ಲಗೋರಿ ಎಂಬ ಲವ್ಲಿ ಗೇಮ್

ಅಪರೂಪದ ಹಾಗೂ ಅಷ್ಟೇ ಉಲ್ಲಾಸಕರ ಆಟ ‘ಲಗೋರಿ’. ಈ ಹೆಸರು ಪುಟಾಣಿಗಳಲ್ಲಷ್ಟೇ ಅಲ್ಲ, ಯುವಕರು ಹಾಗೂ ಹಿರಿಯರಲ್ಲೂ ಉತ್ಸಾಹದ ಚಿಲುಮೆ ಮೂಡಿಸುವಂತಹದ್ದು.

ಜನಪದ ಅಥವಾ ಸಾಂಪ್ರದಾಯಿಕ ಕ್ರೀಡೆಗಳು ಮನರಂಜನೆಯೊಂದಿಗೆ, ದೈಹಿಕ ಕಸರತ್ತು ಮತ್ತು ಒಗ್ಗಟ್ಟನ್ನು ಕಾಪಾಡುವ ಮೂಲ ಉದ್ದೇಶ ಹೊಂದಿವೆ ಎನ್ನುವುದು ಅನೇಕ ಸಂದರ್ಭಗಳಲ್ಲಿ ಇತಿಹಾಸಕಾರರಿಂದಲೇ ಉಲ್ಲೇಖಿಸಲ್ಪಟ್ಟಿವೆ. ಈ ಆಟಗಳಿಗೆ ಸರಳವಾಗಿ ಎಲ್ಲೆಡೆ ಲಭ್ಯವಾಗುವ ಕ್ರೀಡಾ ಸಾಮಗ್ರಿಗಳನ್ನು ಬಳಸುವುದು ಮತ್ತೊಂದು ಧನಾತ್ಮಕ ಅಂಶ. ಇಂತಹ ಅಪರೂಪದ ಹಾಗೂ ಅಷ್ಟೇ ಉಲ್ಲಾಸಕರ ಆಟ ‘ಲಗೋರಿ’. ಈ ಹೆಸರು ಪುಟಾಣಿಗಳಲ್ಲಷ್ಟೇ ಅಲ್ಲ, ಯುವಕರು ಹಾಗೂ ಹಿರಿಯರಲ್ಲೂ ಉತ್ಸಾಹದ ಚಿಲುಮೆ ಮೂಡಿಸುವಂತಹದ್ದು. ಹಾಗಾಗಿ ಈ ವಾರ ಲಗೋರಿ ಆಟದ ಸುತ್ತಮುತ್ತವೇ ನಮ್ಮ ಪಯಣ.

ಓಮನ್ ಮೂಲದ ಆಟ

ಲಗೋರಿ ಪದ ಓಮನ್ ಮೂಲದ ಪದ. (ಲ ಎಂದರೆ ಕಟ್ಟು, ಗೋರಿ ಎಂದರೆ ಗೋಪುರ ಅಥವಾ ಆ ಮಾದರಿಯ ನಿರ್ಮಾಣ). ವಿಶೇಷವೆಂದರೆ ನಮ್ಮಲ್ಲಿಯೂ ಲಗೋರಿ ಎಂದರೆ ಏಳು ಅಥವಾ ಒಂಬತ್ತು ಚಪ್ಪಟೆಯಾಕಾರದ ಕಲ್ಲು ಅಥವಾ ಮರದ ತುಂಡುಗಳನ್ನು ಒಂದರಮೇಲೊಂದರಂತೆ ಜೋಡಿಸಿಯೇ ಅಂತಿಮವಾಗಿ ಲಗೋರಿ ಎನ್ನುತ್ತೇವೆ. ಮೂಲ ಪದದಿಂದಲೇ ಈ ಆಟ ಪ್ರಸಿದ್ಧಿ ಪಡೆದಿದ್ದು ಇದಕ್ಕೆ ಶತಮಾನದ ಐತಿಹ್ಯವಿದೆ. ಓಮನ್‍ನ ದೊರೆ ರಿವಾನ್‍ಗೋರ್ಪ್ ಎಂಬಾತ ತನ್ನ ಆಸ್ಥಾನದಲ್ಲಿ ಕುಟುಂಬದ ಮಕ್ಕಳಿಗೆ ಮೊದಲ ಬಾರಿಗೆ ಪರಿಚಯಿಸಿದ ಆಟವೇ ‘ಲಗೋರಿ’ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಹುಟ್ಟು

ಭಾರತದಲ್ಲಿ ಅದರಲ್ಲೂ ಬಹುತೇಕ ಜನಪದ ಕ್ರೀಡೆಗಳ ತವರು ದಕ್ಷಿಣ ಭಾರತವೇ ಎನ್ನುವುದು ವಿಶೇಷ. ನಮ್ಮಲ್ಲಿ ಮೊದಲಿಗೆ ತಮಿಳುನಾಡಿನ ತಿರುನಲ್ವೇಲಿ ಪ್ರದೇಶದಲ್ಲಿ ಈ ಲಗೋರಿ ಆಟ ಪ್ರಾರಂಭವಾಗಿದೆ ಎನ್ನುವುದನ್ನು ಖ್ಯಾತ ತಮಿಳು ಕವಿ ತಿರುವಳ್ಳುರ್ ಅವರ ಕಾವ್ಯದಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ಆಧುನಿಕ ಇತಿಹಾಸ. ನಮ್ಮಲ್ಲಿಯೂ ಗ್ರಾಮೀಣ ಭಾಗದಲ್ಲಿ ಈ ಲಗೋರಿ ಆಟಕ್ಕೆ ಹೆಚ್ಚಿನ ಪ್ರಾಧಾನ್ಯ ಇದೆ. ಸಂಜೆ ವೇಳೆಯಲ್ಲಿ ಊರ ಮುಂದಿನ ಮೈದಾನದಲ್ಲಿ ಹತ್ತಾರು ಮಂದಿ ಸೇರಿ
ಆಡುತ್ತಿದ್ದ ಈ ಲಗೋರಿ ಆಟದಲ್ಲಿಯೂ ವಿವಿಧ ರೀತಿಯಿವೆ: ಚೆಂಡಾಟ, ಲಗ್ಗೆ, ಮುಂಗಾಡಿ (ಅಡಗಿ ಕುಳಿತು ಎದುರಾಳಿ ವಿರುದ್ಧ ಸೆಣಸುವುದು).

ಆಡುವುದು ಹೇಗೆ?

ಒಬ್ಬರಿಗಿಂತ ಹೆಚ್ಚು, ಎಷ್ಟು ಜನ ಬೇಕಿದ್ದರೂ ಈ ಲಗೋರಿ ಆಡಬಹುದು. ಆದರೆ ಒಂದೊಂದು ತಂಡದಲ್ಲಿ ಹೆಚ್ಚೆಂದರೆ ಏಳೆಂಟು ಮಂದಿ ಇರುವುದು ವಾಡಿಕೆ. ಈ ಆಟಕ್ಕೆ ಬಹು ದೊಡ್ಡ ಮೈದಾನದ ಅಗತ್ಯವಿಲ್ಲ. ಆದರೆ ಎದುರಾಳಿಯಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಬೇಕಷ್ಟೆ. ಏಳು ಅಥವಾ ಒಂಬತ್ತು ಚಪ್ಪಟೆ ಆಕಾರದ ಕಲ್ಲು ಅಥವಾ ಮರದ ತುಂಟು ಸೇರಿದಂತೆ ಇನ್ನಾವುದೇ ವಸ್ತುಗಳನ್ನು ಬಳಸಬಹುದು. ಇವುಗಳನ್ನು ಒಂದರಮೇಲೊಂದರಂತೆ ಜೋಡಿಸಲಾಗುವುದು. ಬಳಿಕ ಆಟಗಾರರನ್ನು ಎರಡು ತಂಡಗಳಾಗಿ ವಿಭಜಿಸಿ ‘ಟಾಸ್’ ಹಾಕಲಾಗುತ್ತದೆ.

ಗೆದ್ದ ತಂಡ ಮೊದಲು ಚೆಂಡನ್ನು (ಬಟ್ಟೆಯಿಂದ ಸುತ್ತಿ ತಯಾರಿಸಿದ ಚೆಂಡು) ಕಟ್ಟಿದ ಕಲ್ಲುಗಳಿಗೆ ನಿಗದಿಪಡಿಸಿದ ಇಂತಿಷ್ಟು ಅಂತರದಿಂದ ಹೊಡೆಯುವುದು. ಅದು ಕಲ್ಲಿಗೆ ತಾಗಿ ಅದು ಬಿದ್ದ ಕೂಡಲೇ ಎದುರಾಳಿ ತಂಡ ಅವುಗಳನ್ನು ಮೊದಲಿನಂತೆ ಜೋಡಿಸಲು ಪ್ರಯತ್ನಿಸುತ್ತದೆ. ಆದರೆ ಮತ್ತೊಂದು ತಂಡ ಅದಕ್ಕೆ ಅವಕಾಶ ನೀಡದೆ ಚೆಂಡಿನಿಂದಲೇ ಅವರ ಮೇಲೆ ದಾಳಿ ನಡೆಸುತ್ತದೆ. ಎದುರಾಳಿಗೆ ಚೆಂಡು ತಾಗಿದರೆ ಅವನು ಆಟದಿಂದ ಹೊರಹೋಗಬೇಕು. ಹೀಗೆ ಆ ತಂಡದ ಒಬ್ಬೊಬ್ಬರನ್ನೇ ಔಟ್ ಮಾಡಲಾಗುತ್ತದೆ. ಈ ನಡುವೆಯೂ ಅವರು ಬಿದ್ದ ಕಲ್ಲುಗಳನ್ನು ಮೊದಲಿನಂತೆ ಜೋಡಿಸುವಲ್ಲಿ ಯಶಸ್ವಿಯಾಗಿ ‘ಲಗೋರಿ’ ಎಂದು ಘೋಷಿಸಿದರೆ ಮತ್ತೊಂದು ತಂಡ ಸೋತಂತೆ. ಇದರಲ್ಲಿ ತಪ್ಪಿಸಿಕೊಳ್ಳುವ ಚಾಣಾಕ್ಷತೆ ಮತ್ತು ಕಣ್ತಪ್ಪಿಸಿ ಗುರಿ ಸಾಧಿಸುವ ಇಬ್ಬಗೆಯ ಲಾಭ ಆಟಗಾರರಿಗೆ ಸಿಗುತ್ತದೆ. ಮನರಂಜನೆ ಜೊತೆ ದೈಹಿಕವಾಗಿಯೂ ಲಗೋರಿ ಉತ್ತಮ ಆಟ.

ಪಾರಂಪರಿಕ ಕೋಲಾಟ

ಕೋಲಾಟ ನೋಡಿದಷ್ಟು ಆಥವಾ ಅಂದುಕೊಂಡಷ್ಟು ಸುಲಭವಾಗಿ ಒಲಿಯುವಂತಹದ್ದಲ್ಲ. ಕಠಿಣ ಅಭ್ಯಾಸದಿಂದ ಮಾತ್ರ ಒಬ್ಬ ಪರಿಪೂರ್ಣ ಕೋಲಾಟಗಾರನಾಗಬಲ್ಲ.

ಕೋಲು ಕೋಲಣ್ಣ ಕೋಲು ಕೋಲೆ..

ಬಣ್ಣದ.. ಚಿನ್ನದಾ ಕೋಲು.. ಕೋಲೆ…

ದೇವಿ ಒಲಿಸುವಾ ಕೋಲು..

ಸಂಸ್ಕೃತಿ ಉಳಿಸುವಾ ಕೋಲು…

…ಹೀಗೆ ಸಾಗುವ ಕೋಲಾಟ ಜನಮನದ ಜಾನಪದ ಜೀವಂತಿಕೆ ನಮ್ಮ ಜನಪದ ಸಂಸ್ಕೃತಿಯ ಜೀವಂತಿಕೆಯ ಸಂಕೇತವೇ ಕೋಲಾಟ. ಇದು ಅಪ್ಪಟ ಗ್ರಾಮೀಣ ಆಟ. ಇದಕ್ಕೆ ಕ್ರೀಡೆ ಎಂಬ ವ್ಯಾಖ್ಯಾನ ಇದೆಯಾದರೂ ಪಾರಂಪಾರಿಕ ಹಿನ್ನೆಲೆ ಇದಕ್ಕೆ ಹೆಚ್ಚು ಶೋಭಾಯಮಾನ. ಜನಪದ ಕಲೆ ಮತ್ತು ಸಂಸ್ಕೃತಿಯ ಸಮ್ಮಿಳಿತವೇ ಈ ಕೋಲಾಟ. ಅಷ್ಟಕ್ಕೂ ನಮಗೆ ಮತ್ತೊಂದು ಹೆಮ್ಮೆಯ ಸಂಗತಿ ಎಂದರೆ ಕೋಲಾಟದ ಹುಟ್ಟು ಭಾರತದಲ್ಲೇ ಆಗಿದ್ದು. ಹಾಗಾಗಿ ಇದು ದೇಶೀಯ ಸಂಶೋಧಿತ ಆಟವೂ ಹೌದು. ನಮ್ಮ ಪುರಾಣಗಳಲ್ಲೂ ಈ ಕೋಲಾಟದ ಉಲ್ಲೇಖ ಇರುವುದು ಸ್ಪಷ್ಟ. ಜೊತೆಗೆ ಹಿಂದಿನ ಅರಸರ ಆಳ್ವಿಕೆಯ ಕಾಲದಲ್ಲಿಯೂ ಇದನ್ನು ಪೋಷಿಸಿಕೊಂಡು ಬರಲಾಗುತ್ತಿತ್ತು. ಹಾಗಾಗಿ ಈವತ್ತಿಗೂ ಕೋಲಾಟ ಜೀವಂತಿಕೆ ಉಳಿಸಿಕೊಂಡಿದೆ.

ಹೊರಾಂಗಣಕ್ಕೂ ಸೈ

ಅಷ್ಟಕ್ಕೂ ಇದು ಒಂದು ರೀತಿಯ ಒಳಾಂಗಣ ಕ್ರೀಡೆ ಎಂದರೂ ಅತಿಶಯೋಕ್ತಿಯಲ್ಲ. ಆದರೆ ಕಾಲಬದಲಾದಂತೆ ನಾಲ್ಕು ಗೋಡೆಗಳನ್ನು ಭೇದಿಸಿಕೊಂಡು ಇದೀಗ ಹೊರಾಂಗಣ ಆಟವಾಗಿಯೂ ಕೋಲಾಟ ಮಾರ್ಪಟ್ಟಿದೆ. ಪ್ರಸ್ತುತ ಹಬ್ಬಹರಿದಿನಗಳಲ್ಲಿ ಹಳ್ಳಿಗಳ ಆಸಕ್ತ ಯುವಕರ/ಯುವತಿಯರ ಗುಂಪು ಒಗ್ಗೂಡಿ ಕೋಲಾಟ ಕಲಿಯುವುದು ಮತ್ತು ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ಗ್ರಾಮಗಳ ಹಿರಿಯರು ಕೂಡಾ ಆಸಕ್ತಿ ವಹಿಸಿ ಭವಿಷ್ಯಕ್ಕೆ ಜನಪದ ಕ್ರೀಡೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒತ್ತಾಯಪೂರ್ವಕವಾಗಿ ಕಲಿಸುವುದಿದೆ. ಜೊತೆಗೆ ಗ್ರಾಮಗಳಲ್ಲಿ ನಡೆಯುವ ಪೌರಾಣಿಕ ನಾಟಕಗಳ ನಡುವೆ ಈ ಕೋಲಾಟ ಪ್ರದರ್ಶನ ಇತ್ತೀಚೆಗೆ ಸಹಜವಾಗಿಯೇ ಕಂಡುಬರುತ್ತಿದೆ.

ಆಡುವುದು ಹೇಗೆ?

ಕೋಲಾಟ ನೋಡಿದಷ್ಟು ಆಥವಾ ಅಂದುಕೊಂಡಷ್ಟು ಸುಲಭವಾಗಿ ಒಲಿಯುವಂತಹದ್ದಲ್ಲ. ಕಠಿಣ ಅಭ್ಯಾಸದಿಂದ ಮಾತ್ರ ಒಬ್ಬ ಪರಿಪೂರ್ಣ ಕೋಲಾಟಗಾರನಾಗಬಲ್ಲ. ಜೊತೆಗೆ ಈತ ಪರಂಪರೆಯ ಪ್ರತಿನಿಧಿಯಾಗಿಯೂ ಗುರುತಿಸಿಕೊಳ್ಳಬಲ್ಲ. ಕೋಲಾಟವನ್ನು ಕನಿಷ್ಟ ಇಬ್ಬರಿಂದ ಆರಂಭಿಸಬಹುದು. ಗರಿಷ್ಟ 11 ಮಂದಿ ಏಕಕಾಲದಲ್ಲಿ ಆಡಬಹುದಾದ ಸಾಮೂಹಿಕ ಆಟವಾಗಿಯೂ ಇದು ಪ್ರಸಿದ್ಧವಾಗಿದೆ. ಮೊದಲಿಗೆ ಎರಡು ಅಡಿ ಉದ್ದದ ಎರಡು ಸಮನಾದ ಕೋಲುಗಳನ್ನು ತಯಾರಿಸಬೇಕು. ಇದಕ್ಕೆಂದೇ ಕೆಲವು ಮರಗಳನ್ನು ಗುರುತುಪಡಿಸಲಾಗಿರುತ್ತದೆ. ಈ ಕೋಲುಗಳು ಒಣಗಿದ ಬಳಿಕ ಅಥವಾ ಒಣಗಿದ ಮರದಿಂದ ತಯಾರಿಸಿದ ಕೋಲುಗಳು ಆಟಕ್ಕೆ ಶ್ರೇಷ್ಠ. ಆರಂಭದಲ್ಲಿ ಒಬ್ಬರು ಅಥವಾ ಇಬ್ಬರು ಒಗ್ಗೂಡಿ ಕಲಿಯುವುದಿದೆ. ಕಲಿಕೆ ಪರಿಪಕ್ವ ಎನಿಸಿದ ಮೇಲಷ್ಟೇ ಸಾಮೂಹಿಕ ಕೋಲಾಟದಲ್ಲಿ ಭಾಗವಹಿಸಬಹುದು.

ಪೆಟ್ಟುಕೊಡುವ ಆಟ

ಹಳ್ಳಿಗಳಲ್ಲಿ ಸಂಜೆಯ ವಿರಾಮದ ಹೊತ್ತಿನಲ್ಲಿ ಗ್ರಾಮದ ಮುಂಭಾಗದ ಬಯಲು ಅಥವಾ ದೇವಸ್ಥಾನ ಮತ್ತಿತರ ಜನನಿಬಿಡ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೋಲಾಟವನ್ನು ಪ್ರದರ್ಶಿಸಲಾಗುತ್ತದೆ. ಇದರಲ್ಲಿಯೂ ಪೈಪೋಟಿಯಿದೆ. ಕೋಲಾಟ ಆರಂಭಿಸುವ ವ್ಯಕ್ತಿಯ ಮೂಲಕವೇ ಅಂತ್ಯವಾಗುವುದು ವಿಶೇಷ. ಹೀಗೆ ಆಟ ಮುಗಿಸಲು ಪರಿಪೂರ್ಣ ಕಲೆಯ ಕಲಿಕೆ ಅವಶ್ಯ. ಮೊದಲಿಗೆ ದೇವರಿಗೆ ನಮಿಸಿ ಆಟವನ್ನು ಆರಂಬಿಸುವುದಿದೆ. ಕೋಲಾಟದ ವೇಳೆ ಕೆಲವೊಮ್ಮೆ ತುಸು ಜೋರಾಗಿಯೇ ಕೈಗಳಿಗೆ ಏಟು ಬೀಳುವುದಿದೆ. ಆಟದಲ್ಲಿ ತಪ್ಪಿದವನಿಗೆ ಕ್ರೀಡೆಯೇ ಏಟು ಕೊಡುತ್ತದೆ! ಜೊತೆಗೆ ತಪ್ಪು ತಿದ್ದಿಕೊಳ್ಳುವ ಅವಕಾಶವೂ ಇದೆ. ಸಾಮೂಹಿಕವಾಗಿ ಆಡುವಾಗ ಹಿರಿಯರು ಅಥವಾ ಅನುಭವಿಗಳು ಮಧ್ಯದಲ್ಲಿ ನಿಂತು ಆಟ ಸುಸೂತ್ರವಾಗಿ ನಡೆಯಲು ಸಹಕರಿಸುತ್ತಾರೆ. ಒಮ್ಮೆಯೂ ತಪ್ಪದಂತೆ ಕೋಲು ಕೊಡುವ ಯುವಕರಿಗೆ ಪ್ರಶಂಸೆಯೂ ಇರುತ್ತದೆ.

ಗಾಯನದ ಸಾಥ್

ಮತ್ತೊಂದು ವಿಶೇಷ ಅಂದರೆ ಈ ಕೋಲಾಟದ ವೇಳೆ ಹಾಡುಗಳ ಗಾಯನವೂ ಇರುತ್ತದೆ. ಹಿರಿಯ ವ್ಯಕ್ತಿಗಳು ಕೋಲಾಟದಲ್ಲಿ ಪಾಲ್ಗೊಂಡೇ ಹಾಡುತ್ತಾರೆ. ಇದಕ್ಕೆ ಉಳಿದವರು ಧ್ವನಿಗೂಡಿಸಬೇಕು. ಸಂಪ್ರದಾಯಬದ್ಧ ಗೀತೆಗಳು ಮತ್ತು ಕೋಲಾಟಕ್ಕೆಂದೇ ಮೀಸಲಾಗಿರುವ ಜನಪದ ಹಾಡುಗಳೂ ಚಾಲ್ತಿಯಲ್ಲಿವೆ. ಪ್ರಸ್ತುತ ಶಾಲೆ ಕಾಲೇಜುಗಳಲ್ಲಿಯೂ ಈ ಕೋಲಾಟಕ್ಕೆ ಉತ್ತೇಜನ ಸಿಗುತ್ತಿರುವುದು ಮತ್ತು ಸರ್ಕಾರ ಕೂಡಾ ಜಾನಪದ ಅಕಾಡೆಮಿ ಮೂಲಕ ಗ್ರಾಮೀಣ ಸಂಸ್ಕೃತಿ ಹಿನ್ನೆಲೆಯ ಕ್ರೀಡೆ ಮತ್ತು ಆಟಗಳನ್ನು ಉಳಿಸಲು ಪ್ರಯತ್ನಿಸುತ್ತಿರುವುದು ಮೆಚ್ಚುವ ಅಂಶ. ಪುರಾಣದಲ್ಲೂ ಈ ಕೋಲಾಟ ಗ್ರಾಮೀಣ ಸೊಗಡಿನ ಪ್ರತಿರೂಪ ಎನಿಸಿತ್ತು. ಇಂದಿಗೂ ಅದೇ ಜೀವಂತಿಕೆ ಉಳಿದಿದೆ ಎಂದರೆ ನಮ್ಮ ಜನಪದದ ಬಗ್ಗೆ ಜನರಲ್ಲಿ ಇನ್ನೂ ಆಸಕ್ತಿ ಉಳಿದಿರುವುದೇ ಸಾಕ್ಷಿ. ಇದನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕಾದ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ.

Leave a Reply

Your email address will not be published.