ರಾವಬಹದ್ದೂರರ ‘ಗ್ರಾಮಾಯಣ’ದಲ್ಲಿ ಕಾಲರಾ ಕಲಿಸುವ ಪಾಠ

‘ಗ್ರಾಮಾಯಣ’ದಲ್ಲಿ ಕಾಣಿಸಿಕೊಳ್ಳುವ ಕಾಲರಾ, ಈ ಕಾದಂಬರಿಯ ಪ್ರಮುಖ ಪಾತ್ರಗಳಲ್ಲಿ ಒಂದು. ಈ ಸಾಂಕ್ರಾಮಿಕ ರೋಗ ಕಾದಂಬರಿಗೆ ನಾಟಕೀಯ ತಿರುವು ಕೊಡುವುದೂ ಸೇರಿದಂತೆ ಅನೇಕ ಘಟಿತಗಳಿಗೆ ಕಾರಣವಾಗುತ್ತದೆ.

ಇಂಗ್ಲಿಷಿನಲ್ಲಿ ‘ಡೆಥ್ ಈಜ್ ದ ಲೆವೆಲ್ಲರ್’ ಎಂಬ ಮಾತೊಂದಿದೆ. ಇದು ಯಾವ ಸಮಾನತೆಗಾಗಿ ಬದುಕಿಡೀ ಕನವರಿಸಿ, ಹೋರಾಡಿ, ಏನೆಲ್ಲ ಪಾಡು ಪಟ್ಟರೂ ಸಿಗದ ಸಮಾನತೆಯನ್ನು ಸಾವು ತನ್ನ ನಿರ್ಜೀವತೆಯಲ್ಲಾದರೂ ಸರಿ, ಸಾಧಿಸಿಬಿಡುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಈ ಮಾತು ಕೊನೆಗೂ ಮನುಷ್ಯನ ಅಸಹಾಯಕತೆಯನ್ನು ಹೇಳುತ್ತದೋ, ಮನುಷ್ಯನ ಮಿತಿಯನ್ನು ಹೇಳುತ್ತದೋ, ಸಾವಿನ ಅಸಾಮಾನ್ಯ ಶಕ್ತಿಯನ್ನು ಸೂಚಿಸುತ್ತದೋ? ಈ ಎಲ್ಲ ಅರ್ಥಗಳನ್ನು ಮೀರಿ ಪ್ರಾಕೃತಿಕ ನ್ಯಾಯದ ವ್ಯಾಖ್ಯಾನವಾಗಿಯೂ ಇದು ಕಾಣಿಸುತ್ತದೆ.

ಸಾಂಕ್ರಾಮಿಕ ರೋಗಗಳ ದುರಂತಗಳ ಬಗ್ಗೆ ಮಾತನಾಡುವಾಗಲೆಲ್ಲ ಈ ಮಾತಿಗಿರುವ ಇನ್ನೂ ವಿಸ್ತಾರವಾದ ಆಯಾಮಗಳೂ ನಮ್ಮ ಗಮನಕ್ಕೆ ಬರುತ್ತವೆ. ಮನುಷ್ಯನ ಕೊನೆಯೇ ಇರದ ಅಹಂಕಾರ, ದುರಾಸೆ ಮತ್ತು ಸ್ವಾರ್ಥಗಳೇ ಕಾರಣವಾಗಿ ಪ್ರಕೃತಿಯ ಜೊತೆಗಿನ ಸಹಬಾಳ್ವೆಯ ಮೂಲ ಪಾಠವನ್ನೇ ಮರೆತು ಪ್ರಕೃತಿ, ಇಡೀ ಜಗತ್ತೇ ಮನುಷ್ಯನ ತೊತ್ತು ಎನ್ನುವಂತೆ ನಡೆದುಕೊಳ್ಳುವ ಮನುಷ್ಯ ಸಂಕುಲಕ್ಕೆ ನಿಯಮಿತವಾಗಿಯೋ ಎಂಬಂತೆ, ಎಚ್ಚರಿಕೆಗಳನ್ನು ಪ್ರಾಕೃತಿಕ ವಿಕೋಪಗಳ ಮೂಲಕ ಸಂದೇಶವನ್ನು ತಾಯಿ ಪ್ರಕೃತಿ ನೀಡುತ್ತಲೇ ಇದ್ದಾಳೆ. ಬುದ್ಧಿಗೇಡಿ ಮಗುವಿನಂತೆ ನಾವು ಮನುಷ್ಯರು ಪಾಠ ಕಲಿಯಲು ನಿರಾಕರಿಸುತ್ತಲೇ ಇದ್ದೇವೆ.

ಎಂಥ ವಿಕೋಪಗಳು ಬಂದಾಗಲೂ ನಮಗಾಗುವ ಆಘಾತಗಳು ತಾತ್ಕಾಲಿಕ. ಮನುಷ್ಯ ಅಹಂಕಾರ ಮತ್ತು ಅವಿವೇಕಗಳೇ ಶಾಶ್ವತ ಎನ್ನುವ ಸತ್ಯ, ಕರಾಳ ಸತ್ಯ ಕೋವಿಡ್ ಸಂದರ್ಭದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರತಿ ಸಲ ವಿಕೋಪಗಳು ತಪರಾಕಿ ನೀಡಿದಾಗಲೂ ಈಗಲಾದರೂ, ಈ ಸಲವಾದರೂ ನಾವು ಪಾಠ ಕಲಿಯುತ್ತೇವೇನೋ ಎನ್ನುವ ನಂಬಿಕೆ ಈ ಸಲವಾದರೂ ನಿಜವಾಗಲಿ, ಆಮೆನ್.

ಕನ್ನಡ ಸಾಹಿತ್ಯದ ಹಲವು ಪಠ್ಯಗಳಲ್ಲಿ ಸಾಂಕ್ರಾಮಿಕ ರೋಗಗಳು ಬದುಕನ್ನೇ ಅಲ್ಲಾಡಿಸಿ ಬಿಡುವ ಪರಿಯನ್ನು ಬರೆಹಗಾರರು ಕಟ್ಟಿಕೊಟ್ಟಿದ್ದಾರೆ. ಯು.ಆರ್.ಅನಂತಮೂರ್ತಿಯವರ ‘ಸಂಸ್ಕಾರ’ ಮತ್ತು ರಾವಬಹದ್ದೂರರ ‘ಗ್ರಾಮಾಯಣ’ ಇವುಗಳಲ್ಲಿ ಮುಖ್ಯವಾದವು. ‘ಗ್ರಾಮಾಯಣ’ ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದು ಎನ್ನುವುದು ಕಾಲ ಕಳೆದ ಹಾಗೂ ಸಾಬೀತಾಗುತ್ತಲೇ ಇದೆ. ಅದರ ಹರಹು, ಬೀಸು, ಅಂತರ್ಗತ ಸೆಲೆಗಳು, ಹೊರಳು ಘಟ್ಟದ ಗ್ರಾಮೀಣ ಭಾರತ ಎದುರಿಸುತ್ತಿದ್ದ ಆಮಿಷ, ತಲ್ಲಣಗಳು, ಜನರ ಆಯ್ಕೆಯನ್ನು ಮೀರಿ ಘಟಿಸಿದ ಪಲ್ಲಟಗಳು, ಬೇಕು ಬೇಡದ ನಡುವಿನ ಅವರ ಹೊಯ್ದಾಟಗಳು -ಇವುಗಳನ್ನೆಲ್ಲ ಶಬ್ದಚಿತ್ರಗಳಲ್ಲಿ ಕಟ್ಟಿಕೊಟ್ಟ ಅನನ್ಯ ಕೃತಿ ‘ಗ್ರಾಮಾಯಣ’.

‘ಗ್ರಾಮಾಯಣ’ದಲ್ಲಿ ಕಾಣಿಸಿಕೊಳ್ಳುವ ಕಾಲರಾ ಸಾಂಕ್ರಾಮಿಕ ರೋಗವು ಈ ಕಾದಂಬರಿಯ ಪ್ರಮುಖ ಪಾತ್ರಗಳಲ್ಲಿ ಒಂದು. ಕಾದಂಬರಿಗೆ ನಾಟಕೀಯವಾದ ತಿರುವನ್ನು ಕೊಡುವುದೂ ಸೇರಿದಂತೆ ಅನೇಕ ಘಟಿತಗಳಿಗೆ ಈ ಸಾಂಕ್ರಾಮಿಕ ರೋಗ ಕಾರಣವಾಗುತ್ತದೆ.

ಪಾದಳ್ಳಿ ಎನ್ನುವ ಬಯಲುಸೀಮೆಯ ಹಳ್ಳಿಯಲ್ಲಿ ಕಾಲರಾ ಕಾಣಿಸಿಕೊಳ್ಳುವುದು ಬರಗಾಲದ ಹಿನ್ನೆಲೆಯಲ್ಲಿ. ವಿಲಕ್ಷಣವಾದ, ವಿಪರ್ಯಾಸದ ಬೆಳವಣಿಗೆ ಇಲ್ಲಿ ಕಾಲರಾದ ಮೂಲವಾಗುತ್ತದೆ. ಅರಸೊತ್ತಿಗೆಯ ಪಳೆಯುಳಿಕೆಯಂತೆ, ಅವಶೇಷದಂತೆ ಕಾಣಿಸುವ ವಾಡೆ ಮತ್ತು ಜನತಂತ್ರದ ದುರ್ಬಲ ಆರಂಭದಂತೆ ಕಾಣಿಸುವ ಊರಿನ ಪಟೇಲ ಗೌಡರ ನಡುವಿನ ಜಿದ್ದಾಜಿದ್ದಿಯಲ್ಲಿ ಕಾಲರಾ ಹುಟ್ಟಿದೆ. ಮಳೆಬೆಳೆ ಇಲ್ಲದೆ, ದಿನನಿತ್ಯದ ಊಟಕ್ಕೂ ಊರಿನ ಜನ ಒದ್ದಾಡುತ್ತಿದ್ದಾಗ, ಗೌಡರು ಮುಂದಿನ ಬೆಳೆ ಬಂದಾಗ ವಾಪಾಸು ಕೊಡುವ, ಕೊಡಲಾಗದಿದ್ದರೆ ಅವರ ಹೊಲದಲ್ಲಿ ಕೆಲಸ ಮಾಡಿ ತೀರಿಸುವ ಕರಾರಿನ ಮೇಲೆ ಜನರಿಗೆ ದವಸಧಾನ್ಯಗಳನ್ನು ಸಾಲದಂತೆ ಕೊಡುತ್ತಾರೆ.

ಅಡ್ಡದಾರಿಯಿಂದ ವಾಡೆಯನ್ನು ಅಕ್ಕನಿಂದ ಪಡೆಯಬಯಸುವ ಬಾಪೂಸಾಹೇಬನಿಗೆ ಜನಬೆಂಬಲ ಪಡೆಯಲು ಇದೊಂದು ಸುವರ್ಣಾವಕಾಶವಾಗಿ ಭಾಸವಾಗುತ್ತದೆ. ಜನರ ಸಂಕಟವೂ ಪ್ರಭುತ್ವಕ್ಕೆ ಸುವರ್ಣಾವಕಾಶವಾಗುವ ದುರಂತದಿಂದಲೇ ಕಾಲರಾದ ಪ್ರವೇಶವಾಗುತ್ತದೆ. ಬಾಪೂಸಾಹೇಬ ತನ್ನ ಹಗೇವದಲ್ಲಿದ್ದ, ಎಷ್ಟೋ ಕಾಲದಿಂದ ಬೆಳಕು ಕಾಣದಿದ್ದ ದವಸಧಾನ್ಯಗಳನ್ನು, ತಿರುಗಿ ಕೊಡುವ ಕರಾರೇ ಇಲ್ಲದೆ ಕೊಡಲು ಮುಂದಾಗುತ್ತಾನೆ. ಮುಗ್ಗು ಹಿಡಿದು, ವಾಸನೆ ಬಂದಿದ್ದ ಧಾನ್ಯಗಳನ್ನು ಜನರಿಗೆ ಪುಕ್ಕಟೆಯಾಗಿ ಕೊಡುತ್ತಾನೆ. ಈ ಮುಗ್ಗಲು ಧಾನ್ಯಗಳನ್ನು ತಿನ್ನುವುದರಿಂದಲೇ ಪಾದಳ್ಳಿಯಲ್ಲಿ ಕಾಲರಾ ಆರಂಭವಾಗುತ್ತದೆ.

ಕಾಲರಾ ಎನ್ನುವ ಸಾಂಕ್ರಾಮಿಕ ರೋಗ ಹೀಗೆ ಹಠಾತ್ತಾಗಿ ಆರಂಭವಾಗುವುದನ್ನು ಹೇಳುತ್ತಲೇ ಕಾದಂಬರಿ, ಪ್ರಭುತ್ವದ ನಿರಂತರ ಸಾಂಕ್ರಾಮಿಕ ರೋಗದ ಸ್ವರೂಪವನ್ನೂ ಅನಾವರಣಗೊಳಿಸುತ್ತದೆ. ಜನರ ಹಸಿವನ್ನೂ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಪ್ರಭುತ್ವದ ಭಂಡತನ, ಜನರನ್ನು ಬಳಸಿ ಬಿಸಾಕುವ ಅಮಾನವೀಯ ತಂತ್ರಗಳು ಕಾದಂಬರಿಯ ಈ ಘಟ್ಟದಲ್ಲಿ ಪ್ರಧಾನವಾಗಿ ಕಾಣಿಸುತ್ತದೆ. ಹಾಳಾದ ದವಸವೆಂದು ಗೊತ್ತಿದ್ದೂ ಅದನ್ನು ಔದಾರ್ಯವೆಂಬಂತೆ ಬಾಪೂಸಾಹೇಬ ಪಡದಪ್ಪನ ಧೂರ್ತ ಸಲಹೆಯ ಮೇರೆಗೆ ಹಂಚುವುದು, ಗೌಡರ ಸಾಲದ ಧಾನ್ಯಕ್ಕಿಂತ, ವಾಸನೆ ಬಂದಿದ್ದರೇನಂತೆ, ತಿಂದರೆ ಏನೂ ಆಗಲಾರದು ಎನ್ನುವ ಜನರ ಅಸಹಾಯಕತೆ ಎರಡೂ ಬೆರೆತು ಪಾದಳ್ಳಿಯನ್ನು ಪೀಡೆ ಕೇಂದ್ರವಾಗಿಸುತ್ತವೆ.

ಮುಗ್ಗುಲು ಹಿಡಿದ ಧಾನ್ಯ ತಿಂದು ಬಾಳಾನ ಇಡೀ ಕುಟುಂಬ ಸಾವನ್ನಪ್ಪುತ್ತದೆ. ಇದೇ ಕಾಲರಾದ ಮೊದಲ ಬಲಿ. ಅಧಿಕಾರದ ಮೇಲಾಟದಲ್ಲಿ ಬಾಪೂಸಾಹೇಬನಿಗೆ ಸೇರಿಗೆ ಸವಾಸೇರಿನಂತೆ ಸವಾಲೆಸೆಯುತ್ತಿದ್ದ ಗೌಡ ಪರಿವರ್ತನೆಯಾಗುವುದು ಈ ಘಳಿಗೆಯಲ್ಲಿ. ತಮ್ಮ ಸ್ಪರ್ಧೆಗೆ ಊರಿನ ಜನ ಬಲಿಯಾಗಬಾರದು ಎನ್ನುವ ವಿವೇಕ ಅವನನ್ನು ಎಚ್ಚರಿಸುತ್ತದೆ. ಧೂರ್ತತನದಲ್ಲಿ, ಸ್ವಾರ್ಥದಲ್ಲಿ ಬಾಪೂಸಾಹೇಬನಿಗೆ ಎಷ್ಟೂ ಕಡಿಮೆಯಿಲ್ಲದಿದ್ದ ಗೌಡ ಈ ಸಂದರ್ಭದಲ್ಲಿ ಸತ್ಯ ದರ್ಶನವಾದವನಂತೆ, ಈತನಕ ಕಿಂಕರ್ತವ್ಯಮೂಢನಾಗಿದ್ದವನು ಒಮ್ಮಿಂದೊಮ್ಮೆಲೇ ಬದಲಾಗುತ್ತಾನೆ. ಜನಪ್ರತಿನಿಧಿಯಾಗಿ ತಾನು ನಡೆಯಬೇಕಾದ ದಾರಿಯನ್ನು ಕಂಡುಕೊಂಡವನಂತೆ ಕರ್ತವ್ಯಮುಖಿಯಾಗುತ್ತಾನೆ.

ರಾವಬಹದ್ದೂರ

ಈತನಕ ತಾನು ಮಾಡಿದ ದುಷ್ಕೃತ್ಯಗಳಿಗೆಲ್ಲ ಪಶ್ಚಾತ್ತಾಪವೋ ಎಂಬಂತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟುಕೊಂಡು ಅವನು ಊರನ್ನು ಕಾಪಾಡಲು ಬದ್ಧನಾಗುತಾನೆ. ಊರಿನ  ಜನರು ಯಾರೂ  ಬಾಪೂಸಾಹೇಬ ಕೊಟ್ಟ ಧಾನ್ಯಗಳನ್ನು ಬಳಸದಂತೆ, ತನ್ನ ಮನೆಗೆ ಬಂದು ಬೇಕಾದಷ್ಟು ಧಾನ್ಯಗಳನ್ನು ಒಯ್ಯುವಂತೆ ಡಂಗುರ ಸಾರಿಸುತ್ತಾನೆ. ಸತ್ತ ಮನೆಗಳಿಗೆ ಭೇಟಿಕೊಡುವುದು, ಅಂತ್ಯಸಂಸ್ಕಾರಕ್ಕೆ ಏರ್ಪಾಟು ಮಾಡುವುದು, ಆ ಸಾವುಗಳ ವರದಿ ಮಾಡುವುದು -ಇದರಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ನಿಜವಾದ ಅರ್ಥದಲ್ಲಿ ಊರಿನ ಯಜಮಾನನಂತೆ ಜವಾಬ್ದಾರಿ ಹೊರುತ್ತಾನೆ. ಈ ಇಡೀ ಪಿಡುಗಿಗೆ ಕಾರಣನಾದ ಬಾಪೂಸಾಹೇಬನೂ ಇದರಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಗದ್ಯದ ಶಕ್ತಿಯನ್ನೆಲ್ಲ ಬಳಸಿಕೊಂಡಂತೆ ಕಾಣುವ ಈ ಮಾತುಗಳು ರಾವಬಹಾದ್ದೂರರ ಭಾಷಾಶಕ್ತಿಯನ್ನು ತೋರಿಸುತ್ತವೆ:

“ಎರಡು ದಿನಗಳ ಹಿಂದೆ ಹುಟ್ಟಿದ ಕಾಲರಾ ಬೇನೆ ಈಗ ಉಗ್ರ ಸ್ವರೂಪವನ್ನು ತಾಳಿತು. ಪ್ರಾರಂಭದಲ್ಲಿ ವಾಡೆಯ ಜೋಳ ತಿಂದ ನೆವದಿಂದ ಕೆಲ ಜನರು ಮರಣ ಹೊಂದಿದರು. ಆದರೆ ಮುಂದೆ ಕಾಲರಾ ಒಳ್ಳೆಯ ಸ್ಥಿತಿವಂತ ಮನೆತನದವರನ್ನೂ ಬೆನ್ನಟ್ಟಿತು. ಬೆಳಗಾದೊಡನೆಯೇ ಎಲ್ಲರೂ ಯಾವುದೋ ಭಯಾನಕ ವಾರ್ತೆಯನ್ನು ಕೇಳುವುದಕ್ಕೆ ಆತುರರಾಗಿರುತ್ತಿದ್ದರು. ಇರುಳಿನಲ್ಲಿ ಕಾಲರಾ ಯಾರಾರನ್ನು ಸೆಳೆದುಕೊಂಡು ಹೋಗಿರುವುದೋ ಬಲ್ಲವರಾರು? ಇಂದು ಅವರಿಗೆ, ನಾಳೆ ಮತ್ತೊಬ್ಬರಿಗೆ, ನಮ್ಮ ಸರದಿ ಯಾವಾಗಲೋ ಏನೋ ಎಂದು ಜನರೆಲ್ಲ ಹೌಹಾರಿದರು. ಕಾಲರಾ ಮರಣಗಳ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸುತ್ತ, ಕಾಲರಾದಿಂದ ನಿಧನ ಹೊಂದಿದವರ ಮನೆಗಳಿಗೆ ಹೋಗಿ ಸಮಾಧಾನಕ್ಕಾಗಿ ಅದೇ ಅದೇ ಮಾತುಗಳನ್ನು ಹೇಳುತ್ತ ಗೌಡರು ಹಣ್ಣಾದರು. ಸತ್ತವರ ವಾರಸುದಾರರನ್ನು ಕರೆಸಿ, ವಾರಸಾ ಮಾಡುವ ಬಗ್ಗೆ ವರದಿ ಕೊಡಲು ತಪ್ಪಿದರೆ ದಂಡ ಬೀಳುವುದೆಂದು, ಅವರ ಕರ್ತವ್ಯದ ಬಗ್ಗೆ ನೆನಪು ಮಾಡಿಕೊಡುವುದು ಕುಲಕರ್ಣಿ ಶೇಷಪ್ಪನಿಗೆ ಬಿಡಲಾರದ ಕರ್ತವ್ಯವೆನಿಸಿತು. ಸತ್ತವರಿಗಾಗಿ ಗೋರಿಗಳನ್ನು ಅಗೆಯುವುದು ಗರಡಿಮನೆಯ ಗಡಿಗಳ ಕೆಲಸವಾಯಿತು. ಸುತ್ತಲಿನ ದೇವರುಗಳೆಲ್ಲರಿಗೆ ನೀರು ಹಾಕಿಸಿ, ಕುರಿ ಕಡಿದು ದೇವಿಯ ಕ್ರೋಧವನ್ನು ಶಾಂತಗೊಳಿಸುವುದು ಅಗತ್ಯವೆಂದು, ಅದಕ್ಕಾಗಿ ಅಂಬಲಿಗೆ ಜೋಳ ಎತ್ತುವ ಕೆಲಸದಲ್ಲಿ ಬಾಪೂಸಾಹೇಬ, ಹುಲಿಬ್ಯಾಟಿ ಹಳಬರ ಮುಖ್ಯಸ್ಥ ದಳವಾಯಿ ತಿಪ್ಪ ಹಾಗೂ ಅವನ ಸಂಗಡಿಗರು ನಿರತರಾಗಿದ್ದರು”.

ಕೋವಿಡ್ ಶುರುವಾದಾಗಿನಿಂದ ಭಯೋತ್ಪಾದಕರಂತೆ ಜನರನ್ನು ಬೆಚ್ಚಿ ಬೀಳಿಸುತ್ತಿರುವ ಟಿ.ವಿ. ಚಾನೆಲ್ ನವರಿಗೆ ಇಂಥ ಭಾಗಗಳನ್ನು ಓದಿಸಬೇಕು. ಎಂಥ ದುರಂತವನ್ನೂ, ಅದರ ವಾಸ್ತವವನ್ನು ಬಿಡದೆ, ಸಂಯಮದಲ್ಲಿ, ಮಾನವೀಯವಾಗಿ ಗ್ರಹಿಸುವ, ವರದಿ ಮಾಡುವ ತರಬೇತಿಗೆ ಇಂಥ ಕೃತಿಗಳ ನೆರವು ಪಡೆಯಬೇಕು. ಮಾಧ್ಯಮಗಳ ಜವಾಬ್ದಾರಿಯ ತಿಳಿವಳಿಕೆಯೇ ಇಲ್ಲದವರಿಗೆ, ಸ್ವತಃ ಪತ್ರಕರ್ತರೂ ಆಗಿದ್ದ ರಾವಬಹದ್ದೂರರಿಂದ ಕಲಿಯಬೇಕಾದ ಮೂಲಭೂತ ಪಾಠಗಳಿವೆ.

ಇನ್ನೊಂದು ಕಡೆ ಈ ಕಾದಂಬರಿ ಕರ್ಮಠ ಬ್ರಾಹ್ಮಣರಾಗಿ, ಊರನ್ನು ವೈದಿಕತೆಯ ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸಿ, ಅದರಲ್ಲಿ ಯಶಸ್ವಿಯಾಗಿ ಈಗ ಅದರ ಬಗ್ಗೆ ತಮ್ಮೊಳಗೇ ಹಲವು ಪ್ರಶ್ನೆಗಳನ್ನು ಎದುರಿಸುತ್ತಿರುವ ಬಾಳಾಚಾರ್ಯರಿದ್ದಾರೆ. ಜಾತಿ ವ್ಯವಸ್ಥೆಯನ್ನು ನಿರ್ಲಜ್ಜೆಯಿಂದ ಬೆಂಬಲಿಸಿದ ಬಾಳಾಚಾರ್ಯರ ಉತ್ತರಾರ್ಧದ ಜೀವನ ಇದಕ್ಕೆ ವಿರುದ್ಧ ಗತಿಯಲ್ಲಿ ಚಲಿಸಲು ಆರಂಭವಾಗುತ್ತದೆ. ಈ ವಿರುದ್ಧ ಚಲನೆಗೆ ಒಂದು ಸ್ಪಷ್ಟತೆಯನ್ನು ಕೊಡುವುದು ಕಾಲರಾ. ಈ ತನಕ ವೈದಿಕತೆಯ ಚಕ್ರವ್ಯೂಹದಲ್ಲಿ ಊರಿಗೆ ಊರನ್ನೆ ಸಿಕ್ಕಿಸುವುದರಲ್ಲಿ ಮಗ್ನರಾಗಿದ್ದ ಬಾಳಾಚಾರ್ಯರಿಗೆ ಅದನ್ನು ಮೀರಿದ್ದು ಬದುಕಿನಲ್ಲಿ ಇದೆ, ಮನುಷ್ಯಧರ್ಮವೇ ಬಹುದೊಡ್ಡ ಧರ್ಮ ಎನ್ನುವ ಅರಿವನ್ನು ಈ ಸಾಂಕ್ರಾಮಿಕ ರೋಗ ತಂದುಕೊಡುತ್ತದೆ.

ಅದನ್ನು ಪ್ರಾಂಜಲವಾಗಿ ಬಾಳಾಚಾರ್ಯರು ಮಾಡುತ್ತಾರೆ. ಜನರಿಗೆ ಕಾದಾರಿಸಿದ ನೀರು ಕುಡಿಯಿರಿ, ಇದು ಸೋಂಕು ರೋಗವಾದ್ದರಿಂದ ಗುಂಪು ಸೇರಬೇಡಿ ಎನ್ನುತ್ತಾ ಜನ ಸಮುದಾಯದೊಂದಿಗೆ ಬೆರೆಯುತ್ತಾರೆ. ತಮಗೆ ಗೊತ್ತಿರುವ ಆಯುರ್ವೇದದ ಚಿಕಿತ್ಸೆಯನ್ನು, ಅದು ಅದನ್ನು ವಾಸಿ ಮಾಡುವಂಥದ್ದಲ್ಲ, ಸಾವನ್ನು ತುಸು ಮುಂದೂಡಬಹುದಾದದ್ದು ಮಾತ್ರ ಎನ್ನುವ ತಿಳಿವಳಿಕೆಯಲ್ಲಿಯೇ ನಿರ್ವಂಚನೆಯಿಂದ ಮಾಡುತ್ತಾರೆ. ಚಕ್ರಾಣಿ ಬೇರನ್ನು ತೇದು ತೇದು ಎಲ್ಲರಿಗೂ ಕೊಡುತ್ತಾರೆ.

ಮುಂದಿನದು ನಿಜಕ್ಕೂ ಭೀಕರವೆನಿಸುವ ಘಟ್ಟ. ಸಾಯುತ್ತಲೇ ಇರುವ ಜನರನ್ನು ಹೂಳಲು ಸ್ಥಳವಿಲ್ಲದೇ, ಗೋರಿಗಳನ್ನೇ ಅಗೆದು, ಅದರೊಳಗಿರುವ ಅಸ್ಥಿಪಂಜರಗಳನ್ನು ಹೊರೆಕ್ಕೆಸೆದು ಹೊಸ ಹೆಣಗಳಿಗೆ ಜಾಗ ಮಾಡಿಕೊಡುವ ವಿಷಮ ಸನ್ನಿವೇಶ. ಅಂಥ ಹೊತ್ತಿನಲ್ಲೂ ಗೋರಿ ಅಗೆಯುವ ಜನರಾಡುವ ಮಾತುಗಳು ಮನುಷ್ಯ ಸ್ವಭಾವಕ್ಕೆ ಹಿಡಿಯುವ ಕನ್ನಡಿ. ದೊಡ್ಡದೊಂದು ತಲೆಬುರುಡೆ ಸಿಕ್ಕರೆ, ಇದ್ಯಾವುದೋ ದೊಡ್ಡ ಮನುಷ್ಯನದಿರಬೇಕು ಎಂದು ಅವರವರಲ್ಲೇ ನಡೆಯುವ ಚರ್ಚೆ, ಇವತ್ತು ಗುಂಡಿಗಳನ್ನು ಅಗೆದು, ಅಗೆದು ಸಾಕಾಗಿದೆ, ಇವತ್ತು ಇನ್ನು ಯಾರೂ ಸಾಯದೇ ಇರಲಿ ಎಂದು ಅವರು ಬಯಸುವುದು, ಪಾದಳ್ಳಿಯನ್ನು ಕಾಲರಾ ರೋಗ ಅದೆಷ್ಟು ಹೈರಾಣ ಮಾಡಿಬಿಟ್ಟಿತ್ತು ಎನ್ನುವುದನ್ನು ಹೇಳುತ್ತದೆ.

ಕಾಲರಾದ ಕೊನೆಯ ಬಲಿ ಗೌಡರು ಎನ್ನುವುದು ಕಾದಂಬರಿಕಾರರು ಉದ್ದೇಶಪೂರ್ವಕವಾಗಿ ಯೋಜಿಸಿದ್ದೋ, ಕಾದಂಬರಿಯ ಸಹಜ ಚಲನೆಯೋ ಹೇಳುವುದು ಕಷ್ಟ. ಸೋಂಕಿತರೊಂದಿಗಿನ ನಿರಂತರ ಸಂಪರ್ಕದಿಂದ ಗೌಡರಿಗೆ ಅದು ಅಂಟುವುದು ತೀರ ಸಹಜ. ಸಾವಿನ ಸಂದರ್ಭದಲ್ಲಿ ಆತ ಉಳಿಸಿಕೊಳ್ಳುವ ಘನತೆ ಓದುಗರನ್ನು ಆರ್ದ್ರವಾಗಿಸುತ್ತದೆ. ಬಾಳಾಚಾರ್ಯರಲ್ಲಿ ಉಳಿದಿದ್ದ ಚಕ್ರಾಣಿ ಬೇರಿನ ಕೊನೆಯ ತುಂಡನ್ನು, ಮಲ್ಲನ ಮನೆಯವರು ಬಂದು ಕೇಳುವಾಗಲೇ ಗೌಡರ ಮನೆಯಿಂದ, ಅವರಿಗೆ ಕಾಯಿಲೆ ಹೆಚ್ಚಾಗಿದೆ, ಬರಬೇಕು ಎನ್ನುವ ಸುದ್ದಿ ಬಾಳಾಚಾರ್ಯರಿಗೆ ಬರುತ್ತದೆ.

ತನ್ನಲ್ಲಿರುವ ಬೇರಿನಿಂದ ಗೌಡರನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಅರಿವಿನಿಂದಲೇ ಬಾಳಾಚಾರ್ಯರ್ಯ ಅದನ್ನು ಮಲ್ಲನ ಮನೆಯವರಿಗೆ ಕೊಟ್ಟು ಗೌಡರ ಮನೆಗೆ ಬರುತ್ತಾರೆ. ಗೌಡತಿಗೆ ಅವಳ ಮುಗ್ಧತೆಯಲ್ಲಿ ಬಾಳಾಚಾರ್ಯರ ಬೇರಿನ ಔಷಧಿಯಿಂದ ಗಂಡನನ್ನು ಉಳಿಸಿಕೊಳ್ಳಬಹುದು ಎನ್ನುವ ನಂಬಿಕೆ.  ಆ ಕೊನೆಯ ಚೂರು ಮಲ್ಲನ ಮನೆಯಲ್ಲಿದೆ ಎನ್ನುವ ವಿಷಯ ತಿಳಿದ ತಕ್ಷಣ, ಅದನ್ನು ತರಲು ಯಾರಿಗೋ ಹೇಳುತ್ತಾಳೆ. ಆ ಕ್ಷಣದಲ್ಲಿ ಗೌಡರು ಅದನ್ನು ವಿರೋಧಿಸಿ, ಅದನ್ನು ತರಿಸಬಾರದು ಎಂದು ಹೇಳುತ್ತಾರೆ. ತನ್ನನ್ನು ಅದು ಬದುಕಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಅವರಿಗೆ ಗೊತ್ತಿರಬಹುದು ಎನ್ನುವುದನ್ನು ಒಪ್ಪಿಯೂ ಸಾವಿನ ಘಳಿಗೆಯಲ್ಲಿ ಯಾವುದೋ ಒಂದು ತನ್ನನ್ನು ಬದುಕಿಸಬಹುದು ಎನ್ನುವ ಮನುಷ್ಯ ಸಹಜ ಮನಸ್ಥಿತಿಯನ್ನು ಗೌಡರು ದಾಟಿದ್ದರು ಎನ್ನುವ ಸಂಗತಿ ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ.

ಊರಿನ ಹಿತವೇ ದೊಡ್ಡದು, ತನ್ನನ್ನು ನಂಬಿದವರ ರಕ್ಷಣೆಯೇ ಮುಖ್ಯವಾದುದುದು ಎನ್ನುವ ಗೌಡರ ನಿಲುವನ್ನು ನಮ್ಮ ಇಂದಿನ ನಾಯಕರ ನಿಲುವುಗಳ ಜೊತೆ ಇಟ್ಟರೆ ಕಾಣಿಸುವ ಸತ್ಯವನ್ನು ಎದುರಿಸುವ ಧೈರ್ಯ ನಮಗಿಲ್ಲವೇನೋ. ಗೌಡರು ತಮ್ಮ ಸಾವಿನೊಂದಿಗೆ ಸಾಂಕ್ರಾಮಿಕ ರೋಗಕ್ಕೂ ಸಾವು ತರುತ್ತಾರೆ. ಪಾದಳ್ಳಿಯಲ್ಲಿ ಕಾಲರಾಕ್ಕೆ ಬಲಿಯಾದವರಲ್ಲಿ ಅವರದೇ ಕೊನೆಯ ನಂಬರು.

ಈ ಪ್ರಸಂಗಕ್ಕೆ ಸಮಕಾಲೀನ ಸಂದರ್ಭದಲ್ಲಿ ಅನೇಕ ಧ್ವನ್ಯರ್ಥಗಳಿವೆ. ಜನನಾಯಕರು, ಅವರ ಕರ್ತವ್ಯಪ್ರಜ್ಞೆ, ಅವರ ಬದ್ಧತೆ ಈ ಎಲ್ಲವನ್ನೂ ಅದು ಸಂಕೇತಿಸುತ್ತಿರುವಂತೆ ಕಾಣಿಸುತ್ತದೆ. ಜನಪ್ರತಿನಿಧಿಗಳಿಗೆ ಸ್ವಾಭಾವಿಕವಾಗಿ ಇರುವ ದೌರ್ಬಲ್ಯ, ಮಹತ್ವಾಕಾಂಕ್ಷೆ, ಅದಕ್ಕಾಗಿ ಅವರು ನಡೆಸುವ ಕುತಂತ್ರಗಳು ಈ ಎಲ್ಲವನ್ನೂ ಮೀರಿಕೊಳ್ಳುವ ಸತ್ವ ಪರೀಕ್ಷೆಯಾಗಿ ಕಾಲರಾ ರೋಗ ಈ ಕಾದಂಬರಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಬಾಪೂಸಾಹೇಬನಿಗೂ ಗೌಡರಿಗೂ ಬಾಳಾಚಾರ್ಯಾರಿಗೂ ಇರುವ ವ್ಯತ್ಯಾಸಗಳನ್ನು ಗಮನಿಸಿದರೆ, ಭಾರತೀಯ ಸಮುದಾಯ, ಪ್ರಭುತ್ವ ಮತ್ತು ಜನಪ್ರತಿನಿಧಿಗಳ ಮಾದರಿಗಳ ನಡುವಿನ ವ್ಯತ್ಯಾಸವೂ ಎದ್ದು ಕಾಣಿಸುತ್ತದೆ. ಬಾಪೂಸಾಹೇಬನಿಗೆ ತಾನೇ ಇದರ ಮೂಲ ಎನ್ನುವ ಪಾಪಪ್ರಜ್ಞೆಯೇ ಇಲ್ಲ, ಅವನು ಜನರೊಂದಿಗೆ ಬೆರೆತವನೂ ಅಲ್ಲ, ಅವರ ಬಗ್ಗೆ ಅವನಿಗೆ ನಿಜವಾದ ಕಾಳಜಿಗಳೂ ಇಲ್ಲ. ಆದರೆ ಊರ ಗೌಡ ಜನರಿಂದಲೇ ಹುಟ್ಟಿದವನು, ಅವರ ನಡುವೆಯೇ ಬದುಕುವವನು, ಆದ್ದರಿಂದಲೇ ಅವನಿಗೆ ತತ್ ಕ್ಷಣ ಸ್ಪಂದಿಸುವುದು ಸಾಧ್ಯವಾಗುತ್ತದೆ.

ಬಾಳಾಚಾರ್ಯರಿಗೆ ಧರ್ಮದ ತಾತ್ವಿಕತೆಯಿಂದ, ಕ್ರೌರ್ಯದಿಂದ ನಿಜವಾದ ಮನುಷ್ಯ ಧರ್ಮದ ಕಡೆಗೆ ಹೊರಳುವ ಸಾಧ್ಯತೆ ಗೋಚರಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ಘೋಷಿಸಿದ ಅಧಿಕಾರಸ್ಥರಿಗೆ, ಕೋಟ್ಯಂತರ ಸಂಖ್ಯೆಯಲ್ಲಿರುವ ಕಾರ್ಮಿಕರ ಅನ್ನದ ಪ್ರಶ್ನೆ ಹೇಗೆ ಎನ್ನುವ ಸತ್ಯ ಕಣ್ಣೆದುರಿಗೇ ಬಾರದಿರುವುದು ಏನನ್ನು ಹೇಳುತ್ತದೆ? ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ಲಾಕ್ ಡೌನ್ ಸಂದರ್ಭದಲ್ಲಿ ನೀವು ಬಿಸಿ ನೀರು ಕುಡಿಯಿರಿ, ಅರಿಷಿಣದ ನೀರು ಕುಡಿಯಿರಿ ಎನ್ನುವುದು ಮುಗ್ಗಲು ಜೋಳ ತಿಂದು ಸತ್ತವರಿಗಿಂತ ಹೀನಾಯ ಸ್ಥಿತಿಯಲ್ಲಿರುವವರ ಜೀವಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದನ್ನು ತೋರಿಸುವುದಿಲ್ಲವೆ?

ಗ್ರಾಮಾಯಣ ಕಾದಂಬರಿಯಲ್ಲಿ ಗೌಡರಿಗೂ ಬಾಳಾಚಾರ್ಯರಿಗೂ ಆಗುವ ಅರಿವಿನ ಆಸ್ಫೋಟ ನಮ್ಮ ನಾಯಕರಲ್ಲೂ ಆಗಲಿ ಎನ್ನುವುದು ಹಗಲು ಕನಸಿನ ಕನವರಿಕೆ ಎನ್ನುವ ಸತ್ಯ ಗೊತ್ತಿದೆ ನಮ್ಮೆಲ್ಲರಿಗೂ.

*ಲೇಖಕರು ಮೂಲತಃ ದಾವಣಗೆರೆಯವರು; ಪ್ರಸ್ತುತ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರು. ತೌಲನಿಕ ಅಧ್ಯಯನ, ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಮತ್ತು ಮಹಿಳಾವಾದದಲ್ಲಿ ವಿಶೇಷ ಆಸಕ್ತಿ, ಪರಿಣತಿ.

Leave a Reply

Your email address will not be published.