ರೂಪಕ ಮತ್ತು ಸಂಕೇತಗಳಲ್ಲಿ ಕರ್ಣನ್ ಕಥನ

ತಮಿಳಿನ ಕರ್ಣನ್ ಸಿನಿಮಾ ಹೇಗೆ ರೂಪಕಗಳಿಂದ ಕಟ್ಟಲ್ಪಟ್ಟಿದೆ ಹಾಗೂ ಕೌರವರ ದೃಷ್ಟಿಯಿಂದ ವೀಕ್ಷಕ ನೋಡುವಂತೆ ಪರ್ಯಾಯ ಮಹಾಭಾರತದ ಜಗತ್ತನ್ನು ಹೇಗೆ ಮತ್ತು ಏಕೆ ಕಟ್ಟಿಕೊಡುತ್ತದೆ ಎಂಬುದನ್ನು ವಿಶ್ಲೇಷಿಸುವ ಒಂದು ಪ್ರಯತ್ನ.

-ವೀರೇಂದ್ರ ಯಾದವ್ ಬಿ.ಎಂ.

ತಮಿಳು ಚಿತ್ರರಂಗದಲ್ಲಿ ವೆಟ್ರಿಮಾರನ್, ಪಾ ರಂಜಿತ್, ಮಾರಿ ಸೆಲ್ವರಾಜ್ ಅವರಂತಹ ನಿರ್ದೇಶಕರು ಇತ್ತೀಚಿನ ವರ್ಷಗಳಲ್ಲಿ ಒಂದು `ಕಲಾತ್ಮಕ ರಿಸ್ಕ್’ ತೆಗೆದುಕೊಂಡು ಶೋಷಿತ ತಳಸಮುದಾಯಗಳ ಕಥೆಗಳನ್ನು ಯಶಸ್ವಿಯಾಗಿ ತೆರೆಯ ಮೇಲೆ ಕಟ್ಟಿಕೊಡುತ್ತಿದ್ದಾರೆ. ಈ ನಿರ್ದೇಶಕರು `ಥಿಮೆಟಿಕಲಿ’ ಸಾಮ್ಯತೆಯನ್ನು ಹೊಂದಿದ್ದರೂ, ಶೈಲಿಯಲ್ಲಿ ಭಿನ್ನರಾಗಿದ್ದಾರೆ. ಅಸುರನ್, ಕಾಲಾ, ಪರಿಯೆರುಮ್ ಪೆರುಮಾಳ್ ನಂತಹ ಸಿನಿಮಾಗಳೇ ಇದಕ್ಕೆ ಕೈಗನ್ನಡಿ. 

ಮಾರಿ ಸೆಲ್ವರಾಜ್ ತಮ್ಮ ಮೊದಲ ಚಿತ್ರ `ಪರಿಯೆರುಮ್ ಪೆರುಮಾಳ್(2018) ಸಿನಿಮಾದಲ್ಲಿ ಕೆಳಸ್ತರದ ಯುವಕ ಪೆರುಮಾಳ್ ನ ಬದುಕಿನಲ್ಲಿ ಜರುಗುವ ಜಾತಿಯ ದೌರ್ಜನ್ಯವನ್ನು ಮತ್ತು ಅವಮಾನವನ್ನು ಯಾವ ಪ್ರತಿರೋಧವನ್ನು ತೋರದೆ  ಅನುಭವಿಸುವುದನ್ನು ಪೆರುಮಾಳ್ ನ ವೈಯಕ್ತಿಕ ನೆಲೆಯಲ್ಲಿ ಕಟ್ಟಿಕೊಡುತ್ತಾರೆ. ಶೋಷಕ ಬದಲಾಗುತ್ತಾನೆ ಎಂಬ ನಂಬಿಕೆಯಿಂದ ಪೆರುಮಾಳ್ ಪ್ರತಿರೋಧದ ದಾರಿಯನ್ನು ಹಿಡಿಯುವುದಿಲ್ಲ. ಆದರೆ ಕರ್ಣನ್ ಸಿನಿಮಾ `ಪರಿಯೆರುಮ್ ಪೆರುಮಾಳ್’ ಸಿನಿಮಾಗಿಂತ ಭಿನ್ನವಾಗಿದೆ.

ಕರ್ಣನ್ ಸಿನಿಮಾದಲ್ಲಿ ಜಾತಿಯ ದೌರ್ಜನ್ಯ, ಅಸಮಾನ ಸಮಾಜದ ವಿರುದ್ಧ ನಾಯಕ ಕರ್ಣನ್ ಸಿಡಿದೇಳುವುದನ್ನು ನಿರ್ದೇಶಕರು ಕರ್ಣನ್ ನ ವೈಯಕ್ತಿಕ ನೆಲೆಯಲ್ಲಿ ಕಟ್ಟಿಕೊಡದೆ, ಸಮುದಾಯದ ನೆಲೆಯ ದೃಷ್ಟಿಯಿಂದ ಕಟ್ಟಿಕೊಟ್ಟಿದ್ದಾರೆ. ಕರ್ಣನ್ ಚಿತ್ರವು ಒಂದು ಪ್ರಭಾವಶಾಲಿ ಪ್ರತಿರೋಧದ ದಲಿತ ಚಿತ್ರ. ಈ ಚಿತ್ರ ತುಂಬ ವಿಶಿಷ್ಟವೆನಿಸುವುದು ಅದು ಕಥನವನ್ನು ರೂಪಕಗಳಲ್ಲಿ ಮತ್ತು ಸಂಕೇತಗಳಲ್ಲಿ ಕಟ್ಟಿಕೊಟ್ಟಿರುವ ಪರಿಗೆ ಮತ್ತು ಮಹಾಭಾರತವನ್ನು ಸಬ್ ವರ್ಟ್ ಮಾಡಿರುವ ಕಥನ ಶೈಲಿಯಿಂದ.

ಕರ್ಣನ್ ಸಿನಿಮಾ ಪೊಡಿಯಂಕುಳಮ್ ಎನ್ನುವ ದಲಿತರ ಕೇರಿಯಲ್ಲಿ ಜರುಗುತ್ತದೆ. ಇಲ್ಲಿನ ಜನರು ಹೊಸ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಆಕಾಂಕ್ಷೆಯಲ್ಲಿ ದುರ್ಯೋದನ, ಕರ್ಣ, ಅಭಿಮನ್ಯು, ದ್ರೌಪದಿ ಮುಂತಾದ ಪುರಾಣದ ಹೆಸರುಗಳನ್ನು ತಮ್ಮ ಹೆಸರುಗಳನ್ನಾಗಿ ಇಟ್ಟುಕೊಂಡು ಹೊಸ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ. ಶಿಕ್ಷಣ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ದಲಿತರು ಹೊಸ ಅಸ್ಮಿತೆಯಯನ್ನು ಕಟ್ಟಿಕೊಳ್ಳುವುದನ್ನು ಸಹಿಸದ ಪಕ್ಕದೂರಿನ `ಮೇಲೂರಿನ’ ಸವರ್ಣಿಯರು, ಪೊಡಿಯಂಕುಳಮ್ ದಲಿತರು ಬಸ್ಸು ನಿಲ್ದಾಣಕ್ಕೆ ಬಂದು ಬಸ್ಸು ಸೌಕರ್ಯವನ್ನು ಪಡೆಯದಿರುವಂತೆ ಮಾಡುತ್ತಾರೆ. ಇದರ ಪರಿಣಾಮದಿಂದಾಗಿ ತಳಸಮುದಾಯದ ಜನರು ತಮ್ಮ ಹಕ್ಕುಗಳಿಗಾಗಿ ಮತ್ತು ಘನತೆಯ ಬದುಕಿಗಾಗಿ ವ್ಯವಸ್ಥೆಯೊಂದಿಗೆ ನಡೆಸುವ ಒಗ್ಗಟ್ಟಿನ ಹೋರಾಟದ ಕಥನವೇ ಕರ್ಣನ್ ಕಥನ.

ರೂಪಕಗಳು ಒಬ್ಬ ಆರ್ಟಿಸ್ಟ್ ಬಳಿ ಇರುವ ಶಕ್ತಿಯುತ ಪರಿಕರಗಳಾಗಿವೆ. ತಾನು ಏನನ್ನು ಹೇಳಬೇಕೊ ಅದನ್ನು `ತೋರಿಸಲು’ ಸಹಾಯ ಮಾಡುವಂತವುಗಳೆ ರೂಪಕಗಳು. ಇವು ಬರೀ ಲಿಟರರಿ ಪರಿಕರಗಳಾಗಿರದೆ ಸೈಕಾಲಾಜಿಕಲ್ ಪರಿಕರಗಳೂ ಸಹ. ರೂಪಕಗಳು ಓದುರನ್ನು ಅಥವಾ ನೋಡುಗರನ್ನು ಸುಪ್ತಾವಸ್ಥೆಯಲ್ಲಿ ಲೋಕದ ಸತ್ಯಗಳನ್ನು ದರ್ಶನ ಮಾಡಿಸುತ್ತವೆ. ಆನಂದ ಕುಮಾರಸ್ವಾಮಿ ಹೇಳುವಂತೆ ರೂಪಕಗಳು ಅಥವಾ ಅಲಂಕಾರಗಳು `ಪರಿಣಾಮ’ ಬೀರದೆ `ಪರಿಣಾಮಕಾರಿ’ಯಾಗಿರಬೇಕು. ಈ ದೃಷ್ಟಿಯಲ್ಲಿ ಕರ್ಣನ್ ಸಿನಿಮಾದಲ್ಲಿ ರೂಪಕಗಳು `ಎಫೆಕ್ಟ್’ ಸೃಷ್ಟಿಸದೆ, ಪರಿಣಾಮಕಾರಿಯಾಗಿವೆ. ಮುಂದುವರಿದು, ರೂಪಕಗಳು ಸತ್ಯ ಹೇಳುವ ಉದ್ದೇಶವನ್ನು ಈಡೇರಿಸುವಂತೆ ಇರಬೇಕು. ಮಾರಿ ಸೆಲ್ವರಾಜ್ ಇಡೀ ಚಿತ್ರದಲ್ಲಿ ರೂಪಕಗಳನ್ನು ಮತ್ತು ಸಂಕೇತಗಳನ್ನು ವೀಕ್ಷಕರಲ್ಲಿ ಯಾವುದೇ ಎಫೆಕ್ಟ್ ಸೃಷ್ಟಿಸಲು ಬಳಸದೆ, ಜಾತಿ ಶೋಷಣೆ ಮತ್ತು ಅಸಮಾನತೆಯ `ಸತ್ಯ’ಗಳನ್ನು ಪರಿಣಾಮಕಾರಿಯಾಗಿ ಹೇಳಲು ಬಳಸಿಕೊಂಡಿದ್ದಾರೆ.

ಕರ್ಣನ್ ಸಿನೆಮಾ ಹುಡುಗಿಯೊಬ್ಬಳು ರಸ್ತೆ ಮಧ್ಯದಲ್ಲಿ ಮೂರ್ಛೆ ಬಂದು ನರಳಿ ಪ್ರಾಣಬಿಡುವ ದೃಶ್ಯದೊಂದಿಗೆ ಸಾಂಕೇತಿಕವಾಗಿ ಶುರುವಾಗುತ್ತದೆ. ರಸ್ತೆ ಮಧ್ಯ ಬಿದ್ದು ಮೂರ್ಛೆ ಬಂದು ನರಳುತ್ತಿದ್ದರೂ ರಸ್ತೆಯಲ್ಲಿ ಹೋಗುತ್ತಿರುವ ಯಾವುದೇ ವಾಹನ ನಿಲ್ಲಿಸುವುದಿಲ್ಲ ಮತ್ತು ಯಾರೂ ಆಕೆಯ ಪ್ರಾಣ ಉಳಿಸುವ ಪ್ರಯತ್ನ ಮಾಡುವುದಿಲ್ಲ. ಆಕೆಯ ಬದಿಯಲ್ಲಿ ಹಾದು ಹೋದವರೆಲ್ಲ ಆಕೆಯನ್ನು ನಿರ್ಲಕ್ಷಿಸುತ್ತಾರೆ. ಈ ದೃಶ್ಯ ತಳಸಮುದಾಯಗಳೆಡೆಗೆ ಇರುವ ಸಮಾಜದ ನಿರ್ಲಕ್ಷ್ಯವನ್ನು ಮತ್ತು ಸತ್ತ ಸಂವೇದನೆಯನ್ನು ಧ್ವನಿಸುತ್ತದೆ. ಮೂರ್ಛೆಯಿಂದ ನರಳಿದ ಹುಡುಗಿ ಸತ್ತ ನಂತರ ಆ ಹುಡುಗಿಯ ಮುಖವನ್ನು ನಿರ್ದೇಶಕ ತೋರಿಸದೆ ದೇವತೆಯ ಮುಖವಾಡ ತೊಟ್ಟಂತೆ ತೋರಿಸುತ್ತಾರೆ.

ಪೊಡಿಯಂಕುಳಮ್ ನಲ್ಲಿ ಸತ್ತವರು ದೇವತೆಗಳಾಗುತ್ತಾರೆ ಮತ್ತು ಶೋಷಣೆಯ ವಿರುದ್ದ ತಮ್ಮ ಜನರು ನಡೆಸುವ ಹೋರಾಟವನ್ನು ದೂರದಲ್ಲಿ ನಿಂತು ನೋಡುತ್ತಾರೆ. ಈ ಸತ್ತವರು ದೇವತೆಗಳಾದ ಪ್ರತಿಮೆಯ ಮೂಲಕ ನಿರ್ದೇಶಕರು ಗತದ ನೆನಪುಗಳನ್ನು ತಳ ಸಮುದಾಯಗಳು ತಮ್ಮ ಹೋರಾಟಗಳಲ್ಲಿ ಕಾಪಿಟ್ಟುಕೊಳ್ಳುವ ಜರೂರತೆಯನ್ನು ಹೇಳಿದ್ದಾರೆ. ಮುಂದುವರಿದು, ಪೊಡಿಯಂಕುಳಮ್ ಜನರು ಪೂಜಿಸುವ ದೇವರುಗಳಿಗೆ ಯಾವುದೇ ಮುಖವಿಲ್ಲ. ಈ ಮುಖವಿಲ್ಲದ ದೇವತೆಗಳ ರೂಪಕ ತಳ ಸಮುದಾಯಗಳ ಅಸ್ಮಿತೆಯ ಬಿಕ್ಕಟ್ಟನ್ನು ಬಿಚ್ಚಿಡುವುದರ ಮೂಲಕ ಹೇಗೆ ತಳ ಸಮುದಾಯಗಳ ಜನರು ಅಸ್ಮಿತೆ ಇಲ್ಲದೆ ಬದುಕುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಮಾರಿ ಸೆಲ್ವರಾಜ್ ತನ್ನ ಸುತ್ತಮುತ್ತಲಿನ ಪರಿಸರವನ್ನು ಕಥೆಯ ಜೀವಾಳವಾಗಿಸಿದ್ದಾರೆ. ಆ ಪರಿಸರದಲ್ಲಿ ಕಂಡುಬರುವ ಕತ್ತೆ, ಆನೆ, ಕುದುರೆ, ಕೋಳಿ ಮರಿಗಳು, ಹದ್ದು, ಮೀನು, ಹಂದಿ ಮುಂತಾದ ಪ್ರಾಣಿ-ಪಕ್ಷಿಗಳನ್ನು ಪೊಡಿಯಂಕುಳಮ್ ಜನರ ಜೀವನ ಕ್ರಮವನ್ನ ತೋರಿಸಲಷ್ಟೇ ಬಳಸದೆ ರೂಪಕಗಳ ಸರಣಿಯನ್ನೇ ಇಡೀ ಚಿತ್ರದುದ್ದಕ್ಕು ಸೃಷ್ಟಿಸಿದ್ದಾರೆ. ಅಂಗಳದಲ್ಲಿ ಕಾಳು ತಿನ್ನುತ್ತಿದ್ದ ಕೋಳಿ ಮರಿಗಳನ್ನು ಹದ್ದೊಂದು ಹೊತ್ತುಕೊಂಡು ಹೋಗುವುದು ಮತ್ತು ತಾಯಿಯೊಬ್ಬಳು ಆ ಹದ್ದನ್ನು ತನ್ನ ಮರಿಗಳನ್ನು ಬಿಟ್ಟುಬಿಡು ಎನ್ನುವುದು ಜಾತಿಯ ಕ್ರೌರ್ಯದ ರೂಪಕ.

ಇನ್ನೊಂದು ಪ್ರಭಾವಶಾಲಿಯಾದ ಪದೇ-ಪದೇ ನೋಡುಗನ ಗಮನ ಸೆಳೆವ ಪ್ರಾಣಿ ರೂಪಕವೆಂದರೆ `ಕಾಲನ್ನು ಕಟ್ಟಿರುವ ಕತ್ತೆ’. ಮುಂಗಾಲನ್ನು ಕಟ್ಟಿರುವ ಕತ್ತೆ ಬಂಧಿಸಲ್ಪಟ್ಟಿದೆ ಮತ್ತು ಮುಕ್ತವಾಗಿ ನಡೆಯಲಾರದು. ಈ ಬಂಧನವನ್ನು ಸಹಜವೆಂಬಂತೆ ಭಾವಿಸಿದೆ ಕತ್ತೆ. ಬಂಧನದಿಂದ ಬಿಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿಲ್ಲ. ಈ ರೂಪಕ ಎರಡು ನೆಲೆಯಲ್ಲಿ ಅರ್ಥವನ್ನು ಧ್ವನಿಸುತ್ತದೆ. ಒಂದು, ತಳ ಸಮುದಾಯಗಳು ಜಾತಿಯ ಕಾರಣದಿಂದ ಬಂಧಿಸಲ್ಪಟ್ಟಿರುವುದನ್ನು. ಎರಡು, ತಳ ಸಮುದಾಯಗಳ ಶ್ರಮ ಸಂಸ್ಕೃತಿಯ ಬದುಕನ್ನೂ ಧ್ವನಿಸುತ್ತದೆ. ಇನ್ನುಂದು ರೂಪಕವಾಗಿ, ಕರ್ಣನ್ ಕಟ್ಟಿದ ಕತ್ತೆಯ ಕಾಲನ್ನು ಬಿಚ್ಚದೆ; ಕಲ್ಲಿಂದ ಕುಟ್ಟಿ ಬಿಡುಗಡೆಗೊಳಿಸುತ್ತಾನೆ. ಅವನ ಆಕ್ರೋಶ ಆ ಕ್ಷಣ ಸ್ಫೋಟಗೋಳ್ಳುತ್ತದೆ. ಈ ಕ್ರಿಯೆಯಲ್ಲಿ ಕರ್ಣನ್ ಶೋಷಿತ ಸಮುದಾಯದ `ಸೇವಿಯರ್’ ಆಗಿ ಕಾಣುತ್ತಾನೆ.

ಮೀನು ಕತ್ತರಿಸುವ ಪಂದ್ಯದಲ್ಲಿ ಗೆದ್ದ ಕರ್ಣನ್ ಖಡ್ಗ ಜಯಿಸುತ್ತಾನೆ. ನಂತರ ಅವನನ್ನು ಆನೆ ಮೇಲೆ ಹೊತ್ತು ಮೆರವಣಿಗೆ ಮಾಡುವುದು, ಚಿತ್ರದ ಕೊನೆಯಲ್ಲಿ ಕುದುರೆ ಏರಿ ಬರುವುದು ತಳ ಸಮುದಾಯಗಳು ತಮ್ಮ ಗೌರವ ಮರಳಿ ಪಡೆಯುವುದರ ಸಂಕೇತದಂತಿವೆ. ಈ ನಿರೂಪಣ ತಂತ್ರವನ್ನು ಗಮನಿಸಿದರೆ ನಿರ್ದೇಶಕರು ತಾನು ಹೇಳಬೇಕಾಗಿರುವ ವಿಷಯವನ್ನು ಉದ್ದನೆಯ ಸ್ವಗತದ ಬದಲು ವಿಶುಯಲ್ಸ್ ಮೂಲಕ ಹೇಳಲು ಬಯಸಿದಂತಿದೆ.

ಕರ್ಣನ್ ಸಿನೆಮಾ ಪರಿಯೆರುಮ್ ಪೆರುಮಾಳ್ ಸಿನೆಮಾದಂತೆ ವೈಯಕ್ತಿಕ ನೆಲೆಯಲ್ಲಿ ಜರುಗುವ ಸಿನೆಮಾವಲ್ಲ; ಸಮುದಾಯವನ್ನೇ ಒಳಗೊಂಡಿರುವ ಸಿನೆಮಾ. ಪೊಡಿಯಂಕುಳಮ್ ವೃದ್ಧರು, ಹೆಂಗಸರು, ಮಕ್ಕಳು ಎಲ್ಲರೂ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕರ್ಣನ್ ನ ಶತ್ರು ಒಬ್ಬ ವ್ಯಕ್ತಿಯಲ್ಲ, ಆದರೆ ಇಡೀ ವ್ಯವಸ್ಥೆ. ಪ್ರಬಲ ಜಾತಿಯ ಜನ, ರಾಜಕೀಯ ವ್ಯವಸ್ಥೆ, ಅಧಿಕಾರಶಾಹಿ ಇವೆಲ್ಲವೂ ಕರ್ಣನ್ ನ ಶತ್ರುಗಳು ಮತ್ತು ಇವುಗಳ ವಿರುದ್ಧ ಅವನು ಮತ್ತು ಸಮುದಾಯ ಒಗ್ಗಟ್ಟಿನಿಂದ ಮಾಡುವ  ಪ್ರತಿರೋಧದ ಹೋರಾಟವೇ ಈ ಚಿತ್ರ.

ಇಡೀ ಚಿತ್ರದ ದೊಡ್ಡ ಮತ್ತು ಶಕ್ತಿಶಾಲಿಯಾದ ರೂಪಕ `ಬಸ್ ನಿಲ್ದಾಣ’ ಮತ್ತು `ಬಸ್ಸನ್ನು ಕಟ್ಟಿಗೆ ಕಬ್ಬಿಣದಿಂದ ಹೊಡೆಯುವ ಕ್ರಿಯೆ’. ಪೊಡಿಯಂಕುಳಮ್ ಜನರ ಬಳಕೆಗೆ ಮೇಲ್ಜಾತಿಯ ಜನರು ಬಸ್ ನಿಲ್ದಾಣವನ್ನು  ಬಿಡುತ್ತಿರಲಿಲ್ಲ. ಯಾವ ಬಸ್ ಕೂಡ ಪೊಡಿಯಂಕುಳಮ್ ಜನರನ್ನು ಈ ಬಸ್ ನಿಲ್ದಾಣದಲ್ಲಿ ಹತ್ತಿಸಿಕೊಳ್ಳುತ್ತಿರಲಿಲ್ಲ ಮತ್ತು ಇಳಿಸುತ್ತಿರಲಿಲ್ಲ. ಈ ಕ್ರಿಯೆ ತಳಸಮುದಾಯದ ಜನರನ್ನು ಹೊರ ಜಗತ್ತಿಗೆ ಸಂಪರ್ಕ ಸಾಧಿಸಲು, ಮುಖ್ಯವಾಹಿನಿಗೆ ಬರದಂತೆ ತಡೆಯುವ ಕ್ರಿಯೆಯ ಸಂಕೇತವಲ್ಲವೇ?

ಕತ್ತೆಯನ್ನು ಸಂಕೋಲೆಯಿಂದ ಬಿಡುಗಡೆಗೊಳಿಸಿದ ಒಂದು ಪ್ರಮುಖ ಸಾಂಕೇತಿಕ ಕ್ರಿಯೆಯ ನಂತರ ಮತ್ತೊಂದು `ಲಿಬರೇಟಿಂಗ್ ಆಕ್ಟ್’ ನಲ್ಲಿ ತೊಡಗುತ್ತಾನೆ ಕರ್ಣನ್. ಅದುವೆ, ವ್ಯವಸ್ಥೆಯ ಅಸಮಾನತೆಯ ರೂಪಕದಂತಿರುವ ಬಸ್ಸನ್ನು ಕಟ್ಟಿಗೆ ಮತ್ತು ಕಬ್ಬಿಣದ ಸರಳುಗಳಿಂದ ಹೊಡೆಯುವುದು. ಈ ದೃಶ್ಯವನ್ನು ಬಹಳ ಅಸ್ಥೆಯಿಂದ ಚಿತ್ರಿಸಿದ್ದಾರೆ ನಿರ್ದೇಶಕರು. ಸುಮಾರು 4 ನಿಮಿಷ ಕರ್ಣನ್ ಬಸ್ಸನ್ನು ಕಟ್ಟಿಗೆ ಮತ್ತು ಕಬ್ಬಿಣದ ಸರಳಿನಿಂದ ಆಕ್ರೋಶಭರಿತನಾಗಿ ಹೊಡೆಯುತ್ತಾನೆ. ಬಸ್ಸನ್ನು ಹೊಡೆಯುವ ಕ್ರಿಯೆ ಮುಗಿದ ನಂತರ ಬಿಡುಗಡೆಗೊಂಡ ಕತ್ತೆ ಬೆಟ್ಟದ ತುದಿಗೆ ಏರಿರುವುದನ್ನು ನಿರ್ದೇಶಕರು ತೋರಿಸುತ್ತಾರೆ. ಈ ದೃಶ್ಯ ಜಾತಿಯ ಕ್ರೌರ್ಯದ ಬಂಧನದಿಂದ ಬಿಡುಗಡೆ ಹೊಂದಿದರೆ ತಳಸಮುದಾಯಗಳು ಏರುವ ಎತ್ತರವನ್ನು ಸೂಚಿಸುತ್ತದೆ.

ಇಲ್ಲಿಯವರೆಗೆ ನಾವು ಸಿನಿಮಾಗಳಲ್ಲಿ ನೋಡಿಕೊಂಡು ಬಂದಂತಹ ಮಹಾಭಾರತದ ನಿರೂಪಣೆಗಳು ಪಾಂಡವರ ಕೇಂದ್ರಿಕೃತವಾಗಿದ್ದವು. ನೋಡುಗರ ಅನುಕಂಪ ಯಾವಾಗಲು ಪಾಂಡವರ ಕಡೆಗಿದ್ದವು. ಆದರೆ ಕರ್ಣನ್ ಸಿನಿಮಾದಲ್ಲಿ ಕೌರವರ ದೃಷ್ಟಿಯಿಂದ ವೀಕ್ಷಕ ನೋಡುವಂತೆ ಪರ್ಯಾಯ ಮಹಾಭಾರತದ ಜಗತ್ತನ್ನು  ಕಟ್ಟಿಕೊಡಲಾಗಿದೆ. ಕಥಾನಾಯಕನ ಹೆಸರು ಕರ್ಣನ್. ಚಿತ್ರದಲ್ಲಿನ ಇತರೆ ಪೌರಾಣಿಕ ಪಾತ್ರಗಳ ಹೆಸರಿನ ಪಾತ್ರಗಳೆಂದರೆ ದುರ್ಯೋಧನ, ಕನ್ನಬೀರನ್(ಕೃಷ್ಣ), ಅಭಿಮನ್ಯು, ಯಮನ್, ದ್ರೌಪದಿ.

ಮಹಾಭಾರತದ ಕರ್ಣನಿಗು, ಚಿತ್ರದ ನಾಯಕ ಕರ್ಣನ್ ಗೂ ವ್ಯತ್ಯಾಸಗಳಿವೆ. ಮಹಾಭಾರತದಲ್ಲಿ ಅರ್ಜುನ ಮೀನಿಗೆ ಬಿಲ್ಲು ಹೂಡಿ ಜಯಶೀಲನಾದರೆ, ಕರ್ಣನ್ ಧಾರ್ಮಿಕ ಆಚರಣೆಯಲ್ಲಿ ಮೀನನ್ನು ಒಂದೇ ಏಟಿಗೆ ಕತ್ತರಿಸಿ ಕತ್ತಿಯನ್ನು ಪಡೆಯುವುದನ್ನು ನಿರ್ದೇಶಕರು ಕಟ್ಟಿಕೊಡುತ್ತಾರೆ. ಇದು ಅವನ ರಕ್ಷಣೆಯ ಅಸ್ತ್ರವಾಗಿ ಉಳಿದು, ತನ್ನ ವೈರಿ ಪೊಲೀಸ್ ಅಧಿಕಾರಿ ಕನ್ನಬೀರನ್‍ನ್ನು (ಕೃಷ್ಣ) ಸಂಹರಿಸಲು ಬಳಸುತ್ತಾನೆ. ಮುಂದುವರಿದು, ಕರ್ಣನ್ ಮತ್ತು ದ್ರೌಪದಿ ಪರಸ್ಪರ ಪ್ರೀತಿಸುತ್ತಾರೆ. ಕೃಷ್ಣನನ್ನು ಕರ್ಣನ್‍ನ ಎದುರಾಳಿಯಾಗಿ, ವೈರಿಯಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ಪ್ರಾಣ ತೆಗೆಯುವ ಯಮ (ಯಮನ್) ತನ್ನ ಪ್ರಾಣವನ್ನು ತಾನೇ ತೆಗೆದುಕೊಳ್ಳುತ್ತಾನೆ. ನಿರ್ದೇಶಕರು ಕೌರವರ ಹೆಸರಿನ ಪಾತ್ರಗಳ ಕಡೆಗೆ ವೀಕ್ಷಕರು ಅನುಕಂಪಕ್ಕೆ ಒಳಗಾಗುವಂತೆ ಮತ್ತು ಅನುಭೂತಿ ಹುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರೀತಿಯ ಪಾತ್ರ ಸೃಷ್ಟಿಯನ್ನು ಈ ಉದ್ದೇಶಗಳಿಗಾಗಿ ಮಾಡಲಾಗಿರಬಹುದು. ಪುರಾಣದ ಪಾತ್ರಗಳನ್ನು ಸಬ್ ವರ್ಟ್ ಮಾಡುವ ಮೂಲಕ ಪಾಂಡವರ ದೃಷ್ಟಿಯಲ್ಲಿ ಕಟ್ಟಿಕೊಟ್ಟಿರುವ ಸತ್ಯಗಳನ್ನು/ ಮೌಲ್ಯಗಳನ್ನು ಹೊಡೆದು ಕಡೆಗಣಿಸಲ್ಪಟ್ಟ ಕೌರವರ ದೃಷ್ಟಿಯ ಸತ್ಯಗಳನ್ನು/ ಮೌಲ್ಯಗಳನ್ನು ಕಟ್ಟುವುದಾಗಿರಬಹುದು. ಸರಳವಾಗಿ ಹೇಳುವುದಾದರೆ, ಕೌರವರ ದೃಷ್ಟಿಯ ಸತ್ಯವೂ ಮುಖ್ಯವೆಂದು ಅರಿಯುವ ಪ್ರಯತ್ನವಿರಬಹುದು. ಇಲ್ಲಿ ಯಾವುದು ಅಂತಿಮ ಸತ್ಯ ಎಂಬುದೊಂದಿಲ್ಲ. ಸತ್ಯಕ್ಕೆ ವಿವಿಧ ಪಾಶ್ರ್ವಗಳಿವೆ. ಯಜಮಾನಿಕೆಯ ಜಗತ್ತಿನ ಸತ್ಯಗಳನ್ನು\ ಮೌಲ್ಯಗಳನ್ನು ಕೆಡವಿ `ಅನ್ಯ’ ಜಗತ್ತಿನ ಸತ್ಯಗಳನ್ನು/ಮೌಲ್ಯಗಳನ್ನು ಎತ್ತಿಕಟ್ಟಿ ಆ ಮೂಲಕ ಪರ್ಯಾಯ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟುವ ರೂಪಕದಂತಿದೆ. ಅಂದರೆ, ಮೇಲ್ಜಾತಿಯ ಯಜಮಾನಿಕೆಯ ಸಂಸ್ಕೃತಿಯ ಸತ್ಯಗಳನ್ನು ಕೆಡವಿ, ಅನ್ಯ ಜಗತ್ತಿನ (ತಳ ಸಂಸ್ಕೃತಿಯ) ಸತ್ಯಗಳನ್ನು ಕಟ್ಟುವ ರೂಪಕದಂತಿದೆ.

ದಲಿತ ಹಿನ್ನೆಲೆಯಿಂದ ಬಂದಂತಹ ಪಾ ರಂಜಿತ್, ಮಾರಿ ಸೆಲ್ವರಾಜ್ ನಂತಹ ನಿರ್ದೇಶಕರಿಗೆ ದಲಿತ ಕಥನಗಳನ್ನು ತಮಿಳು ಸಿನಿಮಾದ ಮುಖ್ಯವಾಹಿನಿಗೆ ತರುವ ಅಭಿಲಾಷೆ ಮತ್ತು ಜವಾಬ್ದಾರಿ ಇದೆ. ಈ ಪ್ರಯತ್ನದಲ್ಲಿ ಇವರ ಸಿನೆಮಾಗಳಾದ ಮದ್ರಾಸ್ (2014), ಕಬಾಲಿ (2016), ಕಾಲಾ (2018), `ಪರಿಯೆರುಮ್ ಪೆರುಮಾಳ್ (2018)ನಂತಹ ಚಿತ್ರಗಳು ಗುರುತು ಮೂಡಿಸಿವೆ. ಈ ನಿರ್ದೇಶಕರು ದಲಿತರ ದೃಷ್ಟಿಕೋನದಲ್ಲಿ ಜಾತಿಯ ಸಮಸ್ಯೆಯನ್ನು ಮುಖಾಮುಖಿಗೊಳಿಸುತ್ತಿದ್ದಾರೆ. ಈ ನಿರ್ದೇಶಕರಿಗೆ ಒಂದು ರಾಜಕಾರಣದ ಜವಾಬ್ದಾರಿಯೂ ಇದೆ. ಈ ರಾಜಕಾರಣಕ್ಕೆ ಮಹಾಭಾರತದಂತಹ ಪುರಾಣ ಕಥೆಗಳ ಅಗತ್ಯ ಇದೆ. ಪುರಾಣಗಳನ್ನು ಯಥಾವತ್ ಆಗಿ ಬಳಸದೆ, ‘ಅನ್ಯ’ ದೆಡೆಗೆ ಅನುಕಂಪ ಸುರಿಸುವಂತೆ ಮಾಡಿ, ಕಡೆಗಣಿಸಿದ್ದನ್ನು ಪ್ರಾಶಸ್ತ್ಯಗೊಳಿಸುವ ತಂತ್ರದಂತೆಯೂ ಅರ್ಥೈಸಿಕೊಳ್ಳಬಹುದಾಗಿದೆ. ಕಲೆ ರಾಜಕಾರಣದ ನಿರ್ಮಾಣದಲ್ಲಿರುತ್ತದೆ; ಕಲೆ ಆದರ್ಶವಾಗಿದ್ದರೆ, ರಾಜಕಾರಣವು ಆದರ್ಶವಾಗಿರುತ್ತದೆ.

ಸಿನೆಮಾ ಸಾಮಾಜಿಕ ಬದಲಾವಣೆ ಮೂಡಿಸುವ ಒಂದು ಪ್ರಬಲ ಮಾಧ್ಯಮವೆಂದು ನಂಬಿರುವ ನಿರ್ದೇಶಕ ಮಾರಿ ಸೆಲ್ವರಾಜ್, ನಿರ್ದೇಶಕ ಬಾಲು ಮಹೇಂದರ್ ಅವರಂತೆ `ವಿಶುಯಲ್ಸ್’ ಗಳ ಮೂಲಕ ಕರ್ಣನ್ ಸಿನಿಮಾದ ಕಥೆಯನ್ನು ಹೆಣೆದಿದ್ದಾರೆ. ಬಹುಸಂಖ್ಯೆಯಲ್ಲಿ ಸಂಕೇತಗಳನ್ನು ಮತ್ತು ರೂಪಕಗಳನ್ನು ಬಳಸಿದ್ದರೂ ಸ್ಕ್ರೀನ್ ಫ್ಲೇ ವೇಗಕ್ಕೆ ಎಲ್ಲೂ ತಡೆಯಾಗಿಲ್ಲ. ಕಥಾನಾಯಕ ಕರ್ಣನ್ ಪಾತ್ರದಲ್ಲಿ ಅಭಿನಯಿಸಿರುವ ನಟ ಧನುಶ್ ತಮ್ಮ ಸ್ಟಾರ್ ಗಿರಿಯನ್ನು ಪಕ್ಕಕ್ಕಿಟ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೇಕ ಪಾತ್ರಗಳು ನಟಿಸಿದಂತೆ ಕಾಣದೆ ಜೀವಂತ ವ್ಯಕ್ತಿಗಳಾಗಿದ್ದಾರೆ. ಮಣ್ಣಿನ ಭಾಷೆ ಮಾತುಗಳಲ್ಲು ಮತ್ತು ಹಾಡುಗಳಲ್ಲು ಅಡಗಿದೆ. ಚಿತ್ರದ ಪ್ರತಿ ದೃಶ್ಯವನ್ನು ಕಟ್ಟಲು ನಿರ್ದೇಶಕರು ವಹಿಸಿರುವ ಪ್ರಾಮಾಣಿಕ ಕಾಳಜಿ ಮತ್ತು ಶ್ರದ್ಧೆ ಚಿತ್ರದುದ್ದಕ್ಕೂ ಕಾಣುತ್ತದೆ.

*ಲೇಖಕರು ಮೂಲತಃ ತುಮಕೂರಿನವರು; ಪ್ರಸ್ತುತ ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

 

Leave a Reply

Your email address will not be published.