ವದಂತಿಗಳು ಹುಟ್ಟುವ ಗುಟ್ಟು!

ಇಂದಿನ ಕೊರೊನಾ ಸಂದರ್ಭದಲ್ಲಿ ಹರಿದಾಡಿದಷ್ಟು ಗಾಳಿಸುದ್ದಿಗಳು, ವದಂತಿಗಳು ಹಿಂದೆAದೂ ಜೀವ ಪಡೆದಿರಲಿಕ್ಕಿಲ್ಲ. ಅದಾಗ್ಯೂ ವದಂತಿಗಳ ಹುಟ್ಟು ಮತ್ತು ಹರಡುವಿಕೆಗೆ ಸುದೀರ್ಘ ಇತಿಹಾಸವೇ ಇದೆ. ಇವು ದಿಢೀರ್ ಎಂದು ಎಲ್ಲಿಂದ ಪುಟಿದು ಬರುತ್ತವೆ? ಯಾಕೆ ಬರುತ್ತವೆ? ಅಷ್ಟು ವೇಗವಾಗಿ ಅವು ಹೇಗೆ ಹರಡುತ್ತವೆ? ಒಂದು ಬಿಕ್ಕಟ್ಟಿನ ಹೊತ್ತಿನಲ್ಲೇ ಅವು ಏಕೆ ವರ್ಧಿಸುತ್ತವೆ ಮತ್ತು ಯಶಸ್ವಿಯಾಗುತ್ತವೆ?

1984ರಲ್ಲಿ ಸಿಖ್‌ವಿರೋಧಿ ಅಲೆ ಇಡೀ ದೆಹಲಿಯನ್ನು ಆವರಿಸಿಕೊಂಡಿತ್ತು. ದೆಹಲಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿಗೆ ಸಿಖ್ಖರು ವಿಷ ಹಾಕಿಬಿಟ್ಟಿದ್ದಾರೆ ಎಂಬ ದಟ್ಟವಾದ ವದಂತಿ ನಗರದಲ್ಲೆಲ್ಲಾ ಹರಡಿತ್ತು. ಇಂತಹ ವದಂತಿಗಳು ಹೊಸತೇನಲ್ಲ. ಯುರೋಪಿನಲ್ಲಿ ಯುದ್ಧಗಳು, ಸಾಂಕ್ರಾಮಿಕ ರೋಗಗಳು ಮತ್ತು ಅಂತರ್ಯುದ್ಧಗಳು ಆದಾಗೆಲ್ಲಾ ಬಾವಿಗೆ ವಿಷಹಾಕಿದ್ದಾರೆ ಎಂದು ಹಲವು ಶತಮಾನಗಳ ಕಾಲ ಯಹೂದಿಗಳನ್ನು ಆಪಾದಿಸುತ್ತಿದ್ದರು.

18ನೇ ಶತಮಾನದ ಕೊನೆಯ ಭಾಗದಲ್ಲಿ ಪ್ಯಾರಿಸ್ಸಿನಲ್ಲಿ ಶ್ರೀಮಂತರು-ಬಡವರ ನಡುವೆ ವರ್ಗವೈಷಮ್ಯ ತುಂಬಾ ತೀವ್ರವಾಗಿತ್ತು. ಆಗ ಶ್ರೀಮಂತರು ಸೋಂಕಿನಿAದ ಕೂಡಿದ ಹಿಟ್ಟನ್ನು ಬಡವರಿಗೆ ಹಂಚಿದ್ದಾರೆ. ಅದು ತುಂಬಾ ಅಪಾಯಕಾರಿ ಎಂಬ ವದಂತಿ ತುಂಬಾ ದಟ್ಟವಾಗಿತ್ತು. ಈಗ ಈ ಕೋವಿಡ್-19ರ ಮಹಾಮಾರಿಯ ಸಂದರ್ಭದಲ್ಲಿ ಮುಸಲ್ಮಾನರು ಸೋಂಕಿಗೆ ಅಂಟಿಸಿದ 2000 ರೂಗಳ ನೋಟುಗಳನ್ನು ಉದ್ದೇಶಪೂರ್ವಕವಾಗಿಯೇ ರಸ್ತೆಗಳ ಮೇಲೆ ಬಿಸಾಕಿದ್ದಾರೆ. ರಸ್ತೆಯಲ್ಲಿ ಹಣ್ಣು ತರಕಾರಿ ಮಾರುತ್ತಿರುವ ಮುಸಲ್ಮಾನರು ಅವುಗಳ ಮೇಲೆ ಉಗುಳಿದ್ದಾರೆ ಎನ್ನುವ ವದಂತಿಯನ್ನು ಹುಟ್ಟುಹಾಕಿದ್ದಾರೆ. ಇದರಲ್ಲಿ ಅಚ್ಚರಿಯೇನಿಲ್ಲ.

ವದಂತಿಗಳ ಹುಟ್ಟು

ಈ ವದಂತಿಗಳು ದಿಢೀರ್ ಎಂದು ಎಲ್ಲಿಂದ ಪುಟಿದು ಬರುತ್ತವೆ? ಯಾಕೆ ಬರುತ್ತವೆ? ಅಷ್ಟು ವೇಗವಾಗಿ ಅವು ಹೇಗೆ ಹರಡುತ್ತವೆ? ಒಂದು ಬಿಕ್ಕಟ್ಟಿನ ಹೊತ್ತಿನಲ್ಲೇ ಅವು ಏಕೆ ವರ್ಧಿಸುತ್ತವೆ ಮತ್ತು ಯಶಸ್ವಿಯಾಗುತ್ತವೆ? ಎಲ್ಲ ವದಂತಿಗಳೂ ಹಾನಿಕಾರಕವಲ್ಲ. ಆದರೆ ಕೆಲವು ವದಂತಿಗಳು ಅಪಾಯಕಾರಿಯಾಗಿರಬಹುದು. ಆದರೆ ಅವು ಹೆಚ್ಚು ಪರಿಣಾಮ ಬೀರದೆ, ಉಲ್ಕೆಗಳಂತೆ ಬೇಗ ಮರೆಯಾಗಿಬಿಡುತ್ತವೆ. ಆದರೆ ನಮಗೆ ನಿಜವಾಗಿಯೂ ತಲೆನೋವಾಗಿ ಪರಿಣಮಿಸುವುದು ವಿಷಪೂರಿತವಾದ ವದಂತಿಗಳು. ಇವು ಘೋರವಾದ ದುರ್ಘಟನೆಗಳ ಜೊತೆಯಲ್ಲೇ ಕಾಣಿಸಿಕೊಳ್ಳುತ್ತವೆ. ಜೊತೆಗೆ ತುಂಬಾ ಹಾನಿಯನ್ನು ಮಾಡುತ್ತವೆ. ಇಂತಹ ವದಂತಿಗಳನ್ನು ಹೇಗೆ ತಡೆಗಟ್ಟುವುದು?

ಯಾವ ಪರೀಕ್ಷೆಗೂ ಒಳಪಟ್ಟಿರದ ಮಾಹಿತಿ, ಅಭಿಪ್ರಾಯ, ವರದಿ ಅಥವಾ ಕಥೆಯನ್ನು ವದಂತಿ ಎನ್ನಬಹುದು. ಹಾಗಾಗಿ ಅವುಗಳ ನಿಖರತೆಯನ್ನು ಮತ್ತು ನಿಷ್ಕöಷ್ಟತೆಯನ್ನು ನಂಬುವುದಕ್ಕಾಗುವುದಿಲ್ಲ. ಅವುಗಳಲ್ಲಿ ಸಂದೇಹಾಸ್ಪದ ಸಂದಿಗ್ಧತೆ ಇರುತ್ತದೆ ಮತ್ತು ಅವುಗಳನ್ನು ಪರೀಕ್ಷಿಸುವುದಕ್ಕೆ ಆಗುವುದಿಲ್ಲ. ಇವೇ ವದಂತಿಗಳ ಬಹುಮುಖ್ಯ ಲಕ್ಷಣ. ಇದೇ ಅದರ ಪ್ರಾಣ. ಈ ಸ್ವಭಾವದಿಂದಾಗಿಯೇ ವದಂತಿಗಳಿಗೆ ಅಷ್ಟು ವ್ಯಾಪಕವಾಗಿ ಹರಡಿಕೊಳ್ಳುವುದಕ್ಕ್ಕೆ ಸಾಧ್ಯ.

ಒಂದು ವರದಿಯ ಸತ್ಯಾಸತ್ಯತೆಗಳನ್ನು ಸಾರ್ವಜನಿಕವಾಗಿ ಪ್ರಮಾಣೀಕರಿಸಿ, ತೋರಿಸಿದರೆ ಆಗ ಅದು ವದಂತಿಯಾಗಿ ಉಳಿಯುವುದಿಲ್ಲ. ವದಂತಿಗಳು ಹೆಚ್ಚು ಪ್ರಭಾವಶಾಲಿಯಾಗಲು ಅಥವಾ ಪರಿಣಾಮ ಬೀರಲು ಅದರ ಸತ್ಯಾಸತ್ಯತೆಗಳು ಸ್ವಲ್ಪವೂ ಮುಖ್ಯವಲ್ಲ. ಹಾಗೆಂದ ಮಾತ್ರಕ್ಕೆ ದೃಢಪಡದೇ ಇರುವ ಎಲ್ಲಾ ವರದಿಗಳೂ ವದಂತಿಗಳಲ್ಲ. ದೃಢಪಡದೇ ಇರುವ ವರದಿ ವದಂತಿ ಆಗಬೇಕಾದರೆ ಅದಕ್ಕೆ ಕೆಲವು ಲಕ್ಷಣಗಳು ಇರಬೇಕು. ಮೊದಲನೆಯದಾಗಿ ಅದು ಸತ್ಯವೆಂದು ಭಾಸವಾಗಬೇಕು. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಓದುಗನಿಗೆ ಅಥವಾ ಕೇಳುಗನಿಗೆ ಮೇಲ್ನೋಟಕ್ಕಾದರೂ ಸತ್ಯವೆಂದು ಅನ್ನಿಸುವಂತಹ ಒಂದು ಅಂಶವಾದರೂ ಆ ವದಂತಿಯಲ್ಲಿ ಇರಬೇಕು. ಯಾವುದಾದರೂ ವರದಿ ತೀರಾ ವಿಚಿತ್ರವಾಗಿ, ವಿಲಕ್ಷಣವಾಗಿ ಇದ್ದರೆ ಅದು ವದಂತಿಯಾಗುವುದಿಲ್ಲ. ಉದಾಹರಣೆಗೆ ನಾಳೆ ಬೆಳಗ್ಗೆ ಸೂರ್ಯ ಹಿಮದ ಉಂಡೆ ಆಗಿಬಿಡುತ್ತಾನೆ ಅಥವಾ ಒಂದು ದಿನದ ಪಂದ್ಯದಲ್ಲಿ ಸಚಿನ್ ಒಂದು ಸಾವಿರ ರನ್ನುಗಳನ್ನು ಗಳಿಸಿದ ಎನ್ನುವಂತಹ ಸುದ್ದಿಗಳು ವದಂತಿಗಳಾಗುವುದಿಲ್ಲ.

ಎರಡನೆಯದಾಗಿ, ಅವು ಮನುಷ್ಯನ ವಿಚಾರಶೀಲತೆಯನ್ನು ಮಂಕುಗೊಳಿಸಿಬಿಡುತ್ತವೆ. ಭಾವೋದ್ರೇಕದ ವದಂತಿಗಳು ಸಂಕಷ್ಟದಲ್ಲಿರುವ ಒಂದು ಸಮೂಹದ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ತಕ್ಷಣವೇ ಹಲವರು ಅದನ್ನು ನಂಬಿಕೊAಡುಬಿಡುತ್ತಾರೆ. ಇದರಿಂದ ಅದು ತುಂಬಾ ವೇಗವಾಗಿ ಹರಡಲು ಪ್ರಾರಂಭವಾಗುತ್ತದೆ. ಇದೇ ಅದರ ಮೂರನೇ ಲಕ್ಷಣ. ಇನ್ನು ನಾಲ್ಕನೆಯದಾಗಿ, ಅದು ಒಂದು ಘಟನೆಯ ಮೂಲಕ ಕಾಣಿಸಿಕೊಳ್ಳುತ್ತದೆ. ಅದು ಸುಮ್ಮನೆ ಹಾದು ಹೋಗುವ ಬಿರುಸಾದ ಗಾಳಿ ಇರಬಹುದು ಅಥವಾ ಕೆಲವೊಮ್ಮೆ ಅಪಾರ ಹಾನಿ ಮಾಡಿ ಹೋಗುವ ಚಂಡಮಾರುತವಿರಬಹುದು. ಆದರೆ ಅದು ಅಲ್ಪಕಾಲಿಕ.

ಐದನೆಯದಾಗಿ, ಅದನ್ನು ಯಾರೋ ಕೆಲವರು ಉದ್ದೇಶಪೂರ್ವಕವಾಗಿ ಹುಟ್ಟುಹಾಕಿರಬಹುದು. ಅದರೆ ಅದಕ್ಕೆ ಅಧಿಕೃತತೆ ಸಿಗುವುದು ಜನಸಮೂಹದಿಂದ ಮಾತ್ರ. ವದಂತಿಗೆ ಇರುವ ದುರಾಕರ್ಷಕ ಶಕ್ತಿ ಅಸಾಧಾರಣ. ಅದರ ಮುಂದೆ ಎಲ್ಲಾ ತಜ್ಞರು ನಿಸ್ಸಹಾಯಕರು. ಅವರಿಗೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಗಾಳಿಸುದ್ದಿ ಎನ್ನುವುದು ಒಂದು ಉಪಯುಕ್ತವಾದ ಅರ್ಧಸತ್ಯ. ಭಾವೋದ್ರೇಕಕಾರಿಯಾದ ಅದು ತುಂಬಾ ಬೇಗ ಹರಡುತ್ತದೆ. ವ್ಯಕ್ತಿಗಳ ಮನಸ್ಸುಗಳನ್ನು ಬಲವಾಗಿ ಆವರಿಸಿಕೊಂಡು ಬಿಡುತ್ತದೆ. ಅವರೆಲ್ಲಾ ಒಂದೇ ರೀತಿಯಲ್ಲಿ ಯೋಚಿಸುವಂತೆ ಮತ್ತು ಒಂದೇ ರೀತಿಯಲ್ಲಿ ಕೆಲಸ ಮಾಡುವಂತೆ ಮಾಡುತ್ತದೆ. ಅದರ ಸಾಮಾಜಿಕ ಪರಿಣಾಮಗಳು ಹೆಚ್ಚಿನ ಸಂದರ್ಭಗಳಲ್ಲಿ ತುಂಬಾ ಭೀಕರವಾಗಿರುತ್ತವೆ.

ಯಾವ ಸಮಾಜಗಳು ವದಂತಿಗಳನ್ನು ಬರಮಾಡಿಕೊಳ್ಳಲು ಈಗಾಗಲೇ ಸಿದ್ಧವಾಗಿವೆಯೋ ಅಲ್ಲಿ ಅವು ತುಂಬಾ ಪರಿಣಾಮಕಾರಿಯಾಗುತ್ತವೆ. ಹೀಗೆ ಸಿದ್ಧವಾಗಿರುವುದು ಎಂದರೇನು? ಅಂತಹ ಪರಿಸ್ಥಿತಿಗಳು ಯಾವುವು? ಮೊದಲನೆಯದಾಗಿ ಮಾಹಿತಿಯ ಅಭಾವವಿರಬೇಕು ಅಥವಾ ಸಿಕ್ಕಾಪಟ್ಟೆ ಮಾಹಿತಿಗಳು ಇರಬೇಕು. ಇಂತಹ ಸನ್ನಿವೇಶಗಳಲ್ಲಿ ಅನಿಶ್ಚಿತತೆ ಇರುತ್ತದೆ. ಆಗ ಜನಗಳಿಗೆ ತಮ್ಮ ಸುತ್ತಲಿನ ಪ್ರಪಂಚವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ತಮ್ಮ ಸುತ್ತಲಿನ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಬೇಕ ಅನ್ನುವ ಆತಂಕದಲ್ಲಿ ಬಿಡಿಬಿಡಿಯಾದ ಮಾಹಿತಿಗಳು, ಅರ್ಧಸತ್ಯಗಳಿಂದ ತೇಪೆ ಹಾಕಿರುವ ವಿಷಯಗಳು, ಅಸ್ಪಷ್ಟವಾದ ಬಿಡಿ ಸುದ್ದಿಗಳನ್ನು ನೆಚ್ಚಿಕೊಳ್ಳುತ್ತಾರೆ. ಹೀಗೆ ದುರ್ಬಲವಾದ ಮತ್ತು ರುಜುವಾತಾಗದ ಮಾಹಿತಿಗಳ ಮೂಲಕ ತಮ್ಮ ಸುತ್ತಲಿನ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ವದಂತಿಗಳು ನಿಂತಿರುವುದೇ ಇಂತಹ ಕಾಲ್ಪನಿಕ ನೆಲಗಟ್ಟಿನ ಮೇಲೆ.

ವದಂತಿಗಳು ಈ ಗ್ರಹಿಕೆಯ ನೆಲೆಗಟ್ಟಿಗೆ ಭಾವೋದ್ವೇಗದ ಆತಂಕವನ್ನು ಸೇರಿಸುತ್ತವೆ. ಎಲ್ಲರ ಮನಸ್ಸಿನಲ್ಲಿಯೂ ವದಂತಿಗಳು ಬೆಳೆಯಲು ಅವಶ್ಯಕವಾದ ಒಂದು ಸಿದ್ಧ ಭೂಮಿಕೆ ಇರುತ್ತದೆ. ತುಂಬಾ ಪ್ರಕ್ಷುಬ್ಧವಾಗಿ, ಕುದಿಯುತ್ತಿರುವ ಮನಸ್ಸು ಎಲ್ಲಾ ಪುರಾವೆಗಳನ್ನೂ ಸುಟ್ಟುಬಿಡುತ್ತದೆ ಮತ್ತು ವದಂತಿಗಳಿಗೆ ಶರಣಾಗುತ್ತದೆ. ಈ ವದಂತಿಗಳು ಅವರ ಭಾವನಾತ್ಮಕ ಅವಶ್ಯಕತೆಗಳನ್ನು ಪೂರೈಸುತ್ತಿರುತ್ತವೆ. ನೋಟು ಅಮಾನ್ಯೀಕರಣದ ಹೊತ್ತಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಿ. ಬಡವ ತಮ್ಮ ಕಷ್ಟದ ಸ್ವಂತ ದುಡಿಮೆಯ ಹಣವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಹತಾಶೆ ಮತ್ತು ಆತಂಕದಲ್ಲಿ ಇದ್ದರು. ಆದರೆ ಅದರ ನಡುವೆಯೂ ಶ್ರೀಮಂತರು ಗುಟ್ಟಾಗಿ ಶೇಖರಿಸಿಟ್ಟಿದ್ದ ಕೋಟ್ಯಂತರ ರುಪಾಯಿಗಳು ಅಮಾನ್ಯಗೊಂಡವು ಎಂಬ ವದಂತಿ ಅವರಿಗೆ ಒಂದು ವಿಚಿತ್ರವಾದ ಭಾವನಾತ್ಮಕ ಸಂತೃಪ್ತಿ ನೀಡಿತ್ತು.

ವದಂತಿಗಳು ಏಕೆ ಹರಡುತ್ತವೆ?

ತೀವ್ರತರನಾದ ಆತಂಕಕ್ಕೂ ಮತ್ತು ವದಂತಿಗಳು ಸುಲಭವಾಗಿ ಹರಡುವುದಕ್ಕೂ ಇರುವ ಸಂಬAಧವನ್ನು ಮೊತ್ತ ಮೊದಲು ಗುರುತಿಸಿದ ಹಲವು ಮನೋವಿಜ್ಞಾನಿಗಳಲ್ಲಿ ರಾಂಚಿ ಮತ್ತು ಪಾಟ್ನಾ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರೊ.ಜಮುನಾ ಪ್ರಸಾದ್ ಕೂಡ ಒಬ್ಬರು. ಅವರು ಬದುಕಿದ್ದಾಗ ಯಾರೂ ಅವರನ್ನು ಗುರುತಿಸಿ ಗೌರವಿಸಲಿಲ್ಲ. ಆದರೆ ಅವರು ತೀರಿಹೋದ ನಂತರ ವದಂತಿ ಕುರಿತ ಸಾಮಾಜಿಕ ಮನೋವಿಜ್ಞಾನದಲ್ಲಿ ಆದ್ಯರು ಎಂದು ಅವರನ್ನು ಕೊಂಡಾಡುತ್ತಿದ್ದಾರೆ. 1934ರಲ್ಲಿ ಬಿಹಾರ್-ನೇಪಾಳದಲ್ಲಿ ಸಂಭವಿಸಿದ ಮಾರಕ ಭೂಕಂಪದ ಸಾಮಾಜಿಕ ಪರಿಣಾಮವನ್ನು ಕುರಿತು ಅವರು ಮಾಡಿದ ಅಧ್ಯಯನವೇ ಅದಕ್ಕೆ ಕಾರಣ.

ತುಂಬಾ ತೀವ್ರ ಸ್ವರೂಪದ ಬಿಕ್ಕಟ್ಟಿನ ಸಮಯದಲ್ಲಿ ಜನ ಆಲೋಚಿಸುವುದೇ ಇಲ್ಲ. ಪೂರ್ವಗ್ರಹವನ್ನು ಹೆಚ್ಚೆಚ್ಚು ಆತುಕೊಳ್ಳುತ್ತಾರೆ. ಈಗಾಗಲೇ ಅವರು ದ್ವೇಷಿಸುತ್ತಿರುವ ಮತ್ತು ನಂಬಿಕೆ ಇಡದಿರುವ ‘ಅನ್ಯ’ ಗುಂಪೊAದು ಇರುತ್ತದೆ. ಆ ಗುಂಪನ್ನು ಬಹಳ ಸುಲಭವಾಗಿ ಗುರಿಯಾಗಿಸಿಕೊಳ್ಳುತ್ತಾರೆ. ಮತ್ತು ಸಧ್ಯದ ತೊಂದರೆಗೆ ಆ ಗುಂಪೇ ಕಾರಣ ಎಂದು ದೂಷಿಸುತ್ತಾರೆ.  ‘ನಾವು ಮತ್ತು ಅವರು’ ಎಂಬ ಭಾವನೆಗಳಿಂದ ಒಡೆದುಹೋಗಿರುವ ಸಮಾಜದಲ್ಲಿ ವದಂತಿಗಳು ತುಂಬಾ ಯಶಸ್ವಿಯಾಗುತ್ತವೆ. ಹೀಗೆ ವಿಭಿಜಿತವಾಗಿರುವ ಗುಂಪುಗಳು ಈಗಾಗಲೇ ಒಬ್ಬ ಕಾಲ್ಪನಿಕ ಶತ್ರುವನ್ನು ಕಲ್ಪಿಸಿಕೊಂಡಿರುತ್ತವೆ. ಈ ವದಂತಿಗಳು ಆ ಶತ್ರುವಿನ ವಿರುದ್ಧ ಇಂತಹ ಗುಂಪುಗಳ ಒಳಗೆ ತಾತ್ಕಾಲಿಕವಾಗಿ ಒಂದು ಐಕ್ಯಮತ್ಯವನ್ನು ಮೂಡಿಸುತ್ತವೆ. ಇದರಿಂದ ಈಗಾಗಲೇ ಇರುವ ಧ್ರುವೀಕರಣ ಮತ್ತಷ್ಟು ಹೆಚ್ಚಾಗುತ್ತದೆ. ಇಂತಹ ವಿಭಜನೆಗಳ ಲಾಭ ಪಡೆಯಲು ಕಾದಿರುವ ಜನರಿಗೆ ಇವರನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುವುದು ತುಂಬಾ ಸುಲಭವಾಗುತ್ತದೆ.

ಈ ಇಡೀ ಪರಿಸ್ಥಿತಿ ಒಂದು ಜಿಗ್‌ಸಾ ಪಜಲ್ ಇದ್ದ ಹಾಗಿದೆ. ಈಗ ಅನಿಶ್ಚಿತತೆ ಮತ್ತು ಭಯ ಇದೆ. ಈಗಾಗಲೇ ಕಲ್ಪಿಸಿಕೊಂಡು, ದ್ವೇಷಿಸುತ್ತಿರುವ ಶತ್ರು ಇದ್ದಾನೆ. ಇನ್ನು ಈ ಪಜಲ್ ಪೂರ್ಣವಾಗುವುದಕ್ಕೆ ಇನ್ನೂ ಒಂದೇ ಒಂದು ಭಾಗ ಬೇಕು. ಈ ಶತ್ರು ನಮಗೆ ಘಾಸಿಯಾಗುವಂತಹ ತಪ್ಪನ್ನು ಮಾಡಿದ್ದಾನೆ ಎನ್ನುವ ಕಣ್ಣಿಗೆ ಕಟ್ಟುವ ಒಂದು ಕಥೆ ಬೇಕು. ವದಂತಿ ಎನ್ನುವುದು ಅಂತಹ ಒಂದು ಕಥೆ. ಆ ಕಥೆ ತುಂಬಾ ಘೋರವಾಗಿ, ಕ್ರೂರವಾಗಿ, ಬೀಭತ್ಸವಾಗಿ ಇದ್ದಷ್ಟೂ ಅದು ತುಂಬಾ ವೇಗವಾಗಿ ಹರಡುತ್ತದೆ. ಮತ್ತು ಜನ ಭಾವನಾತ್ಮಕವಾಗಿ ಅದಕ್ಕೆ ಅಷ್ಟೇ ತೀವ್ರವಾಗಿ ಪ್ರತಿಸ್ಪಂದಿಸುತ್ತಾರೆ. ಆದರೆ ಆ ವದಂತಿಗೆ ಚಾಲನೆ ಸಿಗಬೇಕಾದರೆ ನಾವು ಈಗಾಗಲೇ ಗಮನಿಸಿರುವಂತೆ ಅದು ನಂಬಿಕೆ ಹುಟ್ಟಿಸುವಂತಿರಬೇಕು. ಆ ಕಟ್ಟುಕಥೆಯನ್ನು ಜನ ನಂಬಬೇಕಾದರೆ ಅದಕ್ಕೆ ಒಂದಿಷ್ಟು ನಿಜವಾದ ಮಾಹಿತಿಗಳನ್ನು ಸೇರಿಸಬೇಕು.

1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದ ಹೊತ್ತಿನಲ್ಲಿ ಸಿಖ್ಖರು ದೊಡ್ಡ ಪ್ರಮಾಣದಲ್ಲಿ ಗುರುದ್ವಾರಗಳಿಗೆ ಹೋಗಿದ್ದು ನಿಜ. ಆದರೆ ಅವರು ಶ್ರೀಮಂತರ ಬಡಾವಣೆಗಳಿಗೆ ನುಗ್ಗಿ, ಅವರ ಮೇಲೆ ಆಕ್ರಮಣ ಮಾಡಿ, ಅವರನ್ನು ಲೂಟಿಮಾಡಲು ಆಯುಧಗಳನ್ನು ಗುರುದ್ವಾರದಲ್ಲಿ ಶೇಖರಿಸಿ ಇಡುತ್ತಿದ್ದಾರೆ ಎಂಬ ಅಧಾರವೇ ಇಲ್ಲದ ವದಂತಿ ಹುಟ್ಟಿಕೊಂಡಿತು. ಆದರೆ ಸತ್ಯ ಸಂಪೂರ್ಣ ಬೇರೆಯಾಗಿತ್ತು. ಅವರು ಅಲ್ಲಿ ಆಶ್ರಯ ಪಡೆಯುವ ಕಾರಣಕ್ಕಾಗಿ ಹೋಗಿದ್ದರು. ಹಾಗಾಗಿ ಈ ಇಡೀ ಕಥಾನಕದಲ್ಲಿ ಸತ್ಯವಾಗಿದ್ದ ಅಂಶ ಒಂದೇ ಒಂದು. ಅದು ಅವರು ಗುರುದ್ವಾರಗಳಿಗೆ ಹೋದರು ಎನ್ನುವುದು. ಆದರೆ ಈ ಒಂದು ಸಣ್ಣ ಸತ್ಯ ಅಷ್ಟು ದೊಡ್ಡ ಸುಳ್ಳನ್ನು ನಂಬಲರ್ಹವಾಗಿ ಮಾಡಿಬಿಟ್ಟಿತ್ತು.

ಅದೇ ರೀತಿಯಲ್ಲಿ ಸಮಕಾಲೀನ ಭಾರತದಲ್ಲಿ ಮುಸಲ್ಮಾನರು ನಿಷ್ಕಾರಣವಾಗಿ ಹಿಂಸೆಗೆ ಒಳಗಾಗಿದ್ದಾರೆ, ದೂಷಿಸಲ್ಪಟ್ಟಿದ್ದಾರೆ ಹಾಗೂ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ ಎನ್ನುವುದು ಸತ್ಯ. ಮುಸ್ಲಿಮರು ಸದಾ ಈ ಗಾಬರಿಯಲ್ಲಿಯೇ ಬದುಕುತ್ತಿರುತ್ತಾರೆ. ಇಂದೋರಿನಲ್ಲಿ ಕೋವಿಡ್-19 ಪರೀಕ್ಷಿಸಲು ವೈದರ ತಂಡ ಬಂದಿತ್ತು. ಆ ವೇಳೆಗೆ ಅಲ್ಲೊಂದು ವದಂತಿ ಹರಡಿತ್ತು. ತಮ್ಮನ್ನು ತಮ್ಮ ಕುಟುಂಬದಿAದ ಬೇರ್ಪಡಿಸಲು ಬರುತ್ತಿದ್ದಾರೆ ಅಂತ. ಅದನ್ನು ಅವರು ನಂಬಿದರು. ಪರೀಕ್ಷಿಸಲು ಬಂದ ವೈದ್ಯರ ತಂಡವನ್ನು ಹೊಡೆದರು. ಅದೊಂದು ಅಮಾನವೀಯವಾದ ಘಟನೆ. ಖಂಡಿತಾ ಸಮರ್ಥನೀಯವಲ್ಲ. ಆದರೆ ವದಂತಿ ಹಾಗೆ ಕೆಲಸ ಮಾಡಿತ್ತು. ಇವರೆಲ್ಲರೂ ಬಂದಿರುವುದು ತಮ್ಮನ್ನು ವೈದ್ಯಕೀಯ ಕಾರಣಗಳಿಗಾಗಿ ಬೇರೆ ಇಡುವುದಕ್ಕಲ್ಲ. ಬದಲಾಗಿ ತಮ್ಮನ್ನು ತಮ್ಮ ಕುಟುಂಬದವರಿAದ ಬರ‍್ಪಡಿಸುವ ದುರುದ್ದೇಶದಿಂದ ಎಂಬ ವದಂತಿಯನ್ನು ನಂಬಿದ್ದರು.

ಹೀಗೆ ಧ್ರುವೀಕರಣವಾಗಿರುವ ಸಮಾಜಗಳಲ್ಲಿ ಹೆದರಿಕೆಯ ಜೊತೆಗೆ ಸುಲಭವಾಗಿ ಖಂಡನೆಗೆ ಒಳಗಾಗುತ್ತೇವೆ ಅನ್ನುವ ಗಾಬರಿ ಯಾವಾಗಲೂ ಕಾಡುತ್ತಿರುತ್ತದೆ. ಇವುಗಳಿಂದಾಗಿ ವದಂತಿಗಳು ಸುಲಭವಾಗಿ ಹರಡುತ್ತವೆ. ಆದರೆ ಅವು ಅಷ್ಟು ವ್ಯಾಪಕವಾಗಿ ಬೇರೂರುವುದಕ್ಕೆ ಬೇರೆ ಹಲವು ಕಾರಣಗಳಿವೆ. ಅವುಗಳಲ್ಲಿ ಮೂರು ಕಾರಣಗಳು ಬಹಳ ಮುಖ್ಯ.

ಮೊದಲನೆಯದಾಗಿ, ಉಳಿದವರನ್ನು ಅನುಸರಿಸಿಕೊಂಡು ಹೋಗೋಣ ಅನ್ನುವ ಹಂಬಲ ಪ್ರಶ್ನಿಸುವ ಮನಸ್ಸನ್ನು ನಿಯಂತ್ರಿಸಿಬಿಡುತ್ತದೆ. ಜನ ತಮ್ಮ ಗುಂಪಿನ ಉಳಿದವರಿಗಿಂತ ವಿಭಿನ್ನವಾಗಿದ್ದು, ನಿಯಮಗಳನ್ನು ಉಲ್ಲಂಘಿಸಿ ಶಿಕ್ಷೆ ಪಡೆಯಲು ಅಥವಾ ಬಹಿಷ್ಕತರಾಗಲು ಬಯಸುವುದಿಲ್ಲ. ತಮ್ಮ ಗುಂಪಿನ ಉಳಿದವರನ್ನು ಅನುಸರಿಸಿಕೊಂಡು, ಸುರಕ್ಷಿತರಾಗಿರಲು ಬಯಸುತ್ತಾರೆ.

ಎರಡನೆಯದಾಗಿ, ಒಂದು ನಂಬಿಕೆಯನ್ನು ಕುರಿತಂತೆ ಸಮಾನಮನಸ್ಕರು ಪರಸ್ಪರ ಚರ್ಚಿಸಿದರೂ ಅದು ಸಡಿಲವಾಗುವುದಿಲ್ಲ. ಇನ್ನೂ ಗಟ್ಟಿಯಾಗುತ್ತದೆ. ಇದೊಂದು ದೊಡ್ಡ ವಿಪರ್ಯಾಸ. ಚರ್ಚಿಸುವುದರಿಂದ ಪರಿಣಾಮ ಹೆಚ್ಚೆಚ್ಚು ಭೀಕರವಾಗುತ್ತಾ ಹೋಗುತ್ತದೆ. ಇನ್ನಷ್ಟು ಇನ್ನಷ್ಟು ಪೂರ್ವಗ್ರಹಪೀಡಿತವಾದ ವದಂತಿಗಳು ಬೆಳೆಯುತ್ತವೆ.

ಮೂರನೆಯದಾಗಿ, ಇದನ್ನು ನಿರಾಕರಿಸುವ ಹೊರಗಿನವರು ಎಷ್ಟೇ ದೊಡ್ಡ ತಜ್ಞರು, ಪರಿಣತರು ಆಗಿದ್ದರೂ ಅವರಿಂದ ಇದನ್ನು ದೂರಮಾಡುವುದಕ್ಕೆ ಆಗುವುದಿಲ್ಲ. ಬದಲಾಗಿ ವದಂತಿ ಮತ್ತಷ್ಟು ಗಟ್ಟಿಯಾಗುತ್ತದೆ. ಧ್ರುವೀಕರಣಗೊಂಡಿರುವ ಸಮಾಜದಲ್ಲಿ ಗುಂಪುಗಳಿಗೆ ಅವುಗಳದೇ ಆದ ತರ್ಕ ಇರುತ್ತದೆ. ಅದಕ್ಕೆ ತಕ್ಕಂತೆ ಅವು ಕೆಲಸ ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಕುರುಡಾಗಿ ತನ್ನ ಗುಂಪಿನ ತರ್ಕಕ್ಕೆ ಅಂಟಿಕೊಳ್ಳುತ್ತಾನೆ. ಪಕ್ಷಪಾತಿಯಾಗಿ ನಡೆದುಕೊಳ್ಳುತ್ತೇವೆ. ಪಕ್ಷಪಾತರಹಿತ ದನಿಗಳಿಗೆ ಬೇಕಾದ ಒಂದು ತಟಸ್ಥ ಸ್ಥಳವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

ಸಮರ್ಥನೆಯಿಲ್ಲದ ವಿಧಿವಾದ/ನಿರಾಶಾವಾದ

ಈ ಜಟಿಲ ಸಮಸ್ಯೆಯ ಸ್ಥೂಲವಾದ ಒಂದು ಚಿತ್ರಣ ಹೀಗಿದೆ. ಯಾವುದೇ ಸಮಾಜದಲ್ಲಿಯೂ ಸಂಪೂರ್ಣ ತಿಳಿವಳಿಕೆ ಅನ್ನುವುದು ಸಾಧ್ಯವಿಲ್ಲ. ಹಾಗೆಯೇ ಸಂಪೂರ್ಣ ಸುರಕ್ಷತೆಯೂ ಸಾಧ್ಯವಿಲ್ಲ. ಹಾಗಾಗಿ ವದಂತಿಗಳು ಅನಿವಾರ್ಯ. ತೀವ್ರ ಬಿಕ್ಕಟ್ಟಿನ ಹೊತ್ತಿನಲ್ಲಿ ಅವು ಬಹುದೊಡ್ಡ ಪೀಡೆಗಳು. ಅವುಗಳನ್ನು ವೈಚಾರಿಕವಾಗಿ ಖಂಡಿಸುವುದು ಸಾಧ್ಯವಿಲ್ಲ. ಹಾಗೆಯೇ ಸರಿಯಾದ ಮಾಹಿತಿ ಒದಗಿಸಿ ಅವುಗಳನ್ನು ತಡೆಗಟ್ಟುವುದಕ್ಕಾಗಲಿ ಮತ್ತು ಹರಡುವುದನ್ನು ನಿಧಾನಗೊಳಿಸುವುದಕ್ಕಾಗಲಿ ಸಾಧ್ಯವಿಲ್ಲ. ಹಾಗಾದರೆ ಗಾಳಿಸುದ್ದಿ ಒಂದು ಸುನಾಮಿಯೇ? ಅದರ ಮುಂದೆ ನಾವು ಅಸಹಾಯಕರೆ?

ಇಂಥ ನಿರಾಶಾವಾದಕ್ಕೆ ಖಂಡಿತಾ ಕಾರಣವಿಲ್ಲ. ವದಂತಿಗಳು ಪರಿಣಾಮಕಾರಿಯಾಗಲು ಪೂರಕವಾಗಿರುವ ಪರಿಸ್ಥಿತಿಯನ್ನು ಬದಲಾಯಿಸಬೇಕು. ಆಗ ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ. ಪೂರ್ವಗ್ರಹಗಳ ಹಿಡಿತವನ್ನು ಮತ್ತು ಸಾಮಾಜಿಕ ಧ್ರುವೀಕರಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಮಾಡಬೇಕು. ಒಂದು ಗುಂಪನ್ನು ಸಾಮುದಾಯಿಕವಾಗಿ ಕಾಡುತ್ತಿರುವ ಆತಂಕ ಮತ್ತು ಗೀಳನ್ನು ಸಮಾಧಾನದಿಂದ ಪರಿಹರಿಸಲು ಪ್ರಯತ್ನಿಸಬೇಕು. ಇಂತಹ ಕ್ರಮಗಳು ವದಂತಿಗಳಿಗೆ ಕಡಿವಾಣ ಹಾಕುತ್ತವೆ. ಆದರೆ ಇದೊಂದು ದೀರ್ಘಕಾಲೀನ ಪ್ರಕ್ರಿಯೆ. ಆದರೆ ತಕ್ಷಣಕ್ಕೆ ವದಂತಿಗಳು ಹಬ್ಬದಂತೆ ನಿಯಂತ್ರಿಸಲು ಕಾನೂನು ಕ್ರಮ ಕೈಗೊಳ್ಳಲೇಬೇಕು.

ಅಂತೆಯೇ ಪ್ರತಿಯೊಂದು ಗುಂಪಿನೊಳಗೂ ವದಂತಿಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವಂತಹ ವ್ಯಕ್ತಿಗಳು ಇರಬೇಕು. ಅಂತೆಯೇ ಈ ಅಪಾಯಕಾರಿ ವದಂತಿಗಳನ್ನು ನಿರಾಕರಿಸುವಂತಹ ವರ್ಚಸ್ವಿಗಳು ಸಮುದಾಯದ ಒಳಗೆ ಇರಬೇಕು. ಅವು ಅಂತಿಮವಾಗಿ ಅವುಗಳಿಂದ ಸುದ್ದಿ ಹರಡುವವರಿಗೂ, ಅದನ್ನು ಬಳಸಿಕೊಳ್ಳುವವರಿಗೂ ತೊಂದರೆಯಾಗುತ್ತದೆ ಎಂಬ ಅರಿವು ಮೂಡಬೇಕು. ಇಂತಹ ಅಪಾಯಕಾರಿ ವದಂತಿಗಳನ್ನು ತಡೆಗಟ್ಟುವಲ್ಲಿ ಸಮುದಾಯದ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳು ಮಹತ್ತರವಾದ ಪಾತ್ರ ವಹಿಸಬೇಕು.

ಮೂಲ: ಹಿಂದು  ಅನುವಾದ: ಟಿ.ಎಸ್.ವೇಣುಗೋಪಾಲ

*ರಾಜೀವ್ ಭಾರ್ಗವ ಅವರು ದೆಹಲಿಯ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರು.

Leave a Reply

Your email address will not be published.