ಲಾಭ-ನಷ್ಟ ಮತ್ತು ಸಂಕಷ್ಟದ ಭೂಸುಧಾರಣೆ

ಪ್ರಸ್ತುತ ಭೂಸುಧಾರಣೆಯ ಶಾಸನ 1974ರ ತಿದ್ದುಪಡಿಯಲ್ಲಿ ಯಾರೇ ವ್ಯಕ್ತಿ ಯಾವುದೇ ಉದ್ಯಮದಲ್ಲಿದ್ದವನಾದರೂ ಆದಾಯ ಮಿತಿಯ ಯಾವುದೇ ತಗಾದೆ ಇಲ್ಲದೆ ಕೃಷಿ ಭೂಮಿಯನ್ನು ಖರೀದಿಸಬಹುದು! ಇದರ ಪರಿಣಾಮಗಳೇನು?

ಭೂ ಸುಧಾರಣೆ ಎಂಬ ಶಾಸನದ ಅಂತಿಮ ಗುರಿ ಪ್ರತಿಯೊಬ್ಬರನ್ನು ‘ಭೂ ಸಹಿತರನ್ನಾಗಿ’ ಮಾಡುವುದಾಗಿರಬೇಕು. ‘ಭೂ ರಹಿತರನ್ನಾಗಿ’ ಮಾಡುವ ಪರಿಣಾಮ ಅದರಲ್ಲಿದ್ದರೆ ಅಂತಹ ಶಾಸನವನ್ನು ಸುಧಾರಣೆಯ ಹೆಸರಿನಲ್ಲಿ ಮಾಡಬಾರದು. ಕೃಷಿಕರ ಕೈಯಲ್ಲಿ ಇರುವ ಭೂಮಿಯನ್ನು ಮಾರಾಟಕ್ಕೆ ಇಡುವ ಪ್ರೇರಣೆ ಅದರಲ್ಲಿರಬಾರದು. ಅಂತಹದ್ದಿದ್ದರೆ ಅದರಿಂದ ಸರಕಾರಕ್ಕೆ ತತ್ಕಾಲೀನ ಪ್ರಯೋಜನವಾಗುತ್ತದೆ. ಬಂಡವಾಳಶಾಹಿಗಳಿಗೆ ಶಾಶ್ವತ ಪ್ರಯೋಜನವಾಗುತ್ತದೆ. ಭೂಮಿ ಕಳಕೊಳ್ಳುವವರಿಗೆ ಶಾಶ್ವತ ಸಂಕಷ್ಟ ಉಂಟಾಗುತ್ತದೆ. ಅವರಿಂದ ಮತ್ತೊಂದು ಭೂಮಿಯನ್ನು ಖರೀದಿಸಲು ಸಾಧ್ಯವಾಗುವುದಾದರೆ ಮಾತ್ರ ಅವರ ಬದುಕಿಗೆ ಒಂದು ನೆಲೆ ಸಿಗಬಹುದು.

ಭೂ ವ್ಯವಹಾರದಿಂದ ಎಷ್ಟು ಮಂದಿಗೆ ಲಾಭವಾಗುತ್ತದೆ ಎಂತ ನೋಡಿದರೆ ಈ ವಹಿವಾಟಿನ ದುಷ್ಪರಿಣಾಮ ತಿಳಿಯುತ್ತದೆ. ಒಂದನೇ ಪ್ರಕಟಿತ ಲಾಭವು ಭೂಮಾರಾಟದ ಶುಲ್ಕದ ರೂಪದಲ್ಲಿ ಸರಕಾರಕ್ಕೆ ಸಿಗುತ್ತದೆ. ಈ ಮಾರಾಟ ಶುಲ್ಕವನ್ನು ಈಗಾಗಲೇ ಏರಿಸಿಡಲಾಗಿದೆ. ಹೆಚ್ಚು ವಾಹನಗಳು ಮಾರಾಟವಾದಾಗ ಹೆಚ್ಚು ತೆರಿಗೆ ಸಂಗ್ರಹವಾಗುವಂತೆ ಸರಕಾರಕ್ಕೆ ಭೂ ಮಾರಾಟದಿಂದ ಹೆಚ್ಚು ದುಡ್ಡು ಬರುತ್ತದೆ. ಇದು ವಾಸ್ತವಿಕವಾಗಿ ಸರಕಾರದ ಆಂತರ್ಯದಲ್ಲಿರುವ ಉದ್ದೇಶ.

ಇದರೊಂದಿಗೆ ಅಪ್ರಕಟಿತ ಲಾಭಗಳು ಅನೇಕರಿಗೆ ಆಗುತ್ತವೆ. ರೆಕಾರ್ಡ್ ತಯಾರಿಸುವ ಬರವಣಿಗೆದಾರರಿಗೆ ಬಿಡುವಿಲ್ಲದಷ್ಟು ಕೆಲಸ ಬರುತ್ತದೆ. ಅವರ ಶುಲ್ಕ ಹೆಚ್ಚಾದರೂ ಅಚ್ಚರಿ ಇಲ್ಲ. ರಿಯಲ್ ಎಸ್ಟೇಟ್‌ನ ಜಾಲ ವಿಸ್ತರಿಸಿ ಹೊಸ ದಳ್ಳಾಳಿಗಳು ಹುಟ್ಟಿಕೊಂಡು ಭೂಮಿ ಮಾರುವ ಯೋಚನೆ ಇಲ್ಲದವರಿಗೂ ಮಾರಾಟದ ಲಾಭದ ಆಮಿಷ ಹುಟ್ಟಿಸುತ್ತಾರೆ. ಅದೇ ಒಂದು ಮುಖ್ಯ ಜೀವನೋಪಾಯವಾಗುತ್ತದೆ. ಅಂತಹವರಿಗೆ ಭೂಮಿ ಖರೀದಿಸಿದ ಉದ್ದಿಮೆದಾರರು ಮುಂದೆ ಏನಾದರೂ ಕೆಲಸ ಕೊಟ್ಟರೂ ಕೊಡಬಹುದು.

ಇನ್ನು ಮುಖ್ಯವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿರುವ ಸಿಬ್ಬಂದಿ ವರ್ಗಕ್ಕೆ ಇದು ಸುಗ್ಗಿಯೋ ಸುಗ್ಗಿ ಆಗಲಿದೆ. ಪ್ರತಿಯೊಬ್ಬರಿಗೂ ಅವರವರ ಅರ್ಹತೆ ಪ್ರಕಾರ ಬಟವಾಡೆ ಸಿಗುತ್ತದೆ. ಇಲ್ಲಿಗೆ ಇದು ಮುಗಿಯುವುದಿಲ್ಲ. ಪ್ರತಿಯೊಂದು ಕಡತ ಮೇಲೆ ಅದರಲ್ಲಿ ನಮೂದಿಸಿದ ಮೊತ್ತಕ್ಕೆ ಅನುಸಾರವಾಗಿ ಸರಕಾರ ನಡೆಸುವವರ ಖಾಸಗಿ ಖಾತೆಗೆ ಮೇಲ್ಮುಖವಾಗಿ ಹಣದ ಪ್ರವಾಹ ಹರಿಯುತ್ತದೆ ಎಂಬುದು ಗುಟ್ಟಲ್ಲ. ಹೀಗೆ ಒಂದು ಪ್ರಕಟಿತ ಲಾಭದ ನೆರಳಿನಲ್ಲಿ ನಾಲ್ಕು ಅಪ್ರಕಟಿತ (ಅ)ವ್ಯವಹಾರಗಳು ನಡೆಯುವುದಾದರೆ ಅದು ಸುಧಾರಣೆ ಎಂಬ ಶಬ್ದಕ್ಕೆ ಅರ್ಥ ಕೊಡುತ್ತದೆಯೇ?

ಕೃಷಿ ಭೂಮಿಯನ್ನು ಖರೀದಿಸಿದವರು ಆ ಸ್ಥಳದಲ್ಲಿ ಕೃಷಿಯನ್ನೇ ಮಾಡಬೇಕೆಂಬ ನಿಯಮ ಇದೆ. ಪ್ರಸ್ತುತ ಸರಕಾರದ ಮೇಲೆ ಪ್ರಭಾವ ಬೀರಿ ಅಂತಹ ನಿಯಮವನ್ನು ಬದಲಾಯಿಸುವ ತಾಕತ್ತು ಬಂಡವಾಳ ಹೂಡಿದವರಿಗೆ ಇರುತ್ತದೆ. ಈಗಲೇ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವ ಶಾಸನ ಇದೆ. ಅದನ್ನು ಇನ್ನಷ್ಟು ತಿದ್ದುಪಡಿ ಮಾಡಿದರಾಯಿತು. ಇಲ್ಲಿಯೂ ಸರಕಾರಕ್ಕೆ ದೊಡ್ಡ ಶುಲ್ಕ ಬರುತ್ತದೆ. ಅದಕ್ಕಿಂತ ಹೆಚ್ಚಾಗಿ ಕಂದಾಯ ಇಲಾಖಾಧಿಕಾರಿಗಳು ಶುಲ್ಕಕ್ಕಿಂತ ಎಷ್ಟೋ ಹೆಚ್ಚು ಪ್ರಮಾಣದಲ್ಲಿ ಕನ್‌ವರ್ಶನ್ ಮಾಡಲು ಒಪ್ಪುವುದಕ್ಕಾಗಿಯೇ ಒಳ ಒಪ್ಪಂದಗಳಿಗೆ ಇಳಿಯುತ್ತಾರೆ. ಅದರಿಂದಲೂ ನಿಗದಿತ ಹಣವು ಮೇಲ್ಮುಖ ಪ್ರವಾಹದ ಮೂಲಕ ಸರಕಾರ ನಡೆಸುವ ರಾಜಕೀಯ ಮುತ್ಸದ್ದಿಗಳ ಕೈ ಸೇರುತ್ತದೆಂಬುದು ಹೆಚ್ಚಿನವರಿಗೆ ಗೊತ್ತಿರುವ ಗುಟ್ಟಿನ ಸಂಗತಿ.

ಭೂಮಾಪನ ಇಲಾಖೆ ಕಡತಗಳ ಒಳಗಿನ ನಕ್ಷೆಗಳ ಕಾಗದಗಳು ಮುಟ್ಟಿದರೆ ಹರಿದು ಹೋಗುವ ಹಂತದಲ್ಲಿ ಇಟ್ಟುಕೊಂಡಿದೆ. ಡಿಜಿಟಲೀಕರಣದ ಪ್ರಕ್ರಿಯೆ ಆರಂಭವಾಗಿದೆಯೆಂದು ಎಷ್ಟೋ ವರ್ಷಗಳಿಂದ ಹೇಳುತ್ತಿದ್ದಾರೆ. ಈ ಇಲಾಖೆ ಎಷ್ಟು ಮುಖ್ಯವೆಂದರೆ ಕ್ರಯಚೀಟಿಯಾಗಲೀ, ಭೂಪರಿವರ್ತನೆಯಾಗಲೀ, ಮರಗಳನ್ನು ಕಡಿಯುವ ಪರವಾನಗಿಯಾಗಲಿ ಅದು ಭೂಮಾಪನದ ಕೋಣೆಯೊಳಗೆ ಅಂತಿಮ ದಾಖಲೆಗೊಳ್ಳಬೇಕು. ಇಲ್ಲಿ ಕೆಲಸ ಮುಗಿಸಿಕೊಳ್ಳುವಷ್ಟರಲ್ಲಿ ಜನಸಾಮಾನ್ಯರಿಗೆ ತಾಳ್ಮೆ ಎಂದರೇನೆಂದು ಅನುಭವಕ್ಕೆ ಬರುತ್ತದೆ. ಇಲ್ಲೂ ಸಾಂಪ್ರದಾಯಿಕವಾಗಿ ನಿಗದಿಯಾಗಿರುವ ದರದಂತೆ ಅನೌಪಚಾರಿಕ ಶುಲ್ಕಗಳನ್ನು ಕೊಡಬೇಕಾಗುತ್ತದೆ. ಭೂವಿಕ್ರಯದ ಪ್ರಕ್ರಿಯೆಯಲ್ಲಿ ಇಷ್ಟೊಂದು ಜಟಿಲತೆ ಇರುವಾಗ ಇಂತಹ ವ್ಯಾವಹಾರಿಕ ದೋಷಗಳನ್ನು ನಿವಾರಿಸಿಕೊಳ್ಳದೆ ಭೂಮಿಯನ್ನು ಮಾರುಕಟ್ಟೆಗೆ ತರುವುದು ಸರಿಯೇ?

ಭೂಸುಧಾರಣೆಯ ಹೆಸರಲ್ಲಿ ನಡೆಯಲಿರುವ ಭೂವಿಕ್ರಯದ ದುಷ್ಪರಿಣಾಮವು ಪರಿಸರದ ಮೇಲೆಯೂ ಆಗುತ್ತದೆ. ಖರೀದಿಸಿದ ಜಾಗದಲ್ಲಿ ಮರಗಳನ್ನು ಕಡಿದು ಬರಡು ಮಾಡುವ ಪ್ರಕ್ರಿಯೆಗೆ ವೇಗವರ್ಧಕವಾಗಿ ಪ್ರಸ್ತುತ ಕರ್ನಾಟಕದ ಭೂಸುಧಾರಣೆ ಕಾಯ್ದೆಯು ಋಣಾತ್ಮಕ ಪರಿಣಾಮ ಹೊಂದಿದೆ. ಏಕೆಂದರೆ ಭೂಮಿಯನ್ನು ಖರೀದಿಸುವವರು ಅದರಿಂದ ಲಾಭ ಪಡೆಯುವ ಉದ್ದೇಶವನ್ನೇ ಹೊಂದಿರುತ್ತಾರೆ. ಖರೀದಿಸಿದ ಸ್ಥಳದಲ್ಲಿರುವ ಮರಗಳೇ ಅವರ ವಿತ್ತವಿನಿಮಯದ ಮೊದಲ ಪ್ರಯೋಗಕ್ಕೆ ಬಲಿಯಾಗುತ್ತವೆ. ಪಕ್ಕಾ ಕೃಷಿ ಭೂಮಿಯನ್ನು ಮಾರುಕಟ್ಟೆಗೆ ತರುವುದರ ಮೊದಲ ಅಡ್ಡ ಪರಿಣಾಮ ಇದು. ಅಂದರೆ ಖರೀದಿದಾರರಿಗೆ ಮರಗಳನ್ನು ಕಡಿದು ಮಾರುವುದರ ಮೂಲಕ ತೊಡಗಿಸಿದ ಬಂಡವಾಳದ ಒಂದು ಭಾಗ ಕೈ ಸೇರುತ್ತದೆ.

ಕೃಷಿಯೇತರ ಉದ್ಯೋಗಗಳಲ್ಲಿದ್ದು ಲಕ್ಷಾಂತರ ಹಣ ಸಂಗ್ರಹಿಸಿರುವ ಸೇವಾ ವಲಯದಲ್ಲಿರುವ ನಗರಗಳ ಮಂದಿಗೆ ಕೃಷಿ ಭೂಮಿ ಹೊಂದುವ ತವಕ ಇರುತ್ತದೆ. ಅವರಿಗೆ ಈ ತನಕ ಇಲ್ಲದ ಅವಕಾಶ ಈಗ ಒದಗಿ ಬರಲಿದೆ. ಆದರೆ ಅವರಿಗೆ ಭೂಮಿಯ ಖರೀದಿ ಸರಳವಾದ ವ್ಯವಹಾರ ಅಲ್ಲವೆಂಬುದು ತಿಳಿಯುವುದು ದಲ್ಲಾಳಿಯಿಂದ ಹಿಡಿದು ಸರ್ವೆಯರ್ ತನಕ ಹರಡಿದ ಜಾಲದಲ್ಲಿ ಹೊರಳಿದ ಬಳಿಕವೇ. ಇದೆಲ್ಲದರಿಂದ ಹೊರಬಂದ ಬಳಿಕವೂ ತಮ್ಮ ಹೆಸರಲ್ಲಿ ಭೂಮಿ ಇದೆ ಎಂಬ ತೃಪ್ತಿಯ ಹೊರತಾಗಿ ಏನೂ ಇರುವುದಿಲ್ಲ. ಏಕೆಂದರೆ ಆ ಭೂಮಿಯಲ್ಲಿ ತೊಡಗಿಸಿದ ಹಣಕ್ಕೆ ಸರಿಯಾದ ಆದಾಯ ನೀಡದಿದ್ದರೆ ಅದು ಒಂದು ಹೊರೆ ಎಂತ ಅನಿಸುವುದರಲ್ಲಿ ಅನುಮಾನವಿಲ್ಲ. ಈ ಸಂಕಷ್ಟದಿಂದ ಪಾರಾಗಲು ನಷ್ಟದಲ್ಲಿಯಾದರೂ ಅವರು ಬಂಡವಾಳಶಾಹಿಗಳಿಗೆ ಭೂಮಿ ಪರಾಭಾರೆ ಮಾಡಬೇಕಾಗುತ್ತದೆ.

ಭೂಸುಧಾರಣೆಯ ಶಾಸನ ಮಾಡುವಾಗ ಎರಡು ಐತಿಹಾಸಿಕ ಅನುಭವಗಳನ್ನು ಗಮನಿಸಬೇಕು. ಒಂದನೆಯದ್ದು ಬ್ರಿಟಿಷರು ಹೆಚ್ಚಿನ ಕಂದಾಯ ವಸೂಲಿಗಾಗಿ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದು ಭೂಮಿಯ ಒಡೆತನವು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗಿ ಸಣ್ಣ ಭೂ ಹಿಡುವಳಿಗಳೆಲ್ಲ ಕೃಷಿಕರ ಕೈಯಿಂದ ಜಾರಿ ಅವರು ತಮ್ಮದೇ ಆಸ್ತಿಗಳಲ್ಲಿ ಗೇಣಿ ಒಕ್ಕಲುಗಳಾಗಿ ಭಾರತದ ಗ್ರಾಮಗಳು ಬಡತನಕ್ಕೆ ಈಡಾದ ಕತೆ. ಜಮೀನ್ದಾರಿ ಪದ್ಧತಿಯ ನ್ಯೂನತೆಗಳ ಪರಿಹಾರಕ್ಕಾಗಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದು ಅದರಲ್ಲಿಯೂ ಗೇಣಿ ಪದ್ಧತಿಗೆ ಅವಕಾಶ ನೀಡಿದ ವಿದ್ಯಮಾನವೂ ನಡೆದಿದೆ.

ಇನ್ನು ತೆರಿಗೆಯನ್ನು ನಗದು ರೂಪದಲ್ಲಿ ಕಟ್ಟಬೇಕೆಂದು ಒತ್ತಡ ಹಾಕಿ ರೈತರೆಲ್ಲ ಸಾಲಗಾರರಾಗುವಂತೆ ಮಾಡಿ ದುಬಾರಿ ಬಡ್ಡಿಯನ್ನು ಕಟ್ಟಲಾಗದೆ ಭೂಮಿಯನ್ನು ಅಡವಿಟ್ಟು ನಂತರ ಕಳಕೊಂಡ ಉದಾಹರಣೆಗಳು ಅನೇಕ ಇವೆ. ಹೀಗೆ ಸ್ವಾತಂತ್ರ್ಯ ಬರುವ ಹೊತ್ತಿಗೆ ಗ್ರಾಮೀಣ ಭಾರತದಲ್ಲಿ ಆರ್ಥಿಕ ವರ್ಗಭೇದಗಳು ಗಮನೀಯವಾಗಿ ಗೋಚರಿಸಿದುವು. ಇದಲ್ಲದೆ ಬ್ರಿಟಿಷ್ ಸರಕಾರವು ಜಾರಿಗೊಳಿಸಿದ ಕೃಷಿಯ ವಾಣಿಜ್ಯೀಕರಣ, ಯಾಂತ್ರೀಕರಣ ಮತ್ತು ನಗದು ವ್ಯವಹಾರಗಳಿಗೆ ಪ್ರೋತ್ಸಾಹದ ಉಪಕ್ರಮಗಳು ಕೃಷಿವಲಯವನ್ನು ಬಡತನಕ್ಕೆ ನೂಕಿತು. ಅನೇಕರು ಭೂರಹಿತರಾಗಿ ಸಮಾಜದಲ್ಲಿ ಕಾರ್ಮಿಕರ ಪ್ರಮಾಣ ಹೆಚ್ಚಿತು.

ಭೂಮಿಯಲ್ಲಿ ಕೃಷಿ ಮಾಡಬೇಕೋ ಬೇಡವೋ? ಯಾವ ಕೃಷಿ ಮಾಡಬೇಕು? ಭೂಮಾಲೀಕನ ಆದಾಯವೆಷ್ಟು? ಈ ಎಲ್ಲಾ ನಿರ್ಧಾರಗಳು ಜಮೀನ್ದಾರನ ಇಚ್ಚೆಗೆ ಬಿಟ್ಟದ್ದಾಗಿತ್ತು. ಹೀಗಾಗಿ ಭೂಮಿಗೆ ಸಂಬಂಧಿಸಿ ಸುಧಾರಣೆಯ ಹೆಸರಿನಲ್ಲಿ ಬ್ರಿಟಿಷರು ಮಾಡಿದ ಕಾನೂನುಗಳು ಕೆಲವರ ಕೈಯಲ್ಲಿ ಭೂಮಿಯ ಒಡೆತನವು ಕೇಂದ್ರೀಕರಣಗೊಳ್ಳುವಂತೆ ಮಾಡಿತು. ಇಂತಹ ಕೆಲವು ಜಮೀನ್ದಾರರು ಬ್ರಿಟಿಷರಿಗೆ ಸಹಕಾರಿಗಳಾಗಿಯೂ ಇದ್ದರು. ಇದನ್ನು ಸರಿಪಡಿಸುವ ನಿರೀಕ್ಷೆ ಸ್ವತಂತ್ರ ಭಾರತದ ಸರಕಾರದ ಮೇಲೆ ಇತ್ತು.

ಭೂಸುಧಾರಣೆಯು ರಾಜ್ಯಗಳಿಗೆ ಬಿಟ್ಟ ವಿಷಯ ಎಂದು ಕೇಂದ್ರವು ಕೈ ತೊಳೆದುಕೊಂಡದ್ದು ರಾಜ್ಯಗಳಿಗೆ ಅನುಕೂಲವಾಯಿತು. ರಾಜ್ಯಗಳಲ್ಲಿದ್ದ ಕಾಂಗ್ರೆಸ್ ಸರಕಾರಗಳು ಶಾಸನವನ್ನು ರೂಪಿಸುವ ಮತ್ತು ಜಾರಿಗೊಳಿಸುವ ವಿಚಾರದಲ್ಲಿ ಮೀನ-ಮೇಷ ಏಣಿಸುತ್ತ ವರ್ಷಗಳೇ ಕಳೆದುವು. ಉದಾಹರಣೆಗೆ ಕರ್ನಾಟಕದಲ್ಲಿ ಸ್ವಾತಂತ್ರ್ಯ ಬಂದು ಹತ್ತು ವರ್ಷಗಳ ಬಳಿಕ ಅಂದರೆ 1957 ರಲ್ಲಿ ಜತ್ತಿ ಸಮಿತಿಯನ್ನು ರಚಿಸಿ ಶಾಸನ ರೂಪಿಸಲು ಚಾಲನೆ ನೀಡಲಾಯಿತು. ಒಂದೇ ವರ್ಷದಲ್ಲಿ ಸಮಿತಿಯು ವರದಿಯನ್ನು ನೀಡಿದ್ದರೂ ಅದನ್ನು 1961ರ ಶಾಸನ ಎಂದು ಹೆಸರಿಸಿದರೂ 1962ರಲ್ಲಿ ರಾಷ್ಟಪತಿಗಳ ಅಂಕಿತ ಬಿದ್ದಿದ್ದರೂ ಅದನ್ನು ಜಾರಿಗೊಳಿಸಿದ್ದು 1965 ರಲ್ಲಿ. ಅಂದರೆ ‘ಉಳುವವನೇ ಹೊಲದೊಡೆಯ’ ಎಂತ ಮಾಡುವ ಶಾಸನವನ್ನು ವಿಫಲಗೊಳಿಸುವ ಒಳಸಂಚುಗಳಿಗೆ 1947 ರಿಂದ 1965 ರ ತನಕ 17 ವರ್ಷಗಳನ್ನು ಉಪಯೋಗಿಸಿದರು.

ಬಳಿಕ 1974ರಲ್ಲಿ ದೇವರಾಜ ಅರಸು ಅವರ ನೇತೃತ್ವದ ಸರಕಾರವು ಕ್ರಾಂತಿಕಾರಿ ಶಾಸನವನ್ನು ಜಾರಿಗೊಳಿಸಿದರೂ ಸರಿಮಾಡಲು ಸಿಕ್ಕಿದ್ದು ಅತ್ಯಲ್ಪ ಎನ್ನಬಹುದು. ಅಷ್ಟರಲ್ಲಿ ಸುಮಾರು 70% ದಷ್ಟು ಗೇಣಿಒಕ್ಲುಗಳನ್ನು ಎಬ್ಬಿಸಿಯಾಗಿತ್ತು. ತಾಕತ್ತಿದ್ದ ಭೂಮಾಲಕರು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಅದೇ ಹೊತ್ತಿಗೆ ಗೇಣಿಗೆ ಕೊಟ್ಟಿದ್ದ ಭೂಮಿಯನ್ನು ಸಂಪೂರ್ಣವಾಗಿ ಕಳಕೊಂಡು ನೆಲೆ ತಪ್ಪಿದ್ದ ಭೂಮಾಲಕರು ಬದುಕನ್ನರಸಿಕೊಂಡು ನಗರಗಳಿಗೆ ವಲಸೆ ಹೋಗಿದ್ದರು. ಗೇಣಿಗದ್ದೆಯ ಮೇಲೆ ಒಡೆತನ ಸಿಕ್ಕಿದ್ದ ಒಕ್ಲುಗಳ ಮನೆಗಳಲ್ಲಿ ಮಕ್ಕಳು ಪಾಲಿಗೆ ಬೇಡಿಕೆ ಇಟ್ಟು ಹೆಚ್ಚಿನವು ತುಂಡು ಹಿಡುವಳಿಗಳಾಗಿ ಅರ್ಥಿಕವಾಗಿ ಅನುಪಯುಕ್ತವಾದುವು.   

ಪ್ರಸ್ತುತ ಭೂಸುಧಾರಣೆಯ ಶಾಸನ 1974ರ ತಿದ್ದುಪಡಿಯಲ್ಲಿ ಯಾರೇ ವ್ಯಕ್ತಿ ಯಾವುದೇ ಉದ್ಯಮದಲ್ಲಿದ್ದವನಾದರೂ ಆದಾಯ ಮಿತಿಯ ಯಾವುದೇ ತಗಾದೆ ಇಲ್ಲದೆ ಕೃಷಿ ಭೂಮಿಯನ್ನು ಖರೀದಿಸಬಹುದು. ಆದರೆ ಅವರು ಯಾಕೆ ಖರೀದಿಸುತ್ತಾರೆ? ಅವರು ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಣಯಿಸಿ ಅಭ್ಯಾಸ ಇರುವವರು. ಹಾಗಾಗಿ ಕೃಷಿಯಲ್ಲಿ ತೊಡಗಿದರೂ ಅಕ್ಕಿಯ ಬೆಲೆಯನ್ನು ಅವರೇ ನಿರ್ಧರಿಸುತ್ತಾರೆ. ಈಗಾಗಲೇ ಆಹಾರಧಾನ್ಯದ ಕೊರತೆಯಾಗುವ ಭವಿಷ್ಯವಾಣಿ ಕೇಳಿಬರುತ್ತಿದೆ. ಇನ್ನು ಉದ್ಯಮಿಗಳೇ ಆಹಾರದ ಬೆಲೆಯನ್ನು ನಿರ್ಧರಿಸುವುದಾದರೆ ಆಗ ಅದು ಸಬ್ಸಿಡಿ ದರದಲ್ಲಿ ಬಡವರಿಗೆ ಸಿಗುವ ಹಾಗೆ ಮಾಡಲು ಸರಕಾರಕ್ಕೆ ಸಾಧ್ಯವೇ?

ಕೃಷಿ ಭೂಮಿಯನ್ನು ಮುಕ್ತ ಮಾರುಕಟ್ಟೆಗೆ ತಂದರೆ ರೈತರಿಗೆ ಲಾಭ ಎನ್ನುವ ವಿವರಣೆ ಇದೆ. ಆದರೆ ಮಾರಿದವರಿಗೆ ಲಾಭ ಒಮ್ಮೆ ಬಂದೀತು! ಆದರೆ ಅವರ ಮಕ್ಕಳು ಮೊಮ್ಮಕ್ಕಳಿಗೆ? ಇವರಿಗೆ ಸಿಕ್ಕಿದ ಹಣವು ವ್ಯವಹಾರದಲ್ಲಿ ಜಾಣ್ಮೆ ಇಲ್ಲದೆ ಮುಗಿದು ಹೋದರೆ ಭೂಮಿಯೂ ಇಲ್ಲ, ಹಣವೂ ಇಲ್ಲ ಎಂದಾಗಬಹುದು.

ಪರಿಸ್ಥಿತಿ ಅಂತೂ ಬದಲಾಗಿದೆ. ಕೃಷಿ ಬೇಡ ಎನ್ನುವವರೇ ಜಾಸ್ತಿ ಇದ್ದಾರೆ ಎನ್ನುವುದೂ ಸತ್ಯ. ಕೃಷಿಕರೂ ತಮ್ಮ ಮಕ್ಕಳು ಕೃಷಿಕರಾಗುವುದು ಬೇಡ ಎಂತ ನಿರ್ಧರಿಸಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಹಾಗಾಗಿ ಕೃಷಿ ಭೂಮಿಯಲ್ಲಿ ಸಂಚಲನ ನಡೆಯಲು ಹಣದ ಹೊಳೆ ಹರಿಯಬೇಕು. ಇದನ್ನು ಮಾಡಲು ಬಂಡವಾಳಶಾಹಿಗಳು ಮುಂದೆ ಬರಬೇಕು. ಆ ದೃಷ್ಟಿಯಿಂದ ಶಾಸನ ಜಾರಿಯಾಗುವುದರಲ್ಲಿ ಅನುಮಾನವಿಲ್ಲ. ಆಗ ಯಾರು ಕೂಲಿಗಳಾಗುತ್ತಾರೆ ಮತ್ತು ಯಾರು ಮೇಸ್ತ್ರಿಗಳಾಗುತ್ತಾರೆ ಎಂಬುದು ಅವಕಾಶಗಳನ್ನು ಬಾಚಿಕೊಳ್ಳುವ ಸಾಧ್ಯತೆಗಳ ಮೇಲೆ ಇರುತ್ತದೆ. ಈ ಶಾಸನ ತಿದ್ದುಪಡಿಯನ್ನು ವಿರೋಧಿಸುವ ನೈತಿಕ ಬಲ ಯಾವ ಪಕ್ಷದಲ್ಲೂ ಇಲ್ಲದಿರುವುದು ಸರಕಾರದ ಪ್ರಯತ್ನಕ್ಕೆ ಪೋಷಣೆಯಾಗಲಿದೆ.

ಕೊನೆಗೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಸಂಪುಟ ಸಭೆಯಲ್ಲಿ ಒಮ್ಮತ ಮೂಡದಿರುವುದೂ ಒಂದು ಸಮಾಧಾನದ ಸಂಗತಿ. ಇದರ ಪರಿಣಾಮವಾಗಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾವದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀರಾವರಿ ಭೂಮಿಯನ್ನು ಮಾರಾಟದಿಂದ ಹೊರಗಿಡುವ ತೀರ್ಮಾನವನ್ನು ಕೈಗೊಂಡಿರುವುದು ಸ್ತುತ್ಯರ್ಹ ಸಂಗತಿ.

 

*ಲೇಖಕರು ಭೂಸುಧಾರಣೆ ಮತ್ತು ಕೃಷಿ ಸಂಬಂಧಗಳ ಬದಲಾವಣೆಯ ಕುರಿತು ಸಂಶೋಧನೆ (ಪಿ.ಎಚ್.ಡಿ.) ಮಾಡಿದವರು. ಪ್ರಸ್ತುತ ಸಮಾಜೋ ಐತಿಹಾಸಿಕ ದೃಷ್ಟಿಯಿಂದ ಭೂಸುದಾರಣೆಯ ಪರಿಣಾಮಗಳನ್ನು ಫೋಕಸ್ ಆಗಿ ಇಟ್ಟುಕೊಂಡು ಕಾದಂಬರಿ ರಚನೆಯಲ್ಲಿ ತೊಡಗಿದ್ದಾರೆ.

Leave a Reply

Your email address will not be published.