ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಬೇಕು..

ನಮ್ಮ ಜೀವನ ವನ್ಯಜೀವಿಗಳೊಂದಿಗೆ, ಪರಿಸರದೊಂದಿಗೆ ಇರಬೇಕು. ಇಲ್ಲಿ ಎಲ್ಲರಿಗೂ ಜೀವಿಸಲು ಹಕ್ಕಿದೆ. ಮುಖ್ಯವಾಗಿ ವನ್ಯಜೀವಿಗಳಿಗೆ. ಏಕೆಂದರೆ ಅವುಗಳಿಲ್ಲದಿದ್ದರೆ ನಾವಿಲ್ಲ. ಆದರೆ ನಾವಿಲ್ಲದಿದ್ದರೆ ಅವು ಸಂತಸದಿಂದ ಬದುಕುತ್ತವೆ!

ಆರ್.ಕೆ.ಮಧು   

ಚಾಮರಾಜನಗರ ಜಿಲ್ಲೆ ವಿಸ್ತಾರವಾದ ಜೀವವೈವಿಧ್ಯಗಳ ನೆಲೆಯ ಹೊಂದಿರುವ ಅಭೇದ್ಯ, ಅದ್ಭುತ ಅರಣ್ಯಗಳ ಆಗರ. ಅಂತರ ರಾಜ್ಯಗಳೊಂದಿಗೆ ಹುಲಿ ಪ್ರದೇಶಗಳನ್ನು ಹೊಂದಿದ್ದು ಮಹದೇಶ್ವರ ಬೆಟ್ಟದಿಂದ ಬಂಡೀಪುರದವರೆಗೆ ವನ್ಯಜೀವಿಗಳ ನೆಮ್ಮದಿಗೆ ಬಹಳ ಹಿಂದಿನಿಂದಲೂ ನೆಲೆ ಒದಗಿಸಿತ್ತು. ಆದರೆ ಇಂದು ವನ್ಯಜೀವಿಗಳ ನೆಮ್ಮದಿಗೆ ಭಂಗಬಂದಿದೆ. ಅವೂ ಸಂಘರ್ಷ ನಡೆಸಬೇಕಿದೆ. ನೆಮ್ಮದಿಯ ಹುಡುಕಾಟದಲ್ಲಿ ಸಂಕಷ್ಟಕ್ಕೆ ಸಿಲುಕಿವೆ.

ಬಿಳಿಗಿರಿರಂಗನ ಬೆಟ್ಟ ವಿಶಿಷ್ಟವಾದ ಪೂರ್ವ ಹಾಗೂ ಪಶ್ಚಿಮಘಟ್ಟಗಳ ಸಂಗಮದ ಸ್ಥಳ. ಈ ಜೀವವೈವಿಧ್ಯದ ತಾಣ ನಮ್ಮ ಹೆಮ್ಮೆ. ಇದೂ ಕೂಡ ಇಂದು ವೈರುಧ್ಯದತ್ತ ಹೊರಳಿದೆ. ಪ್ರಾಕೃತಿಕ ಸಂಪತ್ತು ಹಣದ ಕಾರ್ಖಾನೆಗಳಾಗಿವೆ. ಕಾಡಿನಿಂದ ಹಣದೋಚುವ ಸಂಸ್ಕೃತಿ ಶುರುವಾಗಿದೆ.

ಒಂದೇ ಜಿಲ್ಲೆಯಲ್ಲಿ 2 ಹುಲಿ ಸಂರಕ್ಷಿತ ಕೇಂದ್ರ ಬೇರೆಲ್ಲೂ ಇಲ್ಲ. ನಮ್ಮ ಬಿ.ಆರ್.ಟಿ. ಹಾಗೂ ಬಂಡೀಪುರಗಳು ಹುಲಿ ಸಂರಕ್ಷಿಸುತ್ತಿವೆ. ಅಲ್ಲದೇ ಅತಿ ಅಪರೂಪದ ಹನಿ ಬ್ಯಾಜರ್, ಹೈನಾ, ತೋಳಗಳೂ ನಮ್ಮಲ್ಲಿ ನೆಲೆಸಿವೆ.

ವನ್ಯಜೀವಿಗಳಲ್ಲಿ ಅಲಿಖಿತ ನಿಯಮವಿದೆ. ಇಲ್ಲಿ ಆ ಜೀವಿಗಳು ಅನುದಿನ ಸಜೀವವಾಗಿರಲು ಸಂಘರ್ಷ ಮಾಡಬೇಕು. ಬಲಿಷ್ಠನಾದವನಿಗೆ ಉಳಿಗಾಲ. ಆದರೆ ಇಂದು ಅವು ಕೇವಲ ತಮ್ಮೊಡನಲ್ಲದೇ ಮಾನವರೊಡನೆಯೂ ಸಂಘರ್ಷ ಮಾಡಬೇಕಾದುದು ವಿಪರ್ಯಾಸ. ಮಾನವನ ಅತಿ ಅವಲಂಬನೆ, ಕಾಡಿನಲ್ಲಿ ಇರುವ ದೊಡ್ಡ ಕಾಮಗಾರಿಗಳು, ಡ್ಯಾಂ, ವಿದ್ಯುತ್ ಸ್ಥಾವರ, ರಸ್ತೆಗಳು, ಗಣಿಗಾರಿಕೆ  ವನ್ಯಜೀವಿಗಳನ್ನು ವಿವಶಮಾಡಿವೆ.

ಸಾಮಾನ್ಯವಾಗಿ ಬೇಸಿಗೆ ಬಂದಾಗ ವನ್ಯಜೀವಿಗಳು ವಲಸೆ ಹೋಗುತ್ತವೆ. ಇದು ಅನಾದಿಕಾಲದಿಂದ ನಡೆದು ಬಂದ ಕ್ರಮ. ಅವು ತಮ್ಮ ಆವಾಸದಿಂದ ಆಹಾರ ಅರಸಿ ಬೇರೊಂದು ಕಾಡಿಗೆ ವಲಸೆ ಬರುವ ಮಾರ್ಗ ಇಂದು ತುಂಡಾಗಿದೆ. ಅಲ್ಲಿ ವಸತಿ, ಊರು, ಡ್ಯಾಂ ಮುಂತಾದವುಗಳಿಂದ ಅವುಗಳ ವಲಸೆಗೆ ಅಡ್ಡ ಪಡಿಸಿ ಅವು ಊರಿಗೆ ಬರುವಂತಾಗಲು ನಾವು ಕಾರಣರಾಗಿದ್ದೇವೆ. ಉದಾಹರಣೆಗೆ ಕಣಿಯನಪುರ ಕಾಲೋನಿ. ಬಂಡೀಪುರದಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಆನೆ ದಾರಿ. ಇದು ಇಂದು ಕಿರಿದಾಗಿದೆ. ಆನೆಗೆ ಅಡ್ಡಗಾಲಾಗಿದೆ. ಅಲ್ಲಿ ಬೆಳೆದಿರುವ ಬೆಳೆಗಳು ವನ್ಯಜೀವಿಗಳನ್ನ ಆಕರ್ಷಿಸುತ್ತವೆ. ಅವು ಒಮ್ಮೆ ದಾಳಿ ಮಾಡಿದರೆ ಮತ್ತೆ ಮತ್ತೆ ಬರುವ ಜೀವಿಗಳು. ಆಹಾರ ಅರಸಿ ಮತ್ತೆ ಬರುತ್ತಿರುತ್ತವೆ.

ಸಾಮಾನ್ಯವಾಗಿ ಮಾನವರೊಡನೆ ಮುಖಾಮುಖಿಯಾಗುವ ಜೀವಿಗಳೆಂದರೆ ಹುಲಿ, ಚಿರತೆ, ಆನೆ ಹಾಗೂ ಕರಡಿ. ಆನೆಗಳ ವಲಸೆ ಮಾರ್ಗದಂತೆಯೇ ಹುಲಿಗಳ ಆವಾಸಸ್ಥಾನ ಇಂದು ಅವ್ಯವಸ್ಥೆ ಹೊಂದಿದೆ. ಅಸಡ್ಡೆ ಹೊಂದಿದೆ. ಅವು ಏಕಾಂತವಾಸಿಗಳು. 12 ಚ.ಕಿ.ಮಿ.ಗೆ ಒಂದು ಹುಲಿ ವಾಸಿಸುತ್ತದೆ. ಆದರೆ ಇಂದು ಹುಲಿಗಳ ಸಂಖ್ಯೆ ಜಾಸ್ತಿಯಾಗಿದ್ದರೂ ಕಾಡಂಚಿನಲ್ಲಿ ಜಾನುವಾರುಗಳು ಹುಲಿಯನ್ನು ಆಕರ್ಷಿಸುತ್ತಿವೆ. ಕಾಡಿನಲ್ಲಿ ಗಾಯಗೊಂಡ, ವಯಸ್ಸಾದ ಹುಲಿಗಳು ಊರ ಹೊರವಲಯದಲ್ಲಿ ಸುಲಭವಾಗಿ ದೊರಕುವ ಸಾಕುಪ್ರಾಣಿಗಳ ಮೇಲೆ ಹಾವಳಿ ಮಾಡಿ ಸಂಘರ್ಷಕ್ಕೆ ಕಾರಣವಾಗುತ್ತವೆ.

ಕಾಡಂದರೆ ಬರೀ ರಕ್ಷಿತಾರಣ್ಯ ಮಾತ್ರವಲ್ಲ. ಊರ ಹೊರವಲಯದ ಬೆಟ್ಟಗುಡ್ಡಗಳೂ ವನ್ಯಜೀವಿ ಆಶ್ರಯತಾಣ. ಚಿರತೆ ಕರಡಿಗಳು ಅಲ್ಲಿ ನೆಲೆಸಿರುತ್ತವೆ. ಆದರೆ ಇಂದು ನಮ್ಮ ನಾಗರಿಕತೆ ಎಗ್ಗಿಲ್ಲದೇ ಮುನ್ನುಗ್ಗಿ ವನ್ಯಜೀವಿಗಳ ಜೀವನವನ್ನು ಸಂಕಷ್ಟಗೊಳಿಸಿವೆ. ಇಲ್ಲೂ ಗಣಿಗಾರಿಕೆ, ಕ್ವಾರಿಯ ಡೈನಮೈಟ್ ಸದ್ದು ಇವುಗಳ ಸದ್ದಡಗಿಸುತ್ತಿವೆ. ಇವು ಊರಿನತ್ತ ಮುಖಮಾಡುವಂತಾಗಿದೆ. ಏಕೆಂದರೆ ಕಾಡಿನ ದಾರಿ ಎಂದೋ ಕಾಣದಾಗಿದೆ.

ಕಾಡಿನಲ್ಲೂ ಅವು ನೆಮ್ಮದಿಯಿಂದ ಇರುವಂತಿಲ್ಲ. ಅತಿವೇಗದ ವಾಹನಗಳ ಸಂಚಾರ ಅಪಘಾತಕ್ಕೆ ಕಾರಣವಾಗುತ್ತಿದೆ. ವಾಣಿಜ್ಯಗೊಂಡ ಕಾಡಿನ ಚಟುವಟಿಕೆ; ಎಲ್ಲೆಡೆ ರೆಸಾರ್ಟ್, ಇಕೋ ಟೂರಿಸಂಗಳು, ಹೋಂಸ್ಟೇಗಳು. ಇದಕ್ಕೆ ತಾಜಾ ಉದಾಹರಣೆ ಬಂಡೀಪುರದಿಂದ ಕೇರಳ ಮಾರ್ಗ. ಅವರಿಗೆ ಅತಿ ಸಮೀಪದ ಪರ್ಯಾಯ ಮಾರ್ಗವಿದ್ದರೂ ಅವರ ವಿರೋಧ ಇನ್ನೂ ನಿಂತಿಲ್ಲ. ಇಲ್ಲಿ ಆನೆಯನ್ನೇ ಲಾರಿಯೊಂದು ಡಿಕ್ಕಿಹೊಡೆದು ಕೊಂದಿತ್ತು. ಬೇರೆ ಜೀವಿಗಳು ಲೆಕ್ಕವಿಲ್ಲದೇ ಅಪಘಾತದಿಂದ ಸಾಯುತ್ತಿವೆ.

ಹೀಗೆ ಎಗ್ಗಿಲ್ಲದೇ ನಡೆಯುತ್ತಿರುವ ಅರಣ್ಯೇತರ ಚಟುವಟಿಕೆಯಿಂದ ಮಾನವ-ವನ್ಯಜೀವಿ ಸಂಘರ್ಷ ಪ್ರತಿ ವರ್ಷ ಹೆಚ್ಚುತ್ತಿದೆ. ಕಾಡಂಚಿನಲ್ಲೇ ಇರುವ ಕೃಷಿ ಜಮೀನುಗಳು ಅವುಗಳ ಅಸಮರ್ಪಕ ನಿರ್ವಹಣೆ, ಜಮೀನು ಎಂದರೂ ಅದು ನಿರ್ವಹಣೆ ಇಲ್ಲದೇ ಕಾಡಿನ ರೀತಿ ಇರುತ್ತದೆ. ಹಾಗೆಯೇ ವನ್ಯಜೀವಿಗಳು ಊರಿಗೆ ಬಂದಾಗ ಅದರೊಂದಿಗಿನ ನಮ್ಮ ನಡವಳಿಕೆ ಅವುಗಳ ಹಾಗೂ ನಮ್ಮ ಜೀವಕ್ಕೆ ಹಾನಿಕಾರಕ. ನಾವು ನಿಶ್ಯಬ್ದವ ಮರೆತು ತಮಾಷೆ ಪಡುತ್ತೇವೆ. ಕಿರುಚಾಟ, ರಂಪಾಟದಿಂದ ಪ್ರಾಣಿಗಳು ನಮ್ಮ ಮೇಲೆ ಎರಗುತ್ತವೆ. ಜನ ಸುಮ್ಮನಿದ್ದರೆ ಅದನ್ನು ಬೇಗ ಸೆರೆಹಿಡಿಯಬಹುದು. ಹಾಗೆಯೇ ಪ್ರಾಣಿಯನ್ನು ಸೆರೆಹಿಡಿದ ಆ ಜಾಗವನ್ನು ಮತ್ತೆ ಇನ್ನೊಂದು ಪ್ರಾಣಿ ಆಕ್ರಮಿಸಿಕೊಳ್ಳುತ್ತದೆ. ಅಂದರೆ ಒಂದು ಚಿರತೆಯನ್ನು ಒಂದು ಜಾಗದಿಂದ ಸೆರೆಹಿಡಿದರೆ ಆ ಪ್ರದೇಶವನ್ನು ಸೇರಲು 8 ಚಿರತೆ ಸಿದ್ಧವಾಗಿ ಇರುತ್ತದೆ. ಇದು ಸಾಮಾನ್ಯ ಜನರಿಗೆ ತಿಳಿದಿಲ್ಲ. ಹಾಗೂ ಪ್ರಾಣಿಗಳನ್ನು ಸೆರೆಹಿಡಿಯುವುದು ಈ ಸಮಸ್ಯೆಗೆ ಪರಿಹಾರವಲ್ಲ.

ಹಾಗೆಯೇ ಈ ಸಂಘರ್ಷದ ರೋಷ ಮಾನವನ ಕೇಡಿನ ಮಾರ್ಗದ ರೂಪದಲ್ಲಿ ಕಾಡಿಗೆ ಬೆಂಕಿ ಹಾಕುವುದು. ಇತ್ತೀಚೆಗೆ ಬಂಡಿಪುರದಲ್ಲಿ ಬಿದ್ದ ಬೆಂಕಿ ಒಂದು ವಾರವಾದರೂ ಆರದೆ ಅಪಾರ ನಷ್ಟವಾಗಿ ಒಬ್ಬ ಸಿಬ್ಬಂದಿ ಕೂಡ ಮರಣ ಹೊಂದಿದರು. ಅಲ್ಲಿ ಗಿಡಬೆಳೆಸುವ ಪ್ರಯತ್ನ ಇನ್ನೂ ಫಲಕಾರಿಯಾಗಿಲ್ಲ. ಅದು ಸಾಧುವೂ ಅಲ್ಲ. ಸುಲಭವೂ ಅಲ್ಲ. ಈಗ ಆ ಜಾಗದಲ್ಲಿ ಹುಲಿಗಳ ಹಾವಳಿ ಜಾಸ್ತಿಯಾಗಿದೆ. ಏಕೆಂದರೆ ಅಲ್ಲಿದ್ದ ಪ್ರಾಣಿಗಳು ಬೇರೆಡೆ ವಲಸೆಹೋಗಿವೆ. ಹುಲಿಗಳೂ ಆಹಾರ ಅರಸಿ ಊರಿಗೆ ಬರುವಂತಾಗಿದೆ.

ಅಪಾರ ಪ್ರಮಾಣದ ಕಳ್ಳಬೇಟೆ, ವಿಷ ಹಾಕುವುದು, ಬೆಳೆಯ ರಕ್ಷಣೆಗೆ ವಿದ್ಯುತ್ ಹರಿಸುವುದು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಹಾಗೆಯೆ ಕಾಡಿನ ಜಾತ್ರೆಗಳು ಹಲವು ದಿನಗಳ ಕಾಲ ನಡೆದು ಗದ್ದಲಕ್ಕೆ ಪ್ರಾಣಿಗಳು ಅಲ್ಲಿಂದ ತೆರಳಿ ಆಹಾರಕ್ಕಾಗಿ ಮತ್ತೆ ಊರಿಗೆ ಬರುತ್ತವೆ. 

ಅಂದರೆ ನಮ್ಮ ಜೀವನ ವನ್ಯಜೀವಿಗಳೊಂದಿಗೆ, ಪರಿಸರದೊಂದಿಗೆ ಇರಬೇಕು. ಇಲ್ಲಿ ಎಲ್ಲರಿಗೂ ಜೀವಿಸಲು ಹಕ್ಕಿದೆ. ಮುಖ್ಯವಾಗಿ ವನ್ಯಜೀವಿಗಳಿಗೆ. ಏಕೆಂದರೆ ಅವುಗಳಿಲ್ಲದಿದ್ದರೆ ನಾವಿಲ್ಲ. ಆದರೆ ನಾವಿಲ್ಲದಿದ್ದರೆ ಅವು ಸಂತಸದಿಂದ ಬದುಕುತ್ತವೆ.

ಆದರೆ ಈ ಸಂಘರ್ಷಕ್ಕೆ ಕೊನೆ ಎಂದು? ಬಹುಶಃ ಪರಿಹಾರ ಸುಲಭವಲ್ಲ. ನಾಡಿನ ಜನರಿಗೂ ಅರಣ್ಯಕ್ಕೂ ಅವಿನಾಭಾವ ಸಂಬಂಧ, ಪ್ರೀತಿ ಮಮತೆ ಬೆಳೆಯಬೇಕಿದೆ. ಅವುಗಳೊಡನೆ ಸಹಬಾಳ್ವೆ ಮೆರೆಯಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಅದರ ರೀತಿ ಅರಣ್ಯ ಇಲಾಖೆ ಚಿಣ್ಣರ ವನದರ್ಶನ, ಹಳ್ಳಿಗಳಲ್ಲಿ, ಅರಣ್ಯ ಸಮಿತಿ ರಚಿಸಿ ಕೆಲಸ ಮಾಡುತ್ತಿದೆ. ಆದರೆ ಇದು ವೇಗ ಪಡೆಯಬೇಕಿದೆ. ಆನೆ ಕಂದಕ, ಬೇಲಿ, ವಲಸೆ ಮಾರ್ಗ ನಿರ್ವಹಣೆ ಪ್ರಗತಿ ಕಾಣಬೇಕು.

ಕಾಡಂಚಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಾಜೂಕು ಸ್ಥಳದಲ್ಲಿ ಸಿಬ್ಬಂದಿ ನೇಮಿಸಿ ಕಾಡಿಗೆ ಹೋಗುವವರ ಬಗ್ಗೆ ನಿಗಾ ವಹಿಸಬೇಕು. ಪ್ರಾಣಿಗಳು ಊರಿಗೆ ಬಂದಾಗ ಕ್ಷಿಪ್ರವಾಗಿ ಕೆಲಸಮಾಡಲು ತಂಡ ನೇಮಿಸಬೇಕು. ಹಳ್ಳಿಗರ ವಿಶ್ವಾಸ ಗಳಿಸಿ ಅವರ ನಿರಂತರ ಸಂಪರ್ಕದಲ್ಲಿರಬೇಕು.

ಹಾಗೆಯೇ ಅನಾಹುತ ಸಂಭವಿಸಿದಾಗ ಪರಿಹಾರ ತ್ವರಿತವಾಗಿ ವಿಲೇವಾರಿಯಾಗಬೇಕು. ಈ ರೀತಿ ಹಲವು ಬೇಕುಗಳಿವೆ. ಇವು ಈಡೇರಿದಾಗಲೇ ಸಂಘರ್ಷಕ್ಕೆ ಬ್ರೇಕು!

*ಲೇಖಕರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರು; ವನ್ಯಜೀವಿ ಛಾಯಾಗ್ರಾಹಕರು, ನೀಲಗಿರಿ ಜೀವತಾಣದ ಸಂಶೋಧಕರು. ಅವರಿಗೆ 19 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

Leave a Reply

Your email address will not be published.