ವನ್ಯಜೀವಿ ಆಶ್ರಯ ಸಾಮರ್ಥ್ಯ ಅಧ್ಯಯನ ಹೀಗಿರಲಿ

ಕಳೆದ ವರ್ಷ ನಾವು ಬೆಳೆದ 1,000ಕ್ಕಿಂತ ಅಧಿಕ ಬಾಳೆ, 90ಕ್ಕಿಂತ ಅಧಿಕ ತೆಂಗಿನ ಗಿಡಗಳನ್ನು ಆನೆ ತಿಂದು ಒಂದು ಲಕ್ಷಕ್ಕಿಂತ ಹೆಚ್ಚು ನಷ್ಟ ಆಗಿತ್ತು. ಸರಕಾರ ಕೊಟ್ಟ ಪರಿಹಾರ ಧನ ಕೇವಲ 22,000 ರೂಪಾಯಿ!

ಸಹನಾ ಕಾಂತಬೈಲು

`ವನ್ಯಗಡಿ ತಾಲ್ಲೂಕುಗಳ ರೈತರು ನೂರಾರು ವರ್ಷಗಳಿಂದ ಬೇಸಾಯ-ತೋಟಗಾರಿಕೆ ಮಾಡಿದ ಜಮೀನುಗಳಲ್ಲಿಯೇ ಇಂದೂ ಕೂಡಾ ಕೃಷಿ ಮಾಡುತ್ತಿದ್ದಾರೆ. ಕಾಡಿನಲ್ಲಿ ನಡೆದಿರಬಹುದಾದ ಯಾವುದೇ ಆಗುಹೋಗುಗಳಿಗೂ ಇವರು ಕಾರಣರಲ್ಲ. ಇವರ ಊರುಗಳಲ್ಲಿನ ಜನಸಂಖ್ಯೆ-ಕೃಷಿಭೂಮಿಯೂ ಗಣನೀಯವಾಗಿ ಬದಲಾಗಿಲ್ಲ’- ಎಂಬುದೇ ಸತ್ಯಕ್ಕೆ ದೂರವಾದ ಮಾತು. ನಾನು ಕೊಡಗು ಜಿಲ್ಲೆಯ ಚೆಂಬುಗ್ರಾಮದ ರಕ್ಷಿತಾರಣ್ಯಕ್ಕೆ ಹೊಂದಿಕೊಂಡು ಇರುವ ರೆವಿನ್ಯೂ ಭೂಮಿಯಲ್ಲಿ ಕೃಷಿ ಮಾಡಿ ಬದುಕು ಕಟ್ಟಿಕೊಂಡಿರುವ ಮಹಿಳೆ. ಬೆಳಿಗ್ಗೆ ಎದ್ದ ತಕ್ಷಣ ಕಣ್ಣಿಗೆ ಕಾಣುವುದು ರಕ್ಷಿತಾರಣ್ಯವೇ. ಕಿವಿಗೆ ಬೀಳುವುದು ಆನೆಯ ಕೂಗೇ.

ನಾನು ಇಲ್ಲಿಗೆ ಮದುವೆಯಾಗಿ ಬಂದದ್ದು ಇಪ್ಪತ್ತೊಂಬತ್ತು ವರ್ಷಗಳ ಹಿಂದೆ. ಆಗ ಇದ್ದ ಅರಣ್ಯಕ್ಕೂ, ಈಗ ಇರುವ ಅರಣ್ಯಕ್ಕೂ ಅಜಗಜಾಂತರ ಇದೆ. ಆಗ ಇಲ್ಲಿರುವ ಹೆಚ್ಚಿನ ರೈತರಿಗೆ ಇದ್ದದ್ದು ತುಂಡು ಭೂಮಿ. ಈಗ ಅದು ಎಕರೆಗಟ್ಟಲೆ ವಿಸ್ತಾರಗೊಂಡಿದೆ. ಎಲ್ಲರೂ ಒತ್ತುವರಿ ಮಾಡಿದ್ದಾರೆಂದು ಇದರರ್ಥವಲ್ಲ. ನನ್ನಂಥವರು ಬೆರಳೆಣಿಕೆಯಲ್ಲಿ ಇದ್ದಾರೆ. ಆದರೆ ಒತ್ತುವರಿ ಮಾಡಿರುವವರೇ ಹೆಚ್ಚು. ನನ್ನ ಕಣ್ಣೆದುರಲ್ಲೇ ಒತ್ತುವರಿ ನಡೆದಿದ್ದರೂ ನಾನು ಏನೂ ಮಾಡುವ ಹಾಗೆ ಇಲ್ಲ.

ಒಮ್ಮೆ ನಾನು ಈ ಬಗ್ಗೆ ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಬರೆದಿದ್ದೆ. ಪರಿಣಾಮ ಶೂನ್ಯವಾದರೂ ಊರವರ ವಿರೋಧವನ್ನಂತೂ ಕಟ್ಟಿಕೊಂಡಿದ್ದೆ. `ನಿಮ್ಮದನ್ನು ನೀವು ನೋಡಿಕೊಳ್ಳಿ. ಅದು ಬಿಟ್ಟು ನಮ್ಮ ಜಾಗದ ಬಗ್ಗೆ ಹೇಳಲು ನೀವು ಯಾರು?’ ಎಂದಿದ್ದರು. ನನ್ನ ಹಿತೈಷಿಗಳೂ `ಕತೆ, ಕವನ ಬರೆದು ಸುಮ್ಮನೆ ಇರುವುದು ಬಿಟ್ಟು ಇಂಥವನ್ನೆಲ್ಲ ಬರೆದು ಯಾಕೆ ಅಪಾಯ ತಂದುಕೊಳ್ಳಬೇಕು?’ ಎಂದು ಬುದ್ಧಿಮಾತು ಹೇಳಿದ್ದರು.

ನಿನ್ನೆ ನಮ್ಮ ವಲಯ ಅರಣ್ಯ ಅಧಿಕಾರಿ ಅವರಲ್ಲಿ `ನಮ್ಮೂರಿನಲ್ಲಿ ಒತ್ತುವರಿ ಮಾಡಿದ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲವೇ?’ ಎಂದು ಕೇಳಿದ್ದೆ. ಅದಕ್ಕೆ ಅವರು `ಅದು ಹಿಂದಿನ ಅಧಿಕಾರಿಯವರು ಇರುವಾಗ ನಡೆದದ್ದು. ಅದನ್ನು ನಾನು ಏನೂ ಮಾಡುವ ಹಾಗಿಲ್ಲ. ಮಾಡಿದರೆ ಅಲ್ಲಿಗೆ ಮೀಡಿಯಾದವರು ಓಡಿ ಬರುತ್ತಾರೆ. ಸಂತ್ರಸ್ತ ರೈತರು ಮೀಡಿಯಾದವರ ಮುಂದೆ ಅರಣ್ಯ ಇಲಾಖೆಯವರು ನಮ್ಮ ಕೃಷಿಭೂಮಿಯನ್ನು ಆಕ್ರಮಿಸಿ ನಮ್ಮ ಹೊಟ್ಟೆಗೆ ಕಲ್ಲು ಹಾಕಿದರೆಂದು ಗೋಳೋ ಎಂದು ಅಳುತ್ತಾರೆ; ಡಿಪಾರ್ಟ್ಮೆಂಟನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಇಲ್ಲದ ಉಸಾಬರಿಯನ್ನು ಮೈಮೇಲೆ ಎಳೆದು ಕೊಳ್ಳುವುದು ಯಾಕೆ? ನನಗೆ ಡಿಪಾರ್ಟ್ಮೆಂಟ್ ವಹಿಸಿದ ಕೆಲಸ ಎಷ್ಟೋ ಅಷ್ಟು ಮಾಡುತ್ತೇನೆ. ನಾನು ನನ್ನ ಈ ಅವಧಿಯಲ್ಲಿ ಒತ್ತುವರಿ ನಡೆದರೆ ಅದಕ್ಕೆ ಮಾತ್ರ ಜವಾಬ್ದಾರ’ ಎಂದು ಹೇಳಿದರು.

ನಾನು ಮತ್ತೆ ಕೇಳಿದೆ- `ಸರ್, ನಮ್ಮೂರಿನಲ್ಲಿ ಮಾತ್ರವೇ ಅರಣ್ಯ ಅತಿಕ್ರಮಣ ಆಗಿರುವುದಾ? ಬೇರೆ ಊರಿನಲ್ಲೂ ಇದೆಯಾ?’ ಅವರು ಹೇಳಿದರು- `ಇಡೀ ಕರ್ನಾಟಕದಲ್ಲೇ ಆಗಿದೆ. ಈಗ ಅರಣ್ಯ ಸಂರಕ್ಷಣಾ ಕಾಯ್ದೆ ಸಾಕಷ್ಟು ಬಲಿಷ್ಠವಾಗಿದೆ. ಹಾಗಿದ್ದಾಗ್ಯೂ ಕೆಲವು ಅಧಿಕಾರಿಗಳು ಅತಿಕ್ರಮಣ ಮಾಡುವುದು ಗೊತ್ತಿದ್ದರೂ ನೋಡಿಯೂ ನೋಡದಂತೆ ಸುಮ್ಮನೆ ಇರುವವರು ಈಗಲೂ ಇದ್ದಾರೆ. ಹಾಗೆ ನೋಡಿದರೆ ಕೊಡಗು ಜಿಲ್ಲೆ ರಾಜ್ಯದಲ್ಲಿ ಕಡಿಮೆ ಅತಿಕ್ರಮಣ ಹೊಂದಿದ ಪ್ರದೇಶ. ಶಿವಮೊಗ್ಗ, ಚಿಕ್ಕಮಗಳೂರು ಇಲ್ಲೆಲ್ಲ ಸಿಕ್ಕಾಪಟ್ಟೆ ಅತಿಕ್ರಮಣ ಆಗಿದೆ’.

ನಾನು ಇದನ್ನು ಯಾಕೆ ಪ್ರಸ್ತಾಪಿಸಿದೆನೆಂದರೆ ಎಲ್ಲ ಕಡೆಯೂ ಒತ್ತುವರಿ ಆಗಿದೆ. ಕೆಲವೆಡೆ ಕಮ್ಮಿ. ಕೆಲವೆಡೆ ಹೆಚ್ಚು. ಅಷ್ಟೇ ವ್ಯತ್ಯಾಸ. ಆನೆ ಓಡಾಡಿಕೊಂಡು ಇದ್ದ ಜಾಗದಲ್ಲಿ ನಾವು ಕೃಷಿ ಮಾಡಿದರೆ ಅದು ಅಲ್ಲಿಗೆ ಬರದೆ ಇರುತ್ತದಾ? ವನ್ಯಜೀವಿ-ಮಾನವ ಸಂಘರ್ಷಕ್ಕೆ ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಜನತೆ ಸಮನಾಗಿಯೇ ಕಾರಣ. ಇದಕ್ಕೊಂದು ಶಾಶ್ವತ ಪರಿಹಾರ ಹುಡುಕುವ ಅಗತ್ಯ ಇದೆ. ಎಲ್ಲೆಲ್ಲಿ ಅರಣ್ಯ ಅತಿಕ್ರಮಣ ಆಗಿದೆಯೋ ಅದನ್ನು ಸರ್ಕಾರ ತನ್ನ ವಶ ತೆಗೆದುಕೊಳ್ಳಬೇಕು. ಮುಂದೆ ಅತಿಕ್ರಮಣ ಆಗದಂತೆ ಅರಣ್ಯಕ್ಕೆ ಭದ್ರ ಬೇಲಿ ಹಾಕಬೇಕು. ಅರಣ್ಯ ಅಧಿಕಾರಿಗಳನ್ನೂ ಕಾಯುವ ಕಾವಲು ಸಮಿತಿ ಇರಬೇಕು.

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯ ಅಧ್ಯಯನದ ತುರ್ತು ಅಗತ್ಯವಿದೆ. ಈ ಅಧ್ಯಯನ ವನ್ಯಜೀವಿಗಳ ಸಂಖ್ಯೆ ಸೀಮಿತಗೊಳಿಸುವುದಕ್ಕಲ್ಲ. ಬದಲಾಗಿ ಅದು ಆ ಪ್ರದೇಶದಲ್ಲಿ ಯಾವ ಯಾವ ಪ್ರಾಣಿಗಳು ವಾಸಿಸುತ್ತವೆ? ಎಷ್ಟೆಷ್ಟು ಸಂಖ್ಯೆಯಲ್ಲಿ ಇದ್ದಾವೆ? ಅವುಗಳಿಗೆ ಬೇಕಾದ ಆಹಾರ, ನೀರು ಸ್ಥಳೀಯವಾಗಿ ಸಿಗುತ್ತದೆಯೇ? ಸಿಗದಿದ್ದರೆ ಅಲ್ಲಿ ಯಾವ ಯಾವ ಗಿಡಗಳನ್ನು ಬೆಳೆಸಬಹುದು? ನೀರಿನ ಮೂಲವನ್ನು ಹೇಗೆ ಅಭಿವೃದ್ಧಿ ಪಡಿಸಬಹುದು? ಅರಣ್ಯ ವ್ಯಾಪ್ತಿಯನ್ನು ಹಿಗ್ಗಿಸಲು ಅವಕಾಶ ಇದೆಯಾ? ಎಂಬ ಕುರಿತು ಇರಬೇಕೇ ಹೊರತು ವನ್ಯಜೀವಿಗಳು ಇಷ್ಟೇ ಇರಬೇಕು ಎಂದು ನಿರ್ಬಂಧ ಹೇರುವುದಕ್ಕಲ್ಲ.

ಈ ಅಧ್ಯಯನದ ಮೊದಲು ಅಥವಾ ನಂತರದಲ್ಲಿ ನಾವು ಅನಪೇಕ್ಷಿತ ಹೆಚ್ಚುವರಿಯೆಂದು ಪರಿಗಣಿಸಬೇಕಾದ ವನ್ಯಜೀವಿಗಳನ್ನು ಹಿಡಿದು ಕೂಡಿಡುವುದು, ಸಂತಾನಹರಣ ಚಿಕಿತ್ಸೆ ಮಾಡುವುದು ಅಥವಾ ಕೊಲ್ಲುವುದು ಮಾಡಲು ಅರಣ್ಯವೇನೂ ಮೃಗಾಲಯ ಅಲ್ಲ. ಇಂಥ ಪ್ರಶ್ನೆಯೇ ಹಾಸ್ಯಾಸ್ಪದ. ಅರಣ್ಯಗಳಲ್ಲಿ ಎಲ್ಲಾ ವಿಧದ ಪ್ರಾಣಿಗಳೂ, ಅವು ಎಷ್ಟೇ ಸಂಖ್ಯೆಯಲ್ಲಿರಲಿ ಸ್ವಚ್ಛಂದವಾಗಿ ಓಡಾಡುವಂತಿರಬೇಕು. ಒಂದು ವೇಳೆ ಜಾಸ್ತಿಯಾದರೆ ನಾವು ತಲೆಬಿಸಿ ಮಾಡುವ ಅಗತ್ಯ ಇಲ್ಲ. ಏಕೆಂದರೆ ಪ್ರಕೃತಿಗೆ ಅದನ್ನು ಹೇಗೆ ನಿಯಂತ್ರಣ ಮಾಡಬೇಕೆಂದು ಗೊತ್ತಿದೆ. ಈಗ ಭೂಮಿಯಲ್ಲಿ ಜನಸಂಖ್ಯೆ ಜಾಸ್ತಿಯಾಗಿರುವುದಕ್ಕೆ ಪ್ರಕೃತಿಯೇ ಕೊರೊನಾ ಎಂಬ ಮಾರಿ ಮುಖಾಂತರ, ಜಲಪ್ರಳಯದ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಲು ಹೊರಟಿದೆಯಲ್ಲ?

ವಿಜ್ಞಾನ ಎಷ್ಟೇ ಮುಂದುವರಿದರೂ ಇಂಥ ವಿಷಯಗಳಿಗೆ ಇಲ್ಲಿಯವರೆಗೆ ಏನೂ ಮಾಡಲು ಆಗಿಲ್ಲ. ಹಾಗೆಯೇ ಪ್ರಾಣಿಗಳ ವಿಷಯದಲ್ಲಿ ಕೂಡ. ಕಡಿಮೆಯಾದರೆ ಮಾತ್ರ ಯೋಚನೆ ಮಾಡಬೇಕು. ನಾವು ಮಾಡಬೇಕಾಗಿರುವುದು ಇರುವ ಆವಾಸತಾಣದಲ್ಲಿ ಅವಕ್ಕೆ ಆಹಾರ, ನೀರಿನ ಕೊರತೆ ಕಾಡಿದರೆ ಮೇವು ಬೆಳೆಸುವ, ನೀರು ಒದಗಿಸುವ ಕಾರ್ಯ. ಇಂಥ ಕೆಲಸವನ್ನು ಅರಣ್ಯದ ಅಂಚಿನಲ್ಲಿ ವಾಸಿಸುವವರೂ ಮಾಡಬಹುದು. ಅರಣ್ಯ ಇಲಾಖೆಯ ಜೊತೆ ನಾಗರಿಕರೂ ಕೈಜೋಡಿಸಬಹುದು. ನಾನು ನನ್ನ ಮನೆ ಅಂಗಳದಲ್ಲಿ ಅದರಷ್ಟಕ್ಕೆ ಹುಟ್ಟಿದ ಕಲ್ಲುಬಾಳೆ, ಹಲಸು, ಸೀತಾಫಲ, ಬೆಣ್ಣೆ ಹಣ್ಣು, ನೇರಳೆ, ಮಾವು ಇತ್ಯಾದಿ ಹಣ್ಣಿನ ಸಸಿಗಳನ್ನು ಕಿತ್ತು ಬಿಸಾಡದೆ ಮನೆ ಸಮೀಪದ ಅರಣ್ಯದಲ್ಲಿ ನೆಡುತ್ತೇನೆ. ಹಣ್ಣಿನ ಬೀಜಗಳನ್ನು ಕಾಡಲ್ಲಿ ಚೆಲ್ಲುತ್ತೇನೆ.

ಕಾಡಿನ ಮಧ್ಯೆ ಅಥವಾ ಕಾಡು ಮತ್ತು ಇನ್ನೊಂದು ಕಾಡು ಕೂಡುವ ಜಾಗದಲ್ಲಿ ಜನವಸತಿ ಇದ್ದರೆ ಮತ್ತು ಅದು ಸೂಕ್ಷ್ಮ ಪ್ರದೇಶವಾಗಿದ್ದರೆ, ಆನೆ ಕಾರಿಡಾರ್ ಆಗಿದ್ದರೆ ಅಂಥವರನ್ನು ತೆರವು ಮಾಡಿ ಪರ್ಯಾಯ ಜೀವನ ಸೌಕರ್ಯ ಒದಗಿಸಬಹುದು. ಅದು ಅವರು ಒಪ್ಪಿದರೆ ಮಾತ್ರ. ಯಾಕೆಂದರೆ ಅಲ್ಲೇ ಶತಮಾನಗಳಿಂದ ಬದುಕು ಕಟ್ಟಿಕೊಂಡವರಾದರೆ ಅಂಥವರು ಕಾಡುಪ್ರಾಣಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ. ಅಲ್ಲದೆ ಅವರಿಗೆ ಕಾಡು ಮತ್ತು ವನ್ಯಜೀವಿಗಳೊಂದಿಗೆ ಭಾವನಾತ್ಮಕ ಸಂಬಂಧವೂ ಇರುತ್ತದೆ. ನಾನು ಹೇಳುವುದು ಅರಣ್ಯವನ್ನು 15-20 ವರ್ಷಗಳಿಂದೀಚೆಗೆ ಅಕ್ರಮವಾಗಿ ಒತ್ತುವರಿ ಮಾಡಿದವರನ್ನು ಎಬ್ಬಿಸಬೇಕು ಎಂದು.

ಕಾಡಾನೆ ದಾಂಧಲೆ ಮಾಡುವ ಮಲೆನಾಡು ಜಿಲ್ಲೆಗಳಲ್ಲಿ ಜನವಸತಿ ತೆರವುಗೊಳಿಸುವ ಅಗತ್ಯವಿಲ್ಲ. ಆನೆ ಬರದಂತೆ ಅರಣ್ಯಕ್ಕೂ, ಕೃಷಿಭೂಮಿಗೂ ನಡುವೆ ಆನೆ ನಿರೋಧಕ ಕಂದಕ, ಸೋಲಾರ್ ಬೇಲಿ, ಹ್ಯಾಂಗಿಂಗ್ ಸೋಲಾರ್ ಬೇಲಿ, ರೈಲ್ವೇ ಬ್ಯಾರಿಕೇಡ್ ಇತ್ಯಾದಿ ಯಾವುದಾದರೂ ಬೇಲಿ ಹಾಕಿದರೆ ಸಾಕು. ರೈತರೇ ಹಾಕುವುದಾದರೆ ಅವರಿಗೆ ಬೇಲಿ ಹಾಕಲು ಸಬ್ಸಿಡಿ ಕೊಡಬೇಕು. ಕಳೆದ ವರ್ಷ ನಮ್ಮ ತೋಟಕ್ಕೆ ನುಗ್ಗಿದ ಆನೆಗಳು ಇಡೀ ತೋಟವನ್ನು ಧ್ವಂಸ ಮಾಡಿ ಹೋದವು.

`ಸೋಲಾರ್ ಬೇಲಿ ಹಾಕಿ. ಸಬ್ಸಿಡಿ ಕೊಡ್ತೇವೆ. ಅದು ಸಿಗುವಾಗ ಎಷ್ಟು ಸಮಯ ಆಗುತ್ತೆ ಎಂದು ಹೇಳೋಕಾಗಲ್ಲ. ಸಿಗುವುದಂತೂ ಖಂಡಿತ’ ಎಂದರು ಅರಣ್ಯ ಅಧಿಕಾರಿಗಳು. `ಸರಿ’ ಎಂದು ನಾವು ಸೋಲಾರ್ ಬೇಲಿ ಹಾಕಿದೆವು. ಪರಿಶೀಲನೆ ಮಾಡಲು ಬಂದ ಅಧಿಕಾರಿಗಳು ಹೇಳಿದರು- `ಈ ಸೋಲಾರ್ ಬೇಲಿಗೆ ಸಬ್ಸಿಡಿ ಕೊಡೋಕಾಗಲ್ಲ. ಏಕೆಂದರೆ ತಂತಿಯನ್ನು ನೀವು ಕಬ್ಬಿಣದ ಗೂಟಕ್ಕೆ ಹೆಣೆದಿಲ್ಲ ಅಲ್ಲದೆ ತಂತಿಯನ್ನು ಅಧಿಕೃತ ಮಾರಾಟಗಾರರ ಕೈಯಿಂದ ಖರೀದಿಸಿಲ್ಲ’. ಹೌದು. ನಾವು ಹಾಕಿದ್ದು ಪರಿಸರಸ್ನೇಹಿ ಸೋಲಾರ್ ಬೇಲಿ. ಕಬ್ಬಿಣದ ಗೂಟಕ್ಕೆ ಬದಲಾಗಿ ತಂತಿಯನ್ನು ಕಲ್ಲಿನ ಮತ್ತು ಮರದ ಗೂಟಕ್ಕೆ ಬಿಗಿದಿದ್ದೆವು. ಅಲ್ಲದೆ ತಂತಿಯನ್ನು ಒಬ್ಬ ಸಣ್ಣ ವ್ಯಾಪಾರಿಯಿಂದ ಖರೀದಿಸಿದ್ದೆವು. ಯಾಕೆಂದರೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ.

ಸರ್ಕಾರದ ನಿಯಮ ಪ್ರಕಾರ ಬೇಲಿ ಹಾಕಿದರೆ ಲಕ್ಷಾಂತರ ರೂಪಾಯಿ ಖರ್ಚು ಬರುತ್ತದೆ. ಮೊದಲೇ ಆನೆ ಸಂತ್ರಸ್ತರಾದ ನಾವು ಸರ್ಕಾರದ ಸಬ್ಸಿಡಿ ನಂಬಿ ಸಾಲ ಮಾಡಿ ಬೇಲಿ ಹಾಕಿ ದುಡ್ಡು ಬಾರದಿದ್ದರೆ ದೇವರೇ ಗತಿ. ಸೋಲಾರ್ ಬೇಲಿಗೆ ಸಬ್ಸಿಡಿ ಕೊಡುವ ನಿಯಮಗಳನ್ನು ಸಡಿಲಿಸಬೇಕು. ಅದು ಯಾವ ರೀತಿಯ ಸೋಲಾರ್ ಬೇಲಿಯೇ ಇರಲಿ ಅದಕ್ಕೆ ಸಬ್ಸಿಡಿ ಕೊಡಬೇಕು. ಆನೆ ತಿಂದದ್ದಕ್ಕೆ ಕೊಡುವ ಪರಿಹಾರದ ಮೊತ್ತವಂತೂ ತೀರಾ ಕಡಿಮೆ. ಕಳೆದ ವರ್ಷ ಆನೆ ನಾವು ಬೆಳೆದ 1,000ಕ್ಕಿಂತ ಅಧಿಕ ಬಾಳೆ, 90ಕ್ಕಿಂತ ಅಧಿಕ ತೆಂಗಿನ ಗಿಡ ತಿಂದು ಲಕ್ಷಕ್ಕಿಂತ ಹೆಚ್ಚು ನಷ್ಟ ಆಗಿತ್ತು. ತಿಂಗಳಿಗೆ ಅರ್ಧ ಟನ್ ಬಾಳೆಗೊನೆ ಮಾರಲು ಸಿಗುತ್ತಿದ್ದ ನಮಗೆ ಆನೆ ದಾಳಿಯ ಪರಿಣಾಮ ಈ ವರ್ಷ ತಿನ್ನುವಷ್ಟೇ ಹಣ್ಣು ಸಿಗುತ್ತಿದೆ. ಸರಕಾರ ಕೊಟ್ಟ ಪರಿಹಾರ ಧನ ಕೇವಲ 22,000 ರೂಪಾಯಿ. ಈ ಮೊತ್ತ ಆನೆ ತಿಂದ ಜಾಗದಲ್ಲಿ ಹೊಸ ಸಸಿ ನೆಡಲೂ ಸಾಕಾಗುವುದಿಲ್ಲ. ಪರಿಹಾರ ಧನವನ್ನು ಹೆಚ್ಚು ಮಾಡಬೇಕು. ಇಷ್ಟು ಮಾಡಿದರೆ ಧಾರಾಳ ಆಯಿತು. ಪರ್ಯಾಯ ವಸತಿ ಒದಗಿಸುವುದು ಬೇಡ.

ಕಾಡಿನೊಳಗೆ ಸೇತುವೆ, ಅಣೆಕಟ್ಟು, ಹೆದ್ದಾರಿ, ರೆಸಾರ್ಟ್, ಗಣಿ ಹಾಗೂ ನಾಲೆ ನಿರ್ಮಾಣದಂತಹ ದೊಡ್ಡ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರೆ ಕಾಡು ಪ್ರಾಣಿಗಳ ನೆಲೆಗೆ ತೊಂದರೆ ಉಂಟಾಗುತ್ತದೆ. ಇರುವ ಕಾಡುಗಳು ವನ್ಯಜೀವಿ ಆಶ್ರಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಇರುವಾಗ ಯಾವ ಅಭಿವೃದ್ಧಿ ಯೋಜನೆಗಳನ್ನೂ ಕಾಡಿಗೆ ಮಾರಕ ಆಗುವ ಸ್ಥಳದಲ್ಲಿ ಮಾಡಬಾರದು.

ಎರಡು ವರ್ಷಗಳ ಹಿಂದೆ ಅಸ್ಸಾಂನಲ್ಲಿ ರೈಲಿಗೆ ಸಿಕ್ಕಿ ಸತ್ತ ಆರು ಆನೆಗಳು, ವನ್ಯಜೀವಿ ಆವಾಸಸ್ಥಾನದಲ್ಲಿ ಹಾದುಹೋಗುವ ರೈಲುಗಾಡಿಗಳಿಂದ ಆಗುತ್ತಿರುವ ಅವಘಡಗಳಿಗೆ ಉದಾಹರಣೆಯಾಗಿದೆ. ಆನೆ ಯಾವುದೋ ಹೊಸ ದಾರಿಯಲ್ಲಿ ಹೋಗುತ್ತಿಲ್ಲ. ಮೊದಲು ಆನೆ ಕಾರಿಡಾರ್ (ಗಜಪಥ) ಇತ್ತು. ಈಗ ಇಲ್ಲ. ಆ ಜಾಗದಲ್ಲಿ ಶಾಲೆ, ವಸತಿ, ಹೆದ್ದಾರಿ, ರೈಲ್ವೆ ಹಳಿ ಬಂದಿದೆ. ಅಲ್ಲಿ ತಿರುಗಾಡಿಕೊಂಡಿದ್ದ ಆನೆಗಳು ಎಲ್ಲಿಗೆ ಹೋಗಬೇಕು? ಆನೆ ತನ್ನ ಪಾಡಿಗೆ ತಾನು ಹೋಗುವ ಹಾದಿಯಲ್ಲಿ ತಡೆ ಉಂಟಾಗಿದೆ.

ಅಭಿವೃದ್ಧಿ ಬೇಡವೆಂದಲ್ಲ. ಎಲ್ಲಿ ಅಭಿವೃದ್ಧಿ ಮಾಡಬೇಕೋ ಅಲ್ಲಿಯೇ ಮಾಡಬೇಕು. ಅದು ವನ್ಯಜೀವಿಗಳ ಮೇಲೆ ಪರಿಣಾಮ ಬೀರುವಂತಿರಬಾರದು. ಅಭಿವೃದ್ಧಿ ಕಾರ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆ ಎರಡೂ ಜೊತೆಯಲ್ಲೇ ಸಾಗಬೇಕು. ಅಭಿವೃದ್ಧಿ ಕಾರ್ಯ ಜಾಸ್ತಿ ಮಾಡಿ ವನ್ಯಪ್ರಾಣಿ ಸಂರಕ್ಷಣೆ ಕಡೆಗಣಿಸಿದರೆ ಸಮತೋಲನ ತಪ್ಪುತ್ತದೆ. ಈಗಲೂ ನಾವು ಶಾಶ್ವತ ಪರಿಹಾರ ಕಂಡುಹಿಡಿಯದಿದ್ದರೆ ಮುಂದೆ ವನ್ಯಜೀವಿ-ಮಾನವ ಸಂಘರ್ಷ ವನ್ಯಗಡಿ ತಾಲ್ಲೂಕುಗಳಲ್ಲಿ ಮಾತ್ರವಲ್ಲ ಪಕ್ಕದ ತಾಲ್ಲೂಕುಗಳಲ್ಲಿ ಅಷ್ಟೇ ಏಕೆ ಪಟ್ಟಣ-ನಗರಗಳಲ್ಲಿಯೂ ವ್ಯಾಪಿಸಬಹುದು.

*ಲೇಖಕಿ ಮಡಿಕೇರಿ ತಾಲೂಕು ಬಾಲಂಬಿ ಗ್ರಾಮದಲ್ಲಿ ಸ್ವತಃ ಕೃಷಿಯಲ್ಲಿ ನಿರತರಾಗಿರುವ ಗೃಹಿಣಿ; ಕವಯತ್ರಿ.

Leave a Reply

Your email address will not be published.