ರೋಗರಕ್ಷಣಾ ವ್ಯವಸ್ಥೆಯೇ ಸಮರ್ಥ ಮಾರ್ಗ

2021ರ ಮಧ್ಯದ ವೇಳೆಗಷ್ಟೇ ಲಸಿಕೆಗಳು ಲಭ್ಯವಾಗಬಹುದು; ಅವನ್ನು ಉತ್ಪಾದಿಸಿ, ಎಲ್ಲರಿಗೆ ಕೊಡುವುದಕ್ಕೆ ವರ್ಷಗಳು ಬೇಕಾಗಬಹುದು, ಕೋಟಿಗಟ್ಟಲೆ ಹಣವೂ ಬೇಕು. ವೈರಾಣು ಅದಕ್ಕೆಲ್ಲ ಕಾಯದೆ ಈ ವರ್ಷಾಂತ್ಯದೊಳಗೆ 60-70% ಜನರನ್ನು ಸೋಂಕಿ, ಸಾಮೂಹಿಕವಾಗಿ ಸೋಂಕು ನಿರೋಧಕ ಶಕ್ತಿಯನ್ನುಂಟು ಮಾಡಿ ತಾನಾಗಿ ವಿರಳಗೊಳ್ಳಲಿದೆ.

ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಹೊಸ ಕೊರೋನ ವೈರಸ್ ಚೀನಾದಿಂದ ಬಂದಾಗಿದೆ, ಭಾರತದಲ್ಲಿ ಹರಡಲಿದೆ, ಶತಮಾನಗಳವರೆಗೆ ಶಾಶ್ವತವಾಗಿ ಇರಲಿದೆ ಎಂದು ಮಾರ್ಚ್ನಲ್ಲಿ ಹೇಳಿದ್ದಾಗ ಸರಕಾರದ ಬೆಂಬಲಿಗರೆಂಬವರು ಗೇಲಿ ಮಾಡಿದ್ದರು. ಭಾರತದಂತಹ ಪುಣ್ಯಭೂಮಿಗೆ ಕೊರೋನದಂತಹ ಚೀನಿ ವೈರಸ್ ಬರಲು ಸಾಧ್ಯವೇ ಇಲ್ಲ ಎಂದಿದ್ದರು, ಜನವರಿಯಲ್ಲೇ ಬಂದಿತ್ತು. ಬಂದರೂ ಸಾರು ಸಾಂಬಾರು ತಿನ್ನುವವರಿಗೆ ಏನೂ ಮಾಡಲಾರದು ಎಂದರು, ಮಾರ್ಚ್ ಎರಡನೇ ವಾರದಿಂದಲೇ ಸಮಸ್ಯೆಗಳಾಗತೊಡಗಿದವು.

ನಮಸ್ತೆ ಮಾಡಿ ತಡೆಯಬಹುದು, ಕಷಾಯ ಕುಡಿದು ಎದುರಿಸಬಹುದು, ಮೂತ್ರ-ಸೆಗಣಿಗಳಿಂದ ಮಣಿಸಬಹುದು ಎಂದರು, ಅದೂ ಆಗಲಿಲ್ಲ. 137 ಕೋಟಿ ಜನರ ದೇಶದಲ್ಲಿ ಕೇವಲ 564 ಪ್ರಕರಣಗಳಿದ್ದಾಗ ಇಡೀ ದೇಶವನ್ನೇ ಸ್ತಬ್ಧಗೊಳಿಸಿ ಎಲ್ಲರನ್ನೂ ಮನೆಗಳೊಳಕ್ಕೆ ತಳ್ಳಿದರು, ವಿಶ್ವಕ್ಕೇ ಗುರುವಿನಂತೆ 21 ದಿನಗಳಲ್ಲಿ ಕುರುಕ್ಷೇತ್ರ ಗೆಲ್ಲುತ್ತೇವೆ ಎಂದರು, ಅದೂ ಆಗದೆ ಸೋತಾಯಿತು; 21 ಹೋಗಿ 68 ದಿನಗಳ ಕಾಲ ದಿಗ್ಬಂಧನ ಹಾಕಿದ ಬಳಿಕ ಮೇ 16ರಿಂದ ಒಂದೇ ಒಂದು ಪ್ರಕರಣಗಳಿರಲಾರದು ಎಂದರು, ಅದೇ ದಿನ ಸುಮಾರು 5000 ಹೊಸ ಪ್ರಕರಣಗಳಾದವು. ಈಗ ದೇಶದಲ್ಲಿ ಕೊರೋನ ಪೀಡಿತರ ಒಟ್ಟು ಸಂಖ್ಯೆ 30 ಲಕ್ಷ ದಾಟಿದಾಗ, 60000ದಷ್ಟು ಮೃತರಾಗಿರುವಾಗ, ಅಂಗಳದ ನವಿಲಿಗೆ ಕಾಳು ತಿನ್ನಿಸಲಾಗುತ್ತಿದೆ.

ಮಾರ್ಚ್ ಮೊದಲಲ್ಲಿ ಈ ಹೊಸ ಸೋಂಕನ್ನು ನಿಯಂತ್ರಿಸುವುದಕ್ಕೆ ನಮ್ಮ ದೇಶಕ್ಕೆ ದಿಗ್ಬಂಧನದಂತಹ ಸೂತ್ರಗಳು ಹಿಡಿಸವು, ನಾವು ನಮ್ಮ ಹಿರಿಯರನ್ನು, ಸೋಂಕಿನಿಂದ ಅಪಾಯಕ್ಕೊಳಗಾಗಬಲ್ಲವರನ್ನು, ರಕ್ಷಿಸಿಟ್ಟು, ಬೇರೆಯೇ ರೀತಿಯಲ್ಲಿ ಇದನ್ನು ನಿಭಾಯಿಸಬೇಕು ಎಂದು ಹೇಳಿದಾಗ ಸರಕಾರದ ಬೆಂಬಲಿಗರು ಹಾರಿ ಬಿದ್ದಿದ್ದರು. ಇದು ಸಾಕಷ್ಟು ವೇಗವಾಗಿ ಹರಡುವ ವೈರಸ್, ಮನುಷ್ಯರು ಮುಖಾಮುಖಿಯಾದಾಗ ಒಬ್ಬರಿಂದೊಬ್ಬರಿಗೆ ಹರಡುವ ವೈರಸ್, ಎಲ್ಲರನ್ನೂ ಮನೆಯೊಳಗೆ ಕೂಡಿ ಹಾಕಿದರೆ ಅದನ್ನು ತಡೆಯಲು ಸಾಧ್ಯವಿಲ್ಲ; ಸರಕಾರದ ಆರ್ಥಿಕ ನೀತಿಗಳ ವೈಫಲ್ಯವು ಗೊತ್ತಾಗುವುದಕ್ಕೆ 2-3 ವರ್ಷಗಳಾಗಬಹುದು, ಆದರೆ ಯಾವುದಕ್ಕೂ ಬಗ್ಗದೆ ತನ್ನಷ್ಟಕ್ಕೆ ಹರಡುವ ಈ ವೈರಸ್, ಸರಕಾರದ ಬಾಲಿಶತನವನ್ನು ಎತ್ತಿ ತೋರಿಸುವುದಕ್ಕೆ 2-3 ತಿಂಗಳುಗಳಷ್ಟೇ ಸಾಕು ಎಂದು ಹೇಳಿದ್ದಾಗ ಕೆಲವರು ಗಹಗಹಿಸಿ ನಕ್ಕಿದ್ದರು. 3-4 ವಾರಗಳಾದಾಗ, ಕುರುಕ್ಷೇತ್ರಕ್ಕೆ ಇಳಿದವರು ಶಸ್ತçತ್ಯಾಗ ಮಾಡಿ, ‘ಈ ವೈರಸ್ ಶಾಶ್ವತ, ಆತ್ಮ ನಿರ್ಭರರಾಗಿರಿ’ ಎಂದು ಉಪದೇಶಿಸಿದರು, ಗಹಗಹಿಸಿ ನಕ್ಕಿದ್ದವರೆಲ್ಲ ಓಡಿ ಹೋದರು.

ಹೊಸ ಕೊರೋನ ವೈರಸ್ ಹೀಗೆಲ್ಲ ಬದಲಾಗಲಿಲ್ಲ. ಆರಂಭದ ದಿನಗಳಲ್ಲಿ ಚೀನಾದಲ್ಲಿ ಹೇಗೆ ವರ್ತಿಸಿತ್ತೋ, ಆ ಬಳಿಕ ಹರಡಿದ ದೇಶಗಳಲ್ಲೂ ಹಾಗೆಯೇ ವರ್ತಿಸಿತು. ಚೀನಾದಲ್ಲಿ ಹೇಗೆ, ಎಷ್ಟು ಸಮಸ್ಯೆಗಳನ್ನುಂಟು ಮಾಡಿತ್ತೋ, ಉಳಿದೆಡೆಗಳಲ್ಲೂ ಹಾಗೆಯೇ, ಅಷ್ಟೇ ಮಾಡಿತು. ಈ ಆರೇಳು ತಿಂಗಳಲ್ಲಿ ವಿಶ್ವದಾದ್ಯಂತ ಅದರ ಬಗ್ಗೆ ನಡೆದಿರುವ ಅಧ್ಯಯನಗಳಿಂದ ದೊರೆತಿರುವ ಅಪಾರವಾದ ಮಾಹಿತಿಯನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಈ ಸೋಂಕಿನಿಂದ ಏನೆಲ್ಲ ಆಗಬಹುದು ಎಂದು ಅಂದಾಜಿಸುವುದು ಕಷ್ಟವಲ್ಲ.

ಆಧುನಿಕ ಆಹಾರ ಮತ್ತು ಜೀವನ ಶೈಲಿ, ಅದರಿಂದ ಉಂಟಾಗಿರುವ ಕಾಯಿಲೆಗಳು ಮತ್ತು ಈ ಕೊರೋನ ವೈರಸ್ ಕೂಡಿಕೊಂಡಾಗ ವಿಷವರ್ತುಲವಾಗಿ ಕಾಡುವುದೇ ಈ ಸೋಂಕಿನ ವಿಶೇಷ ಸಮಸ್ಯೆಯಾಗಿದೆ. ಈ ಹೊಸ ಕೊರೋನ ವೈರಸ್ ನಮ್ಮ ಜೀವಕೋಶಗಳಲ್ಲಿರುವ ACE2 ಎಂಬ ಕಿಣ್ವಗಳಿಗೆ ತಗಲಿಕೊಂಡು ಒಳಪ್ರವೇಶಿಸುತ್ತದೆ. ಈ ACE2 ಕಿಣ್ವಗಳು ನಮ್ಮ ದೇಹದ ಉಪಾಪಚಯದಲ್ಲಿ, ರಕ್ತಸಂಚಾರ ಹಾಗೂ ರಕ್ತದೊತ್ತಡದ ನಿಯಂತ್ರಣದಲ್ಲಿ, ಇನ್ಸುಲಿನ್ ಸ್ರವಿಸುವಿಕೆ ಮತ್ತು ಗ್ಲೂಕೋಸ್ ನಿಯಂತ್ರಣದಲ್ಲಿ, ಹಾಗೂ ಉರಿಯೂತದ ನಿಯಂತ್ರಣದಲ್ಲಿ ಬಹು ಮಹತ್ವದ ಪಾತ್ರಗಳನ್ನು ಹೊಂದಿವೆ. ಹೊಸ ಕೊರೋನ ವೈರಸ್ ACE2 ಕಿಣ್ವಕ್ಕೆ ತಗಲಿಕೊಳ್ಳುವುದರಿಂದ, ACE2 ಮತ್ತು ಉಪಾಪಚಯಗಳಿಗೆ ಸಂಬಂಧಿಸಿದ ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಹೃದ್ರೋಗ, ಮಿದುಳಿನ ರಕ್ತ ಪೂರೈಕೆಯ ಸಮಸ್ಯೆಗಳು, ಮೂತ್ರಪಿಂಡಗಳ ಕಾಯಿಲೆ, ಬೊಜ್ಜು ಎಲ್ಲವೂ ಪ್ರಭಾವಿತವಾಗುತ್ತವೆ. ಈ ಕಾಯಿಲೆಗಳಿರುವವರಲ್ಲಿ ACE2 ಮಟ್ಟವು ಹೆಚ್ಚಿರುವುದರಿಂದ, ಅಂಥವರಲ್ಲಿ ಕೊರೋನ ಸೋಂಕು ಹೆಚ್ಚು ಬೆಳೆಯುತ್ತದೆ, ಅದು ಉಲ್ಬಣಿಸುವ ಅಪಾಯವು ಹೆಚ್ಚುತ್ತದೆ. ಅಂದರೆ ಕೊರೋನ ಸೋಂಕಿದವರಲ್ಲಿ ಆಧುನಿಕ ಕಾಯಿಲೆಗಳು ಉಲ್ಬಣಿಸುತ್ತವೆ, ಆಧುನಿಕ ಕಾಯಿಲೆಗಳುಳ್ಳವರಲ್ಲಿ ಕೊರೋನ ಉಲ್ಬಣಿಸುತ್ತದೆ. ಈ ಎಲ್ಲ ಆಧುನಿಕ ಕಾಯಿಲೆಗಳು ಸಕ್ಕರೆ, ಹಣ್ಣುಗಳು ಮತ್ತು ಸಂಸ್ಕರಿತ ಆಹಾರದ ಅತಿ ಸೇವನೆ ಮತ್ತು ಅದರಿಂದಾಗುವ ಇನ್ಸುಲಿನ್ ಅತಿ ಸ್ರಾವದೊಂದಿಗೆ ನೇರ ಸಂಬಂಧವನ್ನು ಹೊಂದಿವೆ; ಹಾಗಾಗಿ, ಈ ಆಹಾರಗಳಿಂದ ಹೊಸ ಕೊರೋನ ಸೋಂಕು ಕೂಡ ಬಿಗಡಾಯಿಸುತ್ತದೆ.

ಸಂಸ್ಕರಿತ, ಸಿಹಿಭರಿತ ಆಹಾರದ ಸೇವನೆಯು ಈಗ ಬಹಳಷ್ಟು ಹೆಚ್ಚಿದೆ, ಅದರಿಂದಾಗಿ ಆಧುನಿಕ ಜೀವನಶೈಲಿಯ ಕಾಯಿಲೆಗಳು ಹೆಚ್ಚಿವೆ, ಅವುಗಳೊಂದಿಗೆ ಈಗ ಈ ಹೊಸ ಕೊರೋನ ಸೋಂಕು ಸೇರಿಕೊಂಡಿದೆ, ಇವು ಪರಸ್ಪರ ಪೋಷಿಸಿಕೊಂಡು ವಿಷವರ್ತುಲವಾಗಿ ತೀವ್ರ ರೂಪದ ಸಮಸ್ಯೆಗಳಿಗೂ, ಸಾವುಗಳಿಗೂ ಕಾರಣವಾಗುತ್ತಿವೆ. ಈ ಕೊರೋನ ವೈರಸ್ ಇನ್ನು ಎಂದೆAದಿಗೂ ಶಾಶ್ವತವಾಗಿ ನಮ್ಮೊಂದಿಗೆ ಇರಲಿರುವುದರಿಂದ ಅದರಿಂದಾಗಬಹುದಾದ ಸಾವುಗಳನ್ನು ತಡೆಯಬೇಕಾದರೆ ಈ ವಿಷವರ್ತುಲವನ್ನು ಮುರಿಯಬೇಕಾಗುತ್ತದೆ. ಆಹಾರ ಮತ್ತು ಜೀವನಶೈಲಿಗಳ ಬದಲಾವಣೆ, ಅವಕ್ಕೆ ಸಂಬಂಧಿಸಿದ ಕಾಯಿಲೆಗಳುಳ್ಳವರಲ್ಲಿ ವಿಶೇಷ ಎಚ್ಚರಿಕೆ, ಮತ್ತು ಅವರಲ್ಲಿ ಕೊರೋನ ನಿಭಾಯಿಸುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗುತ್ತದೆ.

ಆದರೆ ಈ ನಿಟ್ಟಿನಲ್ಲಿ ಇದುವರೆಗೆ ಯಾವ ಕೆಲಸವೂ ಆಗಿಲ್ಲ, ಮುಂದೆ ಆಗಬಹುದೆನ್ನುವ ಯಾವ ಸೂಚನೆಯೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಆದ್ದರಿಂದ, ಈ ಅನ್ಯ ಕಾಯಿಲೆಗಳುಳ್ಳವರಿಗೆ ಈಗ ಸೋಂಕು ತಗಲದಿದ್ದರೂ, ಮುಂದೆ ಎಂದಾದರೂ ತಗಲಿದರೆ ಸಮಸ್ಯೆಗಳಾಗುವ ಸಾಧ್ಯತೆ ಇದ್ದೇ ಇರುತ್ತದೆ. ಅವರು ಈ ಕೊರೋನ ರೋಗದ ಲಕ್ಷಣಗಳನ್ನು ಹೊಂದಿದರೆ ಅದು ಉಲ್ಬಣಿಸುವ ಬಗ್ಗೆ ಎಚ್ಚರಿಕೆಯನ್ನು ವಹಿಸಲೇ ಬೇಕಾಗುತ್ತದೆ.

ಮಕ್ಕಳು ಮತ್ತು ಯುವಜನರಲ್ಲಿ ಮತ್ತು ಮೇಲೆ ಹೇಳಿದ ಕಾಯಿಲೆಗಳಿಲ್ಲದ ಆರೋಗ್ಯವಂತರಲ್ಲಿ ಈ ಕೊರೋನ ಸೋಂಕು ಯಾವುದೇ ಸಮಸ್ಯೆಗಳನ್ನುಂಟು ಮಾಡದೆ ವಾರದೊಳಗೆ ವಾಸಿಯಾಗುತ್ತದೆ; ಅನ್ಯ ಕಾಯಿಲೆಗಳುಳ್ಳವರಲ್ಲೂ ಹೆಚ್ಚಿನವರು ಹಾಗೆಯೇ ಗುಣ ಹೊಂದುತ್ತಾರೆ. ಅಂದರೆ ಒಟ್ಟಾರೆಯಾಗಿ ಶೇ. 99ಕ್ಕೂ ಹೆಚ್ಚು ಸೋಂಕಿತರಲ್ಲಿ ಇದು ಯಾವುದೇ ಔಷಧಗಳಿಲ್ಲದೆಯೇ ತಾನಾಗಿ ವಾಸಿಯಾಗುತ್ತದೆ. ಹಾಗೆ ವಾಸಿಯಾದವರು ಈ ಸೋಂಕಿನ ವಿರುದ್ಧ ರಕ್ಷಣಾ ಸಾಮರ್ಥ್ಯವನ್ನು ಪಡೆಯುತ್ತಾರೆ.

ಕೊರೋನ ಸೋಂಕು ಹರಡಿ, ಸಾಮೂಹಿಕವಾಗಿ ಶೇ. 50-60ರಷ್ಟು ಜನರಲ್ಲಿ ಇಂತಹ ಸೋಂಕು ನಿರೋಧಕ ಶಕ್ತಿಯು ಬೆಳೆದಾಗ ಅದರ ಹರಡುವಿಕೆಯು ನಿಧಾನಗೊಳ್ಳುತ್ತದೆ, ಸೋಂಕು ವಿರಳವಾಗುತ್ತದೆ. ಈಗಾಗಲೇ ಕೊರೋನ ಸೋಂಕು ವ್ಯಾಪಕವಾಗಿ ಹರಡಿರುವ ದಿಲ್ಲಿ, ಮುಂಬಯಿ, ಹೈದರಾಬಾದ್, ಚೆನ್ನೈಯಂತಹ ನಗರಗಳಲ್ಲಿ ನಡೆಸಲಾದ ಅಧ್ಯಯನಗಳಲ್ಲಿ ಶೇ. 20-40ರಷ್ಟು ಜನರಲ್ಲಿ ಕೊರೋನ ಸೋಂಕಿಗಿದಿರಾದ ಪ್ರತಿಕಾಯಗಳು ಪತ್ತೆಯಾಗಿವೆ. ಅಂದರೆ ಅಷ್ಟೊಂದು ಜನರು ಈಗಾಗಲೇ ಅಲ್ಲಿ ಸೋಂಕಿತರಾಗಿ ಗುಣ ಹೊಂದಿದ್ದಾರೆ (ಅಂದರೆ, ಭಾರತದಲ್ಲಿ ಸೋಂಕಿತರ ಸಂಖ್ಯೆ 30 ಲಕ್ಷ ಅಲ್ಲ, ಅದರ 50-100 ಪಟ್ಟು ಹೆಚ್ಚಿರುತ್ತದೆ). ಪ್ರತಿಕಾಯಗಳು ಮಾತ್ರವಲ್ಲ, ಕೆಲವರಲ್ಲಿ ಟಿ ದುಗ್ಧ ಕಣಗಳ ಮೂಲಕವೂ ಸೋಂಕು ನಿರೋಧಕ ಶಕ್ತಿಯು ದೊರೆಯುವುದರಿಂದ ಸೋಂಕು ನಿರೋಧಕ ಶಕ್ತಿಯನ್ನು ಪಡೆದಿರುವವರ ಒಟ್ಟು ಸಂಖ್ಯೆಯು ಇನ್ನೂ ಹೆಚ್ಚೇ ಇರುತ್ತದೆ ಎನ್ನಲಾಗಿದೆ.

ಅದರ ಜೊತೆಗೆ, ಹಳೆಯ ಕೊರೋನ ವೈರಸ್‌ಗಳ ಸೋಂಕನ್ನು ಅನುಭವಿಸಿದ್ದವರಲ್ಲಿಯೂ ಈ ಹೊಸ ವೈರಸ್ ಅನ್ನು ಮಣಿಸುವ ಸಾಮರ್ಥ್ಯವಿರಬಹುದು ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ. ಇವೆಲ್ಲವನ್ನೂ ಪರಿಗಣಿಸಿದರೆ, ಈಗಿನ ಗತಿಯಲ್ಲೇ ಸೋಂಕಿನ ಹರಡುವಿಕೆಯು ಮುಂದುವರಿದರೆ, ಇನ್ನು ಆರೇಳು ತಿಂಗಳೊಳಗೆ, ಅಂದರೆ 2021ರ ಮೊದಲ ಭಾಗದಲ್ಲಿ, ಭಾರತದ ಹೆಚ್ಚಿನ ನಗರಗಳಲ್ಲಿ, ಮತ್ತು ಈಗಾಗಲೇ ಸೋಂಕು ತಗಲಿರುವ ಕೆಲವು ಗ್ರಾಮೀಣ ಭಾಗಗಳಲ್ಲಿ ಸೋಂಕಿನ ಅಬ್ಬರವು ಬಹುತೇಕವಾಗಿ ಇಳಿಯಲಿದೆ.

ಕೊರೋನ ಸೋಂಕು ವ್ಯಾಪಕವಾಗಿ ಹರಡಿರುವ ರಷ್ಯಾ, ಸಂಯುಕ್ತ ಸಾಮ್ರಾಜ್ಯ (ಯು.ಕೆ), ಇಟೆಲಿ, ಸ್ವೀಡನ್ ಮುಂತಾದ ದೇಶಗಳಲ್ಲಿ ಈಗ ಹೊಸ ಪ್ರಕರಣಗಳು ವಿರಳವಾಗಿರುವುದು ಇದನ್ನು ಪುಷ್ಟೀಕರಿಸುತ್ತವೆ (ಆದರೆ ಮೊದಲಲ್ಲಿ ದಿಗ್ಬಂಧನಗಳನ್ನು ವಿಧಿಸಿ ಸೋಂಕನ್ನು ಕಟ್ಟಿ ಹಾಕಲು ಯತ್ನಿಸಿದ್ದ ದೇಶಗಳಲ್ಲಿ ಸೋಂಕು ನಿರೋಧಕ ಶಕ್ತಿಯು ಬೆಳೆಯದೇ, ದಿಗ್ಬಂಧನಗಳನ್ನು ತೆರೆದ ಕೂಡಲೇ ಅದು ಮತ್ತೆ ಹರಡತೊಡಗಿದೆ).

ಹೊಸ ಕೊರೋನ ಸೋಂಕನ್ನು ಮಣಿಸುವುದಕ್ಕೆ ಹಲವು ಔಷಧಗಳನ್ನು ಬಳಸಿ ನೋಡಲಾಗಿದೆ, ಹತ್ತು ಸಾವಿರಕ್ಕೂ ಹೆಚ್ಚು ಸೋಂಕಿತರನ್ನೊಳಗೊಂಡ ಅಧ್ಯಯನಗಳೂ ಆಗಿವೆ. ಮಲೇರಿಯಾ ನಿರೋಧಕ ಕ್ಲೋರೊಕ್ವಿನ್, ಪ್ರತಿಜೈವಿಕ ಅಝಿತ್ರೋಮೈಸಿನ್, ಎಚ್‌ಐವಿ ನಿರೋಧಕ ಲೊಪಿನಾವಿರ್/ರಿಟೊನಾವಿರ್, ಫ್ಲೂ ನಿರೋಧಕ ಒಸೆಲ್ಟಾಮಿವಿರ್, ಫಾಮಿಪಿರಾವಿರ್, ಜಂತು ನಿರೋಧಕ ಐವರ್‌ಮೆಕ್ಟಿನ್ ಎಲ್ಲವನ್ನೂ ಬಳಸಿ ನೋಡಲಾಗಿದ್ದು, ಇವೆಲ್ಲವೂ ನಿರುಪಯುಕ್ತವೆಂದು ಸಾಬೀತಾಗಿದೆ. ಹೀಗಿದ್ದರೂ ಇವುಗಳ ಬಳಕೆಯು ನಿಂತಿಲ್ಲ, ನಮ್ಮ ರಾಜ್ಯದಲ್ಲಿ ಸರಕಾರವೇ ಪ್ರಕಟಿಸಿದ ಶಿಷ್ಟಾಚಾರದಲ್ಲಿ ಇವೆಲ್ಲವನ್ನೂ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಹಾಗಾಗಿ ಹಲವು ವೈದ್ಯರು ಇವೆಲ್ಲವನ್ನೂ ಜೊತೆಜೊತೆಗೆ ನೀಡುತ್ತಿದ್ದಾರೆ, ಜನರೂ ಅವನ್ನು ಬಯಸುತ್ತಿದ್ದಾರೆ!

ಎಬೋಲಾದೆದುರಾಗಿ ಸಿದ್ಧಪಡಿಸಿದ್ದ ರೆಮ್ಡಿಸಿವಿರ್ ಅನ್ನು ಕೊರೋನದೆದಿರು ಪ್ರಯೋಗಿಸಲಾಗಿದ್ದು, ಅದು ಪರಿಣಾಮಕಾರಿ ಎನ್ನುವುದು ಇನ್ನೂ ದೃಢಗೊಂಡಿಲ್ಲ; ಆದರೂ ಅದನ್ನೀಗ ಎಲ್ಲೆಡೆ ಬಳಸಲಾಗುತ್ತಿದೆ, ಸರ್ಕಾರವೂ ಅದನ್ನು ಒದಗಿಸುವುದಾಗಿ ಹೇಳಿಕೊಂಡಿದೆ. ಒಟ್ಟಿನಲ್ಲಿ, ಈ ಔಷಧಗಳು ಯಾವುವೂ ಕೊರೋನ ಸೋಂಕನ್ನು ನಿಯಂತ್ರಿಸುವಲ್ಲಿ, ಇಲ್ಲವಾಗಿಸುವಲ್ಲಿ, ಅಥವಾ ತೀವ್ರಗೊಳ್ಳದಂತೆ ತಡೆಯುವಲ್ಲಿ ನೆರವಾಗುವುದಿಲ್ಲವೆಂದೇ ಹೇಳಬಹುದು. ಆದ್ದರಿಂದ ಇವನ್ನು ನಂಬಿಕೊಂಡು ಕೊರೋನ ಸೋಂಕನ್ನು ಮಣಿಸಲಾಗದು.

ತೀವ್ರ ರೂಪದ ಸಮಸ್ಯೆಗಳಾದವರಲ್ಲಿ ಉರಿಯೂತವನ್ನು ನಿಗ್ರಹಿಸಬಲ್ಲ ತೋಸಿಲಿಝುಮಾಬ್ ಮತ್ತು ಸಾರಿಲುಮಾಬ್ ಎಂಬ ವಿಶೇಷ ಔಷಧಗಳನ್ನು ಬಳಸಿ ನೋಡಲಾಗುತ್ತಿದೆಯಾದರೂ ಅವುಗಳಿಂದ ಪ್ರಯೋಜನವಾದಂತೆ ಕಾಣುತ್ತಿಲ್ಲ. ಭಾರತದ್ದೇ ಆದ ಬಯೋಕಾನ್ ಸಂಸ್ಥೆಯು ಮುಂದೊತ್ತಿದ್ದ ಇಟೊಲಿಝುಮಾಬ್ ಒಂದೆರಡು ವಾರ ಸುದ್ದಿಯಲ್ಲಿದ್ದರೂ, ಅದರ ಬಳಕೆಗೆ ಒಪ್ಪಿಗೆ ನೀಡಲು ಕೇಂದ್ರ ಸರಕಾರವು ನಿರಾಕರಿಸಿದೆ. ತೀವ್ರ ರೂಪದ ಸಮಸ್ಯೆಗಳಿರುವವರಲ್ಲಿ, ಅದರಲ್ಲೂ ಹೆಚ್ಚುವರಿ ಆಮ್ಲಜನಕದ ಅಗತ್ಯವುಂಟಾದವರಲ್ಲಿ ಹಾಗೂ ಕೃತಕ ಉಸಿರಾಟದ ಅಗತ್ಯವುಂಟಾದವರಲ್ಲಿ, ಸ್ಟೀರಾಯ್ಡ್ ಔಷಧಗಳ ಸೀಮಿತ ಬಳಕೆಯಿಂದ ಸಹಾಯವಾಗಬಹುದು ಎನ್ನುವುದು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನಗಳಲ್ಲಿ ದೃಢಗೊಂಡಿದ್ದು, ಕೊರೋನ ಚಿಕಿತ್ಸೆಯಲ್ಲಿ ಸಾಕ್ಷ್ಯಾಧಾರಿತವಾದುದು ಇದೊಂದೇ ಆಗಿದೆ.

ಕೊರೋನ ಸೋಂಕಿನಿಂದ ಗುಣಮುಖರಾದವರ ರಕ್ತದ್ರವದಲ್ಲಿ ವೈರಸ್‌ಗಿದಿರಾದ ಪ್ರತಿಕಾಯಗಳಿರುವುದರಿಂದ, ಅಂಥವರ ರಕ್ತದ್ರವವನ್ನು ತೀವ್ರ ರೂಪದ ಸೋಂಕುಳ್ಳ ರೋಗಿಗಳಿಗೆ ನೀಡುವ ಪ್ರಯೋಗಗಳಾಗುತ್ತಿವೆ. ಆದರೆ ಅದರಿಂದ ಪ್ರಯೋಜನಗಳಾಗದೆಂದು ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯೂ ಸೇರಿದಂತೆ ಹಲವೆಡೆಗಳಿಂದ ವರದಿಗಳಾಗಿವೆ. ಕೊರೋನಾಗಿದಿರಾದ ಕೃತಕ ಪ್ರತಿಕಾಯಗಳ ಬಗ್ಗೆ ಅಧ್ಯಯನಗಳಾಗುತ್ತಿವೆ; ಆದರೆ ಅವು ಲಭ್ಯವಾಗುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗಬಹುದು, ಅವಕ್ಕೆ ಅಪಾರ ವೆಚ್ಚವೂ ತಗಲಬಹುದು.

ಕೊರೋನ ಸೋಂಕನ್ನು ಗುಣಪಡಿಸುವಂತಹ ಔಷಧಗಳು ಲಭ್ಯವಿಲ್ಲದಿದ್ದರೂ, ಯಾವುದೇ ಚಿಕಿತ್ಸೆಯಿಲ್ಲದೆಯೇ ಶೇ.99ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗುತ್ತಿರುವುದರಿಂದ, ಅಂಥ ಔಷಧಗಳಿಗಾಗಿ ಆತಂಕಿತರಾಗುವ ಅಗತ್ಯವೇ ಇಲ್ಲ. ಹೆಚ್ಚಿನವರಲ್ಲಿ ಅವರವರ ರೋಗ ರಕ್ಷಣಾ ವ್ಯವಸ್ಥೆಯೇ ಕೊರೋನ ಸೋಂಕನ್ನು ಹಿಮ್ಮೆಟ್ಟಿಸುತ್ತದೆ. ಮೇಲೆ ಹೇಳಿದ ಅನ್ಯ ಕಾಯಿಲೆಗಳಿರುವವರಲ್ಲಿ, ಸಕ್ಕರೆ ಇತ್ಯಾದಿಗಳನ್ನು ಅತಿಯಾಗಿ ಸೇವಿಸುವವರಲ್ಲಿ, ಮದ್ಯಪಾನ-ಧೂಮಪಾನ ಮಾಡುವವರಲ್ಲಿ, ರೋಗ ರಕ್ಷಣಾ ವ್ಯವಸ್ಥೆಯು ಅಪನಿಯಂತ್ರಿತವಾಗಿ, ಅತಿಯಾದ ಉರಿಯೂತವನ್ನುಂಟು ಮಾಡುವುದೇ ಕೊರೋನ ರೋಗದಲ್ಲಿ ಶ್ವಾಸಕೋಶಗಳು ಮತ್ತಿತರ ಅಂಗಗಳ ಹಾನಿಗೆ ಕಾರಣವಾಗುತ್ತದೆ.

ಆದ್ದರಿಂದ ಕೊರೋನ ರೋಗದಿಂದ ಸಮಸ್ಯೆಗಳಾಗದೆ, ಸುಲಭವಾಗಿ ಗುಣಮುಖರಾಗಬೇಕೆಂದರೆ ರೋಗ ವ್ಯವಸ್ಥೆಯು ಸುನಿಯಂತ್ರಿತವಾಗಿರುವಂತೆ ನೋಡಿಕೊಳ್ಳಬೇಕು; ಅದಕ್ಕಾಗಿ, ಈ ಅನ್ಯ ಕಾಯಿಲೆಗಳನ್ನು ಸರಿಯಾಗಿ ನಿಯಂತ್ರಿಸಿಕೊಳ್ಳಬೇಕು, ಸಕ್ಕರೆಭರಿತ ಆಹಾರ, ಹಣ್ಣುಗಳು ಮತ್ತವುಗಳ ರಸಗಳು, ಸಂಸ್ಕರಿತ ತಿನಿಸುಗಳು, ಮದ್ಯಪಾನ, ಧೂಮಪಾನಗಳಿಂದ ದೂರವಿರಬೇಕು. ರೋಗರಕ್ಷಣಾ ವ್ಯವಸ್ಥೆಗೆ ಪೂರಕವಾದ ಆಹಾರಗಳನ್ನು (ತರಕಾರಿಗಳು, ಬೀಜಗಳು, ಮೀನು, ಮಾಂಸ, ಮೊಟ್ಟೆ) ಸೇವಿಸಬೇಕು, ನಿಯತವಾಗಿ ವ್ಯಾಯಾಮ (ನಡೆದಾಟ, ಈಜುವುದು ಇತ್ಯಾದಿ) ಮಾಡಬೇಕು.

ರೋಗರಕ್ಷಣಾ ವ್ಯವಸ್ಥೆಯನ್ನು ‘ಬಲ ಪಡಿಸುವ’ ಔಷಧಗಳು ಲಭ್ಯವಿಲ್ಲ, ಹಾಗೆ ಮಾಡುವ ಅಗತ್ಯವೂ ಇಲ್ಲ. ಕಷಾಯ, ಕ್ವಾದ, ಕಾಡ, ಅರಿಸಿನ ಹಾಲು, ಹೋಮಿಯೋಪತಿ, ಯೋಗ ಇತ್ಯಾದಿಗಳಿಂದ ರೋಗರಕ್ಷಣಾ ವ್ಯವಸ್ಥೆಯು ‘ಬಲಗೊಳ್ಳುವುದಿಲ್ಲ’, ಕೊರೋನ ರೋಗವನ್ನು ಎದುರಿಸುವುದಕ್ಕೆ ಅವುಗಳಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ, ಇವನ್ನು ನಂಬಿ ಉಳಿದ ಎಚ್ಚರಿಕೆಗಳನ್ನು ವಹಿಸದಿದ್ದರೆ ಗಂಡಾಂತರವೇ ಆಗಬಹುದು. ಮಾತ್ರವಲ್ಲ, ಕಷಾಯ, ಅರಿಸಿನ ಹಾಲು ಇತ್ಯಾದಿಗಳಿಂದ ಪಚನಾಂಗ, ಚರ್ಮ, ಶ್ವಾಸಾಂಗ ಇತ್ಯಾದಿಗಳಲ್ಲಿ ಸಮಸ್ಯೆ ಆಗಬಹುದು.

ಹೊಸ ಕೊರೋನ ವೈರಸ್‌ಗಿದಿರಾದ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಬಲು ದೊಡ್ಡ ಪೈಪೋಟಿಯೇ ನಡೆದಿದೆ, ಸುಮಾರು 150ರಷ್ಟು ಲಸಿಕೆಗಳು ಪ್ರಾಯೋಗಿಕ ಹಂತಗಳಲ್ಲಿವೆ. ಅವುಗಳಲ್ಲಿ ಆಕ್ಸ್ಪರ್ಡ್ ವಿವಿ- ಅಸ್ತ್ರ ಜೆನೆಕಾದ ಲಸಿಕೆಯು ಮುಂಚೂಣಿಯಲ್ಲಿದ್ದು, ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಭಾರತದಲ್ಲಿ ಅದರ ಮಾರಾಟಕ್ಕೆ ಅನುಮತಿಯನ್ನು ಪಡೆದುಕೊಂಡಿದೆ. ಅಮೆರಿಕಾದ ಮೊಡರ್ನಾ ಲಸಿಕೆಯು ಕೂಡ ಉಪಯುಕ್ತವೆಂದು ಕಂಡುಬಂದಿದೆ. ಭಾರತದ ಕೊವಾಕ್ಸಿನ್ ಲಸಿಕೆಯು ಕೂಡ ಪ್ರಾಯೋಗಿಕ ಹಂತದಲ್ಲಿದೆ. ಇವುಗಳಲ್ಲಿ ಅಂತಿಮವಾಗಿ ಯಾವುದು, ಯಾವಾಗ ಲಭ್ಯವಾಗಬಹುದು ಎಂಬುದು ಇನ್ನೂ ಖಚಿತವಿಲ್ಲ.

ಈ ನಡುವೆ ಈ ಲಸಿಕೆಗಳನ್ನು ಒದಗಿಸುವುದು ರಾಜಕೀಯ ಮೇಲಾಟವಾಗಿಬಿಟ್ಟಿದೆ: ಚೀನಾ ಇದೇ ಜುಲೈ 22ರಿಂದ ತನ್ನ ದೇಶದ ಕೆಲವರಿಗೆ ಲಸಿಕೆ ನೀಡಲು ಆರಂಭಿಸಿದೆಯೆಂದು ವರದಿಯಾಗಿರುವಾಗ, ರಷ್ಯಾವು ಆಗಸ್ಟ್ 12ರಿಂದ ಅಧ್ಯಕ್ಷರ ಮಗಳಿಂದ ತೊಡಗಿ ಲಸಿಕೆಯನ್ನು ಬಳಸಲಾರಂಭಿಸಿದೆ ಎನ್ನಲಾಗಿದೆ; ನವೆಂಬರ್ 3ರ ಚುನಾವಣೆಗೆ ಮೊದಲು ತಾನು ಲಸಿಕೆಯನ್ನು ದೊರಕಿಸುತ್ತೇನೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದರೆ, 2020ರ ಅಂತ್ಯದೊಳಗೆ ಭಾರತದಲ್ಲಿ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.

ಆಗಸ್ಟ್ 22ರಂದು ಸೀರಮ್ ಇನ್ಸ್ಟಿಟ್ಯೂಟ್ ಅಧಿಕಾರಿಯೊಬ್ಬರು ‘ಇನ್ನು 73 ದಿನಗಳಲ್ಲಿ ಭಾರತೀಯರಿಗೆ ಲಸಿಕೆಯು ದೊರೆಯಲಿದೆ’ ಎಂದು ಹೇಳಿದರೆಂದು ಮಾಧ್ಯಮಗಳು ವರದಿ ಮಾಡಿದವು. ಹಾಗೆ ಯಾರೂ ಹೇಳಲೇ ಇಲ್ಲ ಎಂದು 20 ನಿಮಿಷಗಳಲ್ಲೇ ಆ ಕಂಪೆನಿಯು ಟ್ವೀಟ್ ಮಾಡಿತು! ಏನೇ ಆದರೂ 2021ರ ಮಧ್ಯದ ವೇಳೆಗಷ್ಟೇ ಈ ಲಸಿಕೆಗಳು ಲಭ್ಯವಾಗಬಹುದು; ಆದರೂ ಅವನ್ನು ಉತ್ಪಾದಿಸಿ, ಎಲ್ಲರಿಗೆ ಕೊಡುವುದಕ್ಕೆ ಹತ್ತಿಪ್ಪತ್ತು ವರ್ಷಗಳು ಬೇಕಾಗಬಹುದು, ಲಕ್ಷಗಟ್ಟಲೆ ಕೋಟಿ ಹಣವೂ ಬೇಕಾಗಬಹುದು. ಅದಕ್ಕೆಲ್ಲ ಕಾಯದೆ, ಕೊರೋನ ವೈರಸ್ ಹರಡುತ್ತಲೇ ಇದ್ದು, ಮೇಲೆ ಹೇಳಿದಂತೆ ಈ ವರ್ಷಾಂತ್ಯದೊಳಗೆ 60-70% ಜನರನ್ನು ಸೋಂಕಿ, ಸಾಮೂಹಿಕವಾಗಿ ಸೋಂಕು ನಿರೋಧಕ ಶಕ್ತಿಯನ್ನುಂಟು ಮಾಡಿ ತಾನಾಗಿ ವಿರಳಗೊಳ್ಳಲಿದೆ. ಲಸಿಕೆಗಳು ಆ ಬಳಿಕವೇ ಲಭ್ಯವಾಗಲಿರುವುದರಿಂದ ಅವು ಬಂದಾಗ ಆ ಬಗ್ಗೆ ಚರ್ಚಿಸಿದರೆ ಸಾಕು.

ಹೊಸ ಕೊರೋನ ಸೋಂಕನ್ನು ಸೋಲಿಸುವುದಕ್ಕೆ ನಮ್ಮ ರೋಗರಕ್ಷಣಾ ವ್ಯವಸ್ಥೆಯೇ ಅತ್ಯಂತ ಸಮರ್ಥವಾಗಿದೆ, ಅದಷ್ಟೇ ವಿಶ್ವಾಸಾರ್ಹವಾಗಿದೆ; ಆದ್ದರಿಂದ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದೇ ಅತ್ಯಂತ ಮುಖ್ಯವಾಗಿದೆ. ಅವರವರ ರೋಗರಕ್ಷಣಾ ವ್ಯವಸ್ಥೆಯ ಬಲದಿಂದ ಕೊರೋನ ಸೋಂಕು ವಾಸಿಯಾದಂತೆ, ಅದು ವಿರಳವಾಗುತ್ತಾ ಹೋಗಲಿದೆ.

ಆದರೆ, ಕೊರೋನ ಸೋಂಕಿನ ತಾತ್ಕಾಲಿಕ ಹಾನಿಗಿಂತ ಅದರ ಬಗ್ಗೆ ಅರಿಯದ ಮನುಷ್ಯರು, ತಾವೇ ಮಹಾನಾಯಕರೆಂದುಕೊಂಡು, ಅದನ್ನು ತಡೆಯಹೊರಟು ಮಾಡಿರುವ ಹಾನಿಗಳು ಶಾಶ್ವತವಾಗಿರಲಿವೆ, ಭೀಕರವಾಗಿರಲಿವೆ, ಕೊರೋನದಿಂದ ನರಳದವರೆಲ್ಲರನ್ನೂ ನರಳಿಸಲಿವೆ. ಕೊರೋನ ಸೋಂಕು ನಾಲ್ಕೈದು ತಿಂಗಳಲ್ಲಿ ಕಡಿಮೆಯಾಗಲಿದೆ, ಆದರೆ, ಅದರ ಬಗ್ಗೆ ಮನುಷ್ಯರ ಭಯ, ಗೊಂದಲ, ಮೂರ್ಖ ನಡವಳಿಕೆಗಳು ಕೊನೆಗೊಳ್ಳುವವೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕೊರೋನೋತ್ತರ ಕಾಲದ ಬಗ್ಗೆ ನಡೆಯುತ್ತಿರುವ ಆಲಾಪನೆಗಳು ಎಷ್ಟು ದಿನಗಳವರೆಗೆ ಮುಂದುವರಿಯಬಹುದು ಎಂದು ಕಾದು ನೋಡೋಣ.

*ಲೇಖಕರು ಮಂಗಳೂರಿನವರು, ವೈದ್ಯವೃತ್ತಿಯಲ್ಲಿದ್ದಾರೆ; ಬರವಣಿಗೆ ಅವರ ಗಂಭೀರ ಹವ್ಯಾಸ. ಇತ್ತೀಚೆಗೆ ಬಿಡುಗಡೆಯಾದ ‘ಕೊರೋನ: ಹೆದರದಿರೋಣ’ ಕೃತಿಯ ಸಹ ಲೇಖಕರು.

Leave a Reply

Your email address will not be published.