ರೇಡಿಯೋ ಕಾಲರ್ ಏಕಿಲ್ಲ?

ಟ್ಯಾಬ್ಲಾಯಿಡುಗಳ ಹೊಕ್ಕುಳೊಳಗಿಂದ ಟಿವಿ ಚಾನೆಲ್‍ಗಳು ಹುಟ್ಟಿದವು. ರಾಜಕೀಯ ಹಿನ್ನೆಲೆಯ ಧಣಿಯ ಆಶಯಕ್ಕೆ ತಕ್ಕಂತೆ ಸುದ್ದಿಯ ಬಣ್ಣ ಬದಲಾಯಿಸುವ ವರಸೆಗೆ ಶುರು ಹಚ್ಚಿಕೊಂಡ ದಿನವೇ ಮಾಧ್ಯಮ ತನ್ನ ಶೀಲ ಕಳೆದುಕೊಂಡಿತು.

ಬ್ಲಿಕ್ ಟಿವಿಯ ಪತ್ರಕರ್ತನೊಬ್ಬ ಸುವಿಖ್ಯಾತ ವೈದ್ಯರನ್ನು ಬ್ಲಾಕ್‍ಮೈಲ್ ಮಾಡಹೊರಟು ಬಂಧನಕ್ಕೊಳಗಾದ ಸುದ್ದಿ, ಸ್ವತಃ ಮಾಧ್ಯಮಗಳಲ್ಲಿ ದುಡಿದ ಹಲವಾರು ಮಂದಿಗೆ ಮುಜುಗರ ತಂದಿದೆ. ಇದಕ್ಕೇನಾದರೂ ದಾರಿ ಹುಡುಕಬೇಕು ಎಂಬ ಕಾಳಜಿಯಲ್ಲಿ ಕೆಲವರು ಅಲ್ಲಿಲ್ಲಿ ಬರೆದಿದ್ದಾರೆ.

ಪ್ರಜಾಸತ್ತೆಯ ನಾಲ್ಕನೆಯ ಸ್ತಂಭ ಮಾಧ್ಯಮ ಎಂದು ನಂಬಿದ್ದ ಕಾಲ ಹೊರಟುಹೋಗಿದೆ. ಹೆಚ್ಚಿನ ಮುದ್ರಣ ಮಾಧ್ಯಮ ಮತ್ತು ಟಿವಿ ಚಾನೆಲ್‍ಗಳಿಗೆ ತಮ್ಮ ಅಸ್ತಿತ್ವ ಯಾಕಿದೆ ಎಂಬುದಕ್ಕೆ ಎದೆ ಮುಟ್ಟಿ ಉತ್ತರ ಹೇಳುವ ಧೈರ್ಯ ಇಲ್ಲ.

ಟಾಬ್ಲಾಯಿಡ್ ಪತ್ರಿಕೋದ್ಯಮದಿಂದ ಇದು ಶುರುವಾಯಿತು. ಕನ್ನಡದಲ್ಲೇ ಲಂಕೇಶ್ ಪತ್ರಿಕೆ ಹೊರತಾಗಿ ಬಹುತೇಕ ಟಾಬ್ಲಾಯಿಡುಗಳೂ ಯಥಾನುಶಕ್ತಿ ಸುಲಿಗೆ ಹಫ್ತಾ ಮೂಲಕವೇ ಹೊಟ್ಟೆ ಹೊರೆದಿದ್ದು. ಹೊಟ್ಟೆ ಹೊರೆಯುವಷ್ಟಾದರೆ ಓಕೆ; ಅರಮನೆ ಕಟ್ಟಿಕೊಳ್ಳುವಷ್ಟು ಕಾಸು ಹರಿದು ಬಂತೆನ್ನುವುದು ಹೆಚ್ಚು ಸರಿ. ಸಾರ್ವಜನಿಕ ವೆಚ್ಚದ ಭ್ರಷ್ಟಾಚಾರ ಹೆಚ್ಚಿದಂತೆಲ್ಲಾ ಈ ಮಾಧ್ಯಮಗಳು ಬೆಳೆದದ್ದೂ ಗಮನಿಸಬೇಕು. ಈ ಟಾಬ್ಲಾಯಿಡುಗಳ ಹೊಕ್ಕುಳೊಳಗಿಂದ ಟಿವಿ ಚಾನೆಲ್‍ಗಳು ಹುಟ್ಟಿದವು. ಚಾನೆಲ್ ನಡೆಸಲು ಬೇಕಾದ ಬಂಡವಾಳ ಮತ್ತು ಚಾಲ್ತಿ ವೆಚ್ಚದ ಮೊತ್ತ ಎಷ್ಟು ಅಗಾಧವೆಂದರೆ ಬಹುತೇಕ ಚಾನೆಲ್‍ಗಳು ಉಳ್ಳವರ ಬಂಡವಾಳದಿಂದಲೇ ಜನ್ಮ ತಾಳಿದ್ದು. ಟಿವಿ ಮಾಧ್ಯಮದ ಶಕ್ತಿ ಅರಿವಾದ ಸಕಲ ರಾಜಕಾರಣಿಗಳೂ ಈ ಕ್ಷೇತ್ರಕ್ಕೆ ಧುಮುಕಿದರು. ಯಜಮಾನನ ಮರ್ಜಿಗೆ ತಕ್ಕ ಕಂತೆ ಹೊಸೆವ ಕೆಲಸಕ್ಕೆ ನಮ್ಮ ಪತ್ರಕರ್ತರೂ ಒಪ್ಪಿಸಿಕೊಂಡರು.

ಮುಖ್ಯತಃ ಈ ರಾಜಕೀಯ ಹಿನ್ನೆಲೆಯ ಧಣಿಯ ಆಶಯಕ್ಕೆ ತಕ್ಕಂತೆ ಸುದ್ದಿಯ ಬಣ್ಣ ಬದಲಾಯಿಸುವ ವರಸೆಗೆ ಶುರು ಹಚ್ಚಿಕೊಂಡ ದಿನವೇ ಮಾಧ್ಯಮ ತನ್ನ ಶೀಲ ಕಳೆದುಕೊಂಡಿತು.

ಪುರಾಣದಲ್ಲಿ ಪ್ರಹ್ಲಾದನ ಒಂದು ಕಥೆ ಇದೆ. ಪ್ರಹ್ಲಾದ ತನ್ನ ಮೇರು ವ್ಯಕ್ತಿತ್ವದ ಮೂಲಕ ಇಂದ್ರ ಪದವಿಯನ್ನು ಪಡೆಯಲು ಅರ್ಹನಾಗುತ್ತಾನೆ. ಇದರಿಂದ ಬೆದರಿದ ಇಂದ್ರ (ಯಥಾ ಪ್ರಕಾರ) ಬ್ರಾಹ್ಮಣನ ವೇಷ ಧರಿಸಿ ಪ್ರಹ್ಲಾದನ ಬಳಿ ಬಂದು ದಾನ ಕೇಳುತ್ತಾನೆ. ಏನು ಬೇಕು ಎಂದು ಪ್ರಹ್ಲಾದ ಕೊಂಚ ಜಂಬದಲ್ಲಿ ಕೇಳುತ್ತಾನೆ. ಅದಕ್ಕೆ ಇಂದ್ರ, ‘ಶೀಲಲಕ್ಷ್ಮಿಯನ್ನು ಕೊಡು’ ಎನ್ನುತ್ತಾನೆ. ಪ್ರಹ್ಲಾದನಿಗೆ ಅರ್ಥವಾದರೂ ವಿಧಿ ಇಲ್ಲದೇ ಶೀಲಲಕ್ಷ್ಮಿಯನ್ನು ಧಾರೆ ಎರೆದು ಕೊಡುತ್ತಾನೆ.

ಮರು ಕ್ಷಣ- ಕೀರ್ತಿಲಕ್ಷ್ಮಿ, ಧೈರ್ಯಲಕ್ಷ್ಮಿ, ಕೊನೆಗೆ ರಾಜ್ಯಲಕ್ಷ್ಮಿ… ಹೀಗೆ ಎಲ್ಲಾ ಲಕ್ಷ್ಮಿಯರೂ ಪ್ರಹ್ಲಾದನನ್ನು ತೊರೆಯುತ್ತಾರೆ. ‘ಯಾಕೆ ತೊರೆಯುತ್ತಿದ್ದೀರಿ?’ ಎಂದು ಪ್ರಹ್ಲಾದ ಕೇಳಿದಾಗ ಶೀಲಲಕ್ಷ್ಮಿಯೇ ಬುನಾದಿ. ಅವಳಿಲ್ಲದಿದ್ದರೆ ಉಳಿದವರೆಲ್ಲಾ ಇರಲು ಸಾಧ್ಯವಿಲ್ಲ ಎಂಬ ಉತ್ತರ ಬರುತ್ತದೆ.

ವರ್ಷಕ್ಕೆ ಎರಡು ಬಾರಿಯಾದರೂ ಈ ಸಮಿತಿ ಮಾಧ್ಯಮದ ಎಲ್ಲಾ ಹಂತದವರ ವರ್ತನೆ ಸಾಧನೆಯನ್ನು ನೈತಿಕ ಸೂಚಿಗಳ ಮೂಲಕ ಪರಾಮರ್ಶೆ ಮಾಡಬೇಕು. ಇಂಟೆಗ್ರಿಟಿ ಮುಖ್ಯವಾಗುವಂಥಾ ಸೂಚಿಗಳಿಲ್ಲದಿದ್ದರೆ ಇಡೀ ಮಾಧ್ಯಮ ಕ್ಷೇತ್ರವೇ ತಲೆಹಿಡುಕರ, ಲೂಟಿಕೋರರ, ಬ್ಲಾಕ್‍ಮೈಲ್ ಏಜೆಂಟರ ಆಡುಂಬೊಲವಾಗುತ್ತದೆ.

ಇದರ ರೂಪಕ ಅರ್ಥ ಮಡ್ಡಿಗೂ ಅರ್ಥವಾಗುತ್ತದೆ. ಅಷ್ಟರ ಮಟ್ಟಿಗೆ ಸರಳ.

ನಮ್ಮ ಮಾಧ್ಯಮದ ದಳ್ಳಾಳಿಗಳಿಗೆ, ತಲೆಹಿಡುಕರಿಗೆ, ಇದು ಅರ್ಥವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಇತರ ಸಂಸ್ಥೆಗಳು, ಬ್ಯಾಂಕಿಂಗ್, ರಕ್ಷಣಾ ಮಂದಿ ಹೀಗೆ ಎಲ್ಲರೂ ತಮಗಿರುವ ವೃತ್ತಿ ಘನತೆಯನ್ನು ತೊರೆದು ವ್ಯವಹಾರಕ್ಕಿಳಿದರೆ ಯಾವ ಅರಾಜಕ ಸ್ಥಿತಿಗೆ ತಲುಪಿಯೇವು?

ಕೆಲವು ದುರಾಚಾರಗಳು ಸಮಾಜದ ನೈತಿಕ ಸ್ವಾಸ್ಥ್ಯದ ತಕ್ಕಡಿಯನ್ನು ತಮ್ಮೆಡೆಗೆ ವಾಲಿಸುವಷ್ಟು ಶಕ್ತವಾದಾಗ (ಇದಕ್ಕೆ ಟಿಪ್ಪಿಂಗ್ ಪಾಯಿಂಟ್ ಎಂದು ಕರೆಯುತ್ತಾರೆ) ಒಂದು ಸಾಮಾಜಿಕ ಬುನಾದಿಯೇ ಅಡಿಮೇಲಾಗುತ್ತದೆ. ಅದು ಎಲ್ಲಿಗೆ ಎಳೆದೊಯ್ದೀತು ಎಂಬ ಅಂದಾಜು ಯಾರಿಗೂ ಇಲ್ಲ. ಆದ್ದರಿಂದಲೇ ಅಂಥಾ ರೋಗಲಕ್ಷಣಗಳು ಕಂಡಾಗ ಮೊದಲು ಒಂದು ನೀತಿಸಂಹಿತೆ ನಮಗೆ ನಾವೇ ಜಾರಿಗೊಳಿಸಬೇಕು. ಅದರ ಜೊತೆಗೆ ಕಾನೂನುಗಳು. ಎಲ್ಲವೂ ನೆಟ್ಟಗಿದ್ದರೆ ಇದರ ಅಗತ್ಯವಿಲ್ಲ!

ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳ ಒಂದೊಂದು ಹೆಜ್ಜೆ ಗುರುತುಗಳ ಮೇಲೂ ಕಣ್ಣಿಡಲಾಗುತ್ತದೆ. ನಾಳೆ ಮುಜುಗರ ಎದುರಿಸಬಾರದು ಅಂತ. ಮಾಧ್ಯಮಗಳಿಗೆ ಇಂತಹ ರೇಡಿಯೋ ಕಾಲರ್ ಅಗತ್ಯವಿದೆ! ಕನಿಷ್ಠ ಈ ಮಾಧ್ಯಮಾಧಿಪತಿಗಳು ಮತ್ತು ಸಂಪಾದಕರು ಒಂದು ಒಂಬುಡ್ಸ್ ಮನ್ ಅಥವಾ ವಿಜಿಲೆನ್ಸ್ ಸಮಿತಿಯನ್ನು ಸ್ಥಾಪಿಸಿ ತಮ್ಮನ್ನು ತಾವೇ ಅದರ ನೈತಿಕ ಮೇಲ್ವಿಚಾರಣೆಗೆ ಒಪ್ಪಿಸಿಕೊಳ್ಳಬೇಕು. ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ಈ ಸಮಿತಿ ಮಾಧ್ಯಮದ ಎಲ್ಲಾ ಹಂತದವರ ವರ್ತನೆ ಸಾಧನೆಯನ್ನು ನೈತಿಕ ಸೂಚಿಗಳ ಮೂಲಕ ಪರಾಮರ್ಶೆ ಮಾಡಬೇಕು. ಇಂಟೆಗ್ರಿಟಿ ಮುಖ್ಯವಾಗುವಂಥಾ ಸೂಚಿಗಳಿಲ್ಲದಿದ್ದರೆ ಇಡೀ ಮಾಧ್ಯಮ ಕ್ಷೇತ್ರವೇ ತಲೆಹಿಡುಕರ, ಲೂಟಿಕೋರರ, ಬ್ಲಾಕ್‍ಮೈಲ್ ಏಜೆಂಟರ ಆಡುಂಬೊಲವಾಗುತ್ತದೆ.

ಈ ಒಪ್ಪಿಸಿಕೊಳ್ಳುವ ಪ್ರಕ್ರಿಯೆಗೆ ತಯಾರಾಗದಿದ್ದರೆ ಮುಂದಿನ ವರ್ಷಗಳಲ್ಲಿ ಬಲು ದೊಡ್ಡ ಬೆಲೆ ತೆರಬೇಕಾಗುತ್ತದೆ. ತನ್ನ ವೃತ್ತಿಯ ಪರಂಪರಾಗತ ಮೌಲ್ಯಗಳು ಕಾಲಿಗೆ ಕಟ್ಟಿದ ಗುಂಡು ಅಲ್ಲ; ಅದೊಂದು ಎದೆ ಪದಕ ಎಂಬ ಹೆಮ್ಮೆ ಮೂಡುವಂತೆ ವರ್ತಿಸದಿದ್ದರೆ ಬೀದಿ ಪಾಲಾಗುವ ದಿನ ದೂರವಿಲ್ಲ.

*ಲೇಖಕರು ಸಾಹಿತಿ, ಅಂಕಣಕಾರರು, ಪ್ರಗತಿಪರ ಚಿಂತಕರು.

Leave a Reply

Your email address will not be published.