿಧಾನವೇ ನಮಗೆ ಪರಮೋಚ್ಛವಾಗಿದೆ. ಹೀಗಾಗಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಮತ್ತು ಅವರಿಗೆ ಪೌರತ್ವ ನೀಡಬೇಕು. ನಿರಾಶ್ರಿತ ಹಿಂದೂಗಳಿಗೂ ಪೌರತ್ವ ಕೊಡಿ, ಪಾರ್ಸಿಗಳಿಗೂ ಕೊಡಿ, ಬೌದ್ಧರಿಗೂ, ಸಿಖ್ಖರಿಗೂ, ಜೈನರಿಗೂ ಕೊಡಿ. ಆದರೆ, ಮುಸ್ಲಿಂರನ್ನು ಹೊರಗಿಡಬಾರದು. ಮುಸ್ಲಿಂರಿಗೂ ಸಮಾನವಾಗಿ ಪೌರತ್ವ ಕೊಡಬೇಕು.

ಸಿಎಎ ಹಾಗೂ ಎನ್‍ಆರ್‍ಸಿ ಚರ್ಚೆಯು ರಾಷ್ಟ್ರೀಯತೆಯ ಪರಿಭಾಷಯನ್ನು ಪುನರ್ ವಿಮರ್ಶಿಸಲು ಯತ್ನಿಸುತ್ತಿದೆಯೇ..? ಇದರಲ್ಲಿ ನಿಮಗೆ ಏನು ಆಕ್ಷೇಪವಿದೆ..?

ಖಾದರ್: ನಮಗೇನೂ ಆಕ್ಷೇಪವಿಲ್ಲ. ಆದರೆ ಸರ್ಕಾರ ಏನೇ ಕಾನೂನನ್ನು ತಂದರೂ ಅಂಬೇಡ್ಕರ್ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ತರಲಿ. ಯಾವ ಕೆಲಸವನ್ನು ಅಂಬೇಡ್ಕರ್ ಸಂವಿಧಾನವನ್ನು ಹೊರಗಿಟ್ಟು ಮಾಡುತ್ತಾರೋ ಅದಕ್ಕೆ ನಮ್ಮ ವಿರೋಧವಿದೆ. ಭಾರತ ದೇಶ ಉಳಿಯಬೇಕಾದರೆ ಜಾತ್ಯತೀತ ತತ್ವ ಉಳಿಯಬೇಕು ಅಷ್ಠೆ.

ದತ್ತಾ: ರಾಷ್ಟ್ರೀಯತೆಯೆಂದರೆ ಯಾರ್ಯಾರು ಈ ದೇಶದ ನಾಗರಿಕರಾಗಿದ್ದಾರೋ ಅವರೆಲ್ಲರೂ ರಾಷ್ಟ್ರೀಯತೆಯನ್ನು ಹೊಂದಿದವರಾಗಿದ್ದಾರೆ. ಇವರೆಲ್ಲರೂ ದೇಶಾಭಿಮಾನವನ್ನು ಹೊಂದಿರುವವರೇ ಆಗಿದ್ದಾರೆ. ಅದಿಲ್ಲದಿದ್ದರೆ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿದಾಗ, ಸುಪ್ರೀಂಕೋರ್ಟ್ ರಾಮಜನ್ಮಭೂಮಿ ಪರವಾಗಿ ತೀರ್ಪು ಕೊಟ್ಟಾಗ ಈ ದೇಶದಲ್ಲಿರುವ ಯಾವೊಬ್ಬ ಮುಸಲ್ಮಾನರೂ ಸಹ ಬೀದಿಗಿಳಿದು ಪ್ರತಿಭಟನೆ ಮಾಡಲಿಲ್ಲ. ಆಕ್ರೋಶವನ್ನು ವ್ಯಕ್ತಪಡಿಸಲಿಲ್ಲ. ಪಾಕಿಸ್ತಾನದ ಧ್ವಜ ಹಿಡಿದು ಮೆರವಣಿಗೆ ಮಾಡಲಿಲ್ಲ. ಆದ್ದರಿಂದ ಈ ದೇಶದ ಮುಸಲ್ಮಾನರು ಹಿಂದಿನಿಂದಲೂ ಇದ್ದಾರೆ ಇಲ್ಲಿ.

ರಾಷ್ಟ್ರೀಯತೆಯನ್ನು ವ್ಯಾಖ್ಯಾನ ಮಾಡಲು ಹೋದರೆ ಮೂಲನಿವಾಸಿಗಳು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕಾಗುತ್ತದೆ. ಮೂಲನಿವಾಸಿಗಳನ್ನು ಪತ್ತೆ ಮಾಡಲು ಹೋದರೆ ಈ ದೇಶದಲ್ಲಿ ದ್ರಾವಿಡರನ್ನು ಹೊರತುಪಡಿಸಿ ಎಲ್ಲರೂ ಸಹ ಹೊರ ದೇಶಗಳಿಂದ ವಲಸೆ ಬಂದಿರುವವರೇ ಆಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಹುತೇಕ ಮಂದಿ ಬೇರೆ ದೇಶದಿಂದ ವಲಸೆ ಬಂದಿರುವವರಾಗಿದ್ದಾರೆ.

ಎಂದಾದರೊಂದು ದಿನ ನಾವು ಎದುರಿಸಬೇಕಾದ ಬಾಂಗ್ಲಾ ನಿರಾಶ್ರಿತರ ಸಮಸ್ಯೆಯನ್ನು ಈ ಎನ್.ಆರ್.ಸಿ/ಸಿಎಎ ನೇರವಾಗಿ ಎದುರಿಸುತ್ತಿದೆಯಲ್ಲವೇ..?

ಖಾದರ್: ಬಾಂಗ್ಲಾದೇಶೀಯರನ್ನು ನಾವು ಈ ದೇಶದಲ್ಲಿ ಉಳಿಸಿಕೊಳ್ಳಲು ಹೋಗುತ್ತಿಲ್ಲ. ಅವರನ್ನು ಬೇಕಾದರೆ ಎತ್ತಿ ಅವರ ದೇಶಕ್ಕೆ ಬಿಸಾಕಿ.ನಮಗೇನೂ  ತೊಂದರೆಯಿಲ್ಲ. ಅಸ್ಸಾಂನಲ್ಲಿ ಪೌರತ್ವ ಮಾಹಿತಿ ಕಲೆಹಾಕಿದಾಗ ದಾಖಲೆಗಳಿಲ್ಲದ 19ಲಕ್ಷ ಜನರಲ್ಲಿ 14ಲಕ್ಷ ಜನರು ಹಿಂದೂಗಳು ಕ್ರಿಶ್ಚಿಯನ್ನರಿದ್ದರು. 1ಕೋಟಿ ಜನಸಂಖ್ಯೆಯಿರುವ ಅಸ್ಸಾಮಿನಲ್ಲಿ 19ಲಕ್ಷ ಜನರ ಬಳಿ ದಾಖಲೆಗಳಿಲ್ಲ. ಅದಲ್ಲದೆ ಕಾರ್ಗಿಲ್ ಯುದ್ಧದ ಸೈನಿಕನಿಗೂ ದಾಖಲೆ ಇಲ್ಲ. ಹೀಗಿರುವಾಗ ಭಾರತದಾದ್ಯಂತ ಇನ್ನೆಷ್ಟು ಜನರಲ್ಲಿ ದಾಖಲೆಗಳಿರಬಹುದು? ನಮ್ಮ ಊರಿನಲ್ಲಿಯೇ ದಾಖಲೆಗಳಿರದೆ ಬದುಕುತ್ತಿರುವ ಹಿಂದೂ ಮುಸ್ಲಿಮರಿದ್ದಾರೆ. ಅವರೆಲ್ಲಿ ಹೋಗಿ ಸಾಲು ನಿಲ್ಲಬೇಕು?

ದತ್ತಾ: ಬಾಂಗ್ಲಾ ನಿರಾಶ್ರಿತರ ಸಮಸ್ಯೆ ಎಂದಲ್ಲ. ನಮ್ಮ ದೇಶದ ಬಹಳಷ್ಟು ಜನ ಬೇರೆ ದೇಶಗಳಿಗೆ ಉದ್ಯೋಗಕ್ಕಾಗಿ ಹೋಗಿದ್ದಾರೆ. ಪಕ್ಷಿಗಳು, ಪ್ರಾಣಿಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುತ್ತವೆ. ಈ ವಲಸೆ ಎಂಬುದು ಪ್ರಾಕೃತಿಕವಾದ ಸಹಜ ಪ್ರಕ್ರಿಯೆ. ಅದರೊಳಗೆ ಆಹಾರದ ಅನ್ವೇಷಣೆ, ಉದ್ಯೋಗದ ಅನ್ವೇಷಣೆಗೆ, ಬದುಕಿನ ಅನ್ವೇಷಣೆಗೆ ಮನುಷ್ಯರು ಹೋಗುತ್ತಾರೆ. ಸಂತಾನೋತ್ಪತ್ತಿ, ಆಹಾರ, ಹವಾಮಾನ ವೈಪರೀತ್ಯಕ್ಕೆ ಪಕ್ಷಿಗಳು ವಲಸೆ ಹೋಗುತ್ತವೆ. ಆದ್ದರಿಂದ ವಲಸೆಯನ್ನು ಯಾವ ಸಂದರ್ಭ, ಯಾವ ಸನ್ನಿವೇಶ, ಯಾವ ಕಾರಣಕ್ಕೆ ವಲಸೆ ಬಂದಿದ್ದಾರೆ ಎಂಬುದನ್ನು ನೋಡಬೇಕಾಗುತ್ತದೆ. ಆ ಕಾರಣದಿಂದ ಬಾಂಗ್ಲಾ ನಿರಾಶ್ರಿತರ ಮೇಲೆ ನಾವು ಗದಾಪ್ರಹಾರ ಮಾಡುವ ಬದಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಯಾರದ್ದೂ ತಕರಾರಿಲ್ಲ. ಆದರೆ, ಇಂತಹ ನಿರಾಶ್ರಿತರಲ್ಲಿ ಹಿಂದೂಗಳು, ಮುಸಲ್ಮಾನರು ಎಂದು ಪ್ರತ್ಯೇಕಿಸಬೇಡಿ. ಎಲ್ಲರನ್ನೂ ಒಟ್ಟಿಗೆ ಮಾಡಬೇಕು.

ಯಾರು ಈ ದೇಶದಲ್ಲಿ ಪೌರರು ಹಾಗೂ ಪರಕೀಯರು ಎಂಬುದು ನಿರ್ಧಾರವಾಗಬೇಕಿದೆಯಲ್ಲವೇ..?

ಖಾದರ್: ಹೌದು ಅದರ ಸ್ಪಷ್ಟತೆ ಬೇಕಲ್ಲ. ಎಲ್ಲರೂ ಪರಕೀಯರು ಅಂತ ಮಾಡಲು ಹೊರಟರೆ ಹೇಗೆ? ನನ್ನ ಮನೆಗೊಬ್ಬ ಕಳ್ಳ ಬಂದರೆ, ಆ ಕಳ್ಳನನ್ನು ಹಿಡಿಯುವ ಬದಲು, ‘ನಿನ್ನ ಆರ್‍ಟಿಸಿ ತೋರಿಸು, ಆಧಾರ್ ಕಾರ್ಡು ತೋರಿಸು, ಐಡೆಂಟಿಟಿ ಕಾರ್ಡ್ ತೋರಿಸು’ ಎಂದು ನನ್ನ ದಾಖಲೆಗಳನ್ನು ಪರಿಶೀಲಿಸಲು ತೊಡಗಿ ನನ್ನನ್ನು ಕಳ್ಳನನ್ನಾಗಿಸಲು ಹೊರಟರೆ ಹೇಗೆ? ಈ ಕಾನೂನಿನ ಪರಿಸ್ಥಿತಿಯೂ ಹೀಗೆಯೇ ಇದೆ.

ದತ್ತಾ: ಈಗಾಗಲೇ ನಮ್ಮ ದೇಶದಲ್ಲಿ ಪೌರತ್ವ ಕಾನೂನಿದೆ. 1955ರಲ್ಲಿ ಪೌರತ್ವ ಕಾಯ್ದೆ ಬಂದಿದೆ. ಅದರಲ್ಲಿ ಭಾರತದ ಪ್ರಜೆ ಯಾರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದಕ್ಕೆ 1986ರಲ್ಲಿ, 2003ರಲ್ಲಿ ತಿದ್ದುಪಡಿಯಾಗಿದೆ. ಆಗ ಯಾರೂ ಸಹ ವಿರೋಧ ವ್ಯಕ್ತಪಡಿಸಿರಲಿಲ್ಲ. ಅಸ್ಸಾಂನಲ್ಲಿ ಎನ್‍ಆರ್‍ಸಿಯನ್ನು ಜಾರಿಗೆ ತಂದು ದಾಖಲೆಗಳನ್ನು ಹೊಂದಿಲ್ಲದವರನ್ನು ಡಿಟೆನ್ಷನ್ ಕ್ಯಾಂಪ್‍ನಲ್ಲಿ ಹಾಕುತ್ತೇವೆ ಎಂದು ಮುಸಲ್ಮಾನರನ್ನು ಗುರಿಯಾಗಿಸಿ ಪ್ರಯೋಗ ಮಾಡಲು ಹೋದರು. ಆದರೆ, ಎನ್‍ಆರ್‍ಸಿ ಮಾಡಿದರೆ ದಾಖಲೆ ಇಲ್ಲದ ಕೇವಲ ಮುಸಲ್ಮಾನರು ಸಿಕ್ಕಿ ಬೀಳುತ್ತಾರೆ ಎಂದುಕೊಂಡಿದ್ದರು. ಆದರೆ, ದಾಖಲೆ ಇಲ್ಲದ 19 ಲಕ್ಷ ಜನರ ಪೈಕಿ 12 ಲಕ್ಷ ಹಿಂದೂಗಳ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಇದರಿಂದ ಬಿಜೆಪಿ ಸರ್ಕಾರಕ್ಕೆ ಭ್ರಮನಿರಸನವಾಯಿತು.

ಆಗ ಹಿಂದೂಗಳನ್ನು ಸಹ ಡಿಟೆನ್ಷನ್ ಕ್ಯಾಂಪಿಗೆ ಹಾಕಬೇಕಾಗಿ ಬಂತು. ಹೀಗಾಗಿ ಹಿಂದೂಗಳನ್ನು ಉಳಿಸಿಕೊಂಡು ಮುಸಲ್ಮಾನರನ್ನು ಹೊರ ಹಾಕುವ ಉದ್ದೇಶದಿಂದಲೇ ಈ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೊಳಿಸುವ ದುಸ್ಸಾಹಸ ಮಾಡುತ್ತಿದ್ದಾರೆ.

ಸದ್ಯಕ್ಕೆ ಎನ್.ಆರ್.ಸಿ ಜಾರಿಗೆ ಬಂದಿಲ್ಲದೇ ಇರುವ ಸಂದರ್ಭದಲ್ಲಿ ಸಿಎಎ ಬಗೆಗಿನ ಪ್ರತಿಭಟನೆ ಅನವಶ್ಯಕವಲ್ಲವೇ..?

ಖಾದರ್: ಸಿಎಎ ವಿರುದ್ಧದ ನಮ್ಮ ಪ್ರತಿಭಟನೆ ಅನವಶ್ಯಕವಾಗುವುದಾದರೆ, ಒಬ್ಬ ಕೇಂದ್ರ ಸರ್ಕಾರದ ಗೃಹ ಸಚಿವರಾಗಿ, ಅಮಿತ್ ಶಾ ಅವರು ಸಂಸತ್ತಿನಲ್ಲಿ ‘ಈಗ ಎನ್‍ಆರ್‍ಸಿಯನ್ನು ಅಸ್ಸಾಮಿನಲ್ಲಿ ತಂದಿದ್ದೇವೆ. ಮುಂದೆ ದೇಶದಾದ್ಯಂತ ತರುತ್ತೇವೆ, ಮೊದಲು ಎನ್‍ಆರ್‍ಸಿ ನಂತರ ಎನ್‍ಪಿಆರ್ ಹಾಗೂ ಸಿಎಎ ದೇಶದಾದ್ಯಂತ ಜಾರಿಯಾಗುತ್ತದೆ’ ಎಂಬಂತಹ ಮಾತುಗಳನ್ನಾಡಿದ್ದಾರೆ. ಅಂತಹ ಮಾತುಗಳ ಅಗತ್ಯವಿತ್ತೇ? ಅದೂ ಅನವಶ್ಯಕ ಅಲ್ಲವೇ. ಗೃಹ ಸಚಿವರ ಮಾತೇ ವಾಸ್ತವವಾಗಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಿದ್ದು. ಅದನ್ನು ಮಾಧ್ಯಮಗಳು ಇನ್ನಷ್ಟು ಗೊಂದಲಕ್ಕೀಡು ಮಾಡಿದವು.

ಅಲ್ಲದೆ ಸರ್ಕಾರ ಈ ವಿಚಾರವಾಗಿ ಇದುವರೆಗೆ ಸರಿಯಾಗಿ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಎನ್‍ಆರ್‍ಸಿಯನ್ನು ಎಲ್ಲಾ ಕಡೆ ಜಾರಿಗೊಳಿಸುವುದಿಲ್ಲ, ಎನ್‍ಪಿಆರ್‍ನಲ್ಲಿ ಮಾಹಿತಿ ಕಲೆ ಹಾಕುವುದರ ಹೊರತಾಗಿ ಬೇರೆ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ, ನೀವು ವಿಶ್ವಾಸ ಇಟ್ಟುಕೊಳ್ಳಿ, ಮೂಲನಿವಾಸಿಗಳಿಗೇನೂ ತೊಂದರೆಯಿಲ್ಲ, ಬಾಂಗ್ಲಾ ವಲಸಿಗರನ್ನು ಹುಡುಕಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟವಾಗಿ ಹೇಳಬಹುದಿತ್ತಲ್ಲ.
ಯಾರು ಬೇಡ ಎನ್ನುತ್ತಾರೆ? ದೇಶದ ಭದ್ರತೆ ಇವರಿಗಷ್ಠೆ ಅಲ್ಲ, ಎಲ್ಲರಿಗೂ ಮುಖ್ಯ. ತಮ್ಮ ರಾಜಕೀಯವನ್ನು ನಡೆಸಲು ಯಾಕೆ ಇಂತಹ ಗೊಂದಲ ಸೃಷ್ಟಿಸಬೇಕಿತ್ತು? ಗೊಂದಲ ಸೃಷ್ಟಿಸಿ ಹಿಂದೂ ಮುಸ್ಲಿಮರನ್ನು ವಿಭಜಿಸಬೇಕೆಂಬ ಉದ್ದೇಶ ಅವರದ್ದಾಗಿತ್ತು. ಆದರೆ ಈಗ ನಡೆಯುತ್ತಿರುವ ಎಲ್ಲಾ ರೀತಿಯ ಹೋರಾಟಗಳಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲ ಒಂದಾಗಿದ್ದಾರೆ, ಬಿಜೆಪಿಯವರು ಮಾತ್ರ ಬೇರೆಯಾಗಿದ್ದಾರೆ ಅಷ್ಠೆ.

ದತ್ತಾ: ಅಸ್ಸಾಂನಲ್ಲಿ ಆಗಿರುವುದು ಕರ್ನಾಟಕದಲ್ಲಿ ಆಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಇದೆ. ಕೇಂದ್ರ ಸರ್ಕಾರ ಹೋಗುತ್ತಿರುವ ಆವೇಗ ನೋಡಿದರೆ ತನ್ನ ಹಿಡನ್ ಅಜೆಂಡಾ ಜಾರಿಗೆ ತರಲು ಹೊರಟಿದೆ. ಎನ್‍ಪಿಆರ್ ತಂದಿರುವ ಉದ್ದೇಶವೂ ಇದರಲ್ಲಿ ಅಡಗಿದೆ. ಹೇಗಿದ್ದರೂ ಪ್ರತಿ ವರ್ಷಕ್ಕೆ ಒಮ್ಮೆ ಜನಗಣತಿ ಆಗುತ್ತಿತ್ತು. ಆದರೆ, ಈಗ ವಂಶಜರ ತಾತಂದಿರು, ಅಜ್ಜಿಯಂದಿರ ದಾಖಲೆಗಳನ್ನೂ ಕೊಡಿ ಎಂದು ಕೇಳುತ್ತಿದ್ದಾರೆ. ಇಂತಹ ದಾಖಲಾತಿಗಳನ್ನು ನೀಡುವುದಾದರು ಹೇಗೆ? ಈ ಕಾರಣದಿಂದಲೇ ಪ್ರತಿಭಟನೆಗಳನ್ನು ನಡೆಸುವ ಮೂಲಕ ಇಂತಹ ಅವೈಜ್ಞಾನಿಕ ನೀತಿಯನ್ನು ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯವಾಗಿದೆ.

Leave a Reply

Your email address will not be published.