ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಏನಿದೆ ಅದರಲ್ಲಿ?

ಭಾರತೀಯ ನಾಗರಿಕತೆಯು ತನ್ನ ಗತವೈಭವವನ್ನು ಮತ್ತೆ ಗಳಿಸಲು ಶಿಕ್ಷಣ ಕ್ಶೇತ್ರವನ್ನು ಆದ್ಯತೆಯ ವಲಯವೆಂದೆ ಸಂಘ ಪರಿವಾರವು ನೋಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರವು ಯಾವ ಬಗೆಯ ಶಿಕ್ಷಣ ನೀತಿಯನ್ನು ರೂಪಿಸಲಿದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ.

ಮೇ 31ರಂದು ಪ್ರೊ.ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಸಲ್ಲಿಸಿತು. ಜೂನ್ 2017ರಿಂದ ನೇಮಕಗೊಂಡ ಈ ಸಮಿತಿಯು ಎರಡು ವರ್ಷಗಳ ಕಾಲ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಹಲವಾರು ಕ್ಷೇತ್ರ ಪರಿಣತರ ಸಲಹೆಗಳನ್ನು ಪಡೆದು ತನ್ನ ವರದಿಯನ್ನು ಸಿದ್ಧಪಡಿಸಿದೆ.

ಭಾರತವು ಸ್ವತಂತ್ರವಾದ ನಂತರ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮಾಡಲಾಗಿರುವ ನಾಲ್ಕನೆಯ ಮುಖ್ಯ ಪ್ರಯತ್ನವಿದು. ಸ್ವಾತಂತ್ರ್ಯ ಬಂದ ತಕ್ಷಣದಲ್ಲಿಯೆ 1948ರಲ್ಲಿ ಡಾ.ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾನಿಲಯ ಆಯೋಗವೊಂದನ್ನು ರಚಿಸಲಾಗಿತ್ತು. ಬ್ರಿಟಿಷ್ ಭಾರತದ ವಿವಿಧ ರಾಜ್ಯಗಳು ಮತ್ತು ಐನೂರಕ್ಕೂ ಮೀರಿದ ದೇಶಿ ಸಂಸ್ಥಾನಗಳಲ್ಲಿ ಇದ್ದ ವಿವಿಧ ಬಗೆಯ, ಗುಣಮಟ್ಟದ ಶಿಕ್ಷಣ ವ್ಯವಸ್ಥೆಗಳನ್ನು ಒಂದು ರಾಷ್ಟ್ರೀಯ ವ್ಯವಸ್ಥೆಯ ಅಡಿಗೆ ತಂದು, ಸ್ವತಂತ್ರ ಭಾರತಕ್ಕೆ ಸೂಕ್ತವಾದ ಶೈಕ್ಷಣಿಕ ಗುರಿಗಳನ್ನು ರೂಪಿಸುವುದು ಈ ಸಮಿತಿಯ ಗುರಿಯಾಗಿತ್ತು. 1949ರಲ್ಲಿ ಸಲ್ಲಿಸಲಾದ ರಾಧಾಕೃಷ್ಣನ್ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇರೆಗೆ ಹೊಸ ದೇಶದ ಶಿಕ್ಷಣ ವ್ಯವಸ್ಥೆ ರೂಪುಗೊಂಡಿತು. ಈ ಸಮಿತಿಯ ಶಿಫಾರಸ್ಸಿನ ಮೇರೆಗೆ ಶಾಲಾ ಶಿಕ್ಷಣವನ್ನು ಪುನಾರಚಿಸಲು ಡಾ. ಎ.ಎಲ್. ಮೊದಲಿಯಾರ್ ಅವರ ನೇತೃತ್ವದಲ್ಲಿ 1952ರಲ್ಲಿ ಮತ್ತೊಂದು ಆಯೋಗವನ್ನು ರಚಿಸಲಾಯಿತು ಮತ್ತು ಅದರ ವರದಿಯು 1953ರಲ್ಲಿ ಸಲ್ಲಿಕೆಯಾಯಿತು.

ಇದಿಷ್ಟು ಮೊದಲ ಹಂತದ ಬೆಳವಣಿಗೆಗಳಾದರೆ, ಭಾರತೀಯ ಶಿಕ್ಷಣ ವ್ಯವಸ್ಥೆಗೆ ಸರಿಯಾದ ಅಡಿಪಾಯ ದೊರಕಿದ್ದು ಎರಡನೆಯ ಹಂತದಲ್ಲಿ. 1964ರಲ್ಲಿ ಅಂದಿನ ಶಿಕ್ಷಣ ಸಚಿವ ಎಂ.ಸಿ.ಛಾಗ್ಲಾ ಅವರು ಡಾ.ಡಿ.ಎಸ್.ಕೊಠಾರಿಯವರ ನೇತೃತ್ವದಲ್ಲಿನ ಶಿಕ್ಷಣ ಆಯೋಗವನ್ನು ರಚಿಸಿದರು. ಎಲ್ಲ ಹಂತಗಳಲ್ಲಿಯೂ ಶಿಕ್ಷಣವನ್ನು ಮರುಚಿಂತನೆ ಮಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ರೂಪಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಈ ಆಯೋಗವನ್ನು ರೂಪಿಸಲಾಗಿತ್ತು. ಶಿಕ್ಷಣವು ರಾಜ್ಯಗಳಿಗೂ ಸಂಬಂಧಿಸಿದ ವಿಷಯವಾದುದರಿಂದ ದೇಶಾದ್ಯಂತ ನಡೆದ ಚರ್ಚೆಗಳ ನಂತರ 1968ರ ಜುಲೈ ತಿಂಗಳಿನಲ್ಲಿ ಸ್ವತಂತ್ರ ಭಾರತದ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ಹೊರಹೊಮ್ಮಿತು.

ಶಿಕ್ಷಣ ವ್ಯವಸ್ಥೆಯ ಆಡಳಿತಾತ್ಮಕ ನಿರ್ವಹಣೆ ಮತ್ತು ಹಣಕಾಸು ಒದಗಿಸುವಿಕೆ

1. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೊಂದಾಣಿಕೆಯನ್ನು ಸಾಧಿಸುವ ಸಲುವಾಗಿ ರಾಷ್ಟ್ರೀಯ ಶಿಕ್ಷಣ ಆಯೋಗವನ್ನು ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಬೇಕೆನ್ನುವ ಸಲಹೆಯಿದೆ. ಈ ಆಯೋಗವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ರಾಷ್ಟ್ರೀಯ ಸಂಘಟನೆಗಳ ಮೇಲ್ವಿಚಾರಣೆ ಮಾಡಲಿದೆ.

2. ಹಣಕಾಸಿನ ವಿಷಯಕ್ಕೆ ಸಂಬಂದಿಸಿದಂತೆ ಈ ಹಿಂದೆಯೂ 1968ರಿಂದಲೇ ಯೋಜಿಸಿದ್ದಂತೆ ಜಿ.ಡಿ.ಪಿ.ಯ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆನ್ನುವ ಶಿಫಾರಸ್ಸನ್ನುಕಸ್ತೂರಿ ರಂಗನ್ ಸಮಿತಿ ಮಾಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಒಟ್ಟು ಸಾರ್ವಜನಿಕ ವೆಚ್ಚದ ಹತ್ತರಷ್ಟಿರುವ ಶಿಕ್ಷಣ ಕ್ಷೇತ್ರದಲ್ಲಿನ ಹೂಡಿಕೆಯನ್ನು ದ್ವಿಗುಣಗೊಳಿಸಬೇಕು ಎಂದೂ ಸಮಿತಿ ಹೇಳಿದೆ.

3. ಇದೆಲ್ಲದರ ಜೊತೆಗೆ ಶಿಕ್ಷಣದಲ್ಲಿ ತಂತ್ರಜ್ಞಾನದಬಳಕೆ, ವಯಸ್ಕ ಮತ್ತು ವೃತ್ತಿಪರ ಶಿಕ್ಷಣಗಳ ಪ್ರಾಮುಖ್ಯತೆಯನ್ನು ಕಸ್ತೂರಿರಂಗನ್ ಸಮಿತಿ ಚರ್ಚಿಸಿದೆ.

ಮೂರನೆಯ ಹಂತದಲ್ಲಿ 1985-86ರಲ್ಲಿ ನವಶಿಕ್ಷಣ ನೀತಿಯನ್ನು ರೂಪಿಸುವ ಕೆಲಸವನ್ನು ರಾಜೀವ್ ಗಾಂಧಿ ಸರ್ಕಾರವು ಕೈಗೆತ್ತಿಕೊಂಡಿತು ಹಾಗೂ ಈ ನೀತಿಯನ್ನು 1992ರಲ್ಲಿ ನರಸಿಂಹರಾವ್ ಸರ್ಕಾರವು ಪರಿಷ್ಕರಿಸಿತು. ನವಶಿಕ್ಷಣ ನೀತಿಯ ಹೊಸತನವೇನಾಗಿತ್ತು ಎನ್ನುವ ಪ್ರಶ್ನೆಯಿದ್ದರೂ ಸಹ, ಎರಡು ಅಂಶಗಳನ್ನು ಇಲ್ಲಿ ಗಮನಿಸಬಹುದು. ಈ ಹೊಸ ನೀತಿಯು ಶೈಕ್ಷಣಿಕ ಅವಕಾಶಗಳನ್ನು ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒದಗಿಸುವ ಆದ್ಯತೆಯನ್ನು ಹೊಂದಿತ್ತು. ಜೊತೆಗೆ ಮುಕ್ತ ವಿಶ್ವವಿದ್ಯಾನಿಲಯ ವ್ಯವಸ್ಥೆಯನ್ನು ಸಹ ವಿಸ್ತರಿಸುವ ಆದ್ಯತೆಯನ್ನು ಹೊಂದಿತ್ತು. ಎರಡನೆಯದಾಗಿ 1992ರ ಪರಿಷ್ಕರಣೆಯ ನಂತರ ತಾಂತ್ರಿಕ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಮತ್ತು ರಾಜ್ಯ ಹಂತಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಪದ್ಧತಿಯು ನಿಯಮಿತವಾಗಿ ಎಲ್ಲೆಡೆ ಪ್ರಾರಂಭವಾಯಿತು. ಮುಂದಿನ ಎರಡು ದಶಕಗಳಲ್ಲಿ ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸುವ ಹೊಸದೊಂದು ಪರಿಭಾಷೆ ಮತ್ತು ಅದನ್ನು ಆಧರಿಸಿದ ಸಾರ್ವಜನಿಕ ನೀತಿನಿರೂಪಣೆಯಾದದ್ದನ್ನೂ ನಾವು ಕಾಣಬಹುದು.

ನಾಲ್ಕನೆಯ ಹಂತದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಎನ್.ಡಿ.ಎ. ಸರ್ಕಾರವು 2014ರಲ್ಲಿ ಹೊಸ ರಾಷ್ಟ್ರೀಯ ಶೈಕ್ಷಣಿಕ ನೀತಿಯನ್ನು ರೂಪಿಸುವುದಾಗಿ ಘೋಷಿಸಿತು. ಈ ಉದ್ದೇಶಕ್ಕಾಗಿ ಹೊಸದೊಂದು ಆಯೋಗವನ್ನು ರಚಿಸದೆ, ಮಾನವ ಸಂಪನ್ಮೂಲ ಸಚಿವಾಲಯದ ಮೂಲಕವೇ ಅಭಿಪ್ರಾಯ ಸಂಗ್ರಹಣೆಯ ಕಾರ್ಯವನ್ನು ಮಾಡಲಾಯಿತು. ಈ ಪ್ರಕ್ರಿಯೆಯು ನಡೆಯುತ್ತಿರುವಾಗಲೆ, ಮಾಜಿ ಕ್ಯಾಬಿನೆಟ್ ಸೆಕ್ರೆಟರಿ ಯಾದ ಟಿ.ಎಸ್.ಆರ್. ಸುಬ್ರಮಣಿಯಮ್ ಅವರ ನೇತೃತ್ವದಲ್ಲಿದ್ದ, ಮತ್ತು ಒಬ್ಬರನ್ನು ಹೊರತುಪಡಿಸಿ, ಕೇವಲ ಐ.ಎ.ಎಸ್. ಅಧಿಕಾರಿಗಳೆ ಸದಸ್ಯರಾಗಿದ್ದ ಸಮಿತಿಯೊಂದನ್ನು ನೇಮಿಸಲಾಯಿತು. 2106ರಲ್ಲಿ ಸಿದ್ಧಗೊಂಡ ಈ ಸಮಿತಿಯ ವರದಿಯನ್ನು ಸಾರ್ವಜನಿಕ ಚರ್ಚೆಗೆ ಇಡದಿದ್ದಾಗ, ಸುಬ್ರಮಣಿಯಮ್ ಅವರೆ ವರದಿಯನ್ನು ಬಹಿರಂಗ ಪಡಿಸುವುದಾಗಿ ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಸ್ಮೃತಿ ಇರಾನಿಯವರ ಮೇಲೆ ಒತ್ತಡ ಹೇರಿದರು. ವರದಿಯು ಬಹಿರಂಗವೂ ಆಯಿತು. ಈ ನಡುವೆ ಇಲಾಖೆಯ ಹೊಸ ಸಚಿವರಾಗಿ ಬಂದ ಪ್ರಕಾಶ್ ಜಾವಡೆಕರ್ ಅವರು ಸುಬ್ರಮಣಿಯನ್ ಸಮಿತಿಯ ವರದಿಯನ್ನು ಪೂರಕ ಸಾಮಗ್ರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಸಿದ್ಧಪಡಿಸಲು ಪ್ರಖ್ಯಾತ ವಿಜ್ಞಾನಿ ಪ್ರೊ. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಎಂಟು ಸದಸ್ಯರ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯಲ್ಲಿ ಭಾರತೀಯ ಮೂಲದ ಪ್ರತಿಭಾವಂತ ಗಣಿತಶಾಸ್ತ್ರಜ್ಞ ಮಂಜುಲ್ ಭಾರ್ಗವ್ ಅವರೂ ಇದ್ದರು ಎನ್ನುವುದು ಇಲ್ಲಿ ಗಮನಾರ್ಹ.

ಪ್ರವೇಶ ಅವಕಾಶ, ನ್ಯಾಯ, ಗುಣಮಟ್ಟ, ಕೈಗೆಟಕುವಿಕೆ ಮತ್ತು ಹೊಣೆಗಾರಿಕೆಗಳನ್ನು ಮೂಲ ಮೌಲ್ಯಗಳಾಗಿ ಪರಿಗಣಿಸಿದ್ದ ಕಸ್ತೂರಿ ರಂಗನ್ ಸಮಿತಿಯ ಮುಖ್ಯ ಶಿಫಾರಸ್ಸುಗಳೇನು? ಹಿಂದಿಯನ್ನು ಹೇರುವ ಕುರಿತಾಗಿ ಈ ಸಮಿತಿಯ ಶಿಫಾರಸ್ಸುಗಳು ವಿವಾದ ಉಂಟುಮಾಡಿದ್ದ ರಿಂದ ವೃತ್ತಪತ್ರಿಕೆಗಳಲ್ಲಿ ಚರ್ಚೆ ಪ್ರಾರಂಭವಾಯಿತು. ಆದರೆ ಸುಮಾರು 600 ಪುಟಗಳಿಗೂ ಹೆಚ್ಚಿರುವ ಈ ಸಮಿತಿಯ ವರದಿಯು ಭಾರತ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಈ ಬಗೆಯ ಅತ್ಯಂತ ದೊಡ್ಡ ವರದಿಗಳಲ್ಲಿ ಒಂದು. ಭಾರತೀಯ ನಾಗರಿಕತೆಯು ತನ್ನ ಗತವೈಭವವನ್ನು ಮತ್ತೆ ಗಳಿಸಲು ಶಿಕ್ಷಣ ಕ್ಶೇತ್ರವನ್ನು ಆದ್ಯತೆಯ ವಲಯವೆಂದೆ ಸಂಘ ಪರಿವಾರವು ನೋಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರವು ಯಾವ ಬಗೆಯ ಶಿಕ್ಷಣ ನೀತಿಯನ್ನು ರೂಪಿಸಲಿದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯು ಪ್ರಾಮುಖ್ಯತೆಯನ್ನು ಗಳಿಸಿದೆ.

ಎಲ್ಲ ಹಂತಗಳಲ್ಲಿಯೂ ಶಿಕ್ಷಣ ಕ್ಷೇತ್ರದ ಸುಧಾರಣೆಯನ್ನು ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಈ ವರದಿಯಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ, ಇಂದಿನ ಪರೀಕ್ಷಾ ವ್ಯವಸ್ಥೆ, ಶಿಕ್ಷಕರ ತರಬೇತಿ ಮತ್ತು ನಿಯಂತ್ರಕ ಸಂಸ್ಥೆಗಳ ಕಾರ್ಯವೈಖರಿಗಳಲ್ಲಿ ಸುಧಾರಣೆ ತರುವ ಆಶಯಗಳಿವೆ. ಇದಲ್ಲದೆ ಒಂದು ರಾಷ್ಟ್ರೀಯ ಶಿಕ್ಷಣ ಆಯೋಗವನ್ನು ಸ್ಥಾಪಿಸುವುದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಮೀಸಲಿಡುವುದು, ತಂತ್ರಜ್ಞಾನದ ಬಳಕೆ ಹಾಗೂ ವಯಸ್ಕ ಮತ್ತು ವೃತ್ತಿಪರ ಶಿಕ್ಷಣದತ್ತ ಗಮನ ಹರಿಸುವುದು ಸಹ ಈ ಕರಡು ವರದಿಯ ಉದ್ದೇಶವಾಗಿದೆ.

ಶಾಲಾ ಶಿಕ್ಷಣ: 

1. ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವುದು ಕಸ್ತೂರಿ ರಂಗನ್ ಸಮಿತಿ ವರದಿಯ ಪ್ರಮುಖ ಉದ್ದೇಶಗಳಲ್ಲೊಂದು. ಇದರಿಂದ ಎಂಟು ವರ್ಷದವರೆಗಿನ ಎಲ್ಲ ಮಕ್ಕಳಿಗೆ ದೊರಕಬೇಕಿರುವ ಗುಣಮಟ್ಟದ ಶಿಕ್ಷಣವನ್ನು ನೀಡಲು ಆದ್ಯತೆಯಿದೆ. ಇದಕ್ಕಾಗಿ ಅಂಗನವಾಡಿಗಳನ್ನು ಸುಧಾರಿಸಲು ಆಶಿಸಲಾಗಿದೆ.

2. ಈಗಿರುವ ಶಾಲಾ ವ್ಯವಸ್ಥೆಯನ್ನು ಬದಲಿಸಿ, 5-3-3-4 ವರ್ಷಗಳ ಅಧ್ಯಯನದ ಹೊಸ ವ್ಯವಸ್ಥೆಯನ್ನು ಕಸ್ತೂರಿ ರಂಗನ್ ಸಮಿತಿಯು ಸೂಚಿಸಿದೆ. ಮೊದಲ ಹಂತದಲ್ಲಿ ಮೂರು ವರ್ಷಗಳ ಅಂಗನವಾಡಿ ಹಾಗೂ ಒಂದು ಮತ್ತು ಎರಡನೆಯ ತರಗತಿಗಳಿವೆ. ಎರಡು ಮತ್ತು ಮೂರನೆಯ ಹಂತಗಳಲ್ಲಿ ತಲಾ ಮೂರು ವರ್ಷಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವ್ಯವಸ್ಥೆಯಿದ್ದರೆ, ನಾಲ್ಕನೆಯ ಹಂತದಲ್ಲಿ ನಾಲ್ಕು ವರ್ಷಗಳ ಒಂಬತ್ತರಿಂದ ಹನ್ನೆರಡರವರೆಗಿನ ಪ್ರೌಢಶಾಲಾ ಶಿಕ್ಷಣವಿದೆ. ದತ್ತಾಂಶಗಳನ್ನು ಉರು ಹೊಡೆದು ಕಲಿಯುವುದರ ಬದಲು ವಿಶ್ಲೇಷಣಾತ್ಮಕವಾದ ಮತ್ತು ಚರ್ಚೆಗಳ ಆಧರಿಸಿದ ಕಲಿಕೆಯನ್ನು ಪರಿಚಯಿಸುವ ಆದ್ಯತೆಯಿದೆ.

3. ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ತರಲೆಂದು ಈಗಿರುವಂತೆ ಎಲ್ಲರನ್ನೂ ತೇರ್ಗಡೆ ಮಾಡುವ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಸೂಚಿಸಲಾಗಿದೆ. ಇದರಂತೆ ಮೂರು, ಐದು ಮತ್ತು ಎಂಟನೆಯ ತರಗತಿಗಳಲ್ಲಿ ರಾಜ್ಯ ಪರೀಕ್ಷೆಗಳಿರುತ್ತವೆ.

4. ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು, ಶಿಕ್ಷಕರ ಸಮರ್ಪಕ ನಿಯೋಜನೆ ಹಾಗೂ ಅವರನ್ನು ಶೈಕ್ಷಣಿಕೇತ್ತರ ಉದ್ದೇಶಗಳಿಗೆ ಬಳಸದಿರುವುದು ಇತ್ಯಾದಿ ಅಂಶಗಳನ್ನು ಕಸ್ತೂರಿ ರಂಗನ್ ಸಮಿತಿಯ ವರದಿಯು ಒತ್ತಿ ಹೇಳುತ್ತದೆ. ಶಿಕ್ಷಕರ ತರಬೇತಿಯನ್ನು ಸುಧಾರಿಸಲು ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಬಿ.ಎಡ್. ಕಾರ್ಯಕ್ರಮವನ್ನು ಸ್ಥಾಪಿಸುವಂತೆ ವರದಿಯು ಸೂಚಿಸುತ್ತದೆ.

ಉನ್ನತ ಶಿಕ್ಷಣ: 

1. ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಶಿಕ್ಷಣಕ್ಕೆ ಪ್ರವೇಶ ಅವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಉದ್ದೇಶದಿಂದ 2035ರ ಹೊತ್ತಿಗೆ ಒಟ್ಟು ದಾಖಲಾತಿ ಪ್ರಮಾಣವನ್ನು ಈಗಿನ ಶೇ 25.8ರಿಂದ ಶೇ 50ಕ್ಕೆ ಹೆಚ್ಚಿಸಬೇಕೆಂದು ಕಸ್ತೂರಿ ರಂಗನ್ ಸಮಿತಿ ವರದಿಯು ಶಿಫಾರಸ್ಸು ಮಾಡಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದ ನಿಯಂತ್ರಕ ಸಂಸ್ಥೆಗಳಲ್ಲಿ ಮುಖ್ಯ ಬದಲಾವಣೆಗಳನ್ನು ಸೂಚಿಸುತ್ತಿದೆ.

2. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವುದಕ್ಕೆ ಸೀಮಿತವಾಗುವಂತೆ ಮತ್ತು ಅದರ ಬದಲಿಗೆ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಕ ಪ್ರಾಧಿಕಾರವನ್ನು ಸ್ಥಾಪಿಸುವಂತೆ ಸಲಹೆ ನೀಡಿದೆ. ಪಾರ್ಲಿಮೆಂಟ್ ಇಲ್ಲವೆ ರಾಜ್ಯ ಶಾಸನಸಭೆಗಳ ಕಾಯಿದೆಗಳ ಬದಲಿಗೆ ಈ ಪ್ರಾಧಿಕಾರದ ಮೂಲಕವೆ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

3. ನ್ಯಾಕ್ ಸ್ವಾಯತ್ತ ಸಂಸ್ಥೆಯಾಗಲಿದೆ.

4. ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪಿಸುವಂತೆ ಸಹ ಈ ವರದಿಯು ಶಿಫಾರಸ್ಸು ಮಾಡಿದೆ. ವಿಜ್ಞಾನ, ತಂತ್ರಜ್ಞಾನ, ಸಮಾಜ ವಿಜ್ಞಾನ ಮತ್ತು ಕಲೆಗಳು – ಹೀಗೆ ಎಲ್ಲ ವಿಷಯಗಳ ಸಂಶೋಧನೆಯನ್ನು ನಡೆಸಲು ಅನುವು ಮಾಡಿಕೊಡುವ ಈ ಸಂಸ್ಥೆಗೆ ರೂ 20,000 ಕೋಟಿಗಳನ್ನು ನೀಡಲು ಕೇಳಲಾಗಿದೆ. ಇದು ದೊಡ್ಡ ಮೊತ್ತವೆನಿಸಿದರೂ ಭಾರತದ ಜಿ.ಡಿ.ಪಿ.ಯ ಶೇ 0.1% ಮಾತ್ರವೆನ್ನುವುದನ್ನು ಮರೆಯಬಾರದು.

5. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ: ಸಂಶೋಧನಾ ವಿಶ್ವವಿದ್ಯಾನಿಲಯಗಳು (ಸಂಶೋಧನೆ ಮತ್ತು ಬೋಧನೆಗಳೆರಡನ್ನೂ ನಡೆಸಲಿವೆ), ಬೋಧನಾ ವಿಶ್ವವಿದ್ಯಾನಿಲಯಗಳು (ಬೋಧನೆಗೆ ಪ್ರಾಥಮಿಕ ಆದ್ಯತೆ ನೀಡಲಿವೆ) ಮತ್ತು ಕಾಲೇಜುಗಳು (ಸ್ನಾತಕ ಕಾರ್ಯಕ್ರಮಗಳನ್ನು ಮಾತ್ರ ನಡೆಸುವ ಬೋಧನಾ ಸಂಸ್ಥೆಗಳು).

6. ಬಹಳ ಮುಖ್ಯವಾಗಿ ವಿಶ್ವವಿದ್ಯಾನಿಲಯಗಳು ಲಿಬರಲ್ ಆರ್ಟ್ಸ್ ದೃಷ್ಟಿಕೋನವನ್ನು ತಮ್ಮ ಶೈಕ್ಷಣಿಕ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಸ್ತೂರಿ ರಂಗನ್ ವರದಿ ಒತ್ತಿ ಹೇಳುತ್ತದೆ. ಬಹಳ ಮುಖ್ಯ ಅಂಶವಾದ ಈ ಶಿಫಾರಸ್ಸಿನ ಆಶಯವೇನೆಂದರೆ ವಿಜ್ಞಾನ, ತಂತ್ರಜ್ಞಾನ ಹೀಗೆ ಜ್ಞಾನಧಾರೆಗಳನ್ನು ಬೇರೆಬೇರೆಯಾಗಿ ಅಭ್ಯಸಿಸುವ ಬದಲು ಎಲ್ಲ ವಿಷಯಗಳನ್ನು ಸಾಧ್ಯವಾದಷ್ಟು ಒಟ್ಟಿಗೆ ಓದುವ ವ್ಯವಸ್ಥೆಯಿರಬೇಕು ಎನ್ನುವುದು. ಅಧ್ಯಾಪಕರ ವೃತ್ತಿಪರ ಬೆಳವಣಿಗೆಯ ಬಗ್ಗೆ ಸಹ ಮುಖ್ಯವಾದ ಶಿಫಾರಸ್ಸುಗಳನ್ನು ಮಾಡುವ ಈ ವರದಿಯು 2030ರ ಹೊತ್ತಿಗೆ ಟೆನ್ಯೂರ್ ಟ್ರ್ಯಾಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸುತ್ತದೆ.

Leave a Reply

Your email address will not be published.