‘ಲಂಕೇಶ್ ಪ್ರೈವೇಟ್ ಲಿಮಿಟೆಡ್’

ಪುಸ್ತಕದ ಕೊನೆಗೆ ಮೋಹನರಾಂ, ‘ನಿರ್ಲಿಪ್ತವಾಗಿ ಬರೆದಿದ್ದೇನೆ. ಆದರೆ ಪೂರ್ವಗ್ರಹದಿಂದ ಮುಕ್ತ ಎಂದು ಪ್ರಮಾಣ ಮಾಡಿ ಹೇಳಲಾರೆ’ ಎನ್ನುತ್ತಾರೆ. ಈ ಪುಸ್ತಕದಲ್ಲಿ ಲಂಕೇಶರ ಸಾಹಿತ್ಯದ ಬಗ್ಗೆ ಚರ್ಚೆ ಕಡಿಮೆ. ಅವರ ವೈಯಕ್ತಿಕ ಬದುಕಿನ ಮೇಲೆ ಆಕ್ರಮಣವಾಗಿದೆ.

ವರ್ತಮಾನಕ್ಕೆ ಸಮೀಪದ ವ್ಯಕ್ತಿ ಲಂಕೇಶ್. ಅವರನ್ನು ಪ್ರೀತಿಸಿದ, ದ್ವೇಷಿಸಿದ ವ್ಯಕ್ತಿಗಳು ಇನ್ನೂ ಇದ್ದಾರೆ. ಅವರು ಶ್ರೇಷ್ಠ ಗದ್ಯ ಬರಹಗಾರ, ಕೆಟ್ಟ ಪ್ರಾಧ್ಯಾಪಕ, ನಾಟಕ, ಸಿನೇಮಾ, ಪ್ರಕಾಶನ, ರೇಸ್, ಇಸ್ಪೇಟ್, ಕುಡಿತ, ರಾಜಕೀಯ, ಕೃಷಿ, ಮುಂತಾದವುಗಳಲ್ಲಿ ಕೈಯಾಡಿಸಿದ ವ್ಯವಹಾರಿಕ ಚತುರ. ಬೇಕಾದವರನ್ನು ಹೊಗಳುವ, ಬೇಡಾದವರನ್ನು ತುಳಿಯುವ ತಿರಶಾಷ್ಟಿ ವ್ಯಕ್ತಿಯಾಗಿದ್ದರು. ದೀರ್ಘಕಾಲದವರೆಗೆ ಲಂಕೇಶ ಚೇಲಾ ಆಗಿದ್ದ ಆಮೇಲೆ ‘ಟೂ’ ಬಿಟ್ಟ ಮೋಹನರಾಂ ಅವರು ‘ದ ಕ್ಯಾಪಿಟಲ್ -ಲಂಕೇಶ್ ಪ್ರೈವೇಟ್ ಲಿಮಿಟೆಡ್’ ಎಂಬ 230 ಪುಟಗಳ ಪುಸ್ತಕ ಬರೆದು ಅವರ ಅಂತರಂಗಕ್ಕೆ ಕನ್ನಡಿ ಹಿಡಿದಿದ್ದಾರೆ.

ಲಂಕೇಶ್ ಯಾರಲ್ಲಿಯೂ ಕೈಯೊಡ್ಡಿ ಬೇಡದ ಬೀಗುಮಾನದ ಸ್ವಭಾವದವರು. ಆದರೆ ಎಲ್ಲರಿಂದ ಸಹಾಯ ಪಡೆದ ಅವಕಾಶವಾದಿ. ಇವರ ಗುಣ ಹೇಗಿತ್ತೆಂದರೆ ಬೆರಳು ಸಿಗಿಸಿಕೊಂಡು ರಕ್ತ ಬಂದಾಗ ಚೀಪಿ ಸಂತೋಷಪಡುವ ಗುಣ. ‘ಜಾಣ ಜಾಣೆಯರ ಲಂಕೇಶ್ ಪತ್ರಿಕೆ’ ಯ ಮೂಲಕ ನಾಡಿನುದ್ದಕ್ಕೂ ಖ್ಯಾತಿ ಪಡೆದವರು. ಸಹಾಯ ಪಡೆದವರನ್ನೇ ಪತ್ರಿಕೆಯಲ್ಲಿ ಕೆಟ್ಟದಾಗಿ ಬರೆಯುವ ಗುಣ ಅವರದು. ಪ್ರಜಾವಾಣಿಯಿಂದ ಬೆಳೆದ ಅವರು ‘ಮುಳುಗುವ ಹಡುಗು’ ಎಂದು ಟೀಕಿಸಿದವರು. ಸಾಯಿಬಾಬಾ, ವೀರೇಂದ್ರ ಹೆಗ್ಗಡೆ, ಬೃಂದಾವನ ಪ್ರೆಸ್ಸಿನ ಮಾಧ್ವ ಮಂಡಳಿಯನ್ನು ಟೀಕಿಸಿದ ವ್ಯಕ್ತಿ. ಲಿಂಗಾಯತ ಪ್ರೇಮ ಒಳಗೊಳಗೆ ಇದ್ದರೂ ಬ್ರಾಹ್ಮಣ ಲೇಖಕರ ಬೌದ್ಧಿಕ ಸಾಮರ್ಥ್ಯಕ್ಕೆ ತಲೆಬಾಗಿದವರು. ಹತ್ತು ಶೂದ್ರರು ನನ್ನ ಪತ್ರಿಕೆ ಓದುವದಕ್ಕಿಂತ ಒಬ್ಬ ಬ್ರಾಹ್ಮಣ ನನ್ನ ಪತ್ರಿಕೆ ಓದಬೇಕೆಂಬ ಇರಾದೆ ಅವರಿಗಿತ್ತು (ಪು: 28-39).

ಸಮಾಜವಾದಿ – ಮಜಾವಾದಿ

ಒಂದು ಪತ್ರಿಕೆ ಪ್ರಾರಂಭಿಸಬೇಕೆಂಬ ಹುಕಿ ಲಂಕೇಶರಲ್ಲಿ ಮೊದಲಿನಿಂದಲೂ ಇತ್ತು. 1972 ರಲ್ಲಿ ‘ಕನ್ನಡವಾಣಿ’ ಹೆಸರಿನಲ್ಲಿ ಹಣಕೂಡಿಸಲು ಮೈಸೂರು, ಮಂಡ್ಯ, ಶಿವಮೊಗ್ಗ ಮುಂತಾದ ಕಡೆ ಹೋದರು. ಅಲ್ಲಿ ಕುಡಿತ, ಹರಟೆ ಆದವೇ ಹೊರತು ಹಣ ಸಂಗ್ರಹವಾಗಲಿಲ್ಲ. ಕೊನೆಗೆ ಸಾಕ್ಷ್ಯಚಿತ್ರ ಮಾಡಿ ಉಳಿಸಿದ 35 ಸಾವಿರ ಹಣದಿಂದ ‘ಜಾಣ-ಜಾಣೆಯರ ಲಂಕೇಶ ಪತ್ರಿಕೆ’ 1980 ಜುಲೈದಲ್ಲಿ ಪ್ರಾರಂಭವಾಯಿತು.

ಮೊದಲ ಸಂಚಿಕೆ ಬಿಡುಗಡೆಯಾದದ್ದು ಕಸ್ತೂರಬಾ ರಸ್ತೆಯ ರಾಜ್ ಹೋಟೆಲ್‌ನಲ್ಲಿ. ಕೇವಲ ಬೆರಳೆಣಿಕೆಯ ಜನ ಮಾತ್ರ ಇದ್ದರು. ರೇಶ್ಮೆ, ಅಗ್ರಹಾರ, ದ್ವಾರಕಾನಾಥ, ಶೂದ್ರ ಮುಂತಾದವರು ನಂತರ ಹುತ್ತ ಸೇರಿದ ಹಾವುಗಳು (ಪು-13). ಲಂಕೇಶ್ ಪತ್ರಿಕೆಯ ವರದಿಗಳಿಗೆ ಪುರಾವೆಗಳು ಬೇಕಾಗಿರಲಿಲ್ಲ. ವರದಿಗಾರನ ಆತ್ಮಸಾಕ್ಷಿ ಸಾಕಾಗಿತ್ತು. ವರದಿಗಾರರು ಕ್ರಮೇಣ ಮನಸೋ ಇಚ್ಛೆ ಬರೆಯಲು ಪ್ರಾರಂಭಿಸಿದರು. ‘ಬಂ ಗುಂ’, ‘ಬೆಂಡೆಕಾಯಿ ವರ್ಸ್ಸ್ ಚಿಕನ್ ಪಲಾವ’ ಮುಂತಾದ ಆಕರ್ಷಕ ತಲೆಬರಹ ಸಾಮಾನ್ಯ ಓದುಗರನ್ನು ಆಕರ್ಷಿಸಿತು. ಪತ್ರಿಕೆಯ ಪ್ರಸಾರ ಏರುಗತಿಯಲ್ಲಿ ಸಾಗಿತು. ಆಗಿನ ಸಂದರ್ಭವೇ ಹಾಗಿತ್ತು. ಜೆ.ಪಿ.ಚಳವಳಿ ಸಮಗ್ರ ಕ್ರಾಂತಿ, ತುರ್ತು ಪರಿಸ್ಥಿತಿ, ಜನತಾ ಸರ್ಕಾರದ ಪತನ, ಇಂದಿರಾಗಾAಧಿ ಪುನರುತ್ಥಾನ ಸಮತಾವಾದಿಗಳ ಮುಖಭಂಗ ಪತ್ರಿಕೆಯ ಪ್ರಸಾರಕ್ಕೆ ಪೂರಕವಾಗಿದ್ದವು. ಪತ್ರಿಕೆ ಶೂದ್ರ ಶಕ್ತಿಯಾಗಬೇಕು, ರೈತರ ಮುಖವಾಣಿಯಾಗಬೇಕು, ಬ್ರಾಹ್ಮಣ ವಿರೋಧಿಯಾಗಬೇಕು ಮುಂತಾದ ಒಳಚಿಂತನೆಗಳು ಇದ್ದವು (ಪು: 14).

ಗುಂಡರಾಯರ ಬೆತ್ತಲೆ ಕುಣಿತ

ಖಾಸಗಿ ಬಸ್ ಏಜೆಂಟ್ ಆದ ಗುಂಡುರಾಯರು ಮುಖ್ಯಮಂತ್ರಿಯಾಗಿ ಶ್ವಾನ ಪಲ್ಲಕ್ಕಿ ಏರಿದಂತಾಗಿತ್ತು. ಚಲನಚಿತ್ರ ನಟಿಯರ ಸಖ್ಯ, ಇಬ್ರಾಹಿಂ, ಎಫ್.ಎಂ.ಖಾನರಂಥ ಹಿಂಬಾಲಕರು, ಹೆಲಿಕಾಪ್ಟರ್ ಹಾರಾಟ, ಪತ್ರಕರ್ತರ ವಿರೋಧ ಪತ್ರಿಕೆಗೆ ಆಹಾರವಾದವು. ಅವರು ಮಾಡಿದ ಕೆಲವು ಒಳ್ಳೆಯ ಕೆಲಸಗಳು ಬೆಳಕಿಗೆ ಬರಲೇ ಇಲ್ಲ. ಇದರಿಂದ ಪತ್ರಿಕೆಯ ಪ್ರಸಾರ ಹೆಚ್ಚಿತು (ಪು: 14).

ಲಂಕೇಶ್‌ಗೆ ಏಟು ವಾಟಾಳ್ ಓಟ

ರಾಜ್ಯೋತ್ಸವ ಆಚರಣೆ ಕೆಲವು ಕನ್ನಡ ಸಂಘಟನೆಗಳಿಗೆ ಹಣ ಮಾಡುವ ದಂಧೆಯಾಗಿದೆ. ಬೃಂದಾವನ ಪ್ರೆಸ್‌ನಲ್ಲಿ ಪತ್ರಿಕೆ ಮುದ್ರಿಸಲು ಸಾಧ್ಯವಾಗದಿದ್ದಾಗ ಸಂಜೆವಾಣಿ ಮಣಿಯನ್ನು ಆಶ್ರಯಿಸಬೇಕಾಯಿತು. ಅಲಸೂರಿನ ತಮಿಳು ಸಂಘದಲ್ಲಿ ರಾಜ್ಯೋತ್ಸವ ಆಚರಣೆಗೆ ಲಂಕೇಶ ಆಮಂತ್ರಿತರಾಗಿದ್ದರು. ಲಂಕೇಶ್ ಮೇಲೆ ವಾಟಾಳ್ ಟೀಮು ಹಲ್ಲೆ ಮಾಡಿತು. ವಾಟಾಳ್‌ರು ಪತ್ರಿಕೆಯಲ್ಲಿ ಟೀಕೆಗೆ ಒಳಗಾಗಿದ್ದರು. ಇದರಿಂದ ವಾಟಾಳ್ ಚಾಮರಾಜನಗರಕ್ಕೆ ಓಡಬೇಕಾಯಿತು.

ಪತ್ರಿಕೆಯ ಪ್ರಸಾರ ಏರುಗತಿಯಲ್ಲಿ ಸಾಗಿತು. ಸಂಜೆಯ ಕೂಟಕ್ಕೆ ಹತ್ತೆಂಟು ಜನ ಸೇರಿದರು. ಪ್ರತಿವಾರ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕೆಯ ಸಿಬ್ಬಂದಿಗೆ ಪಾರ್ಟಿ ಇರುತ್ತಿತ್ತು. ವಿಲ್ಸ್ ಬದಲು ಆಮದು ಆದ ಸಿಗರೇಟ್ ಬಂದಿತು. ಓಲ್ಡ್ ಮಂಕ್ ಬದಲು ಫಾರೆನ್ ವಿಸ್ಕಿ ಬಂದಿತು. ಅಂಬ್ಯಾಸಿಡರ್ ಕಾರು ಬಂದಿತು. ನವ್ಯರು, ನಾಟಕಕಾರರು ಪಾಂಚಾಲಿ ಬಳಗ ಪತ್ರಿಕೆಯೊಳಗೆ ನುಸುಳಿತು. ಲಂಕೇಶ ಬೆಳಂದಿಗಳಿಗೆ ಕೊಡೆ ಹಿಡಿದರು (ಪು: 19-27).

‘ಕಾಡಿ’ನ ಕೃಷ್ಣ, ಜ್ವಾಲಾಮುಖಿ ಜಾಣಗೆರೆ

ಒಕ್ಕಲಿಗ ಕೃಷ್ಣ ಸ್ವಾಭಿಮಾನಿ. ಕುವೆಂಪು ಭಕ್ತರು ಕರೆದರೂ ಹೋಗದ ವ್ಯಕ್ತಿ. ಬ್ರಾಹ್ಮಣ ಹುಡುಗಿಯರ ತೊಡೆ ಏರಿದ್ದೇ ಆತನ ಬಂಡವಾಳ. ಆದರೆ ನಿಷ್ಕಪಟ ಮನಸ್ಸು. ತಾನೊಂದು ಕಾದಂಬರಿ ಬರೆಯುತ್ತಿದ್ದೇನೆ. ಕಾದಂಬರಿ ಬಂದ ಮೇಲೆ ಕಾರಂತ, ರಾವಬಹ್ದೂರ ಎಕ್ಕುಟ್ಟಿ ಹೋಗುತ್ತಾರೆ ಎಂದು ಘೋಷಿಸಿಕೊಂಡಿದ್ದ. ಲಂಕೇಶ್ ಮತ್ತು ನಂಜುಂಡಸ್ವಾಮಿ, ಜಾತಿಬಾಂಧವರೆಂದು ಪತ್ರಿಕೆಯಿಂದ ದೂರ ಸರಿದ. ಜಾಣಗೆರೆ ವೆಂಕಟರಾಮಯ್ಯರಲ್ಲಿ ಶಿಸ್ತು ಲೆಕ್ಕಾಚಾರ ಪ್ರಾಮಾಣಿಕತೆ, ಕಾಯಕನಿಷ್ಠೆಯಿತ್ತು. ಆದರೆ ಸಂಜೆವಾಣಿ ಮಣಿ ಹಾಗೂ ವೆಂಕಟರಾಮಯ್ಯಗೆ ಎಣ್ಣೆ ಶೀಗೇಕಾಯಿ. ಅವರು ಕಾರ್ಮಿಕ ವಿರೋಧಿಯಾಗಿದ್ದರು. ಲಂಕೇಶ್ ಪತ್ರಿಕೆಗೆ ಗುಂಡುರಾಯ ಹಾಗೂ ಕೆ.ಕೆ.ಮೂರ್ತಿಯಿಂದ ಹಣ ಹರಿದು ಬರುತ್ತದೆ ಎಂಬ ಗುಸುಗುಸು ಪತ್ರಿಕೆ ವಲಯದಲ್ಲಿ ಪ್ರಾರಂಭವಾಯಿತು. ಲಂಕೇಶ್ “ಮುಳ್ಳಾದ ಹೂವುಗಳು” ಎಂದು ಬರೆದು ಕೈ ತೊಳೆದುಕೊಂಡರು (ಪು: 55-75).

‘ಖಂಡವಿದೆಕೋ…’ ಎಂಬ ನೀಲಿ ಚಿತ್ರ

ಪತ್ರಿಕೆ ಪ್ರಾರಂಭಿಸಲು ಹಣ ಹೇಗೆ ಹರಿದುಬಂದಿತ್ತೆAಬುದನ್ನು ಲಂಕೇಶ್ ಗುಟ್ಟು ಬಿಟ್ಟುಕೊಡಲಿಲ್ಲ. ಕಿಡಿ ಶೇಷಪ್ಪನವರಂತೆ ಲಂಕೇಶ್ ಶ್ರಮಪಡಲಿಲ್ಲ. ಜೊತೆಗೆ ಚಲನಚಿತ್ರದ ಹುಚ್ಚು ಹಿಡಿಯಿತು. ಪಲ್ಲವಿ, ಅನುರೂಪ, ಖಂಡವಿದೆಕೋ… ಮುಂತಾದ ಚಲನಚಿತ್ರ ಮಾಡಿದರು. ಖಂಡವಿದೆಕೋ ಮಾಂಸವಿದಕೋ ಸಿನೆಮಾದಲ್ಲಿ ರೂಪಾ ಚಕ್ರವರ್ತಿಯನ್ನು ಸಿಕ್ಕಾಪಟ್ಟೆ ಎಳೆದಾಡಿಸಿದರು. ಸಿನೆಮಾದಲ್ಲಿ ಸೇರದ ಭಾಗಗಳನ್ನು ಬ್ಲೂ ಫಿಲಂ ಮಾಡಿದರೆಂಬ ಪುಕಾರ ಹುಟ್ಟಿತು. ಜೊತೆಗೆ ಲಂಪಟ ಲಂಕೇಶ್ ಎಂಬ ಬಿರುದು ಸೇರಿತು.

‘ಹುಳಿ ಮಾವಿನ ಮರ’ ಅವರ ಆತ್ಮಕಥೆ. ಇದು ಆತ್ಮವಿರಲಾರದ ಕಥೆ ಎಂಬ ಪುಕಾರು ಇದೆ. ಕೆಲವರಿಗೆ ಸಿಗರೇಟ್‌ನ ಹೊಗೆಯಲ್ಲಿ ಲಂಕೇಶ್ ಸಂತನಾಗಿ ಕಂಡಿದ್ದಾನೆ. ಕೆಲವರಿಗೆ ತತ್ವಜ್ಞಾನಿಯಾಗಿ ಕಂಡಿದ್ದಾನೆ. ಲಂಕೇಶ್ ಸ್ವಾಮಿಗಳು, ರಾಜಕಾರಣಿಗಳು, ಅಧಿಕಾರಿಗಳ ಮುಂದೆ ಕೈಹೊಸೆಯುತ್ತ ನಿಲ್ಲುವ ಸ್ವಭಾವ ಹೊಂದಿರಲಿಲ್ಲ. ಆದರೆ ಅಧ್ಯಾಪಕ ವೃತ್ತಿಗಾಗಿ ಚಲನಚಿತ್ರ, ಪ್ರಶಸ್ತಿಗೆ, ಬಿ.ಡಿ.ಎ. ಸೈಟ್‌ಗೆ ತಮ್ಮ ಪುಸ್ತಕ ಪಠ್ಯವಾಗಿಸಲು ತಮ್ಮ ಮೇಲಿನ ವಿಶ್ವವಿದ್ಯಾಲಯ ಹಗರಣ ಮುಚ್ಚಿಹಾಕಲು ವಾಮಮಾರ್ಗ ತುಳಿದಿದ್ದಾರೆ (ಪು: 74-89).

ರಾಮಕೃಷ್ಣ ಹೆಗಡೆ ಎಂಬ ವೈರಿ

1983 ಕರ್ನಾಟಕದ ರಾಜಕೀಯದ ಇತಿಹಾಸದಲ್ಲಿ ದಾಖಲಿಸಬೇಕಾದ ವರ್ಷ. ಕಾಂಗ್ರೆಸ್ ಪತನ, ಜನತಾ ಸರ್ಕಾರದ ಹುಟ್ಟು. ನಜೀರಸಾಬ ಬದಲು ಎಲ್ಲಿಂದಲೋ ಬಂದ ಹೆಗಡೆ ಮುಖ್ಯಮಂತ್ರಿಯಾಗಿ ವಕ್ಕರಿಸಿದರು. ಕ್ರಾಂತಿರಂಗದ ಬಂಗಾರಪ್ಪ ಖಳನಾಯಕರಾದರು. ಪಕ್ಷದಲ್ಲಿ ಒಳಜಗಳ ತಾರಕಕ್ಕೇರಿತು. ಜಗಳ ಬಗೆಹರಿಸಲು ತಮ್ಮನ್ನು ಕರೆಯುತ್ತಾರೆ ಎಂಬ ಭ್ರಮೆಯಲ್ಲಿ ಲಂಕೇಶ್ ತುದಿಗಾಲ ಮೇಲೆ ನಿಂತಿದ್ದರು. ಖಾದ್ರಿ ಶಾಮಣ್ಣ ವಿಧಾನಸೌಧ ಮೆಟ್ಟಿಲೇರುವ ಅವಕಾಶ ಪಡೆದರು. ಆದರೆ ರಾಜಕೀಯ ಪ್ರವೇಶಿಸಿದ ಬಾಬುರಾವ, ಪಟೇಲ್, ಪಾಪು, ಕಟ್ಟಿಮನಿ, ಆರ್.ಆರ್.ದಿವಾಕರ ಮುಂತಾದವರು ತಮ್ಮ ಬೌದ್ಧಿಕ ಸಾಮರ್ಥ್ಯ ಕಳೆದುಕೊಂಡ ಉದಾಹರಣೆಗಳಿವೆ. ಜನತಾಪಕ್ಷದ ಟಿಕೆಟ್ ಕೇಳಿ ಮುಖಭಂಗಗೊಂಡ ರವೀಂದ್ರಗೆ ರೇಶ್ಮೆ ಹೆಗಡೆ ವಿರುದ್ಧ ಬರೆಯಲು ಲಂಕೇಶ್ ಗ್ರೀನ್ ಸಿಗ್ನಲ್ ಕೊಟ್ಟರು. ಮೋಹನ್‌ರಾಂ ಪ್ರಕಾರ ರೇಶ್ಮೆ ಲಂಕೇಶ್ ಪತ್ರಿಕೆ ನುಂಗಿದ ಹೆಬ್ಬಾವು. ಜೊತೆಗೆ ಇದೇ ಸಂದರ್ಭದಲ್ಲಿ ಲಂಕೇಶ್ ಸಂಪಾದಿಸಿದ ‘ಅಕ್ಷರ ಹೊಸಕಾವ್ಯ” ರಂಪಾಟದಲ್ಲಿ ಮುಖಭಂಗ ಅನುಭವಿಸಿದರು (ಪುಟ 93-118).

ಲಂಕೇಶ್ ಅತ್ತದ್ದು ಎರಡು ಬಾರಿ

ಬೆಂಗಳೂರು ವಿಶ್ವವಿದ್ಯಾಲಯದ ಹಣಕಾಸಿನ ಹಗರಣದಲ್ಲಿ ಲಂಕೇಶ್ ಸಿಕ್ಕಿಬಿದ್ದಿದ್ದರು. ಈ ವಿಷಯ ಅವರ ನೌಕರರಿಗೆ ಕುತ್ತು ತಂದಿತ್ತು. “ನನ್ನೊಳಗಿನ ಬರಹಗಾರನನ್ನು ಕೊಲ್ಲುವ ಪಿತೂರಿ ಇಲ್ಲಿದೆ” ಎಂದು ಲಂಕೇಶ್ ಘೋಷಿಸಿದ್ದರು. ಜೊತೆಗೆ ಕುಮಾರಿ ಎಂಬುವರ ಪ್ರೇಮದ ವಿಷಯದಲ್ಲಿ ಅತ್ಯಂತ ಹೀನ ಮಾರ್ಗ ಅನುಸರಿಸಿದ್ದರು. ಸಮಾಜವಾದಿಗಳ ಅಂತರಂಗ-ಬಹಿರಂಗ ಭಿನ್ನವಾಗಿರುತ್ತದೆಂಬುದಕ್ಕೆ ಮಹಿಳೆಯರನ್ನು ಶೋಷಿಸುವ ಇವರ ಗುಣ ಇಲ್ಲಿ ವ್ಯಕ್ತವಾಗಿದೆ (ಪು: 201-206).

ಕೈ ಹಿಡಿದ ಕೃಷಿ

ರೈತರ ಆತ್ಮಹತ್ಯೆ ದಿಗಿಲು ಹುಟ್ಟಿಸುತ್ತದೆ. ಆದರೆ ಲಂಕೇಶರು ಭೂಮಿ ಖರೀದಿಸಿ ಹೈನುಗಾರಿಕೆ, ಮೊಲ ಸಾಕಾಣಿಕೆ, ಹೂ, ಹಣ್ಣು, ತರಕಾರಿ ಹೆಸರಿಗಷ್ಟೇ ಬೆಳೆದರು. ಕಪ್ಪು ಹಣವನ್ನು ದಕ್ಕಿಸಿಕೊಳ್ಳುವ ಹುನ್ನಾರ ಇಲ್ಲಿತ್ತು. ನೈಸ್ ರಸ್ತೆಯಿಂದ ಇವರ ಭೂಮಿಗೆ ಬಂಗಾರದ ಬೆಲೆ ಬಂದಿತು. ಹಾಮಾನಾ, ಜೀವರಾಜ ಆಳ್ವ, ಬಂಗಾರಪ್ಪ, ಗುಂಡುರಾವ್, ಆಲನಹಳ್ಳಿ ಕೃಷ್ಣ, ಹರೀಶ್‌ಗೌಡ, ಚಿಮೂ ಮುಂತಾದವರು ಲಂಕೇಶರ ಅವಕೃಪೆಗೆ ಪಾತ್ರರಾದವರು. ಚಿಮೂ ಬರೆದ ಪತ್ರ ಪತ್ರಿಕೆ ಪ್ರಕಟಿಸಲಿಲ್ಲ. ಖಾಸಗಿಯಾಗಿ ಪತ್ರ ಪ್ರಕಟಿಸಿ ಲಂಕೇಶಗೆ ‘ಸಾಂಸ್ಕೃತಿಕ ಗುಂಡಾ’ ಎಂಬ ಬಿರುದು ಕೊಟ್ಟರು. (ಪು: 207-215)

ನಿನ್ನ ಪತ್ರಿಕೆ ನನ್ನ …. ಸಮ

ದೂರದ ದೆಹಲಿಯಿಂದ ಬಂದ ಮೋಹನರಾಂ ಲಂಕೇಶರನ್ನು ಕಾಣಲು ಉತ್ಸಾಹದಿಂದ ಹೋದರು. ಮೈಸೂರುಮಠ ಹಾಗೂ ಲಂಕೇಶ್ ಇಬ್ಬರೇ ಇದ್ದರು. ಎಲ್ಲರಿಗೂ ಕುಡಿತದ ಅಮಲು ಹೆಚ್ಚಿತು. 1980ರಲ್ಲಿ ರಾಜಕುಮಾರ್ ಸಂದರ್ಶನ ಮಾಡಿದ ಮೋಹನರಾಂ ವರದಿಯ ಬಗ್ಗೆ ನೀನು ಬರೆದಿದ್ದೆಲ್ಲ ಸುಳ್ಳು ಎಂದು 1983ರಲ್ಲಿ ಆಪಾದಿಸಿದರು. ಆಗ ಸಿಟ್ಟಿಗೆದ್ದ ಮೋಹನರಾಂ ನೀನು ನಿನ್ನ ಪತ್ರಿಕೆ ನನ್ನ… ಸರಿ ಎಂದು ಚೀರಿ ನಡೆಯುತ್ತ ಮಲ್ಲೇಶ್ವರಂಗೆ ಹೋದರಂತೆ (ಪು: 220-225).

 

‘ದ ಕ್ಯಾಪಿಟಲ್’

ಲಂಕೇಶ್ ಪ್ರೈವೇಟ್ ಲಿಮಿಟೆಡ್

ಎನ್.ಕೆ.ಮೋಹನ್ ರಾಂ

ಪುಟ: 255, ಬೆಲೆ: ರೂ.220

ಐಬಿಎಚ್ ಪ್ರಕಾಶನ,

72, 2ನೇ ಮುಖ್ಯರಸ್ತೆ, ರಾಮರಾವ್ ರ ಲೇಔಟ್,

ಬನಶಂಕರಿ 3ನೇ ಸ್ಟೇಜ್, ಬೆಂಗಳೂರು- 560085

 

Leave a Reply

Your email address will not be published.