ರೇಡಿಯೋ ಸಿಟಿ ಎಫ್‍ಎಂ 91.1 ಆರ್.ಜೆ. ರೌಂಡ್ ರೌಂಡ್ ರಜಸ್

ಮೂಲತಃ ಸಿವಿಲ್ ಎಂಜಿನಿಯರ್ ಆದ ರಜಸ್ ಜೈನ್, ರೇಡಿಯೋ ಸಿಟಿ ಎಫ್‍ಎಂ 91.1 ರೇಡಿಯೋ ಮೂಲಕ ರೌಂಡ್ ರೌಂಡ್ ರಜಸ್ ಅಂತಾ ಫೇಮಸ್ ಆದವರು.

ಕನ್ನಡ ಬಳಸುವ-ಬೆಳೆಸುವ ವಿಚಾರದಲ್ಲಿ ರೇಡಿಯೋ ಜಾಕಿ ಅವರ ಹೊಸ ಬಗೆಯ ನಿರೂಪಣೆ ಬಹಳಷ್ಟು ಹೊಸ ಪೀಳಿಗೆಯವರಿಗೆ ಇಷ್ಟ ಆಗಿದೆ, ಜೊತೆಗೆ ಕನ್ನಡೇತರರಲ್ಲಿ ಕನ್ನಡದ ಆಸಕ್ತಿ ಬೆಳೆಸಲು ಸಾಧ್ಯವಾಗಿದೆ ಅಂತ ಹೇಳ್ತಾರೆ. ಹಾಗೆಯೇ ಮೂಲ ಕನ್ನಡ ಶಬ್ದಗಳನ್ನು ತಿರುಚುತ್ತಾರೆ, ಉಚ್ಛಾರ ಅಪಭ್ರಂಶವಾಗ್ತಾ ಇದೆ, ಇಂಗ್ಲಿಷ್ ಶಬ್ದಗಳ ಬಳಕೆಯೇ ಹೆಚ್ಚಾಗಿದೆ ಅನ್ನೋ ಮಾತಿದೆ. ನೀವೇನ್ಹೇಳ್ತೀರಾ.?

ಎಕ್ಚೂಲಿ ರೇಡಿಯೋ ಜಾಕಿಗಳು ಕನ್ನಡ ಮಾತಾಡಲ್ಲ, ಕನ್ನಡಾನ ಹಾಳ್ ಮಾಡ್ತಾ ಇದಾರೆ ಅನ್ನೋದು ತಪ್ಪು. ನೀವೇ ಹೇಳಿದ ಹಾಗೆ ಕನ್ನಡೇತರರೂ ಕೂಡ ಕನ್ನಡ ಕಲಿಯೋ ತರ ಆಗಿದೆ ಅಂತಾ. ನಾವು ಅಂದ್ರೆ ಎಲ್ಲಾ ಆರ್‍ಜೆಗಳು ಶುದ್ಧ ಕನ್ನಡ ಮಾತಾಡ್ತೀವಿ ಅಂತ ಹೇಳಲ್ಲ. ಅಲ್ಲಿ ಇಲ್ಲಿ ಬ್ರಿಡ್ಜ್ ಥರ ಇಂಗ್ಲಿಷ್ ಪದಗಳನ್ನ ಬಳಸ್ತಾರೆ. ಉದಾಹರಣೆಗೆ ನೂರು ಶಬ್ದಗಳಿರುವ ಒಂದು ಸೆಂಟೆನ್ಸಲ್ಲಿ ಒಂದು ಇಂಗ್ಲಿಷ್ ಪದ ಬಳಸಿದ್ರೆ, ಕನ್ನಡ ಬರದೇ ಇರೋನಿಗೂ ಕೂಡ ಆ ಒಂದು ಇಂಗ್ಲಿಷ್ ಪದ ಇಡೀ ವಾಕ್ಯವನ್ನ ಅರ್ಥ ಮಾಡ್ಸತ್ತೆ. ಅಥವಾ ಇಡೀ ವಾಕ್ಯದಲ್ಲಿ ಏನ್ ಹೇಳಿರಬಹುದು ಅನ್ನೋದನ್ನ ಥಿಂಕ್ ಮಾಡಿ ಬಹುತೇಕ ಅರ್ಥ ಮಾಡ್ಕೋಳ್ಳೋಕೆ ಆತನಿಗೆ ದಾರಿಮಾಡಿಕೊಡುತ್ತೆ. ಇದರಿಂದ ಇನ್ನುಳಿದ ಶಬ್ದಗಳನ್ನು ಆತ ಕಲೀತಾ ಹೋಗ್ತಾನೆ.

ಈ ರೀತಿಯಾಗಿ ಭಾಷೆನೂ ಬೆಳಿತಾ ಹೋಗುತ್ತೆ. ಈ ಒಂದು ಬೆಳವಣಿಗೆಯಿಂದ ಎಷ್ಟೋ ಜನ ಕನ್ನಡದಲ್ಲದವರು ಕನ್ನಡ ಕಲಿತು ಬ್ಯಾಂಡ್‍ಗಳನ್ನ ಶುರುಮಾಡಿದಾರೆ. ಕನ್ನಡ ಶೋಗಳನ್ನ ಕೊಡ್ತಾರೆ. ಇದೆಲ್ಲಾ ಅಗೋದು ರೇಡಿಯೋ ಜಾಕಿಗಳಿಂದಾನೆ. ನಾವ್ಯಾರೂ ಕನ್ನಡಾನ ಹಾಳ್ ಮಾಡ್ತಾ ಇಲ್ಲ. ಇವತ್ತು ನಾವು ಬುಕ್ಕೀಷ್ ಲ್ಯಾಂಗವೇಜಲ್ಲಿ ಮಾತಾಡ್ಲಿಕ್ಕೆ ಹೋದ್ರೆ ಯಾರಿಗೂ ಇಷ್ಟ ಆಗಲ್ಲ. ಕಾಮನ್ ಮ್ಯಾನ್ ಹೇಗೆ ಮಾತಾಡ್ತಾನೆ ಹಾಗೇನೆ ನಾವು ಮಾತಾಡ್ಬೇಕು. ಆಗ ನಾವು ಕೇಳುಗರಿಗೆ ಹತ್ರ ಆಗ್ತೀವಿ. ಇವತ್ತಿನ ಪೇಪರ್ ಹೆಡ್‍ಲೈನ್ಸ್ ಕೂಡ ಇದೇ ರೀತಿಯಲ್ಲಿರುತ್ತವೆ. ಟ್ರೆಂಡ್ ಚೇಂಜ್ ಆದ್ಹಂಗೆ ಭಾಷೆ ಬದಲಾವಣೆ ಆಗಿದೆ ಅಷ್ಟೆ.

ಹಳೆಯ ತಲೆಮಾರಿನ ಹಳೆಯ ಚಿಂತನೆಗಳೂ ಸ್ಟೇಲ್ ಆಗಿವೆ. ಹೀಗಾಗಿ ಕನ್ನಡ ಬೆಳೆಸುವ ಕಾಯಕದಲ್ಲಿ ನಿಮ್ಮ ಪ್ರಕಾರ ಹೊಸ ದಾರಿ ಯಾವುದು?

ಮೊದಲು ನಾವು ಕನ್ನಡನ ಬಳಸ್ಬೇಕು. ಅದರಿಂದ ಕನ್ನಡ ತಾನ್ ತಾನೇ ಬೆಳಿಯುತ್ತೆ. ನಾನು ಬನಶಂಕರಿ, ಜಯನಗರದಲ್ಲಿ ಹುಟ್ಟಿಬೆಳೆದದ್ದು. ಅಪ್ಪಟ ಕನ್ನಡಿಗ. ನಾನು ಚನಾಗಿರೋ ಡ್ರೆಸ್ ಮಾಡ್ಕೊಂಡು ಹೋದ್ರೆ ಆಟೋದವ್ರು ನನ್ಹತ್ರ ‘ಕಿದರ್ ಜಾನಾ ಸಾಬ್’ ಅಂತ ಶುರುಮಾಡ್ತಾರೆ. ಆಗ ನಾನು ಕನ್ನಡದಲ್ಲೇ ಅವರನ್ನು ಮಾತಾಡಿಸ್ಬೇಕು. ಅಂದ್ರೆ ಯಾರೇ ನಿಮ್ಜೊತೆ ಬೇರೆ ಭಾಷೇಲಿ ಮಾತಾಡಿದ್ರೆ ನೀವು ಕನ್ನಡದಲ್ಲೇ ಮಾತಾಡೋದನ್ನ ಅಭಾಸ ಮಾಡ್ಕೊಳ್ಳಿ. ಇದೊಂದು ಮಾಡಿದ್ರೆ ಸಾಕು; ಕನ್ನಡ ಬೆಳೆಸೋ ಕೆಲಸ ಆದ್ಹಂಗೆ. ಇದೇನ್ ಕಷ್ಟ ಅಲ್ಲ.

ರೇಡಿಯೋ ಚಾನಲ್‍ಗಳಲ್ಲಿ ನಿರೂಪಣಾ ಶೈಲಿ ಹೀಗೇ ಇರಬೇಕು ಎಂಬ ಒತ್ತಡ ಇದೆಯೇ? ಬದಲಾವಣೆ ಬೇಕು ಅಂತ ನಿಮಗನ್ನಿಸಿದೆಯೇ?

ಇಲ್ಲ. ಇಲ್ಲಿ ಒಬ್ಬ ಆರ್‍ಜೆಗೆ ಯಾರೂ ಬಂದು ನೀನು ಹೀಗೇ ಮಾತಾಡು ಅಂತ ಹೇಳಲ್ಲ. ಅವರು ಹೇಳೋ ಒಂದೇ ಮಾತು ‘ನೀನು ನೀನಾಗಿರು’ ಅಂತ. ಅಂದ್ರೆ ನಾನು ಸಹಜವಾಗಿ ಮಾತಾಡೋ ಶೈಲಿಯಲ್ಲೇ ಮಾತಾಡು ಅಂತ ಹೇಳ್ತಾರೆ. ಇಲ್ದೆ ಹೋದ್ರೆ ಅದು ಫೇಕ್ ಅಂತ ಕೇಳೋವ್ರಿಗೆ ಅನ್ಸುತ್ತೆ. ಒಳ್ಳೇ ಕಂಟೆಂಟ್‍ನ್ನು ನಾವು ದಿನಾಲು ಮಾತಾಡೋ ಥರಾನೇ ಜನರಿಗೆ ಕೊಡು ಅಂತಾ ಮಾತ್ರ ಹೇಳ್ತಾರೆ. ಉದಾಹರಣೆಗೆ ಒಂದು ಜಾಗದ ಬಗ್ಗೆ ನಾನು ಮಾತನಾಡಬೇಕಾದ್ರೆ, ನಾನು ಆ ಜಾಗದ ಬಗ್ಗೆ ತಿಳ್ಕೋಬೇಕಾಗುತ್ತೆ. ಅಲ್ಲಿ ಬಂದು ಹೋಗೋವ್ರ ಬಗ್ಗೆ ತಿಳ್ಕೋಬೇಕಾಗುತ್ತೆ. ಅದರ ಹಿಸ್ಟರಿ ಸ್ಟಡಿ ಮಾಡ್ಬೇಕಾಗುತ್ತೆ. ಸ್ಟೋರಿ ಡೆವಲಪ್ ಮಾಡಬೇಕಾಗುತ್ತೆ. ಅದರ ಬಗ್ಗೆ ಎಲ್ಲ ಇನ್‍ಫಾರ್ಮೇಶನ್ ಕಲೆಕ್ಟ್ ಮಾಡಿ ಕಂಟೆಂಟ್ ರೆಡಿ ಮಾಡ್ಕೋಳ್ತೀವಿ. ಅದು ಎಷ್ಟು ಎಫೆಕ್ಟಿವ್ ಆಗಿ ಎಲ್ರಿಗೂ ರೀಚ್ ಮಾಡಿಸ್ಬೇಕು ಅಂತ ಯೋಚಿಸಿ ಮುಂದುವರಿತೀವಿ.

ರೇಡಿಯೋ ಜಾಕಿ ಆಗಬಯಸುವವರಿಗೆ ಕನ್ನಡ ಕಟ್ಟುವ ನಿಟ್ಟಿನಲ್ಲಿ ನಿಮ್ಮ ಸಲಹೆಗಳೇನು?

ನೀವು ನೀವಾಗಿರಿ. ಆದಷ್ಟು ಕನ್ನಡಾನ ಬಳಸಿ. ನಿಮ್ಮ ದಿನನಿತ್ಯದ ಜೀವನದಲ್ಲಿಯೂ ಕೂಡ ಕನ್ನಡ ಬಳಸಿ. ಅದನ್ನು ಮಾತನಾಡುವಾಗ ಎದುರಿಗಿರುವವರಿಗೆ ಅರ್ಥವಾಗುವಷ್ಟರ ಮಟ್ಟಿಗೆ ಮಾತ್ರ ಇಂಗ್ಲಿಷ್ ಪದಗಳನ್ನ ಬಳಸಿ. ಹೀಗಾದಾಗ ಮಾತ್ರ ರೇಡಿಯೋದಲ್ಲಿ ಮಾತನಾಡೋವಾಗ ಅಟೋಮೆಟಿಕ್ಕಾಗಿ ಅದು ಬರುತ್ತೆ. ಈಗ ಸುಮಾರು 9 ರೇಡಿಯೋ ಸ್ಟೇಷನ್‍ಗಳಿವೆ. ಅದರಲ್ಲಿ ಟಾಪ್ 3, ಟಾಪ್ 4ನಲ್ಲಿರೋದು ಕನ್ನಡದ ರೇಡಿಯೋ ಸ್ಟೇಷನ್‍ಗಳೇ. ಅಂದ್ರೆ ಹೆಚ್ಚು ಜನ ಕನ್ನಡಾನ ಕೇಳಕ್ಕೆ ಇಷ್ಟ ಪಡ್ತಾರೆ. ಕನ್ನಡದ ಮಾತುಗಾರರನ್ನು, ಹಾಡುಗಳನ್ನ ಕೇಳೋಕೆ ಇಷ್ಟ ಪಡ್ತಾರೆ. ಕನ್ನಡದ ಸೆಲೆಬ್ರಿಟಿಗಳ ಜೊತೆ ಮಾತಾಡಕ್ಕೆ ಇಷ್ಟ ಪಡ್ತಾರೆ. ಇಂಟರ್‍ನ್ಯಾಷನಲ್ ವಿಷಯಗಳನ್ನ ಕನ್ನಡದಲ್ಲಿ ಕೇಳೋಕೆ ಇಷ್ಟ ಪಡ್ತಾರೆ. ಇದರಿಂದ ಬೆಂಗಳೂರಿನಲ್ಲಿ ಇರೋ ಕನ್ನಡ ಸ್ಟೇಷನ್‍ಗಳು ಟಾಪ್‍ನಲ್ಲಿವೆ. ಮೊದಮೊದಲು ಹಿಂದಿ, ಇಂಗ್ಲಿಷ್, ಕನ್ನಡ ಕಾರ್ಯಕ್ರಮಗಳು ನಡೀತಾ ಇದ್ವು. ಈಗ ಕನ್ನಡದ ಕಾರ್ಯಕ್ರಮಗಳು ಮಾತ್ರ ನಡೀತಾ ಇವೆ. ಕನ್ನಡ ರೇಡಿಯೋಗೆ ಈಗ ಹೆಚ್ಚಿನ ಮಹತ್ವ.

ತಂತ್ರಜ್ಞಾನ ಬಳಕೆಯಿಂದ ಕನ್ನಡದ ಬೆಳವಣಿಗೆ ಆಗ್ತಾ ಇದೆಯಾ? ಕನ್ನಡದ ಬಳಕೆಗೆ ಇನ್ನೂ ಹೆಚ್ಚಿನ ಬದಲಾವಣೆಗಳು ಬೇಕಾ?

ನನಗೆ ಗೊತ್ತಿರೋ ಮಟ್ಟಿಗೆ ಡಿಜಿಟಲ್ ಬಳಕೆಗೆ, ಅಂದ್ರೆ ಸೋಷಿಯಲ್ ಮೀಡಿಯಾಗಳಂಥ ಕಡೆಗಳಲ್ಲಿ ಕನ್ನಡದ ಫಾಂಟ್‍ಗಳು ಹೆಚ್ಚಾಗಿಲ್ಲ. ಈಗ ವಾಟ್ಸಾಪ್‍ನಲ್ಲಿ ನೀವು ಏನೇ ಟೈಪ್ ಮಾಡಿದ್ರೂ ಅಲ್ಲಿ ಸಿಗೋದು ಒಂದೇ ಫಾಂಟ್. ಒಂದು ವೆಬ್ ಸೈಟ್ ಮಾಡ್ಬೇಕಾದ್ರೆ ಇಂಗ್ಲಿಷಿನಲ್ಲಿ ಇರೋ ಥರ ಕನ್ನಡದ ಫಾಂಟ್‍ಗಳಲ್ಲಿ ಹಚ್ಚಿನ ಆಯ್ಕೆ ಸಿಗೋಲ್ಲ. ಈ ವಿಷಯದಲ್ಲಿ ಟೆಕ್ಕಿಗರು ಹೆಚ್ಚಿನ ಆಸಕ್ತಿ ತೋರಿಸಿ ಪರಿಹಾರ ನೀಡಬೇಕು ಅಂತ ಅನಿಸ್ತಿದೆ.

ಕನ್ನಡ ಭಾಷೆಯ ಬೆಳವಣಿಗೆಗೆ ಇವತ್ತಿನ ಐಟಿ ಯಗದಲ್ಲಿ ನಿಮ್ಮ ಸಲಹೆ ಏನು?

ಸಲಹೆ ಕೊಡೋಷ್ಟು ದೊಡ್ಡೋನಲ್ಲ. ಕನ್ನಡವನ್ನು ದಿನನಿತ್ಯದ ಜೀವನದಲ್ಲಿ ಬಳಸಬೇಕು. ಈಗೀಗ ಎಷ್ಟೋ ಜನರಿಗೆ ಕನ್ನಡಿಗರಿಗೆ, ಕನ್ನಡ ಮಾತಾಡಕ್ಕೆ, ಓದಕ್ಕೆ, ಬರಿಯಕ್ಕೆ ಬರುತ್ತೆ. ಆದರೆ ಸಾಹಿತ್ಯ ಓದಿರೋಲ್ಲ. ಕನ್ನಡದ ಬಗ್ಗೆ ತಿಳ್ಕೊಂಡಿರಲ್ಲ. ಎಂಥೆಂಥ ಕಾವ್ಯಗಳು, ಸಾಹಿತ್ಯಗಳು ಕನ್ನಡದಲ್ಲಿವೆ, ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಅಂತ ಕೇಳಿರ್ತೀವಿ. ಅದನ್ನೆಲ್ಲಾ ಓದ್ತಾ ಹೋದ್ರೆ ಒಂದು ಒಳ್ಳೆ ಬೆಳವಣಿಗೆ ಕಾಣಬಹುದು.

ಆದ್ರೆ ಇವತ್ತಿನ ಐಟಿ ಯುಗದಲ್ಲಿ ಯಾರಿಗೂ ಟೈಮ್ ಇಲ್ಲ, ಕೂತ್ಕೊಂಡು ಓದೋ ಪೇಶನ್ಸ್ ಇಲ್ಲ. ಟ್ರಾಫಿಕ್ಕಲ್ಲೆ ನಿದ್ದೆ, ಊಟ, ಮೇಕಪ್ಪು ಅನ್ನೋ ಥರ ಇವತ್ತಿನ ಜೀವನ. ಜಗತ್ತು ನಡೀತಾ ಇರೋದೇ ಹಾಗೆ. ಮೊನ್ನೆ ರೇಡಿಯೋ ಸಿಟಿಯಲ್ಲಿ ಎಂ.ಎಸ್.ಸುಬ್ಬುಲಕ್ಷ್ಮೀ ಅವರ 100 ದಿನಗಳು ಅಂತ ಆಚರಣೆ ಮಾಡಿದ್ವಿ, ಅವರ ಬಗ್ಗೆ ವಿಷಯ ಸಂಗ್ರಹಣೆ ಮಾಡಿ ಜನಕ್ಕೆ ರೀಚ್ ಮಾಡಿಸೋದ್ರಲ್ಲಿ ಯಶಸ್ವಿಯಾದ್ವಿ. ಹಾಗೇನೇ ಇವತ್ತಿನ ಯಂಗ್ ಜನರೇಶನ್‍ಗೆ ಮಹಾಭಾರತದ ಕಥೆಗಳು ಅನ್ನೋ ಸೀರೀಸ್‍ನಲ್ಲಿ ಕಾರ್ಯಕ್ರಮ ಮಾಡಿದ್ವಿ. ಫ್ರೀಡಂ ಫೈಟರುಗಳನ್ನ ಪರಿಚಯಿಸುವ ಕಾರ್ಯಕ್ರಮ ಮಾಡಿದ್ವಿ. ಟ್ರಾಫಿಕ್ಕಲ್ಲೇ ತಮ್ಮ ಸಮಯವನ್ನು ಕಳಿತಿರೋ ಬೆಂಗಳೂರಲ್ಲಿ ವಾಸ ಮಾಡೋ ಎಲ್ರಿಗೂ ನಾವು ಎಫ್‍ಎಂ ಮೂಲಕ ಕನ್ನಡದ ರುಚಿ ಹಚ್ಚಸ್ತಿದೀವಿ.

ಜನ ಎಫ್‍ಎಂ ಇಷ್ಟ ಪಡೋಕೆ ಕಾರಣ ಏನು?

ಈಗ ಹೆಡ್ ಫೋನ್ ಹಾಕ್ಕೋಂಡು ಎಫ್‍ಎಂನಲ್ಲಿ ನನ್ನನ್ನ ಕೇಳ್ತಾ ಇದ್ರೆ ಕೇಳುಗನಿಗೆ ‘ಓ ರಜಸ್ ನನ್ ಜೊತೆ ಮಾತಾಡ್ತಾ ಇದಾನೆ’ ಅನ್ನೋ ಫೀಲಿಂಗ್ ಬರತ್ತೆ. ಯಾಕೇಂದ್ರೆ ಕೇಳುಗ ಟ್ರಾಫಿಕ್ಕಲ್ಲೋ, ವಾಕಿಂಗ್ ಮಾಡೋವಾಗ್ಲೋ, ಒಬ್ರೇ ಕೇಳ್ತಾ ಇರ್ತಾನೆ. ಆ ಸಮಯದಲ್ಲಿ ಬುಕ್ಕಿಶ್ ಕನ್ನಡಾನಾ ಬಳಸಿದ್ರೆ ಜನ ಟ್ಯೂನ್ ಔಟ್ ಆಗ್ತಾರೆ. ಬೋರ್ ಆಗುತ್ತೆ ಅವರಿಗೆ. ಅದೊಂದು ಥಿನ್ ಲೈನ್ ಇದೆ. ಅದನ್ನ ನಾವು ಕ್ರಾಸ್ ಮಾಡ್ಬಾರ್ದು. ಆ ಒಂಟಿತನದಲ್ಲಿ ನಾವೂ ಅವರ ಜೊತೆಗಿದೀವಿ ಅನ್ನೋ ಭಾವನೆ ಮೂಡಿಸ್ತೀವಿ. ಅದೇ ಕಾರಣ ಇರಬಹುದೇನೊ ಜನ ಎಫ್‍ಎಂ ಇಷ್ಟ ಪಡೋಕೆ.

Leave a Reply

Your email address will not be published.