ರಾಜಕೀಯ ಪ್ರಾತಿನಿಧ್ಯದ ಕೊರತೆ!

-ಸಿ.ಎಸ್.ದ್ವಾರಕಾನಾಥ್

ಸಿ.ಎಸ್.ದ್ವಾರಕಾನಾಥ್

ಕಾಂಗ್ರೆಸ್, ಜೆಡಿಎಸ್ ನಂತಹ ಸೆಕ್ಯುಲರ್ ಪಕ್ಷಗಳು ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಸೋಲುತ್ತಾರೆಎಂಬ ಕಾರಣ ನೀಡಿ ಟಿಕೆಟ್ ನೀಡುವುದನ್ನೇ ಕಡಿಮೆ ಮಾಡತೊಡಗಿದವು! ಇದರ ಪರಿಣಾಮ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯ ತೀರಾ ಕಡಿಮೆಯಾಗತೊಡಗಿತು.

ಸಾದಾರಣವಾಗಿ ಮುಸ್ಲಿಂ ಸಮುದಾಯದ ಯಾವುದೇ ಚರ್ಚೆ ಬಂದಾಗಲೆಲ್ಲಾ ಮುಸ್ಲಿಂ ಸಮುದಾಯದ ಬಗ್ಗೆ ಪೂರ್ವಗ್ರಹ ಪೀಡಿತರಾಗಿರುವ ಬಹುತೇಕರು ಚರ್ಚೆಯನ್ನು ಕೊಂಡೊಯ್ಯುವುದೇ ಧಾರ್ಮಿಕ ಮೂಲಭೂತವಾದದ ನೆಲೆಗಳಲ್ಲಿ. ಬಹಳಷ್ಟು ಸಂದರ್ಭಗಳಲ್ಲಿ ಸಾಮಾಜಿಕ ಸುಧಾರಣೆಯ ಹೆಸರಲ್ಲಿ ಚರ್ಚೆ ಆರಂಭಿಸಿದರೂ ಪರ್ಯಾವಸಾನವಾಗುವುದು ಮಾತ್ರ ಮುಸ್ಲಿಂ ಮೂಲಭೂತವಾದದಲ್ಲಿ! ಇಲ್ಲಿ ಮುಸ್ಲಿಂ ಮೂಲಭೂತವಾದ ಕಾಣುವಷ್ಟು ಢಾಳಾಗಿ ಹಿಂದೂ ಮೂಲಭೂತವಾದ ಕಾಣಲ್ಲ. ಅದಕ್ಕೆ ನಾನಾ ಕಾರಣಗಳಿದ್ದು ಅದನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕಾಗುತ್ತದೆ.

ಮುಸ್ಲಿಂ ಸಮುದಾಯದ ಸಾಮಾಜಿಕ ಸುಧಾರಣೆಯ ಕುರಿತು ಚರ್ಚಿಸುವಾಗ ಎರಡು ಪ್ರಮುಖ ವರದಿಗಳನ್ನು ಪರಿಶೀಲಿಸಬೇಕಾಗುತ್ತದೆ:

ಜಸ್ಟೀಸ್ ರಂಗನಾಥ ಮಿಶ್ರಾ ಆಯೋಗದ ವರದಿ ಮತ್ತು ಜಸ್ಟೀಸ್ ಸಾಚಾರ್ ಸಮಿತಿಯ ವರದಿ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ರಂಗನಾಥ ಮಿಶ್ರಾ ಅವರು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಛೇರ್ಮನ್ರಾಗಿ ಮುಸ್ಲಿಂ ಸಮುದಾಯದ ಬಗ್ಗೆ ಅಧ್ಯಯನ ಮಾಡಿ ಒಂದು ವರದಿಯನ್ನು ನೀಡುತ್ತಾರೆ. ಅದರಲ್ಲಿ ಪ್ರಮುಖವಾಗಿ ದಾಖಲಿಸಿರುವ ಮೂರು ಅಂಶಗಳೆಂದರೆ

1. ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಮುಸ್ಲಿಮರಿಗೆ 10% ಮೀಸಲಾತಿ ನೀಡಬೇಕು.

2. ಈಗಿರುವ ಇತರೆ ಹಿಂದುಳಿದ ವರ್ಗಗಳ 27% ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ 8.4% ನೀಡಬೇಕು.

3. ಇಸ್ಲಾಂ ಮತಕ್ಕೆ ಮತಾಂತರ ಹೊಂದಿದವರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ನೀಡಿತು.

2004ರಲ್ಲಿ ನೇಮಿಸಿದ ಜಸ್ಟೀಸ್ ರಂಗನಾಥ ಮಿಶ್ರ ಆಯೋಗ 2007ರಲ್ಲಿ ವರದಿ ನೀಡಿತು. ಇದನ್ನು ಬಿಜೆಪಿ ಬಲವಾಗಿ ವಿರೋಧಿಸಿದ ಕಾರಣ ವರದಿ ಜಾರಿಯಾಗಲಿಲ್ಲ.

ಸರ್ಕಾರಿ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಮತ್ತು ಇತರೆ ಸಾಮಾಜಿಕ ಸಮಸ್ಯೆಗಳ ಕುರಿತಂತೆ ಅಧ್ಯಯನ ಮಾಡಲು ಮನಮೋಹನ್ ಸಿಂಗ್ ಸರ್ಕಾರ 2005 ರಲ್ಲಿ ಜಸ್ಟೀಸ್ ರಾಜೇಂದ್ರ ಸಾಚಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಮುಸ್ಲಿಂ ಸಮುದಾಯ ಶಿಕ್ಷಣದಲ್ಲಿ ದಲಿತ ಸಮುದಾಯಕ್ಕಿಂತಲೂ ಕೆಳ ಮಟ್ಟದಲ್ಲಿದೆ ಎಂದು ಅಂಕಿ ಅಂಶ ನೀಡಿದ ಸಾಚಾರ್ ಮುಸ್ಲಿಂ ಸಮುದಾಯ ವಾಸಿಸುವ ಮೊಹಲ್ಲಾಗಳಲ್ಲಿ ಉನ್ನತ ಮಟ್ಟದ ಸರ್ಕಾರಿ ಶಾಲೆಗಳನ್ನು ತೆರೆಯಬೇಕು. ಮುಸ್ಲಿಂ ಹೆಣ್ಣುಮಕ್ಕಳಿಗೆ ಅದರಲ್ಲೂ ಒಂಬತ್ತರಿಂದ ಹನ್ನೆರಡು ವಯಸ್ಸಿನ ಮುಸ್ಲಿಂ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಆದ್ಯತೆ ನೀಡಬೇಕು. ಅತಿ ಹೆಚ್ಚು ಮಹಿಳಾ ಶಿಕ್ಷಕರನ್ನು ನೇಮಿಸಬೇಕುಎಂದು ಸಲಹೆ ನೀಡಿದರು. ಉತ್ತರ ಪ್ರದೇಶದ ಸನಾತನ ವೈದಿಕ ಧರ್ಮಎಂಬ ಹೆಸರಿನ ಸಂಸ್ಥೆಯೊಂದು ಸಾಚಾರ್ ವರದಿಯಿಂದ ಹಿಂದುಗಳ ಹಕ್ಕುಗಳಿಗೆ ಚ್ಯುತಿ ಬರುತ್ತದೆಎಂದು ನ್ಯಾಯಾಲಯಕ್ಕೆ ಹೋಗಿ ವರದಿ ಜಾರಿಯಾಗದಂತೆ ತಡೆಯಾಜ್ಞೆ ತಂದಿತು.

ಎಲ್ಲಾ ಕಾರಣಗಳಿಗಾಗಿ ಮುಸ್ಲಿಂ ಸಮುದಾಯದ ಸಾಮಾಜಿಕ ಸಮಸ್ಯೆಗಳು ಬಗೆಹರೆಯಲೂ ಇಲ್ಲ ಅವುಗಳ ಕುರಿತು ಚರ್ಚೆಯಾಗಲೂ ಇಲ್ಲ.

ಮುಸ್ಲಿಂ ಮೀಸಲಾತಿಗೆ ಸಂಬಂಧಿಸಿದಂತೆಯೂ ಆಂಧ್ರ ಪ್ರದೇಶದ ಹೈಕೋರ್ಟ್ ಧಾರ್ಮಿಕ ಅಲ್ಪಸಂಖ್ಯಾತರನ್ನು ಜಾತಿಯಾಗಿ ಪರಿಗಣಿಸಲಾಗದು ಎಂಬ ಕಾರಣ ನೀಡಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವುದರ ವಿರುದ್ಧ ತೀರ್ಪು ನೀಡಿತು. ಕರ್ನಾಟಕದಲ್ಲಿ ಮಾತ್ರ ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ 2(ಬಿ)ಯಲ್ಲಿ 4% ಮೀಸಲಾತಿ ನೀಡಲಾಯಿತು. ಅಂತೆಯೇ ಪ್ರವರ್ಗ ಒಂದರ ಅತಿ ಹಿಂದುಳಿದವರ ಪಟ್ಟಿಯಲ್ಲೂ ಅಲೆಮಾರಿ ಗುಣಲಕ್ಷಣಗಳಿರುವ ದರ್ವೇಸ್, ಚಪ್ಪರ್ಬಂದ್, ಪಿಂಜಾರ, ನದಾಫ್ ಅಂತಹ ಸುಮಾರು ಎಂಟು ಸಮುದಾಯಗಳು ಇವೆ. ದುರಂತವೆಂದರೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯಕ್ಕೆ ಈವರೆಗೂ ನೀಡಿರುವ ಮೀಸಲಾತಿ ಕುರಿತು ದ್ವಿತೀಯ ಮೂಲದ ಮಾಹಿತಿಯನ್ನು ಗಮನಿಸಿದಾಗ ಮುಸ್ಲಿಂ ಸಮುದಾಯ ಪಡೆದುಕೊಂಡಿರುವ ಮೀಸಲಾತಿ, ಸರ್ಕಾರಿ ಸವಲತ್ತು, ಅನುದಾನ, ಸರ್ಕಾರಿ ನೆರವುಗಳು ಅತಿ ಕಡಿಮೆ! ಇದಕ್ಕೆ ಕಾರಣ ಮುಸ್ಲಿಂ ಸಮುದಾಯಕ್ಕೆ ಸರಕಾರಿ ಸವಲತ್ತುಗಳನ್ನು ಪಡೆಯಲು ಇರಬೇಕಾದ ಅರಿವು ಇಲ್ಲದಿರುವುದು ಮತ್ತು ಅರಿವು ಮೂಡಿಸಬೇಕಾದ ಹಾಗೂ ಸರ್ಕಾರದ ಮೇಲೆ ಒತ್ತಡ ತರಬೇಕಾದ ಬಲವಾದ ರಾಜಕೀಯ ನಾಯಕತ್ವದ ಕೊರತೆ ಇರುವುದು!

ಕರ್ನಾಟಕದಲ್ಲಿ ಜಾಫರ್ ಷರೀಫ್, ಅಜೀಜ್ ಸೇಠ್ ಅಂತಹ ನಾಯಕರು ನಂತರದ ರಾಜಕಾರಣದಲ್ಲಿ ಬರಲೇ ಇಲ್ಲ. ಇನ್ನು ನಜೀರ್ ಸಾಬ್, ಮೊಹಿಯುದ್ದೀನ್ ಅಂತಹವರು ಅತ್ಯಂತ ಉದಾರವಾದಿಗಳಾಗಿದ್ದು ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವಂತೆ ಕಾಣಲಿಲ್ಲ.

ಅದರಲ್ಲೂ 92 ಬಾಬರಿ ಮಸೀದಿ ದ್ವಂಸ ಪ್ರಕರಣದ ನಂತರ ಸಂಘಪರಿವಾರ ಮುಸ್ಲಿಂ ದ್ವೇಷವನ್ನು ತೀವ್ರವಾಗಿ ಬಿತ್ತಿ, ಹಿಂದು ಮತಗಳನ್ನು ಕ್ರೋಡೀಕರಿಸಲು ಯಶಸ್ವಿಯಾದ ಪರಿಣಾಮ ಕರ್ನಾಟಕದ ಅನೇಕ ಭಾಗಗಳಿಂದ ವಿಧಾನಸಭೆಗೆ ಗೆದ್ದು ಬರುತ್ತಿದ್ದ ಮುಸ್ಲಿಂ ಪ್ರತಿನಿಧಿಗಳು ಸೋಲತೊಡಗಿದರು. ಕ್ರಮೇಣ ಕಾಂಗ್ರೆಸ್, ಜೆಡಿಎಸ್ ನಂತಹ ಸೆಕ್ಯುಲರ್ ಪಕ್ಷಗಳು ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಸೋಲುತ್ತಾರೆಎಂಬ ಕಾರಣ ನೀಡಿ ಟಿಕೆಟ್ ನೀಡುವುದನ್ನೇ ಕಡಿಮೆ ಮಾಡತೊಡಗಿದವು! ಇದರ ಪರಿಣಾಮ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯ ತೀರಾ ಕಡಿಮೆಯಾಗತೊಡಗಿತು. ಶಿವಾಜಿನಗರದಂತಹ ಮುಸ್ಲಿಮ್ ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬರುತ್ತಿದ್ದ ಸಿ.ಎಂ.ಇಬ್ರಾಹಿಂ, ರೋಷನ್ ಬೇಗ್ ಥರದವರೂ ಕ್ರಮೇಣ ಸೊಲತೊಡಗಿದರು! ಕಡೆಗೆ ನಜೀರ್ ಅಹಮದ್, ಸಲೀಂ ಅಹಮದ್ ಅವರಂತಹವರು ಮತ್ತು ಈಚೆಗೆ ಗೆದ್ದ ರಿಜ್ವಾನ್ರಂತಹ ದುರ್ಬಲ ನಾಯಕರು ಕಾಣಿಸಿಕೊಂಡರು.

ಮಧ್ಯೆ ಎಸ್.ಡಿ.ಪಿ.. ಮತ್ತು ಒವೈಸಿಯವರ ಎಂ.ಎಂ. ನಂತಹ ಮುಸ್ಲಿಂ ಬೇಸ್ ಪಕ್ಷಗಳು ಮುಸ್ಲಿಂ ಜನಸಂಖ್ಯೆ ಹೆಚ್ಚು ಇರುವ ಕ್ಷೇತ್ರಗಳಲ್ಲಿ ಬಲಿಷ್ಟವಾದವು. ಎಸ್.ಡಿ.ಪಿ.. ಅಂತೂ ಕರ್ನಾಟಕದ ಹಲವಾರು ಕಡೆ ಸ್ಥಳೀಯ ಸಂಸ್ಥೆಗಳಲ್ಲಿ ನಿಧಾನಕ್ಕೆ ಹಲವು ಕಡೆ ಗೆಲ್ಲುತ್ತಾ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಆರಂಭಿಸಿತು. ಇದರಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಂತಹ ಸೆಕ್ಯುಲರ್ ಪಕ್ಷಗಳಿಗೆ ಕ್ಕೆಯಾಗಿರುವುದು ವಾಸ್ತವ! ಕಾರಣಕ್ಕೆ ಎಸ್.ಡಿ.ಪಿ.. ಅನ್ನು ಮುಸ್ಲಿಂ ಮೂಲಭೂತವಾದಿ ಪಕ್ಷವೆಂದು ನಿರೂಪಿಸಲು ಬಿಜೆಪಿ ಯಷ್ಟೇ ಕಾಂಗ್ರೆಸ್, ಕಮುನಿಸ್ಟ್ ಮತ್ತು ಜೆಡಿಎಸ್ ಗಳು ಕೂಡ ತೀವ್ರವಾಗಿ ಪ್ರಯತ್ನಿಸುತ್ತಿವೆ! ಕಾರ್ಯಕ್ಕೆ ನಮ್ಮ ಗೋದಿ ಮಾಧ್ಯಮಗಳು ಸಾಕಷ್ಟು ತುಪ್ಪ ಸುರಿಯುತ್ತಿವೆ. ಆದರೆ ಎಸ್ಡಿಪಿಐ ಮಾತ್ರ ತನ್ನ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಮುಸ್ಲಿಂ ಸಮುದಾಯವನ್ನು ತಲುಪುತ್ತಲೇ ಇದೆ.

ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಸರ್ಕಾರದಲ್ಲೂ ಕಡಿಮೆಯಾಗುತ್ತಿದೆ ಮತ್ತು ಸರ್ಕಾರದ ಉನ್ನತ ಹುದ್ದೆಗಳಲ್ಲೂ ಕಡಿಮೆಯಾಗುತ್ತಿದೆ. ಇನ್ನು ಬಿಜೆಪಿ ಪಕ್ಷದ ಆಳ್ವಿಕೆಯಲ್ಲಂತೂ ಇಲ್ಲವೇ ಇಲ್ಲ! ಮೊನ್ನೆಯ ಬೊಮ್ಮಾಯಿ ಸಂಪುಟದಲ್ಲಿ ಸುಮಾರು 16% ಜನಸಂಖ್ಯೆಯುಳ್ಳ ಮುಸ್ಲಿಮರ ಪ್ರಾತಿನಿಧ್ಯ ಇಲ್ಲವೇ ಇಲ್ಲ!!

ಡಾ.ಅಂಬೇಡ್ಕರ್ ಅವರು ಎಲ್ಲಾ ತಳ ಸಮುದಾಯಗಳ ಕುರಿತು ಶಾಸನವನ್ನು ರೂಪಿಸುವ ಜಾಗಕ್ಕೆ ನೀವು ಹೋಗದ ಹೊರತು ನಿಮ್ಮ ಸಮುದಾಯಗಳ ಸಮಸ್ಯೆಗಳು ಬಗೆಹರಿಯಲಾರವುಎಂದು ಹೇಳುತ್ತಾರೆ. ಮುಸ್ಲಿಂ ಸಮುದಾಯ ತನ್ನ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಲ್ಲಿ ಪ್ರಾತಿನಿಧ್ಯವೇ ಇಲ್ಲದೆ, ಶಾಸನ ರೂಪಿಸುವ ಜಾಗದಲ್ಲಿ ಪಾಲ್ಗೊಳ್ಳುವಿಕೆಯೇ ಇಲ್ಲದಾದಾಗ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಸ್ಯೆಗಳು ಹೇಗೆ ಬಗೆಹರೆಯಲು ಸಾಧ್ಯ..?

*ಲೇಖಕರು ಮೂಲತಃ ಕೋಲಾರದವರು; ವೃತ್ತಿಯಲ್ಲಿ ವಕೀಲರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.

ಸಾಕ್ಷರತೆ ಪ್ರಮಾಣದಲ್ಲಿ

ಮುಸ್ಲಿಮರೇ ಹಿಂದೆ!

ಯಾವುದೇ ರಾಷ್ಟ್ರದ ಸಾಕ್ಷರತೆ ಪ್ರಮಾಣ ದೇಶದ ಮಾನವ ಸಂಪನ್ಮೂಲದ ಗುಣಮಟ್ಟವನ್ನು ಅಂದಾಜಿಸುವ ಅತ್ಯಂತ ನಿರ್ಣಾಯಕ ಸೂಚಕವಾಗಿರುತ್ತದೆ. ಸಾಕ್ಷರತೆಯ ಪ್ರಮಾಣ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ರಾಷ್ಟ್ರದ ಅಭಿವೃದ್ಧಿಯ ಮೇಲೂ ಪ್ರಭಾವ ಬೀರುತ್ತದೆ.

ದೇಶದ ಎಲ್ಲಾ ಧರ್ಮಗಳ ಪೈಕಿ ಜೈನ ಧರ್ಮದ ಸಾಕ್ಷರತೆಯ ಪ್ರಮಾಣ ಮೊದಲ ಸ್ಥಾನದಲ್ಲಿದೆ. ದೇಶದ ಬಹುಸಂಖ್ಯಾತರು ಎಂದೆನಿಸಿಕೊಂಡಿರುವ ಹಿಂದೂ ಧರ್ಮದವರಲ್ಲಿ ಪುರುಷರು ಹಾಗೂ ಮಹಿಳೆಯರ ನಡುವಿನ ಸಾಕ್ಷರತೆಯ ಪ್ರಮಾಣದಲ್ಲಿ ಹೆಚ್ಚಿನ ಅಂತರವಿದೆ.

ಹಿಂದೂ ಪುರುಷರ ಸಾಕ್ಷರತೆ ಪ್ರಮಾಣ ಶೇ.81.7ರಷ್ಟಿದ್ದರೆ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.64.3ರಷ್ಟಿದೆ. ಜೈನರಲ್ಲಿ ಪುರುಷರು ಹಾಗೂ ಮಹಿಳೆಯರ ನಡುವಿನ ಸಾಕ್ಷರತೆಯ ಪ್ರಮಾಣದ ಅಂತರ ಬಹಳ ಕಡಿಮೆ ಇದೆ. ಹಿಂದೂಗಳು ಶೇ.73.3 ಸಾಕ್ಷರತೆ ಪ್ರಮಾಣದೊಂದಿಗೆ ಮುಸ್ಲಿಂ ಜನಾಂಗದವರಿಗಿಂತ ಮಾತ್ರ ಸ್ವಲ್ಪ ಮಟ್ಟಿಗೆ ಹೆಚ್ಚಿದ್ದಾರಷ್ಟೇ. ಮುಸ್ಲಿಮರು ಶೇ.65.25ರಷ್ಟು ಸಾಕ್ಷರತೆ ಪ್ರಮಾಣದೊಂದಿಗೆ ದೇಶದ ಇತರೆ ಎಲ್ಲಾ ಧರ್ಮಗಳಿಗಿಂತ ಕೆಳಗಿನ ಸ್ಥಾನದಲ್ಲಿದ್ದಾರೆ. ಆದರೆ ಮುಸ್ಲಿಂ ಜನಾಂಗದ ಪುರುಷರು ಹಾಗೂ ಮಹಿಳೆಯರ ಸಾಕ್ಷರತೆ ಪ್ರಮಾಣದ ಅಂತರ ಹಿಂದೂಗಳಿಗಿಂತ ಕಡಿಮೆಯಿದೆ. ಮುಸ್ಲಿಮ್ ಪುರುಷರ ಸಾಕ್ಷರತೆ ಪ್ರಮಾಣ ಶೇ.68.5 ರಷ್ಟಿದ್ದರೆ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.62ರಷ್ಟಿದೆ.

ಸಿಖ್ ಜನಾಂಗದ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ.75.4ರಷ್ಟಿದ್ದು, ಪುರುಷರ ಪ್ರಮಾಣ ಶೇ.80 ಮತ್ತು ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.70.3 ಇದೆ.

ಜೈನ, ಕ್ರೈಸ್ತ ಮತ್ತು ಬೌದ್ಧ ಧರ್ಮಗಳಲ್ಲಿ ಸಾಕ್ಷರತೆ ಪ್ರಮಾಣ ಉತ್ತಮವಾಗಿದೆ. ಜೈನರಲ್ಲಿ ಸಾಕ್ಷರತೆ ಪ್ರಮಾಣ ಶೇ.94.9 ರಷ್ಟಿದ್ದು, ಪುರುಷರ ಪ್ರಮಾಣ ಶೇ.96.8 ಹಾಗೂ ಮಹಿಳೆಯರ ಪ್ರಮಾಣ ಶೇ.92.9ರಷ್ಟಿದೆ. ಕ್ರೈಸ್ತ ಧರ್ಮದವರಲ್ಲಿ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ.84.5. ಪುರುಷರ ಸಾಕ್ಷರತೆ ಪ್ರಮಾಣ ಶೇ.87.7 ಹಾಗೂ ಮಹಿಳೆಯರ ಪ್ರಮಾಣ ಶೇ.81.5 ರಷ್ಟಿದೆ. ಬೌದ್ಧ ಧರ್ಮದವರ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ.81.3ರಷ್ಟಿದ್ದು, ಪುರುಷರು ಹಾಗೂ ಮಹಿಳೆಯರ ಸಾಕ್ಷರತೆ ಪ್ರಮಾಣ ಕ್ರಮವಾಗಿ ಶೇ.88.3 ಹಾಗೂ ಶೇ.74ರಷ್ಟಿದೆ.

ಕಿಶೋರ್ ಕುಮಾರ್ ಬಿ.ವಿ.