ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು?

-ಪೃಥ್ವಿದತ್ತ ಚಂದ್ರಶೋಭಿ

ಈ ಬಾರಿಯ ಮುಖ್ಯ ಚರ್ಚೆಯ ವಿಷಯ ಪ್ರವೇಶಕ್ಕೆ ಮೂರು ಟಿಪ್ಪಣಿಗಳನ್ನು ದಾಖಲಿಸುತ್ತಿದ್ದೇವೆ.

ಇವು ಹೆಚ್ಚು ಪ್ರಖರವಾದ ಚರ್ಚೆಗೆ ಅನುವು ಮಾಡಿಕೊಡಲಿ ಎನ್ನುವುದು ಸಮಾಜಮುಖಿ ಆಶಯ.

1

ಮೊದಲಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗ ಸಂಸ್ಥೆಗಳ ಬಗ್ಗೆ ಇಂದು ಚರ್ಚೆ ಮಾಡಬೇಕಾಗಿರುವ ವಿಶಿಷ್ಟ ಸಂದರ್ಭವನ್ನು ನಾವು ಗುರುತಿಸಬೇಕಿದೆ.

ಮೇಲ್ನೋಟಕ್ಕೆ ಸಂಘ ಪರಿವಾರದ ರಾಜಕೀಯ ಮುಖವಾದ ಭಾರತೀಯ ಜನತಾ ಪಕ್ಷವು ಭಾರತೀಯ ರಾಜಕಾರಣದ ಕೇಂದ್ರದಲ್ಲಿ ಇರುವುದು ಎಲ್ಲರಿಗೂ ಎದ್ದು ಕಾಣುವ ವಿಷಯ. ರಾಮಜನ್ಮಭೂಮಿ ವಿವಾದವು ತೀವ್ರತೆಯನ್ನು ಪಡೆದುಕೊಂಡಿದ್ದ 1990ರ ದಶಕದ ಆರಂಭದಲ್ಲಿ ಕೂಡ ಇಂತಹ ರಾಜಕೀಯ ಯಶಸ್ಸು ಬಿಜೆಪಿಗೆ ಆ ದಶಕದ ಕಡೆಯೊಳಗೆ ದೊರಕುತ್ತದೆ ಎನ್ನುವ ಆಶಯ ಇರಲಿಲ್ಲವೇನೊ. ಆದರೆ 1998ರಿಂದ 2004ರವರಗೆ ವಾಜಪೇಯಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರ ಗಳಿಸಿತು ಮಾತ್ರವಲ್ಲ ಉತ್ತರ ಮತ್ತು ಪಶ್ಚಿಮ ಭಾರತಗಳಲ್ಲಿ ರಾಜ್ಯಸರ್ಕಾರಗಳನ್ನು ರಚಿಸುವ ಮತ್ತು ಆ ರಾಜ್ಯಗಳ ರಾಜಕಾರಣವನ್ನು ನಿಯಂತ್ರಿಸುವ ಸಾಮಥ್ರ್ಯವನ್ನು ಸಹ ಪಡೆದುಕೊಂಡಿತು. ನಂತರದ ದಶಕದಲ್ಲಿ ಎರಡು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಬಿಜೆಪಿಯ ರಾಜಕೀಯ ಬೆಳವಣಿಗೆಯನ್ನು ತಡೆಯಲು ಆಗಲಿಲ್ಲ.

2015ರ ವೇಳೆಗೆ ಬಿಜೆಪಿ ಉತ್ತರ ಭಾರತವನ್ನು ಮತ್ತು ಕೇರಳವನ್ನು ಹೊರತುಪಡಿಸಿ ಭಾರತದ ಪಶ್ಚಿಮಭಾಗದ ಬಹುಮುಖ್ಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. ಪೂರ್ವತೀರದಲ್ಲಿ ಪಶ್ಚಿಮಬಂಗಾಳದಿಂದ ತಮಿಳುನಾಡಿನವರೆಗಿನ (ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಸೇರಿದಂತೆ) ಐದು ರಾಜ್ಯಗಳು ಮಾತ್ರ ಬಿಜೆಪಿಯ ಪ್ರಾಬಲ್ಯದಿಂದ ಹೊರತಾಗಿರುವ ರಾಜ್ಯಗಳು. ಭಾರತದ ಮಿಕ್ಕೆಲ್ಲ ರಾಜ್ಯಗಳಲ್ಲಿ, ಬಿಜೆಪಿ ಅಧಿಕಾರದಲ್ಲಿರಲಿ ಅಥವಾ ಇಲ್ಲದೆ ಇರಲಿ, ಆ ರಾಜ್ಯಗಳ ರಾಜಕೀಯ ಕಾರ್ಯಸೂಚಿಯನ್ನು ನಿರ್ಧರಿಸುವ ಸ್ಥಾನದಲ್ಲಿದೆ.

ಅಂದರೆ 1960ರಿಂದ 80ರ ದಶಕದ ತನಕ ಕಾಂಗ್ರೆಸ್ಸಿಗಿದ್ದ ರಾಜಕೀಯ ನಿಯಂತ್ರಣವನ್ನು ಬಿಜೆಪಿ ಇಂದು ಸಾಧಿಸಿದೆ. ಈ ಸಾಧನೆಯ ಶ್ರೇಯಸ್ಸು ಕೇವಲ ಬಿಜೆಪಿಯ ಪಕ್ಷದ ಸಂಘಟನೆಗೆ ಮಾತ್ರ ದೊರಕುವುದಿಲ್ಲ. ಬದಲಿಗೆ ಸಂಘ ಪರಿವಾರದ ಎಲ್ಲ ಅಂಗ ಸಂಸ್ಥೆಗಳೂ ಜೊತೆಗೂಡಿ ಮಾಡಿರುವ ಕೆಲಸವಿದು. 1990ರ ದಶಕಕ್ಕೆ ಮೊದಲು ಕಾಂಗ್ರೆಸ್ ವಿರೋಧವೆನ್ನುವುದು ಭಾರತೀಯ ರಾಜಕಾರಣದ ಕೇಂದ್ರ ಪ್ರಕ್ರಿಯೆಯಾಗಿದ್ದಂತೆ ಈಗ ಸಂಘ ಪರಿವಾರ ಮತ್ತು ಬಿಜೆಪಿ ವಿರೋಧ ಮಾಡುವುದು ಭಾರತದ ರಾಜಕೀಯ ಧ್ರುವೀಕರಣ ಪ್ರಕ್ರಿಯೆಯ ಹೊಸ ನಡೆಯಾಗಿದೆ.

ಬಿಜೆಪಿಯ ರಾಜಕೀಯ ಪ್ರಾಬಲ್ಯ ಮತ್ತು ನಿಯಂತ್ರಣಗಳು ಕೇವಲ ಚುನಾವಣಾ ರಾಜಕಾರಣದ ಯಶಸ್ಸು ಮಾತ್ರವಲ್ಲ. ಇದು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಬೌದ್ಧಿಕ ವಲಯಗಳಲ್ಲೂ ಪ್ರತಿಫಲಿಸುತ್ತಿರುವ ವಾಸ್ತವ. ಇಂದು ಭಾರತವನ್ನು ಕಲ್ಪಿಸಿಕೊಳ್ಳಬೇಕೆಂದರೆ ಸಂಘ ಪರಿವಾರವು ಮುಂದಿಡುತ್ತಿರುವ ಪರಿಕಲ್ಪನೆಗಳು, ಚೌಕಟ್ಟುಗಳು ಮತ್ತು ವ್ಯಾಖ್ಯೆಗಳನ್ನು ಬಳಸದೆ ಮಾಡಲು ಸಾಧ್ಯವಿಲ್ಲ ಎನ್ನುವ ನಿಟ್ಟಿನಲ್ಲಿ ಕ್ಷಿಪ್ರವಾಗಿ ಚಲಿಸುತ್ತಿದ್ದೇವೆ. ಇದು ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯಗಳೆಲ್ಲವುಗಳ ಸಂದರ್ಭದಲ್ಲಿ ಅನ್ವಯವಾಗುವ ಮಾತು.  

ಸಂಘ ಪರಿವಾರವು ಕಟ್ಟಿಕೊಟ್ಟಿರುವ ರಾಷ್ಟ್ರೀಯತೆಯ ಹೊಸ ವ್ಯಾಖ್ಯೆಯೇನು ಮತ್ತು ಅದರ ಸೃಷ್ಟಿ ಹೇಗೆ ಆಗಿದೆ ಎನ್ನುವುದು ವಿಸ್ತೃತವಾಗಿ ಚರ್ಚಿಸಬೇಕಾಗಿರುವ ವಿಷಯ. ಈ ಲೇಖನದಲ್ಲಿ ಆ ಚರ್ಚೆಯನ್ನು ಒಂದು ಸೀಮಿತ ನೆಲೆಯಲ್ಲಿ ಮಾತ್ರ ಮಾಡುವ ಪ್ರಯತ್ನವಿದೆ. ಭಾರತವನ್ನು ಹಿಂದೂಗಳ ರಾಷ್ಟ್ರವೆನ್ನುವ ನೆಲೆಯಲ್ಲಿ ಕಲ್ಪಿಸಿಕೊಳ್ಳುವ ಪ್ರಯತ್ನವು ಯಾರಿಗೂ ಹೊಸದಲ್ಲ. ಈ ಪ್ರಯತ್ನಕ್ಕೆ 19ನೆಯ ಶತಮಾನದ ಎರಡನೆಯ ಭಾಗದಿಂದ ಹಿಂದೂ ಸುಧಾರಣಾವಾದಿಗಳಾದ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರಂತಹವರಿಂದಲೆ ಸ್ಫೂರ್ತಿ ದೊರಕಿದೆಯೆನ್ನುವುದು ಸತ್ಯವಾದರೂ, ಹಿಂದೂ ರಾಷ್ಟ್ರೀಯತೆಯ ವ್ಯವಸ್ಥಿತವಾದ ರೂಪುಗೊಳ್ಳುವಿಕೆ 1920ರ ದಶಕದಿಂದ ನಡೆಯಿತು. ಇದರಲ್ಲಿ ಲಾಲಾ ಲಜಪತರಾಯ್, ಮದನಮೋಹನ ಮಾಳವೀಯ, ಮೂಂಜೆ, ಸ್ವಾಮಿ ಶ್ರದ್ಧಾನಂದ ಮೊದಲಾದವರೂ ಭಾಗವಹಿಸಿದರು. ಆದರೆ ಈ ಪ್ರಯತ್ನಕ್ಕೆ ಸಾಂಘಿಕವಾದ ತಳಪಾಯ ದೊರಕಿದ್ದು 1925ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದಲೆ.

ಸಂಘದ ಮೊದಲ ಇಬ್ಬರು ಸರಸಂಘಚಾಲಕರಾದ ಡಾ.ಹೆಡ್ಗೆವಾರ್ ಮತ್ತು ಎಮ್.ಎಸ್.ಗೋಲ್ವಾಲ್ಕರ್ ಹಿಂದೂ ರಾಷ್ಟ್ರೀಯತೆಯ ವ್ಯಾಖ್ಯೆಗಳನ್ನು ನೀಡಿದರು ಮಾತ್ರವಲ್ಲ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವ ಸಾರ್ವಜನಿಕ ನೈತಿಕತೆಯ ನೆಲೆಗಳನ್ನು ಕೂಡ ಒದಗಿಸಿದರು. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಾಮಾಜಿಕ ಕೆಲಸಗಳಿಗೆ ಬದುಕನ್ನು ವಿನಿಯೋಗಿಸುವುದು ವಿಶಿಷ್ಟವಾದುದೇನು ಆಗಿರಲಿಲ್ಲ. ಆದರೆ ಕಾಂಗ್ರೆಸ್ ಸೇರಿದಂತೆ ಬಹುತೇಕ ಇತರೆ ಸಂಸ್ಥೆ-ಸಂಘಟನೆಗಳು ಸ್ವಯಂಸೇವಕರಾಗಿ ದೇಶದ ಒಳಿತಿಗಾಗಿ ದುಡಿಯುವ ಕಾರ್ಯಕರ್ತರನ್ನು ಹುಟ್ಟುಹಾಕುವ ಸಾಮಥ್ರ್ಯವನ್ನು ಕ್ರಮೇಣ ಕಳೆದುಕೊಂಡಂತೆ, ಈ ಅಂಶವು ಇತ್ತೀಚಿನ ದಶಕಗಳಲ್ಲಿ ಸಂಘ ಪರಿವಾರದ ಬಹುದೊಡ್ಡ ಶಕ್ತಿಯಾಗಿ ಸಹ ಪರಿಣಮಿಸಿದೆ. ಎಡಪಕ್ಷದ ಸಂಘಟನೆಗಳಲ್ಲಿ ಇನ್ನೂ ಈ ಆಯಾಮ ಸ್ವಲ್ಪ ಮಟ್ಟಿಗೆ ಜೀವಂತವಾಗಿದೆ ಎನ್ನುವುದು ನಿಜ. ಆದರೆ ಕಾರ್ಮಿಕ ಸಂಘಟನೆಗಳು ಮತ್ತು ಎಡ ಪಕ್ಷಗಳು ತಮ್ಮ ಪ್ರಭಾವವನ್ನು ಸ್ವಲ್ಪ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ನೈತಿಕತೆಯ ಹೊಸ ಸಿದ್ಧಾಂತಗಳನ್ನು ಮುಂದಿಡುವ ಅವುಗಳ ಶಕ್ತಿಯಲ್ಲಿಯೂ ಕುಸಿತ ಕಂಡಿದೆ.

ಮುಂದುವರೆಯುವ ಮುನ್ನ ಒಂದು ಸಣ್ಣ ಟಿಪ್ಪಣಿ. ಹಿಂಸೆ, ಅಸಹನೆ, ಆತಂಕಗಳನ್ನು ಸಾಧನವನ್ನಾಗಿ ಮತ್ತೆಮತ್ತೆ ಬಳಸುತ್ತಿರುವ ಸಂಘ ಪರಿವಾರವು ಸಾರ್ವಜನಿಕ ನೈತಿಕತೆಯ ಯಾವ ದರ್ಶನಗಳನ್ನು ಮುಂದಿಡುತ್ತಿದೆ ಎಂದು ಅದರ ಟೀಕಾಕಾರರು ಪ್ರಶ್ನಿಸಬಹುದು. ಈ ಪ್ರಶ್ನೆ ಅಸಮಂಜಸ ಮತ್ತು ಅಪ್ರಸ್ತುತವೇನಲ್ಲ. ನನ್ನ ಸೀಮಿತ ಅಂಶವೆಂದರೆ ಸಂಘ ಪರಿವಾರದ ಕಾರ್ಯಚಟುವಟಿಕೆಗಳಲ್ಲಿ ಇಂದಿಗೂ ತಮ್ಮ ನಂಬಿಕೆಯ ವಿಶಾಲ ಸಿದ್ಢಾಂತವೊಂದಕ್ಕೆ ಜೀವನವನ್ನು ಮುಡಿಪಾಗಿಡುವ ಕಾರ್ಯಕರ್ತರು ದೊರಕುತ್ತಾರೆ. ಇದು ಇತರೆ ಸಂಘಟನೆ ಮತ್ತು ರಾಜಕೀಯ ಪಕ್ಷಗಳಿಗೆ ಆ ಪ್ರಮಾಣದಲ್ಲಿ ದೊರಕುವುದಿಲ್ಲ ಎನ್ನುವ ವಾಸ್ತವನ್ನು ಓದುಗರ ಗಮನಕ್ಕೆ ತರುವುದು. ಹೀಗೆ ಹೇಳುವಾಗ ಸಂಘ ಪರಿವಾರವೂ ಸಹ ಭ್ರಷ್ಟಾಚಾರದ ಆರೋಪಗಳಿಗೆ ಹೊರತಾಗಿಲ್ಲ ಎನ್ನುವುದನ್ನು ಗುರುತಿಸಲೇಬೇಕು.

2

ಎರಡನೆಯ ಟಿಪ್ಪಣಿಯು ಸಂಘ ಪರಿವಾರವನ್ನು (ಅದರಲ್ಲಿಯೂ ಅದರ ಉದ್ದೇಶ ಮತ್ತು ಗುರಿಗಳಿಗೆ ಸಂಬಂಧಿಸಿದಂತೆ) ಹೇಗೆ ಗ್ರಹಿಸಲಾಗುತ್ತಿದೆ ಮತ್ತು ಹೇಗೆ ಗ್ರಹಿಸಬಹುದು ಎನ್ನುವ ಅಂಶವನ್ನು ಕುರಿತಾದುದು.

ಸಾಮಾನ್ಯವಾಗಿ ಆ ರ್.ಎಸ್.ಎಸ್. ನ ಟೀಕಾಕಾರರು ಸಂಘಪರಿವಾರವು ಆಧುನಿಕ ಭಾರತದ ಆತ್ಮವನ್ನೆ ಬದಲಿಸುವ ಪ್ರಯತ್ನವನ್ನು ಮಾಡುತ್ತಿದೆ ಎನ್ನುವ ವಾದವನ್ನು ಮುಂದಿಡುತ್ತಾರೆ. ಹಿರಿಯ ವಕೀಲ ಮತ್ತು ಅಂಕಣಕಾರ ಎ.ಜಿ.ನೂರಾನಿ ಆರ್.ಎಸ್.ಎಸ್. ಅನ್ನು ಒಂದು ಭಯಾನಕ ವಿಪತ್ತು ಎಂದೆ ಬಣ್ಣಿಸುತ್ತಾರೆ. ಎಡಪಂಥೀಯ, ಸೆಕ್ಯುಲರ್ ನೆಲೆಯ ಭಾರತೀಯ ರಾಷ್ಟ್ರೀಯತೆಯನ್ನು ಕಳಚಿಹಾಕುವುದೆ ಸಂಘದ ಉದ್ದೇಶವೆಂದು ಅವರು ವಾದಿಸುತ್ತಾರೆ. ನೂರಾನಿ ಮತ್ತು ಇತಿಹಾಸಕಾರರಾದ ರೊಮಿಲಾ ಥಾಪರ್ ಮೊದಲಾದವರು ಭಾರತೀಯ ರಾಷ್ಟ್ರೀಯತೆಯು ಹೊರಗಿನಿಂದ ಬಂದುದೇನಲ್ಲ, ಭಾರತದ ಬಹುಸಂಸ್ಕೃತಿಯ ನೆಲೆಯಿಂದಲೆ ಸೃಷ್ಟಿಯಾದುದು ಎನ್ನುತ್ತಾರೆ. ನಮ್ಮ ಕಾಲದ ಆಶಯಗಳನ್ನು ಹಿಡಿದಿಡುವ ಭಾರತದ ಸಂವಿಧಾನವನ್ನು ಸಂಘ ಪರಿವಾರವು ಅಪ್ರಸ್ತುತಗೊಳಿಸುತ್ತಿದೆ ಎಂದು ಅವರು ಹೇಳುತ್ತಾರೆ.

ಈ ವಿಮರ್ಶೆಯನ್ನು ಸಂಘ ಪರಿವಾರವು ಒಪ್ಪುವುದಿಲ್ಲ ಎಂದೇನಲ್ಲ. ಗೋಲ್ವಾಲ್ಕರರಿಂದ ಇಂದಿನ ತನಕದ ಆರ್.ಎಸ್.ಎಸ್.ನ ಪ್ರಮುಖ ಚಿಂತಕರು ಭಾರತದ ಆತ್ಮವನ್ನು ಆವರಿಸಿರುವ ಹೊರಗಿನ ಚಿಂತನೆಗಳಿಂದ ಮುಕ್ತಗೊಳಿಸಬೇಕೆಂದೆ ವಾದಿಸುತ್ತಾರೆ. ಈ ವಾದವು ಭಾರತವನ್ನು ಹಿಂದುತ್ವ ಮತ್ತು ಹಿಂದೂ ಧರ್ಮಗಳಲ್ಲಿ ನಂಬಿಕೆಯಿರುವವರಿಗೆ ಮೀಸಲಿಡಬೇಕು, ಆ ಮೂಲಕ ಭಾರತದಾಚೆಗೆ ತಮ್ಮ ಪವಿತ್ರ ಸ್ಥಳಗಳನ್ನು ಹೊಂದಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಗೆ ಸೇರಿದವರು ನಂಬಿಕೆಗೆ ಅರ್ಹರಲ್ಲ ಎನ್ನುವ ಮಾತಿಗಷ್ಟೆ ಸೀಮಿತವಾಗಿಲ್ಲ. ಅದರ ಜೊತೆಗೆ ಸಮಾನತೆ ಮತ್ತು ಸ್ವಾತಂತ್ರ್ಯಗಳಂತಹ ಮೌಲ್ಯಗಳಿಗೆ ಪುಷ್ಟಿ ಕೊಡುವ ವಿಚಾರಧಾರೆಗಳು (ಅದರಲ್ಲಿಯೂ ಮುಖ್ಯವಾಗಿ ಸಮಾಜವಾದ ಮತ್ತು ಕಮ್ಯುನಿಸಂ) ಸಹ ಅಪಾಯಕಾರಿ ಎನ್ನುವ ವಾದವೂ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಭಾರತದ ಹೊಸ ಕಲ್ಪನೆಗೆ ಹೊಸದಾದ ಮತ್ತು ಹೆಚ್ಚು ಅಧಿಕೃತವಾದ ನೆಲೆಯನ್ನು ಕಟ್ಟಿಕೊಡುತ್ತೇವೆ ಎಂದು ಸಂಘ ಪರಿವಾರದ ವಕ್ತಾರರು ಹೇಳುತ್ತಾರೆ. ಇಂತಹ ಹೊಸ ಚಿಂತನೆ ಭಾರತೀಯ ಸಂಸ್ಕೃತಿ ಮತ್ತು ವೈಚಾರಿಕ ಪರಂಪರೆಯೊಳಗಿನಿಂದಲೆ ಬರುತ್ತದೆ ಎನ್ನುವ ಮಾತು ಪ್ರಶ್ನಾರ್ಹ ಎನ್ನುವುದೂ ಸಹ ನಿಜವೆ. ಈ ಅಂಶವನ್ನು ಮುಂದೆ ಚರ್ಚಿಸುತ್ತೇನೆ. 

ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೆಲವು ಬಿಜೆಪಿ ನಾಯಕರು ಇಂತಹ ವಾದಗಳ ಸೌಮ್ಯರೂಪವನ್ನು ಮುಂದಿಡುತ್ತಾರೆ. ಯೋಗಿ ಆದಿತ್ಯನಾಥ, ಸಾಧ್ವಿ ಪ್ರಜ್ಞಾ ಮತ್ತು ಅನಂತಕುಮಾರ ಹೆಗಡೆಯಂತಹವರಿಗೆ ಅಂತಹ ಮುಲಾಜುಗಳು ಇರುವಂತೆ ಗೋಚರಿಸುವುದಿಲ್ಲ. ಆದರೆ ಮೂಲಭೂತವಾಗಿ ಭಾರತದ ಆತ್ಮವನ್ನು ಬದಲಿಸಬೇಕು ಎನ್ನುವ ಸಂಘ ಪರಿವಾರದ ಗುರಿಯ ಮಟ್ಟಿಗೆ ಅದರ ಮತ್ತು ಅದರ ಟೀಕಾಕಾರರ ನಡುವೆ ಭಿನ್ನಾಭಿಪ್ರಾಯವೇನೂ ಇಲ್ಲ. ಇಂತಹ ಬದಲಾವಣೆಗಳ ಮೂಲಕ ಭಾರತದ ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿಯಾಗಬಹುದು ಎನ್ನುವ ಅಂಶವನ್ನು ಸಹ ಸಂಘ ಪರಿವಾರ ಮತ್ತು ಅದರ ಟೀಕಾಕಾರರು ಇಬ್ಬರೂ ಒಪ್ಪುತ್ತಾರೆ.

ಮುಂದುವರೆಯುವ ಮುನ್ನ ಮತ್ತೊಂದು ಸಣ್ಣ ಟಿಪ್ಪಣಿ. ಸಂಘ ಪರಿವಾರವು ಪ್ರತಿಪಾದಿಸುತ್ತಿರುವ ರೀತಿಯ ಬದಲಾವಣೆಗಳಿಗೆ ಮತ್ತು ಅದು ಬಳಸಲು ಬಯಸುವ ವಿಧಾನಗಳನ್ನು ಬೆಂಬಲಿಸುವವರು ಭಾರತೀಯ ಸಮಾಜದಲ್ಲಿ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇದಕ್ಕೆ ಒಂದೆರಡು ಸಣ್ಣ ಉದಾಹರಣೆಗಳನ್ನು ಕೊಡಬಹುದು. ಗೋಡ್ಸೆಯ ಬಗ್ಗೆ ಸಹಾನುಭೂತಿಯಿರುವವರು ನಮ್ಮ ಸಮಾಜದಲ್ಲಿ ಇದ್ದಾರೆ. ನೆಹರೂ ಬದಲು ಪಟೇಲ್ ಅಥವಾ ಸುಭಾಷ್ ಭಾರತದ ಪ್ರಧಾನಿಯಾಗಿದ್ದರೆ, ಭಾರತವು ಸ್ವರ್ಗವಾಗಿಬಿಡುತ್ತಿತ್ತು ಎಂದು ನಂಬಿರುವವರೂ ಇದ್ದಾರೆ. ಸಂಘ ಪರಿವಾರವು ಸಮಾಜದೊಳಗಿರುವ ಇಂತಹ ಸುಪ್ತಭಾವನೆಗಳಿಗೆ ದನಿಯಾಗುತ್ತಿದೆಯೊ ಅಥವಾ ಅಂತಹ ಸುಪ್ತಭಾವನೆಗಳನ್ನು ರೂಪಿಸುತ್ತಿದೆಯೊ ಎನ್ನುವುದು ಮತ್ತಷ್ಟು ಅಧ್ಯಯನ ಮತ್ತು ಚರ್ಚೆಗಳನ್ನು ಬಯಸುವ ವಿಷಯ. ಇಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಕಾರಣವಿಷ್ಟೆ: ಕಾಂಗ್ರೆಸ್ಸಿನ ನಾಯಕರು ಸಂಘ ಪರಿವಾರವನ್ನು ¥sóÁ್ಯಷಿಸ್ಟ್ ಸಂಘಟನೆಯೆಂದು ಮುದ್ರೆ ಹಾಕುವುದರಿಂದ ಅದನ್ನು ಎದುರಿಸಲು ಸಾಧ್ಯವಿಲ್ಲ. 

3

ಭಾರತವನ್ನು ಬದಲಿಸಬೇಕು ಎನ್ನುವ ಸಂಘ ಪರಿವಾರದ ಉದ್ದೇಶ ಮತ್ತು ಭಾರತವು ಬದಲಾಗುತ್ತಿದೆ ಎನ್ನುವ ವಾಸ್ತವಗಳೆರಡೂ ನಿಜವೆ.

ಭಾರತದ ಸಾರ್ವಜನಿಕ ಜೀವನದ ಅತ್ಯಂತ ಪ್ರಭಾವಶಾಲಿ ಸಂಘಟನೆಯಾಗಿ ಹೊರಹೊಮ್ಮಿದ ಸಂದರ್ಭ ಮತ್ತು ತದನಂತರದಲ್ಲಿ ಸಂಘ ಪರಿವಾರದ ಆದರ್ಶಗಳಲ್ಲಿ ಏನಾದರೂ ಬದಲಾವಣೆಗಳಾಗಿವೆಯೆ? ಅಧಿಕಾರ ಮತ್ತು ಪ್ರಭಾವಗಳನ್ನು ಗಳಿಸಲು ಇಲ್ಲಿ ಬಳಸಾಗುತ್ತಿರುವ ದಾರಿಗಳಾದರೂ ಯಾವುವು? ಮುಖ್ಯವಾಗಿ ತನ್ನ ಘೋಷಿತ ಆದರ್ಶಗಳನ್ನು, ಅದರಲ್ಲಿಯೂ ಭಾರತೀಯ ವಿಚಾರಧಾರೆಯಿಂದಲೆ ಹೊಸಭಾರತದ ದರ್ಶನವನ್ನು ಮುಂದಿಡುವ ಗುರಿಯನ್ನು, ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಸಂಘ ಪರಿವಾರಕ್ಕೆ ಯಶಸ್ಸು ದೊರೆತಿದೆಯೆ? ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ, ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ, ಭ್ರಷ್ಟಾಚಾರ ನಿವಾರಣೆ, ಭಾರತೀಯ ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಪರಿಹರಿಸುವುದು ಮೊದಲಾದ ನಮ್ಮ ಕಾಲದ ಅತ್ಯಂತ ದೊಡ್ಡ ಸವಾಲುಗಳಿಗೆ ಗಮನಾರ್ಹವಾದ ಉತ್ತರಗಳನ್ನು ಏನಾದರೂ ಸಂಘ ಪರಿವಾರವಾಗಲಿ, ಅದರ ವಕ್ತಾರರಾಗಲಿ ಕೊಡುತ್ತಿದ್ದಾರೆಯೆ?

ಈ ಪ್ರಶ್ನೆಗಳನ್ನು ಚರ್ಚಿಸುವ ಸಂದರ್ಭದಲ್ಲಿ ಎರಡು ಮುಖ್ಯ ವೈಫಲ್ಯಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ. ತನ್ನ ನೂರು ವರ್ಷಗಳ ಇರುವಿಕೆಯಲ್ಲಿ ಸಂಘ ಪರಿವಾರವು ತನ್ನ ದರ್ಶನವನ್ನು ಉದ್ಘೋಷಿಸಬಲ್ಲ ದೊಡ್ಡ ಚಿಂತಕನೊಬ್ಬನನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿಲ್ಲ. ಅಂದರೆ ಭಾರತೀಯ ಸಮಾಜಕ್ಕೆ ಪ್ರಗತಿಪರ ಚಿಂತನೆಯ ದೃಷ್ಟಿಕೋನಗಳಿಂದ ಬದಲಾವಣೆಯ ದಾರಿಗಳನ್ನು ಸೂಚಿಸಿದ ಡಾ.ಅಂಬೇಡ್ಕರ್ ಅಥವಾ ಡಾ.ಲೋಹಿಯಾ ಅಂತಹವರಿಗೆ ಪರ್ಯಾಯವನ್ನು ಪ್ರತಿಪಾದಿಸುವ ಸಾಂಪ್ರದಾಯಿಕ ಚಿಂತಕರೊಬ್ಬರು ದೊರಕಿಲ್ಲ. ಸಾಂಪ್ರದಾಯಿಕ ನೆಲೆಯಲ್ಲಿ ಭಾರತೀಯತೆಯೆಂದರೇನು ಎನ್ನುವುದಾದರೆ ಅದಕ್ಕೆ ಉತ್ತರಗಳು ದೊರಕುವುದು ಬಹುಶಃ ಗಾಂಧೀಜಿಯವರಲ್ಲಿಯೆ ಹೊರತು ಸಂಘ ಪರಿವಾರದ ಯಾವುದೆ ವಕ್ತಾರರಲ್ಲಿ ಅಲ್ಲ.

ಹಾಗಾಗಿಯೆ ಭಾರತೀಯ ದರ್ಶನಗಳ ಜೊತೆಗೆ ಒಂದು ಸಂವಾದವನ್ನು ಕಟ್ಟಿಕೊಡುವಲ್ಲಿ ಸಂಘ ಪರಿವಾರದ ಅಧ್ವರ್ಯುಗಳು ಯಶಸ್ಸನ್ನು ಕಂಡಿಲ್ಲ. ಅಂತಹ ಗಂಭೀರ ಬೌದ್ಧಿಕ ಆಸಕ್ತಿಯಿರುವವರು ಆ ವಲಯಗಳಲ್ಲಿ ಇದ್ದಾರೆಯೆ ಎನ್ನುವುದು ಸಹ ಸ್ಪಷ್ಟವಾಗುತ್ತಿಲ್ಲ. ಭಾರತೀಯ ಇತಿಹಾಸ ಮತ್ತು ಬೌದ್ಧಿಕ ಪರಂಪರೆಗಳ ಜೊತೆಗೆ ಕೇವಲ ಘೋಷಣಾತ್ಮಕ ನೆಲೆಯ ಸಂಬಂಧವನ್ನು ಸಂಘ ಪರಿವಾರದ ಬೌದ್ಧಿಕತೆ ಹೊಂದಿದೆಯೆ ಹೊರತು ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ನೈಜ ಸಾಧನೆಗಳನ್ನು ಪುನಾರಾಚಿಸುವ ಪ್ರಯತ್ನವನ್ನು ಮಾಡಲು ಸಾಧ್ಯವಾಗಿಲ್ಲ.

ಈ ಮೇಲಿನ ವಾಕ್ಯಗಳನ್ನು ಬಿರುಬೀಸಿನ ಹೇಳಿಕೆಗಳೆಂದು ತಳ್ಳಿಹಾಕುವ ಮೊದಲು ಇವುಗಳ ಹಿಂದಿರುವ ನಿರೀಕ್ಷೆಯನ್ನು ಗಮನಿಸಿ. ಇಂದು ಸಂಘ ಪರಿವಾರದ ಬೌದ್ಧಿಕತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದರೆ, ಅದು ಹೊಸ ಚಿಂತನಾ ಮಾರ್ಗಗಳನ್ನು ಅನ್ವೇಷಿಸಿದ ನಾಗಾರ್ಜುನ, ಶಂಕರ ಅಥವಾ ಗಂಗೇಶ ಪಂಡಿತನಂತಹ ಬೌದ್ಧಿಕನನ್ನು ಹುಟ್ಟುಹಾಕಬೇಕಿದೆ. 18ನೆಯ ಶತಮಾನದ ಯೂರೋಪಿನಲ್ಲಿ ಸಾಂಪ್ರದಾಯಿಕ ಚಿಂತನೆಗೆ ಅಂತಹ ಅಡಿಪಾಯವನ್ನು ಹಾಕುವ ಪ್ರಯತ್ನ ಮಾಡಿದವನು ಎಡ್ಮ್‍ಂಡ್ ಬರ್ಕ್. ಈ ರೀತಿಯ ಬೌದ್ಧಿಕತೆಯನ್ನು ಸಂಘ ಪರಿವಾರವು ಹುಟ್ಟುಹಾಕುವಲ್ಲಿ ವಿಫಲವಾಗಿದೆ ಎಂದರೆ ಅದು ಹೊಸದಾದ ಅಥವಾ ರ್ಯಾಡಿಕಲ್ ಆದ ವಿಷಯವೇನಲ್ಲ. ಸಾಂಪ್ರದಾಯಿಕ ಚಿಂತನೆಗಳನ್ನು ಸೃಜಿಸುವ ಪ್ರಯತ್ನ ಮಾಡಿರುವ ಜೆ.ಎನ್.ಯು. ಪ್ರಾಧ್ಯಾಪಕ ಕಪಿಲ್ ಕಪೂರ್, ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ, ಅನಿವಾಸಿ ಬರಹಗಾರ ರಾಜೀವ ಮೆಹ್ರೋತ್ರ ಅಥವಾ ವಸಾಹತೋತ್ತರ ಚಿಂತಕ ಎಸ್.ಎನ್.ಬಾಲಗಂಗಾಧರ ಅವರಂತಹವರು ಹೆಚ್ಚಿನ ಯಶಸ್ಸನ್ನು ಗಳಿಸಿಲ್ಲ.

ಹೀಗಾಗಿಯೆ ನಮ್ಮ ಕಾಲದ ದೊಡ್ಡ ಸಮಸ್ಯೆಗಳಿಗೆ ದೊರಕಿರುವ ಬೌದ್ಧಿಕ ಪರಿಹಾರಗಳು ಒಂದು ರೀತಿಯಲ್ಲಿ ಪ್ರತಿಕ್ರಿಯಾತ್ಮಕ ಸ್ವರೂಪದವು. ಇವುಗಳನ್ನು ಕಾಂಗ್ರೆಸ್ಸಿನವರೂ ಕೂಡ ಸೂಚಿಸಬಹುದಿತ್ತು ಮತ್ತು ಸೂಚಿಸಿದ್ದಾರೆ ಕೂಡ. ಹಾಗಾಗಿ ಮೋದಿ ಸರ್ಕಾರದ ಎಲ್ಲ ಪ್ರಮುಖ ಸುಧಾರಣೆಗಳು ವಿನೂತನವಾದ ಮತ್ತು ರಚನಾತ್ಮಕವಾದವುಗಳು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಜಿ.ಎಸ್.ಟಿ.ಯನ್ನು ಪರಿಗಣಿಸಿ. ಮನಮೋಹನ್ ಸಿಂಗರ ಸರ್ಕಾರವು ಜಿ.ಎಸ್.ಟಿ. ಮಸೂದೆಯನ್ನು ಮುಂದಿಟ್ಟಾಗ ಅದನ್ನು ಉಗ್ರವಾಗಿ ವಿರೋಧಿಸಿದ ಅಂದಿನ ಗುಜರಾತಿನ ಮುಖ್ಯಮಂತ್ರಿ ಮೋದಿಯವರಿಗೆ ನಂತರ ಉಳಿದ ಉತ್ತರವೊಂದೆ: ಕಾಂಗ್ರೆಸ್ಸಿಗರು ಇದನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿರಲಿಲ್ಲ.

ಹೊಸತನ ಮತ್ತು ಆಳವಾದ ಚಿಂತನೆಯನ್ನು ಸಂಘ ಪರಿವಾರದ ಬೌದ್ಧಿಕತೆಯು ಪ್ರದರ್ಶಿಸುತ್ತಿಲ್ಲ. ಬದಲಿಗೆ ಆತ್ಮನಿರ್ಭರತೆಯಂತಹ ಘೋಷಣಾತ್ಮಕ ಹೇಳಿಕೆಗಳ ಮೂಲಕ ನಮ್ಮ ಸಾರ್ವಜನಿಕ ಸಂವಾದಗಳು ನಡೆಯುತ್ತಿವೆ. ವಸುಧೈವ ಕುಟುಂಬಕಂ ಎನ್ನುವುದು ಸಂಘಪರಿವಾರದ ಆದರ್ಶವಾದರೆ, ಆ ನೆಲೆಯಿಂದಲೇ ನಾನು ಮೇಲೆ ಪಟ್ಟಿಮಾಡಿದ ಸವಾಲುಗಳಿಗೆ ಗಟ್ಟಿಯಾದ, ಸುಸಮಂಜಸವಾದ ಉತ್ತರಗಳು ಹೊರಬರುತ್ತಿದ್ದವು.

ಇಂದು ಅದಕ್ಕೆ ವಿರುದ್ಧವಾದ ಸಮಯಸಾಧಕ ಉತ್ತರಗಳು ಮಾತ್ರ ಕಾಣುತ್ತಿವೆ. ಜಾತಿ ಮತ್ತು ಮೀಸಲಾತಿಗಳ ವಿಷಯದಲ್ಲಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳನ್ನೆ ಗಮನಿಸಿ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಲಿಂಗಾಯತ, ಮರಾಠ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸುವುದಕ್ಕೆ ಇರುವ ಸಮರ್ಥನೆಯಾದರೂ ಏನು? ಕುರುಬ ಮತ್ತು ಪಂಚಮಸಾಲಿ ಸಮುದಾಯಗಳು ಮೀಸಲಾತಿಯ ಸ್ಥಾನಮಾನಗಳಲ್ಲಿ ಬದಲಾವಣೆಗಳನ್ನು ಕೇಳಿದಾಗ, ಬಿಜೆಪಿಯಲ್ಲಿಯೇ ಇರುವ ಆ ಸಮುದಾಯಗಳ ನಾಯಕರು ಅಂತಹ ಬೇಡಿಕೆಗಳ ಅಸಮಂಜಸತೆಯನ್ನು ಎತ್ತಿಹೇಳಬೇಕಿತ್ತಲ್ಲವೆ? ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮರಾಠರು ಮತ್ತು ಪಟೇಲರು ಮೀಸಲಾತಿಗಾಗಿ ಒತ್ತಾಯಿಸಿ ಚಳವಳಿ ಮಾಡಿದಾಗ, ಅದರ ವಿರುದ್ಧವಾಗಿ ಸಂಘ ಪರಿವಾರದವರು ಸ್ಪಷ್ಟವಾಗಿ ದನಿಯೆತ್ತಬೇಕಿತ್ತಲ್ಲವೆ? ಇತರೆ ಪಕ್ಷಗಳು ಜಾತಿ ರಾಜಕಾರಣ ಮಾಡುತ್ತವೆ ಎನ್ನುವುದು ಸಂಘ ಪರಿವಾರದ ಸಂಘಟನೆಗಳು ಇಂತಹ ರಾಜಕಾರಣ ಮಾಡಲು ಸಮರ್ಥನೆಯೆ?

ಇದು ಕೇವಲ ರಾಜ್ಯಸರ್ಕಾರಗಳ ಸಮಸ್ಯೆಯಷ್ಟೆ ಅಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರವೂ ಸಹ ಧೈರ್ಯ, ಹೊಸಚಿಂತನೆ ಮತ್ತು ಆತ್ಮವಿಶ್ವಾಸಗಳನ್ನು ಪ್ರದರ್ಶಿಸುತ್ತಿದೆ ಎಂದು ಕಾಣಿಸುತ್ತಿಲ್ಲ. ಮೋದಿಯವರನ್ನು ಶಕ್ತಿಶಾಲಿ ನಾಯಕರೆಂದೆ ಗುರುತಿಸಲಾಗುತ್ತಿದೆ ಮತ್ತು ಅವರ ಕಾರ್ಯವೈಖರಿಯನ್ನು ನೋಡಿದರೆ ಅವರಿಗೆ ಧೈರ್ಯ, ಆತ್ಮವಿಶ್ವಾಸ ಹಾಗೂ ಮಹತ್ವಾಕಾಂಕ್ಷೆಗಳ ಕೊರತೆಯಿದೆ ಎಂದು ಅವರ ವಿರೋಧಿಗಳೂ ಹೇಳುವುದಿಲ್ಲ. ಆದರೆ ಆ ನಾಯಕತ್ವವು ಕೇವಲ ಸಾಂಕೇತಿಕ ಹೆಜ್ಜೆಗಳು ಮತ್ತು ಘೋಷಣೆಗಳಿಂದಲೆ ತೃಪ್ತಿ ಪಡುತ್ತಿದೆ ಎಂದರೆ ತಪ್ಪಾಗಲಾರದು. ದೆಹಲಿಯಲ್ಲಿ ಹೊಸ ರಾಜಧಾನಿಯೊಂದನ್ನು ಕಟ್ಟಿ, ಬ್ರಿಟಿಷರ ಮತ್ತು ನೆಹರೂ-ಗಾಂಧಿಯವರ ಕಾಲದ ದೆಹಲಿಯನ್ನು ಬದಲಿಸುವ ಪ್ರಯತ್ನದಿಂದ ಭಾರತೀಯರ ಬದುಕಿನ ವಾಸ್ತವದಲ್ಲಿ ಬದಲಾವಣೆಯಾಗುವುದಿಲ್ಲ.

ಸಂಘ ಪರಿವಾರವು ತನ್ನ ಪ್ರಭಾವವನ್ನು ವಿಸ್ತರಿಸುವಲ್ಲಿ ಎಷ್ಟೆ ಯಶಸ್ಸು ಪಡೆದಿದ್ದರೂ, ಸಮರ್ಥವಾದ ಬೌದ್ಧಿಕ ಪರಂಪರೆಯನ್ನು ಕಟ್ಟುವಲ್ಲಿ ವಿಫಲವಾಗಿರುವುದು ಅದರ ದೊಡ್ಡ ಮಿತಿಯಾಗಿದೆ.

 

Leave a Reply

Your email address will not be published.