ರಾಮನ ಆದರ್ಶ ಪಾಲಿಸಬಾರದೇಕೆ?

78 ವರ್ಷದ ಯಡಿಯೂರಪ್ಪರವರಿಗೆ ಬಹುಶಃ ಇದು ಕೊನೆಯ ಅವಕಾಶ. ಆದುದರಿಂದ ಉಳಿದ ಆಡಳಿತ ಅವಧಿಯಲ್ಲಿ ಕರ್ನಾಟಕ ಜನತೆಗೆ ಸ್ಮರಣೀಯ ಆಡಳಿತ ನೀಡಲಿ.

-ಡಾ.ಜ್ಯೋತಿ

ಅಭೂತಪೂರ್ವ ಇಚ್ಛಾಶಕ್ತಿ ಹೊಂದಿರುವ ಯಡಿಯೂರಪ್ಪ ನೇತೃತ್ವದ ಸರಕಾರ 2 ವರುಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅವರ ಆಡಳಿತದ ವಿಶಿಷ್ಟ ಮೈಲಿಗಲ್ಲುಗಳ ಹುಡುಕಾಟದ ಮುನ್ನ, ಅವರಿಗೆ ಸ್ವಲ್ಪ ಅಭಿನಂದನೆ ಸಲ್ಲಿಸಲೇಬೇಕು. ಯಾಕೆಂದರೆ, ಅಧಿಕಾರ ವಹಿಸಿಕೊಂಡ ತಕ್ಷಣ ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ಕಂಡ ಭಾರಿ ಪ್ರವಾಹವನ್ನು ನಿರ್ವಹಿಸಬೇಕಾದ ಜವಾಬ್ದಾರಿ ಅವರ ಮೇಲಿತ್ತು. ತನ್ನ ಇಳಿವಯಸ್ಸನ್ನು ಲೆಕ್ಕಿಸದೆ, ರಾಜ್ಯದ ಸುತ್ತೆಲ್ಲಾ ಸಂಚರಿಸಿ, ಸಾಕಷ್ಟು ಚೆನ್ನಾಗಿಯೇ ಪ್ರವಾಹ ಸಂತ್ರಸ್ತರ ಸಮಸ್ಯೆಗಳನ್ನು ನಿರ್ವಹಿಸಿದರು.

ಇದಾದ ಕೆಲವೇ ತಿಂಗಳಲ್ಲಿ, ಇಡೀ ಪ್ರಪಂಚವನ್ನೇ ತತ್ತರಿಸಿದ ಕೊರೊನ ಸಾಂಕ್ರಾಮಿಕವನ್ನು ನಿಯಂತ್ರಿಸುವುದು ಸುಲಭದ ಮಾತಾಗಿರಲಿಲ್ಲ. ಅದನ್ನೂ ಕೂಡ, ಉಳಿದ ರಾಜ್ಯ ಸರಕಾರಗಳಿಗೆ ಹೋಲಿಸಿದರೆ, ಯಡಿಯೂರಪ್ಪ ಸರಕಾರ ನಿಭಾಯಿಸಿದ ರೀತಿಯನ್ನು ರಾಷ್ಟೀಯ ಮಾಧ್ಯಮಗಳೆ ಶ್ಲಾಘಿಸಿದವು. ಇವುಗಳ ಜೊತೆಗೆ, ಅಲ್ಪಮತದ ನಂಬರ್ ಗೇಮ್ ಆಟದಲ್ಲಿ ಮತ್ತು ಸಚಿವ ಸಂಪುಟ ಆಕಾಂಕ್ಷಿಗಳ ದೊಡ್ಡ ಪಟ್ಟಿಯ ನಡುವೆ, ಅಧಿಕಾರವೆಂಬ ಹಗ್ಗದ ಮೇಲೆ ಸಮತೋಲನವಾಗಿ ಹೆಜ್ಜೆ ಹಾಕಿದ ಯಡಿಯೂರಪ್ಪರವರನ್ನು ಸಾಹಸಿಯೆನ್ನಬಹುದು. 78 ವರ್ಷದ ಯಡಿಯೂರಪ್ಪರವರಿಗೆ ಬಹುಶಃ ಇದು ಕೊನೆಯ ಅವಕಾಶ. ಆದುದರಿಂದ, ತನ್ನ ಉಳಿದ ಆಡಳಿತ ಅವಧಿಯಲ್ಲಿ ಕರ್ನಾಟಕ ಜನತೆಗೆ ಸ್ಮರಣೀಯ ಆಡಳಿತ ನೀಡುವ ಜವಾಬ್ದಾರಿ ಯಡಿಯೂರಪ್ಪರವರಿಗಿದೆ.

ಈ ನಿಟ್ಟಿನಲ್ಲಿ, ಅವರ ಮುಂದಿರುವ ಮಾದರಿ ಆಡಳಿತ ವ್ಯವಸ್ಥೆಯೆಂದರೆ ರಾಮರಾಜ್ಯದ ಮೂಲ ಪರಿಕಲ್ಪನೆ. ಬಿಜೆಪಿಗೆ ಬಹಳ ಪ್ರಿಯವಾದ ಮತ್ತು ಅಧಿಕಾರದ ಗದ್ದುಗೆ ಏರಿಸಿದ ಶ್ರೀರಾಮನ, ಆದರ್ಶ ರಾಜ್ಯ ಪರಿಪಾಲನೆ, ಆಡಳಿತ ಹೇಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿರಬೇಕೆಂಬುದಕ್ಕೆ ಅತ್ಯುತ್ತಮ ಮಾರ್ಗಸೂಚಿ. ಇದರಲ್ಲಿರುವ ಕೆಲವು ಅಂಶಗಳನ್ನಾದರೂ ಸರಕಾರ ಪಾಲಿಸಿದರೆ ಒಳಿತು.

ಶ್ರೀರಾಮನ ಆಡಳಿತದಲ್ಲಿ ಪ್ರಜಾಪ್ರಭುತ್ವದ ಹೆಚ್ಚಿನ ಗುಣಲಕ್ಷಣಗಳಿದ್ದವು. ಚುನಾವಣೆಯಿಲ್ಲದಿದ್ದರೂ ಸಾರ್ವಜನಿಕ ಅಭಿಪ್ರಾಯಗಳಿಗೆ ಸಾಕಷ್ಟು ಮನ್ನಣೆಯಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗುತ್ತವೆ. ಸ್ತ್ರೀವಾದಿ ಚಿಂತನೆಗಳಿಂದ ಹೊರಬಂದು ಪರಿಶೀಲಿಸಿದರೆ, ಒಬ್ಬ ಸಾಮಾನ್ಯ ಅಗಸ ಕೂಡ ರಾಜ ಮನೆತನದವರ ನಡವಳಿಕೆಗಳನ್ನು ಪ್ರಶ್ನಿಸಬಹುದಿತ್ತು ಮತ್ತು ರಾಜ ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ.

ಮುಂದುವರಿದಂತೆ, ರಾಮರಾಜ್ಯದಲ್ಲಿ ನಾಗರಿಕರು ಕಾನೂನಿನ ದೃಷ್ಟಿಯಲ್ಲಿ ಸಮಾನ ಹಕ್ಕು ಹೊಂದಿದ್ದು, ಅಭಿವೃದ್ಧಿಯ ಮಾರ್ಗ ಎಲ್ಲರಿಗೂ ಮುಕ್ತವಾಗಿತ್ತು. ಪ್ರತಿಯೊಬ್ಬನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು. ಜನರ ಮೇಲೆ ಲಘು ತೆರಿಗೆ ವಿಧಿಸಲಾಗಿತ್ತು. ಆರ್ಥಿಕತೆಯ ಜೀವಾಳವಾಗಿರುವ ಕೃಷಿ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಕೃಷಿ ಚಟುವಟಿಕೆಗಳು ಮಳೆಯನ್ನು ಅವಲಂಬಿಸಿದ್ದರಿಂದ ಉತ್ತಮ ನೀರಾವರಿ ಸೌಲಭ್ಯವನ್ನು ಖಚಿತಪಡಿಸುವುದು ಸರಕಾರದ ಹೊಣೆಯೆಂದು ಅರಿಯಲಾಗಿತ್ತು. ಅದರಂತೆ ವ್ಯಾಪಾರಿಗಳಿಗೆ ಭಯವಿಲ್ಲದ ವಾತಾವರಣ ಖಾತ್ರಿಪಡಿಸಲಾಗಿತ್ತು ಮತ್ತು ಅವರ ಕುಂದು ಕೊರತೆಗಳನ್ನು ತ್ವರಿತವಾಗಿ ಪರಿಹರಿಸಲಾಗಿತ್ತು. ಅದಕ್ಕಾಗಿಯೇ ಗಾಂಧಿ, ರಾಮರಾಜ್ಯವನ್ನು ಮಾದರಿ ಆಡಳಿತವೆಂದು ಒಪ್ಪಿಕೊಂಡಿದ್ದರು.

ಈ ಮೇಲಿನ ಅಂಶಗಳನ್ನು ಪರಿಗಣಿಸಿ ಸರಕಾರದ ಸಾಧನೆಯನ್ನು ಒರೆಗೆ ಹಚ್ಚಿದರೆ, ಇನ್ನೂ ಸಾಕಷ್ಟು ಮೈಲಿಗಳನ್ನು ಕ್ರಮಿಸಬೇಕಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಜೊತೆಗೆ, ರಾಜಕಾರಣಕ್ಕಾಗಿಯೇ ಕೆಲವು ಸಮಸ್ಯೆಗಳ ಅನಗತ್ಯ ಸೃಷ್ಟಿಯೂ ಆಗಿದೆ. ಮೊದಲನೆಯದಾಗಿ, ಮೀಸಲಾತಿಯ ವಿಚಾರದಲ್ಲಿ ಆಗಿರುವ ಗೊಂದಲ ಅನಾವಶ್ಯಕ ಮತ್ತು ಇದರಿಂದಾಗಿ ಮೀಸಲಾತಿಯ ಮೂಲ ಆಶಯಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಮೀಸಲಾತಿಯನ್ನು ಹೀಗೆ ದುರ್ಬಲಗೊಳಿಸದಿರುವುದು ಒಳಿತು.

ಎರಡನೆಯದಾಗಿ, ರಾಜ್ಯದ ಮೂಲೆಮೂಲೆಗಳಲ್ಲಿ ಸದ್ಯ ಸುದ್ದಿಯಲ್ಲಿರುವ ಕಾಡು ಪ್ರಾಣಿಗಳ ನಾಡಿನ ಪ್ರವೇಶದ ಸಮಸ್ಯೆ. ಮನುಷ್ಯ ಪ್ರಪಂಚದಲ್ಲಿ ಮನುಷ್ಯನ ಕ್ಷೇಮ ಪ್ರಥಮ ಆದ್ಯತೆಯೇನೋ ನಿಜ. ಆದರೆ, ಈ ಸಮಸ್ಯೆಗೆ ಕಾರಣ ಪ್ರಾಣಿಗಳಲ್ಲ. ಕಾಡು ಕ್ಷೀಣಿಸಿ, ಆಹಾರ ಮತ್ತು ನೀರಿನ ಕೊರತೆಯಿಂದ ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಆದರೆ, ಪರಿಸ್ಥಿತಿಯ ಈ ಸೂಕ್ಷ್ಮತೆಯನ್ನು ಅರಿಯದೆ, ಸರಕಾರ ಪ್ರಾಣಿಗಳನ್ನು ಗುಂಡಿಕ್ಕಿ ಸಾಯಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ರೈತರ ಬೆಳೆ ರಕ್ಷಿಸುವುದರೊಂದಿಗೆ, ಪ್ರಾಣಿಗಳ ನೆಲೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕಾರ್ಯೋನ್ಮುಖವಾಗುವ ಅಗತ್ಯವಿದೆ.

ಮೂರನೆಯದಾಗಿ, ಸತತವಾಗಿ ತೀವ್ರ ನಿರ್ಲಕ್ಷ್ಯಕ್ಕೊಳಪಟ್ಟ ಉತ್ತರ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಸಲುವಾಗಿ ಉದ್ಯಮಗಳ ಸ್ಥಾಪನೆಯತ್ತ ಹೆಚ್ಚು ಗಮನ ಹರಿಸಬೇಕಿದೆ. ನಾಲ್ಕನೆಯದಾಗಿ, ಕರ್ನಾಟಕ ವೈವಿಧ್ಯಮಯ ಭೌಗೋಳಿಕ ವಲಯಗಳನ್ನು ಹೊಂದಿದ್ದು ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟರೆ ಜನರಿಗೆ ಉದ್ಯೋಗ ಸೃಷ್ಟಿ ಮತ್ತು ಸರಕಾರಕ್ಕೆ ಆದಾಯ ಗಳಿಕೆಯಾಗುತ್ತದೆ.

ಐದನೆಯದಾಗಿ, ಖಾಸಗೀಕರಣದ ಅಬ್ಬರದ ನಡುವೆ, ಕಣ್ಮರೆಯಾಗು ತ್ತಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರಾಮಾಣಿಕ ಪ್ರಯತ್ನಗಳಿಂದ ಜೀವ ತುಂಬುವ ಕೆಲಸ ಮಾಡಬೇಕಾಗಿದೆ. ಇದು ನಮ್ಮ ನಾಡಿನ ಭಾಷೆ ಮತ್ತು ಸಂಸ್ಕ್ರತಿಯ ಮುಂದುವರಿಕೆಗಾಗಿ ಬಹಳ ಅಗತ್ಯವಾಗಿ ಮಾಡಬೇಕಾದ ಕೆಲಸ.

ಇಷ್ಟೆಲ್ಲಾ ಆಶಯಗಳ ನಡುವೆ, ಸರಕಾರದ ಭದ್ರತೆಯೂ ಮುಖ್ಯ. ಒಂದು ವೇಳೆ ಎಲ್ಲಾ ಕಂಟಕಗಳನ್ನು ಮೀರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿದರೆ ಪಾರದರ್ಶಕ, ಜನೋಪಯೋಗಿ ಮತ್ತು ಅವಿಸ್ಮರಣೀಯ ಅಧಿಕಾರ ನೀಡಲಿ ಎನ್ನುವುದು ಆಶಯ.

Leave a Reply

Your email address will not be published.