ರಾಹುಲ್ ಗಾಂಧಿ ಕುರಿತ ರಾಮಚಂದ್ರ ಗುಹಾ ವಿಮರ್ಶೆ:ನಾನು ಒಪ್ಪುವುದಿಲ್ಲ!

-ರಾಜಮೋಹನ್ ಗಾಂಧಿ

ಇಂದು ಆಡಲು ಪಿಚ್ ಕಠಿಣವಾಗಿದೆ, ಬೆಳಕು ಮಂದವಾಗಿದೆ, ಬಿರುಗಾಳಿ ಮತ್ತು ಜಡಿಮಳೆ ಬೀಸುತ್ತಿದೆ, ಮತ್ತು ಅಂಪೈರ್‌ಗಳು ಎಷ್ಟು ನಿಷ್ಪಕ್ಷಪಾತರು ಎಂಬುದು ಕೂಡ ಸ್ಪಷ್ಟವಾಗಿಲ್ಲ. ಆದರೂ, ರಾಹುಲ್ ಗಾಂಧಿ ಧೈರ್ಯವಾಗಿ ಆಡುತ್ತಿದ್ದಾರೆ. ಅದಕ್ಕಾಗಿ, ಅವರಿಗೆ ನನ್ನ ಅಭಿನಂದನೆಗಳು.

ರಾಮಚoದ್ರ ಗುಹಾ ಒಬ್ಬ ಪ್ರತಿಭಾನ್ವಿತ ಇತಿಹಾಸಕಾರ ಮತ್ತು ವಿಶ್ಲೇಷಣೆಕಾರ. ಜೊತೆಗೆ, ನನ್ನ ಒಳ್ಳೆಯ ಸ್ನೇಹಿತ ಕೂಡ. ಆದ್ದರಿಂದ, ಅವರು ಬರೆದಿರುವ ಲೇಖನದಲ್ಲಿ, ಮುಂದಿನ ರಾಷ್ಟ್ರವ್ಯಾಪಿ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಎದುರಾಳಿಯಾಗಿ ನಿಲ್ಲಲು ರಾಹುಲ್ ಗಾಂಧಿ ಸಮರ್ಥರಲ್ಲ ಎನ್ನುವುದಕ್ಕೆ ಕೊಟ್ಟಿರುವ ಐದು ಕಾರಣಗಳಿಗೆ ಪ್ರತಿಕ್ರಿಯಿಸುವುದು ಅನಿವಾರ್ಯವಾಗಿದೆ.

ನನ್ನ ಪ್ರಕಾರ, ಗುಹಾರವರ ಅಭಿಪ್ರಾಯಕ್ಕೆ ವಿಭಿನ್ನವಾಗಿ, 2024ರ ಚುನಾವಣೆ ಇನ್ನೂ ತುಂಬಾ ದೂರದಲ್ಲಿದೆ ಮತ್ತು ಆ ಹೊತ್ತಿಗೆ ಕಾಂಗ್ರೆಸ್, ಪ್ರತಿಪಕ್ಷಗಳು ಮತ್ತು ದೇಶದ ಮುಂದೆ ಹಲವಾರು ಆಯ್ಕೆಗಳಿರಬಹುದು. ಈ ದೆಸೆಯಲ್ಲಿ, ಗುಹಾರವರ ಲೇಖನದಲ್ಲಿ ಪ್ರಸ್ತಾಪಿಸಿದಕ್ಕಿಂತ, ನಮ್ಮ ಮುಂದಿರುವ ಸಮಸ್ಯೆಗಳು ಭಿನ್ನವಾಗಿವೆ.

ಆದರೆ, ಆ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೊದಲು, ಗುಹಾರವರ “ಐದು ಕಾರಣಗಳನ್ನು” ನಾನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಅವರು ಹೇಳುವಂತೆ, ರಾಹುಲ್ ಗಾಂಧಿ ನಿಷ್ಪçಯೋಜಕ ಚುನಾವಣಾ ಘೋಷಣೆಗಳನ್ನು ಮಾಡುತ್ತಾರೆ, ಅವರ ಹಿಂದಿ ಭಾಷಾ ಕೌಶಲ್ಯ ದುರ್ಬಲವಾಗಿದೆ. ಅವರಿಗೆ ಆಡಳಿತದ ಅನುಭವವಿಲ್ಲ, ಅವರಿಂದ ನಿರಂತರ ಕಠಿಣ ಪರಿಶ್ರಮ ಅಸಾಧ್ಯ ಮತ್ತು ಅವರಿಗೆ ವಂಶಾಡಳಿತದ ಜಾಡ್ಯವಿದೆ. ಗುಹಾರವರ ವಿಶ್ಲೇಷಣೆಯಂತೆ, ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾನ್ಯ ಜನರು ವಂಶಾಡಳಿತದ ಉತ್ತರಾಧಿಕಾರಿಯನ್ನು ಹಿಂದಿನ ಆಡಳಿತದ ವೈಫಲ್ಯಗಳಿಗೆ ದೂಷಿಸುತ್ತಾರೆ.

ನನ್ನ ಅನಿಸಿಕೆಯಂತೆ, ಗುಹಾರವರ ಹೇಳಿಕೆ ಮುಂದಿನ ಚುನಾವಣೆ ‘ಹಿಂದುತ್ವದ ವಿರುದ್ಧದ ಯುದ್ಧ’ ಎನ್ನುವುದು ಕೇವಲ ಚುನಾವಣಾ ಸಂಬOಧಿತ ಸಮಸ್ಯೆ. ಆದರೆ, ಇನ್ನೊಂದು ರಾಷ್ಟಿಯ ಚುನಾವಣೆಯನ್ನು ಎದುರಿಸುವ ಮೊದಲು, ಪ್ರಸ್ತುತ ನಮ್ಮ ಕಣ್ಣಮುಂದೆ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ನಾವು ಸೂಕ್ಷ್ಮವಾಗಿ ಗುರುತಿಸಬೇಕು. ಈಗ ನಡೆಯುತ್ತಿರುವುದು, ನಮ್ಮ ಪ್ರಜಾಪ್ರಭುತ್ವದ ಆಧಾರಸ್ತಂಭಗಳ ವ್ಯವಸ್ಥಿತ ನಿರ್ನಾಮ.

ಇದನ್ನು ಉದಾಹರಿಸುವುದಾದರೆ, ಲಕ್ಷಾಂತರ ಸಾಮಾನ್ಯ ಭಾರತೀಯರ ದೈನಂದಿನ ಜೀವನ ಮತ್ತು ಹಕ್ಕುಗಳ ಸಂಬOಧಿತ ಅರ್ಜಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಂದೂಡುವ ಸುಪ್ರೀಂ ಕೋರ್ಟ್, ಪ್ರತಿಪಕ್ಷದ ರಾಜಕಾರಣಿಗಳು ಮತ್ತು ಅವರ ಸಂಬOಧಿಕರ ಮೇಲೆ ಸರಿಯಾದ ಸಮಯದಲ್ಲಿ ದಾಳಿ ನಡೆಸುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಅಸಮರ್ಥವಾದ ಸಂಸತ್ತು, ಕೊಲೆಗಾರರನ್ನು ಬಂಧಿಸುವುದನ್ನು ಬಿಟ್ಟು ಕೊಲೆಯಾದ ವ್ಯಕ್ತಿಯ ರಕ್ತ ಸಂಬOಧಿಗಳನ್ನು ಬೆನ್ನಟ್ಟುವ ಪೊಲೀಸರು…

ಈ ಬೆಳವಣಿಗೆಗಳ ಮಧ್ಯೆ, ಪ್ರಸ್ತುತ ಪ್ರಧಾನ ಮಂತ್ರಿಯೊಬ್ಬರು ಸರ್ಕಾರಿ ಸ್ವಾಮ್ಯದ ಮಾಧ್ಯಮ ಮತ್ತು ಸರ್ಕಾರಿ ಹೂಡಿಕೆಗಳನ್ನು ದೇಶಾದ್ಯಂತ ಏಕಸ್ವಾಮ್ಯಗೊಳಿಸುತ್ತಿದ್ದಾರೆ, ಆದರೆ ತನಿಖಾ ವರದಿಗಾರರನ್ನು ಎದುರಿಸಲು ನಿರಾಕರಿಸುತ್ತಾರೆ. ಜೊತೆಗೆ, ಖಾಸಗಿ ಟಿವಿ ಚಾನೆಲ್‌ಗಳು ನಿರ್ದಿಷ್ಟ ಸಮುದಾಯಗಳ ವಿರುದ್ಧ ಸಮಾಜದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುತ್ತಿವೆ. ಅಲ್ಲದೆ, ವಿಶ್ವವಿದ್ಯಾಲಯಗಳ ಮೇಲೆ ಬೌದ್ಧಿಕ ಸ್ವಾತಂತ್ರ್ಯದ ರಾಜಿ ಮಾಡಿಕೊಳ್ಳಲು ಒತ್ತಡ ಹೇರಲಾಗುತ್ತಿವೆ. ಮಾತ್ರವಲ್ಲ, ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಪೊಲೀಸರ ಲಾಠಿ ಏಟಿನಿಂದ ಹತ್ತಿಕ್ಕಲಾಗುತ್ತಿದೆ.

ಈ ವಾಸ್ತವತೆಯ ಬಗ್ಗೆ ಚೆನ್ನಾಗಿ ಅರಿವಿದ್ದರೂ, ಗುಹಾರವರು ಮುಂದಿನ ಚುನಾವಣಾ ಸವಾಲಿಗೆ ಅನಗತ್ಯ ಮಹತ್ವ ಕೊಡುತ್ತಿದ್ದಾರೆ. ಇಲ್ಲಿನ ಮುಖ್ಯ ಪ್ರಶ್ನೆ, ಅವರು ಸೂಚಿಸುವಂತೆ ಭವಿಷ್ಯದ ಚುನಾವಣಾ ಯುದ್ಧವು ನ್ಯಾಯಸಮ್ಮತವಾಗಿ ನಡೆಯಲಿದೆಯೇ?

ಈ ನಿಟ್ಟಿನಲ್ಲಿ ನಾವು ಯೋಚಿಸಬೇಕಾದುದು, ವಿರೋಧ ಪಕ್ಷಗಳು ಚುನಾವಣೆಗೆ ಎಲ್ಲಿಂದ ಆರ್ಥಿಕ ಬಂಡವಾಳ ಹೊಂದಿಸುತ್ತವೆ? ಟಿವಿ ಚಾನೆಲ್‌ಗಳಲ್ಲಿ ನ್ಯಾಯಯುತ ಚರ್ಚೆಗಳು ನಡೆಯಲಿವೆಯೇ? ಪ್ರತಿಪಕ್ಷದ ಅಭ್ಯರ್ಥಿಗಳು, ಅವರ ಸಂಬOಧಿಕರು ಮತ್ತು ಬೆಂಬಲಿಗರು ದೇಶದ ಆದಾಯ ತೆರಿಗೆ ಅಧಿಕಾರಿಗಳ ದಾಳಿಗಳನ್ನು, ಹಿಂಸಾಚಾರ ಪ್ರಚೋದಿಸುವ ಅಥವಾ ದೇಶದ್ರೋಹದ ಅಪರಾಧ ಆರೋಪಗಳನ್ನು ಅಥವಾ ದೈಹಿಕ ಬೆದರಿಕೆಗಳನ್ನು ಹೇಗೆ ಎದುರಿಸುತ್ತಾರೆ?

ಇಲ್ಲಿಯವರೆಗೆ, ದೇಶದ ಮತದಾನ ಪ್ರಕ್ರಿಯೆ ಭಾರತದ ಚುನಾವಣಾ ಆಯೋಗಕ್ಕೆ (ಮತ್ತು ಈ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಲಕ್ಷಾಂತರ ಸರ್ಕಾರಿ ನೌಕರರಿಗೆ) ಒಂದು ಗೌರವ ತಂದಿದೆ. ಇದುವರೆಗಿನ ಹೆಚ್ಚಿನ ಚುನಾವಣಾ ಫಲಿತಾಂಶಗಳು ಜನಸಾಮಾನ್ಯರ ಅಭಿಪ್ರಾಯವನ್ನು ಪ್ರತಿಬಿಂಬಿಸಿವೆ. ಆದರೆ, ಭವಿಷ್ಯದಲ್ಲಿಯೂ ಹೀಗೆಯೇ ನಡೆಯುತ್ತದೆ ಎಂದು ಖಚಿತವಾಗಿ ಹೇಳಬಹುದೇ?

ಒಂದು ವೇಳೆ, ಈ ನಂಬಿಕೆಯ ಆಧಾರದ ಮೇಲೆ 2024ರ ಚುನಾವಣೆ ಎದುರಿಸಿದರೂ, ಆಗ ಅಭ್ಯರ್ಥಿಗಳ ವಾಕ್ಚಾತುರ್ಯ ಕೌಶಲ್ಯ ಮತ್ತು ಸ್ಥೈರ್ಯ ಹಿಂದೆOದಿಗಿOತಲೂ ಮುಖ್ಯವಾಗಿರುತ್ತದೆ. ಈ ದೆಸೆಯಲ್ಲಿ ಪರಿಶೀಲಿಸಿದರೆ, ರಾಹುಲ್ ಗಾಂಧಿಯಲ್ಲಿ ಈ ಗುಣಗಳ ಕೊರತೆಯಿಲ್ಲ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ.

ರಾಜಕೀಯ ಮತ್ತು ಇತಿಹಾಸದ ಪರಿಣತ ವಿದ್ವಾಂಸರಾದ ಗುಹಾರವರು ರಾಹುಲ್ ಗಾಂಧಿಯವರ ಈ ಗುಣಗಳನ್ನು ಒಪ್ಪಿಕೊಳ್ಳಬಹುದೆನಿಸುತ್ತದೆ. ನನ್ನ ಅನಿಸಿಕೆಯಂತೆ, ರಾಹುಲ್ ಗಾಂಧಿ ನ್ಯಾಯಸಮ್ಮತಕ್ಕಾಗಿ ಬಳಸಿದ ವಿಡಂಬನೆ `ಸೂಟ್-ಬೂಟ್-ಕಿ-ಸರ್ಕಾರ್’ ಸಾಕಷ್ಟು ಪರಿಣಾಮಕಾರಿ ಘೋಷಣೆಯಾಗಿತ್ತು. ಅಂತೆಯೇ, `ಚೌಕಿದಾರ್ ಚೋರ್ ಹೈ’ ಘೋಷಣೆ ಗೆಲುವನ್ನು ತರಲಿಲ್ಲವೆಂದು ಅವರ ಅನೇಕ ಬೆಂಬಲಿಗರು ಹೇಳಿಕೆ ನೀಡಿದರು. ಆದರೆ, ರಾಹುಲ್ ಗಾಂಧಿಯ ಈ ಹೇಳಿಕೆಗಳು, ಮೋದಿಯ ಬೃಹದಾಕಾರದ ಟೊಳ್ಳು ವ್ಯಕ್ತಿತ್ವವನ್ನು ಸಾಕಷ್ಟು ಮಂದಿ ಭಾರತೀಯರಲ್ಲಿ ಪಂಕ್ಚರ್ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿವೆ.

ಚುನಾವಣೆಗಳು ಬರುತ್ತಿರುತ್ತವೆ, ಆಗ ರಾಜಕಾರಣಿಗಳನ್ನು ಸ್ಥಾನದಿಂದ ಕೆಳಗಿಳಿಸುವುದು ಅನಿವಾರ್ಯ ಮತ್ತು ಪ್ರಜಾಪ್ರಭುತ್ವದಲ್ಲಿ ಅಗತ್ಯ ಕೂಡ ಹೌದು. ಈ ನಿಟ್ಟಿನಲ್ಲಿ, ಇಂದಿನ ಭಾರತದ ವಿಮರ್ಶಾತ್ಮಕ ವ್ಯಾಖ್ಯಾನಕಾರರೆಂದು ಭಾವಿಸುವ ನಾವೆಲ್ಲರೂ ನಮ್ಮ ಪಾತ್ರವನ್ನು ಮರುಪರಿಶೀಲಿಸಬೇಕಾಗಬಹುದು ಎಂದು ನನ್ನ ಅನಿಸಿಕೆ.

ಈ ದೆಸೆಯಲ್ಲಿ, ನಿಜವಾದ ಹೋರಾಟವನ್ನು ಸಂಘಟಿಸ ಬಯಸುವ ಪ್ರತಿಯೊಬ್ಬ ವ್ಯಕ್ತಿ, ಅಪಾರ ಸಂಪನ್ಮೂಲಗಳನ್ನು ಹೊಂದಿರುವ ಶಕ್ತಿಗಳಿಂದ ನಿರಂತರ ದಾಳಿಗೆ ಗುರಿಯಾಗಿಯೂ, ದೇಶದ ಸಂವಿಧಾನದ ಮೌಲ್ಯಗಳಾದ ಪ್ರಜಾಪ್ರಭುತ್ವ, ಅಭಿವ್ಯಕ್ತ ಸ್ವಾತಂತ್ರ್ಯ ಜಾತ್ಯತೀತತೆ ಮತ್ತು ಬಹುತ್ವವನ್ನು ರಕ್ಷಿಸುವ ಉನ್ನತ ಕಾರ್ಯದಲ್ಲಿ ಕೈಜೋಡಿಸುತ್ತಾನೆ. ಇಂತಹ ವ್ಯಕ್ತಿ, ಕಾಂಗ್ರೆಸ್ ಅಥವಾ ಪ್ರತಿಪಕ್ಷಗಳಲ್ಲಿ ರಾಹುಲ್ ಗಾಂಧಿ ಒಬ್ಬರೇ ಎಂದು ನಾನು ಹೇಳುತ್ತಿಲ್ಲ. ಆದರೆ, ಅವರು ದಿನಂಪ್ರತಿ ಹೋರಾಟವನ್ನು ನಡೆಸುತ್ತಿದ್ದಾರೆ. ಅದಕ್ಕಾಗಿ ನಾನು ಅವರನ್ನು ಪ್ರೀತಿಸುತ್ತೇನೆ ಮತ್ತು ಮೆಚ್ಚುತ್ತೇನೆ.

ನನ್ನ ಅಭಿಪ್ರಾಯದಲ್ಲಿ, ಇಂದು ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಕೆಲಸ ಮಾಡುವ ಎಲ್ಲರೂ ಮಿತ್ರರಂತೆ. ಅವರು ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಎನ್‌ಸಿಪಿ, ಟಿಎಂಸಿ, ಡಿಎಂಕೆ, ಶಿವಸೇನೆ, ಮುಸ್ಲಿಂ ಲೀಗ್, ಬಿಜೆಪಿ ಅಥವಾ ಜೆಡಿಯುನಲ್ಲೇ ಇರಲಿ, ಅದು ಅಪ್ರಸ್ತುತ. ಅವರು, ಶ್ರೀಮಂತ ಅಥವಾ ಬಡವ, ದಲಿತ ಅಥವಾ ಬ್ರಾಹ್ಮಣ, ರಜಪೂತ ಅಥವಾ ಇತರ ಹಿಂದುಳಿದ ವರ್ಗದವರು, ಅಥವಾ ಇನ್ಯಾವುದೇ ಆಗಿರಲಿ. ಅವರು, ಹಿಂದೂ, ಸಿಖ್, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ನಾಸ್ತಿಕ, ಏನೇ ಆಗಿರಲಿ, ಪರವಾಗಿಲ್ಲ. ಅವರು, ಅನಾಮಧೇಯ ಅಥವಾ ರಾಜವಂಶದವರಾದರೂ. ಪರವಾಗಿಲ್ಲ. ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಬೆಂಬಲಿಸುತ್ತೇನೆ ಮತ್ತು ಈ ಕಾರ್ಯ ಮಾಡುವ ಎಲ್ಲ ವ್ಯಕ್ತಿಗಳಲ್ಲಿ ಪರಸ್ಪರ ಸದ್ಭಾವನೆ ಮೂಡಲೆಂದು ನಾನು ಮೌನವಾಗಿ ಪ್ರಾರ್ಥಿಸುತ್ತೇನೆ.

ಕಾಲ ಕೂಡಿ ಬಂದಾಗ, ಸಾರ್ವಜನಿಕ ಒತ್ತಡವು ಕೂಡ ರಾಜಕೀಯ ಏಕತೆಯನ್ನು ಒತ್ತಾಯಿಸುತ್ತದೆ. ಜೊತೆಗೆ, ನಿರಂಕುಶ ಪ್ರಭುತ್ವದ ವಿರುದ್ಧ ಚುನಾವಣಾ ಮೈತ್ರಿಯನ್ನು ಮುನ್ನಡೆಸಲು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ.

ಕೊನೆಯದಾಗಿ, ಮಹಾ ಚುನಾವಣೆಯೆನ್ನುವ ಟೆಸ್ಟ್ ಪಂದ್ಯ ಇನ್ನೂ ಸ್ವಲ್ಪ ದೂರದಲ್ಲಿವೆ, ಆದರೆ ಪ್ರತಿದಿನ ವಿಶೇಷ ಸ್ಪರ್ಧೆಗಳು ನಡೆಯುತ್ತಿವೆ. ವಿಷಾದವೆಂದರೆ, ಇಂದು ಆಡಲು ಪಿಚ್ ಕಠಿಣವಾಗಿದೆ, ಬೆಳಕು ಮಂದವಾಗಿದೆ, ಬಿರುಗಾಳಿ ಮತ್ತು ಜಡಿಮಳೆ ಬೀಸುತ್ತಿದೆ, ಮತ್ತು ಅಂಪೈರ್‌ಗಳು ಎಷ್ಟು ನಿಷ್ಪಕ್ಷಪಾತರು ಎಂಬುದು ಕೂಡ ಸ್ಪಷ್ಟವಾಗಿಲ್ಲ. ಆದರೂ, ರಾಹುಲ್ ಗಾಂಧಿ ಧೈರ್ಯವಾಗಿ ಆಡುತ್ತಿದ್ದಾರೆ. ಅದಕ್ಕಾಗಿ, ಅವರಿಗೆ ನನ್ನ ಅಭಿನಂದನೆಗಳು. ಭೇಷ್!

ಮೂಲ: ಎನ್.ಡಿ.ಟಿ.ವಿ. ಅನು: ಡಾ.ಜ್ಯೋತಿ

*ಲೇಖಕರು ಭಾರತೀಯ ಇತಿಹಾಸಕಾರರು; ಅಮೆರಿಕೆಯ ಇಲಿನೋಯಿಸ್ ವಿವಿಯಲ್ಲಿ ಪ್ರಾಧ್ಯಾಪಕರು. ಮಹಾತ್ಮಾ ಗಾಂಧಿ ಮತ್ತು ಸಿ.ರಾಜಗೋಪಾಲಾಚಾರಿ ಅವರ ಮೊಮ್ಮಗ.

Leave a Reply

Your email address will not be published.