ವಸಾಹತುಶಾಹಿ ಸ್ವರೂಪ ಅರ್ಥೈಸುವ ಕೃತಿ

ಇಂತಹ ಒಂದು ಕಥನವನ್ನು ರಚಿಸಲು ಇಂಗ್ಲೀಷ್, ಹಿಂದೂಸ್ತಾನಿ ಮತ್ತಿತರ ಭಾಷೆಗಳಲ್ಲಿನ ಹಲವಾರು ಅಪರೂಪದ ಆಕರಗಳನ್ನು ವಿಶದವಾಗಿ ಅಭ್ಯಸಿಸಿದ್ದಾರೆ. ಎಂದಿನಂತೆ ಬರವಣಿಗೆಯ ಶೈಲಿ ಓದುಗನ ಆಸಕ್ತಿ ಮತ್ತು ಕುತೂಹಲಗಳನ್ನು ಉಳಿಸಿಕೊಳ್ಳುತ್ತ ಹೋಗುತ್ತದೆ. ಭಾರತದ ಆಧುನಿಕ ಇತಿಹಾಸದ ಬಗ್ಗೆ ಆಸಕ್ತ ಓದುಗರೆಲ್ಲರೂ ಗಮನಿಸಿಲೇಬೇಕಾಗಿರುವ ಕೃತಿಯಿದು.

ವಿಲಿಯಮ್ ಡಾಲರಿಂಪಲ್ ನಮ್ಮ ಕಾಲದ ಅತ್ಯಂತ ಜನಪ್ರಿಯ ಇತಿಹಾಸಕಾರರಲ್ಲೊಬ್ಬರು. ವಸಾಹತುಶಾಹಿ ಯು ಭಾರತಕ್ಕೆ ಕಾಲಿಡುತ್ತಿದ್ದ 18 ಮತ್ತು 19ನೆಯ ಶತಮಾನಗಳ ಇತಿಹಾಸಗಳ ಬಗ್ಗೆ ಹಲವಾರು ಮೌಲಿಕ ಕೃತಿಗಳನ್ನು ರಚಿಸಿರುವ ಡಾಲರಿಂಪಲ್ ಒಂದು ರೀತಿಯಲ್ಲಿ ಅಸಾಂಪ್ರದಾಯಿಕ ಇತಿಹಾಸಕಾರ. ಅವರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಅಧ್ಯಯನ-ಬರವಣಿಗೆಗಳನ್ನು ಕಲಿತವರಲ್ಲ. ಹತ್ತಕ್ಕೂ ಹೆಚ್ಚು ಉದ್ಗೃಂಥಗಳನ್ನು ರಚಿಸಿದ ನಂತರ ಈಗಲೂ ವಿಶ್ವವಿದ್ಯಾನಿಲಯಗಳಿಂದ ದೂರ ಉಳಿದಿದ್ದಾರೆ. ಸಾಂಪ್ರದಾಯಿಕ ಇತಿಹಾಸಕಾರರು ಅವರನ್ನು ಸ್ವಲ್ಪ ಸಂಶಯದಿಂದ ನೋಡುವುದೂ ಉಂಟು.

ದ ಅನಾರ್ಕಿ 

ದ ರಿಲೆಂಟಲೆಸ್ ರೈಸ್ ಆಫ್ ಈಸ್ಟ್ ಇಂಡಿಯಾ ಕಂಪನಿ
-ವಿಲಿಯಮ್ ಡಾಲರಿಂಪಲ್
ದೆಹಲಿ: ಬ್ಲೂಮ್ಸಬರಿ ಪಬ್ಲಿಷಿಂಗ್, 2019

 

ಇಷ್ಟಾದರೂ ಡಾಲರಿಂಪಲ್ ನಮ್ಮ ನಡುವಿನ ಅತ್ಯುತ್ತಮ ಇತಿಹಾಸಕಾರರಲ್ಲಿ ಒಬ್ಬರು. ಮಿಗಿಲಾಗಿ ಓದುಗನ ಗಮನ ಹಿಡಿದಿಡುವಲ್ಲಿ ಇವರಿಗಿಂತ ಶಕ್ತನಾದ ಇತಿಹಾಸಕಾರ ಭಾರತದ ಮೇಲೆ ಇಂದು ಬರೆಯುತ್ತಿಲ್ಲ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಅವರ ಕಥನ ಎಂದೂ ನೀರಸವಲ್ಲ. ಒಬ್ಬ ಅತ್ಯುತ್ತಮ ಕಾದಂಬರಿಕಾರನ ರೀತಿಯಲ್ಲಿ ಸುಲಲಿತವಾಗಿ ಓದಿಸಿಕೊಳ್ಳುವ ಕಥನವನ್ನು ಡಾಲರಿಂಪಲ್ ಸಾಮಾನ್ಯವಾಗಿ ರಚಿಸುತ್ತಾರೆ. ಅವರ ಕೃತಿಗಳು ಹತ್ತಾರು ಪಾತ್ರಗಳಿಂದ ಮತ್ತು ಅವುಗಳ ಬದುಕಿನ ವಿವರಗಳಿಂದ ಸೊಕ್ಕಿರುತ್ತವೆ. ಆದರೆ ಅವರ ಕಥನ ಪ್ರತಿಭೆ ಅದಕ್ಕೊಂದು ಚೌಕಟ್ಟನ್ನು ಕೊಡುವುದರಲ್ಲಿ ಯಶಸ್ವಿಯಾಗುತ್ತದೆ. ಇದಕ್ಕೊಂದು ಮುಖ್ಯ ಕಾರಣವೆಂದರೆ ಅವರು ಹೆಕ್ಕಿ ತೆಗೆಯುವ ಕಥನಗಳು ಮತ್ತು ಹುಡುಕುವ ಅಪರೂಪದ ಐತಿಹಾಸಿಕ ಆಕರಗಳು. ಇವುಗಳನ್ನು ಬಳಸುತ್ತ, ಡಾಲರಿಂಪಲ್ ಕುತೂಹಲಕರವಾದ ಕಥನಗಳನ್ನು ರಚಿಸುತ್ತಾರೆ.

19ನೆಯ ಶತಮಾನದ ರಾಜಕಾರಣ ಮತ್ತು ಸಾಮಾಜಿಕ ಜೀವನಗಳನ್ನು ಕಟ್ಟಿಕೊಡುತ್ತದೆ. ಸಿಪಾಯಿ ದಂಗೆಯ ಬಗ್ಗೆ ಇದುವರಗೆ ನಮಗೆ ತಿಳಿಯದೆ ಇದ್ದ ಹಲವು ವಿವರಗಳನ್ನು ಒದಗಿಸುತ್ತದೆ.

ಉದಾಹರಣೆಗೆ 2002ರಲ್ಲಿ ಪ್ರಕಟವಾದ ವೈಟ್ ಮೊಗಲ್ಸ್ ಎಂಬ ಕೃತಿಯಲ್ಲಿ ಡಾಲರಿಂಪಲ್ ಭಾರತದಲ್ಲಿದ್ದ ಯೂರೋಪಿಯನ್ ಪುರುಷರು (ಅದರಲ್ಲಿಯೂ ಆಂಗ್ಲರು) ಮತ್ತು ಭಾರತೀಯ ಮಹಿಳೆಯರ ನಡುವಿನ ಸಂಬಂಧವನ್ನು ಸೂಕ್ಷ್ಮವಾಗಿ ಮತ್ತು ಮನೋಜ್ಞವಾಗಿ ಚಿತ್ರಿಸುತ್ತಾರೆ. ಹಾಗೆಯೆ 2006ರಲ್ಲಿ ಪ್ರಕಟವಾದ ದ ಲಾಸ್ಟ್ ಮುಘಲ್ ಎಂಬ ಕೃತಿಯು ಬಹದೂರ್ ಷಾ ಜಪರನ ಜೀವನವನ್ನು ಪುನಾರಚಿಸುತ್ತ, 19ನೆಯ ಶತಮಾನದ ರಾಜಕಾರಣ ಮತ್ತು ಸಾಮಾಜಿಕ ಜೀವನಗಳನ್ನು ಕಟ್ಟಿಕೊಡುತ್ತದೆ. ಸಿಪಾಯಿ ದಂಗೆಯ ಬಗ್ಗೆ ಇದುವರಗೆ ನಮಗೆ ತಿಳಿಯದೆ ಇದ್ದ ಹಲವು ವಿವರಗಳನ್ನು ಒದಗಿಸುತ್ತದೆ.

ಕಳೆದ ತಿಂಗಳು ಬಿಡುಗಡೆಯಾದ ಡಾಲರಿಂಪಲ್ ಅವರ ಹೊಸ ಕೃತಿಯು – ದ ಅನಾರ್ಕಿ ದ ಈಸ್ಟ್ ಇಂಡಿಯಾ ಕಂಪನಿ, ಕಾರ್ಪೋರೇಟ್ ವಯಲೆನ್ಸ್ ಅಂಡ್ ದ ಪಿಲ್ಲೇಜ್ ಆಫ್ ಅನ್ ಎಂಪೈರ್ – ಬಹುಶಃ ಅವರ ಅತ್ಯಂತ ಮಹತ್ವಾಕಾಂಕ್ಷೀ ಕೃತಿ. ಆಧುನಿಕ ಪ್ರಪಂಚವನ್ನು ರೂಪಿಸಿದ ಅತ್ಯಂತ ಮುಖ್ಯ ಶಕ್ತಿಗಳಲ್ಲಿ ಒಂದಾದ

ಈಸ್ಟ್ ಇಂಡಿಯಾ ಕಂಪನಿಯ ಇತಿಹಾಸವನ್ನು ಈ ಕೃತಿಯು ಕಟ್ಟಿಕೊಡುತ್ತದೆ. ಕಳೆದ ಮೂರು ದಶಕಗಳಲ್ಲಿ ವಸಾಹತುಶಾಹಿ ಕಾಲಘಟ್ಟದ ಬಗ್ಗೆ ಡಾಲರಿಂಪಲ್ ಮಾಡಿದ್ದ ಎಲ್ಲ ಸಂಶೋಧನೆಗಳು ಈ ಕೃತಿಯಲ್ಲಿ ಮೇಳವಿಸುತ್ತವೆ ಮತ್ತು ಭಾರತದ ವಸಾಹತೀಕರಣದ ಬಗ್ಗೆ ಹೊಸ ಕಥನವೊಂದನ್ನು ಕಟ್ಟಿಕೊಡುತ್ತದೆ.

ವಾಣಿಜ್ಯ ಮತ್ತು ಸಾಮ್ರಾಜ್ಯಶಾಹಿ ಅಧಿಕಾರಗಳ (ಪವರ್) ಸಂಬಂಧವನ್ನು ಡಾಲರಿಂಪಲ್ ಅನ್ವೇಷಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಪೋರೇಷನ್ನುಗಳು ರಾಜಕಾರಣವನ್ನು ಹೇಗೆ ಪ್ರಭಾವಿಸುತ್ತವೆ ಮತ್ತು ರಾಜಕಾರಣವು ಕಾರ್ಪೋರೇಷನ್ನುಗಳನ್ನು ಹೇಗೆ ರೂಪಿಸುತ್ತವೆ ಎನ್ನುವ ಪ್ರಶ್ನೆಯನ್ನೂ ಅವರು ಕೇಳಿಕೊಳ್ಳುತ್ತಾರೆ.

ಈಸ್ಟ್ ಇಂಡಿಯಾ ಕಂಪನಿಯನ್ನು ಇಂದು ಅಧ್ಯಯನ ಮಾಡಬೇಕಿರುವ ಅಗತ್ಯವನ್ನು ಡಾಲರಿಂಪಲ್ ಒತ್ತಿಹೇಳುತ್ತಾರೆ. ಇಂದು ಜಗತ್ತಿನ ಎಲ್ಲೆಡೆ ಸರ್ವೆಸಾಮಾನ್ಯವಾಗಿರುವ ಜಾಯಿಂಟ್ ಸ್ಟಾಕ್ ಕಾರ್ಪೋರೇಷನ್ ಮಾದರಿಯನ್ನು ಮೊದಲು ಯಶಸ್ವಿಯಾಗಿ ಅನ್ವೇಷಿಸಿದ್ದು ಈಸ್ಟ್ ಇಂಡಿಯಾ ಕಂಪನಿಯೇ. ಆದರೆ ಇದರ ಯಶಸ್ಸು ನಿರ್ಭರವಾಗಿದ್ದು ವಾಣಿಜ್ಯಕ್ಕಿಂತಲೂ ಮಿಗಿಲಾಗಿ ಸಾಮ್ರಾಜ್ಯಶಾಹಿ ರಾಜಕಾರಣದ ಮೇಲೆ. ಇದಕ್ಕಾಗಿ ವಾಣಿಜ್ಯ ಮತ್ತು ಸಾಮ್ರಾಜ್ಯಶಾಹಿ ಅಧಿಕಾರಗಳ (ಪವರ್) ಸಂಬಂಧವನ್ನು ಡಾಲರಿಂಪಲ್ ಅನ್ವೇಷಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಪೋರೇಷನ್ನುಗಳು ರಾಜಕಾರಣವನ್ನು ಹೇಗೆ ಪ್ರಭಾವಿಸುತ್ತವೆ ಮತ್ತು ರಾಜಕಾರಣವು ಕಾರ್ಪೋರೇಷನ್ನುಗಳನ್ನು ಹೇಗೆ ರೂಪಿಸುತ್ತವೆ ಎನ್ನುವ ಪ್ರಶ್ನೆಯನ್ನೂ ಅವರು ಕೇಳಿಕೊಳ್ಳುತ್ತಾರೆ. ಈ ಪ್ರಶ್ನೆಗಳನ್ನು ಅವರು ಐತಿಹಾಸಿಕವಾಗಿ ಕೇಳಿದರೂ ಸಹ ಅದರ ಸಮಕಾಲೀನ ಮಹತ್ವ ಸುಸ್ಪಷ್ಟ. ಇಂದು ಕಾರ್ಪೋರೇಟ್ ಸಂಸ್ಥೆಗಳ ಶಕ್ತಿ ಎಲ್ಲೆ ಮೀರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಡಾಲರಿಂಪಲ್ ಅವರ ಕೃತಿಯು ಮುಖ್ಯವಾಗುತ್ತದೆ.

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅವರು ರಚಿಸುವ ಕಥನವು 1756ರಿಂದ 1803ರ ನಡುವೆ ಈಸ್ಟ್ ಇಂಡಿಯಾ ಕಂಪನಿಯು ಭಾರತದ ಬಹುತೇಕ ಭಾಗಗಳನ್ನು ತನ್ನ ವಶಕ್ಕೆ ಹೇಗೆ ತೆಗೆದುಕೊಂಡಿತು ಎನ್ನುವ ವಿದ್ಯಮಾನದ ಮೇಲೆ ಕೇಂದ್ರೀಕರಿಸುತ್ತದೆ. ಈ ಪ್ರಕ್ರಿಯೆ ಪ್ರಾರಂಭವಾದಾಗ 1757ರಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಸಂಖ್ಯೆ. ಕಂಪನಿಯು ಹೊಂದಿದ್ದ ಭಾರತೀಯ ಸೈನಿಕರ ಸಂಖ್ಯೆ ಸುಮಾರು 20,000. ಈ ಖಾಸಗಿ ಸಂಸ್ಥೆಗೆ ಸೇರಿದ್ದ ಇಷ್ಟು ಜನ ಮುಂದಿನ ನಲವತ್ತೇಳು ವರ್ಷಗಳಲ್ಲಿ ದಕ್ಷಿಣ ಏಷ್ಯಾದ ಎಲ್ಲ ಪ್ರಮುಖ ಎದುರಾಳಿಗಳನ್ನು ಹತ್ತಿಕ್ಕಿದರು. ಡಾಲರಿಂಪಲ್ ಅವರ ಕಥನದ ಮುಖ್ಯ ಪಾತ್ರಧಾರಿಗಳೆಂದರೆ: ಮುಘಲ್ ಚಕ್ರವರ್ತಿ ಷಾ ಆಲಮ್; ಈಸ್ಟ್ ಇಂಡಿಯಾ ಕಂಪನಿಯ ಪ್ರತಿನಿಧಿಗಳಾದ ರಾಬರ್ಟ್ ಕ್ಲೈವ್, ವಾರೆನ್ ಹೇಸ್ಟಿಂಗ್ಸ್, ಕಾರ್ನವಾಲೀಸ್ ಮತ್ತು ವೆಲ್ಲೆಸ್ಲಿ; ಮತ್ತು ಬ್ರಿಟಿಷರ ಪ್ರಮುಖ ಎದುರಾಳಿಗಳಾಗಿದ್ದ ಅವಧ್ ಮತ್ತು ಬಂಗಾಳಗಳ ನವಾಬರು, ಮರಾಠರು, ಮೈಸೂರಿನ ಹೈದರ್-ಟಿಪ್ಪು. 1803ರ ಹೊತ್ತಿಗೆ ಭಾರತದ ಬಹುತೇಕ ಭಾಗಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಕಂಪನಿಯು ವ್ಯಾಪಾರ ಸಂಸ್ಥೆಯಾಗಿ ಉಳಿಯಲಿಲ್ಲ, ಬದಲಿಗೆ ಒಂದು ಸಾಮ್ರಾಜ್ಯವಾಗಿ ರೂಪುಗೊಂಡಿತ್ತು. ಎರಡು ಲಕ್ಷ ಸೈನಿಕರಿದ್ದ ಬಲಶಾಲಿಯಾದ ಮತ್ತು ಇಂಗ್ಲೆಂಡಿನ ಸೈನ್ಯದ ದುಪ್ಪಟ್ಟು ಇದ್ದ ಸೈನ್ಯವನ್ನು ಕಟ್ಟಿಕೊಂಡಿತ್ತು. 1770ರ ದಶಕದ ಹೊತ್ತಿಗೆ ಅಮೆರಿಕಾದ ವಸಾಹತುಗಳಲ್ಲಿಯೂ ಕಂಪನಿಯ ಬಗ್ಗೆ ಆತಂಕ ಪ್ರಾರಂಭವಾಗಿತ್ತು ಮತ್ತು ಡಾಲರಿಂಪಲ್ ಅವರ ಕಥನದಲ್ಲಿನ ಒಂದು ಮುಖ್ಯ ವಿಪರ್ಯಾಸವನ್ನು ಇಲ್ಲಿ ಗಮನಿಸಬೇಕು. ಪುಸ್ತಕದ ಮೊದಲ ವಾಕ್ಯದಲ್ಲಿಯೆ ಇಂಗ್ಲೀಷ್ ಭಾಷೆಗೆ ಸೇರ್ಪಡೆಯಾದ ಮೊದಲ ಭಾರತೀಯ ಪದಗಳಲ್ಲಿ ಒಂದು ಎಂದರೆ ‘ಲೂಟಿ’ (ಇಂಗ್ಲೀಷಿನಲ್ಲಿ ಲೂಟ್) ಎನ್ನುವುದನ್ನು ದಾಖಲಿಸುವ ಡಾಲರಿಂಪಲ್ 18ನೆಯ ಶತಮಾನದಲ್ಲಿ ಈ ಪದವು ಇಂಗ್ಲೆಂಡಿನಲ್ಲಿ ಸರ್ವೆಸಾಮಾನ್ಯವಾಗಿ ಬಳಕೆಯಾಗುತ್ತಿತ್ತು ಎನ್ನುತ್ತಾರೆ. ಆ ಮೂಲಕ ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ನೌಕರರು ಭಾರತವನ್ನು ದೋಚಿದ ರೀತಿಯನ್ನು ಪ್ರತಿನಿಧಿಸುತ್ತದೆ ಎಂದು ಮುಕ್ತವಾಗಿ ಗುರುತಿಸುತ್ತಾರೆ. ಕಂಪನಿ ಮತ್ತು ಅದರ ನೌಕರರು ನಿರಾತಂಕವಾಗಿ, ನಿರ್ಲಜ್ಜತೆಯಿಂದ ಭಾರತವನ್ನು ತಮ್ಮ ಖಾಸಗಿ ಸೊತ್ತೆಂಬಂತೆ ಈ ಕಾಲದಲ್ಲಿ ಲೂಟಿಮಾಡಿದರು. ಡಾಲರಿಂಪಲ್ ಬರೆಯುತ್ತಾರೆ: ಇದು (ಕಂಪನಿಯು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ರೀತಿ) ಬಹುಶಃ ಪ್ರಪಂಚದ ಇತಿಹಾಸದಲ್ಲಿ ಕಾಣಬರುವ ಕಾರ್ಪೊರೇಟ್ ದೌರ್ಜನ್ಯದ ಸರ್ವೋಚ್ಛ ಉದಾಹರಣೆ.

ಸಮಕಾಲೀನ ಭಾರತದ ರಾಜಕೀಯ ವಾಸ್ತವಕ್ಕೆ ತಮ್ಮ ಕಾಲದ ಇತರೆ ರಾಜಕೀಯ ಶಕ್ತಿಗಳಂತೆ ಕಂಪನಿಯ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಜೊತೆಗೆ ಯೂರೋಪಿಯನ್ ಮಿಲಿಟರಿ ತಂತ್ರಜ್ಞಾನ, ತರಬೇತಿ ವಿಧಾನಗಳು ಮತ್ತು ತಂತ್ರಗಾರಿಕೆಗಳನ್ನು ಅವರು ಸೂಕ್ತವಾಗಿ ಬಳಸಿದರು.

ಒಂದೆಡೆ ಈ ಲೂಟಿಯ ಕಥನ ಮುಖ್ಯವಾದರೆ ಮತ್ತೊಂದು ಕಡೆ ಕೇವಲ 47 ವರ್ಷಗಳಲ್ಲಿ ದಕ್ಷಿಣ ಏಷ್ಯಾದ ಇತಿಹಾಸದ ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯವನ್ನು ಈ ಲೂಟಿಕಾರರು ಹೇಗೆ ಕಟ್ಟಿದರು ಎನ್ನುವ ಪ್ರಶ್ನೆಯೂ ಏಳುತ್ತದೆ. ಕಂಪನಿಯ ಈ ಸಾಮ್ರಾಜ್ಯಶಾಹಿ ರಾಜಕಾರಣದ ಸ್ವರೂಪದ ಬಗ್ಗೆ ಡಾಲರಿಂಪಲ್ (ಹಾಗೂ ಇತರೆ ಸಮಕಾಲೀನ ಇತಿಹಾಸಕಾರರಿಂದ) ಅವರಿಂದ ನಾವು ಹೊಸದಾದ ವಿವರಣಾತ್ಮಕ ಒಳನೋಟಗಳನ್ನು ಪಡೆಯುತ್ತೇವೆ. ಅದೇನೆಂದರೆ ಈಸ್ಟ್ ಇಂಡಿಯಾ ಕಂಪನಿಗೆ ಯಶಸ್ಸು ದೊರಕಿದ್ದು ಲಂಡನ್ನಿನಲ್ಲಿ ರೂಪುಗೊಂಡ ಯೋಜನೆಗಳು ಮತ್ತು ಸಂಚುಗಳಿಂದ ಅಲ್ಲ. ಬದಲಿಗೆ ಭಾರತದಲ್ಲಿ ಇದ್ದ ಕಂಪನಿಯ ಅಧಿಕಾರಿಗಳು ಮತ್ತು ದಂಡನಾಯಕರ ನೀತಿಗಳು ಹಾಗೂ ಸಮಯಪ್ರಜ್ಞೆಯಿಂದ. ಸಮಕಾಲೀನ ಭಾರತದ ರಾಜಕೀಯ ವಾಸ್ತವಕ್ಕೆ ತಮ್ಮ ಕಾಲದ ಇತರೆ ರಾಜಕೀಯ ಶಕ್ತಿಗಳಂತೆ ಕಂಪನಿಯ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಜೊತೆಗೆ ಯೂರೋಪಿಯನ್ ಮಿಲಿಟರಿ ತಂತ್ರಜ್ಞಾನ, ತರಬೇತಿ ವಿಧಾನಗಳು ಮತ್ತು ತಂತ್ರಗಾರಿಕೆಗಳನ್ನು ಅವರು ಸೂಕ್ತವಾಗಿ ಬಳಸಿದರು. ವಸಾಹತುಶಾಹಿ ಸಾಮ್ರಾಜ್ಯಗಳ ಸ್ವರೂಪವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವುದಕ್ಕೆ ಡಾಲರಿಂಪಲ್ ಅವರ ಕಥನವು ನಮಗೆ ಹಲವು ಉತ್ತರಗಳನ್ನು ಒದಗಿಸುತ್ತದೆ.

ಇಂತಹ ಒಂದು ಕಥನವನ್ನು ರಚಿಸಲು ಇಂಗ್ಲೀಷ್, ಹಿಂದೂಸ್ತಾನಿ ಮತ್ತಿತರ ಭಾಷೆಗಳಲ್ಲಿನ ಹಲವಾರು ಅಪರೂಪದ ಆಕರಗಳನ್ನು ವಿಶದವಾಗಿ ಅಭ್ಯಸಿಸಿದ್ದಾರೆ. ಎಂದಿನಂತೆ ಬರವಣಿಗೆಯ ಶೈಲಿ ಓದುಗನ ಆಸಕ್ತಿ ಮತ್ತು ಕುತೂಹಲಗಳನ್ನು ಉಳಿಸಿಕೊಳ್ಳುತ್ತ ಹೋಗುತ್ತದೆ. ಭಾರತದ ಆಧುನಿಕ ಇತಿಹಾಸದ ಬಗ್ಗೆ ಆಸಕ್ತ ಓದುಗರೆಲ್ಲರೂ ಗಮನಿಸಿಲೇಬೇಕಾಗಿರುವ ಕೃತಿಯಿದು.

Leave a Reply

Your email address will not be published.