ವಲಸೆ ಕಾರ್ಮಿಕರ ಸಮಸ್ಯೆಗಳ ಹಲವು ಆಯಾಮಗಳು

ಈಗ ಕಾಣುತ್ತಿರುವ ಈ ಮಹಾಯಾನ ಸರಕಾರದ ಮೇಲಿನ ನಂಬಿಕೆಯನ್ನು ಕಳೆದು ನಮ್ಮ ಸಂಸಾರ-ಸಾಮಾಜಿಕ ಸಂಬಂಧಗಳಲ್ಲಿಯೇ ಸುರಕ್ಷತೆಯನ್ನು ಕಂಡುಕೊಳ್ಳುವಂತೆ ಮಾಡಿದೆ. ಇದರಿಂದಾಗಿಯೇ ಸರಕಾರ ಕೊಡುವ ಸಂಕ್ಷೇಮ ಯೋಜನೆಗಳು ನಂಬಲರ್ಹವಾದುವಲ್ಲ ಎನ್ನುವುದು ಖಚಿತವಾಗುತ್ತಿದೆ.

1.  ನಮ್ಮ ದೇಶದ ಅರ್ಥವ್ಯವಸ್ಥೆಯಲ್ಲಿ ಕೃಷಿಯ ದೇಣಿಗೆ ಶೇಕಡಾ 17ರಷ್ಟಿದೆ. ಆದರೆ ಕೃಷಿಯನ್ನು ಮತ್ತು ತತ್ಸಂಬAಧಿತ ಕೆಲಸಗಳನ್ನು ನಂಬಿ ಜೀವನ ನಡೆಸುತ್ತಿರುವವರು (ರೈತರು, ರೈತಕಾರ್ಮಿಕರು) ಅದರ ಮೂರು ಪಟ್ಟು ಇದ್ದಾರೆ. ಅಂದರೆ ಮಿಕ್ಕ ಆರ್ಥಿಕ ಚಟುವಟಿಕೆಗಳಿಗೆ ಹೋಲಿಸಿದರೆ ಕೃಷಿಯಿಂದ ಉಂಟಾಗುವ ಆದಾಯ ಸಾಕಷ್ಟಿಲ್ಲ. ಹೀಗಾಗಿಯೇ ಈ ಕ್ಷೇತ್ರದಲ್ಲಿ ನಮಗೆ ಹೆಚ್ಚಿನ ಆರ್ಥಿಕ ಬೆಳವಣಿಗೆಯ ಅವಕಾಶಗಳು ಕಾಣುತ್ತಿಲ್ಲ. ಹಾಗೂ ಈ ಕ್ಷೇತ್ರದಲ್ಲಿ ಬಡತನ ಅಧಿಕವಾಗಿರುವುದರಲ್ಲೂ ಆಶ್ಚರ್ಯವಿಲ್ಲ. ವಲಸೆ ಕಾರ್ಮಿಕರ ಲೋಕವನ್ನು ನಾವು ಇಲ್ಲಿಂದಲೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಅವಕಾಶಗಳನ್ನು ಹುಡುಕಿ ವಲಸೆ ಹೋಗುವುದು ಹೊಸದೇನೂ ಅಲ್ಲ, ಹಳ್ಳಿಗಳಿಂದ ನಮ್ಮ ಜನ ನಗರದತ್ತ ವಲಸೆ ಹೋಗುತ್ತಿದ್ದಾರೆಂದರೆ ಅದಕ್ಕೆ ಎರಡು ಕಾರಣಗಳಿರಬಹುದು -ಒಂದು ಸ್ಥಳೀಯವಾಗಿ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳು ಕಾಣದಿರುವುದು ಮತ್ತು ದೂರದೂರಿನಲ್ಲಿ ಭಿನ್ನ ಕ್ಷೇತ್ರದಲ್ಲಿ ಅಥವಾ ಅದೇ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಕಂಡು ಬರುವುದು.

ಆದರೆ ಕೃಷಿ ಕ್ಷೇತ್ರದಲ್ಲೂ ಭಿನ್ನ ಲೋಕಗಳಿವೆ. ಪಂಜಾಬಿನ ಕೃಷಿಯ ಆರ್ಥಿಕತೆ ಬಿಹಾರದ ಕೃಷಿಗಿಂತ ಭಿನ್ನವಾಗಿದೆ. ಬಿಹಾರದಿಂದ ಪಂಜಾಬಿಗೆ ಕೃಷಿಕಾರ್ಮಿಕರು ವಲಸೆ ಹೋಗುತ್ತಿದ್ದಾರೆಂದರೆ, ಅದಕ್ಕೆ ಗಮ್ಮತ್ತಿನ ಕಾರಣವಿದೆ. ಅಲ್ಲಿನ ಸಿಂಚನಾಧಾರಿತ ಮೂರು ಬೆಳೆಯ ಕೃಷಿ ಒಟ್ಟಾರೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಜೊತೆಗೆ ಪಂಜಾಬಿನಲ್ಲಿ ಕೃಷಿಯಲ್ಲದೇ ಉದ್ಯಮವೂ ಬೆಳೆದು ಪಂಜಾಬಿನ ಒಟ್ಟಾರೆ ಆರ್ಥಿಕತೆಯಲ್ಲಿ ಅರ್ಥಭಿನ್ನತೆಯಿದೆ. ಈ ಅಭಿವೃದ್ಧಿಯಿಂದಾಗಿ ಕೂಲಿ ಕೆಲಸಕ್ಕೆ ಜನ ಸಿಗದಿರುವುದು ಒಂದಾದರೆ, ಕೂಲಿ ಕೆಲಸ ಮಾಡಬಹುದಾಗಿದ್ದ ಸ್ಥಳೀಯರು ಕೆನಡಾ ಮತ್ತು ಇತರ ದೇಶಗಳಿಗೆ ವಲಸೆ ಹೋಗಿರುವುದೂ ಮತ್ತೊಂದು ಕಾರಣವಾಗಿದೆ. ಹೀಗಾಗಿ ಪಂಜಾಬಿನ ಒಂದು ಹೊರವಲಸೆ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದ ಮತ್ತೊಂದು ಒಳವಲಸೆಗೆ ಅವಕಾಶ ಮಾಡಿಕೊಟ್ಟಿದೆ.

ಈ ಸಂದರ್ಭದಲ್ಲಿ ಸೈಕಲ್ಲೇರಿ, ಬಸ್ಸಿನಲ್ಲಿ, ರೈಲುಗಳಲ್ಲಿ, ನಡೆದು ತಮ್ಮ ತಮ್ಮ ಊರುಗಳಿಗೆ ಕಾರ್ಮಿಕರು ಯಾಕೆ ವಾಪಸ್ಸಾಗುತ್ತಿದ್ದಾರೆ? ಇದರ ಪದರಗಳು ಏನಿರಬಹುದು? ಲಾಕ್ ಡೌನ್ ಕಂಡಿರುವ ಇತರ ದೇಶಗಳಲ್ಲೂ ವಲಸೆ ಹೋಗುವವರು ಇರುತ್ತಾರೆ. ಅವರು ತಮ್ಮ ಮನೆಗಳಿಗೆ ಮರಳಬೇಕೆನ್ನುವ ತವಕವನ್ನು ತೋರುತ್ತಿಲ್ಲವೇ? ಈ ಎಲ್ಲ ಪ್ರಶ್ನೆಗಳನ್ನು ಕೇಳಿಕೊಂಡಾಗ ನಮಗೆ ಕೆಲವು ವಿಚಾರಗಳು ತಟ್ಟಬಹುದು. ಮುಂದಿನ ಆರ್ಥಿಕ ನೀತಿಗಳ ರೂಪಕಲ್ಪನೆಗೆ ಅದು ದಿಕ್ಸೂಚಿಯೂ ಆಗಬಹುದು. ನಮ್ಮ ಸಮಾಜದ ನಿರ್ಮಿತಿಯ ಕೆಲವು ಹೊಳಹುಗಳೂ ನಮಗೆ ಇದರಿಂದ ಸಿಗಬಹುದು.

2. ಬೆಂಗಳೂರಿನಲ್ಲಿ ಕೂತು ಈ ಲೇಖನ ಬರೆಯುತ್ತಿರುವಾಗ ಈ ನಗರವೂ ಜನರಿಗೆ ಉದ್ಯೋಗ ಮತ್ತು ಜೀವನೋಪಾಧಿಯ ಅವಕಾಶ ನೀಡುವ ಜಾಗ ಎನ್ನುವುದನ್ನು ನಾನು ನೆನಪುಮಾಡಿಕೊಳ್ಳುತ್ತೇನೆ. ಹಿಂದೆ ಸರಕಾರಿ ಕಂಪನಿಗಳ ರಾಜಧಾನಿ, ಈಗ ಐಟಿಬಿಟಿ ಕಂಪನಿಗಳ ಮುಖ್ಯ ಸ್ಥಾನವಾಗಿರುವ ಬೆಂಗಳೂರಿನ ಒಳ ವಲಸೆಯಲ್ಲಿ ತಾಂತ್ರಿಕ ತಜ್ಞರದ್ದು ಒಂದು ರೀತಿಯ ವಲಸೆಯಾದರೆ, ಅಂಗಡಿಗಳಲ್ಲಿ, ಸೆಕ್ಯುರಿಟಿ ಏಜೆನ್ಸಿಗಳಲ್ಲಿ, ತಿಂಡಿ ತಿನಿಸಿನ ಜಾಗದಲ್ಲಿ, ಪಿಜಿಗಳಾಗಿ ಇರುತ್ತಿರುವವರು ಮತ್ತೊಂದು ರೀತಿಯ ವಲಸೆಯಾಗಿದೆ. ಇವರು ಕನಿಷ್ಟ ವಿದ್ಯಾಭ್ಯಾಸವನ್ನೂ ಬಹುಶಃ ಇಂಗ್ಲೀಷನ್ನು ಆಡುವ ಪರಿಜ್ಞಾನ ಪಡೆದಿರುತ್ತಾರೆ. ಆದರೆ ಮೂರನೆಯ ರೀತಿಯ ವಲಸೆ ಕೃಷಿಯನ್ನು ಬಿಟ್ಟುಕೊಟ್ಟು ಕಟ್ಟಡ ನಿರ್ಮಾಣದಂತಹ ದೈಹಿಕ ಕೆಲಸದ ಕಾರ್ಯದಲ್ಲಿ ತೊಡಗಿರುವವರು.

ಈ ಮೂರೂ ವರ್ಗದವರಿಗೆ ಒದಗಿಸಬೇಕಾದ ಸಾಮಾಜಿಕ ಸುರಕ್ಷೆಯ ಚೌಕಟ್ಟು ಭಿನ್ನವಾಗಿರುತ್ತದೆ. ಹೇಗೆ ಪಂಜಾಬಿನಿಂದ ಕೆನಡಾಕ್ಕೆ ಹೋಗಿರುವವರ ಸಮಸ್ಯೆಗಳು ಭಿನ್ನವೋ ಹಾಗೇ ವಲಸಿಗರ ಸಮಸ್ಯೆಗಳು ಭಿನ್ನವಾಗಿವೆ. ಕಾಲ್ನಡಿಗೆಯಲ್ಲಿ, ಸೈಕಲ್ಲಿನಲ್ಲಿ, ಶ್ರಮಿಕ್ ಎಕ್ಸ್ ಪ್ರೆಸ್ ನಲ್ಲಿ, ಬಸ್ಸುಗಳಲ್ಲಿ ಹೋಗುತ್ತಿರುವ ವಲಸಿಗರು ನಿಜಕ್ಕೂ ತಮ್ಮ ಬೇರುಗಳನ್ನು ಬಿಟ್ಟುಕೊಟ್ಟಂತೆ ಕಂಡರೂ, ಅವರು ನಗರದಲ್ಲಿ ಬೇರೂರಲು ಆಗದೇ ಇರುವವರು. ಹೀಗಾಗಿಯೇ, ಬಿಕ್ಕಟ್ಟಿನ ಸಂದರ್ಭದಲ್ಲಿ ಅರೆ ಹೊಟ್ಟೆಯಾದರೂ ಪರವಾಗಿಲ್ಲ ತಮ್ಮ ಜನರ ಬಳಿಗೆ ಹೊರಟು ನಿಂತಿದ್ದಾರೆ.

ಇದೇ ಪ್ರಕ್ರಿಯೆಯನ್ನು ಪಿಜಿಗಳಲ್ಲಿರುವ ವಲಸಿಗರೂ ತಮ್ಮದಾಗಿಸಿಕೊಳ್ಳಬಹುದಾದರೂ, ಅವರ ಸಾಮಾಜಿಕ ಸಂದರ್ಭ ಮತ್ತು ವಿದ್ಯೆಯ ಹಿನ್ನೆಲೆಯಿಂದಾಗಿ ಅವರಿಗೆ ತಾಳ್ಮೆಯೂ ಕಾಲಾವಕಾಶವೂ ಇರಬಹುದು. ಐಟಿಬಿಟಿ ಕಂಪನಿಗಳಲ್ಲಿರುವ ಮೇಲ್ಪರ್ಗದ ವಲಸಿಗರು ಮನೆ, ಕಾರು, ಕ್ಲಬ್ಬು ಎಂದು ಊರಿನಲ್ಲಿ ಬೇರು ಬಿಟ್ಟಿರುವವರಾಗುತ್ತಾರೆ. ಈ ರೀತಿಯ ವಲಸಿಗರು ತಮ್ಮೂರಿಗೆ ವಾಪಸ್ಸಾಗುವುದಕ್ಕಿಂತ ತಮ್ಮ ತಂದೆ ತಾಯಿಯರನ್ನು ಇಲ್ಲಿಗೇ ಕರೆತರುವ ಪ್ರಯಾಸ ಮಾಡುತ್ತಾರೆ. ಇಲ್ಲಿಯ ಜೀವನ ಉತ್ತಮ ಎನ್ನುವ ಗಟ್ಟಿ ನಂಬಿಕೆ ಅವರಿಗಿರುತ್ತದೆ.

3. ಅರ್ಥವ್ಯವಸ್ಥೆಯಲ್ಲಿ ಕೃಷಿಯ ದೇಣಿಗೆ ಕಡಿಮೆ. ಕೃಷಿಯಿಂದಾಗಿ ಉಂಟಾಗುತ್ತಿರುವ ಬಡತನವನ್ನು ತಪ್ಪಿಸಿ ಜೀವನದಲ್ಲಿ ಏಗಲೆಂದೇ ನಗರಕ್ಕೆ ವಲಸೆ ಹೋದ ಜನ ತಮ್ಮ ಉಪಾಧಿಗೆ ಅವಕಾಶ ಮಾಡಿಕೊಟ್ಟ ನಗರವನ್ನು ಬಿಟ್ಟು ಬರುತ್ತಿರುವುದು ಮತ್ತು ಗ್ರಾಮಾಭಿಮುಖವಾಗಿ ಪಯಣಿಸುತ್ತಿರುವುದು ಏಕೆ? ಈ ಸಂಕಟ ತೀರಿದರೆ, ತೀರಿದಾಗ ಅವರೆಲ್ಲಾ ಮತ್ತೆ ನಗರಕ್ಕೆ ವಾಪಸ್ಸಾಗಬಹುದೋ? ಈ ಎರಡೂ ಪ್ರಶ್ನೆಗಳಿಗೂ ನಮ್ಮ ಅರ್ಥವ್ಯವಸ್ಥೆಯಲ್ಲಿ ನಾವು ಮಾಡಿಕೊಂಡಿರುವ ಆಯ್ಕೆಗಳಿಗೂ ಒಂದು ವಿಚಿತ್ರ ಸಂಬಂಧವಿರಬಹುದು.

ಇಲ್ಲಿಯೇ ಅಮಾರ್ತ್ಯ ಸೇನ್ ಪ್ರತಿಪಾದಿಸುವ ಸಾಮಾಜಿಕ ಸುರಕ್ಷತೆಯ ಅಡಿಪಾಯದ ಮೇಲೆ ಆರ್ಥಿಕ ಪ್ರಗತಿ ಎನ್ನುವ ವಾದಕ್ಕೂ ಜಗದೀಶ್ ಭಗವತಿ ಮತ್ತು ಸದ್ಯದ ಸಂದರ್ಭದಲ್ಲಿ ಪ್ರತಿಪಾದಿಸುತ್ತಿರುವ ಆರ್ಥಿಕ ಪ್ರಗತಿ, ಅವಕಾಶ, ಬೇಡಿಕೆಯೇ ಉಂಟು ಮಾಡುವ ಸುರಕ್ಷೆಯ ವಾದಕ್ಕೂ ಮುಖಾಮುಖಿಯಾಗುವ ಅವಕಾಶ ಒದಗಿ ಬಂದಿದೆ. ಸ್ಪಿಲ್ ಓವರ್… ಆರ್ಥಿಕ ಬೆಳವಣಿಗೆಯಾದಾಗ ಅದರ ಫಲವೂ ಜನರಿಗೆ ಹಬ್ಬುತ್ತದೆನ್ನುವ ವಾದವನ್ನು ನಾವು ಈ ಸಂದರ್ಭದಲ್ಲಿ ಹತ್ತಿರದಿಂದ ನೋಡಬಹುದು.

ಸ್ಪಿಲ್ ಓವರ್ ಆಗಬೇಕಾದರೆ ಪಾತ್ರೆ ತುಂಬಿ, ತುಳುಕ ಬೇಕು. ತುಂಬುವ ಮುನ್ನವೇ ಬಿಕ್ಕಟ್ಟು ಉಂಟಾದರೆ? ಈಗಿನ ಸಂದರ್ಭ ಅಂಥದ್ದು. ಭರ್ಜರಿ ಐಷಾರಾಮಿ ಮದುವೆಯಾದಾಗಲೂ ಆಹಾರ ಒದಗಿಸಿದವರಿಗೆ, ಷಾಮಿಯಾನಾ ಕಟ್ಟಿದವರಿಗೆ, ಲೈಟುಗಳನ್ನು ಬೆಳಗಿಸಿದವರಿಗೆ, ತೋರಣ ಕಟ್ಟಿದವರಿಗೆ ಕೆಲಸ ಸಿಗುತ್ತದೆ ಎನ್ನುವುದು ಆರ್ಥಿಕ ಬೆಳಣಿಗೆಯನ್ನು ಪ್ರತಿಪಾದಿಸುವವರ ವಾದ. ಹೀಗೆ ಎಲ್ಲರಿಗೂ ಅವಕಾಶಗಳು ಒದಗಿಬಂದು ಹಣವು ಬಡವರ ಕೈಗೆ ಬಿದ್ದರೆ ಅವರೂ ಏನಾದರೂ ಕೊಳ್ಳುತ್ತಾರೆ, ಬಡತನದಿಂದ ಮುಕ್ತರಾಗುವ ಪರಿ ಇದೇ ಎಂದು ಮಾರುಕಟ್ಟೆಯನ್ನು ನಂಬಿದವರು ವಾದಿಸುತ್ತಾರೆ.

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ವಾದ ಕೆಲಸ ಮಾಡುವುದಿಲ್ಲ ಎಂದು ನಮಗೆ ಈಗ ತಿಳಿದು ಬರುತ್ತಿದೆ. ಅರ್ಥವ್ಯವಸ್ಥೆ ಕುಸಿಯುವ ಸಂದರ್ಭದಲ್ಲಿ ಐಷಾರಾಮಿ ಮದುವೆ ಆಗುವುದಿಲ್ಲ, ಅಥವಾ ಅದನ್ನು ಮುಂದೂಡಲಾಗುತ್ತದೆ. ಹೀಗಾಗಿ ತೋರಣ ಕಟ್ಟುವವನಿಗೆ ಕೆಲಸದ ಅವಕಾಶ ಇಲ್ಲವಾಗುತ್ತದೆ. ಅಮಾರ್ತ್ಯ ಸೇನ್ ವಾದದ ಪ್ರಕಾರ ಸಾಮಾಜಿಕ ಸುರಕ್ಷೆಯ ಕವಚವಿದ್ದಿದ್ದರೆ, ಕೆಲಸವಿಲ್ಲದ ಪರಿಸ್ಥಿತಿಯಲ್ಲಿ ಸರಕಾರ ಜನರ ಜೇಬಿಗೆ-ಹೊಟ್ಟೆಗೆ ಏನಾದರೂ ಹಾಕುವ ಬದ್ಧತೆಯನ್ನು ತೋರುತ್ತಿತ್ತು. ಈ ದೃಷ್ಚಿಯಿಂದ ಮನರೇಗಾ, ಪಡಿತರ ವಿತರಣಾ ಪದ್ಧತಿ ಸಾಮಾಜಿಕ ಸುರಕ್ಷೆಯ ಕವಚಗಳೆಂದು ನಾವು ಭಾವಿಸಬಹುದು. ಮಾರುಕಟ್ಟೆ ಕುಸಿದ ಸಂದರ್ಭದಲ್ಲೂ ಬಡವರನ್ನು ನೋಡಿಕೊಳ್ಳುವ ಮೂಲಾಧಾರ ಈ ದಾರಿಯಲ್ಲಿ ನಮಗೆ ಕಾಣುತ್ತದೆ.

ಎಲ್ಲೋ ಒಂದು ಕಡೆ ಕೃಷಿ, ಗ್ರಾಮೀಣ ಪ್ರದೇಶದಲ್ಲಿ ಬಡತನ ಕೇಂದ್ರೀಕೃತವಾಗಿದೆ ಎಂದು ನಮ್ಮ ವ್ಯವಸ್ಥೆ ವರ್ಷಗಳಿಂದ ನಂಬಿರುವುದರಿAದ ಗ್ರಾಮೀಣ ಪ್ರದೇಶಗಳಲ್ಲಿನ ಸಾಮಾಜಿಕ ಸುರಕ್ಷಾ ಕಾರ್ಯಕ್ರಮಗಳು ನಗರದ ಪ್ರದೇಶಗಳ ಬಡವರಪರ ಕಾರ್ಯಕ್ರಮಗಳಿಗಿಂತ ಉತ್ತಮವಾಗಿವೆ ಅನ್ನಬಹುದು. ಬಿಕ್ಕಟ್ಟಿನ ಸಂದರ್ಭದಲ್ಲಿ ಜನ ಸಹಜವಾಗಿಯೇ ಎಲ್ಲಿ ಸಮಾಜಿಕ ಸುರಕ್ಷತೆಯಿದೆಯೋ ಅತ್ತ ಕಡೆಗೆ ಪ್ರಯಾಣ ಬೆಳೆಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಆದರೆ ಈ ವಾದ ಇಲ್ಲಿಗೆ ನಿಲ್ಲುವುದಿಲ್ಲ. ಮಾರುಕಟ್ಟೆಯ ವಾದವನ್ನು ಬಳಸುವವರು, ಬಡವರ ಆರ್ಥಿಕ ತಾಕತ್ತನ್ನು ಹೇಗಾದರೂ ವೃದ್ಧಿ ಮಾಡಿದರೆ, ಆ ತಾಕತ್ತೇ ಮೂಲಸೌಕರ್ಯದ ಬೇಡಿಕೆಯನ್ನು ಹೆಚ್ಚಿಸಿ ಮಾರುಕಟ್ಟೆಯ ನಿಯಮಾನುಸಾರ ಕೆಲಸ ಮಾಡುವ ಸಂಸ್ಥೆಗಳು ಹುಟ್ಟುತ್ತವೆ ಎಂದು ವಾದಿಸುತ್ತದೆ. ಅಂದರೆ ಬಡವರಿಗೆ ಆರೋಗ್ಯದ ವಿಮೆ ಒದಗಿಸಿದರೆ, ಆ ವಿಮೆಯ ಭರವಸೆಯರುವುದರಿಂದ, ಆಸ್ಪತ್ರೆಯ ಸೇವೆಗಳನ್ನು ಉಪಯೋಗಿಸುವವರ ಸಂಖ್ಯೆ ಅಧಿಕಾವಾಗುವುದರಿಂದ ಹೊಸ ಆಸ್ಪತ್ರೆಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆಂದು, ಬೇಡಿಕೆಯೇ ಸರಬರಾಜನ್ನು ನಿರ್ದೇಶಿಸುತ್ತದೆಂದು ಇವರು ವಾದಿಸುತ್ತಾರೆ. ಆದರೆ ಬಿಕ್ಕಟ್ಟಿನ ಸಮಯದಲ್ಲಿ ಯಾವ ವಿಮೆಯೂ ಹೊಸ ಆಸ್ಪತ್ರೆಯನ್ನು ಹುಟ್ಟುಹಾಕಿಲ್ಲ. ಆಸ್ಪತ್ರೆ ಕಟ್ಟುವ ಬದಲು ವಿಮೆ ಕೊಡುತ್ತೇವೆ ಎನ್ನುವುದು ಸಶಕ್ತ ಅಸ್ತçವಲ್ಲ ಎಂದು ನಮಗೆ ಈಗ ತಿಳಿದುಬರುತ್ತಿದೆ. ಹೀಗಾಗಿ ಮಾರುಕಟ್ಟೆಯ ತಂತ್ರಗಳು ಕೆಲ ಸಂದರ್ಭದಲ್ಲಿ ಕೆಲಸಮಾಡುವುದಿಲ್ಲ ಎನ್ನುವುದು ನಮಗೆ ತಿಳಿದು ಬರುತ್ತಿದೆ.

ಅದು ಬಿಡಿ. ನಗರಕ್ಕೆ ವಲಸೆ ಹೋಗಿರುವವರ ಗತಿ ನೋಡಿ. ಅತ್ತ ಮನರೇಗಾ-ಪಡಿತರ ಪದ್ಧತಿಯಂತಹ ಸಾಮಾಜಿಕ ಸುರಕ್ಷೆಯೂ ಇಲ್ಲ. ಆಯುಷ್ಮಾನ್ ಭಾರದತಂಹ ವಿಮೆಯಿದ್ದರೂ ಆಸ್ಪತ್ರೆಗಳು ಕೈಗೆಟುಕುವುದಿಲ್ಲ. ಸರಕಾರಿ ಯಂತ್ರಾAಗ ಎಲ್ಲವನ್ನೂ ಮಾರುಕಟ್ಟೆಯ ಸುಪರ್ದಿಗೆ ಒಪ್ಪಿಸಿ ಕುಳಿತಿದೆ. ಇಂಥ ಸಂದರ್ಭದಲ್ಲಿ ಹಣವಿಲ್ಲದಿದ್ದರೂ ಸಾಂತ್ವನವನ್ನು ಒದಗಿಸುವುದು ಸಮಾಜವೇ. ಆ ಸಮಾಜ ಎಲ್ಲಿದೆ? ಆ ಸಾಮಾಜಿಕ ಭದ್ರತೆ ನಗರದಲ್ಲಿ ಇದ್ದಿದ್ದರೆ ತಕ್ಷಣಕ್ಕೆ ನಡೆದಾದರೂ ಊರಿಗೆ ಹೋಗುತ್ತೇನೆ ಎಂದು ಯಾರೂ ಹೊರಡುತ್ತಿರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ -ಊಟವಿಲ್ಲದಿದ್ದರು, ಬಡತನವಿದ್ದರೂ, ಸಾಮಾಜಿಕವಾಗಿ ಜನ ನಮ್ಮನ್ನು ನೋಡಿಕೊಳ್ಳುತ್ತಾರೆ ಎನ್ನುವ ಭರವಸೆ ಇರುವುದರಿಂದಲೇ ಆ ದಿಕ್ಕಿನಲ್ಲಿ ನಮ್ಮವರು ಮಹಾಯಾನ ಕೈಗೊಂಡಿದ್ದಾರೆ.

4. ಈ ಮಹಾಮಾರಿಯಿಂದ ನಮಗೆ ತಿಳಿದು ಬಂದಿರುವದು ಇಷ್ಟು. ನಗರದ ಬಡತನ ಕಟ್ಟಡ ಕಾರ್ಯದ ನೀಲಿ ಗೋಡೆಗಳ ಹಿಂದೆ, ದೊಡ್ಡ ಮಾಲುಗಳ ಕೌಂಟರುಗಳ ಹಿಂದೆ, ತಿನ್ನುವ ರೆಸ್ಟುರಾಗಳ ಅಡುಗೆ ಮನೆಯಲ್ಲಿ, ಮತ್ತು ದೊಡ್ಡಕಟ್ಟಡಗಳ ಕಾವಲು ಪಡೆಯ ಹಿಂದೆ ಅಡಗಿ ಕುಳಿತಿತ್ತು. ಅದರ ಆಳ ವಿಸ್ತಾರಗಳು ಬಹುಶಃ ಸರಕಾರಕ್ಕೂ, ಜನರಿಗೂ ಗೊತ್ತಿರಲಿಲ್ಲ ಎನ್ನಿಸುತ್ತದೆ. ಅತಿ ಬಡವರಲ್ಲದ – ಆತ್ಮಾಭಿಮಾನದಿಂದ ಕೆಲಸ ಮಾಡುವ ಆದರೆ ಆಳವಾದ ಬೇರುಗಳಿಲ್ಲದೆ, ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಾಗದ ಆದರೆ ನಗರದ ಅರ್ಥಪದ್ಧತಿಯಲ್ಲಿ ತೊಡಗಿಕೊಂಡಿರುವ ಬಡವ ಸಮುದಾಯ ಕಂಡೂ ಕಾಣದಂತೆ ನಮ್ಮ ನಗರಗಳಲ್ಲಿದ್ದಾವೆ. ಅದು ನಮಗೆ ಈಗ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ನಿಮ್ಮೊಡನಿದ್ದೂ ನಿಮ್ಮಂತಾಗದೆ ಇರುವ ಜನ ನಗರದಲ್ಲಿ ಜೀವಿಸುತ್ತಿರುವುದು ಉತ್ತಮ ಆದಾಯದ ಆಶಯ ಮತ್ತು ಆಶಾವಾದದ ಮೇಲೆ. ಈಗ ಆ ಆಶಾವಾದ ನುಚ್ಚುನೂರಾಗಿದೆ.

ನಮ್ಮಲ್ಲಿ ನಗರ ಕೇಂದ್ರಿತ ಸಾಮಾಜಿಕ ಸುರಕ್ಷಾ ಕಾರ್ಯಕ್ರಮಗಳು ಇಲ್ಲವೆನ್ನುವುದು ಈಗ ಸ್ಪಷ್ಟವಾಗಿ ಕಾಣುತ್ತಿದೆ. ಉದ್ಯೋಗ ಖಾತರಿ, ಆಹಾರ ಭದ್ರತೆ, ಆರೋಗ್ಯ ಸೇವೆಗಳು, ವಸತಿ -ಯಾವುದನ್ನೇ ತೆಗೆದರೂ ನಗರದ ಬಡವರಿಗೆ ಹೆಚ್ಚಿನ ಸೌಲಭ್ಯಗಳು ಕಾಣಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹೇಳಲಿಕ್ಕಾದರೂ, ಮನರೇಗಾ, ಪಡಿತರ-ಅನ್ನಭಾಗ್ಯದಂತಹ ಸೌಲಭ್ಯ, ವಸತಿ ಕಾರ್ಯಕ್ರಮಗಳು ಮತ್ತೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ನಗರ ಪ್ರಾಂತದ ಬಡವರಿಗೆ ವಸತಿ-ವಿಳಾಸ ಮೊದಲ ಸವಾಲಾಗುತ್ತದೆ. ಅಲ್ಲಿಂದ ಮುಂದಕ್ಕೆ ಎಲ್ಲವೂ ಕುಸಿಯುತ್ತಾ ಹೋಗುತ್ತದೆನ್ನುವುದು, ಈ ಹಂತದಲ್ಲಿ ನಮಗೆ ಸ್ಪಷ್ಟವಾಗಿ ಕಾಣುತ್ತಿದೆ.

ಸರಕಾರದ ಸಾಮಾಜಿಕ ಸುರಕ್ಷಾ ಕಾರ್ಯಕ್ರಮಗಳು ಇಲ್ಲವೆಂದಾಗ -ಆತ್ಮನಿರ್ಭರತೆಯೇ ದಾರಿ. ಬಡವರು ತಮ್ಮ ಸಂಕ್ಷೇಮವನ್ನು ತಾವೇ ನೋಡಿಕೊಳ್ಳಬೇಕಾದರೆ ಅಪರಿಚಿತರ ನಡುವೆ ನಗರದಲ್ಲಿರುವುದಕ್ಕಿಂತ ಪರಿಚಿತರ ಸಂಬAಧಿಕರ ಸಾಮಾಜಿಕ ಸುರಕ್ಷಾ ಪ್ರಭಾವಳಿಯಲ್ಲಿರುವುದು -ಮಾನಸಿಕ ನೆಮ್ಮದಿಯನ್ನು ಉಂಟುಮಾಡಬಹುದು. ನಾವು ಈಗ ಕಾಣುತ್ತಿರುವ ಈ ಮಹಾಯಾನ ಸರಕಾರದ ಮೇಲಿನ ನಂಬಿಕೆಯನ್ನು ಕಳೆದು ನಮ್ಮ ಸಂಸಾರ-ಸಾಮಾಜಿಕ ಸಂಬAಧಗಳಲ್ಲಿಯೇ ಸುರಕ್ಷತೆಯನ್ನು ಕಂಡುಕೊಳ್ಳುವ ಹಾಗಾಗಿದೆ. ಇದರಿಂದಾಗಿಯೇ ಸರಕಾರ ಕೊಡುವ ಸಂಕ್ಷೇಮ ಯೋಜನೆಗಳು ನಂಬಲರ್ಹವಾದುವಲ್ಲ ಎನ್ನುವುದು ನಮಗೆ ತಿಳಿಯುತ್ತಿದೆ.

ಊರಿಗೆ ಹೋದವರು ನಗರಕ್ಕೆ ಮರಳುತ್ತಾರೆಯೇ? ಇದು ಜಟಿಲವಾದ ಪ್ರಶ್ನೆ. ಬಡತನ ಮತ್ತು ಸಂಸಾರ-ಜನರ ಸಮಾಜದ ಸುರಕ್ಷೆ ಉತ್ತಮವೋ, ಅಥವಾ ಸಂಬಳ ಮಾರುಕಟ್ಟೆ ಮತ್ತು ಸರಕಾರಿ ದೇಣಿಗೆಯಿಂದ ಬರುವ ನಗದು ಪಾವತಿಯಂತಹ ಸುರಕ್ಷೆ ಉತ್ತಮವೋ… ಅತ್ತ ದರಿ ಇತ್ತ ಪುಲಿಯ ಆಯ್ಕೆಯನ್ನು ನಮ್ಮ ಕಾರ್ಮಿಕ ವರ್ಗ ಹೇಗೆ ಆಯ್ದುಕೊಳ್ಳುತ್ತಾರೆ ಎನ್ನುವುದನ್ನು ನಾವು ಕಾದು ನೋಡಬೇಕು. ಸರಕಾರ ನಗರಕೇಂದ್ರಿತ ಬಡವರ ಸಮಸ್ಯೆಗಳನ್ನು ಹೇಗೆ ಮುಂದಾದರೂ ತನ್ನ ನೀತಿಸೂತ್ರದಲ್ಲಿ ತರುತ್ತದೆ ಎನ್ನುವುದು ಕುತೂಹಲದ ವಿಷಯ. ಅವರ ಓಟು, ಆಧಾರ್ ವಿಳಾಸ, ವೋಟರ್ ಕಾರ್ಡು ಎಲ್ಲಿದೆ ಎನ್ನುವುದರ ಮೇಲೆ ಇದು ಆಧಾರಿತವಾಗಿದ್ದರೆ ವಲಸೆ ಕಾರ್ಮಿಕರಿಗೆ ಮುಂದೆಯೂ ಯಾವುದೇ ಸುರಕ್ಷಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಖಂಡಿತವಾಗಿ ಹೇಳಬಹುದು.

*ಲೇಖಕರು ಬೆಂಗಳೂರಿನ ಐಐಎಂ ಸಂಸ್ಥೆಯ ಸಾರ್ವಜನಿಕ ನೀತಿನಿರೂಪಣಾ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರು; ಖ್ಯಾತ ಕತೆಗಾರರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

Leave a Reply

Your email address will not be published.