ರಾಹುಲ್ ಗಾಂಧಿ ಅಸಾಮರ್ಥ್ಯ: ಐದು ಕಾರಣಗಳು

ರಾಮಚಂದ್ರ ಗುಹಾ

ಪ್ರಸ್ತುತ ಸರಕಾರದ ವಿರೋಧಿಗಳೆಲ್ಲಾ ಮನಗಾಣಬೇಕಾದ ಕಟುಸತ್ಯವೆಂದರೆ, ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯಾಗಿ ಪ್ರಸ್ತುತಪಡಿಸಿದರೆ, ನರೇಂದ್ರ ಮೋದಿ ಮತ್ತು ಬಿಜೆಪಿಯ ಕೈ ಭದ್ರಪಡಿಸಿದ ಹಾಗೆ!

ಪ್ರಾಸ್ತಾವಿಕವಾಗಿ ಹೇಳುವುದಾದರೆ, ಹಿಂದುತ್ವವನ್ನು ವಿರೋಧಿಸು ವವರು, ಪ್ರಸಕ್ತ ವ್ಯವಸ್ಥೆಯಲ್ಲಿ ನಿಶ್ಶಕ್ತವಾಗುತ್ತಿರುವ ದೇಶದ ಸ್ವಾತಂತ್ರ÷್ಯ ಹೋರಾಟದ ಮೂಲ ತತ್ವಗಳಾದ ಧಾರ್ಮಿಕ ಮತ್ತು ಭಾಷಾ ಬಹುತ್ವ, ಜಾತಿ ಮತ್ತು ಲಿಂಗ ಸಮಾನತೆ, ಅಭಿವ್ಯಕ್ತ ಸ್ವಾತಂತ್ರ÷್ಯ, ಬಹುತ್ವ ಸಂಸ್ಕೃತಿ ಮತ್ತು ನಾಗರಿಕತೆಗಳಿಗೆ ಇರಬೇಕಾದ ಮುಕ್ತತೆಯನ್ನು ಕೂಡ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, 2024ರ ಮಹಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಇದೊಂದು, ಹಿಂದುತ್ವದ ವಿರುದ್ಧ ಮಾಡುವ ಯುದ್ಧ ಮಾತ್ರವಲ್ಲ, ಎರಡು ವ್ಯಕ್ತಿತ್ವಗಳ ನಡುವಿನ ಯುದ್ಧವಾಗಿಯೂ ಕಾಣಿಸುತ್ತಿದೆ.

ಜೊತೆಗೆ, ಈಗ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ಹೆಚ್ಚು ಅಧ್ಯಕ್ಷೀಯ ಸ್ಪರ್ಧೆಯಂತೆ ಗೋಚರಿಸುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಮುಂದಿರುವ ಪ್ರಶ್ನೆ, ನರೇಂದ್ರ ಮೋದಿಯವರನ್ನು ಸತತವಾಗಿ ಎರಡು ಬಾರಿ ಸೋಲಿಸಲು ವಿಫಲವಾದ ವ್ಯಕ್ತಿ, ತನ್ನ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಬಹುದೇ? ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಇದು ಅಸಾಧ್ಯ. ಯಾಕೆಂದರೆ, ಮತದಾರರಲ್ಲಿ ತಮ್ಮ ಮುಂದಿನ ಪ್ರಧಾನಿಯ ಆಯ್ಕೆಯನ್ನು ಸೂಚಿಸಲು ಕೇಳಿದಾಗ, 66% ಮಂದಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದರೆ, ಕೇವಲ 8% ಜನರು ಮಾತ್ರ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿದ್ದಾರೆ.

2013ರ ಜನವರಿಯಲ್ಲಿ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ನಾನು ಟೆಲಿಗ್ರಾಫ್ ಪತ್ರಿಕೆಯಲ್ಲಿ ಪಕ್ಷದ ಉತ್ತರಾಧಿಕಾರಿಯ ಬಗ್ಗೆ ಒಂದು ಅಂಕಣ ಪ್ರಕಟಿಸಿದ್ದೆ. ರಾಹುಲ್ ಗಾಂಧಿ ರಾಜಕೀಯ ಪ್ರವೇಶಿಸಿದಾಗಿನಿಂದ, ಅಂದಿನವರೆಗಿನ ಅವರ ವೃತ್ತಿಜೀವನವನ್ನು ಪರಿಶೀಲಿಸಿ ಹೀಗೆ ಬರೆದಿದ್ದೆ: ‘ಯಾರಾದರೂ ರಾಹುಲ್ ಗಾಂಧಿಯವರ ಬಗ್ಗೆ ಹೇಳಬಹುದಾದ ಒಂದು ಒಳ್ಳೆಯ ಮಾತೆಂದರೆ, ಅವರೊಬ್ಬ ದೇಶಾಭಿವೃದ್ಧಿಯ ಸದುದ್ದೇಶ ಹೊಂದಿದ, ಆದರೆ, ಹವ್ಯಾಸಿ ರಾಜಕಾರಣಿ. ಅವರು ಇಲ್ಲಿಯವರೆಗೆ, ತನ್ನ ಆಡಳಿತಾತ್ಮಕ ಸಾಮರ್ಥ್ಯದ ಯಾವುದೇ ಲಕ್ಷಣ, ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳುವ ಬಯಕೆ, ಸಮಸ್ಯೆಗಳ ಪರಿಹರಿಸುವ ಶಕ್ತಿ ಅಥವಾ ಬದ್ಧತೆ ತೋರಿಸಿಲ್ಲ. ಬದಲಾಗಿ, ಸಾಮಾಜಿಕ ಸಮಸ್ಯೆಗಳನ್ನು ಮಾತ್ರ ಗುರುತಿಸಿದ್ದಾರೆ. ಅಕಸ್ಮಾತ್, ರಾಹುಲ್ ಗಾಂಧಿಯವರು ಯಾವುದೇ ಖಾಸಗಿ ವಲಯದ ಉದ್ಯೋಗದಲ್ಲಿದ್ದರೆ ಅಥವಾ ಸ್ವಂತ ಉದ್ಯಮ ನಡೆಸುತ್ತಿದ್ದರೆ ಅವರ ಕಾರ್ಯವೈಖರಿ ನಮಗೆ ಅಪ್ರಸ್ತುತವಾಗುತ್ತದೆ. ಆದರೆ, ಭಾರತದ ಅತಿದೊಡ್ಡ, ಪ್ರಭಾವಶಾಲಿ ರಾಜಕೀಯ ಪಕ್ಷದ ಉಪಾಧ್ಯಕ್ಷರಾಗಿ, ಮತ್ತು ಭವಿಷ್ಯದ ಪ್ರಧಾನ ಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ, ಇದು ಮುಖ್ಯವೆನಿಸುತ್ತದೆ.’

ಸಾಮಾನ್ಯವಾಗಿ, ಭಾರತೀಯ ರಾಜಕಾರಣದ ಬಗ್ಗೆ ಬರೆಯುವವರು ಕಾಲಾನಂತರ ವಿಷಾದದ ಹೇಳಿಕೆಗಳನ್ನು ನೀಡುವ ಸಾಧ್ಯತೆಯೇ ಹೆಚ್ಚು; ಆದರೂ ನನ್ನ ಆ ಲೇಖನ ಬರೆದ ಏಳೂವರೆ ವರ್ಷಗಳ ನಂತರವು, ರಾಹುಲ್ ಗಾಂಧಿ ಬದಲಾಗದೆ ರಾಜಕೀಯದಲ್ಲಿ ಹವ್ಯಾಸಿಯಾಗಿಯೇ ಉಳಿದು, ನನ್ನ ಮಾತನ್ನು ದೃಢೀಕರಿಸಿದ್ದಾರೆ.

ರಾಹುಲ್ ಗಾಂಧಿಯವರ ಹವ್ಯಾಸಿ ರಾಜಕಾರಣಕ್ಕೆ ಸಾಕ್ಷಿಯಂತೆ, ಸತತ ಮೂರು ಬಾರಿ ಉತ್ತರ ಪ್ರದೇಶದ ಸಂಸದರಾಗಿದ್ದರೂ, ಇನ್ನೂ ಸಹ ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಲು ಅಸಮರ್ಥರಾಗಿರುವುದು. ಅವರು, 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುವಾಗ ಮಾಡಿದ ಕಳಪೆ ಕಾರ್ಯ ನಿರ್ವಹಣೆಗೆ, ಬಹುಸಂಖ್ಯಾತ ಭಾರತೀಯರ ಭಾಷೆ ಹಿಂದಿಯ ನಿರರ್ಗಳತೆ ಕೊರತೆಯೂ ಒಂದು ಪ್ರಮುಖ ಕಾರಣವಾಗಿತ್ತು. ಅವರ ಭಾಷಾ ತೊದಲುವಿಕೆ ಮತ್ತು ಎಡವಟ್ಟುವಿಕೆಗೆ ತದ್ವಿರುದ್ಧವಾಗಿ, ನರೇಂದ್ರ ಮೋದಿ ಹಿಂದಿಯಲ್ಲಿ ಸುಲಲಿತವಾಗಿ ಮಾತನಾಡುತ್ತಾರೆ. ಕಾಂಗ್ರೆಸಿನ ಚುನಾವಣಾ ಸೋಲಿಗೆ ಇನ್ನಿತರ ಕಾರಣಗಳೆಂದರೆ, ರಾಹುಲ್ ಗಾಂಧಿಯವರ ಆಡಳಿತಾತ್ಮಕ ಅನುಭವದ ಕೊರತೆ ಮತ್ತು ಅವರು ನಾಲ್ಕನೇ ತಲೆಮಾರಿನ ರಾಜಕೀಯ ವಂಶ ಪಾರಂಪರ್ಯಕ್ಕೆ ವಾರಸುದಾರನಾಗಿರುವುದು.

ಹಾಗೆ ಗಮನಿಸಿದರೆ, ರಾಹುಲ್ ಗಾಂಧಿ, ಒಬ್ಬ ಮಾಜಿ ಪ್ರಧಾನಮಂತ್ರಿಯ ಮಗ, ಮೊಮ್ಮಗ ಮತ್ತು ಮರಿ ಮೊಮ್ಮಗ ಎಂಬುದು ಹೆಚ್ಚಿನ ಭಾರತೀಯರ ದೃಷ್ಟಿಯಲ್ಲಿ ಒಂದು ಗುಣಾತ್ಮಕ ಅಂಶವಲ್ಲ. ಯಾಕೆಂದರೆ, ಕೇವಲ ಕೌಟುಂಬಿಕ ಹಿನ್ನೆಲೆಯ ಆಧಾರದ ಮೇಲೆ ಅಧಿಕಾರದ ಅರ್ಹತೆ ಪಡೆಯುವ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ವಿಶೇಷವಾಗಿ, ಮೋದಿ ಸರ್ಕಾರದ ನೀತಿಗಳನ್ನು ಟೀಕಿಸುವಾಗ, ಕಾಂಗ್ರೆಸಿಗೆ ಈ ಅಂಶ ಸಂಪೂರ್ಣ ಅನಾನುಕೂಲವಾಗಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್, ಮೋದಿ ಸರ್ಕಾರ ಹತ್ತಿಕ್ಕುತ್ತಿರುವ ಪತ್ರಿಕಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ÷್ಯದ ಬಗ್ಗೆ ಆರೋಪಿಸಿದಾಗ, ಆಡಳಿತ ಪಕ್ಷದ ಸ್ವಯಂಪ್ರೇರಿತ ಪ್ರತಿಕ್ರಿಯೆ, ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ. ಅದೇ ರೀತಿ, ದೇಶದ ಗಡಿಯಲ್ಲಿ ಚೀನಿಯರ ಆಕ್ರಮಣಕ್ಕೆ ಮೋದಿ ಸರ್ಕಾರ ಹೊಣೆಯೆಂದು ಆರೋಪಿಸಿದಾಗ, ಆಡಳಿತ ಪಕ್ಷದ ಪ್ರತ್ಯುತ್ತರ, 1962ರಲ್ಲಿ ಚೀನಿಯರಿಗೆ ನೆಹರು ಸರ್ಕಾರದ ಶರಣಾಗತಿ.

ಅದೇ ರೀತಿ, 2019ರಲ್ಲಿ ರಾಹುಲ್ ಗಾಂಧಿ ಮೋದಿಯವರ ವೈಯಕ್ತಿಕ ನಿಷ್ಠೆಯನ್ನು ತಮ್ಮ ಪಕ್ಷದ ಚುನಾವಣಾ ಪ್ರಚಾರದ ಕೇಂದ್ರ ವಸ್ತುವನ್ನಾಗಿಸಿ `ಚೌಕಿದಾರ್ ಚೋರ್ ಹೈ (ದೇಶದ ಕಾವಲುಗಾರ ಕಳ್ಳ)’ ಎಂಬ ಘೋಷಣೆ ಮಾಡಿದರು. ಇದರ ಬದಲಾಗಿ, 2014ರಲ್ಲಿ ಮೋದಿ ಭರವಸೆ ನೀಡಿದ್ದ `ಅಚ್ಚೆ ದಿನ್ (ಒಳ್ಳೆಯ ದಿನ) ಎಲ್ಲಿದೆ’ ಎಂದು ಕಾಂಗ್ರೆಸ್ ಕೇಳಬಹುದಿತ್ತು. ಜೊತೆಗೆ, ಬೋಫೋರ್ಸ್ ಹಗರಣದಲ್ಲಿ ಸಿಲುಕಿದ್ದ ಪ್ರಧಾನ ಮಂತ್ರಿಯ ಮಗ, ಮೋದಿಯ ಮೇಲೆ ಈ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾನೆ ಎನ್ನುವುದು ಇಲ್ಲಿ ಮುಖ್ಯ.

ಪ್ರಸ್ತುತ, ರಾಹುಲ್ ಗಾಂಧಿ ಸಾರ್ವಜನಿಕ ಜೀವನದಲ್ಲಿ 16 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಸಂಕ್ಷಿಪ್ತವಾಗಿ, ಅವರ ರಾಜಕೀಯ ವೃತ್ತಿಜೀವನದ ವಸ್ತುನಿಷ್ಠ ಮೌಲ್ಯಮಾಪನವು ಐದು ಅಂಶಗಳನ್ನು ಎತ್ತಿ ತೋರಿಸುತ್ತದೆ. ಅವೆಲ್ಲವೂ, ನರೇಂದ್ರ ಮೋದಿಯವರಿಗೆ ಪರ್ಯಾಯವಾಗಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿಯನ್ನು ಪ್ರಸ್ತುತಪಡಿಸುವುದು ಸೂಕ್ತವಲ್ಲವೆಂದು ಸೂಚಿಸುತ್ತವೆ:

  • ಮೊದಲನೆಯದಾಗಿ, ಅವರು ತಮ್ಮ ಚುನಾವಣಾ ಪ್ರಚಾರಗಳಲ್ಲಿ

 ಮಾಡುತ್ತಿರುವ ತಪ್ಪು ಘೋಷಣೆಗಳ ಮತ್ತು ವಿಷಯಗಳ ಆಯ್ಕೆ,

 ಅವರ ರಾಜಕೀಯ ಪ್ರಬುದ್ಧತೆಯನ್ನು ಪ್ರದರ್ಶಿಸುತ್ತಿಲ್ಲ.

  • ಎರಡನೆಯದಾಗಿ, ಅವರೊಬ್ಬ ನೀರಸ ಭಾಷಣಕಾರ, ಅದೂ

 ವಿಶೇಷವಾಗಿ, ಬಹುಸಂಖ್ಯಾತ ಭಾರತೀಯರ ಭಾಷೆಯಾದ

 ಹಿಂದಿಯಲ್ಲಿ.

  • ಮೂರನೆಯದಾಗಿ, ಅವರಿಗೆ ಯಾವುದೇ ರೀತಿಯ ಜವಾಬ್ದಾರಿ

 ಹುದ್ದೆಯಲ್ಲಿ ಆಡಳಿತಾತ್ಮಕ ಅನುಭವವಿಲ್ಲ.

  • ನಾಲ್ಕನೆಯದಾಗಿ, ಅವರಿಗೆ ಸೋಲು ಗೆಲುವುಗಳ ಮೀರಿ ಅಚಲವಾಗಿ

 ನಿಂತು ಕೆಲಸಮಾಡುವ ಸ್ಥಿರತೆಯಿಲ್ಲ. ಆಗಾಗ್ಗೆ, ಸಾರ್ವಜನಿಕ

 ಜೀವನದಿಂದ ವಾರಗಟ್ಟಲೆ ಕಣ್ಮರೆಯಾಗುತ್ತಾರೆ.

  • ಐದನೆಯದಾಗಿ, 21ನೇ ಶತಮಾನದ ಭಾರತದಲ್ಲಿ, ‘ವಂಶಸ್ಥರ

 ಸಾಧನೆಯನ್ನು ಹೊರತುಪಡಿಸಿ, ನಿಮ್ಮ ಸ್ವಂತ ಸಾಧನೆಯೇನು?’

 ಎಂದು ಪ್ರಶ್ನಿಸುವ ಮತದಾರರಿಗೆ ರಾಹುಲ್ ಗಾಂಧಿ, ಕೇವಲ

 ರಾಜವಂಶದ ವಾರಸುದಾರನಂತೆ ಕಾಣಿಸುತ್ತಾರೆ.

ಈ ದೆಸೆಯಲ್ಲಿ, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ, ವಿಶ್ವಾಸಾರ್ಹ ಅಖಿಲ ಭಾರತ ಪಕ್ಷ ಮತ್ತು ಕೇಂದ್ರದಲ್ಲಿ ಅಧಿಕಾರಗಳಿಸುವ ಸಾಮರ್ಥ್ಯವಿರುವ ಪಕ್ಷವೆಂದು ಸಾಬೀತುಪಡಿಸಬೇಕಿದೆ. ಮೊದಲನೆಯದಾಗಿ, ಗಾಂಧಿ-ನೆಹರೂ ಕುಟುಂಬದ ಹೊರಗಿನವರನ್ನು ಪಕ್ಷ ಮುನ್ನಡೆಸಲು ಆರಿಸುವುದು. ಎರಡನೆಯದಾಗಿ, ಹಿಂದೆ ಕಾಂಗ್ರೆಸಿನಲ್ಲಿದ್ದ ನಾಯಕರು ಮತ್ತು ಅವರ ಹೊಸ ಪಕ್ಷಗಳನ್ನು ಪುನಃ ಮಾತೃಪಕ್ಷಕ್ಕೆ ಕರೆತರುವುದು. ಉದಾಹರಣೆಗೆ, ವೈಎಸ್‌ಆರ್ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಗಳನ್ನು ಕಾಂಗ್ರೆಸ್ಸಿನೊAದಿಗೆ ವಿಲೀನಗೊಳಿಸುವುದು. ಇದರಿಂದಾಗಿ, ಪಕ್ಷದ ನೆಲೆ ವಿಸ್ತರಿಸುತ್ತದೆ. ಅದೇ ರೀತಿ, ಪಕ್ಷದ ನಾಯಕತ್ವಕ್ಕಾಗಿ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಬೇಕಿದೆ.

ಸಾಮಾನ್ಯವಾಗಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಸುತ್ತುವರೆದಿರುವ ಹೊಗಳುಭಟ್ಟರು ಗಾಂಧಿ ಪರಿವಾರ ಮುನ್ನಡೆಸದ ಹೊರತು ಪಕ್ಷ ಉಳಿಯುವುದಿಲ್ಲ ಎಂದು ಯಾವಾಗಲೂ ಹೇಳುತ್ತಾರೆ. ಬದಲಾಗಿ, ಪರಿವಾರ ಭಕ್ತಿಯನ್ನು ಮೀರಿ ಭಾರತೀಯ ಪ್ರಜಾಪ್ರಭುತ್ವದ ಹಿತಾಸಕ್ತಿಯ ದೃಷ್ಟಿಯಿಂದ ನೋಡಿದರೆ, ದೇಶದ ಪ್ರಧಾನ ವಿರೋಧ ಪಕ್ಷದ ಅಧ್ಯಕ್ಷರಾಗಿ ಪರಿವಾರದ ಹೊರಗಿನವರಾದರೆ, ಮೋದಿ ಸರ್ಕಾರಕ್ಕೆ ತನ್ನ ನೀತಿಗಳ (ಉದಾಹರಣೆಗೆ, ಕುಸಿದ ಆರ್ಥಿಕತೆ, ಅಸಮರ್ಪಕ ಕೊರೊನ ನಿಯಂತ್ರಣ ಕ್ರಮ, ಕ್ಷೀಣಿಸುತ್ತಿರುವ ಅಭಿವ್ಯಕ್ತ ಸ್ವಾತಂತ್ರ÷್ಯ, ಹದಗೆಟ್ಟಿರುವ ಚೀನಾ ಗಡಿ ವಿವಾದ ಇತ್ಯಾದಿ) ವಿರುದ್ಧದ ಟೀಕೆಗಳಿಗೆ ಉತ್ತರವಾಗಿ, ನೆಹರೂ ಪರಿವಾರದ ಆಡಳಿತ ವೈಫಲ್ಯಗಳನ್ನು ನೆನಪಿಸಲು ಕಷ್ಟವಾಗುತ್ತದೆ. ಜೊತೆಗೆ, ಆ ಪರಿವಾರದ ಹೊರಗಿನ ಹೊಸ ಅಧ್ಯಕ್ಷರು ನಿರರ್ಗಳವಾಗಿ ಹಿಂದಿ ಮಾತನಾಡುವವರಾಗಿದ್ದು, ಸಾಮೂಹಿಕ ನಾಯಕತ್ವ, ನಿರಂತರ ಕಠಿಣ ಕೆಲಸ ಮಾಡುವ ಸಾಮರ್ಥ್ಯ ಮತ್ತು ಸಾಮಾಜಿಕ ಜಾಲತಾಣ ಮೀರಿ ಬೀದಿಗಳಲ್ಲಿ ತಮ್ಮ ಅಭಿಯಾನವನ್ನು ಕೈಗೊಳ್ಳುವ ಛಲ ಹೊಂದಿದ್ದರೆ, ಪಕ್ಷವು ಹೆಚ್ಚಿನದನ್ನು ಸಾಧಿಸಬಹುದು.

ಕೆಲವೊಮ್ಮೆ, ಸಾಮಾಜಿಕ ಜಾಲತಾಣಗಳಲ್ಲಿ, ‘ರಾಹುಲ್ ಗಾಂಧಿ ಮಾತ್ರ ಮೋದಿ ಮತ್ತು ಆರೆಸ್ಸೆಸ್‌ಗೆ ಸವಾಲೊಡ್ಡುವ ಧೈರ್ಯಶಾಲಿ ನಾಯಕ” ಎನ್ನುವ ವಾದ ಕೇಳಿಬರುತ್ತವೆ. ಆದರೆ, ಈ ವಾದ ಸರಿಯಲ್ಲ. ರಾಹುಲ್ ಗಾಂಧಿ, ಪ್ರಮುಖ ವಿರೋಧ ಪಕ್ಷದ ಮುಖ್ಯ ವಕ್ತಾರರೆಂದು ಮಾತ್ರ ಅವರ ಟೀಕೆಗಳು ಗಮನ ಸೆಳೆಯುತ್ತವೆ. ಇವರ ಬದಲಾಗಿ ವಾಘೇಲಾ, ಗೆಹ್ಲೋಟ್, ಬ್ಯಾನರ್ಜಿ ಅಥವಾ ರೆಡ್ಡಿ ಹೆಸರಿನ ಯಾರೇ ಅಧ್ಯಕ್ಷರಾಗಿದ್ದು, ಅವರಿಗೆ ಪಕ್ಷವನ್ನು ಮುನ್ನೆಡಸಲು ಸಂಪೂರ್ಣ ಸ್ವಾತಂತ್ರ÷್ಯ ನೀಡಿದರೆ, ಅವರು ಕೂಡ ಮೋದಿ ಮತ್ತು ಆರೆಸ್ಸೆಸ್‌ನ್ನು ಸಮರ್ಥವಾಗಿ ಎದುರಿಸುವುದಿಲ್ಲವೆಂದು ಹೇಗೆ ಹೇಳುತ್ತೀರಿ?

ಇನ್ನು ಕೆಲವರು, “ರಾಹುಲ್ ಗಾಂಧಿ ಮೋದಿಗಿಂತ ಉತ್ತಮ ಪ್ರಧಾನಿಯಾಗಲಿದ್ದಾರೆ” ಎಂದು ಭವಿಷ್ಯ ನುಡಿಯುತ್ತಾರೆ. ಅವರ ಪ್ರಕಾರ, ರಾಹುಲ್ ಗಾಂಧಿ, ಪ್ರಸಕ್ತ ಪ್ರಧಾನ ಮಂತ್ರಿಗಿOತ ಹೆಚ್ಚು ವ್ಯಾಪಕವಾಗಿ ಸಮಾಲೋಚಿಸುತ್ತಾರೆ, ಕಡಿಮೆ ವ್ಯಕ್ತಿಗತ ಪ್ರಭಾವಳಿ ಗೀಳನ್ನು ಹೊಂದಿರುತ್ತಾರೆ, ಬಹುಸಂಖ್ಯಾತ ಕಾರ್ಯಸೂಚಿಯಿಂದ ದೂರವಿರುತ್ತಾರೆ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುತ್ತಾರೆ. ಆದರೆ, ಈಗ ರಾಹುಲ್ ಆ ಸ್ಥಾನದಲ್ಲಿಲ್ಲ ಮತ್ತು ಆಗುವ ಸಾಧ್ಯತೆಯೂ ಇಲ್ಲ. ಪ್ರಸ್ತುತ ಸರಕಾರದ ವಿರೋಧಿಗಳೆಲ್ಲಾ ಮನಗಾಣಬೇಕಾದ ಕಟುಸತ್ಯವೆಂದರೆ, ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯಾಗಿ ಪ್ರಸ್ತುತಪಡಿಸಿದರೆ, ನರೇಂದ್ರ ಮೋದಿ ಮತ್ತು ಬಿಜೆಪಿಯ ಕೈ ಭದ್ರ ಪಡಿಸಿದ ಹಾಗೆ.

ಈ ಹಿಂದೆಯೇ ನಾನು, ರಾಹುಲ್ ಗಾಂಧಿಯವರ ಸದುದ್ದೇಶ ಮತ್ತು ಹವ್ಯಾಸಿ ರಾಜಕಾರಣದ ಕುರಿತು ಸಾಕಷ್ಟು ಮಾತಾಡಿದ್ದೇನೆ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗಿOತ ವಿಭಿನ್ನವಾಗಿ ರಾಹುಲ್ ಗಾಂಧಿಗೆ, ವಂಶ ಪಾರಂಪರ್ಯ ಅಧಿಕಾರ ನಡೆಸುವ ತನ್ನ ಅರ್ಹತೆಯ ಬಗ್ಗೆ ಸಂಶಯವಿದೆ. ಒಂದು ಕಡೆ, ಪ್ರಿಯಾಂಕಾ ಗಾಂಧಿ “ನಾನು ಇಂದಿರಾ ಗಾಂಧಿಯ ಮೊಮ್ಮಗಳು” ಎಂದರೆ, ಇದಕ್ಕೆ ಪೂರಕವಾಗಿ ಸೋನಿಯಾ ಗಾಂಧಿಯಲ್ಲಿ ಕೂಡ ಕುಟುಂಬ ಆಡಳಿತ ಮನೋಭಾವ ಇನ್ನಷ್ಟು ಆಳವಾಗಿದೆ.

ಈ ವಿಷಯದಲ್ಲಿ, ತನ್ನ ತಾಯಿ ಮತ್ತು ಸಹೋದರಿಯಿಂದ ಅಂತರ ಕಾಯ್ದುಕೊಂಡಿರುವುದು ರಾಹುಲ್ ಗಾಂಧಿಯವರ ಸದುದ್ದೇಶ ತೋರಿಸುತ್ತದೆ. ಆದರೆ, ತನ್ನ ಕುಟುಂಬದ ಹೊರಗಿನ ಸದಸ್ಯರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಮಾಡುವಲ್ಲಿ ಅವರು ಮೇಲುಗೈ ಸಾಧಿಸಬಹುದೇ? ಅಥವಾ ಈ ವ್ಯಕ್ತಿಯನ್ನು ಮುಂದಿಟ್ಟುಕೊOಡು ಸೋನಿಯಾ, ರಾಹುಲ್ ಅಥವಾ ಪ್ರಿಯಾಂಕಾ ಹಿನ್ನೆಲೆಯಲ್ಲಿ ಅಧಿಕಾರ ಚಲಾಯಿಸುತ್ತಾರೆಯೇ? ಎನ್ನುವುದು ಮುಖ್ಯ ಪ್ರಶ್ನೆ.

ಕೊನೆಯದಾಗಿ, ನಾನು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ವಂಶಾಡಳಿತ ಸಂಸ್ಕೃತಿಯ ನಿಷ್ಠುರ ವಿಮರ್ಶಕನಾಗಿದ್ದೇನೆ. ನಾನು ಈ ಟೀಕೆಗಳನ್ನು ಕಾಲಕಾಲಕ್ಕೆ ಮಾಡುತ್ತಿರುತ್ತೇನೆ. ಪ್ರಸ್ತುತ, ವಿಮರ್ಶೆ ಹಿಂದೆAದಿಗಿOತಲೂ ಹೆಚ್ಚು ಅಗತ್ಯವಾಗಿವೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಭಾರತಕ್ಕೆ ಸಾಕಷ್ಟು ಹಾನಿ ಮಾಡಿದ್ದಾರೆ. ಅವರ ಸರ್ಕಾರವು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ, ನಮ್ಮ ಸಮಾಜವನ್ನು ವಿಭಜಿಸಿದೆ ಮತ್ತು ವಿದೇಶಗಳಲ್ಲಿ ಭಾರತದ ಗೌರವ ಕಡಿಮೆ ಮಾಡಿದೆ. ಅವರು ಇನ್ನೂ ನಾಲ್ಕು ವರ್ಷಗಳ ಅಧಿಕಾರ ಹೊಂದಿದ್ದಾರೆ. ಭಾರತದ ಆರ್ಥಿಕ, ರಾಜಕೀಯ ಮತ್ತು ನೈತಿಕ ಪುನರುಜ್ಜೀವನದ ನಿರೀಕ್ಷೆಯಲ್ಲಿರುವವರು, 2024ರಲ್ಲಿ ಮೋದಿಯವರನ್ನು ಮತ್ತು ಅವರ ಪಕ್ಷವನ್ನು ಅಧಿಕಾರದಿಂದ ಕಿತ್ತುಹಾಕುವ ಸೂಕ್ತ ಮಾರ್ಗವನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ, ಸತತ ಮೂರನೇ ಬಾರಿಗೆ ಅವರ ಪ್ರಮುಖ ಎದುರಾಳಿಯಾಗಿ ಒಬ್ಬ ರಾಜವಂಶ ಪಾರಂಪರ್ಯದ ವಾರಸುದಾರನನ್ನು ಪ್ರಸ್ತುತಪಡಿಸಿದರೆ ಅಪೇಕ್ಷಿತ ಫಲಿತಾಂಶ ಬರಲಾರದು.

ಮೂಲ: ಎನ್.ಡಿ.ಟಿ.ವಿ  ಅನು: ಡಾ.ಜ್ಯೋತಿ

*ಲೇಖಕರು ಪ್ರಸಿದ್ಧ ಇತಿಹಾಸಕಾರರು; ಇಂಗ್ಲಿಷಿನಲ್ಲಿ ಬರೆಯುವ ಭಾರತೀಯ ಲೇಖಕರು, ಅಂಕಣಕಾರರು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಅಧ್ಯಯನಾಸಕ್ತಿಗಳಲ್ಲಿ ಪರಿಸರ, ಸಮಾಜ, ಆರ್ಥಿಕತೆ, ರಾಜಕೀಯ, ಸಮಕಾಲೀನ ಸಂಗತಿಗಳು ಹಾಗೂ ಕ್ರಿಕೆಟ್ ಇತಿಹಾಸ ಸೇರಿವೆ.

 

Leave a Reply

Your email address will not be published.