ರೈತರಿಗೆ ಕೃಷಿ ಆಹಾರವಲ್ಲ, ವ್ಯಾಪಾರ!

ಈಗ ನಮ್ಮೂರು ಬದಲಾಗಿರುವುದು ನಿಜ, ಹೊಸ ಪೀಳಿಗೆ ಬಂದಿರುವುದೂ ನಿಜ. ಆದರೆ, ಊರಿನ ಕುರಿತು ನನ್ನ ನೆನಪುಗಳು ಬದಲಾಗಿಲ್ಲ. ಊರಿನ ಬಗ್ಗೆ ಅದೇ ಪ್ರೀತಿ, ಅದೇ ವ್ಯಾಮೋಹ, ಅದೇ ಕಾಳಜಿ; ಸ್ವಲ್ಪವೂ ಮುಕ್ಕಾಗದೆ ಉಳಿದಿದೆ.

ನಾನು ಹುಟ್ಟಿ ಬೆಳೆದ ಊರು ಹಂದನಕೆರೆ. ಈ ಊರನ್ನು ತೊರೆದು ಸುಮಾರು ನಲವತ್ತೆಂಟು ವರ್ಷಗಳಾಗಿವೆ. ಆದರೆ ನನ್ನೂರಿನ ಬಗೆಗಿನ ವ್ಯಾಮೋಹ, ಪ್ರೀತಿ, ಸೆಳೆತ ಸ್ವಲ್ಪವೂ ಕಡಿಮೆಯಾಗಿಲ್ಲ. ಈಗಲೂ ನಿವೃತ್ತಿ ಜೀವನವನ್ನು ಅಲ್ಲಿಯೇ ಕಳೆಯಬೇಕೆಂದು ಆಸೆ. ಆದರೆ ಡಾ.ರಹಮತ್ ತರೀಕೆರೆಯವರು ಒಂದು ಕಡೆ ಹುಟ್ಟೂರಿನ ಕುರಿತು ಆಡಿರುವ ಮಾತು ಜ್ಞಾಪಕಕ್ಕೆ ಬಂದು ಆ ಯೋಚನೆಯನ್ನು ಕೈಬಿಟ್ಟಿದ್ದೇನೆ. ಡಾ.ತರೀಕೆರೆಯವರು ತಮ್ಮ ಕೃತಿ ‘ಧರ್ಮಪರೀಕ್ಷೆ’ಯಲ್ಲಿ ಈ ರೀತಿ ಹೇಳುತ್ತಾರೆ:

‘ಹುಟ್ಟಿದ ಹಳ್ಳಿಗೆ ಬರುವುದು ಸುಲಭದ ಕೆಲಸವಲ್ಲ. ಬಾಲ್ಯದ ಮಧುರ ಸ್ಮತಿಗಳಿಗೆ ಕಾರಣವಾಗಿರುವ ಹಳ್ಳಿ ಬದಲಾಗಿರುತ್ತದೆ. ಜತೆಗಾರರು ತೀರಿಕೊಂಡಿರುತ್ತಾರೆ. ತಮ್ಮನ್ನು ಗುರುತಿಸದ ಹೊಸ ತಲೆಮಾರು ಬಂದಿರುತ್ತದೆ. ಅದರ ಆದ್ಯತೆಗಳೇ ಬೇರೆಯಾಗಿರುತ್ತವೆ. ನಾವು ಹುಟ್ಟಿ ಬೆಳೆದ ಊರುಗಳು ನಮ್ಮ ಬದುಕಿನ ಯಾವ ಕಾಲಘಟ್ಟದಲ್ಲಿ ಹೋದರೂ ನಮ್ಮವಾಗುತ್ತವೆ ಎಂದು ಭಾವಿಸುವುದು ತಪ್ಪು. ಅವು ಬಾಲ್ಯದ ಸ್ಮøತಿಗಳನ್ನು ಕೆರಳಿಸುವ ಕಾರಣಕ್ಕೆ ಕೆಲವು ದಿನ ಆಪ್ತವಾಗಿರುತ್ತವೆ.’

ನಮ್ಮೂರು ಸುತ್ತಲೂ ಸಮೃದ್ಧ ನೀರಿನಿಂದ ತುಂಬಿ ಕಂಗೊಳಿಸುವ ಕೆರೆಗಳಿಂದ ಕೂಡಿರುವ ದ್ವೀಪವಾಗಿದೆ. ಊರಿನ ಪೂರ್ವಕ್ಕೆ ‘ಹಳೆಕೆರೆ’, ಪಶ್ಚಿಮಕ್ಕೆ ‘ನಾಗತಿಕೆರೆ’, ಉತ್ತರದಲ್ಲಿ ‘ದೊಡ್ಡಗುಣಿ’ ಇದ್ದರೆ, ದಕ್ಷಿಣದಲ್ಲಿ ‘ತೋಟದಯ್ಯನಕೆರೆ’ ಇದೆ. ಈ ಕೆರೆಗಳಲ್ಲಿ ನೀರು ಸಮೃದ್ಧವಾಗಿರುತ್ತಿತ್ತು. ಇಲ್ಲಿ ನಾನು ಈಜಾಡಿದ್ದೇನೆ, ದನಕರುಗಳನ್ನು ಈಜಾಡಿಸಿದ್ದೇನೆ, ಮೀನು ಹಿಡಿದಿದ್ದೇನೆ, ಒಂದು ಬಾರಿ ಕೆರೆಯಲ್ಲಿ ಮುಳುಗಿ ಆಶ್ಚರ್ಯಕರ ರೀತಿಯಲ್ಲಿ ಬದುಕಿ ಬಂದಿದ್ದೇನೆ. ಊರಿನ ಉತ್ತರದಲ್ಲೊಂದು, ದಕ್ಷಿಣದಲ್ಲೊಂದು ಸಿಹಿನೀರಿನ ಬಾವಿಗಳಿದ್ದು, ಅವುಗಳೂ ಸಮೃದ್ಧ ನೀರಿನ ಸೆಲೆಗಳಾಗಿದ್ದು, ಇಡೀ ಊರಿನÀ ದಾಹವನ್ನು ಇಂಗಿಸುವ ಮೂಲವಾಗಿದ್ದವು.

ಊರಿನ ಪಶ್ಚಿಮಕ್ಕೆ ಒಂದು ಕಲಾತ್ಮಕ ಬಾವಿ ಇದೆ. ಇದಕ್ಕೆ ಹನ್ನೆರಡು ಸೋಪಾನಗಳಿರುವುದರಿಂದ ಇದನ್ನು ‘ಹನ್ನೆರಡು ಸೋಪಾನದ ಬಾವಿ’ ಎಂದು ಕರೆಯುತ್ತಾರೆ. ನಾಗತಿ ಚೆನ್ನಮ್ಮ ಎಂಬಾಕೆ ಊರಿನವರ ಮತ್ತು ಸೈನಿಕರ ಹಿತಕ್ಕಾಗಿ ಈ ಬಾವಿಯನ್ನು ನಿರ್ಮಿಸಿದಳೆಂದು ಒಂದು ಜನಪದ ಗೀತೆಯಿಂದ ತಿಳಿದುಬರುತ್ತದೆ.

ಅಷ್ಟೆ ಅಲ್ಲ, ನಮ್ಮೂರು ಪಾಳೆಗಾರರು ಆಳಿದ ಇತಿಹಾಸ ಪ್ರಸಿದ್ಧ ಊರು. ಊರಿನ ಸುತ್ತ ಕೋಟೆ ಕಟ್ಟಿಸಿಕೊಂಡು ವಿವಿಧ ಕಾಲಘಟ್ಟದಲ್ಲಿ, ಬೇರೆಬೇರೆ ಪಾಳೆಗಾರರು ಆಳಿದ ಊರು. ಸುಮಾರು 15ನೆಯ ಶತಮಾನದಲ್ಲಿ ರಾಜಾ ತಿಮ್ಮಣ್ಣನಾಯಕ ಎಂಬ ಪಾಳೆಗಾರನ ಕಾಲದಲ್ಲಿ ಊರಿನ ಸುತ್ತ ಸುಭದ್ರವಾದ ಕೋಟೆ ನಿರ್ಮಾಣವಾಗಿತ್ತು ಎಂಬುದು ನಮ್ಮೂರಿನ ಇತಿಹಾಸದಿಂದ ತಿಳಿದು ಬರುತ್ತದೆ. ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ, ಅಂದರೆ ಸುಮಾರು 50 ವರ್ಷಗಳ ಹಿಂದೆ ಅಲ್ಲಲ್ಲೆ ಶಿಥಿಲಗೊಂಡ ಕೋಟೆ ಗೋಡೆಯನ್ನು ನೋಡಿದ್ದೇನೆ. ನನಗೆ ಮೊದಲಿನಿಂದಲೂ ಒಂದು ಬಲವಾದ ಸಂದೇಹವೇನೆಂದರೆ- ಏನೇನೂ ಆರ್ಥಿಕವಾಗಿ ಮುಂದುವರೆಯದಿರುವ ಇಂಥ ಬಡ ಊರಿನಲ್ಲಿ ಏನನ್ನು ರಕ್ಷಿಸಬೇಕೆಂದು ಇಂಥ ಭಾರಿ ಕೋಟೆಯನ್ನು ಕಟ್ಟಿಸಿದರೋ ನಾ ಕಾಣೆ. ಬಹುಶಃ ಶತ್ರು ರಾಜರ ಸೈನಿಕರಿಂದ ಜನರ ಪ್ರಾಣ ರಕ್ಷಣೆಯ ಉದ್ದೇಶವಿರಬಹುದೇ? ಅದೇ ನಿಜವಾಗಿದ್ದಲ್ಲಿ, ಆ ಕಾಲದಲ್ಲಿ ಜನರ ಜೀವನವಿರಲಿ, ‘ಜೀವ’ ಎಷ್ಟೊಂದು ಅತಂತ್ರ ಸ್ಥಿತಿಯಲ್ಲಿತ್ತು ಎಂದು ಯೋಚಿಸಿದರೆ ಭಯವಾಗುತ್ತದೆ.

ನಮ್ಮೂರಿನ ಆಗ್ನೇಯ ದಿಕ್ಕಿನಲ್ಲಿ ಒಂದು ಕಲ್ಯಾಣಿ ಇದೆ. ಅದರ ಪಕ್ಕದಲ್ಲೇ ಸುಮಾರು 30-40 ಅಡಿ ಎತ್ತರದ ಒಂದು ಕಲ್ಲುಕಂಬವಿದೆ. ಆ ಕಾಲದಲ್ಲಿ ಇಂಥ ಭಾರಿ ಕಂಬವನ್ನು ಎಲ್ಲಿಂದ ತಂದರು? ಹೇಗೆ ತಂದರು? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಕಲ್ಯಾಣಿಯ ಪಕ್ಕದಲ್ಲಿರುವ ಈ ಕಂಬದ ಮೇಲಿನಿಂದ ಕಲ್ಯಾಣಿಗೆ ‘ಡೈ’ ಹೊಡೆದು ಈಜುಪಟುಗಳು ಈಜುತ್ತಿದ್ದರೆಂಬ ಮಾಹಿತಿ ಲಭ್ಯವಿದೆ. ಇವನ್ನೆಲ್ಲ ನೋಡಿದರೆ ನಮ್ಮೂರಿನ ಪೂರ್ವಿಕರು ಎಂಥ ಸಾಹಸಿಗಳು ಎಂಬುದು ವೇದ್ಯವಾಗುತ್ತದೆ.

ಅಂದು ನೀರಿನಿಂದ ತುಂಬಿ ಕಂಗೊಳಿಸುತ್ತಿದ್ದ, ಜನರಿಗೆ, ಪ್ರಾಣಿ-ಪಕ್ಷಿಗಳಿಗೆ, ತೋಟ ಗದ್ದೆಗಳಿಗೆ ನೀರುಣಿಸುತ್ತಿದ್ದ ಕೆರೆಗಳ ಇಂದಿನ ಸ್ಥಿತಿಯನ್ನು ನೋಡಿದರೆ, ಜೀವ ಒಂದು ಕ್ಷಣ ತಲ್ಲಣಗೊಳ್ಳುತ್ತದೆ. ಯಾಕೆ ನಮ್ಮ ಊರಿನ ಕೆರೆಗಳಿಗೆ ಹೀಗೆ ಬತ್ತಿ ಬರಿದಾಗುವ ಸ್ಥಿತಿ ಬಂತು ಎಂಬುದನ್ನು ನೆನೆದರೆ ಬಹಳ ದುಃಖವಾಗುತ್ತದೆ. ನಮ್ಮ ಜಾವಗಲ್ ಶ್ರೀನಾಥ್ ಅವರೋ, ಅನಿಲ್ ಕುಂಬ್ಳೆಯವರೋ ನಮ್ಮೂರಿಗೆ ಬಂದು ಈಗಿನ ‘ಹಳೆಕೆರೆ’ಯನ್ನು ನೋಡಿದರೆ ಅಲ್ಲಿ ಅದ್ಭುತವಾದ ಒಂದು ‘ಕ್ರಿಕೆಟ್ ಸ್ಟೇಡಿಯಂ’ ನಿರ್ಮಿಸುವಂತೆ ಸಲಹೆ ಕೊಟ್ಟಾರು. ಹಾಗೆಯೇ ಈಗಿನ ‘ತೋಟದಯ್ಯನ ಕೆರೆ’ಯಲ್ಲಿ ‘ಫುಟ್‍ಬಾಲ್ ಸ್ಟೇಡಿಯಂ’ ನಿರ್ಮಿಸಲು ಸಲಹೆ ನೀಡಬಹುದು!

ಈಗ ಖಚಿತವಾಗಿ ಹೇಳಬಹುದಾದ ಸಂಗತಿಯೆಂದರೆ -ಇನ್ನುಮುಂದೆ ಯಾವತ್ತೂ ಈ ಕೆರೆಗಳಿಗೆ ಮೊದಲಿನ ವೈಭವ ಮರುಕಳಿಸುವುದಿಲ್ಲ. ಈ ದುಃಸ್ಥಿತಿಗೆ ಕಾರಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ: ನಾವು ಪರಿಸರವನ್ನು ರಿಪೇರಿ ಮಾಡುವುದಕ್ಕೆ ಸಾಧ್ಯವಾಗದ ಹಾಗೆ ಹಾಳುಗೆಡವಿದ್ದೇವೆ. ಇದ್ದಬದ್ದ ಕಾಡನ್ನು ಬರಿದು ಮಾಡಿದ್ದೇವೆ. ಮರ-ಗಿಡ, ಪಶು-ಪಕ್ಷಿಗಳ ದ್ವೇಷಿಗಳು ನಾವು. ಎಲ್ಲೆಂದರಲ್ಲಿ ಬೋರ್‍ವೆಲ್‍ಗಳನ್ನು ಕೊರೆದು ಅಂತರ್ಜಲವನ್ನೆಲ್ಲ ಬರಿದು ಮಾಡಿದ್ದೇವೆ. ಮೇಲ್ ಜಲ ಇಲ್ಲದಿದ್ದರೆ ಪ್ರಾಣಿ-ಪಕ್ಷಿಗಳು ಕುಡಿಯಲು ನೀರಿಲ್ಲದೆ ಸಾಯಬೇಕಾಗುತ್ತದೆ. ಕುಡಿಯುವ ನೀರಿನ ಬಾವಿಗಳೂ ಬತ್ತಿ ಬರಿದಾಗಿರುವುದರಿಂದ ಸರ್ಕಾರ ಕೊಳವೆ ಬಾವಿಯಿಂದ ಜನರ ನೀರಿನ ಅಗತ್ಯವನ್ನೇನೋ ಪೂರೈಸುತ್ತಿದೆ, ಆದರೆ ಪ್ರಾಣಿ-ಪಕ್ಷಿಗಳ ಗತಿ?

ನಮ್ಮೂರಿನ ಬಹುಪಾಲು ಜನರು ಮಳೆ ಆಧಾರಿತ ವ್ಯವಸಾಯ ಮಾಡುವ ಕೃಷಿಕರು. ಮನೆಯಲ್ಲಿ ಹಸು, ಎಮ್ಮೆ, ಎತ್ತು, ಕುರಿ, ಕೋಳಿಗಳನ್ನು ಸಾಕುತ್ತಾ, ತಮ್ಮ ಜೀವನಕ್ಕೆ ಬೇಕಾದ ಕಾಳು-ಕಡಿ ಅಂದರೆ ರಾಗಿ, ಜೋಳ, ಕಡಲೆಕಾಯಿ, ಹೆಸರು, ಅಲಸಂದೆ, ಎಳ್ಳು, ಹುರಳಿ, ಸಾಮೆ, ಹಾರಕ, ನವಣೆ, ಬರಗು, ಸಜ್ಜೆ, ಉಚ್ಚಳ್ಳು, ಅರಳು ಮುಂತಾದ ಬೆಳೆಗಳನ್ನು ಬೆಳೆದುಕೊಂಡು ಕಾಲ ಹಾಕುತ್ತಿದ್ದರು. ಅಂದು ಅವರಿಗಿದ್ದ ಅನುಕೂಲದ ಪರಿಸ್ಥಿತಿಯೆಂದರೆ ಕಾಲಕಾಲಕ್ಕೆ ಮಳೆ ಸುರಿಯುತ್ತಿದ್ದುದು. ಮನೆಯ ಅಗತ್ಯಕ್ಕಾಗಿ ಬೆಳೆ ಬೆಳೆಯುತ್ತಿದ್ದರೆ ವಿನಾ ಮಾರಾಟಕ್ಕಾಗಿಯಲ್ಲ. ನೀರಿಗಾಗಿ ಬೋರ್‍ವೆಲ್ ತೋಡಿಸಲಿಲ್ಲ, ಬೆಳೆಗೆ ರಾಸಾಯನಿಕ ಗೊಬ್ಬರ ಹಾಕಲಿಲ್ಲ, ಕ್ರಿಮಿನಾಶಕಗಳನ್ನು ಸಿಂಪಡಿಸಲಿಲ್ಲ, ಉಳುಮೆಗೆ ಟ್ರ್ಯಾಕ್ಟರ್ ಬಳಸಲಿಲ್ಲ. ಉಳಲು ಬಳಸಿದ್ದು ನೇಗಿಲು, ಉಪಯೋಗಿಸಿದ್ದು ಕೊಟ್ಟಿಗೆ ಗೊಬ್ಬರ ಮಾತ್ರ. ಮಳೆರಾಯನ ಕೃಪೆಯ ಮೇಲೆ ಅವರ ಬೆವರಿನ ಬೆಲೆ ನಿರ್ಧಾರವಾಗುತ್ತಿತ್ತು.

ಇಲ್ಲಿನ ರೈತರ ಪ್ರಧಾನ ಬೆಳೆ ರಾಗಿ, ಜನರ ಮುಖ್ಯ ಆಹಾರ ರಾಗಿಮುದ್ದೆ. ಆದ್ದರಿಂದ ನಮ್ಮ್ಮೂರಿನಲ್ಲಿ ‘ಸಿದ್ಧಪ್ಪನಿಗಿಂತ ಮಿಗಿಲಾದ ದೇವರಿಲ್ಲ, ಮುದ್ದೆಪ್ಪಗಿಂತ ಮಿಗಿಲಾದ ಊಟವಿಲ್ಲ’ ಎಂಬ ಮಾತು ಬಳಕೆಯಲ್ಲಿದೆ. ನಮ್ಮೂರಿನ ಜನ ಅನ್ನವನ್ನು ಶ್ರೀಮಂತರ ಆಹಾರ ಎಂದು ತಿಳಿದಿದ್ದರು.

ವ್ಯವಸಾಯ ಲಾಭದ ಬಾಬತ್ತಾಗಿ ಉಳಿದಿಲ್ಲ. ಅದಕ್ಕಾಗಿಯೇ ಯುವಕರು ಉದ್ಯೋಗ ಅರಸುತ್ತಾ ಪಟ್ಟಣದ ಕಡೆ ಗುಳೆ ಬರುತ್ತಿದ್ದಾರೆ. ಜತೆಗೆ ಕೃಷಿಕ ಯುವಕರಿಗೆ ಮದುವೆಗೆ ಹೆಣ್ಣು ಸಿಗದಿರುವುದೂ ಅವರು ಪಟ್ಟಣದ ಕಡೆ ಬರುವುದಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ಊರು ವೃದ್ಧಾಶ್ರಮವಾಗಿ ಮಾರ್ಪಟ್ಟಿದೆ.

ಆದರೆ ಇಂದು ನಮ್ಮೂರಿನ ರೈತರಿಗೆ ಕೃಷಿ ಆಹಾರವಲ್ಲ, ವ್ಯಾಪಾರ. ರೈತ ಬಹುಬೆಳೆ ಪದ್ಧತಿಗೆ ಬದಲಾಗಿ ಏಕಬೆಳೆ ಪದ್ಧತಿಗೆ ಇಳಿದಿದ್ದಾನೆ. ನೇಗಿಲ ಜಾಗವನ್ನು ಟ್ರ್ಯಾಕ್ಟರ್ ಆಕ್ರಮಿಸಿಕೊಂಡಿದೆ. ಅದರಿಂದ ಊರಿನಲ್ಲಿ ಗಿಜಿಗುಡುತ್ತಿದ್ದ ದನಕರು, ಎತ್ತು, ಎಮ್ಮೆಗಳು ವಿರಳವಾಗಿವೆ. ಇವುಗಳಿಂದ ಬರುತ್ತಿದ್ದ ಗೊಬ್ಬರ ಇಲ್ಲವಾಗಿ ರೈತ ರಾಸಾಯನಿಕ ಗೊಬ್ಬರದ ಮೇಲೆ ಅವಲಂಬಿಸುವುದು ಅನಿವಾರ್ಯವಾಗಿದೆ. ನೀರಿಗಾಗಿ ಮಳೆಯನ್ನು ಕಾಯದೆ ಬೋರ್‍ವೆಲ್ ತೋಡಿಸಿದ್ದಾನೆ. ಹೀಗೆ ಸಹಜ ಕೃಷಿಯಿಂದ ರೈತ ಬದಲಾಗಿದ್ದರಿಂದ ಖರ್ಚು ಹೆಚ್ಚಾಗಿದೆ; ವ್ಯವಸಾಯ ಲಾಭದ ಬಾಬತ್ತಾಗಿ ಉಳಿದಿಲ್ಲ. ಅದಕ್ಕಾಗಿಯೇ ಯುವಕರು ಉದ್ಯೋಗ ಅರಸುತ್ತಾ ಪಟ್ಟಣದ ಕಡೆ ಗುಳೆ ಬರುತ್ತಿದ್ದಾರೆ. ಜತೆಗೆ ಕೃಷಿಕ ಯುವಕರಿಗೆ ಮದುವೆಗೆ ಹೆಣ್ಣು ಸಿಗದಿರುವುದೂ ಅವರು ಪಟ್ಟಣದ ಕಡೆ ಬರುವುದಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ಊರು ವೃದ್ಧಾಶ್ರಮವಾಗಿ ಮಾರ್ಪಟ್ಟಿದೆ.

ನಮ್ಮೂರಿನಲ್ಲಿ ಒಂದು ಕಾಲದಲ್ಲಿ 100 ದೇವಾಲಯಗಳು ಇದ್ದವೆಂದು ಹೇಳಲಾಗುತ್ತದೆ. ಅಲ್ಲದೆ, ಇಲ್ಲಿ ಸಿದ್ಧರ ಮಠಗಳಿದ್ದವು. ಅನತಿ ದೂರದಲ್ಲಿ ಸಿದ್ಧರಬೆಟ್ಟವಿದೆ. ಈ ಪೈಕಿ ಈಗ ನಮ್ಮೂರಿನಲ್ಲಿ ಒಂಬತ್ತು ಪ್ರಾಚೀನ ದೇವಾಲಯಗಳೂ, ಐದಾರು ಅರ್ವಾಚೀನ ದೇವಾಲಯಗಳೂ ಸುಸ್ಥಿತಿಯಲ್ಲಿವೆ. ಪ್ರಾಚೀನ ದೇವಾಲಯಗಳಲ್ಲಿ ಗಂಗಾಧರೇಶ್ವರ ದೇವಾಲಯ, ರೇವಣಸಿದ್ಧೇಶ್ವರ ದೇವಾಲಯ, ಹನುಮಂತರಾಯ ದೇವಾಲಯ, ಹಾಗೂ ಸಿದ್ಧರಮಠ ಒಂದು ಬಾರಿಯಾದರೂ ನೋಡಲೇಬೇಕಾದಂಥವು. ನಮ್ಮೂರು ಶೈವ, ವೈಷ್ಣವ ಹಾಗೂ ಸಿದ್ಧರು ಸಾಮರಸ್ಯದಿಂದ ಬಾಳಿದ ಮಾದರಿ ಊರು. ಊರ ಜನ ದೇವಾಲಯಗಳ ಬಗ್ಗೆ ವಹಿಸುವ ಕಾಳಜಿಯನ್ನು ಶಾಲೆಗಳ ಬಗ್ಗೆ ವಹಿಸುವುದಿಲ್ಲ ಎಂಬುದು ಖೇದದ ಸಂಗತಿ.

ನಮ್ಮೂರಿನಲ್ಲಿ ಬ್ರಾಹ್ಮಣರಿಂದ ಮೊದಲ್ಗೊಂಡು ದಲಿತರವರೆಗೆ ಎಲ್ಲ ಜಾತಿಯ ಜನರು ಸಹಬಾಳ್ವೆ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲುಮತ/ಕುರುಬ ಜಾತಿಯವರಿದ್ದಾರೆ. ಮುಸ್ಲಿಂ ಕುಟುಂಬಗಳೂ ಹಿಂದೂಗಳ ಜತೆ ಸಾಮರಸ್ಯದಿಂದ ಕೂಡಿ ಬದುಕುತ್ತಿವೆ. ನಮ್ಮೂರಲ್ಲಿ ಜಾತಿ ಜಗಳ ಇಲ್ಲ, ಧರ್ಮ ಸಂಘರ್ಷ ಇಲ್ಲ. ಮೊದಲು ದಲಿತರನ್ನು ಊರ ಹೊರಗೆ ಇಡಲಾಗಿತ್ತು ಮತ್ತು ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದೆ.

ನಮ್ಮೂರಿನಲ್ಲಿ ದೇವಸ್ಥಾನಗಳಲ್ಲದೆ ಒಂದು ಮಸೀದಿಯೂ ಇದೆ. ಇಲ್ಲಿ ವರ್ಷಕ್ಕೋ, ಎರಡು ವರ್ಷಕ್ಕೋ ಒಂದು ಬಾರಿ ‘ಅಲಾಬಿ ಜಲ್ದಿ’ ನಡೆಯುತ್ತದೆ. ಈ ಸಂದರ್ಭದಲ್ಲಿ ಬಾಬಯ್ಯನಿಗೆ ಸಕ್ಕರೆ ಓದಿಸುವುದರಿಂದ ಹಿಡಿದು ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವವರು ಹಿಂದುಗಳು. ಹುಲಿವೇಷ, ಪಾಳೆಗಾರನ ವೇಷ, ಕರಡಿ ವೇಷ ವಿದೂಷಕನ ವೇಷ -ಹೀಗೆ ಎಲ್ಲ ವೇಷಗಳನ್ನು ಹಾಕಿ ಕುಣಿದು ಕುಪ್ಪಳಿಸಿ ಸೇರಿರುವ ಜನರನ್ನು ರಂಜಿಸುವವರು ಹಿಂದುಗಳು. ಹಿಂದೂ-ಮುಸ್ಲಿಂ ಸಾಮರಸ್ಯ ಬರೀ ಮಾತಿನಲ್ಲಿಲ್ಲ, ಜನರ ನಡೆಯಲ್ಲಿದೆ.

*ಲೇಖಕರು ಸಚಿವಾಲಯ ತರಬೇತಿ ಸಂಸ್ಥೆಯ ನಿವೃತ್ತ ಉಪನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿ.

Leave a Reply

Your email address will not be published.