ವನ್ಯಜೀವಿ-ಮಾನವ ಸಂಬಂಧ ಸಂಘರ್ಷವಲ್ಲ, ಒಡನಾಟ!

ಸಾವಿರಾರು ವರ್ಷದಿಂದ ಕಾಡು ಮತ್ತು ನಾಡು ಸೌಹಾರ್ದಯುತವಾಗಿಯೇ ಬದುಕುತ್ತಿದ್ದವು. ಕಳೆದ ಐವತ್ತು ವರ್ಷಗಳಲ್ಲಿ ಇದು ಏರುಪೇರಾಗಿದೆ. ಸಮೃದ್ಧವಾದ, ವೈವಿಧ್ಯಮಯವಾದ ವನ್ಯಲೋಕ ಆ ಪ್ರದೇಶದ ಆರೋಗ್ಯದ ಸೂಚಕವೂ ಹೌದು.

ಅಖಿಲೇಶ್ ಚಿಪ್ಪಳಿ  

ಮಾನವ-ವನ್ಯಜೀವಿ ಸಂಘರ್ಷವೆಂಬ ಪದಗಳಿಗೆ ಬಹಳ ದೊಡ್ಡ ಇತಿಹಾಸವಿಲ್ಲ. ಬಲು ಸಂಕೀರ್ಣವಾದ ಈ ವಿಷಯವನ್ನು ವಿಶಾಲ ಪರದೆಯ ಮೇಲೆ ನೋಡಬೇಕಾಗುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ 2/3 ಭಾಗ ಜೀವಿವೈವಿಧ್ಯ ನಾಶವಾಗಿದೆ ಎಂಬ ಜಾಗತಿಕ ವರದಿ; ಪ್ರಾಣಿಗಳಿಂದಾಗಿ ಸತ್ತ ಮನುಷ್ಯರ ಸಂಖ್ಯೆ; ಮನುಷ್ಯರಿಂದಾಗಿ ಸತ್ತ ಪ್ರಾಣಿಗಳ ಪ್ರಮಾಣ; ಬೆಳೆಹಾನಿ; ವನ್ಯಜೀವಿಗಳ ಆವಾಸಸ್ಥಾನ ನಾಶ ಹೀಗೆ ಹತ್ತು ಹಲವು ಮಜಲುಗಳಿವೆ. ಜೀವಿವೈವಿಧ್ಯದ ತೋರಣದಲ್ಲಿ ಬಲಿಷ್ಠವಾದ ಪ್ರಾಣಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ವಿಷಯವನ್ನು ತಾರ್ಕಿಕ ಅಂತ್ಯಗೊಳಿಸಲು ಸಾಧ್ಯವಿಲ್ಲ. ನೈಸರ್ಗಿಕ ಸೇವೆ ಮತ್ತು ಆಹಾರ ಭದ್ರತೆ ಎಂಬ ಬಿಡಿಸಲಾರದ ನಂಟಿರುವ ವಿಷಯಗಳನ್ನು ಬಿಡಿ-ಬಿಡಿಯಾಗಿ ನೋಡಲು ಸಾಧ್ಯವೇ ಇಲ್ಲ.

ಬಹಳ ಮುಖ್ಯವಾದ ಚರ್ಚೆಯನ್ನು ಹುಟ್ಟುಹಾಕುವ ಮೂಲಕ ‘ಸಮಾಜಮುಖಿ’ ತನ್ನ ಬದ್ಧತೆಯನ್ನು ಎಂದಿನಂತೆ ತೋರಿದೆ. ಮೊದಲನೆಯದಾಗಿ, ವನ್ಯಜೀವಿ-ಮಾನವ ಸಂಘರ್ಷಕ್ಕೆ ಲಾಗಾಯ್ತಿನಿಂದ ಕರ್ನಾಟಕವನ್ನು ಆಳಿದ ಸರ್ಕಾರ ಮತ್ತು ಜನತೆಯೇ ನೇರ ಕಾರಣವೆಂಬುದನ್ನು ಒಪ್ಪಬೇಕೆ? ಇದಕ್ಕೆ ಹೌದು ಎಂದು ನಿಸ್ಸಂಶಯವಾಗಿ ಹೇಳಬಹುದು.

ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿ ಹೇಳುವುದಾದಲ್ಲಿ, ಇಲ್ಲಿನ ಅರಣ್ಯ ಪ್ರದೇಶ ಹಲವು ಕಾರಣಗಳಿಗಾಗಿ ವ್ಯಾಪಕವಾಗಿ ಕುಸಿದಿದೆ. ಮುಖ್ಯವಾಗಿ ಜಲಾಶಯಗಳು ಮತ್ತು ಕೃಷಿಭೂಮಿ ವಿಸ್ತರಣೆಯು ಕಳೆದ ಐವತ್ತು ವರ್ಷಗಳಲ್ಲಿ ಮಿತಿ ಮೀರಿದ್ದು, ಲಕ್ಷಾಂತರ ಹೆಕ್ಟೇರ್ ಅರಣ್ಯಗಳು ನಾಮಾವಶೇಷವಾಗಿವೆ. ಲಿಂಗನಮಕ್ಕಿ ಅಣೆಕಟ್ಟೆಯೊಂದೇ 326 ಚ.ಕಿ.ಮೀ. ಅರಣ್ಯ ಪ್ರದೇಶವನ್ನು ನುಂಗಿದೆ ಮತ್ತು ಮುಳುಗಡೆ ಸಂತ್ರಸ್ತರಿಗೆ ರ‍್ಯಾಯ ಭೂಮಿ ನೀಡುವಾಗಲೂ ಸಾವಿರಾರು ಎಕರೆ ಅರಣ್ಯ ಪ್ರದೇಶವು ಕೃಷಿಭೂಮಿಯಾಗಿ ಪರಿವರ್ತನೆಗೊಂಡಿದೆ. ಅದನ್ನು ಬಿಟ್ಟು, ಬಗರ್ ಹುಕುಂ ಎಂಬ ಬಡವರಿಗೆ ಭೂಮಿ ನೀಡುವ ಯೋಜನೆಯಿಂದ ಸುಮಾರು ಒಂದು ಲಕ್ಷ ಎಕರೆ ಜನರ ಪಾಲಾಗಿದೆ. ಅನಧಿಕೃತ ಸಾಗುವಳಿಯಿಂದ ಇದರ ದುಪ್ಪಟ್ಟು ಅರಣ್ಯ ಅರಣ್ಯೇತರವಾಗಿ ಪರಿವರ್ತನೆಗೊಂಡಿದೆ.

ಭಾರತದಲ್ಲಿ ಕಳೆದ ಶತಮಾನದ ಆದಿಭಾಗದಲ್ಲಿ 95 ಸಾವಿರ ಹುಲಿಗಳು ಇದ್ದವು ಎಂಬುದನ್ನು ಇತಿಹಾಸ ಹೇಳುತ್ತದೆ; ಬರೀ 60-70 ವರ್ಷಗಳ ಹಿಂದೆ ಸಾಗರ ತಾಲ್ಲೂಕಿನ ಹಳ್ಳಿಗಳಲ್ಲಿ ವಯಸ್ಸಾದ ಹುಲಿಗಳು ಕೊಟ್ಟಿಗೆಗೆ ಬಂದು ಜಾನುವಾರುಗಳನ್ನು ಎಳೆದುಕೊಂಡು ಹೋದ ಉದಾಹರಣೆಯನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಈಗ ಶಿವಮೊಗ್ಗ ಜಿಲ್ಲೆಯಲ್ಲಿರುವ ಹುಲಿಗಳ ಸಂಖ್ಯೆ ಮೂರು ಮತ್ತೊಂದು. ನೀರಾವರಿಗಾಗಿ ಮುಳುಗಿದ ಆನೆಬೈಲಿನ (ಎಬಿ ಸೈಟ್) ಕಾರಣದಿಂದ ಆನೆಪಥ ಶಾಶ್ವತವಾಗಿ ನಾಶವಾಯಿತು. ತೀರ್ಥಹಳ್ಳಿಯಲ್ಲಿ ಒಂದು ಒಂಟಿ ಸಲಗವಿದೆ ಎಂಬ ವರದಿ ಇದೆ; ಇದನ್ನು ಹೊರತು ಪಡಿಸಿದರೆ, ಮತ್ತೆಲ್ಲೂ ಆನೆ-ಮನುಷ್ಯರ ಸಂಘರ್ಷವಾದ ವರದಿ ಶಿವಮೊಗ್ಗ ಭಾಗದಲ್ಲಿ ಕಾಣಸಿಗುವುದಿಲ್ಲ.

ಬಹುಮುಖ್ಯವಾಗಿ, ಅವುಗಳ ಆವಾಸಸ್ಥಾನ ಸುರಕ್ಷಿತವಾಗಿದ್ದಲ್ಲಿ, ಅವು ಮನುಷ್ಯ ನಿರ್ಮಿತ ವ್ಯವಸ್ಥೆಯೊಳಗೆ ಬರಲಾರವು; ಇದು ವನ್ಯಲೋಕದ ಸಾಮಾನ್ಯ ಮನೋವಿಜ್ಞಾನ; ಮಲೆನಾಡಿನಲ್ಲಿ ಹಾಲಿ ರೈತ ಮತ್ತು ಮಂಗಗಳ ಸಂಘರ್ಷ ತಾರಕದಲ್ಲಿದೆ. ಇದಕ್ಕೆ ಕಾರಣ ಸಾಮೂಹಿಕವಾಗಿ ರೈತರು ಹಣ್ಣು ಬಿಡುವ ಮರಗಳನ್ನು ಕಡಿದು ಬರೀ ಸೊಪ್ಪು ಇರುವ ಮರಗಳಿಗೆ ಆದ್ಯತೆ ನೀಡಿದ್ದಾಗಿದೆ. ಈಗ ಈ ಸಂಘರ್ಷವನ್ನು ತಪ್ಪಿಸುವ ಸಲುವಾಗಿ ‘ಮಂಗೋಧ್ಯಾನವನ’ ಅಥವಾ ಮಂಕಿಪಾರ್ಕ್ ಮಾಡುವ ಒಂದು ತಲೆಕೆಟ್ಟ ಯೋಜನೆಯೊಂದು ಮುನ್ನೆಲೆಗೆ ಬಂದಿದೆ.

ಕಾಡು ಸಮೃದ್ಧವಾಗಿದ್ದು, ಅಲ್ಲಿ ಯಥೇಚ್ಛವಾದ ತಿನ್ನುವ ಸರಕುಗಳಿದ್ದಲ್ಲಿ, ಪ್ರಾಣಿಗಳು ಅಪಾಯಕಾರಿಯಾದ ಮಾನವನ ತಂಟೆಗೆ ಬರಲಾರವು. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲೆ ಹಲವು ಭಾಗದಲ್ಲಿ ವನ್ಯಜೀವಿಗಳ ಬೇಟೆ ಅವ್ಯಾಹತವಾಗಿ ಸಾಗಿದೆ. ಹೀಗೆ ಮಾನವ ಬಲಿಪ್ರಾಣಿಗಳನ್ನು ಕೊಂದು ತಿನ್ನುತ್ತಾ ಹೋದರೆ, ಬೇಟೆ ಪ್ರಾಣಿಗಳು ಅನಿವಾರ್ಯವಾಗಿ ರೈತರ ಜಾನುವಾರುಗಳ ಕಡೆ ಮುಖ ಮಾಡುತ್ತವೆ. ಒಂದು ಜಾನುವಾರು ಸತ್ತರೂ ಸಾಕು; ಅಲ್ಲಿಗೆ ಮಾನವ-ವನ್ಯಜೀವಿ ಸಂಘರ್ಷವೆಂಬ ಸುದ್ದಿ ಮುನ್ನೆಲೆಗೆ ಬರುತ್ತದೆ; ಬೇಟೆಪ್ರಾಣಿಯನ್ನು ಅಪಾಯಕಾರಿ ಎಂದು ಚಿತ್ರಿಸಲಾಗುತ್ತದೆ.

ವನ್ಯಜೀವಿಗಳ ಆವಾಸಸ್ಥಾನ ನಾಶ ಮಾಡುವುದರಿಂದ ಪರೋಕ್ಷವಾಗಿ ಶೋಷಿತನಾಗುವುದು ಮಾನವನೇ ಆಗಿದ್ದಾನೆ. ಸ್ವಾಭಾವಿಕವಾದ ಅರಣ್ಯ ಪ್ರದೇಶಗಳನ್ನು ಕೃಷಿಭೂಮಿಯಾಗಿ ಪರಿವರ್ತಿಸುವುದರಿಂದಾಗಿ, ಆ ಪ್ರದೇಶದಲ್ಲಿ ನೀರಿಂಗುವ ಪ್ರಮಾಣ ಕಡಿಮೆಯಾಗುತ್ತದೆ. ಮಣ್ಣುಸವಕಳಿಯಾಗಿ ಕೆರೆ-ಕುಂಟೆಗಳಲ್ಲಿ ಹೂಳು ತುಂಬುತ್ತದೆ. ಕ್ರಮೇಣವಾಗಿ ಆ ಪ್ರದೇಶ ನೀರಿನ ಅಭಾವ ಎದುರಿಸುತ್ತಾ ಬರಡಾಗುತ್ತದೆ.

ಈ ಹಿನ್ನೆಲೆಯಲ್ಲಿ ನಾವೊಂದಿಷ್ಟು ಸಮಾನಮನಸ್ಕರು ಕಳೆದ ಹತ್ತು ವರ್ಷಗಳಿಂದ 21 ಎಕರೆ ಕಾಡನ್ನು ಬೆಳೆಸುತ್ತಿದ್ದೇವೆ. ಹತ್ತು ವರ್ಷದ ಹಿಂದೆ ಈ 21 ಎಕರೆ ಪ್ರದೇಶದಲ್ಲಿ ನೀಲಗಿರಿ ಮತ್ತು ಅಕೇಶಿಯಾವನ್ನು ಬೆಳೆಸಿದ್ದರು. ಅದನ್ನು ಕಟಾವು ಮಾಡಿದ ನಂತರದಲ್ಲಿ ನಾವು ಅದನ್ನು ಕೊಂಡುಕೊಂಡೆವು ಮತ್ತು ಅಷ್ಟೂ ಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ತೊಡಗಿದೆವು. ಸಾರವಿಲ್ಲದ ಭೂಮಿಯಲ್ಲಿ ಮೊದಲು ನಾಲ್ಕು ವರ್ಷ ಗಿಡಗಳು ಏಳಲಿಲ್ಲ. ಕ್ರಮೇಣವಾಗಿ ಅಲ್ಲಿ ಮತ್ತಿ, ಹುಣಾಲು, ಕುನ್ನೇರಳೇ ಮಟ್ಟಿಗಳು ಮೇಲೆದ್ದವು; ಭೂಮಿಯ ಮೇಲ್ಪದರ ಹಸುರಿನಿಂದ ನಿಧಾನವಾಗಿ ಮುಚ್ಚುತ್ತಾ ಬಂದಿತು. ಅದರ ಹಿಂದೆಯೇ ಹಕ್ಕಿಗಳು, ಸರಿಸೃಪಗಳು, ಸ್ತನಿಗಳು ಹೀಗೆ ಒಂದೊಂದೇ ಆಗಮಿಸತೊಡಗಿದವು.

ಹೋದ ವರ್ಷದ ಗಣತಿಯಲ್ಲಿ ನಮಗೆ 159 ಬಗೆಯ ಹಕ್ಕಿಗಳು ಸಿಕ್ಕವು; ನರಿ, ಹಂದಿ, ಕಾನುಕುರಿ, ಬರ್ಕ, ಕಾಡುಬೆಕ್ಕು, ಜಿಂಕೆ, ಕಾಡುಪಾಪ, ಕಾಡೆಮ್ಮೆ ಹೀಗೆ ಆ ಪ್ರದೇಶವೀಗ ಜೀವಿವೈವಿಧ್ಯದ ತವರಾಗಿದೆ. ಬಯಲಾಗಿದ್ದ ಸಮಯದಲ್ಲಿ ಅಲ್ಲಿ ಬರೀ ನವಿಲುಗಳ ಸಂಖ್ಯೆ ಹೆಚ್ಚಿತ್ತು. ಈಗ ನವಿಲುಗಳ ಸಂಖ್ಯೆ ಕಡಿಮೆಯಾಗಿದೆ, ಅಕ್ಕ-ಪಕ್ಕದಲ್ಲಿ ಭತ್ತ ಬೆಳೆಯುವವರಿಗೆ ನವಿಲಿನ ಕಾಟ ಕಡಿಮೆಯಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂದರೆ, ನವಿಲನ್ನು ಹಿಡಿದು ತಿನ್ನುವ ಬೇಟೆ ಪ್ರಾಣಿಗಳು ನಮ್ಮ ಕಿರುಕಾಡಿಗೆ ವಲಸೆ ಬಂದವು. ಆ ಕಾಡು ಅವುಗಳಿಗೆ ನೆಲೆ ನಿಲ್ಲಲು ಪ್ರಶಸ್ತವಾಗಿತ್ತು; ಅಲ್ಲೇ ಸಿಗುವ ಅಸಂಖ್ಯ ನವಿಲುಗಳು ಅವುಗಳಿಗೆ ಆಹಾರವಾದವು. ಇದು ಜೀವಿವೈವಿಧ್ಯ ತೋರಣದ ಚಿಕ್ಕ ಉದಾಹರಣೆಯಷ್ಟೆ.

ವನ್ಯಲೋಕದ ನೈಸರ್ಗಿಕ ಸೂತ್ರಗಳು ಅದ್ಭುತವಾಗಿವೆ. ಒಂದನ್ನೊಂದು ಅವಲಂಬಿಸಿ ಬದುಕುವ ವನ್ಯಜೀವಿಗಳು ಪರಿಸರವೆಂಬ ಬೃಹತ್ ಯಂತ್ರವನ್ನು ಸಮತೋಲನದಲ್ಲಿಡಲು ಸದಾ ಕೆಲಸ ಮಾಡುತ್ತಲೇ ಇರುತ್ತವೆ. ಜೀವಿವೈವಿಧ್ಯದ ಕೊಂಡಿಯಲ್ಲಿ ಮಾನವನೂ ಇದ್ದಾನೆ; ಆದರೆ ಇವನು ಅನಿಯಂತ್ರಿತವಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಾ; ಬೇರೆ ಜೀವಿಗಳ ಪಾಲನ್ನು ಪಡೆಯುತ್ತಾ; ಅವುಗಳಿಗೆ ಕಂಟಕಪ್ರಾಯನಾಗಿದ್ದಾನೆ. ವನ್ಯಜೀವಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವುದಾಗಲೀ ಅಥವಾ ಕೊಲ್ಲುವುದಾಗಲೀ ವನ್ಯಜೀವಿ-ಮಾನವ ಸಂಘರ್ಷಕ್ಕೆ ಪರಿಹಾರವಾಗುವುದಿಲ್ಲ. ಹಾಗೆಯೇ ಒಂದು ಪ್ರದೇಶದ ಅಷ್ಟೂ ಜನರನ್ನು ಒಕ್ಕಲೆಬ್ಬಿಸಿ ಇನ್ನೊಂದು ಜಿಲ್ಲೆಗೆ ಸಾಗಹಾಕುವುದೂ ಸಮ್ಮತವಲ್ಲ.

ಸಾವಿರಾರು ವರ್ಷದಿಂದ ಕಾಡು ಮತ್ತು ನಾಡು ಸೌಹಾರ್ದಯುತವಾಗಿಯೇ ಬದುಕುತ್ತಿದ್ದವು. ಕಳೆದ ಐವತ್ತು ವರ್ಷಗಳಲ್ಲಿ ಇದು ಏರುಪೇರಾಗಿದೆ. ಸಮೃದ್ಧವಾಗಿ, ವೈವಿಧ್ಯಮಯವಾದ ವನ್ಯಲೋಕ ಆ ಪ್ರದೇಶದ ಆರೋಗ್ಯದ ಸೂಚಕವೂ ಹೌದು. ಸಂಘರ್ಷ, ರೈತರ ಸಂಕಷ್ಟ ಇತ್ಯಾದಿ ನಕಾರಾತ್ಮಕವಾದ ದೃಷ್ಟಿಕೋನವನ್ನು ಬದಲಿಸಿಕೊಂಡು; ನೈಸರ್ಗಿಕ ಸೇವೆ ನೀಡುವ ವನ್ಯಜೀವಿಗಳನ್ನು ಒಡನಾಡಿಗಳಂತೆ ಕಾಣುವ ಹೊಸ ಪದ್ಧತಿಯೊಂದನ್ನು ಹುಟ್ಟುಹಾಕಬೇಕಿದೆ. ಅದು ಹೇಗೆ ಎಂದು ನೋಡೋಣ.

ಮಲೆನಾಡಿನ ಅಡಕೆ ತೋಟದಲ್ಲಿ ಉಪಬೆಳೆಯಾಗಿ ಜಾಯಿಕಾಯಿಯನ್ನು ಬೆಳೆಯಲಾಗುತ್ತದೆ. ಕಾಯಿ ಹಣ್ಣಾಗುತ್ತಿದ್ದಂತೆ, ಮಂಗಟ್ಟೆ ಹಕ್ಕಿಗಳು ಬಂದು ಇಡೀ ಹಣ್ಣನ್ನು ನುಂಗುತ್ತವೆ; ನೇರವಾಗಿ ಇದು ರೈತನಿಗೆ ನಷ್ಟವಾದಂತೆ ತೋರುತ್ತದೆ; ಹಾಗೆ ಭಾವಿಸಿದ ರೈತರು ಇವುಗಳನ್ನು ಗುಂಡಿಕ್ಕಿ ಸಾಯಿಸುತ್ತಾರೆ. ಒಂದು ಮಂಗಟ್ಟೆ ಹಕ್ಕಿ ತನ್ನ ಸ್ವಾಭಾವಿಕವಾದ ಜೀವಿತಾವಧಿಯಲ್ಲಿ 20 ಸಾವಿರ ಅತ್ಯುತ್ತಮ ಬೀಜಗಳನ್ನು ಕಾಡಿನಲ್ಲಿ ಪ್ರಸರಣ ಮಾಡುವ ಮೂಲಕ, ಕಾಡನ್ನು ಬೆಳೆಸುವ ಕೆಲಸ ಮಾಡುತ್ತದೆ. ಮಂಗಟ್ಟೆ ಹಕ್ಕಿಗಳು ಬೆಳೆಸಿದ ಕಾಡುಗಳು ವಾತಾವರಣದಲ್ಲಿನ ಇಂಗಾಲಾಮ್ಲವನ್ನು ಹೀರಿಕೊಳ್ಳುವ ಕೆಲಸ ಮಾಡುತ್ತವೆ. ತನ್ಮೂಲಕ ಭೂಬಿಸಿಯೇರಿಕೆಗೆ ಕಡಿವಾಣ ಹಾಕುವ ಕೆಲಸವೂ ಆಗುತ್ತದೆ.

ಇದನ್ನು ವ್ಯವಹಾರಿಕವಾಗಿ ನೋಡುವ ಕ್ರಮವನ್ನು ರೂಢಿಸಿಕೊಳ್ಳಬೇಕಿದೆ. ನಿಮ್ಮ ತೋಟದಲ್ಲಿ ವೈವಿಧ್ಯಮಯ ವನ್ಯಲೋಕವಿದೆ ಅಂದರೆ ಅವು ನೈಸರ್ಗಿಕ ಸೇವೆಗಳನ್ನು ನೀಡುತ್ತಿವೆ ಎಂದು ಅರ್ಥ. ಈ ಹಂತವೇ ನಿರ್ಣಾಯಕ ಹಂತ. ನಿಸರ್ಗದ ಸೇವೆಗೆ ಬೆಲೆ ನೀಡುವ ಹೊಸ ಪದ್ಧತಿಯನ್ನು ಸರ್ಕಾರಗಳು ತಜ್ಞರ ಒಡಗೂಡಿ ಚರ್ಚಿಸಿ; ಆ ಬಾಬತ್ತನ್ನು ರೈತರಿಗೆ ನೀಡುವ ಕೆಲಸ ಮಾಡಬೇಕು. ಜಾಯಿಕಾಯಿಯಲ್ಲಿ ಕಳೆದುಕೊಂಡ ಮೊತ್ತ ಮಂಗಟ್ಟೆಯ ಬೀಜಪ್ರಸರಣದ ರೂಪದಲ್ಲಿ ರೈತರಿಗೆ ಸಿಗುವಂತಾಗಬೇಕು. ಇದೊಂದು ವಿನ್ ವಿನ್ ಮಾದರಿಯಾಗಿ ಕೆಲಸ ಮಾಡಬಲ್ಲದು.

ಭಾರತದ ಒಟ್ಟೂ ಭೌಗೋಳಿಕ ಪ್ರದೇಶದ ಪ್ರತಿಶತ 4 ಭಾಗ ಮಾತ್ರ ಅಭಯಾರಣ್ಯಗಳಿಂದ ಆವೃತವಾಗಿದೆ. ಇನ್ನುಳಿದ 96% ಪ್ರದೇಶಗಳು ಮಾನವನ ಚಟುವಟಿಕೆಗಳಿಗಾಗಿಯೇ ಮೀಸಲು. ಪಶ್ಚಿಮಘಟ್ಟಗಳೂ ಸೇರಿದಂತೆ ಈ 4% ಪ್ರದೇಶದಲ್ಲೇ ದೇಶದ 350 ನದಿಗಳು ಹುಟ್ಟುತ್ತವೆ. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ 35 ನದಿಗಳು ಇಡೀ ದಕ್ಷಿಣ ಭಾರತಕ್ಕೆ ನೀರು ಪೂರೈಸುವ ಅಕ್ಷಯ ಪಾತ್ರೆಗಳು. ಜೊತೆಗೆ ಇಡೀ ವಿಶ್ವದ ಶ್ವಾಸಕೋಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಡೀ ವಿಶ್ವವನ್ನು ಹವಾಗುಣ ಬದಲಾವಣೆಯೆಂಬ ವಿಪತ್ತು ಕಾಡುತ್ತಿರುವ ಈ ಹೊತ್ತಿನಲ್ಲಿ, ಅರಣ್ಯ ಮತ್ತು ಜೀವಿವೈವಿಧ್ಯದ ರಕ್ಷಣೆ ಪ್ರತಿಯೊಂದು ದೇಶದ ಪ್ರಥಮ ಆದ್ಯತೆ ಆಗಬೇಕು.

ಬೋನಿನಲ್ಲಿ ಕೂಡಿ ಹಾಕಿ, ದಿನಕ್ಕೆ ಇಂತಿಷ್ಟು ಮಾಂಸ ನೀಡಿ ಹುಲಿಯನ್ನು ಸಾಕುವುದು ಹುಲಿರಕ್ಷಣೆಯ ವಿಧಾನವಲ್ಲ. ಝೂನಲ್ಲಿ ಕೂಡಿ ಹಾಕಿಡುವುದರಿಂದಾಗಿ ಒಂದಿಷ್ಟು ಆದಾಯ ಬರಬಹುದೇ ವಿನಾ ನೈಜವಾದ ಹುಲಿಯ ಸಂರಕ್ಷಣೆ ಎಂದು ಈ ವಿಧಾನಕ್ಕೆ ಹೇಳಲು ಬರುವುದಿಲ್ಲ. ಅಲ್ಲದೆ ಕೃತಕವಾಗಿ ಹುಲಿಯನ್ನೋ ಅಥವಾ ಇನ್ಯಾವುದೋ ಪ್ರಾಣಿಯನ್ನು ಸಾಕುವುದು ಆರ್ಥಿಕವಾಗಿ ಲಾಭದಾಯಕವೂ ಅಲ್ಲ ಹಾಗೂ ಮಾನವೀಯತೆಯೂ ಅಲ್ಲ. ಬೋನಿನಲ್ಲಿ ಸಾಕುವುದೆಂದರೆ, ಅದು ಜೈಲಿನಂತೆಯೇ ಆಗುತ್ತದೆ. ಸ್ವಾತಂತ್ರ್ಯವಿಲ್ಲದ ಯಾವುದೇ ಜೀವಚರವೂ ತನ್ನ ಬದುಕನ್ನು ಸಂತೋಷವಾಗಿ ಕಳೆಯಲಾರದು. ಹತ್ತಾರು ಚ.ಕಿ.ಮೀ ಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಹುಲಿಯನ್ನು 10 ಅಡಿ ಅಳತೆಯ ಬೋನಿನಲ್ಲಿ ಕೂಡಿ ಹಾಕಿದಾಗ ಹುಲಿಯಿಂದ ನಿಸರ್ಗಕ್ಕೆ ಸಿಗಬೇಕಾದ ನೈಸರ್ಗಿಕ ಸೇವೆಗಳು ದೊರೆಯುವುದಿಲ್ಲ. ಈ ಸೇವೆಯ ಕೊರತೆಯಿಂದ ಬಳಲುವುದು ಮತ್ತೆ ನಿಸರ್ಗ ಮತ್ತು ಅದರ ಮಕ್ಕಳಾದ ಮನುಷ್ಯರು.

ಉದಾಹರಣೆಯಾಗಿ ಹೇಳುವುದಾದಲ್ಲಿ, ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿದ ಲಿಂಗನಮಕ್ಕಿ ಜಲಾಶಯದ ಕಾರಣಕ್ಕೆ ಮುಳುಗಡೆಯಾಗಿ ಸಂತ್ರಸ್ಥರಾದ 33 ಕುಟುಂಬಗಳಿಗೆ ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಮರುವಸತಿ ಹೆಸರಿನಲ್ಲಿ 1962ರಲ್ಲಿ ಒಟ್ಟು ನೂರು ಎಕರೆ ಜಮೀನನ್ನು ಆಗಿನ ಸರ್ಕಾರ ಕೊಡಮಾಡಿತು. ಉಳಿಯಲು ಸ್ಥಳ ಸಿಕ್ಕಿದರೆ ಸಾಕು ಎಂಬ ಮನೋಸ್ಥಿತಿಯಲ್ಲಿದ್ದ ಆ ಕುಟುಂಬಗಳು ದುರ್ಗಮ ಪ್ರದೇಶದಲ್ಲಿ ವಾಸಿಸತೊಡಗಿದರು. ಸರ್ಕಾರ 1974ರಲ್ಲಿ 395 ಚ.ಕಿ.ಮಿ. ಪ್ರದೇಶವನ್ನು ಶೆಟ್ಟಿಹಳ್ಳಿ ಅಭಯಾರಣ್ಯವೆಂದು ಘೋಷಣೆ ಮಾಡಿತು. ನಂತರದ ಬಿಗಿಯಾದ ವನ್ಯಜೀವಿ ಸಂರಕ್ಷಣಾ ಕಾನೂನುನಿಂದಾಗಿ ಅವರಿಗೆ ಸಿಗಲೇಬೇಕಾದ ಸೌಲಭ್ಯ ಸಿಗದೇಹೋಯಿತು. ಹಾಲಿ ಪ್ರದೇಶದಲ್ಲಿ 85 ಕುಟುಂಬಗಳು ಸುಮಾರು 400 ಎಕರೆ ಪ್ರದೇಶದಲ್ಲಿ ವಾಸಿಸುತ್ತಿವೆ.

ಇತ್ತ ಅಭಯಾರಣ್ಯವೂ ಉಳಿಯಬೇಕು ಅತ್ತ ಅಲ್ಲಿ ವಾಸಿಸುವ ಜನರ ಬದುಕೂ ಸಹ್ಯವಾಗಬೇಕು ಎಂದರೆ, ಒಂದೋ ಅಭಯಾರಣ್ಯವನ್ನೇ ರದ್ದು ಮಾಡಿ, ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಆದರೆ, ಇದು ಕಾರ್ಯಸಾಧುವಲ್ಲ. ಅಭಯಾರಣ್ಯದ ವ್ಯಾಪ್ತಿಯನ್ನು 4% ನಿಂದ 3%ಗೆ ಇಳಿಸುವುದು ಮನಕುಲದ ಹಿತದೃಷ್ಟಿಯಿಂದ ಆತ್ಮಹತ್ಯಾಕಾರಿಯಾಗಿದೆ. ಇನ್ನೊಂದು ವಿಧಾನವೆಂದರೆ, ಅಲ್ಲಿ ಹಾಲಿ ವಾಸಿಸುತ್ತಿರುವ ಜನರನ್ನು ನಾಗರಿಕ ಸಮಾಜದ ಸೌಲತ್ತುಗಳನ್ನು ನೀಡಿ, ಅವರಿಗೆ ಬದುಕಲು ಬೇಕಾದ ಗೌರವಯುತವಾದ ಪರ್ಯಾಯ ಮಾರ್ಗಗಳನ್ನು ನೀಡಿ, ಅಭಯಾರಣ್ಯದ ವ್ಯಾಪ್ತಿಯಿಂದ ಅವರನ್ನು ಹೊರಗೆ ತರುವುದು. ಇದನ್ನು ಮಾಡದಿದ್ದಲ್ಲಿ ಇಲ್ಲಿನ ಜನರ ಕಥೆಯೂ ಬೋನಿನೊಳಗಿನ ಹುಲಿಯಂತೆ ಆಗುವುದು.

ಬಹಳ ಹಿಂದೆ ಕಾಫಿ ಬೆಳೆಯುವ ರೈತರು ಕಬ್ಬೆಕ್ಕುಗಳನ್ನು ಪೀಡೆ ಎಂದು ಭಾವಿಸುತ್ತಿದ್ದರು. ಹಲವು ವರ್ಷಗಳ ಅನುಭವ, ಸಂಶೋಧನೆಗಳಿಂದ ಕಬ್ಬೆಕ್ಕುಗಳ ಉಚ್ಚಿಷ್ಠದಿಂದ ಹೊರಬಂದ ಕಾಫಿ ಬೀಜಗಳು ಅತ್ಯುತ್ತಮ ಕಾಫಿಯನ್ನು ನೀಡುತ್ತವೆ ಎಂಬ ಹೊಸ ವಿಷಯ ತಿಳಿಯಿತು. ಹಾಲೀ ಕಬ್ಬೆಕ್ಕಿನ ಉಚ್ಚಿಷ್ಠದಿಂದ ಹೊರಬಂದ ಕಾಫಿ ಬೀಜಗಳಿಗೆ ಅತಿ ಹೆಚ್ಚು ದರವಿದೆ. ಅಂದರೆ ಒಂದಕ್ಕೆ ಹತ್ತು ಪಟ್ಟು. ಕಾಫಿ ತೋಟದ ಮಾಲೀಕರು ತಮ್ಮ ತೋಟಗಳಿಗೆ ಹೆಚ್ಚೆಚ್ಚು ಕಬ್ಬೆಕ್ಕು ಬರಲಿ ಎಂದೇ ಈಗ ಬಯಸುತ್ತಾರೆ. ಇದರ ಹೊರತಾಗಿಯೂ, ರೈತ ಸಮುದಾಯವೇ ಕೆಲವೊಂದು ನೂತನ ಕ್ರಮಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ತೋಟದ ಬದುಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಬೇಕಾದ ಸಸ್ಯಗಳನ್ನು, ಮರಗಳನ್ನು ಬೆಳೆಸುವುದು. ಬಾಳೆ ತೋಟದ ಹೊರಭಾಗದಲ್ಲೂ ಒಂದಿಷ್ಟು ಬಾಳೆ ನೆಟ್ಟು ಅದನ್ನು ವನ್ಯಜೀವಿಗಳಿಗಾಗಿಯೇ ಮೀಸಲಿಡುವುದು ಇತ್ಯಾದಿಗಳು.

ಮಹಾನ್ ವಿಜ್ಞಾನಿ ಐನ್‌ಸ್ಟೀನ್ ಹೇಳಿದ ಮಾತು ಈಗ ನಮಗೆಲ್ಲರಿಗೂ ಮತ್ತೊಮ್ಮೆ ಮನವರಿಕೆಯಾಗಬೇಕು. ಜೇನು ಸಂತತಿ ಅಳಿದ ಕೆಲವೇ ವರ್ಷಗಳನ್ನು ಮನುಕುಲವೂ ಅಳಿಯಲಿದೆ ಎಂದು ಆಗಲೇ ಅವರು ಹೇಳಿದ್ದರು. ವನ್ಯಲೋಕದ ಕುರಿತಾಗಿಯೂ ಈ ಮಾತು ಅನ್ವಯಿಸುತ್ತದೆ. ಏಕೆಂದರೆ ನಾವು ಮನುಷ್ಯರು ಸದಾ ಪ್ರಕೃತಿ ಮತ್ತು ವನ್ಯಜೀವಿಗಳ ಮೇಲೆ ಅವಲಂಬಿತರು.

ಪುನರ್ವಸತಿ ಆರ್ಥಿಕವಾಗಿ ಲಾಭದಾಯಕ!

ಶಿವಮೊಗ್ಗದ ಹಿರಿಯ ರಾಜಕಾರಣಿಯೊಬ್ಬರು, 20.11.2019ರಂದು ಶೆಟ್ಟಿಹಳ್ಳಿ ಅಭಯಾರಣ್ಯದ ಒಳಗಿನ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿಯ ಜನರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು, ಅವರನ್ನು ಯಾವುದೇ ಕಾರಣಕ್ಕೂ ಬೇರೆ ಕಡೆ ಸ್ಥಳಾಂತರ ಮಾಡಬಾರದು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅಂದರೆ, ಇದರ ಸ್ಪಷ್ಟವಾದ ಅರ್ಥವೇನು? ಈಗ ಮೂರು ತಲೆಮಾರುಗಳಿಂದ ಕಷ್ಟಕರ ಜೀವನ ಸಾಗಿಸಿದ ಅಲ್ಲಿನ ನಿವಾಸಿಗಳು ಖಾಯಂ ಆಗಿ ಮುಂದಿನ ತಲೆಮಾರಿಗೂ ತಮ್ಮ ಕಷ್ಟಗಳನ್ನು ವಿಸ್ತರಣೆ ಮಾಡಿಕೊಳ್ಳಬೇಕು, ಅವರಿಗೆ ಯಾವುದೇ ಕಾರಣಕ್ಕೂ ನಾಗರಿಕ ಸೌಲಭ್ಯಗಳು ಸಿಗಬಾರದು ಎಂದೇ ಆಗುತ್ತದೆ.

ಇದೇ ಹೊತ್ತಿನಲ್ಲಿ, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 1350 ಕೋಟಿ ರೂಪಾಯಿಗಳನ್ನು ಕಂಪಾ ಮೂಲಕ ನೀಡಿದೆ. ಇದರಲ್ಲಿ, 80% ಹಣವನ್ನು ಅಭಯಾರಣ್ಯದಲ್ಲಿ ಮೂಲಸೌಕರ್ಯಗಳಿಲ್ಲದೇ ಸಂಕಷ್ಟದಲ್ಲಿರುವ ಕುಟುಂಬಗಳ ಪರ್ಯಾಯ ವಸತಿಗೆ ಮತ್ತು ಅವರ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಹೇಳಿದೆ. ಆ ಭಾಗದ ಜನರೂ ನಮಗೆ ಅಭಯಾರಣ್ಯದಿಂದ ಹೊರಗೆ ಸೂಕ್ತ ನೆಲೆ ಕಲ್ಪಿಸಿಕೊಡಿ ಎನ್ನುವ ಮನವಿ ನೀಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ಗೌರವಯುತವಾಗಿ ಬದುಕುವ ಬದಲೀ ವ್ಯವಸ್ಥೆಯನ್ನು ಕಲ್ಪಿಸಬೇಕು ಮತ್ತು ಇದು ಅತ್ಯಂತ ಮಾನವೀಯ ನಡೆಯಾಗಬಲ್ಲದು.

ಶಿವಮೊಗ್ಗ ನಗರದ 6 ಲಕ್ಷ ಜನರಿಗೆ ಇವತ್ತು ಶುದ್ಧಗಾಳಿ ಹಾಗೂ ನೀರು ಲಭ್ಯವಿದೆ ಎಂದರೆ ಅದು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ಕಾರಣಕ್ಕೆ. ಅಭಯಾರಣ್ಯದಲ್ಲಿರುವ 85 ಕುಟುಂಬಗಳಿಗೆ ಪುನರ್ವಸತಿ ಮಾಡುವುದು ಸರ್ಕಾರಕ್ಕೆ ಆರ್ಥಿಕವಾಗಿಯೂ ಲಾಭದಾಯಕ.

*ಲೇಖಕರು ಸಾಗರ ಬಳಿಯ ಚಿಪ್ಪಳಿ ಗ್ರಾಮದವರು. ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಪರಿಸರ ರಕ್ಷಣೆಯಲ್ಲಿ ನಿರತ ಸ್ವ್ಯಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ. ಚಾರ್ವಾಕ ವಾರಪತ್ರಿಕೆಯಲ್ಲಿ ಉಪಸಂಪಾದಕರು.

Leave a Reply

Your email address will not be published.