ರಾಜ್ಯ ರಾಜಕಾರಣ ನಿಜಕ್ಕೂ ಏನು ನಡೆಯುತ್ತಿದೆ?

-ಜಯಾತನಯ

ರಾಜ್ಯದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ಸಿನಲ್ಲಿ ಎರಡು ಶಕ್ತಿ ಕೇಂದ್ರಗಳಿದ್ದರೆ, ಆಡಳಿತಾರೂಢ ಬಿಜೆಪಿಯಲ್ಲಿರುವುದು ಒಂದೇ ಶಕ್ತಿ ಕೇಂದ್ರ. ಇನ್ನು ಅವಕಾಶವಾದವನ್ನೇ ರಾಜಕೀಯ ದಾಳವಾಗಿಸಿಕೊಂಡಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಗೆ ಸಾಥ್ ಕೊಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣದ ಚರ್ಚೆ ಆರಂಭವಾಗಿದೆ.

ರಾಜಕೀಯ ಧ್ರುವೀಕರಣ… ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳು ಎದುರುಬಂದಾಗಲೆಲ್ಲಾ ಸಾಮಾನ್ಯವಾಗಿ ಕೇಳಿಬರುವ ಈ ಮಾತು ಸದ್ಯ ಯಾವುದೇ ಚುನಾವಣೆ ಇಲ್ಲದಿದ್ದರೂ ಕೇಳಿಬಂದಿದೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿರುವ ಈ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ.

ಕಳೆದ ವಿಧಾನಸಭೆ ಚುನಾವಣೆ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನೆಪದಲ್ಲಿ ಕಾಂಗ್ರೆಸ್ ಜತೆ ಸೇರಿ ಅಧಿಕಾರ ಹಿಡಿದು ಬಳಿಕ ಮೈತ್ರಿ ಜಗಳ, ಶಾಸಕರ ರಾಜೀನಾಮೆಯಿಂದ ಅಧಿಕಾರ ಕಳೆದುಕೊಂಡ ಜೆಡಿಎಸ್ ಇದೀಗ ಧ್ರುವೀಕರಣದ ಮುಂಚೂಣಿಯಲ್ಲಿ ನಿಂತಂತೆ ಊಹಾಪೋಹ ಸೃಷ್ಟಿಯಾಗಿದೆ. ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ ಎಂಬ ಮಾತು ಕೇಳಿಬರಲಾರಂಭಿಸಿದೆ. ಜೆಡಿಎಸ್-ಬಿಜೆಪಿ ವಿಲೀನವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ ಅವರೇ ಈ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನಕ್ಕೆ ಇಳಿಯುವಂತಾಗಿದೆ.

ಹಾಗೆಂದು ಬಿಜೆಪಿ ಜತೆ ಜೆಡಿಎಸ್ ವಿಲೀನವಾಗಲಿದೆ ಎಂಬ ಊಹಾಪೋಹ ಸೃಷ್ಟಿಯಾಗಲು ಲಿಂಬಾವಳಿ ಅವರ ಹೇಳಿಕೆಯೊಂದೇ ಕಾರಣವಲ್ಲ. ಜೆಡಿಎಸ್, ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಇತ್ತೀಚೆಗೆ ನೆಡೆದುಕೊಳ್ಳುತ್ತಿರುವ ರೀತಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕೆಲವೊಂದು ನಿರ್ಧಾರಗಳ ಬಗ್ಗೆ (ಮುಖ್ಯವಾಗಿ ಕೇಂದ್ರದ ಕೃಷಿ ಕಾಯ್ದೆಗಳು ಮತ್ತು ರಾಜ್ಯದ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ) ಜೆಡಿಎಸ್ ನಿಲುವುಗಳು, ಈ ಕಾಯ್ದೆಯನ್ನು ಸಾರಾ ಸಗಟಾಗಿ ವಿರೋಧಿಸುತ್ತಿರುವ ಕಾಂಗ್ರೆಸ್ ಕುರಿತು ಜೆಡಿಎಸ್ ನಾಯಕರ ಹೇಳಿಕೆಗಳಿಂದಾಗಿಯೇ ಈ ಊಹಾಪೋಹ ಸೃಷ್ಟಿಯಾಗಿದೆ. ಇದರ ಹಿಂದೆ ಕಾಂಗ್ರೆಸ್ಸಿನ ಕಾಣದ ಕೈಗಳು ಕೂಡ ಕೆಲಸ ಮಾಡುತ್ತಿವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದು ವರ್ಷ ಕಳೆದಿದೆ. ಈ ಮಧ್ಯೆ ಸರ್ಕಾರ ಮತ್ತು ಯಡಿಯೂರಪ್ಪ ಅವರನ್ನು ಅಲುಗಾಡಿಸುವ ನಾನಾ ಪ್ರಯತ್ನಗಳು ಹಲವಾರು ಬಾರಿ ನಡೆದಿವೆಯಾದರೂ ಸರ್ಕಾರ ಮತ್ತು ಯಡಿಯೂರಪ್ಪ ಮತ್ತಷ್ಟು ಗಟ್ಟಿಯಾಗಿದ್ದು ಬಂತೇ ಹೊರತು ಒಂದಿಂಚು ಕೂಡ ಅಲುಗಾಡಿಲ್ಲ. ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ, ಸಂಪುಟದಲ್ಲಿ ಅಸಮಾಧಾನ… ಹೀಗೆ ಹತ್ತುಹಲವು ಸವಾಲುಗಳ ಜತೆಗೆ ಸ್ವಪಕ್ಷೀಯರ ಹಿಡಿತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಲುಗಿದಾಗಲೆಲ್ಲಾ ಅವರ ನೆರವಿಗೆ ಬಂದಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್. ಅದೇ ರೀತಿ ಸರ್ಕಾರದ ವಿರುದ್ಧ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಶತಾಯ-ಗತಾಯ ಹೋರಾಟಕ್ಕಿಳಿದಾಗಲೂ ಮುಖ್ಯಮಂತ್ರಿಗಳ ಕೈಹಿಡಿದದ್ದು ಇದೇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್.

ಇಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಎಂದು ಹೇಳಲು ಕಾರಣವಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿದರೆ, ಅವರ ಪುತ್ರ ಕುಮಾರಸ್ವಾಮಿ, ಸರ್ಕಾರ ಉರುಳಿದ ಬಳಿಕ ಬಿಜೆಪಿ ಪರ ನಿಂತಿದ್ದಾರೆ. ಶಾಸಕರ ಒಂದು ತಂಡವನ್ನು ತನ್ನ ಜತೆಗಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಕಾಂಗ್ರೆಸ್ಸಿನ ಎರಡು ಶಕ್ತಿ ಕೇಂದ್ರಗಳ ಮಧ್ಯೆ ಇರುವ ಬಿರುಕು ಹೆಚ್ಚಿಸುವ ಕೆಲವನ್ನೂ ಮುಂದುವರಿಸುತ್ತಿದ್ದಾರೆ. ಇದರಿಂದ ಜೆಡಿಎಸ್ ರಾಜಕೀಯವಾಗಿ ಏನು ಲಾಭ ಗಳಿಸುತ್ತದೋ ಗೊತ್ತಿಲ್ಲ. ಬಿಜೆಪಿಗೆ ಅನುಕೂಲವಾಗಿ, ಕಾಂಗ್ರೆಸ್ಸಿಗೆ ನಷ್ಟವಾಗಿರುವುದಂತೂ ಸತ್ಯ. ಇದರಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಯಡಿಯೂರಪ್ಪ ಗಟ್ಟಿಯಾಗುತ್ತಿದ್ದರೆ, ಕಾಂಗ್ರೆಸ್ ಶಕ್ತಿ ಕಳೆದುಕೊಳ್ಳುತ್ತಿದೆ.

ಸದ್ಯ ಬಿಜೆಪಿ ಸರ್ಕಾರ ಬಲಿಷ್ಠವಾಗಿದೆಯಾದರೂ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟ. ಸಂಪುಟ ವಿಸ್ತರಣೆ ವಿಚಾರದಲ್ಲಿರುವ ಗೊಂದಲ, ನಿಗಮ-ಮಂಡಳಿಗಳ ನೇಮಕದಲ್ಲಿ ಉಂಟಾಗಿರುವ ಅಸಮಾಧಾನ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವಷ್ಟು ಪ್ರಭಾವಶಾಲಿಯಾಗಿದೆಯಾದರೂ ಅದನ್ನು ಬಳಸಿಕೊಳ್ಳುವ ಪರ್ಯಾಯ ನಾಯಕ ಬಿಜೆಪಿಯಲ್ಲಿ ಇಲ್ಲ. ಪಕ್ಷದ ಇತರೆ ನಾಯಕರು ಯಡಿಯೂರಪ್ಪ ವಿರುದ್ಧ ಒಳಗೊಳಗೇ ಕುದಿಯುತ್ತಾ ಏನೂ ಮಾಡಲು ಸಾಧ್ಯವಾಗದೆ ಕೈ ಕೈ ಹಿಸುಕಿಕೊಳ್ಳುತ್ತಿರುವುದು ಈ ಪರಿಸ್ಥಿತಿಗೆ ಕಾರಣ.

ಈಗಲೂ ಪಕ್ಷದಲ್ಲಿ ಅದೇ ಪರಿಸ್ಥಿತಿ ಮುಂದುವರಿದಿದೆಯೇ ಹೊರತು ಪರ್ಯಾಯ ನಾಯಕನನ್ನು ಬೆಳೆಸುವ ಯಾವುದೇ ಕೆಲಸ ಆಗುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅಪ್ಪನ ನಂತರ ನಾನು ಎನ್ನುವ ಮಟ್ಟಕ್ಕೆ ಬೆಳೆಯುವ ಮುನ್ಸೂಚನೆ ನೀಡಿದ್ದಾರೆ. ರಾಜ್ಯ ಮಟ್ಟದಲ್ಲಿ ತನ್ನ ನೆಲೆ ಭದ್ರಗೊಳಿಸಿರುವ ವಿಜಯೇಂದ್ರ ಇದೀಗ ದೆಹಲಿಯತ್ತ ಕಣ್ಣು ಹಾಯಿಸಿದ್ದು, ಅಲ್ಲಿನ ನಾಯಕರನ್ನು ಒಲಿಸಿಕೊಂಡು ತನ್ನ ಲಾಬಿಯನ್ನು ದೆಹಲಿ ನಾಯಕರ ಮಟ್ಟಕ್ಕೆ ವಿಸ್ತರಿಸುವ ಕೆಲಸ ಶುರುಹಚ್ಚಿಕೊಂಡಿದ್ದಾರೆ. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕನನ್ನು ಹುಡುಕಬೇಕಾಗಿದ್ದವರು ಕತ್ತಿ ಮಸೆಯುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿರುವ ಯಡಿಯೂರಪ್ಪ ಅವರು ಪಕ್ಷದಲ್ಲಿ ಮತ್ತು ಮುಖ್ಯಮಂತ್ರಿಯಾಗಿ ಇನ್ನಷ್ಟು ಗಟ್ಟಿಯಾಗುತ್ತಲೇ ಹೋಗುತ್ತಿದ್ದಾರೆ.

ಡಿಕೆಶಿ ಯತ್ನಕ್ಕೆ ಪಕ್ಷದಲ್ಲೇ ಅಡ್ಡಿ

ಒಂದು ಪಕ್ಷದಲ್ಲಿ ಎರಡು ಶಕ್ತಿ ಕೇಂದ್ರಗಳಿದ್ದರೆ ಯಾವ ರೀತಿ ಆ ಪಕ್ಷ ಇಕ್ಕಟ್ಟಿಗೆ ಸಿಲುಕುತ್ತದೆ ತನ್ನ ಗುರಿ ಸಾಧಿಸುವಲ್ಲಿ ವಿಫಲವಾಗುತ್ತದೆ ಎಂಬುದಕ್ಕೆ ಉದಾಹರಣೆ ರಾಜ್ಯ ಕಾಂಗ್ರೆಸ್. ಬಾಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುತ್ತಲೇ ಒಳಗೊಳಗೆ ಕತ್ತಿ ಮಸೆಯುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದಾಗಿ ಆ ಪಕ್ಷಕ್ಕೆ ಅಂದುಕೊಂಡಿದ್ದನ್ನು ಸಾಧಿಸುವುದು ಒತ್ತಟ್ಟಿಗಿರಲಿ, ಆ ನಿಟ್ಟಿನಲ್ಲಿ ಹೆಜ್ಜೆ ಹಾಕುವುದು ಕೂಡ ಕಷ್ಟ ಎನ್ನುವಂತಾಗಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದಾಗ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಶಕ್ತಿಯನ್ನು ವೇಗವಾಗಿ ಹೆಚ್ಚಿಸಿಕೊಳ್ಳಲಿದೆ ಎಂಬ ಆಶಾಭಾವನೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿತ್ತು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಧ್ಯೆ ಎಲ್ಲವೂ ಸರಿ ಇಲ್ಲದೇ ಇದ್ದರೂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರುತ್ತಿದ್ದ ಕುಮಾರಸ್ವಾಮಿ ಅವರು ಶಿವಕುಮಾರ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಶಿವಕುಮಾರ್ ಕೈ ಮೇಲಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆರಂಭದಲ್ಲಿ ಆ ಕುರಿತ ಮುನ್ಸೂಚನೆ ಕಾಣಿಸಿಕೊಂಡಿತಾದರೂ ನಂತರದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತಳೆದು ಶಿವಕುಮಾರ್ ವಿರುದ್ಧವೂ ತಿರುಗಿ ಬಿದ್ದರು. ಹೀಗಾಗಿ ಜೆಡಿಎಸ್ ಬೆಂಬಲದೊಂದಿಗೆ ಶಕ್ತಿ ಹೆಚ್ಚಿಸಿಕೊಳ್ಳುವ ಶಿವಕುಮಾರ್ ಅವರ ಪ್ರಯತ್ನಕ್ಕೂ ಅಡ್ಡಿಯಾಯಿತು. ಅವರ ಪಕ್ಷದಲ್ಲೇ ಕಾಲೆಳೆಯುವ ನಾಯಕರು ಮತ್ತೆ ಬಲ ಪಡೆದುಕೊಂಡರು; ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಇದ್ದ ಕಂದಕವನ್ನು ಇನ್ನಷ್ಟು ಹೆಚ್ಚಿಸಿದರು. ಜತೆಗೆ ಕೆಲವು ನಾಯಕರ ಎಲುಬಿಲ್ಲದ ನಾಲಗೆ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದು ಕೂಡ ಕಾಂಗ್ರೆಸ್ಸಿಗೆ ಬಿಸಿ ತುಪ್ಪವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷಕ್ಕೆ ಶಕ್ತಿ ತುಂಬುವ ಶಿವಕುಮಾರ್ ಪ್ರಯತ್ನಕ್ಕೆ ಆ ಪಕ್ಷದವರಿಂದಲೇ ಅಡ್ಡಿ ಉಂಟಾಗುತ್ತಿದೆ.

ಜೆಡಿಎಸ್: ನಾವಿಕನಿಲ್ಲದ ದೋಣಿ

ಬಿಜೆಪಿ, ಕಾಂಗ್ರೆಸ್ಸಿನ ಪರಿಸ್ಥಿತಿ ಹೀಗಾದರೆ ಜೆಡಿಎಸ್ ಪಕ್ಷಕ್ಕೆ ಸೂಕ್ತ ನಾವಿಕರೇ ಇಲ್ಲ ಎಂಬಂತೆ ಕಾಣುತ್ತಿದೆ. ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರದ್ದು ಒಂದು ದಾರಿಯಾದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರದ್ದು ಮತ್ತೊಂದು ದಾರಿ. ಅದರಲ್ಲೂ ಪದೇಪದೇ ತನ್ನ ನಿಲುವು, ಸಿದ್ಧಾಂತಗಳನ್ನು ಬದಲಿಸುತ್ತಾ ಅವಕಾಶವಾದಕ್ಕೆ ಆದ್ಯತೆ ನೀಡುತ್ತಿರುವ ಕುಮಾರಸ್ವಾಮಿ ಅವರ ನಡೆಯಿಂದಾಗಿ ಜೆಡಿಎಸ್ ನಲ್ಲಿ ಪಕ್ಷದ ಮುಖಂಡರನ್ನು ಒಟ್ಟಿಗೆ ಕರೆದೊಯ್ಯುವ ನಾಯಕರೇ ಇಲ್ಲವಾಗಿದ್ದಾರೆ. ದೇವೇಗೌಡರೂ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಪಕ್ಷದ ಶಾಸಕರು ತಲೆಗೊಂದರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದರೆ, ಇನ್ನು ಕೆಲವರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಶಾಸಕರು ಮತ್ತು ನಾಯಕರ ಇಂತಹ ನಡೆಗಳಿಂದಾಗಿ ಜೆಡಿಎಸ್ ನಾವಿಕನಿಲ್ಲದ ದೋಣಿಯಾಗುತ್ತಿರುವುದು ಮಾತ್ರವಲ್ಲ, ರಾಜಕೀಯ ವಲಯದಲ್ಲಿ ನಗೆಪಾಟಲಿಗೂ ಈಡಾಗುತ್ತಿದೆ. ಆದರೂ ಬುದ್ಧಿ ಕಲಿಯುವ ಲಕ್ಷಣಗಳಂತೂ ಗೋಚರಿಸುತ್ತಿಲ್ಲ.

ಇದೆಲ್ಲದರ ಪರಿಣಾಮ ರಾಜ್ಯ ರಾಜಕೀಯ ಗೊಂದಲದ ಗೂಡಾಗುತ್ತಿದೆ. ಕಾಂಗ್ರೆಸ್ಸಿನ ಎರಡು ಶಕ್ತಿ ಕೇಂದ್ರಗಳ ಮಧ್ಯೆಯೇ ಗೊಂದಲಗಳಿರುವುದರಿಂದ ಒಟ್ಟಾಗಿ ಬಿಜೆಪಿಯ ಶಕ್ತಿ ಕೇಂದ್ರವನ್ನು (ಯಡಿಯೂರಪ್ಪ) ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಈ ಅವಕಾಶವಾದವನ್ನೇ ರಾಜಕೀಯ ದಾಳವಾಗಿ ಬಳಸಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಕೂಡ ಯಡಿಯೂರಪ್ಪ ಅವರಿಗೆ ಸಾಥ್ ಕೊಡುತ್ತಿರುವುದರಿಂದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಗಳು, ಬಿಜೆಪಿ ಶಾಸಕರನ್ನೇ ಎತ್ತಿ ಕಟ್ಟಿ ಸರ್ಕಾರ ಉರುಳಿಸಲು ನಡೆಸುತ್ತಿರುವ ನಾನಾ ರೀತಿಯ ಪ್ರಯತ್ನಗಳು ನೀರಿನ ಮೇಲೆ ಮಾಡಿದ ಹೋಮದಂತೆ ವ್ಯರ್ಥವಾಗುತ್ತಿವೆ.

ಇದರ ಪರಿಣಾಮ ಕಾಂಗ್ರೆಸ್ ನಾಯಕರು, ಮುಖಂಡರಲ್ಲಿ ಹೆಚ್ಚುತ್ತಿರುವ ಕಸಿವಿಸಿ, ವಿಧಾನ ಪರಿಷತ್ ಸಭಾಪತಿಗಳನ್ನು ಪದಚ್ಯುತಗೊಳಿಸುವ ಪ್ರಕರಣ, ಆ ಪಕ್ಷದ ಮುಖಂಡರ ಬಾಯಿಯಲ್ಲಿ ಬರುವ ಮಾತುಗಳಲ್ಲಿ ಸ್ಪಷ್ಟವಾಗಿ ಹೊರಹೊಮ್ಮುತ್ತವೆ. ಅದಷ್ಟೇ ಅಲ್ಲ, ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸುವ ಪಕ್ಷದ ಯೋಚನೆಯೂ ತಲೆಕೆಳಗಾಗುವಂತಾಗುತ್ತಿದೆ. ಕಾಂಗ್ರೆಸ್ ಶಕ್ತಿ ಕೇಂದ್ರಗಳಾದ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳು ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರೆ, ಹಿಂದಿನ ಕಾಂಗ್ರೆಸ್ ಸರ್ಕಾರ, ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಆ ಪಕ್ಷದ ಕೆಲವು ನಾಯಕರ ಸದ್ದು ಕೇಳಿಸುತ್ತಲೇ ಇಲ್ಲ. ಕೇವಲ ಬೀದಿ ಹೋರಾಟಗಳಲ್ಲೇ ಶಕ್ತಿ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಜನರ ಬಳಿ ತಲುಪಲು ವಿಫಲವಾಗುತ್ತಿರುವ ಕಾರಣ ರಾಜ್ಯದಲ್ಲಿ ಬಿಜೆಪಿಯ ವೇಗಕ್ಕೆ ತಡೆಯೊಡ್ಡುವುದು ಕಷ್ಟಸಾಧ್ಯವಾಗುತ್ತಿದೆ. ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಜೆಡಿಎಸ್ ನೆರವಿನೊಂದಿಗೆ ಬಿಜೆಪಿ ಗಟ್ಟಿಯಾಗುತ್ತಿದ್ದರೆ, ಕಾಂಗ್ರೆಸ್ ಶಕ್ತಿ ಕ್ಷೀಣಿಸುತ್ತಿದೆ.

Leave a Reply

Your email address will not be published.