ರಿಷಬ್ ಶೆಟ್ಟಿ

ಸಂದರ್ಶನ: ಎಂ.ಡಿ.ಕವಿತಾ ಗುಣೋದಯ

‘ನಿಗೂಢತೆ ತೋರಿಸಿ ಅವಾರ್ಡ್ ಪಡೆವ ಬಯಕೆ ನನಗಿಲ್ಲ!’ 

-ರಿಷಭ್ ಶೆಟ್ಟಿ

‘ಸರಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ರಾಮಣ್ಣರೈ ಕೊಡುಗೆ’ ಹಲವು ಕಾರಣಗಳಿಂದಾಗಿ ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ. ವಿಜಯದ ಸಿದ್ಧಸೂತ್ರಗಳ ಬೆನ್ನುಹತ್ತಿ ಹೊರಡುವ ಸಿನಿಮಾಮಂದಿಗಿಂತ ಈ ಸಿನಿಮಾ ಭಿನ್ನ. ಕನ್ನಡ ಭಾಷೆ, ಸಂಸ್ಕೃತಿ, ವಿಶೇಷವಾಗಿ ಶಿಕ್ಷಣರಂಗ ಹಾಗೂ ಕನ್ನಡ ಸರಕಾರಿ ಶಾಲೆಯ ದುರಂತಾವಸ್ಥೆಯನ್ನು ವಿಭಿನ್ನ ನೆಲೆಯಲ್ಲಿ ಅನಾವರಣಗೊಳಿಸಿರುವುದು ಈ ಚಿತ್ರದ ವೈಶಿಷ್ಟ್ಯ. ಪರ-ವಿರೋಧ ಅಂಶಗಳ ಕುರಿತು ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಅವರು ‘ಸಮಾಜಮುಖಿ’ ಜೊತೆಗೆ ಮುಕ್ತವಾಗಿ ಮಾತನಾಡಿದ್ದಾರೆ.

ಒಂದು ಉತ್ತಮ ಪಯತ್ನಕ್ಕಾಗಿ ಸಮಾಜಮುಖಿ ತಮ್ಮನ್ನು ಅಭಿನಂದಿಸುತ್ತದೆ.

ಥ್ಯಾಂಕ್ಯು ಸರ್. ಒಳ್ಳೆಯ ಪ್ರಯತ್ನವನ್ನು ತಮ್ಮಂಥವರು ಗುರುತಿಸುತ್ತೀರಲ್ಲ, ಅದು ನಂಗೆ ಖುಷಿ ಅನಿಸ್ತದೆ. ಅದಕ್ಕಾಗಿ ಮತ್ತೊಮ್ಮೆ ಥ್ಯಾಂಕ್ಸ್.

ಗಾಂಧೀನಗರ ಸಿನಿಮಾಗಳ ಮಸಾಲೆ ಸೂತ್ರ ಗೊತ್ತಿರೋದೇ. ಆದರೆ ನಿಮ್ಮ ಈ ಚಿತ್ರ ಎಲ್ಲ ಆಯಾಮಗಳಿಂದ ಭಿನ್ನವಾಗಿದೆ. ಇದರ ಹಿಂದಿನ ತಯಾರಿ ಬಗ್ಗೆ ಹೇಳಿ.

ಮೂರು ವರ್ಷಗಳ ಹಿಂದಿನಿಂದಲೂ ಚಿತ್ರಕತೆಯ ಬಗ್ಗೆ ನಂಗೆ ವಿಶೇಷ ಆಸ್ಥೆ ಇತ್ತು. ಹೇಗಾದರೂ ಮಾಡಿ ಚಿತ್ರಕತೆಯನ್ನು ಯಾರೂ ಮಾಡದ ಹಾಗೆ, ಕನ್ನಡ ಪ್ರೇಕ್ಷಕರಿಗೆ ಹೊಸ ರೀತಿಯಲ್ಲಿ ತೋರಿಸಬೇಕೆನಿಸಿತು. ಅದೇ ಸಂದರ್ಭದಲ್ಲಿ ಬೇರೆಬೇರೆ ಕಾರಣಗಳನ್ನು ನೀಡಿ ಸರಕಾರವೇ ಸರಕಾರಿ ಶಾಲೆಗಳನ್ನು ಮುಚ್ಚಲು ಆರಂಭಿಸಿತ್ತು. ನಿಮಗೆ ನೆನಪಿರಬಹುದು. ಬಹುತೇಕ ಪ್ರತಿಭಾವಂತರು, ಪ್ರಸಿದ್ಧಿ ಪಡೆದವರು ಸರಕಾರಿ ಶಾಲೆಗಳಲ್ಲೇ ಓದಿದ್ದಾರೆ. ಆದರೆ ಇತ್ತೀಚೆಗಿನ ಖಾಸಗಿ ಶಾಲೆಗಳ ಫ್ಯಾಷನಬಲ್ ಆಕರ್ಷಣೆಗೆ ಒಳಗಾದ ಪೋಷಕರೂ ಸರಕಾರಿ ಶಾಲೆಗಳತ್ತ ಗುಮಾನಿಯಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದೊಂದು ಸನ್ನಿ. ಬಡವರು, ಮಧ್ಯಮವರ್ಗದವರು, ಸಮಾಜದಲ್ಲಿನ ಹಿಂದುಳಿದವರು ಪಡುವ ಕಷ್ಟಕೋಟಲೆ ಅಷ್ಟಿಷ್ಟಲ್ಲ. ಇದೆಲ್ಲವನ್ನೂ ಸಾಧ್ಯವಾದಷ್ಟು ಜನರಿಗೆ, ಪ್ರಜ್ಞಾವಂತರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಅದರ ಒಂದು ಸಣ್ಣ ಪ್ರಯತ್ನವೇ ಈ ಚಿತ್ರ.

ಕಾಸರಗೋಡಿನ ಸಂಸ್ಕೃತಿಗೂ, ಚಿತ್ರದಲ್ಲಿ ತೋರಿಸಿರುವ ಕೆಲವು ಅಂಶಗಳಿಗೂ ಬಹಳಷ್ಟು ಭಿನ್ನತೆ ಇದೆ ಎಂಬ ದೂರು ಇದೆಯಲ್ಲ..?

ಒಂದು ವಿಷಯವನ್ನು ಇಲ್ಲಿ ಸ್ಪಷ್ಟ ಪಡಿಸುವೆ. ಇದು ಕಾಸರಗೋಡು, ಅಲ್ಲಿನ  ಸಂಸ್ಕೃತಿ ಕುರಿತ ಸಿನಿಮಾ ಅಲ್ಲ. ರಾಷ್ಟ್ರಕವಿ ಗೋವಿಂದಪೈ ಅವರಿಂದ ಹಿಡಿದು, ಕಕ್ಕಿಲ್ಲಾಯ, ಮಂಜೇಶ್ವರ ಸೇರಿದಂತೆ ಬಹು ಪ್ರಾಮಾಣಿಕ ಹೋರಾಟಗಾರರು, ಕವಿಗಳು, ವೈವಿಧ್ಯಮಯ
ಸಂಪ್ರದಾಯವನ್ನು ಒಂದು ಸಣ್ಣ ಚಿತ್ರದಲ್ಲಿ ಅಳವಡಿಸಲಾಗದು. ಅದರ ಪರಂಪರೆಯನ್ನು ತೆರೆಗೆ ತರಬೇಕಾದರೆ ಎಂಟೆದೆ ಬೇಕು. ನನ್‍ಚಿತ್ರ ಪ್ಯೂರ್‍ಲಿ ಕನ್ನಡ ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ, ಶಿಕ್ಷಣ ರಂಗದ ಸ್ಥಿತಿ-ಗತಿ ಬಗ್ಗೆ ಮಾಡಿದ ಸಿನಿಮಾ. ಕಾಸರಗೋಡು ಇದಕ್ಕೆ ಬೇಸ್ ಆಗಿ ಬಂದಿದೆ ಅಷ್ಟೇ. ಎಷ್ಟೋ ಪ್ರಜ್ಞಾವಂತರು ಈ ಅಂತರ ಅರಿಯದೇ ವಿಮರ್ಶೆ ಮಾಡಿದ್ದಾರೆ. ಅಂಥವರಿಂದ ನನಗೆ ಮತ್ತೆ ಮತ್ತೆ ಹೊಸ ಚಿಂತನೆಗೆ ಪ್ರೇರಣೆಯಾಗಿದೆ. ಸಮಾಜವನ್ನು, ಚಿತ್ರರಂಗವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವುದಕ್ಕೆ ಕಾರಣವಾಗುತ್ತದೆ.

ಚಿತ್ರದಲ್ಲಿನ ಕೋಳಿ ಕದಿಯುವುದು, ಯಕ್ಷಗಾನ ಪಾತ್ರಧಾರಿ ಮಲಯಾಳಿ ಶಿಕ್ಷಕನನ್ನು ಕೊಲ್ಲೋಕೆ ಹೋಗೋದು ಇತ್ಯಾದಿ ಪ್ರಸಂಗಗಳೂ ಕಾಸರಗೋಡು ಪರಿಸರಕ್ಕೆ ವಿರುದ್ಧವಾಗಿವೆ ಎನ್ನುತ್ತಾರಲ್ಲ..

ಮನುಷ್ಯನ ತುಂಟಾಟ ಎಲ್ಲಿರಲ್ಲ ಹೇಳಿ? ಈಗಾಗಲೇ ಹೇಳಿದಂತೆ ನನ್ನ ಸಿನಿಮಾವನ್ನು ಕಾಸಗರಗೋಡು ಸಂಸ್ಕೃತಿಕ ಹಿನ್ನೆಲೆಯಲ್ಲಿ ನೋಡಬೇಡಿ. ಇದೊಂದು ಸಿನಿಮಾ ಥರ ವೀಕ್ಷಿಸಿ. ಇಲ್ಲಿ ಬರುವ ಕೆಲವು ಸನ್ನಿವೇಶಗಳು ಸಿಂಬಲ್ ಅಷ್ಟೇ. ಅದುವೇ ಆಯಾ ಪ್ರಾಂತ್ಯದ ಸಂಸ್ಕೃತಿಕ ಸಂಘರ್ಷವಲ್ಲ. ಸಂಪ್ರದಾಯದ ಅನಾವರಣವಲ್ಲ. ಒಂದು ಸಿನಿಮಾವನ್ನು ಸಿನಿಮಾ ಥರ ನೋಡಿದಾಗ ಇದಾವುದೂ ಹಾಗೆ ಕಾಣಿಸಲ್ಲ. ಯಕ್ಷಗಾನದ ಪಾತ್ರಧಾರಿಯ ಕತೆಯೂ ಇದೇ ರೀತಿಯದ್ದು. ಬೇಸಿಕ್ ಆಗಿ ಕರಾವಳಿ ಭಾಗದಲ್ಲಿದ್ದವರಿಗೆ ಯಕ್ಷಗಾನದ ಆಳ ಅಗಲದ ಪರಿಚಯವಿರುತ್ತದೆ. ಚಿತ್ರದ ಯಕ್ಷಗಾನ ಪಾತ್ರಧಾರಿಯದ್ದು ಭಸ್ಮಾಸುರ-ಮೋಹಿನಿ ಪ್ರಸಂಗ. ರಾತ್ರಿ ಇಡೀ ಪ್ರಸಂಗ ನಡೆದು ಬೆಳಗಿನ ಜಾವ ಆರುಗಂಟೆಯ ಬಳಿಕ ಕತೆ ಪೂರ್ಣಗೊಂಡ ಮೇಲೆ ಚೌಕಿಗೋ, ಮನೆಗೋ ಹೋಗೋದು ರೂಢಿ. ಅದೇ ವೇಳೆ ಶಾಲಾ ವಿಷಯ ಗಮನಕ್ಕೆ ಬಂದ್ಮೇಲೆ ಗಾಡಿಯಲ್ಲಿ ಹೋಗೋದು ಸಾಮಾನ್ಯ. ಇದನ್ನೆಲ್ಲಾ ಭಾವನಾತ್ಮಕವಾಗಿ ತರ್ಕಿಸುವ ಬದಲು ಸಿನಿಟೈಪ್ ಯೋಚಿಸಿದಾಗ ಎಲ್ಲವೂ ಕ್ಲಿಯರ್ ಆಗುತ್ತೆ.

ಪಾತ್ರಗಳ ನೈಜತೆ, ಆಯ್ಕೆ ಪ್ರಕ್ರಿಯೆ..?

ವರ್ತಮಾನದ ಶಿಕ್ಷಣ ಸಮಸ್ಯೆ ಹೊರತಾಗಿ ಹಲವು ಪಾತ್ರಗಳು ನೈಜತೆಗೆ ಪ್ರತಿರೂಪವಾಗಿವೆ. ಮಕ್ಕಳ ತುಂಟಾಗ, ಹಾಸ್ಯ ಸಂಭಾಷಣೆ, ಭಾವನಾತ್ಮಕ ಸನ್ನಿವೇಶ ನನ್ನ ಸುತ್ತಮುತ್ತ ನಡೆದ ಘಟನಾವಳಿಗಳೇ..! ಹೀರೋ (ಹುಡುಗ)ನ ಪಾತ್ರ, ಉಪಾಧ್ಯಾಯನ ಪಾತ್ರ, ಹೆಡ್‍ಮಾಸ್ತರ್, ಭುಜಂಗಯ್ಯ.. ಹೀಗೆ ಅನೇಕ ಪಾತ್ರಗಳು ನೈಜ ಘಟನಾವಳಿಗಳೇ. ಹಿರಿಯ ನಟ ಅನಂತ್‍ನಾಗ್ ಹೊರತಾಗಿ ಹಲವು ಪಾತ್ರಧಾರಿಗಳನ್ನು ಆಯ್ಕೆ ಮಾಡಲು ಕಾಸರಗೋಡಿನಲ್ಲೇ ಅಡಿಷನ್ ಮಾಡಿದೆ. ಆಯ್ಕೆಯಾದವ ರಿಗೆ ತರಬೇತಿಯನ್ನೂ ಕೊಟ್ಟೆ. ಇದರಿಂದ ಪಾತ್ರಗಳಿಗೆ ಅವರು ಜೀವ ತುಂಬಲು ಕಾರಣವಾಯಿತು.

ಕಾಸರಗೋಡಿನಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿನ ಜನ, ಅಧಿಕಾರಿಗಳ ಸಹಕಾರ ಹೇಗಿತ್ತು?

ಅಲ್ಲಿ ನನಗೆ ಎಲ್ಲಾ ರೀತಿಯಲ್ಲೂ ಸಹಕಾರ ಸಿಕ್ಕಿತು. ವಿಶೇಷವಾಗಿ ಕಾಸರಗೋಡಿನ ಜನ ಕಲಾಪ್ರಿಯರು. ಷೂಟಿಂಗ್ ನಡೆದಷ್ಟೂ ಕಾಲ ನನಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಕಾಸರಗೋಡಿನ ಅಧಿಕಾರಿಗಳಿಂದ ಎಲ್ಲಿಲ್ಲದ ಪ್ರೋತ್ಸಾಹ ಸಿಕ್ಕಿತು. ಮಲಯಾಳಿ ಜನರು ಪ್ರಮುಖವಾಗಿ ಸಿನಿಮಾವನ್ನು ಸಿನಿಮಾ ಥರ ನೋಡ್ತಾರೆ. ಇದು ನಂಗೆ ಇಂಟ್ರಸ್ಟ್ ಅನಿಸಿತು.

ಅಕ್ಷರಸ್ಥರ ಸುಶಿಕ್ಷಿತರ ನಾಡು ಖ್ಯಾತಿಯ ಕೇರಳದಲ್ಲಿ ತಾವು ತೋರಿಸಿದ ರೀತಿಯಲ್ಲಿ ಭ್ರಷ್ಟ ಅಧಿಕಾರಿಗಳಿರಲು ಸಾಧ್ಯವೇ?

ಭ್ರಷ್ಟ ಅಧಿಕಾರಿಗಳು ಎಲ್ಲಿಲ್ಲ ಹೇಳಿ? ಒಂದು ಸಣ್ಣ ಗ್ರಾಮದ ಗ್ರಾಮಲೆಕ್ಕಿಗನಿಂದ ಹಿಡಿದು ಐಎಎಸ್, ಐಪಿಎಸ್ ಅಧಿಕಾರಿಗಳವರೆಗೆ ಎಷ್ಟೋ ಭ್ರಷ್ಟ ಅಧಿಕಾರಿಗಳಿಲ್ಲವೇ? ಪ್ರತಿದಿನ ಪ್ರತಿಕ್ಷಣ ಭ್ರಷ್ಟಾಚಾರ ನಡೆಯುವುದಿಲ್ಲವೇ? ಇಷ್ಟಕ್ಕೂ ನಾನು ಹೇಳಲು ಹೊರಟಿರುವ ಥೀಮ್ ಕಡೆ ಒಮ್ಮೆ ಯೋಚಿಸಿ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಮಾನತೆ ಅಗತ್ಯ. ಸಮಾನ ಶಿಕ್ಷಣ ಇಲ್ಲದೆ ಸಮಾನತೆ ಅಸಾಧ್ಯ. ಸರಕಾರಿ ಶಾಲೆಗಳೆಲ್ಲಾ ಸ್ಥಗಿತವಾದರೆ ಸಮಾಜ ಹೇಗಿರುತ್ತೆ ಅಂತ ಒಂದ್ಸಲ ಯೋಚಿಸಿ. ಕತೆಯ ಉದ್ದಕ್ಕೂ ಇದೇ ಅಂಶದ ಕಡೆ ಒತ್ತು ನೀಡಿರುವೆ. ಆ ಬಗ್ಗೆ ಚರ್ಚೆ ಆದರೆ ಒನ್ಸ್ ಅಗೈನ್ ತುಂಬ ಸಂತೊಷವಾಗುತ್ತೆ.

ಅಲ್ಲಿನ ಹೋರಾಟಕ್ಕೆ ಅಂದರೆ ಶಾಲೆ ಉಳಿಸೋಕೆ ಮಕ್ಕಳ ಬಳಕೆ ಆದ ಪರಿ ವಿಚಿತ್ರ ಅನ್ನಿಸುತ್ತೆ?

ಈಗಾಗಲೇ ಹೇಳಿದಂತೆ ಸಿನಿಮಾವನ್ನು ಸಿನಿಮಾ ಥರ ನೋಡಿದರೆ ಇಂಥ ಪ್ರಶ್ನೆ ಉದ್ಭವಿಸೋಲ್ಲ. ಆದರೂ ಈ ಕುರಿತು ಹೇಳಲು ಇಷ್ಟಪಡ್ತೀನಿ. ನಮ್ ಸಿನಿಮಾ ಕಾಸರಗೋಡು ಹೋರಾಟದ್ದಲ್ಲ. ಅದನ್ನ ಆಗಲೇ ಸ್ಪಷ್ಟಪಡಿಸಿರುವೆ. ಸರಕಾರ ಹೊಸತೇನು ಮಾಡದಿದ್ರೂ ಚಿಂತೆ ಇಲ್ಲ. ಇರೋ ಸಿಸ್ಟಮ್‍ನ ಆಚೆ ಈಚೆ ಮಾಡಿದಾಗ ಏನೆಲ್ಲಾ ತೊಂದ್ರೆ ಆಗುತ್ತೇಂತ ಮೊದಲು ಯೋಚಿಸ್ಬೇಕು. ಹಾಗಾಗಿ ಇಲ್ಲಿನ ಹೋರಾಟ ಶಾಲೆಗಾಗಿ ಹೋರಾಟ. ಮಕ್ಕಳೇ ಅದಕ್ಕೆ ಮೂಲ. ಅದನ್ನು ತೀರಾ ಸಾಂಕೇತಿಕವಾಗಿ ತೋರಿಸಿದ್ದೇನೆ ಅಷ್ಟೇ. ಎಲ್ಲಾ ನದಿಗಳು ಸಮುದ್ರ ಸೇರಿದಹಾಗೆ ಎಲ್ಲಾ ಹೋರಾಟಗಳೂ ಚಿಕ್ಕ ಅಂಶಗಳಿಂದಲೇ ಆರಂಭವಾಗುತ್ತವೆ. ಇಲ್ಲಿ ದೊಡ್ಡವರು, ಚಿಕ್ಕವರ ಭೇದ ಅನಗತ್ಯ.

ಸಿನಿಮಾ ಬಂದಮೇಲೆ ಕಾಸರಗೋಡು ಹಾಗೂ ಅಲ್ಲಿನ ಹೋರಾಟದ ಪರಿಯೇ ಬೇರೆ ಆಗಿದೆ ಅನ್ನಿಸಲ್ವಾ?

ನಾನು ಅದನ್ನೇ ಕೇಳ್ತಾ ಇದ್ದೀನಿ. ನನ್ ಸಿನಿಮಾ ಬರೋವರೆಗೂ ಕಾಸರಗೋಡಿನಲ್ಲಿರುವ ಕನ್ನಡಿಗರನ್ನು ನೋಡುವ ರೀತಿಗೂ, ಸಿನಿಮಾ ಬಂದಾದ ನಂತರದ ದ್ರಷ್ಟಿಕೋನಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ. ಎಷ್ಟಿದ್ರೂ ಸಿನಿಮಾ ಮಾಧ್ಯಮದ ಪ್ರಭಾವವೇ ಬೇರೆ.

ಫಣಿಕ್ಕರ್‍ನಂಥ ಪಾತ್ರ ಸೃಷ್ಟಿಯ ಹಿಂದೆ ಏನಾದ್ರೂ ವಿಶೇಷವಿದೆಯೇ?

ಫಣಿಕ್ಕರ್ ಒಬ್ಬ ವ್ಯಕ್ತಿಯಾಗಿ ಅಲ್ಲ. ಅದೊಂದು ವ್ಯವಸ್ಥೆಯಾಗಿ ನೋಡುವುದು ಸೂಕ್ತ. ಈಗಲೂ ನೀವು ಗೂಗಲ್‍ಗೆ ಹೋಗಿ ಫಣಿಕ್ಕರ್ ಸಲ್ಲಿಸಿರುವ ವರದಿಯ ಬಗ್ಗೆ ಸರ್ಚ್ ಕೊಡಿ. ಎಲ್ಲವೂ ತೆರೆದುಕೊಳ್ಳುತ್ತದೆ. ನನಗೆ ಆರಂಭದಿಂದಲೂ ಈ ಫಣಿಕ್ಕರ್ ಕ್ಯಾರೆಕ್ಟರ್ ವಿಲನ್ ಆಗಿಯೇ ಕಾಡಿದೆ. ಸನ್ನಿವೇಶಗಳೂ, ಸಂದರ್ಭಗಳೂ ಇದಕ್ಕೆ ಪೂರಕವಾಗಿಯೇ ಸ್ಪಂದಿಸಿವೆ. ಸಿನಿಮಾದಲ್ಲಿಯೂ ಅದೇ ಸ್ಥಿತಿ ಬಂದಿರುವುದು ಒಂದು ಕೊ ಇನ್ಸಿಡೆಂಟ್. ಆದರೂ ಅದೇ ಹೈಲೈಟ್ ಆಯಿತು.

ಕತೆಯ ಓಘಕ್ಕೆ ಪೂರಕವಾಗಿ ಸಂಗೀತ ಮಿಡಿದಿದೆ. ಇದರ ಆಯ್ಕೆಯ ಹಿಂದಿನ ಆಶಯ ಹೇಳಿ!

ಚಿತ್ರದಲ್ಲಿರುವ ಬಹುತೇಕ ಹಾಡುಗಳೂ ಕತೆಗೆ ತಕ್ಕಂತೆ ಇವೆ. ನಿಮಗೆ ಒಂದು ವಿಷಯವನ್ನು ಇಲ್ಲಿ ಹೇಳಬೇಕು. ಅರ್ಧಾಗಂಟೆವರೆಗೆ ಒಂದು ಸೀನ್ ತೋರ್ಸೋಕೆ ಹೋದ್ರೆ ಪ್ರೇಕ್ಷಕರಿಗೆ ಬೋರ್ ಆಗುತ್ತದೆ. ಅದೇ ಮೂರು ನಿಮಿಷದಲ್ಲಿ ಒಂದು ಹಾಡಿನ ಮೂಲಕ ಅದನ್ನು ವಿಜ್ಯುವಲ್ ಮಾಡಿದಾಗ ಅದರ ಎಫೆಕ್ಟೇ ಬೇರೆ. ಕಾಸರಗೋಡಿನಿಂದ ಮೈಸೂರಿಗೆ ಬರುವ ಸನ್ನಿವೇಶವನ್ನು ಒಂದು ಹಾಡಿನಲ್ಲಿ ತೋರಿಸಿದ್ದೀನಿ. ಅದು ಒಂದು ಪ್ರಯೋಗ ಅಷ್ಟೇ. ಕತೆಯ ಏಕತಾನತೆ ತಪ್ಪಿಸಲು, ಪ್ರೇಕ್ಷಕರ ಮನಸ್ಸು ಪ್ರಫುಲ್ಲಗೊಳಿಸಲು ಸಿನಿಮಾಗಳಲ್ಲಿ ಈ ರೀತಿಯ ಮ್ಯೂಸಿಕಲ್ ಟೂರ್ ಇಂಟ್ರಸ್ಟಿಂಗ್ ಆಗಿರುತ್ತದೆ.

ಸಿನಿಮಾ ನೋಡಿದಷ್ಟೂ ಬೋರ್ ಆಗೋಲ್ಲ. ಸೀನ್‍ವೈಸ್ ಜೊತೆ ಸ್ಪ್ರಿಪ್ಟ್‍ವರ್ಕ್ ಶ್ರಮ ಹೇಗಿತ್ತು?

ಆರಂಭದಲ್ಲೇ ಹೇಳಿದ ಹಾಗೆ ಎಲ್ಲವನ್ನೂ ಪಕ್ಕಾ ಪ್ಲಾನ್ ಆಗಿ ಮಾಡ್ಬೇಕೂಂತ ತೀರ್ಮಾನಿಸಿದ್ದೆ. ಮೊದಲು ಕತೆ ಬರೆದಿದ್ದೆ. ನಂತರ ಸಿನಿಮಾಟಿಕ್ ಆಗಿ ಚಿತ್ರಕತೆಯಾಯಿತು. ಸಂಭಾಷಣೆ ಬರೆಯುವಾಗ ಹಾಸ್ಯಕ್ಕೆ ಹೆಚ್ಚು ಒತ್ತುಕೊಡಬೇಕು ಅಂದುಕೊಂಡೆ. ನನ್ನ ಅದೃಷ್ಟ ಅಂದ್ರೆ ಅದೂ ಕತೆಯ ಜೊತೆ ಜೊತೆಗೇ ನಡೆದು ಹೋಯಿತು. ಕತೆ ಬೇಡಿದಂತೆ ಸನ್ನಿವೇಶಗಳು ಸೃಷ್ಟಿಯಾದವು. ಯಾವುದೂ ಶ್ರಮ ಅನ್ನಿಸಲಿಲ್ಲ. ಮೊದಲು ನನಗೆ ಇಷ್ಟವಾದ್ರೆ ಆನಂತರ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂದು ನಂಬಿದವನು ನಾನು. ಕತೆಯಲ್ಲಿ, ಸಂಭಾಷಣೆಯಲ್ಲಿ ನಾನು ರಾಜಿಯಾಗಲ್ಲ. ಯಾವುದೋ ಒಂದು ನಿಗೂಢತೆ ತೋರಿಸಿ ಅವಾರ್ಡ್ ಮಾಡುವ ಬಯಕೆಯಿಂದ ನಾನು ದೂರ. ಹಾಗಂತ ಅದನ್ನು ದೂರುವ ಅಧಿಕಾರವೂ ನನಗಿಲ್ಲ. ಇದು ನನ್ನ ಅಭಿಪ್ರಾಯ ಅಷ್ಟೇ.

ಈ ಸಿನಿಮಾ ಯಶಸ್ವಿನ ನಂತರದ ಪ್ರಾಜೆಕ್ಟ್ ಏನಾದ್ರೂ ಇದೆಯಾ..?

ಓ ಎಸ್… ಇದ್ದೇ ಇದೆ. ಫೈನಲ್ ಆಗೋಕೂ ಮುಂಚೆ ಹೇಳಿದ್ರೆ ಚೆನ್ನಿರಲ್ಲ. ಪ್ರಾಜೆಕ್ಟ್ ಓಕೆ ಆದ ಕೂಡಲೇ ನಿಮಗೆ ಫೋನ್ ಮಾಡುವೆ. ಥ್ಯಾಂಕ್ಯು..!

ಸಂದರ್ಶನ: ಎಂ.ಡಿ.ಕವಿತಾ ಗುಣೋದಯ

Leave a Reply

Your email address will not be published.