ರೋಗಗ್ರಸ್ತ ವೈದ್ಯಶಿಕ್ಷಣಕ್ಕೆ ಚಿಕಿತ್ಸೆ ಬೇಕಿದೆ!

ಇಂದು ವೈದ್ಯಕೀಯ ಶಿಕ್ಷಣ ಮಾರಾಟಕ್ಕಿದೆ. ಅದೊಂದು ಹಣ ಸುಲಿಯುವ ಸದವಕಾಶವೆಂದೇ ಭಾವಿಸಲಾಗಿದೆ. ಶಿಕ್ಷಣವೇ ಹಾಗಾದರೆ ಸಾಮಾಜಿಕ ನೈತಿಕತೆಯ ಮೂಲಸೆಲೆಗಳೆಲ್ಲ ಭ್ರಷ್ಟಗೊಂಡ ಕಾಲದಲ್ಲಿ ಹೊಸತಲೆಮಾರಿನ ವೈದ್ಯರು ಕಾಲದ ಸಂಕಟಗಳನ್ನು, ರೋಗರುಜಿನಗಳ ಕಾರಣವಾದ ಬದುಕಿನ ಕಷ್ಟ ಮೂಲಗಳನ್ನು ಅರಿಯುವುದು ಹೇಗೆ?

ಉತ್ತಮ ವೈದ್ಯರಾಗಲು ಜೀವ ಪ್ರೀತಿಯ ಸೂಕ್ಷ್ಮ ಗ್ರಹಿಕೆ ಇರಬೇಕು. ತಾವು ವ್ಯವಹರಿಸುತ್ತಿರುವುದು ಯಂತ್ರಗಳೊಡನಲ್ಲ, ರಕ್ತ ಮಾಂಸತುಂಬಿದ ಮನಸಿನೊಂದಿಗೆ ಎಂಬ ಅರಿವಿರಬೇಕು. ಪ್ರಕೃತಿ, ಸಮಯ, ತಾಳ್ಮೆ ಈ ಮೂರೂ ತನಗಿಂತ ಉತ್ತಮ ವೈದ್ಯರೆಂಬ ವಿನಯವಿರಬೇಕು. ಬದುಕಿನ ಬಗೆಗೆ ದೀರ್ಘ ಮುನ್ನೋಟ ಹೊಂದಿರಬೇಕು. ಮನುಷ್ಯ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಲೇ ದೂರ ನಿಂತು ಗಮನಿಸುವುದೂ ಗೊತ್ತಿರಬೇಕು. ಹೇಳುವುದಕ್ಕಿಂತ ಹೆಚ್ಚು ಕೇಳಲು ಕಲಿತಿರಬೇಕು. ಸಾವು ಮತ್ತು ಬದುಕುವ ಪ್ರೀತಿ ಎರಡೂ ಜೀವನದ ಅನಿವಾರ್ಯ ಗುರಿಗಳೆಂಬ ಅರಿವಿರಬೇಕು. ನಿರ್ದುಷ್ಟವಾಗಿ ಬದುಕನ್ನು ನೋಡಿ, ಇತರರ ನಡವಳಿಕೆಗಳ ಬಗೆಗೆ ಹಗುರ ತೀರ್ಮಾನಗಳನ್ನು ತಾಳದೇ, ಯಾವ ಅಭಿಪ್ರಾಯವನ್ನೂ ಹೇರದಂತಿರಬೇಕು. ಕುತೂಹಲದಿಂದ ಕೇಳುತ್ತಲೇ ನೂರು ಗುಟ್ಟುಗಳನ್ನು ಅಡಗಿಸಿ ಕೊಳ್ಳಬೇಕು. ಆಶಾವಾದಿಯಾಗಿರಬೇಕು, ವಾಸ್ತವವಾದಿಯಾಗಿರಬೇಕು, ತಪ್ಪು ಒಪ್ಪಿಕೊಳ್ಳಲು ಸಾಧ್ಯವಿರಬೇಕು.

ರೋಗಿ ಬರೀರೋಗಿಯಲ್ಲ. ಅವರು ಯಾರದೋ ಗಂಡ/ಹೆಂಡತಿ, ಮಗ, ಮಗಳು, ಸೋದರ, ತಾಯಿ ಆಗಿರುತ್ತಾರೆ. ಆ ಎಲ್ಲ ಪಾತ್ರ ನಿಭಾವಣೆಯಲ್ಲಿ, ಕಾಯಿಲೆ, ಸಾವಿನಂತಹ ಅನಿವಾರ್ಯ, ಅಪರಿಹಾರ್ಯ ಸಂದರ್ಭಗಳಲ್ಲಿ ಉಂಟಾಗುವ ಭಾವನಾತ್ಮಕ ಹಾಗೂ ಮಾನಸಿಕ ಒತ್ತಡಗಳನ್ನು ತಡೆದುಕೊಳ್ಳುವಲ್ಲಿ ವೈದ್ಯರು ರೋಗಿಗೆ ಸಹಾಯ ಮಾಡಬೇಕು.

ಆದರೆ ಈ `ಬೇಕು’ಗಳು ಸಹಜವಾಗಿ ಮನುಷ್ಯರಲ್ಲಿರುವುದಿಲ್ಲ. ವೈದ್ಯರಾಗಬಯಸುವವರು ಅವನ್ನು ಬೆಳೆಸಿಕೊಳ್ಳಬೇಕು. ವೈದ್ಯಕೀಯ ಶಿಕ್ಷಣ ಹಾಗೆಂದು ಹೇಳಿಕೊಡಬೇಕು. ಅಂಥ ಶಿಕ್ಷಣ ವೈದ್ಯ ವಿದ್ಯಾರ್ಥಿಗಳಿಗೆ ಸಿಗುತ್ತಿದೆಯೆ ಎಂದು ನೋಡಿದರೆ ವಿಷಾದಕರ ಸನ್ನಿವೇಶ ಕಣ್ಣೆದುರುರಾಚುತ್ತದೆ. ಇಂದು ವೈದ್ಯಕೀಯ ಶಿಕ್ಷಣ ಮಾರಾಟಕ್ಕಿದೆ. ಅದೊಂದು ಹಣ ಸುಲಿಯುವ ಸದವಕಾಶವೆಂದೇ ಭಾವಿಸಲಾಗಿದೆ. ಶಿಕ್ಷಣವೇ ಹಾಗಾದರೆ ಸಾಮಾಜಿಕ ನೈತಿಕತೆಯ ಮೂಲಸೆಲೆಗಳೆಲ್ಲ ಭ್ರಷ್ಟಗೊಂಡಕಾಲದಲ್ಲಿ ಹೊಸತಲೆಮಾರಿನ ವೈದ್ಯರು ಕಾಲದ ಸಂಕಟಗಳನ್ನು,ರೋಗ ರುಜಿನಗಳ ಕಾರಣವಾದ ಬದುಕಿನ ಕಷ್ಟ ಮೂಲಗಳನ್ನು ಅರಿಯುವುದು ಹೇಗೆ?  ಇದನ್ನೆಲ್ಲ ಚರ್ಚಿಸುವ ಸಲುವಾಗಿ ವೈದ್ಯಕೀಯ ಶಿಕ್ಷಣದ ಹಿಂದು-ಮುಂದುಗಳನ್ನು ಅರಿಯುವುದು ಅಗತ್ಯವಾಗಿದೆ.

`ಗಂಗಾಜಲವೇ ಔಷಧಿ, ನಾರಾಯಣನೇ ವೈದ್ಯ’

ಹೀಗೆಂದು ನಂಬಿದಒಂದು ಕಾಲವಿತ್ತು.ಕಾಡಿನಲ್ಲಿ ಹೆಚ್ಚು ಸಮಯ ಕಳೆಯುವ, ಗಿಡಮರಮಣ್ಣಿನೊಂದಿಗೆ ನಿಕಟ ಸಂಬಂಧವಿರುವವರಷ್ಟೇ ವೈದ್ಯರಾಗುತ್ತಿದ್ದರು. ಮನುಷ್ಯರನ್ನು, ಅವರರೋಗಗಳನ್ನು, ಕಳೇಬರಗಳನ್ನು ಅಭ್ಯಸಿಸಿ, ಕಾಯಿಲೆಗಳ ಗುರುತಿಸಿ, ಸರಿತಪ್ಪು ಪ್ರಯೋಗಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದರು. ಸುತ್ತಮುತ್ತಲ ಗಿಡಮರಬಳ್ಳಿ, ಬೀಜ, ತೊಗಟೆ, ಮಣ್ಣು, ಎಲೆ ಮೊದಲಾದುವುಗಳ ಔಷಧೀಯಗುಣ ಗ್ರಹಿಸಿ ವೈದ್ಯರೆನಿಸಿಕೊಂಡಿದ್ದರು. ಮನುಷ್ಯದೇಹದ ಮತ್ತು ಪರಿಸರದ ಪರಿಚಯ ವೈದ್ಯರಾಗಲು ಅನಿವಾರ್ಯವಾಗಿತ್ತು. ಗುರುಶಿಷ್ಯ ಪರಂಪರೆಯ ಮೂಲಕ ಜ್ಞಾನ ಮುಂದುವರೆಯುತ್ತಿತ್ತು. ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆಗಳೆಂಬ ಎರಡು ವೈದ್ಯಕೀಯ ಪುಸ್ತಕಗಳೂ ಬರೆಯಲ್ಪಟ್ಟವು.ಅಶೋಕ ಮತ್ತವನ ನಂತರದ ಬೌದ್ಧಆಳ್ವಿಕರ ಕಾಲದಲ್ಲಿ ಚಿಕಿತ್ಸಾಲಯಗಳು, ವೈದ್ಯ ತರಬೇತಿ ಕೊಡುವ ಕಾರ್ಯಾಗಾರಗಳು ನಡೆದವು.

ಆದರೆ ಬರಬರುತ್ತ ಔಷಧಿ ಕೊಡುವಿಕೆ ಕೆಲವು ಕುಟುಂಬಗಳಿಗೆ ಸೀಮಿತಗೊಂಡು `ಔಷಧಿರ ಹಸ್ಯ’ವನ್ನವರು ಕಾಪಾಡಿಕೊಂಡು ಬರತೊಡಗಿದರು. ಔಷಧಿ ತಯಾರಿಕೆಯ ಜ್ಞಾನ ಜನಸಾಮಾನ್ಯರಿಗೆ ದೊರೆಯದೆ ಪ್ರತಿಕುಟುಂಬವೂ ರೋಗ ಬಾರದಂತೆ ತಡೆಗಟ್ಟಲು, ಆರೋಗ್ಯವಾಗುಳಿಯಲು, ರೋಗ ಬಂದ ಮೇಲೆ ಪ್ರಾಥಮಿಕ ಚಿಕಿತ್ಸೆ ನೀಡಲುತನ್ನದೇ ತಿಳಿವಳಿಕೆ ರೂಢಿಸಿಕೊಂಡಿತು. ಮನೆಮದ್ದು ರೋಗಚಿಕಿತ್ಸೆಯ ಪ್ರಮುಖ ಹಂತವಾಯಿತು. ಮನೆಮದ್ದಿನ ಪ್ರಾಥಮಿಕ ಜ್ಞಾನರೂಪಿಸುವಲ್ಲಿ, ಪಡೆಯುವಲ್ಲಿ, ಉಪಯೋಗಿಸುವಲ್ಲಿ ಹೆಣ್ಣುಮಕ್ಕಳ ಪಾತ್ರ ಮಹತ್ವದ್ದಾಗಿತ್ತು.

ಆದರೆ ಮನೆಮದ್ದು ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಜನಸಂಖ್ಯೆ ಹೆಚ್ಚುತ್ತ, ನಗರೀಕರಣಗೊಳ್ಳುತ್ತ ಹೋದಂತೆ ಕಾಲರಾ, ಪ್ಲೇಗು, ಸಿಡುಬು ಮತ್ತು ಹೆಸರೇ ಇಟ್ಟಿರದಂತಹ ಅನೇಕ ಸಾಂಕ್ರಾಮಿಕ ರೋಗಗಳು ನಮ್ಮನ್ನು ಕಾಡಿದವು.ಆಯುರ್ವೇದ ಮತ್ತಿತರ ದೇಶೀ ಔಷಧಿ ಪದ್ಧತಿಗಳು ಹೊಸ ಸಂಶೋಧನೆಯಿಲ್ಲದೆ ಹಳೆಯ ಸಂಹಿತೆಗಳಲ್ಲಿ ಸೊರಗಿದವು. ಅಂತಹಕಾಲದಲ್ಲಿ 13ನೇ ಶತಮಾನದಲ್ಲಿ ಭಾರತಕ್ಕೆ ಯುನಾನಿ ಬಂತು. 16ನೇ ಶತಮಾನದ ವೇಳೆಗೆ ಪೋರ್ಚುಗೀಸ್‍ರಿಂದ ಆಲೋಪತಿ ಪರಿಚಯಿಸಲ್ಪಟ್ಟಿತು. ಹೋಮಿಯೋಪತಿ 19ನೇ ಶತಮಾನದಲ್ಲಿ ಬಂತು. 1824ರಲ್ಲಿ ಮೊದಲ ಆಲೋಪತಿ ಮೆಡಿಕಲ್ ಸ್ಕೂಲ್‍ ಕಲಕತ್ತದಲ್ಲಿ ಶುರುವಾಗಿ ನಂತರ ಮದರಾಸಿನಲ್ಲಿಯೂ ತೆರೆಯಲ್ಪಟ್ಟಿತು. 1845ರಲ್ಲಿ ಮುಂಬೈಯಲ್ಲಿ, ನಂತರ ಹೈದರಾಬಾದ್, ಇಂದೋರ್, ಪಣಜಿಯಲ್ಲಿ ಶುರುವಾದವು. ಹೀಗೇ ದೇಶದ ಹಲವೆಡೆ ಸುಸಜ್ಜಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರ ತಯಾರಿಸುವ ಕಾಲೇಜುಗಳು ಶುರುವಾದವು.ಅವನ್ನೆಲ್ಲ ಒಂದು ಕೇಂದ್ರೀಕೃತ ನಿಯಂತ್ರಣ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ವ್ಯವಸ್ಥೆಯಡಿ ತರಲು 1933ರಲ್ಲಿ ಮೆಡಿಕಲ್‍ ಕೌನ್ಸಿಲ್‍ ಆಫ್‍ ಇಂಡಿಯಾ ಶುರುವಾಯಿತು.

ಭಾರತದಲ್ಲೀಗ ಆಲೋಪತಿ, ಹೋಮಿಯೋಪತಿ, ಆಯುರ್ವೇದ, ಯುನಾನಿ, ಸಿದ್ಧ, ನ್ಯಾಚುರೋಪತಿ ಮೊದಲಾದ ಹತ್ತೆಂಟು ತರಹದ ವೈದ್ಯ ಪದವಿ ನೀಡುವ ಕಾಲೇಜುಗಳಿವೆ. ಪ್ರಪಂಚದ ಬೇರೆಯಾವ ದೇಶಗಳಲ್ಲೂ ಲಭ್ಯವಿಲ್ಲದ ಆಯ್ಕೆಯ ಅವಕಾಶ ಇಲ್ಲಿದೆ. ಹಾಗೆಯೇ ಯಾವುದೋ ಒಂದು ಡಿಗ್ರಿ ಪಡೆದು ಹೆಸರಿನ ಹಿಂದೆಡಾ. ಅಂಟಿಸಿಕೊಂಡು ದುಡ್ಡು ಬಾಚುವ ನಕಲಿ ವೈದ್ಯರೂ ಅಗಣಿತ ಸಂಖ್ಯೆಯಲ್ಲಿದ್ದಾರೆ. ಭಾರತ ಮತ್ತು ಮೆಕ್ಸಿಕೊಗಳನ್ನು ಬಿಟ್ಟು ವಿಶ್ವದೆಲ್ಲೆಡೆಯಿಂದ ಮಾಯವಾದ ಹೋಮಿಯೋಪತಿ ಇಲ್ಲಿನ್ನೂ ವಿಜೃಂಭಿಸುತ್ತಿದೆ.

ಭಾರತಕ್ಕೆ ಹಕೀಮರು ಬಂದಾಗ ಇಲ್ಲಿದ್ದ ಸಿದ್ಧ, ಆಯುರ್ವೇದ ಪಂಡಿತರೊಡನೆ ಘರ್ಷಣೆಗಿಂತ ಪರಸ್ಪರ ಕೊಡುಕೊಳುವಿಕೆ ಹೆಚ್ಚಿತ್ತು. ಆದರೆ ಪಾರಂಪರಿಕ ವೈದ್ಯರಿಗೂ `ಇಂಗ್ಲಿಷ್’ ವೈದ್ಯರಿಗೂ ಜಟಾಪಟಿ ನಡೆಯಿತು. ಎಷ್ಟೆಂದರೆ ಆಯುರ್ವೇದ ಮತ್ತು ಆಲೋಪತಿ ಎರಡನ್ನು ಒಟ್ಟು ಸೇರಿಸಿ ಕಲಕತ್ತಾದಲ್ಲಿ ಕೋರ್ಸು ಶುರುವಾಯಿತು. ಕೊನೆಗೆ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ, ಲಸಿಕೆ, ವಿಶಿಷ್ಟ ಪ್ರಾದೇಶಿಕ ಕಾಯಿಲೆಗಳ ಹತೋಟಿ ಕಾರ್ಯಕ್ರಮಗಳು ಶುರುವಾದಾಗ ಮೆಡಿಕಲ್ ಸ್ಕೂಲುಗಳು ಆಲೋಪತಿಯದಾಗಿ ಮುಂದುವರೆದವು.

ಸರಳ ಮನುಷ್ಯ ಸಮಾಜ ಬರಬರುತ್ತ ಸಂಕೀರ್ಣಗೊಳ್ಳುತ್ತ ಹೋದಂತೆ ಎಲ್ಲ ಕ್ಷೇತ್ರಗಳಲ್ಲು ತಜ್ಞರು ಬರತೊಡಗಿದರು. ಈಗಿನ ಸಂಕೀರ್ಣ ಸಮಾಜ ದಿನದಿನದ ಪ್ರತಿ ಅವಶ್ಯಕತೆಯ ಪೂರೈಕೆಗೂ ಆಯಾಕ್ಷೇತ್ರದ ಪರಿಣತಿಯನ್ನೇ ಬಯಸುವ ಅತಿ ಸಂಕೀರ್ಣ ಸಮಾಜವಾಗಿದೆ. ಆಧುನಿಕ ಸಮಾಜದಲ್ಲಿ ಹೆಚ್ಚೆಚ್ಚು ಆಧುನಿಕಗೊಳ್ಳುವುದರ ಅರ್ಥ ಹೆಚ್ಚೆಚ್ಚು ಯಂತ್ರೋಪಕರಣಗಳನ್ನು ಬಳಸುವುದು ಮತ್ತು ಅತಿತಜ್ಞರನ್ನು ಅವಲಂಬಿಸುವುದು ಎನ್ನುವಂತಾಗಿದೆ. ಈ ಮಾತು ವೈದ್ಯಕೀಯರಂಗ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಅನ್ವಯಿಸುತ್ತದೆ.

ಈಗ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜು ಹೊಂದಿರುವ ದೇಶವಾಗಿದೆ. ಆದರೆ ಎರಡನೆ ಅತಿ ಹೆಚ್ಚು ಜನಭರಿತ ದೇಶವಾಗಿರುವುದರಿಂದ ಇರುವ ವೈದ್ಯಕೀಯ ಮಹಾವಿದ್ಯಾಲಯಗಳು ಸಾಲದಾಗಿವೆ. ಪ್ರತಿ ವರ್ಷ ಒಂದೂಕಾಲು ಲಕ್ಷ ವೈದ್ಯ ಪದವೀಧರರು, 34 ಸಾವಿರತಜ್ಞರು ಹೊರಗೆ ಬರುತ್ತಾರೆ.

`ಶವವೇ ನಿಮ್ಮ ಮೊದಲ ಗುರು’

ಇಷ್ಟು ಸಂಖ್ಯೆಯ ವೈದ್ಯರು ಬಂದರೂ ಗ್ರಾಮೀಣ ಪ್ರದೇಶಗಳಲ್ಲಿ, ಕಡಿಮೆ ದುಡ್ಡಿಗೆ ಸೂಕ್ತ ಚಿಕಿತ್ಸೆ ನೀಡುವ ಬದ್ಧತೆಯ ವೈದ್ಯರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವೈದ್ಯ-ರೋಗಿ ಸಂಬಂಧ ವ್ಯಾಪಾರೀಕರಣಗೊಂಡು, ವೈದ್ಯರ ಮೇಲೆ ಖಟ್ಲೆಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಸಮಾಜದ ಮೌಲ್ಯವ್ಯವಸ್ಥೆ, ಆರ್ಥಿಕ ಸುಧಾರಣೆಗಳು, ಮಾರುಕಟ್ಟೆ ಸಂಸ್ಕೃತಿ, ಧನದಾಹ ಹೆಚ್ಚಿಸುವ ಜೀವನಶೈಲಿಗಳೇ ಮೊದಲಾದ ಕಾರಣಗಳಿದ್ದರೂ, ವೈದ್ಯಕೀಯ ಶಿಕ್ಷಣವು ವೈದ್ಯರಲ್ಲಿ ಮೌಲ್ಯ ತುಂಬಲು ವಿಫಲವಾಗಿರುವುದು ಎದ್ದುಕಾಣುತ್ತದೆ.ಏಕೆ ಹಾಗಾಯಿತು?

ಇದೇನು ಶತಮಾನಗಳ ಹಿಂದಿನ ಮಾತಲ್ಲ. ಮೂರ್ನಾಲ್ಕು ದಶಕಗಳ ಹಿಂದಿನವರೆಗೂ ವೈದ್ಯರಾಗುವುದೆಂದರೆ ರಾತ್ರಿ ಹಗಲೆನದೆ ರೋಗಿಗಳ ನೋಡಲು ಸಿದ್ಧವಿರುವವರು, ರಕ್ತಕೀವಿಗೆ ಹೇಸದವರು, ಸೇವಾ ಮನೋಭಾವವಿರುವವರು ಹೋಗಬಯಸುವ ವೃತ್ತಿಯಾಗಿತ್ತು. ವೈದ್ಯರಾಗುವುದೆಂದರೆ ಮನುಷ್ಯರು ಅನುಭವಿಸುವ ಹತ್ತುಹಲವು ಸಂಕಟಗಳನ್ನು ನಮ್ಮ ಕೈಲಾದಷ್ಟು ನಿವಾರಣೆ ಮಾಡಲು ಸಾಧ್ಯವಿರುವಒಂದು ಮಾರ್ಗವೆಂದು ಭಾವಿಸಲಾಗಿತ್ತು. ಬರಿಯ ದೇಹ-ಕಾಯಿಲೆ-ಚಿಕಿತ್ಸೆಯ ಬಗೆಗಿನ ವೃತ್ತಿ ಕೌಶಲವಷ್ಟೇ ಅಲ್ಲ, ವಿಶಾಲ ನೆಲೆಯಲ್ಲಿ ಜೀವಸಂಕುಲವನ್ನು ಪರಿಭಾವಿಸಲು ಅನುವಾಗುವಂತಹ ಮೌಲ್ಯ ಕಲಿಸುವ ಶಿಕ್ಷಣ ಸಿಗುತ್ತಿತ್ತು.

ಮೊದಲ ವರ್ಷದ ಅನಾಟಮಿ ತರಗತಿಯಲ್ಲಿ ಪ್ರೊಫೆಸರರು ಹೇಳುತ್ತಿದ್ದ ಮಾತು,`ಕೆಡವರ್ (ಶವ) ನಿಮ್ಮ ಮೊದಲ ಗುರು. ಆ ಗುರುವಿಗೆ ಮೊದಲು ಸ್ಮರಿಸಿ, ಸದಾ ವಂದಿಸಿ’ಎಂದು. ನಂತರ ರೋಗಿಗಳು ನಮ್ಮ `ಗುರು’ವಾಗುತ್ತಿದ್ದರು. ಕಲಿಕೆಗೆ ಬೆಲೆ ತರುತ್ತಿದ್ದದ್ದು ಡಿಗ್ರಿಗಳ ಪಟ್ಟಿಯಲ್ಲ, ಬದಲಿಗೆ ಚಿಕಿತ್ಸೆಯ ಪರಿಣಾಮಗಳು. ಕಾಲಕಾಲಕ್ಕೆ ಬರುವ ಹೊಸಹೊಸ ಔಷಧಿಗಳು, ಚಿಕಿತ್ಸಾ ವಿಧಾನಗಳನ್ನು ತಿಳಿಯಬೇಕಿದ್ದ ನಿರಂತರ ಕಲಿಕೆ ವೈದ್ಯಕೀಯವಾಗಿತ್ತು.`ನೀವು ನಿರಂತರ ವಿದ್ಯಾರ್ಥಿಗಳು ನೆನಪಿರಲಿ’ಎಂದು ಗುರುಗಳು ರೋಗಿ ಪಕ್ಕ ನಿಂತು ಪಾಠ ಹೇಳುವಾಗ ಎಚ್ಚರಿಸುತ್ತಿದ್ದರು.

ಆದರೆಎಲ್ಲ ಬದಲಾಗುತ್ತ ಬಂದಿದೆ. ಪಾಠಹೇಳುವ ಗುರುಗಳೂ, ಕೇಳುವ ವಿದ್ಯಾರ್ಥಿಗಳೂ, ರೋಗ ಅನುಭವಿಸುವ ರೋಗಿಗಳೂ, ಮಾರುಕಟ್ಟೆ ಆಧರಿತ ಸಮಾಜ ವ್ಯವಸ್ಥೆಯೂ ಹೆಚ್ಚುಕಡಿಮೆ ಸಂಪೂರ್ಣ ಬದಲಾಗಿವೆ. ಈಗ ವೈದ್ಯಕೀಯವೆಂದರೆ ಅತಿ ಹೆಚ್ಚು ಉದ್ಯೋಗ ಭದ್ರತೆ, ಅತಿ ಹೆಚ್ಚು ಅವಕಾಶ ಮತ್ತುಅತಿ ಹೆಚ್ಚು ಗಳಿಕೆ-ಗೌರವ ತರುವ ಉದ್ಯೋಗ ಎನಿಸಿಕೊಂಡಿದೆ. ಆಸ್ಪತ್ರೆಯೆಂದರೆ ಕಾಯಿಲೆ, ಕಸಾಲೆ, ತಪ್ಪು ಜೀವನ ಶೈಲಿಯಿಂದಾದ ತೊಂದರೆಗಳನ್ನು ತಕ್ಷಣ ಸರಿಪಡಿಸಿ ನಮ್ಮಿಷ್ಟದಂತೆ, ಮೊದಲಿನಂತೆ ಬದುಕಲು ಸಾಧ್ಯವಾಗಿಸುವ ಜಾಗವೆನಿಸಿಕೊಂಡಿದೆ.

ವೈದ್ಯಕೀಯ ಕೋರ್ಸುಗಳು ಮತ್ತು ಬೋಧನಾಕ್ರಮ ಹಳೆಯದಾಗಿದ್ದರೂ ಚೆನ್ನಾಗಿಯೇ ಇವೆ. ಈಗಿನ ಮುಖ್ಯಸಮಸ್ಯೆ ಆಕರ್ಷಕವಾಗಿ ಬೋಧಿಸುವವರ ಕೊರತೆ.ಸಾಗರದಷ್ಟು ವಿಶಾಲ ಪಠ್ಯರಾಶಿಯೊಳಗೆ ವಿದ್ಯಾರ್ಥಿಗಳು ದಿಕ್ಕೆಟ್ಟು ಹೋಗುವಾಗ ಸೂಕ್ತ ಮಾರ್ಗದರ್ಶನ ಅತ್ಯವಶ್ಯ. ಸರ್ಕಾರಿ ಕಾಲೇಜುಗಳಲ್ಲಿ ಬೇಕಾದಷ್ಟು ರೋಗಿಗಳಿದ್ದಾರೆ, ಆದರೆ ಬೋಧಕರಿಗೆ ಬೋಧಿಸುವ ಮನಸ್ಸೇ ಇಲ್ಲ.ಎಲ್ಲೋ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಮೌನವಾಗಿ ರೌಂಡ್ಸ್ ಮುಗಿಸಿ, ಹೆಚ್ಚೆಂದರೆ ವಿದ್ಯಾರ್ಥಿಗಳಿಗೆ ಉತ್ತರಿಸಲಾಗದಷ್ಟು ಕಠಿಣ ಪ್ರಶ್ನೆ ಕೇಳಿ, ಉತ್ತರಿಸದಿದ್ದರೆ ಬೈದು ಮುನ್ನಡೆಯುವವರು; ಇಡಿಯ ಬ್ಯಾಚಿನಲ್ಲಿ ಯಾವುದೋ ವಿದ್ಯಾರ್ಥಿ ತೋರಿಸಿದ ಅಶಿಸ್ತಿಗೆ ಪಾಠವನ್ನೇ ಮಾಡದೇ ಎಲ್ಲರಿಗು `ಶಿಕ್ಷೆ’ ಕೊಡುವವರು; ವಿದ್ಯಾರ್ಥಿಗಳನ್ನು ಅವಮಾನಿಸುವಂತೆ, ಕೀಳರಿಮೆ ಹುಟ್ಟುವಂತೆ ನಡೆಸಿಕೊಳ್ಳುವವರೇ ಹೆಚ್ಚು. ಇದು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ವಿಷಯದಲ್ಲಿ ಹೆಚ್ಚು ಅನ್ವಯಿಸುತ್ತದೆ.

ಸ್ನೇಹಮಯ ವಾತಾವರಣದಲ್ಲಿ ಜವಾಬ್ದಾರಿಯುತ ಗುರು-ಶಿಷ್ಯ ಸಂಬಂಧ ದುರ್ಲಭವಾಗಿ ವಿದ್ಯಾರ್ಥಿಗಳು `ಇ-ಟೀಚಿಂಗ್’ಅನ್ನು ನೆಚ್ಚಿಕೊಳ್ಳುವಂತಾಗಿದೆ.ವೈದ್ಯಗುರುಗಳ ತಪ್ಪು ನಡವಳಿಕೆ ಮಾದರಿ ರೋಗಿಯನ್ನು ಮುಟ್ಟದೇ, ನೋಡದೇ ಬರಿಯ ರಿಪೋರ್ಟುಗಳ ಆಧಾರದ ಮೇಲೆ ರೋಗ ಪತ್ತೆ, ಚಿಕಿತ್ಸೆ ನೀಡುವ ವೈದ್ಯ ಸಮೂಹವನ್ನು ತಯಾರಿಸುತ್ತಿದೆ. ವೈದ್ಯಗುರು-ಶಿಷ್ಯತನದ ಸಂಬಂಧದ ಹಾಗೆಯೇ ರೋಗಿ-ವೈದ್ಯರ ಸಂಬಂಧವೂ ಬಿಕ್ಕಟ್ಟುಗಳನ್ನೆದುರಿಸುತ್ತಿದೆ.

ಹಣದಾಹ ಅಳಿಸುವ ಮಾರ್ಗ

ಸಮಾಜಸೇವೆ, ಪ್ರಾಮಾಣಿಕತೆ, ನೇರಮಾತು, ಕಾಳಜಿಯುಕ್ತ ಪ್ರೀತಿ, ಹಣದಾಹವಿಲ್ಲದಿರುವಿಕೆ ಕುರಿತು ವೈದ್ಯವಿದ್ಯಾರ್ಥಿಗೆ ಒಲವು ಮೂಡಿಸಲು ಏನು ಮಾಡಬೇಕು?

ಒಂದು ಮೆಡಿಕಲ್ ಪ್ರವೇಶ ಗಳಿಸಿದರೆ ಸ್ವರ್ಗಕ್ಕೇ ಪ್ರವೇಶ ಸಿಕ್ಕಂತೆ ಹೆಗ್ಗಳಿಕೆಗೊಳಪಡಿಸಲಾಗಿದೆ. ಪಿಯುಸಿ ಕಾಲೇಜುಗಳು, ಟ್ಯುಟೋರಿಯಲ್ಲುಗಳೂ ತಮ್ಮಲ್ಲಿ ಬಂದು ಅತಿ ಹೆಚ್ಚು ಅಂಕ ಗಳಿಸಿದ ಯಶಸ್ವಿ ವಿದ್ಯಾರ್ಥಿ/ನಿಯರ ಫೋಟೋ ದೊಡ್ಡದಾಗಿ ಪ್ರಕಟಿಸುತ್ತವೆ. ಆಗಿನಿಂದ ಶುರುವಾಗುವ `ಹೈಪ್’ ಮೆಡಿಕಲ್‍ ಓದು, ಸ್ನಾತಕೋತ್ತರ ಪದವಿ, ಆಸ್ಪತ್ರೆಗಳವರೆಗೂ ಹಾಗೆಯೇ ಮುಂದುವರೆಯುತ್ತದೆ.

ವೈದ್ಯ ವಿದ್ಯಾರ್ಥಿಗಳಲ್ಲಿ `ಅಪರೂಪದಲ್ಲಿ ಅಪರೂಪದ ಅವಕಾಶ ಪಡೆದವರು ನಾವು’ ಎಂಬ ಅಹಮು ತಂತಾನೇ ಹುಟ್ಟಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಅಹಂ ನಾಶವಾಗಿ ಅವರನ್ನುನಿಜಮನುಷ್ಯರನ್ನಾಗಿ ಮಾಡಲು ವೈದ್ಯ ಶಿಕ್ಷಣಕ್ಕೆ ಸಾಧ್ಯವಾಗಬೇಕು. ವೈದ್ಯಶಿಕ್ಷಣವು ವೃತ್ತಿ ಕೌಶಲ್ಯಕ್ಕೆ ಕೊಡುವಷ್ಟೇ ಪ್ರಾಮುಖ್ಯವನ್ನು ವ್ಯಕ್ತಿತ್ವ ವಿಕಸನಕ್ಕೂ ಕೊಡುವುದು ಅತ್ಯಗತ್ಯವಾಗಿದೆ.

`ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ
ವನಸು ಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು..’
-ಡಿವಿಜಿ

ಆದರೆ ಅಹಂ ನಿರಸನ ಅಷ್ಟೇನೂ ಸುಲಭವಲ್ಲ. ಅದಕ್ಕೆ ನಿರಂತರ ನಮ್ಮನ್ನು ದಿವ್ಯಕ್ಕೆ ಒಡ್ಡಿಕೊಳ್ಳಬೇಕು. ವೈದ್ಯರ ಪಾಲಿಗೆ ಕೊನೆಗೂ ತಾನು ಮರಣಾಧೀನ ಮನುಷ್ಯನೇ ಹೊರತು ಸರ್ವಶಕ್ತನಲ್ಲ ಎಂಬ ವಿನಯವೇ ಆ ದಿವ್ಯ. ಇದನ್ನು ವೈದ್ಯಲೋಕಕ್ಕೆ ಕಲಿಸುವಲ್ಲಿ ವೈದ್ಯಶಿಕ್ಷಣದ ಹಾಗೂ ಉಳಿದ ಸಮಾಜದ ಪಾತ್ರ ಮಹತ್ವದ್ದಾಗಿದೆ.

ಈ ಕಾರಣದಿಂದ ಕೆಲವು ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಖಾಸಗಿ ಕಾಲೇಜಿಗೆ ಪ್ರವೇಶ ಪಡೆಯಬಯಸುತ್ತಾರೆ.ಅಲ್ಲಿಬೋಧನೆ ಅತ್ಯುತ್ತಮವಾಗಿರುತ್ತದೆ, ಆಸ್ಪತ್ರೆ ಸುಸಜ್ಜಿತವಾಗಿರುತ್ತವೆ, ಆದರೆ ರೋಗಿಗಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಹಾಗಾಗಿ ಅನುಭವದ ಕೊರತೆಯುಂಟಾಗುತ್ತದೆ.

ಹೀಗೆ ಶಿಕ್ಷಣ, ಸಂಶೋಧನೆ ಮತ್ತು ಚಿಕಿತ್ಸೆಒಟ್ಟೊಟ್ಟಿಗೆ ಹೋಗಲೇಬೇಕಾದ ವೈದ್ಯಕೀಯ ಶಿಕ್ಷಣ ಕ್ಷೇತ್ರವು ಸರ್ಕಾರಿ ಮತ್ತು ಖಾಸಗಿ ವಿಭಾಗಗಳೆರೆಡರಲ್ಲೂ ರಾಚನಿಕ ಲೋಪಗಳನ್ನು ಹೊಂದಿರುವುದು ವೈದ್ಯ ಸಮೂಹ ಇಂದು ಎದುರಿಸುತ್ತಿರುವ ಆರೋಪಗಳಿಗೆ ಕಾರಣವಾಗಿದೆ.

ವೈದ್ಯಕೀಯ ಶಿಕ್ಷಣದ ಒಳಹೊರಗು

2006ರಲ್ಲಿ ಭಾರತದಲ್ಲಿ ಒಟ್ಟು 256 ವೈದ್ಯಕೀಯ ಮಹಾವಿದ್ಯಾಲಯಗಳಿದ್ದವು. 2017ರಲ್ಲಿ ಅದರ ಸಂಖ್ಯೆ 479 ಆಗಿದೆ. ಈಗ ಸರ್ಕಾರಿ ಕಾಲೇಜುಗಳ ಸಂಖ್ಯೆ 235. ಕರ್ನಾಟಕದಲ್ಲಿ ಅತಿ ಹೆಚ್ಚು (50) ವೈದ್ಯಕೀಯ ಕಾಲೇಜುಗಳಿವೆ. (ಮಹಾರಾಷ್ಟ್ರ 48, ಕೇರಳ 30).ಕರ್ನಾಟಕದಲ್ಲಿ ಎಂಸಿಐ ಮಾನ್ಯತೆ ಪಡೆದ ಸರ್ಕಾರಿ ಕಾಲೇಜುಗಳು 15, ಎಂಸಿಐ ಮಾನ್ಯತೆ ಪಡೆದ ಖಾಸಗಿ ಕಾಲೇಜುಗಳು 35. (ಈ ಸಂಖ್ಯೆ ಏರುಪೇರಾಗುತ್ತಲೇ ಇರುತ್ತದೆ.) ಇಲ್ಲಿ ಮೊದಲ ವೈದ್ಯಕೀಯ ಮಹಾವಿದ್ಯಾಲಯ ಶುರುವಾದದ್ದು ಮೈಸೂರು (1924) ನಗರದಲ್ಲಿ. ಸ್ವಾತಂತ್ರ್ಯಾ ನಂತರ ಬೆಂಗಳೂರು (1955), ಹುಬ್ಬಳ್ಳಿ (1957) ಬಳ್ಳಾರಿ (1961)ಗಳಲ್ಲಿ ಸರ್ಕಾರಿ ಕಾಲೇಜುಗಳು ಶುರುವಾದವು. ಅದಾದಮೇಲೆ ಹೆಚ್ಚುಕಮ್ಮಿ 40 ವರ್ಷ ಒಂದೇ ಒಂದು ಹೊಸ ಸರ್ಕಾರಿ ವೈದ್ಯಕೀಯ ವಿದ್ಯಾಲಯ ಶುರುವಾಗಿರಲಿಲ್ಲ. ಆ ಅವಕಾಶವನ್ನು ಖಾಸಗಿಯವರು ಬಳಸಿಕೊಂಡರು.

ಎರಡನೆಯ ಹಂತದಲ್ಲಿ ಬೀದರ್ (2005), ಮಂಡ್ಯ(2006), ಬೆಳಗಾವಿ (2006) ಹಾಸನ (2006), ರಾಯಚೂರು (2007) ಶಿವಮೊಗ್ಗ (2007)ಗಳಲ್ಲಿ ಶುರುವಾಗಿ ಈಗ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್‍ ಕಾಲೇಜು ಸ್ಥಾಪಿಸಲಾಗುತ್ತಿದೆ. ಈಗ ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳು ಹೆಚ್ಚಿವೆ. ಕರ್ನಾಟಕದಲ್ಲಿ ಸರ್ಕಾರಿ ಕಾಲೇಜುಗಳ ಸಂಖ್ಯೆ ಮೊದಲಿಗಿಂತ ಎರಡರಷ್ಟು ಹೆಚ್ಚಾಗಿದ್ದರೆ ಖಾಸಗಿ ಕಾಲೇಜುಗಳ ಸಂಖ್ಯೆ 20 ಪಟ್ಟು ಹೆಚ್ಚಿದೆ. ಜಾತಿ-ಧರ್ಮ-ಪಕ್ಷ-ವ್ಯಕ್ತಿಯ ಹೆಸರಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳು ಶುರುವಾಗಿವೆ.

ಕಾಲೇಜುಗಳು ವೈದ್ಯಕೀಯ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ನೀಡಲು ಅರ್ಹ ಹೌದೋ ಅಲ್ಲವೋ ಎಂದು ದೃಢೀಕರಿಸಲು ಎಂಸಿಐ (ಮೆಡಿಕಲ್‍ಕೌನ್ಸಿಲ್‍ಆಫ್‍ಇಂಡಿಯಾ) ಇದೆ. ಆದರೆ ಆ ಸಂಸ್ಥೆಯೂ ಇತ್ತೀಚೆಗೆ ವಿವಾದಕ್ಕೆ ಸಿಲುಕಿ ಲಂಚದ ಆರೋಪಕ್ಕೊಳಗಾಯಿತು. ಬಹುತೇಕ ಕಾಲೇಜುಗಳು ಎಂಸಿಐ ತಂಡ ಬರುವ ಹೊತ್ತಿಗೆ ಬಾಡಿಗೆ ತಜ್ಞರು, ಬೋಧಕರು, ರೋಗಿಗಳು ಎಲ್ಲರನ್ನು ತಂದು ತಂದು ಸೇರಿಸುತ್ತಾರೆಂಬ ಆರೋಪವಿದೆ. ಎಂಸಿಐ ಎದುರಿಗೆ `ಗುಣ ಮೌಲ್ಯ’ ತೋರಿಸಲು ಆಡುವ ನಾಟಕ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕುಸಿಯಲು ಒಂದು ಕಾರಣವಾಗಿದೆ.

ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇರಬೇಕಾದ ಮುಖ್ಯ ಅರ್ಹತೆ ಹಣ. `ಮೆರಿಟ್ಟು’, ವ್ಯಕ್ತಿಗತ ಸಾಮಥ್ರ್ಯ ಏನೇ ಇರಲಿ, ದುಡ್ಡು ಕೊಡಬಲ್ಲಿರಾದರೆ ಪ್ರವೇಶ ಖಚಿತ. ಎಂದೇ ಖಾಸಗಿ ವೈದ್ಯ ಕಾಲೇಜು ತೆರೆಯುವುದು, ಅತ್ಯಾಧುನಿಕ ಸೌಲಭ್ಯಗಳನ್ನು ಇಟ್ಟು ಆಸ್ಪತ್ರೆ ತೆರೆಯುವುದು ಅತ್ಯಂತ ಲಾಭದಾಯಕ ಉದ್ದಿಮೆಯಾಗಿದೆ. (ಮೀಸಲಾತಿ ವಿಷಯ ಬಂದಾಗ ಮೆರಿಟ್ಟು, ಬುದ್ಧಿವಂತಿಕೆ, ಪ್ರತಿಭೆ ಮೊದಲಾದ ವಿಷಯಗಳನ್ನು ಮುಂದೊಡ್ಡುವ ಮೀಸಲಾತಿ ವಿರೋಧಿಗಳು ಕ್ಯಾಪಿಟೇಷನ್ ಕಾಲೇಜುಗಳ ಬಗೆಗೆ ಮಾತನಾಡದಿರುವುದು ಗಮನಾರ್ಹ.)

ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಎಂಬಿಬಿಎಸ್‍ಗೆ ಪ್ರವೇಶ ಪಡೆಯಲು ಒಂದು ಕೋಟಿ ರೂಪಾಯಿತನಕ ಡೊನೇಷನ್‍ ತೆರಬೇಕಿದೆ. ಪ್ರವೇಶ ದೊರೆತ ನಂತರ ಐದೂವರೆ ವರ್ಷದ ಖರ್ಚು ನಿಭಾಯಿಸಿ, ಅದರ ನಂತರ ಒಂದು ವರ್ಷ ದುಬಾರಿ ಹಣ ತೆತ್ತು ತೀವ್ರ ಕೋಚಿಂಗ್ ಪಡೆದು, ಮತ್ತೆ ಮೂರ್ನಾಲ್ಕೈದು ಕೋಟಿ ಖರ್ಚು ಮಾಡಿ ಸ್ನಾತಕೋತ್ತರ ಪದವಿ ಪಡೆದು ತಜ್ಞ ವೈದ್ಯರು ಹೊರಬರುತ್ತಾರೆ. ಎಂದರೆ ಒಂದು ಸ್ನಾತಕೋತ್ತರ ಪದವಿ ಪಡೆಯಲು ಕನಿಷ್ಟ 9 ವರ್ಷ ಮತ್ತು 7-8 ಕೋಟಿ ರೂಪಾಯಿ ಖಾಸಗಿ ಕಾಲೇಜಿನಲ್ಲಿ ಬೇಕು. ತಮ್ಮ ಮಕ್ಕಳಿಗೆ ಇಷ್ಟು ಹಣ ಸುರಿದು ಓದಿಸಿದ ಯಾವ ತಂದೆತಾಯಿಯರು ಜನರ`ಸೇವೆ’ ಮಾಡಲಿ ಎಂದು ಬಯಸುತ್ತಾರೆ? ಜೊತೆಗೆ ಅಂತಹ ಅತ್ಯಾಧುನಿಕ ಸನ್ನಿವೇಶಗಳಲ್ಲಿ ಕಲಿತು, ಕೆಲಸ ಮಾಡಿದವರು ಅತಿ ಕಡಿಮೆ ಸೌಲಭ್ಯವಿರುವ, ಕಡಿಮೆ ಆದಾಯದ ಗ್ರಾಮೀಣ/ಸರ್ಕಾರಿ ಕೆಲಸಗಳಿಗೆ ಹೋಗಲು ಇಚ್ಛಿಸಲಾರರು.

ಕೆಲವರ್ಷಗಳ ಹಿಂದಿನ ತನಕ ಬೇಡಿಕೆಯ ಸ್ನಾತಕೋತ್ತರ ಪದವಿಗಳು ಮಕ್ಕಳ ವೈದ್ಯತಜ್ಞತೆ, ಸರ್ಜರಿ, ಸ್ತ್ರೀರೋಗ, ಹೃದ್ರೋಗ ತಜ್ಞತೆ ಮೊದಲಾದುವಾಗಿರುತ್ತಿದ್ದವು. ಈಗ ಅತಿ ಹೆಚ್ಚು ಡಿಮ್ಯಾಂಡ್‍ ಇರುವುದು ಚರ್ಮರೋಗ ತಜ್ಞರಾಗಲು. ವೈದ್ಯಕೀಯವು ಕಾಸ್ಮೆಟಿಕ್ ಇಂಡಸ್ಟ್ರಿಯ ಜೊತೆಗೆ ಕೈಜೋಡಿಸಿರುವುದರಿಂದ ಆದ ಬದಲಾವಣೆಯಿದು. ಜೀವನ್ಮರಣದ ಪ್ರಶ್ನೆಯಲ್ಲದಿದ್ದರೂ `ಚೆಂದ’ ಕಾಣುವುದು ಎಲ್ಲರ ಪ್ರಾಥಮಿಕ ಆದ್ಯತೆಯಾಗಿದೆ. ಮಾರುಕಟ್ಟೆಯ `ಚೆಲುವಿನ’ ವ್ಯಾಖ್ಯಾನಕ್ಕೆ ತಕ್ಕಂತೆ ಜನರನ್ನು ಚೆಲುವ ಚೆಲುವೆಯರಾಗಿರಲು ವೈದ್ಯಕೀಯರಂಗ ಟೊಂಕಕಟ್ಟಿ ನಿಂತಿದೆ! ನಂತರದ ಸ್ಥಾನ ರೇಡಿಯಾಲಜಿ (ಎಂಆರ್ ಐ, ಸಿಟಿ, ಸ್ಕ್ಯಾನಿಂಗ್‍ ಎಕ್ಸ್ ರೇ ಮೊದಲಾದ ವಿಷಯಗಳ ಕುರಿತ ತಜ್ಞತೆ), ಅನಸ್ತೇಶಿಯಾ ಮೊದಲಾದ ವಿಭಾಗಗಳಿಗೆ! ಕಡಿಮೆ ಜನ ಸಂಪರ್ಕ, ಕಡಿಮೆ ಶ್ರಮ, ಕಡಿಮೆ ಆತಂಕ, ನಿಶ್ಚಿತ ಅವಧಿಯ ಕೆಲಸ, ಆದರೆ ಹೆಚ್ಚು ಹಣತರುವಂಥ ತಜ್ಞತೆಗಳಿಗೆ ಅತಿ ಹೆಚ್ಚು ಬೇಡಿಕೆ! ಇದು ಹೇಳುವುದಿಷ್ಟೇ: ಬದಲಾದ ಸಮಾಜದ ಆದ್ಯತೆಗಳೇ ವೈದ್ಯರ ಆದ್ಯತೆಗಳ ಬದಲಾವಣೆಗೆ ಕಾರಣವಾಗಿವೆ.

ಭಾರತದಂತಹ ಅಸಮಾನ ದೇಶದಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು ಜಾತಿ, ಲಿಂಗ ಮತ್ತು ವರ್ಗಪ್ರಜ್ಞೆ ಕಳೆದುಕೊಳ್ಳಬೇಕು. ಅದನ್ನು ಕಳೆದುಕೊಳ್ಳಲು ಸಾಧ್ಯವಾಗುವಂತಹ ವೈದ್ಯ ಶಿಕ್ಷಣ ಅವಶ್ಯವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ `ಗಳಿಕೆ’ ದುಡ್ಡಿಗೆ ಉತ್ತರದಾಯಿತ್ವ ಆರೋಪಿಸಿಕೊಳ್ಳುವುದು. ನಮ್ಮ ಬಳಿ ಹೊಟ್ಟೆತುಂಬ ಉಂಡು ಮಿಗುವಷ್ಟು ಇದೆಯೆಂದರೆ ಅದಕ್ಕೆ ಹಸಿದವರ ಅನ್ನ ಕಸಿದುಕೊಂಡ ಕಳಂಕ ಅಂಟಿರುತ್ತದೆ. ವೈದ್ಯರ ಯೋಚನೆ ಈ ದಿಕ್ಕಿನಲ್ಲಿ ಕೊಂಚ ಹರಿದರೂ ಸಾಕು, ತಂತಾನೇ ವೈದ್ಯರ ಸ್ಟಾಂಡರ್ಡ್‍ಗಳು, ಫೀಸುಗಳು, ಚಿಕಿತ್ಸೆ-ತಪಾಸಣೆಯ ಲಿಸ್ಟು ಬದಲಾಗಿಬಿಡುತ್ತವೆ. ನಾವು ಜನರ ಋಣಭಾರವನ್ನು ನೆನಪಿಡುವಂತಹ ಶಿಕ್ಷಣ-ವೈದ್ಯಕೀಯವಷ್ಟೆ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಅವಶ್ಯವಾಗಿದೆ.

(ಇಲ್ಲಿ ಆಲೋಪತಿ ವೈದ್ಯ ಪದ್ಧತಿಯ ಕಾಲೇಜುಗಳನ್ನಷ್ಟೆ ಗಮನದಲ್ಲಿಟ್ಟುಕೊಂಡು ಬರೆಯಲಾಗಿದೆ. ಉಳಿದ ವೈದ್ಯಪದ್ಧತಿಗಳ ಶಿಕ್ಷಣ ಕುರಿತು ನನಗಷ್ಟು ತಿಳಿದಿಲ್ಲ.)

Leave a Reply

Your email address will not be published.