ಲಸಿಕೆಯೆಂಬ ಉನ್ಮಾದ ಕೊರೊನಾ ಎಂಬ ವಾಸ್ತವ

ಲಸಿಕೆ ಪಡೆದು `ಅಮರ’ ಆಗುವ ಹಾಗೂ ಲಸಿಕೆ ಕೊಟ್ಟು `ಕೀರ್ತಿ’ ಪಡೆಯುವ ಉನ್ಮಾದ ದೇಶದಲ್ಲಿ ಹಬ್ಬಿದಂತಿದೆ. ಸರಳವಾಗಿ ಹೇಳಬೇಕೆಂದರೆ ಇದು `ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ’.

-ರಾಜಾರಾಂ ತಲ್ಲೂರು

ಕಳೆದ ಅಕ್ಟೋಬರ್ ಕೊನೆಯ ವೇಳೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಸಾರ್ವಜನಿಕವಾಗಿ, “ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ನೀಡಲಾಗುವುದು; ಯಾರನ್ನೂ ಅದರಿಂದ ವಂಚಿತಗೊಳಿಸುವುದಿಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಂತಹ ಒಂದು ಖಚಿತ ಸಂದರ್ಭ ಎಂದರೆ, ಅಕ್ಟೋಬರ್ 31ರಂದು ಪ್ರಕಟಗೊಂಡ ಅವರ ಎಕನಾಮಿಕ್ ಟೈಮ್ಸ್ ಸಂದರ್ಶನ. ಅಲ್ಲಿ ಅವರು “I would like to assure the nation that, as and when
a vaccine becomes available, everyone will be vaccinated.
None will be left behind” ಎಂದಿದ್ದರು. ದೇಶದ ಮುಖ್ಯಸ್ಥರು ಹೇಳಿದ್ದರಿಂದಾಗಿ, ಮತ್ತು 2020ನೇ ವರ್ಷವಿಡೀ ಕೊರೊನಾ ಸಂಕಷ್ಟಕ್ಕೆ ದೇಶ ಈಡಾದದ್ದರಿಂದಾಗಿ, ಲಸಿಕೆಯ ಸುದ್ದಿ ದೇಶದ ಜನರಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಸುರಂಗದ ಕೊನೆಯ ಬೆಳಕಿಂಡಿಯಂತೆ ಕಂಡಿತ್ತು.

ನರೇಂದ್ರ ಮೋದಿಯವರು ಹಾಗೆ ಹೇಳುತ್ತಿರುವಾಗ, ಆಗಿನ್ನೂ ಸಂಶೋಧನೆಯ ಹಂತದಲ್ಲಿದ್ದ ಆಸ್ಟ್ರಜೆನೆಕಾ ವ್ಯಾಕ್ಸೀನಿಗೆ ಇಂಗ್ಲೆಂಡಿನಲ್ಲಿ ತುರ್ತು ಅನುಮತಿ ದೊರಕಿದ್ದು ಅದಾಗಿ ಎರಡು ತಿಂಗಳ ಬಳಿಕ, ಅಂದರೆ, ಡಿಸೆಂಬರ್ 30ರಂದು. ಭಾರತದಲ್ಲಿ ಡ್ರಗ್ ಕಂಟ್ರೋಲರ್ ಜನರಲ್ (DCGI) ಅವರ ಅನುಮತಿ ಈ ಆಸ್ಟ್ರಜೆನೆಕಾ ಲಸಿಕೆಗೆ ಸಿಕ್ಕಿದ್ದು ಜನವರಿ 3ಕ್ಕೆ. ಭಾರತ ಆ ದಿನ ಆಸ್ಟ್ರಜೆನೆಕಾದ ಕೋವಿಶೀಲ್ಡ್ ಲಸಿಕೆಗೆ ಮಾತ್ರವಲ್ಲದೆ, ಭಾರತೀಯ ಮೂಲದ ಭಾರತ್ ಬಯೋಟೆಕ್‍ನ ಲಸಿಕೆಗೂ ಅನುಮತಿ ನೀಡಿತ್ತು. ಈ ಅನುಮತಿ ಕೂಡ ಔಷಧಿ ಸಂಶೋಧನೆ ಇನ್ನೂ ಪೂರ್ಣಗೊಂಡಿರದಿದ್ದರೂ, ಆಪತ್ಕಾಲದ ಕಾರಣಕ್ಕೆ ನೀಡಿರುವ ತುರ್ತು ಅನುಮತಿ. ಭಾರತ್ ಬಯೋಟೆಕ್‍ನ ಕೊವ್ಯಾಕ್ಸೀನ್ ಲಸಿಕೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಯೋಗದಲ್ಲಿ ಸಿದ್ಧಗೊಂಡ ಸಂಪೂರ್ಣ ಭಾರತೀಯ ಸಾಧನೆ. ಈ ಎರಡು ಮಾಹಿತಿಗಳಿಂದ ಅರಿವಾಗುವ ಸಂಗತಿ ಎಂದರೆ, ಪ್ರಧಾನಿ ಇದೆಲ್ಲ ಆಗುವ ಎರಡು ತಿಂಗಳ ಮೊದಲೇ, “ಎಲ್ಲರಿಗೂ ಲಸಿಕೆ” ಎಂಬ ಹೇಳಿಕೆ ನೀಡುವ ಹೊತ್ತಿಗೆ, ಸ್ವತಃ ಅವರಿಗೂ ಈ ಲಸಿಕೆಯ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದಿರಲಿಕ್ಕಿಲ್ಲ ಎಂಬುದು.

ದೇಶದ ಉನ್ನತ ಹುದ್ದೆಯಲ್ಲಿರುವವರೊಬ್ಬರು ಹೇಳಿಕೆಗಳನ್ನು ನೀಡುವಾಗ ಅವು ವಾಸ್ತವಗಳ ಆಧಾರದಲ್ಲಿ ಇಲ್ಲದಿದ್ದರೆ ಹೇಗೆ ಅದು ಉನ್ಮಾದಕ್ಕೆ ಕಾರಣ ಆಗುತ್ತದೆ ಎಂಬುದಕ್ಕೆ ಈ “ಕೊರೊನಾ ಲಸಿಕೆ ಪ್ರಕರಣ” ಕ್ಲಾಸಿಕ್ ಉದಾಹರಣೆ. ಈಗ ಲಸಿಕೆಯ ಕುರಿತು ನಿರೀಕ್ಷೆಗಳು ಉತ್ತಂಗದಲ್ಲಿವೆ. ಲಸಿಕೆಯ ಸರ್ಟಿಫಿಕೇಟು- ಲಸಿಕೆ ಪಾಸ್‍ಪೋರ್ಟ್ ಚರ್ಚೆಯಾಗುತ್ತಿವೆ. ಜನಸಮುದಾಯದ ನಡುವೆ ನೂರಾರು ಊಹಾಪೋಹಗಳು ಹಬ್ಬುತ್ತಿವೆ. ಲಸಿಕೆ ಸರಬರಾಜು ಕೊರತೆ ಆದ ರಾಜ್ಯಗಳಲ್ಲಿ ತಾರತಮ್ಯದ ಗದ್ದಲ-ರಾಜಕೀಯ ಮೇಲಾಟಗಳು ನಡೆಯುತ್ತಿವೆ. ಒಟ್ಟಿನಲ್ಲಿ, ಲಸಿಕೆ ಪಡೆದು “ಅಮರ”ರಾಗುವ ಹಾಗೂ ಲಸಿಕೆ ಕೊಟ್ಟು “ಕೀರ್ತಿ” ಪಡೆಯುವ ಉನ್ಮಾದ ದೇಶದಲ್ಲಿ ಹಬ್ಬಿದಂತಿದೆ. ಸರಳವಾಗಿ ಹೇಳಬೇಕೆಂದರೆ ಇದು “ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ”.

ಈಗ ವಾಸ್ತವಗಳ ಆಧಾರದಲ್ಲಿ, ಭಾರತಕ್ಕೆ ಸೀಮಿತವಾಗಿ, ಕೊರೊನಾ ಲಸಿಕೆಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಗಮನಿಸೋಣ:

ಲಸಿಕೆಗಳ ಪರಿಣಾಮ ಸಾಮರ್ಥ್ಯ

ಆಕ್ಸ್‍ಫರ್ಡ್ ವಿವಿ ಸಂಶೋಧಿಸಿರುವ ಮತ್ತು ಆಸ್ಟ್ರೇಜೆನೆಕಾ ಔಷಧಿ ಉತ್ಪಾದನಾ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯ ಪರಿಣಾಮ ಸಾಮರ್ಥ್ಯ 63% ಮತ್ತು ಭಾರತೀಯ ಮೂಲದ ಕೊವ್ಯಾಕ್ಸೀನ್ ಲಸಿಕೆಯ ಪರಿಣಾಮ ಸಾಮರ್ಥ್ಯ 81% ಎಂದು ಅಧಿಕೃತ ದಾಖಲೆಗಳು ಹೇಳುತ್ತಿವೆ. ಅಂದರೆ ಉದಾಹರಣೆಗೆ, ಕೋವಿಶೀಲ್ಡ್ ತೆಗೆದುಕೊಂಡ 10 ಮಂದಿಯಲ್ಲಿ 4 ಮಂದಿಗೆ ಅದು ಉದ್ದೇಶಿತ ಪರಿಣಾಮ ಬೀರದಿರಬಹುದು; ಕೊವ್ಯಾಕ್ಸೀನ್ ತೆಗೆದುಕೊಂಡ 10 ಮಂದಿಯಲ್ಲಿ ಇಬ್ಬರಿಗೆ ಅದು ಉದ್ದೇಶಿತ ಪರಿಣಾಮ ಬೀರದಿರಬಹದು.

ಈ ಎರಡೂ ಲಸಿಕೆಗಳ ಪರಿಣಾಮಗಳು ಮಾತ್ರವಲ್ಲದೇ, ಅಡ್ಡ ಪರಿಣಾಮಗಳು ಕೂಡ ದೀರ್ಘಕಾಲಿಕವಾಗಿ ಇನ್ನೂ ಅಧ್ಯಯನಕ್ಕೆ ಒಳಗಾಗುತ್ತಿವೆ. ಅವುಗಳ ಸ್ವರೂಪ ಇನ್ನೂ ಖಚಿತವಾಗಿಲ್ಲ. ಮಾರ್ಚ್ 29ರ ಹೊತ್ತಿಗೆ ಭಾರತದೊಳಗೆ ಕೊರೊನಾ ಲಸಿಕೆಗಳನ್ನು ಪಡೆದವರಲ್ಲಿ ಕನಿಷ್ಠ 617 ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ವರದಿಯಾಗಿವೆ; ಅದರಲ್ಲಿ ಕನಿಷ್ಠ 180 ಸಾವಿನ ಪ್ರಕರಣಗಳಿವೆ ಎಂಬುದಾಗಿ ರಾಷ್ಟ್ರೀಯ AEFI ಸಮಿತಿಯನ್ನು ಉಲ್ಲೇಖಿಸಿ “ದ ವೈರ್ ಸಯನ್ಸ್” ವರದಿ ಮಾಡಿದೆ. ಇವೆಲ್ಲ ಇನ್ನೂ ಪ್ರಾಥಮಿಕ ಮಾಹಿತಿಗಳಾಗಿದ್ದು, ಪೂರ್ಣಪ್ರಮಾಣದ ಅಧ್ಯಯನ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಲಸಿಕೆಗಳ ಪರಿಣಾಮದ ಅವಧಿ

ಯಾವುದೇ ಒಂದು ವೈರಸ್ ವಿರುದ್ಧದ ಲಸಿಕೆ ಸಾಮಾನ್ಯವಾಗಿ ಒಂಬತ್ತು ತಿಂಗಳಿನಿಂದ ಒಂದು ವರ್ಷ ಕಾಲ ಪರಿಣಾಮಕಾರಿಯಾಗಿರುತ್ತದೆ ಎಂದು ದೇಶದ ಕೋವಿಡ್ ಟಾಸ್ಕ್ ಫೋರ್ಸಿನ ಸದಸ್ಯ ಮತ್ತು AIIMSನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಈ ಕೊರೊನಾ ಲಸಿಕೆಗಳಿಗೆ ಸಂಬಂಧಿಸಿದಂತೆ ಈ ಕುರಿತ ಖಚಿತ ಮಾಹಿತಿ ತಿಳಿಯಲು, ಅವುಗಳ ದೀರ್ಘಕಾಲಿಕ ಸಂಶೋಧನೆ ಇನ್ನೂ ಒಂದೆರಡು ವರ್ಷ ನಡೆಯುವುದು ಅಗತ್ಯ ಇದೆ. ಇವೆರಡೂ ಲಸಿಕೆಗಳು ಸಾಂಪ್ರದಾಯಿಕ ಸಂಶೋಧನಾ ಹಾದಿಯನ್ನು ಅನುಸರಿಸದ, ಆಪತ್ತಿನ ಈ ಸಂದರ್ಭದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದಿರುವ ಲಸಿಕೆಗಳೆಂಬುದನ್ನು ಮರೆಯುವಂತಿಲ್ಲ.

ಅಂಕಿಸಂಖ್ಯೆ- ವಾಸ್ತವಗಳು

ಇಷ್ಟು ಮಾಹಿತಿಗಳ ಆಧಾರದಲ್ಲಿ ಈಗ, ಈ ಲಸಿಕೆಗಳಿಗೆ ಸಂಬಂಧಿಸಿದ ಕೆಲವು ವಾಸ್ತವಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಯಾವುದೇ ಕೈಗಾರಿಕಾ ಸ್ವರೂಪದ ಉತ್ಪಾದನೆಯ ಸರಬರಾಜು ಅವಲಂಬಿಸಿರುವುದು, ಅದರ ಉತ್ಪಾದನಾ ಸಾಮಥ್ರ್ಯವನ್ನು. ಒಂದು ಸಂಸ್ಥೆಯ ಉತ್ಪಾದನಾ ಸಾಮಥ್ರ್ಯ ಗೊತ್ತಾದರೆ, ಸರಳ ಗಣಿತದ ಮೂಲಕವೇ ಅದರ ವಿತರಣೆಯನ್ನು ಅಂದಾಜಿಸುವುದು ಸಾಧ್ಯವಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಎರಡು ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸೀನ್‍ಗಳ ಉತ್ಪಾದನೆ-ಲಭ್ಯತೆಯನ್ನು ಗಮನಿಸೋಣ.

ಕೋವಿಶೀಲ್ಡ್

ಕೊಯಲಿಷನ್ ಫಾರ್ ಎಪಿಡೆಮಿಕ್ ಪ್ರಿಪ್ಯಾರ್ಡ್‍ನೆಸ್ ಇನ್ನೊವೇಷನ್ಸ್ (CEPI),, ಗ್ಲೋಬಲ್ ಅಲಯನ್ಸ್ ಫಾರ್ ವ್ಯಾಕ್ಸೀನ್ಸ್ ಅಂಡ್ ಇಮ್ಯುನೈಸೇಷನ್ (Gavi), ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO)) ಒಟ್ಟಾಗಿ, ಕೊರೊನಾ ಜಗನ್ಮಾರಿಯ ವಿರುದ್ಧ ಹೋರಾಡಲು ಸ್ಥಾಪಿಸಿರುವ COVAX ಆಧಾರಸ್ಥಂಭದ ಮೂಲಕ ಜಗತ್ತಿನಾದ್ಯಂತ ಸಂಶೋಧನೆ ಆಗಿರುವ/ಆಗುತ್ತಿರುವ ವ್ಯಾಕ್ಸೀನ್‍ಗಳಲ್ಲಿ ಒಂದು, ಕೋವಿಶೀಲ್ಡ್. ಅದರ ಉತ್ಪಾದನೆಗಾಗಿ COVAX ಒಕ್ಕೂಟವು ಆಸ್ಟ್ರಾಜೆನೆಕಾಗೆ ಮತ್ತು ಭಾರತದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII)  ಗೆ ಒಪ್ಪಂದದ ಮೇರೆಗೆ ಆರ್ಥಿಕ ಸಹಾಯ ನೀಡಿದೆ.

COVAX ಅಧಿಕೃತ ದಾಖಲೆಗಳ ಪ್ರಕಾರ, SSI 2021ರ ಮೊದಲೆರಡು ತ್ರೈಮಾಸಿಕಗಳ ಒಳಗೆ (ಕಿ1 & ಕಿ2) 24 ಕೋಟಿ ಲಸಿಕೆಗಳನ್ನು ಮುಂಗಡ ಖರೀದಿ ಬದ್ಧತೆ (AMC) ಪಾವತಿ ಮಾಡಿರುವ 36 ದೇಶಗಳಿಗೆ ಮತ್ತು ದುಡ್ಡು ಕೊಟ್ಟು ಖರೀದಿಸುವ ಪಾಲುದಾರ (SFP)) 36 ದೇಶಗಳಿಗೆ ಒದಗಿಸಿಕೊಡಬೇಕಿದೆ. ಈ ಆರು ತಿಂಗಳುಗಳಲ್ಲಿ ಭಾರತದ ಪಾಲು, AMC ಅಡಿ 9,71,64,000 ಲಸಿಕೆಗಳು (ವಿವರಗಳು gavi ವೆಬ್‍ಸೈಟಿನಲ್ಲಿ ಲಭ್ಯ)

ಮಾರ್ಚ್ 18ರ ಹೊತ್ತಿಗೆ ಭಾರತ ಸರ್ಕಾರವು SII ಉತ್ಪಾದಿಸಿದ ವ್ಯಾಕ್ಸೀನುಗಳನ್ನು ಅದು ಮಾಡಿಕೊಂಡ ಒಪ್ಪಂದದಡಿ ದೇಶದಿಂದ ಹೊರಕಳಿಸುವುದಕ್ಕೆ, ಲಸಿಕೆಯ ಮೊದಲ ಕ್ಲೇಮ್ ತನ್ನದೆಂಬ ದೇಶದೊಳಗಿನ ಷರತ್ತು ತೋರಿಸಿ ತಾತ್ಕಾಲಿಕ ನಿಷೇಧ ವಿಧಿಸಿದಾಗ, ಅದು ಕೆಲದಿನಗಳ ಕಾಲ ಜಾಗತಿಕ ಲಸಿಕೆ ಸರಬರಾಜಿಗೆ ಅಡ್ಡಿ ಉಂಟುಮಾಡಿದ್ದೂ ನಡೆಯಿತು; ಅದು ಜಗತ್ತಿನಾದ್ಯಂತ ಸುದ್ದಿಯಾಯಿತು, ಆಫ್ರಿಕಾ ಭೂಖಂಡದ ಕೆಲವು ನಿಜಕ್ಕೂ ಬಡ ದೇಶಗಳಿಗೆ ಸಕಾಲದಲ್ಲಿ ಲಸಿಕೆ ತಲುಪದಿರಲು ಕಾರಣವಾಯಿತು. ಈ ವಿಳಂಬಕ್ಕಾಗಿ ಆಸ್ಟ್ರಜೆನೆಕಾ ಕಂಪನಿ ಭಾರತದ SIIಗೆ ವಕೀಲರ ನೋಟೀಸು ಕಳುಹಿಸಿದ್ದೂ ನಡೆಯಿತು. ಭಾರತದ ಮಾಧ್ಯಮಗಳಲ್ಲಿ ಇದು ಸುದ್ದಿ ಆಗಲಿಲ್ಲ, ಆದರೆ “ವ್ಯಾಕ್ಸೀನ್ ಮೈತ್ರಿ” ಎಂದು ಕೆಲವು ನಿಗದಿತ ದೇಶಗಳಿಗೆ ಹೋದ ವ್ಯಾಕ್ಸೀನು ಪೆಟ್ಟಿಗೆಗಳ ಜೊತೆಗಿನ ಫೋಟೋ ಭಾರೀ ಸುದ್ದಿ ಮಾಡಿತು!

SII ಮುಖ್ಯಸ್ಥ ಆಧಾರ್ ಪೂನಾವಾಲಾ ಅವರ ಪ್ರಕಾರ ಅವರ ಸಂಸ್ಥೆ ಸದ್ಯ ತಿಂಗಳಿಗೆ 6 ಕೋಟಿ ಡೋಸ್‍ಗಳನ್ನು ಉತ್ಪಾದಿಸುತ್ತಿದ್ದು, ಉತ್ಪಾದನಾ ಸಾಮಥ್ರ್ಯವನ್ನು 10 ಕೋಟಿ ಡೋಸ್‍ಗಳಿಗೆ ಏರಿಸುವ ಉದ್ದೇಶ ಹೊಂದಿದೆ. ಎಪ್ರಿಲ್ 8ರ ಹೊತ್ತಿಗೆ SII ಭಾರತದ ಒಳಗೆ 10 ಕೋಟಿ ಲಸಿಕೆಗಳನ್ನೂ, ಬೇರೆ ದೇಶಗಳಿಗೆ 6 ಕೋಟಿ ಲಸಿಕೆಗಳನ್ನೂ ವಿತರಿಸಿದೆ. ಇದನ್ನು ಭಾರತೀಯ ಆರೋಗ್ಯ ಇಲಾಖೆಯ ಅಧಿಕೃತ ವೆಬ್‍ಸೈಟ್ ಕೂಡ ಖಚಿತಪಡಿಸುತ್ತದೆ.

ಜೂನ್ ತಿಂಗಳೊಳಗೆ ಸೀರಂ ಇನ್ಸ್ಟಿಟ್ಯೂಟ್ ಸಂಸ್ಥೆ (SII)ಯ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಲು ಭಾರತ ಸರ್ಕಾರದಿಂದ 3000 ಕೋಟಿ ರೂ.ಗಳ ಅನುದಾನವನ್ನು ಕೇಳಿದ್ದೇನೆ ಎಂದು ಪೂನಾವಾಲಾ ಅವರು ಇಂಗ್ಲೆಂಡಿನ `ದಿ ಇಂಡಿಪೆಂಡೆಂಟ್’ ಪತ್ರಿಕೆಗೆ ಎಪ್ರಿಲ್ ಎರಡನೇ ವಾರ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಭಾರತ ಸರ್ಕಾರ ಇದಕ್ಕಿನ್ನೂ ಪ್ರತಿಕ್ರಿಯಿಸಿದಂತಿಲ್ಲ. ಅನುಮತಿಗೆ ಮೊದಲೇ ಉತ್ಪಾದನೆ ಆರಂಭಿಸಿ, ಡಿಸೆಂಬರ್ ವೇಳೆಗೆ 5 ಕೋಟಿ ಡೋಸ್‍ಗಳನ್ನು ಉತ್ಪಾದಿಸಿದ್ದ SII, “ಆಗಸ್ಟ್ ಹೊತ್ತಿಗೆ 47 ಕೋಟಿ ಲಸಿಕೆಗಳನ್ನು ಸರಬರಾಜು ಮಾಡಲು ಸಾಧ್ಯವಾಗಲಿದೆ,” ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಪ್ರೊ. ವಿ.ಕೆ. ಪೌಲ್ ಇತ್ತೀಚೆಗೆ ಹೇಳಿದ್ದರು.

ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಒಂದು ಸಂಗತಿ ಸ್ಪಷ್ಟ. ಅದೇನೆಂದರೆ, SIIಗೆ ದೇಶದಿಂದ ಹೊರಗೂ ಲಸಿಕೆಗಳನ್ನು ಒದಗಿಸಬೇಕಾದ ಒಪ್ಪಂದ ಬದ್ಧತೆ ಇದೆ ಮತ್ತು ದೇಶದೊಳಗೆ ಅದರ ಸರಬರಾಜು ಸಾಮಥ್ರ್ಯ ಸೀಮಿತ. ಈ ವಾಸ್ತವವನ್ನು ಅರಿತು ದೇಶದೊಳಗೆ ಕೊರೊನಾ ನಿರ್ವಹಣೆ ನಡೆಯಬೇಕಾಗುತ್ತದೆ.

ಕೊವ್ಯಾಕ್ಸೀನ್

ಕೊವ್ಯಾಕ್ಸೀನ್ ಸಂಪೂರ್ಣವಾಗಿ ಭಾರತೀಯ ಮೂಲದ ಲಸಿಕೆಯಾಗಿದ್ದು, ಅದರ ಉತ್ಪಾದಕರು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್. ಅದರ ಉತ್ಪಾದನಾ ಸಾಮಥ್ರ್ಯ ತಿಂಗಳಿಗೆ 1 ಕೋಟಿ ಡೋಸ್ ಆಗಿದ್ದು, ಆಗಸ್ಟ್ ಹೊತ್ತಿಗೆ ಅವರು 13 ಕೋಟಿ ಡೋಸ್‍ಗಳೊಂದಿಗೆ ತಯಾರಿರಬಹುದೆಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಪ್ರೊ. ವಿ.ಕೆ. ಪೌಲ್ ಇತ್ತೀಚೆಗೆ ಹೇಳಿದ್ದರು.

ಸಂಸ್ಥೆಯ ಸದ್ಯ ಹೈದರಾಬಾದಿನಲ್ಲಿ ತಿಂಗಳಿಗೆ 40 ಲಕ್ಷ ಲಸಿಕೆಗಳನ್ನು ಉತ್ಪಾದಿಸುತ್ತಿದ್ದು, ಮೇ ಹೊತ್ತಿಗೆ ಈ ಪ್ರಮಾಣವನ್ನು ದುಪ್ಪಟ್ಟುಗೊಳಿಸುವುದಾಗಿಯೂ, ಮತ್ತು ಕರ್ನಾಟಕದ ಮಾಲೂರಿನಲ್ಲಿ (ಕೋಲಾರ) ಸಿದ್ಧಗೊಳ್ಳುತ್ತಿರುವ ಅವರ ಹೊಸ ಕಾರ್ಖಾನೆ ಆಗಸ್ಟ್ ಹೊತ್ತಿಗೆ ಕಾರ್ಯಾರಂಭಿಸಿದರೆ, ಒಟ್ಟು ಉತ್ಪಾದನೆ ಐದು ಪಟ್ಟು ಹೆಚ್ಚುವುದಾಗಿಯೂ ಸಂಸ್ಥೆಯ ಹೇಳಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಲಭ್ಯವಿರುವ ಕೊವ್ಯಾಕ್ಸೀನ್ ಪ್ರಮಾಣ ಒಟ್ಟು ಲಸಿಕೆಯ ಪ್ರಮಾಣದ 10% ಮಾತ್ರ. ಅಂದರೆ ಅದಿನ್ನೂ 50ಲಕ್ಷ ಲಸಿಕೆಗಳನ್ನು ಮೀರಿಲ್ಲ. ಈ ಉತ್ಪಾದನೆ-ವಿತರಣೆಯ ಬಗ್ಗೆ ಪಾರದರ್ಶಕವಾದ ಮಾಹಿತಿಗಳು ಅಧಿಕೃತವಾಗಿ ಎಲ್ಲೂ ಲಭ್ಯವಿಲ್ಲ.

ವ್ಯರ್ಥವಾದ ಲಸಿಕೆಗಳು

ಮಾರ್ಚ್ 24ರಂದು ಪ್ರಧಾನಮಂತ್ರಿಗಳು ದೇಶದ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ, ದೇಶದಲ್ಲಿ ಕೊರೊನಾ ಲಸಿಕೆಗಳು ಬಳಕೆಯಾಗದೇ ವ್ಯರ್ಥವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅದು ಹೀಗೆ ವ್ಯರ್ಥವಾಗಲು ಬಹುಮುಖ್ಯ ಕಾರಣವೆಂದರೆ, ಒಂದು ವಿಯಾಲ್‍ನಲ್ಲಿ 10 ಡೋಸ್‍ಗಳಿದ್ದರೆ, ಅದನ್ನು ಪಡೆಯಲು, ಸರ್ಕಾರ ವಿಧಿಸಿರುವ ನಿಯಮಗಳನ್ವಯ ಲಭ್ಯರಿರುವವರ ಸಂಖ್ಯೆ 5-6 ಮಾತ್ರ ಇರುವುದು. ತೆರೆದ ವಿಯಾಲ್ ನಾಲ್ಕು ಗಂಟೆಗಳಲ್ಲಿ ವಾಯಿದೆ ತೀರುತ್ತದೆ; ನೀಡುವವರಲ್ಲಿ ಪರಿಣತಿಯ ಕೊರತೆ ಲಸಿಕೆ ವ್ಯರ್ಥವಾಗಲು ಇನ್ನೊಂದು ಮಹತ್ವದ ಕಾರಣವಂತೆ. “ಇಂಡಿಯನ್ ಎಕ್ಸ್‍ಪ್ರೆಸ್” ಪತ್ರಿಕೆ ಮಾರ್ಚ್ 27ರಂದು ಅಂದಾಜಿಸಿರುವಂತೆ, ದೇಶದಲ್ಲಿ ವ್ಯಾಕ್ಸೀನ್ ನಷ್ಟದ ಸರಾಸರಿ 6.5%.

ಅಸಲೀ ಲೆಕ್ಕಾಚಾರ

ಈಗ ನಾವು ಓದಿರುವ ಅಂಕಿಸಂಖ್ಯೆಗಳ ಆಧಾರದಲ್ಲಿ ಕೆಲವು ಸಂಗತಿಗಳನ್ನು ಪರಿಶೀಲಿಸಿದರೆ, ಲಸಿಕೆ ರಾಜಕೀಯದ ಹಲವು ಮುಖಗಳು ತನ್ನಿಂತಾನೆ ಅನಾವರಣಗೊಳ್ಳುತ್ತವೆ ನೋಡಿ.

  • ಭಾರತದ ಒಟ್ಟು ಜನಸಂಖ್ಯೆ ಸುಮಾರು 139 ಕೋಟಿ.
  • ಇವರಲ್ಲಿ ಆದ್ಯತೆಯ ಮೇರೆಗೆ ಲಸಿಕೆ ಪಡೆಯಬೇಕಾಗಿದ್ದವರು ಕೊರೊನಾ ವಾರಿಯರ್‍ಗಳು. ಅವರಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ನಿರ್ವಾಹಕ ಅಧಿಕಾರಿಗಳು ಮತ್ತಿತರರು ಸೇರಿದ್ದಾರೆ. ಅವರ ಒಟ್ಟು ಸಂಖ್ಯೆ ಅಂದಾಜು 3 ಕೋಟಿ
  • ಕೊರೊನಾಕ್ಕೆ ಸುಲಭ ತುತ್ತಾಗುವ ಸಾಧ್ಯತೆ ಇರುವ ಮಧುಮೇಹ (7.29ಕೋಟಿ ಭಾರತೀಯರು), ಬೊಜ್ಜು (15-49ವರ್ಷ ಪ್ರಾಯದ 13% ಮಹಿಳೆಯರು ಮತ್ತು 9% ಪುರುಷರು, ಭಾರತದಲ್ಲಿ ಬೊಜ್ಜು ದೇಹಿಗಳು), ಶ್ವಾಸಕೋಶ ತೊಂದರೆ (2016ರ ಅಂದಾಜಿನ ಪ್ರಕಾರ 5.5 ಕೋಟಿ ಮಂದಿ ಭಾರತೀಯರು) ಗಳಂತಹ ಪೂರಕ ರೋಗಗಳಿರುವವರು ಆದ್ಯತೆಯ ಮೇರೆಗೆ ಲಸಿಕೆ ಪಡೆಯುವ ಎರಡನೇ ಜನಸಮುದಾಯ.
  • ವಯಸ್ಸಿನ ಕಾರಣಕ್ಕೆ ಕೊರೊನಾಕ್ಕೆ ಸುಲಭ ತುತ್ತಾಗುವ ಸಾಧ್ಯತೆ ಇರುವ ಮತ್ತೊಂದು ಜನಸಮುದಾಯ, 60ವರ್ಷ ಪ್ರಾಯಕ್ಕಿಂತ ಮೇಲಿನವರು. ಅವರ ಒಟ್ಟು ಸಂಖ್ಯೆ ಅಂದಾಜು 15 ಕೋಟಿ.

ಇವರಲ್ಲೀಗ ಎಷ್ಟೆಷ್ಟು ಮಂದಿ ಲಸಿಕೆ ಪಡೆದಾಗಿದೆ ಎಂಬ ಅಂಕಿ-ಅಂಶ ಕೂಡ ಪಾರದರ್ಶಕವಾಗಿ ಸುಲಭ ಲಭ್ಯವಿಲ್ಲ. ಕೊರೊನಾದಿಂದ ಆದ್ಯತೆಯ ಮೇರೆಗೆ ರಕ್ಷಣೆ ಒದಗಿಸಬೇಕಾಗಿರುವ ಈ ಎಲ್ಲ ಮೂರು ಜನಸಮುದಾಯಗಳ ಒಟ್ಟು ಪ್ರಮಾಣ ಅಂದಾಜು 30 ಕೋಟಿ ಎಂದಿಟ್ಟುಕೊಂಡರೆ, ಈ ವರ್ಷದ ಅಂತ್ಯದ ತನಕವೂ ಈ 30 ಕೋಟಿ ಜನಸಮುದಾಯಕ್ಕೆ ಕೊರೊನಾ ಲಸಿಕೆಯನ್ನು ನೂರಕ್ಕೆ ನೂರು ಪ್ರಮಾಣದಲ್ಲಿ ತಲುಪಿಸುವುದು ಸಾಧ್ಯವೇ, ಅಷ್ಟು ಲಸಿಕೆ ಉತ್ಪಾದನೆ, ವಿತರಣೆ ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಒಂದು ವೇಳೆ ಉತ್ಪಾದಿಸಿದ ಲಸಿಕೆಗಳನ್ನು ಭಾರತವೇ ಉಳಿಸಿಕೊಂಡರೆ, SII ಮಾಡಿಕೊಂಡಿರುವ ಅಂತಾರಾಷ್ಟ್ರೀಯ ಒಪ್ಪಂದದ ಗತಿಯೇನು ಎಂಬುದು ಸ್ಪಷ್ಟವಿಲ್ಲ. ಅಧಿಕೃತವಾಗಿ ಭಾರತ ಸರಕಾರದ ಗುರಿ ಆಗಸ್ಟ್ ಹೊತ್ತಿಗೆ 30 ಕೋಟಿ ಜನಸಮುದಾಯಕ್ಕೆ ಲಸಿಕೆ ಒದಗಿಸುವುದು.

ರೌಂಡ್ ಎರಡು!

ಅಕಸ್ಮಾತ್ ಅಪಾಯಕ್ಕೆ ಒಡ್ಡಿಕೊಂಡಿರುವ 30 ಕೋಟಿ ಜನ ಸಮುದಾಯಕ್ಕೆ ಭಾರತದಲ್ಲಿ ಲಸಿಕೆ ತಲುಪಿಸಲು ಸಾಧ್ಯ ಆಯಿತು ಎಂದಿಟ್ಟುಕೊಳ್ಳಿ. ಈ ಲಸಿಕೆಯ ಪ್ರಭಾವದ ಜೀವನಾವಧಿ ಒಂದು ವರ್ಷ ಎಂದು ಭಾರತ ಸರ್ಕಾರದ ಮುಂಚೂಣಿಯ ಪರಿಣತರೇ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಮುಂದಿನ ವರ್ಷ ಇದೇ 30 ಕೋಟಿ ಜನಸಮುದಾಯ ಮತ್ತೆ ಇದೇ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ. ಏಕೆಂದರೆ ಅವರು ಅಪಾಯಕ್ಕೆ ಒಡ್ಡಿಕೊಂಡಿರುವ ಜನಸಮುದಾಯ. ಅವರ ಜೀವ ರಕ್ಷಣೆ ಆದ್ಯತೆಯ ಸಂಗತಿ. ಕೊರೊನಾ 2022ರಲ್ಲಿ ತಾನಿರುವುದಿಲ್ಲ ಎಂದೇನೂ ಗುತ್ತಿಗೆ ಒಪ್ಪಂದ ಮಾಡಿಕೊಂಡಿಲ್ಲ. ಹಾಗಾಗಿ ದೇಶದ ಎಲ್ಲ 139 ಕೋಟಿ ಜನಕ್ಕೆ ಕೊರೊನಾ ಲಸಿಕೆ ಸಿಗಬೇಕೆಂದರೆ, ಈಗಿನ ಸ್ಥಿತಿಯಲ್ಲಿ ಅದು ವಾಸ್ತವದ ನೆಲೆಗಟ್ಟಿನಲ್ಲಿ ಅಸಾಧ್ಯ. ಆದರೆ ಒಂದು ಆಶಾದಾಯಕ ಸಂಗತಿ ಕೂಡ ಇದೆ. ಜಗತ್ತಿನಾದ್ಯಂತ 150ರಷ್ಟು ಲಸಿಕೆ ಸಂಶೋಧನೆಗಳು ನಡೆಯುತ್ತಿದ್ದು, ಈಗ ಮಾರುಕಟ್ಟೆಗೆ ಬಂದಿರುವುದು ಬರೀ ಐದಾರು ಲಸಿಕೆಗಳು. ದಿನ ಕಳೆದಂತೆ ಇನ್ನಷ್ಟು ಲಸಿಕೆಗಳು ಮಾರುಕಟ್ಟೆಗೆ ಬರಬಹುದು; ಇರುವ ಲಸಿಕೆಗಳು ತಮ್ಮ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಿಕೊಳ್ಳಬಹುದು. ಅಲ್ಲಿಯ ತನಕ ಜನಸಮುದಾಯದಲ್ಲಿ ಭರವಸೆ, ಸಹನೆ ಮೂಡಿಸುವುದು ಸರ್ಕಾರದ ಕರ್ತವ್ಯ ಆಗಬೇಕೇ ಹೊರತು, ಎಲ್ಲರಿಗೆ ಲಸಿಕೆ ಎಂಬ ಮುಂಗೈಗೆ ಬೆಲ್ಲ ಸವರುವ ಆಟ ಸಲ್ಲದು.

Leave a Reply

Your email address will not be published.