ಲೋಕಸಭಾ ಚುನಾವಣೆ: ಕನ್ನಡಿಗರು ಎತ್ತಬೇಕಾದ ಎಂಟು ವಿಚಾರಗಳು!

ಈ ಬಾರಿಯ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ನಾವು, ‘ಕರ್ನಾಟಕ ಮೊದಲು’ ಅನ್ನುವ ತತ್ವದಡಿ ಕೇಳಬೇಕಾದ ವಿಚಾರಗಳೇನು? ಕರ್ನಾಟಕದ ಮೂರೂ ಪಕ್ಷಗಳು ರಾಜ್ಯಕ್ಕೊಂದು ಚುನಾವಣಾ ಪ್ರಣಾಳಿಕೆ ಅಂತ ಮಾಡಿದರೆ ಅದರಲ್ಲಿ ಇರಬೇಕಾದ ವಿಚಾರಗಳೇನು?

ತ್ತೊಂದು ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ದೇಶ ನಿಂತಿದೆ. ಈ ಹಿಂದಿನ ಯಾವ ಚುನಾವಣೆಗಳಲ್ಲೂ ಇಲ್ಲದ ರೀತಿಯಲ್ಲಿ ಈ ಚುನಾವಣೆಯನ್ನು ಒಂದು ಅಧ್ಯಕ್ಷೀಯ ಮಾದರಿಯ ಚುನಾವಣೆ ಎಂಬಂತೆ ಬಿಂಬಿಸಿ, ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ಬೈನರಿಯೊಂದನ್ನು ನಮ್ಮ ಮುಂದಿರಿಸಿ ಚುನಾವಣೆಯ ಪ್ರಚಾರ ಮಾಡಲಾಗುತ್ತಿದೆ. ಇಂತಹ ವಾದ ನಿಜಕ್ಕೂ ಭಾರತದಂತಹ ಪಾರ್ಲಿಮೆಂಟರಿ ಡೆಮಾಕ್ರಸಿಗೆ ತಕ್ಕದ್ದೇ? ಇಂತಹ ವಾದ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಭಾರತವೆಂದರೆ ಯಾವುದೇ ವೈವಿಧ್ಯ ಇಲ್ಲದ ಒಂದು ಮೊನಾಲಿಥಿಕ್ ಆದ ದೇಶ ಎಂಬಂತೆ ತೋರ್ಪಡಿಸುವ ಅಪಾಯವನ್ನು ನಮ್ಮ ಮುಂದೆ ತಂದು ನಿಲ್ಲಿಸಿದೆಯೇ? ಇಂತಹ ಪ್ರಶ್ನೆಗಳ ಸುತ್ತ ಈ ಚುನಾವಣೆಯನ್ನು ಕನ್ನಡಿಗರು ನೋಡಬೇಕಾದ ಅಗತ್ಯವಿದೆ.

ಭಾರತದ ವೈವಿಧ್ಯ ನಿಸರ್ಗ ಸಹಜವಾಗಿ ಸಾವಿರಾರು ವರ್ಷಗಳ ಅವಧಿಯಲ್ಲಿ ರೂಪುಗೊಂಡಿದ್ದು. ಅದನ್ನು ಬ್ರಿಟಿಷರಾಗಲಿ, ಮೊಘಲರಾಗಲಿ ಹುಟ್ಟು ಹಾಕಿದ್ದಲ್ಲ. ಇಲ್ಲಿನ ಭಾಷೆ, ಜನಾಂಗ, ಧರ್ಮ, ಹೀಗೆ ಎಲ್ಲ ತರದ ಹಲತನವೂ ಒಟ್ಟಾಗಿ ಭಾರತದ ಪರಿಕಲ್ಪನೆಯನ್ನು ನಮಗೆ ನೀಡಿದಂತದ್ದು. ಬ್ರಿಟಿಷರು ಇಂತಹ ಹಲತನವನ್ನೆಲ್ಲ ಒಂದು ರಾಜಕೀಯದ ಚೌಕಟ್ಟಿನಡಿ ತಂದು ರಾಜಕೀಯವಾದ ಒಂದು ಭಾರತವನ್ನು ಕಟ್ಟಿದವರು. ಎಲ್ಲ ರಾಜ್ಯಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಲಿಸುವತ್ತ ಸರ್ದಾರ್ ವಲ್ಲಬ್ ಬಾಯಿ ಪಟೇಲ್ ಜೊತೆ ಕೆಲಸ ಮಾಡಿದ ಬ್ರಿಟಿಶ್ ಸರ್ಕಾರದಲ್ಲಿದ್ದ ಅಧಿಕಾರಿ ವಿ.ಪಿ.ಮೆನನ್ ಅವರು ತಮ್ಮ ಇಂಟೆಗ್ರೆಶನ್ ಆಫ್ ಇಂಡಿಯನ್ ಸ್ಟೇಟ್ಸ್ ಪುಸ್ತಕದಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಅವರು ಹೇಳುತ್ತಾರೆ:

No greater achievement can be credited to the British than that they brought about India’s enduring political consolidation. But for this accomplishment and the rise of national consciousness in its wake, the Government of Free India could hardly have taken the final step of bringing about the peaceful integration of the princely States.

ಒಟ್ಟಾರೆ ಬ್ರಿಟಿಷರ ಆಳ್ವಿಕೆಯ ಗುಲಾಮಗಿರಿಯಲ್ಲಿ ಸೆರೆಯಾಗಿದ್ದ ನಮ್ಮೆಲ್ಲರನ್ನೂ ಒಂದುಗೂಡಿಸಿದ್ದು ಬ್ರಿಟಿಷರೆಂಬ ಸಾಮಾನ್ಯ ಶತ್ರು ಮತ್ತು ಅವರಿಂದ ಸ್ವಾತಂತ್ರ್ಯ ಬೇಕು ಅನ್ನುವ ಸಾಮಾನ್ಯ ತುಡಿತವೊಂದೇ. ಹೀಗಿದ್ದಾಗ ಬ್ರಿಟಿಷರು ಭಾರತ ಬಿಟ್ಟ ನಂತರ ಅವರ ಬಳುವಳಿಯಾದ ರಾಜಕೀಯ ಭಾರತವೆಂಬ ಒಕ್ಕೂಟವನ್ನು ಸೇರುವ ನಿರ್ಧಾರವನ್ನು ನಾವ್ಯಾಕೆ ಕೈಗೊಂಡೆವು ಅನ್ನುವ ಪ್ರಶ್ನೆ ಕೇಳಿಕೊಂಡರೆ ಸಿಗುವ ಉತ್ತರ: ಸಮಾನತೆ, ಸಮಾನ ಗೌರವದ ನೆಲೆಯ ಪ್ರಜಾಪ್ರಭುತ್ವದ ಹೊಸ ಆಡಳಿತ ವ್ಯವಸ್ಥೆಯೊಂದನ್ನು ಕಟ್ಟಿಕೊಂಡು ಒಕ್ಕೂಟದ ಎಲ್ಲ ರಾಜ್ಯಗಳು ಒಟ್ಟಾಗಿ ಏಳಿಗೆ ಸಾಧಿಸೋಣ ಅನ್ನುವ ಆಶಯ.

ಈ ಆಶಯವನ್ನು ಆದರಿಸಲೆಂದೇ ಭಾರತದಲ್ಲಿ ಭಾಷಾವಾರು ರಾಜ್ಯಗಳು ಹುಟ್ಟಿದ್ದು. ಆದರೆ ಇದೇ ಹೊತ್ತಿನಲ್ಲಿ ಪಾಕಿಸ್ತಾನದ ಹುಟ್ಟು ಮತ್ತು ಅದರ ಬೆನ್ನಲ್ಲೇ ನಡೆದ ಅಪಾರ ಹಿಂಸಾಚಾರ, ಪ್ರಪಂಚದಲ್ಲಿ ನಡೆಯುತ್ತಿದ್ದ ಎರಡನೆಯ ವಿಶ್ವ ಯುದ್ಧ ಎಲ್ಲವೂ ಸಂವಿಧಾನ ರಚನಾ ಸಮಿತಿಯ ಸದಸ್ಯರ ಮೇಲೆ ಪ್ರಭಾವ ಬೀರಿದ ಕಾರಣ ಭಾರತವನ್ನು ನಿಜ ಸ್ವರೂಪದ ಒಕ್ಕೂಟ ವ್ಯವಸ್ಥೆಯನ್ನಾಗಿಸದೇ ಹೆಚ್ಚಿನ ರಾಜಕೀಯ ಮತ್ತು ಆರ್ಥಿಕ ಅಧಿಕಾರಗಳನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟು, ರಾಜ್ಯಗಳನ್ನು ಕೇಂದ್ರದ ಅಡಿಯಾಳಾಗಿಸುವ ಸ್ವರೂಪದಲ್ಲಿ ಅಧಿಕಾರದ ಹಂಚಿಕೆ ಮಾಡಲಾಯಿತು.

ವಿದೇಶಾಂಗ ವ್ಯವಹಾರ, ರಕ್ಷಣೆ, ಮಾನಿಟರಿ ಪಾಲಿಸಿ, ರಾಜ್ಯ ರಾಜ್ಯಗಳ ನಡುವೆ ಸಮನ್ವಯದಂತಹ ಕೆಲಸಗಳಿಗೆ ಕೇಂದ್ರ ಸರ್ಕಾರ ಸೀಮಿತವಾಗಿದ್ದು, ಉಳಿದದ್ದೆಲ್ಲ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಪಂಚಾಯಿತಿಗಳು ನಿಭಾಯಿಸುವ ರೀತಿಯಲ್ಲಿ ಅಧಿಕಾರದ ಹಂಚಿಕೆಯಾಗಿದ್ದಲ್ಲಿ ಲೋಕಸಭೆಯ ಚುನಾವಣೆಗೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿರಲಿಲ್ಲ. ಆದರೆ ಇಂದು ಸಂವಿಧಾನದ ಅಧಿಕಾರ ಹಂಚಿಕೆಯ ಪಟ್ಟಿಯಲ್ಲಿ ಮೂರರಲ್ಲಿ ಎರಡು ಭಾಗದ ವಿಷಯಗಳ ಮೇಲೆ ಕಾನೂನು ರಚಿಸುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ. ಒಂದು ರಾಜ್ಯವನ್ನು ಅದರ ಅನುಮತಿ ಇಲ್ಲದೆಯೂ ಒಡೆದು ತುಂಡಾಗಿಸುವ, ಹೆಸರು ಬದಲಿಸುವ, ಸರ್ಕಾರವನ್ನು ಕಿತ್ತೆಸೆಯುವ ಎಲ್ಲ ಅಧಿಕಾರಗಳೂ ಕೇಂದ್ರ ಸರ್ಕಾರಕ್ಕಿವೆ. ಒಂದು ಹಳ್ಳಿಯ ರಸ್ತೆ ಮಾಡುವುದು, ಶೌಚಾಲಯ ಕಟ್ಟುವುದು, ಶಾಲೆಯಲ್ಲಿ ಏನು ಹೇಳಿಕೊಡಬೇಕು ಅನ್ನುವುದರಿಂದ ಹಿಡಿದು ಒಂದು ರಾಜ್ಯದಲ್ಲಿನ ಮೆಡಿಕಲ್, ಇಂಜಿನಿಯರಿಂಗ್ ಸೀಟುಗಳನ್ನು ಯಾವ ರೀತಿಯಲ್ಲಿ ಹಂಚಬೇಕು ಎಂದು ನಿರ್ಧರಿಸುವವರೆಗೆ, ರಾಜ್ಯಗಳ ಕೈಯಲ್ಲಿದ್ದ ಅಲ್ಪಸ್ವಲ್ಪ ತೆರಿಗೆ ವಿಧಿಸುವ ಹಕ್ಕುಗಳನ್ನು ಜಿ.ಎಸ್.ಟಿ. ಹೆಸರಿನಲ್ಲಿ ಕಿತ್ತುಕೊಳ್ಳಲಾಗಿದೆ.

ಎಲ್ಲ ಆರ್ಥಿಕ ಸಂಪನ್ಮೂಲಗಳನ್ನು ದೆಹಲಿಯಲ್ಲಿ ಕೇಂದ್ರೀಕರಿಸುವುದರಿಂದ ಹಿಡಿದು ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ನಿಯಮಗಳನ್ನು ಏಕಾಏಕೀ ಕೈ ಬಿಡುವವರೆಗೆ ಕೇಂದ್ರ ಸರ್ಕಾರದ ಅಧಿಕಾರ ವಿಸ್ತರಣೆಗೊಂಡಿದೆ. ರಾಜ್ಯ ಸರ್ಕಾರಗಳು ಒಂದರ್ಥದಲ್ಲಿ ವೈಭವೀಕರಿಸಿದ ಮುನ್ಸಿಪಾಲಿಟಿಗಳು ಅನ್ನುವ ಹಂತದಲ್ಲಿ ಇಂದಿವೆ. ಇಂತಹದೊಂದು ಅಸಮಾನ ನೆಲೆಯ ಅಧಿಕಾರ ಹಂಚಿಕೆ ಇರುವ ಕಾರಣದಿಂದ ಲೋಕಸಭೆಯ ಚುನಾವಣೆಯನ್ನು ದೇಶದ ರಕ್ಷಣೆ ಇಲ್ಲವೇ ಸದೃಢ ನಾಯಕತ್ವ ಅನ್ನುವ ಸೀಮಿತ ನೆಲೆಯಲ್ಲಿ ಚರ್ಚಿಸುವುದು ಜನತಂತ್ರ ಏರ್ಪಾಡಿಗೆ ಮಾಡುವ ಅನ್ಯಾಯವಾದೀತು.

ಇಂತಹದೊಂದು ಪೀಠಿಕೆ ಹಾಕಲು ಕಾರಣವಿದೆ: ಕನ್ನಡಿಗರು ಈ ಬಾರಿಯ ಲೋಕಸಭೆಯ ಚುನಾವಣೆಯನ್ನು ಕರ್ನಾಟಕಕ್ಕೆ ಮೂರೂ ಪಕ್ಷಗಳಿಂದ ಏನು ದೊರೆಯುತ್ತದೆ? ಆಯ್ಕೆಯಾದರೆ ನಮ್ಮ ಜನರ ಬದುಕು, ಉದ್ಯೋಗ, ನೆಲ, ನೀರು, ನುಡಿಯ ಸುತ್ತಲಿನ ಸಮಸ್ಯೆಗಳಿಗೆ ಏನು ಪರಿಹಾರ ಕಲ್ಪಿಸುತ್ತೀರಿ? ಅನ್ನುವ ಪ್ರಶ್ನೆಗಳ ಸುತ್ತ ಚರ್ಚಿಸುವ ಕೆಲಸ ಮಾಡದಿದ್ದರೆ ಮತ್ತೆ ಐದು ವರ್ಷ ನಮ್ಮ ಯಾವ ಸಮಸ್ಯೆಗೂ ಪರಿಹಾರ ದೊರೆಯದು; ಲೋಕಸಭೆ ನಮ್ಮ ಪಾಲಿಗೆ ಕನ್ನಡಿಯೊಳಗಿನ ಗಂಟಿನಂಟೆಯೇ ಉಯುತ್ತದೆ. ಹಾಗಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ನಾವು, ‘ಕರ್ನಾಟಕ ಮೊದಲು’ ಅನ್ನುವ ತತ್ವದಡಿ ಕೇಳಬೇಕಾದ ವಿಚಾರಗಳೇನು? ಕರ್ನಾಟಕದ ಮೂರೂ ಪಕ್ಷಗಳು ರಾಜ್ಯಕ್ಕೊಂದು ಚುನಾವಣಾ ಪ್ರಣಾಳಿಕೆ ಅಂತ ಮಾಡಿದರೆ ಅದರಲ್ಲಿ ಇರಬೇಕಾದ ವಿಚಾರಗಳೇನು? ಈ ಬಗ್ಗೆ ಎಂಟು ಅಂಶಗಳು ಹೀಗಿರಬಹುದು:

1. ನೀಟ್ ಪರೀಕ್ಷೆಯ ಮೂಲಕ ನಗರಗಳಲ್ಲಿ ಸಿ.ಬಿ.ಎಸ್.ಸಿ. ಸಿಲಾಬಸ್ಸಿನಲ್ಲಿ ಓದುವ ಮಕ್ಕಳಿಗೆ ವೈದ್ಯರಾಗುವುದನ್ನು ಸುಲಭವಾಗಿಸಿ, ಹಳ್ಳಿಗಾಡಿನ, ಚಿಕ್ಕಪಟ್ಟಣಗಳ, ಕನ್ನಡ ಮಾಧ್ಯಮದಲ್ಲಿ ಓದಿ ವೈದ್ಯರಾಗುವ ಕನಸು ಕಾಣುವ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡಲಾಗಿದೆ. ಈ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ಮೊದಲಿನಂತೆಯೇ ಕರ್ನಾಟಕದ ಸಿ.ಇ.ಟಿ. ಅಡಿಯಲ್ಲೇ ರಾಜ್ಯದ ಮೆಡಿಕಲ್ ಸೀಟುಗಳ ಕೌನ್ಸೆಲಿಂಗ್ ಮಾಡಲು ಮುಂದಾಗುವುದು.

2. ಐ.ಬಿ.ಪಿ.ಎಸ್ ಅನ್ನುವ ಬ್ಯಾಂಕ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಿಯಮಗಳನ್ನು 2014ರಿಂದ ಈಚೆಗೆ ಬದಲಾಯಿಸಿ ಅಭ್ಯರ್ಥಿ ಸ್ಥಳೀಯರಾಗಿರಬೇಕು ಮತ್ತು ಕನ್ನಡ ಭಾಷೆ ಬಲ್ಲವರಾಗಿರಬೇಕು ಅನ್ನುವ ನಿಯಮಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿದ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಬ್ಯಾಂಕ್ ಹುದ್ದೆಗಳಿಗೆ ನೇಮಕಗೊಂಡ 95%ಕ್ಕೂ ಹೆಚ್ಚಿನ ಉದ್ಯೋಗಿಗಳು ಪರಭಾಷಿಕರಾಗಿದ್ದಾರೆ. ಕನ್ನಡಿಗರಿಗೆ ಉದ್ಯೋಗ ವಂಚನೆಯಾಗಿದ್ದಲ್ಲದೇ ಕನ್ನಡವೊಂದೇ ಬಲ್ಲ ಅಸಂಖ್ಯ ಗ್ರಾಹಕರಿಗೆ ದಿನವೂ ಬ್ಯಾಂಕುಗಳಲ್ಲಿ ವ್ಯವಹರಿಸುವುದು ಕಷ್ಟವಾಗಿದೆ. ಇದನ್ನು ಬದಲಾಯಿಸಿ, 2014ರ ಮುಂಚಿನ ನಿಯಮಗಳನ್ನೇ ಮರಳಿ ತರುವುದು.

3. ಜಿ.ಎಸ್.ಟಿ. ಜಾರಿಗೆ ಬಂದ ಮೇಲೆ ರಾಜ್ಯಗಳ ತೆರಿಗೆ ವಿಧಿಸುವ ಹಕ್ಕಿಗೆ ದೊಡ್ಡ ಏಟು ಬಿದ್ದಿದೆ. ತೆರಿಗೆ ಪ್ರಮಾಣ ನಿರ್ಧರಿಸುವ ಜಿ.ಎಸ್.ಟಿ. ಕೌನ್ಸಿಲಿನಲ್ಲಿ ವಿಟೋ ಪವರ್ ಕೇಂದ್ರ ಸರ್ಕಾರದ ಕೈಯಲ್ಲಿದೆ. ಇದನ್ನು ಬದಲಾಯಿಸಿ ಅತೀ ಹೆಚ್ಚು ತೆರಿಗೆ ಸಂಪನ್ಮೂಲ ಕೊಡುವ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕಲ್ಪಿಸುವ ಮತ್ತು ಕೇಂದ್ರಕ್ಕಿರುವ ವಿಟೋ ಪವರ್ ಅನ್ನು ತೆಗೆದು ಹಾಕುವ ಮೂಲಕ ಜಿ.ಎಸ್.ಟಿ. ವಿಷಯದಲ್ಲಿ ರಾಜ್ಯದ ತೆರಿಗೆ ಮೇಲಿನ ಸ್ವಾಯತ್ತತೆಯನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಮುಂದಾಗುವುದು.

4. ಮಹದಾಯಿ ವಿವಾದ ನ್ಯಾಯಾಧೀಕರಣ ಮಂಡಳಿಯಲ್ಲಿ ಮೊದಲ ಹಂತದ ತೀರ್ಪು ಬಂದು ಕರ್ನಾಟಕಕ್ಕೆ 13.5 ಟಿ.ಎಂ.ಸಿ. ನೀರು ಕೊಡಲಾಗಿದ್ದರೂ ಯೋಜನೆಯನ್ನು ಕೈಗೊಳ್ಳಲು ಕೇಂದ್ರದ ಅನುಮತಿ ದೊರೆಯದ ಕಾರಣಕ್ಕೆ ಯೋಜನೆಯ ಪ್ರಗತಿ ಕುಂಟಿತವಾಗಿದೆ. ಇದನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು ನಮ್ಮ ಪಾಲಿನ ನೀರನ್ನು ಬಳಸಲು ಮುಂದಾಗುವುದು.

5. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಲೇ ಇದೆ. ಇದನ್ನು ದೆಹಲಿಯಲ್ಲಿ ಸಮರ್ಥವಾಗಿ ನಿಭಾಯಿಸಿ, ಯೋಜನೆಗೆ ಬೇಕಾದ ಅನುಮತಿ ಪಡೆದು ಜಾರಿಗೊಳಿಸುವುದು.

6. ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿ ಪರೀಕ್ಷೆಗಳೆಲ್ಲವೂ ಕೇವಲ ಹಿಂದಿ ಮತ್ತು ಇಂಗ್ಲಿಶಿನಲ್ಲಿ ನಡೆಯುವ ಕಾರಣ ಕನ್ನಡದಲ್ಲಿ ಪದವಿ ಪಡೆದಿದ್ದರೂ ಹಿಂದಿ/ಇಂಗ್ಲಿಶಿನಲ್ಲಿ ಪರೀಕ್ಷೆ ಬರೆದು ದಕ್ಕಿಸಿಕೊಳ್ಳಲಾಗದ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ಉದ್ಯೋಗ ನೇಮಕಾತಿ, ಯು.ಪಿ.ಎಸ್.ಸಿ. ಪರೀಕ್ಷೆ ಎಲ್ಲವನ್ನೂ ಕನ್ನಡದಲ್ಲೂ ಬರೆಯುವ ಅವಕಾಶ ಪಡೆಯುವತ್ತ ದೆಹಲಿಯಲ್ಲಿ ಕೆಲಸ ಮಾಡುವುದು.

7. ಕರ್ನಾಟಕದ ಎಂಬತ್ತಕ್ಕೂ ಹೆಚ್ಚು ತಾಲೂಕುಗಳಲ್ಲಿ ಇಂದಿಗೂ ರೈಲ್ವೆ ಸಂಪರ್ಕವಿಲ್ಲ. ಅತ್ಯಂತ ಕಡಿಮೆ ರೈಲು ಮಾರ್ಗದ ಎಲೆಕ್ಟ್ರಿಫಿಕೇಶನ್ ಆಗಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ಸರ್ಕಾರ ಯಾವುದೇ ರೈಲ್ವೆ ಯೋಜನೆಯ ಐವತ್ತು ಪ್ರತಿಶತ ಖರ್ಚು ಮತ್ತು ಉಚಿತ ಭೂಮಿ ಒದಗಿಸಲು ಸಿದ್ದವಿದ್ದಾಗಲೂ ಕರ್ನಾಟಕದ ರೈಲ್ವೆ ಸೌಕರ್ಯ ಸುಧಾರಿಸದೇ ಇರುವುದು ದೆಹಲಿಯಲ್ಲಿ ನಮ್ಮ ರಾಜಕೀಯ ಒತ್ತಡ ಬೀರುವಿಕೆ ಎಷ್ಟು ಕಳಪೆಯಾಗಿದೆ ಅನ್ನುವುದರ ಸಂಕೇತವಾಗಿದೆ. ಇದನ್ನು ಬದಲಾಯಿಸಿ, ದೆಹಲಿಯಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳನ್ನು ತುರ್ತು ಜಾರಿಗೊಳಿಸುವತ್ತ ಕೆಲಸ ಮಾಡುವುದು.

8. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ಮಗುವಿನ ಬೌದ್ಧಿಕ ವಿಕಾಸಕ್ಕೆ ಗಟ್ಟಿ ಅಡಿಪಾಯ ಹಾಕುತ್ತದೆ ಅನ್ನುವ ತತ್ವ ಜಗತ್ತಿನ ಎಲ್ಲೆಡೆ ಒಪ್ಪಿಗೆಯಾಗಿದ್ದರೂ ಭಾರತ ಅದರ ವಿರುದ್ಧವಾದ ನಡೆಯನ್ನೇ ಇಟ್ಟು ಸಾಗುತ್ತಿದೆ. ಇಂತಹ ಹೊತ್ತಲ್ಲಿ ಕಲಿಕೆಯ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ನಿಲುವು ತಳೆಯಲು ಬೇಕಿರುವ ಸ್ವಾಯತ್ತತೆ ಕಲ್ಪಿಸಲು ಕಲಿಕೆಯನ್ನು ಸಂವಿಧಾನದ ಜಂಟಿ ಪಟ್ಟಿಯಿಂದ ರಾಜ್ಯದ ಪಟ್ಟಿಗೆ ವರ್ಗಾಯಿಸುವಂತೆ ಒತ್ತಡ ಹೇರುವುದು.

ಕನ್ನಡಿಗರ ಬಾಳು-ಬದುಕನ್ನು ಪ್ರಭಾವಿಸಬಲ್ಲ ಈ ಎಂಟೂ ವಿಚಾರಗಳ ನಿರ್ಧಾರ ಕೈಗೊಳ್ಳುವ ಅಧಿಕಾರ ಕೇಂದ್ರದ ಕೈಯಲ್ಲಿದೆ. ಆದ್ದರಿಂದಲೇ ಲೋಕಸಭೆಯ ಚುನಾವಣೆಯಲ್ಲಿ ಚರ್ಚೆಯನ್ನು ಕೇವಲ ರಾಷ್ಟ್ರೀಯತೆ, ಸ್ಟ್ರಾಂಗ್ ವರ್ಸಸ್ ವೀಕ್ ನಾಯಕತ್ವ ಅನ್ನುವ ನೆಲೆಗೆ ಸೀಮಿತಗೊಳಿಸಬಾರದು. ಈ ವಿಷಯಗಳನ್ನು ಕುರಿತು ಕನ್ನಡಿಗರು ಅಭ್ಯರ್ಥಿಗಳಿಗೆ ಗಟ್ಟಿಯಾದ ಪ್ರಶ್ನೆಗಳನ್ನು ಕೇಳುವ ಮನಸ್ಥಿತಿ ಬೆಳೆಸಿಕೊಂಡರೆ ನಮ್ಮನ್ನು ದೆಹಲಿಯಲ್ಲಿ ಟೇಕನ್ ಫಾರ್ ಗ್ರಾಂಟೆಡ್ ಆಗಿ ನೋಡುವ ಮನಸ್ಥಿತಿ ಬದಲಾಗಬಹುದು. ಕನ್ನಡಿಗರು ಯಾವತ್ತು ಮೋದಿ, ರಾಹುಲ್ ಅನ್ನುವ ಚರ್ಚೆಗಿಂತ ವಿಷಯಾಧಾರಿತವಾದ ಚರ್ಚೆಯತ್ತ ಗಮನ ಕೊಡುತ್ತಾರೋ ಆಗಲೇ ರಾಜಕೀಯ ನಮ್ಮ ಪರ ವಾಲುತ್ತದೆ.

*ಲೇಖಕರು ಐಟಿ ಸಂಸ್ಥೆಯಲ್ಲಿ ಉದ್ಯೋಗಿ, ಅಂಕಣಕಾರ, ‘ಮುನ್ನೋಟ’ ವೇದಿಕೆಯ ರೂವಾರಿ. ಪ್ರತ್ಯೇಕ ರಾಜ್ಯದ ತೊಂದರೆಗಳನ್ನು ಕುರಿತ ‘ಕರ್ನಾಟಕವೊಂದೇ’ ಪುಸ್ತಕದ ಕರ್ತೃ.

Leave a Reply

Your email address will not be published.