ರಾಷ್ಟ್ರಪ್ರೇಮದ ಪುನರ್ ವ್ಯಾಖ್ಯಾನ: ಅತ್ಯಗತ್ಯ

ಸಾರ್ವಜನಿಕ ಮಟ್ಟದಲ್ಲಿ ಸರಕಾರದ ನಿಲುವುಗಳನ್ನು ಚರ್ಚಿಸಿದಷ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗುತ್ತದೆ. ಅಲ್ಲದೆ, ಈ ಚರ್ಚೆಗಳ ಫಲವಾಗಿ ಮಾಡಲ್ಪಡುವ ತಿದ್ದುಪಡಿಗಳು, ಜನಸಾಮಾನ್ಯರಿಗೆ ವ್ಯವಸ್ಥೆಯಲ್ಲಿ ವಿಶ್ವಾಸ ಹೆಚ್ಚಿಸುವುದಲ್ಲದೆ, ದೇಶದ ಪ್ರಗತಿಗೆ ಕೈಜೋಡಿಸುವಂತೆ ಪ್ರೇರೇಪಿಸುತ್ತವೆ.

– ಡಾ.ಜ್ಯೋತಿ

ಕ್ಷವೊಂದು ಅತ್ಯಧಿಕ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಏನೆಲ್ಲ ಏಕಮುಖ ನಿರ್ಧಾರಗಳನ್ನು ನಾಗರಿಕರ ಮೇಲೆ ಹೇರಬಹುದೋ, ಅದೆಲ್ಲವನ್ನು ಪ್ರಸ್ತುತ ನಮ್ಮ ಕೇಂದ್ರ ಸರಕಾರ ಮಾಡುತ್ತಿದೆ. ಇಂತಹ ಸ್ವಕೇಂದ್ರಿತ ಅಧಿಕಾರ ಧೋರಣೆ ನಮ್ಮ ದೇಶದಲ್ಲಿ ಹೊಸತೇನಲ್ಲ. ಹಿಂದಿನ ಕಾಂಗ್ರೆಸ್ ಸರಕಾರಗಳು ಕೂಡ ಸಂವಿಧಾನವನ್ನು ತಮಗೆ ಬೇಕಾದಂತೆ ತಿದ್ದುಪಡಿಮಾಡಿ ಅನುಕೂಲಸಿಂಧು ರಾಜಕಾರಣ ಮಾಡಿವೆ. ಅಂತಹ ಸಿದ್ಧಮಾದರಿಯ ಮುಂದುವರಿದ ಭಾಗದಂತೆ, ಪ್ರಸ್ತುತ ಸರಕಾರವು ಕೂಡ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ, ಜನಸಾಮಾನ್ಯರ ಅಭಿಪ್ರಾಯಗಳಿಗೆ ಮನ್ನಣೆ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸಮಾಡಬೇಕೆನ್ನುವ ಮೂಲ ಜವಾಬ್ದಾರಿಯನ್ನು ಕಡೆಗಣಿಸಿ, ತನ್ನ ಪಕ್ಷದ ಪ್ರಣಾಳಿಕೆಯಲ್ಲಿರುವ ವಿವಾದಿತ ಅಂಶಗಳನ್ನು ತರಾತುರಿಯಲ್ಲಿ, ಯಾವುದೇ ಚರ್ಚೆಗೆ ಆಸ್ಪದ ಕೊಡದೆ ಜಾರಿಗೆ ತರುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಪಹಾಸ್ಯವೇ ಸರಿ.

ಒಂದು ವೇಳೆ ಪ್ರಶ್ನಿಸಿದರೆ, ಹಿಂದಿನ ಸರಕಾರಗಳು ಹೀಗೆ ಮಾಡಿಲ್ಲವೇ? ಎನ್ನುವುದೇ ಉತ್ತರವಾದರೆ, ನೀವು ಅವರಿಗಿಂತ ಹೇಗೆ ಭಿನ್ನ, ಉತ್ತಮ ಅಥವಾ ಪಾರದರ್ಶಕ ಎಂದು ಮರುಪ್ರಶ್ನಿಸಬಹುದು. ಹಿಂದೆ, ಅಕ್ಷರತೆ, ಅರಿವು, ಮಾಧ್ಯಮಗಳ ಕೊರತೆಯಿದ್ದ ಕಾಲದಲ್ಲಿ, ಸರಕಾರಗಳು ತಮಗಿಷ್ಟಬಂದಂತೆ ಅಧಿಕಾರ ಚಲಾಯಿಸಿರಬಹುದು. ಆದರೆ, ಈ ಕಾಲದಲ್ಲಿ ಮಾಧ್ಯಮ ಮತ್ತು ಸಾರ್ವಜನಿಕ ಚರ್ಚೆಗೆ ತೊಡಗಿಸಿಕೊಳ್ಳದೆ ವಿವಾದಿತ ಮಸೂದೆಗಳನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ, ಮಾತ್ರವಲ್ಲ, ಇದೊಂದು ಒಳ್ಳೆಯ ಬೆಳವಣಿಗೆಯಲ್ಲ.

ಇಲ್ಲಿ ವಿಶೇಷವಾಗಿ ಮನಗಾಣಬೇಕಾದ ಅಂಶವೆAದರೆ, ಪಕ್ಷವೊಂದು ಚುನಾವಣೆ ಗೆಲ್ಲುವುದಕ್ಕೆ ಆ ಕಾಲಘಟ್ಟದ ಸಂದರ್ಭಕ್ಕೆ ತಕ್ಕಂತೆ ಹಲವಾರು ಕಾರಣಗಳಿರುತ್ತವೆ. ಮುಖ್ಯವಾಗಿ, ಕೆಲವೊಮ್ಮೆ ಚಾಣಾಕ್ಷತನದಿಂದ, ದೇಶದಲ್ಲಿ ಭಾವೋದ್ರೇಕದ ತುರ್ತುಪರಿಸ್ಥಿತಿ ನಿರ್ಮಿಸಿ, ದೇಶರಕ್ಷಣೆ ತಮ್ಮಿಂದ ಮಾತ್ರ ಸಾಧ್ಯ, ವಿರೋಧ ಪಕ್ಷಗಳೆಲ್ಲ ನಾಲಾಯಕು ಎಂಬ ಅಭಿಪ್ರಾಯ ಮತದಾರರಲ್ಲಿ ತೇಲಿಬಿಟ್ಟು, ಪಕ್ಷಗಳು ಅಧಿಕಾರಕ್ಕೆ ಬರಲು ಸಾಧ್ಯವಿದೆ. ಆದರೆ, ಈ ಗೆಲುವನ್ನು ಪಕ್ಷದ ಎಲ್ಲ ಸಿದ್ಧಾಂತಗಳಿಗೆ ಬೆಂಬಲವೆAದು ತಪ್ಪಾಗಿ ಅರ್ಥೈಸಿ, ಅವುಗಳನ್ನು ಒತ್ತಾಯಪೂರ್ವಕವಾಗಿ ಜನರ ಮೇಲೆ ಹೇರಿದರೆ, ಕ್ರಮೇಣ ಜನಬೆಂಬಲ ಕುಸಿದು, ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ.

ಅಲ್ಲದೆ, ಅಂತಾರಾಷ್ಟಿçÃಯ ಮಟ್ಟದಲ್ಲಿ ದೇಶದ ಘನತೆ ಕುಸಿಯುತ್ತದೆ, ಮಾತ್ರವಲ್ಲ, ಇದರಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎನ್ನುವ ಎಚ್ಚರ ಆಳುವವರಿಗಿರಬೇಕಾಗುತ್ತದೆ. ಕೇವಲ ಬಹುಮತದ ಆಧಾರದ ಮೇಲೆ, ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಸಮಗ್ರ ಚರ್ಚೆಗೆ ಆಸ್ಪದ ಕೊಡದೆ, ಫಾಸ್ಟ್ ಫುಡ್ ಡೆಲಿವೆರಿಯಂತೆ ಜಾರಿಗೆ ತರುತ್ತಿರುವ ಕಾಯಿದೆಗಳನ್ನು ಸಾರ್ವಜನಿಕ ಮಟ್ಟದಲ್ಲಿಯೂ ಚರ್ಚಿಸಬಾರದು ಅಥವಾ ಪ್ರಶ್ನಿಸಬಾರದು ಎನ್ನುವ ಧೋರಣೆ ಎಷ್ಟು ಸಮಂಜಸ?

ವರ್ತಮಾನದ ಕೇಂದ್ರ ಸರಕಾರ ಸಾರ್ವಜನಿಕ ವಲಯದಲ್ಲಿ ಸೃಷ್ಟಿಸಿರುವ ಹಲವಾರು ಗೊಂದಲಗಳಲ್ಲಿ ಬಲು ಮುಖ್ಯವೆನಿಸುವುದು, ಸದ್ಯ ದೇಶ ಎದುರಿಸುತ್ತಿರುವ ಹಲವಾರು ತುರ್ತು ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸುಮಾರಾಗಿ ಯಶಸ್ವಿ ಪ್ರಯೋಗವೆನಿಸಿರುವ, ಮುಖ್ಯವಾಗಿ, ಪ್ರಸ್ತುತ ಅಳುವ ಪಕ್ಷಕ್ಕೆ ಎರಡನೇ ಬಾರಿ ಬಹುತೇಕ ಚುನಾವಣೆ ಗೆಲ್ಲಿಸಿದ ಮಂತ್ರ ‘ರಾಷ್ಟ್ರೀಯತೆ’. ಹಾಗಿದ್ದಲ್ಲಿ, ನಿಜವಾಗಿಯೂ ರಾಷ್ಟ್ರೀಯತೆ ಜನಸಾಮಾನ್ಯರಿಗೆ ಅಷ್ಟು ಮುಖ್ಯವಿಚಾರವೇ? ಎನ್ನುವುದು ಮೊದಲ ಪ್ರಶ್ನೆ.

ಸ್ವಾತಂತ್ರ್ಯಪೂರ್ವದಲ್ಲಿ, ಭಾಷೆ, ಜನಾಂಗ, ಜಾತಿ, ಧರ್ಮ, ಇತ್ಯಾದಿ ವೈವಿಧ್ಯ ಹೊಂದಿದ ವಿಭಿನ್ನ ಪ್ರಾಂತ್ಯಗಳನ್ನು ಸೇರಿಸಿ ‘ಭಾರತ’ ಎನ್ನುವ ಒಂದು ಹೊಸ ದೇಶ ಸಂಘಟಿಸುವಲ್ಲಿ ಮತ್ತು ಅದಕ್ಕಾಗಿ ನಡೆದ ಸ್ವಾತಂತ್ರ್ಯ ಹೋರಾಟದ  ಸಮಯದಲ್ಲಿ ಜನರಲ್ಲಿ ಐಕ್ಯ ಭಾವ ಮೂಡಿಸುವಲ್ಲಿ, ಈ ರಾಷ್ಟ್ರೀಯತೆ ಎನ್ನುವ ಮಂತ್ರ ವಿಶೇಷ ಪಾತ್ರ ವಹಿಸಿದ್ದೇನೋ ನಿಜ. ಆದರೆ, ಸ್ವಾತಂತ್ರ್ಯ ಪಡೆದು ಇಷ್ಟು ವರುಷಗಳ ಮೇಲೂ ‘ರಾಷ್ಟ್ರೀಯತೆ’ ಇನ್ನೂ ನಿತ್ಯದ ಬದುಕಲ್ಲಿ ಸಾಬೀತುಪಡಿಸಬೇಕಾದ ಅಂಶವೇ ಅಥವಾ ಇಂತಹ ಸಂಕುಚಿತ ಸಂಕೋಲೆಗಳಿಂದ ಬಿಡುಗಡೆಗೊಂಡು ದೇಶ ಎದುರಿಸುತ್ತಿರುವ, ಇನ್ನೂ ಪರಿಹರಿಸಲಾಗದ ಜ್ವಲಂತ ಸಮಸ್ಯೆಗಳತ್ತ ಗಮನಹರಿಸಬೇಕೇ ಎಂದು ಸರಕಾರ ಮತ್ತು ಅಪ್ಪಟ ದೇಶಭಕ್ತರು ಆತ್ಮಾವಲೋಕನ ಮಾಡಬೇಕಾಗಿದೆ. ‘ರಾಷ್ಟ್ರಪ್ರೇಮ’ವೆನ್ನುವುದು ದಿನನಿತ್ಯದ ಜೀವನದಲ್ಲಿ ಸಾರ್ವಜನಿಕವಾಗಿ ವ್ಯಕ್ತಪಡಿಸಬೇಕಾದ ಅನಿವಾರ್ಯತೆಯಿದೆಯೇ? ಅಥವಾ ಅದನ್ನು ಅಂತರ್ಗತವಾಗಿಸಿಕೊಂಡು, ಎಲ್ಲಾ ಭಿನ್ನತೆಯಲ್ಲಿ ಐಕ್ಯತೆ ಕಂಡು, ಇತಿಹಾಸವನ್ನು ಪುನಃ ಪುನಃ ಕೆದಕುತ್ತಾ ಕಾಲಹರಣ ಮಾಡದೆ, ದೇಶದ ಅಭಿವೃದ್ಧಿಯತ್ತ ಗಮನಹರಿಸಿದರೆ ಸಾಕಲ್ಲವೇ?

ಈ ನಿಟ್ಟಿನಲ್ಲಿ, ಯು.ಆರ್.ಅನಂತಮೂರ್ತಿ ಹೇಳಿದ ಮಾತು ನಿದರ್ಶನವೆನಿಸುತ್ತದೆ. ‘ನಾನು ಹೊರದೇಶದಲ್ಲಿದ್ದಾಗ ಮಾತ್ರ ಭಾರತೀಯತೆ ನನ್ನ ಗುರುತು. ಆದರೆ, ನನ್ನ ದೇಶದೊಳಗೇನೇ ರಾಷ್ಟ್ರ ಪ್ರೇಮವನ್ನು ಎದೆ ಸೀಳಿ ತೋರಿಸುವ ಪ್ರಮೇಯ ಬರಬಾರದು’. ದುರಾದೃಷ್ಟವಷಾತ್, ಈಗ ನಡೆಯುತ್ತಿರುವುದು ಅದೇ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದುನಿಂತು ಗೌರವ ಸಲ್ಲಿಸದಿದ್ದಲ್ಲಿ ಆ ವ್ಯಕ್ತಿಯನ್ನು ಸಂಶಯದಿAದ ನೋಡಲಾಗುತ್ತದೆ. ಹಾಗೆಯೇ, ರಾಷ್ಟೀಯ ಪೌರತ್ವ ನೋಂದಣಿ ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ.

ಇಲ್ಲಿ ಸರಕಾರ ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ, ಸಾರ್ವಜನಿಕ ಮಟ್ಟದಲ್ಲಿ ಸರಕಾರದ ನಿಲುವುಗಳನ್ನು ಚರ್ಚಿಸಿದಷ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗುತ್ತದೆ. ಅಲ್ಲದೆ, ಈ ಚರ್ಚೆಗಳ ಫಲವಾಗಿ ಮಾಡಲ್ಪಡುವ ತಿದ್ದುಪಡಿಗಳು, ಜನಸಾಮಾನ್ಯರಿಗೆ ವ್ಯವಸ್ಥೆಯಲ್ಲಿ ವಿಶ್ವಾಸ ಹೆಚ್ಚಿಸುವುದಲ್ಲದೆ, ದೇಶದ ಪ್ರಗತಿಗೆ ಕೈಜೋಡಿಸುವಂತೆ ಪ್ರೇರೇಪಿಸುತ್ತವೆ. ಇದಕ್ಕೆ ಹೊರತಾಗಿ, ಅಸಮಾಧಾನದ ಧ್ವನಿಗಳನ್ನು ಹತ್ತಿಕ್ಕಿ, ಅಧಿಕಾರ ದುರುಪಯೋಗಿಸಿಕೊಂಡರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆಯಾಗುತ್ತದೆ.

ಇಷ್ಟಕ್ಕೂ,  ರಾಷ್ಟ್ರಪ್ರೇಮವೆನ್ನುವುದು ಕೇವಲ ಪ್ರದರ್ಶನದ ವಸ್ತುವಲ್ಲ. ಅದು ಆ ದೇಶದ ನಾಗರಿಕರ ನಡವಳಿಕೆಯಲ್ಲಿ, ಸಾರ್ವಜನಿಕ ವಸ್ತುಗಳನ್ನು ಕಾಪಾಡುವುದರಲ್ಲಿ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ, ಕರ್ತವ್ಯ ನಿಷ್ಠೆಯಲ್ಲಿ, ತಮ್ಮ ಮಕ್ಕಳನ್ನು ಉತ್ತಮ ನಾಗರಿಕರಾಗಿ ಬೆಳೆಸುವುದರಲ್ಲಿ ಅಡಕವಾಗಿದೆ. ತೋರಿಕೆಯ ರಾಷ್ಟçಪ್ರೇಮ, ಮತ್ತು ಆ ಹೆಸರಲ್ಲಿ ಮಾಡುವ ದೊಂಬಿ, ರಾಷ್ಟçದ ಅಭಿವೃದ್ಧಿಗೆ ಮಾರಕ. ಈ ಮಾದರಿಯ ರಾಷ್ಟç ನಿರ್ಮಿಸಲು ಹೊರಟು ಮಹಾಯುದ್ಧಕ್ಕೆ ನಾಂದಿ ಹಾಡಿ ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣೀಕರ್ತನಾದ ಹಿಟ್ಲರ್ ನಮಗೆ ಆದರ್ಶಪ್ರಾಯವಾಗಬಾರದು.

ಮುಖ್ಯವಾಗಿ, 21ನೇ ಶತಮಾನದಲ್ಲಿ ಸರಕಾರಗಳು ಜಾಗತಿಕಮಟ್ಟದಲ್ಲಿ ಸಾಮೂಹಿಕವಾಗಿ ಕೆಲಸಮಾಡಿ, ಮಾನವನಿರ್ಮಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ. ರಾಷ್ಟç ರಾಷ್ಟ್ರಗಳ ನಡುವಿನ ಗಡಿಗಳ ಎಲ್ಲೆಯ ಮೀರಿ, ಜಾಗತಿಕ ಮಟ್ಟದಲ್ಲಿ ಪರಸ್ಪರ ಸೌಹಾರ್ದಪೂರ್ಣ ವಿಚಾರವಿನಿಮಯದ ಮೂಲಕ, ರಾಷ್ಟ್ರ ಪ್ರೇಮದ ಜಾಗದಲ್ಲಿ ವಿಶ್ವಪ್ರೇಮವ ಹಂಚಿ, ಈ ಭೂಮಿಯನ್ನು ಮುಂದಿನ ಜನಾಂಗಕ್ಕೆ ವಾಸ್ತವ್ಯಯೋಗ್ಯವಾಗಿ ಉಳಿಸಿಕೊಳ್ಳಬೇಕಾಗಿರುವುದು ರಾಷ್ಟ್ರಗಳ ಸದ್ಯದ ಅವಶ್ಯಕತೆ.

ರಾಷ್ಟ್ರ, ರಾಜ್ಯ, ಗಡಿ, ರಾಷ್ಟ್ರೀಯತೆ, ಇತ್ಯಾದಿ ಭೌಗೋಳಿಕ ಹಾಗು ಭಾವನಾತ್ಮಕ ಸಂಕೇತಗಳು, ಆಯಾಯ ಕಾಲಘಟ್ಟದ ಮತ್ತು ಪ್ರಾದೇಶಿಕ ಅನಿವಾರ್ಯತೆಗಳಿಂದ ಸೃಷ್ಟಿಯಾದವುಗಳು. ಈಗ ಅವುಗಳಿಂದ ಬಿಡುಗಡೆಗೊಂಡು ವಿಶ್ವಮಾನವರಾಗೋಣ. ಇದು ಜಾಗತಿಕ ಮಟ್ಟದಲ್ಲಿ, ಪ್ರಸ್ತುತ ಸಮಯದ ಅನಿವಾರ್ಯತೆ.

*ಲೇಖಕರು ಸಹಾಯಕ ಪ್ರಾಧ್ಯಾಪಕರು, ಆಂಗ್ಲ ಭಾಷಾ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ. 

Leave a Reply

Your email address will not be published.