ವಸುಧೇಂದ್ರರ ‘ತೇಜೋ ತುಂಗಭದ್ರಾ’ ಸನಾತನವಾದದ ಸಮರ್ಥನೆಗೆ ಕಟಿಬದ್ಧ!

ನೂರಾ ಇಪ್ಪತ್ತು ವರ್ಷಗಳ ಕನ್ನಡ ಕಾದಂಬರಿಗಳ ಚರಿತ್ರೆಯಲ್ಲಿ ತೀರ ಸವಕಲಾದ ದಾರಿಯಲ್ಲಿ ನಡೆಯುವ ಲೇಖಕರು ತಮ್ಮ ಪ್ರತಿಗಾಮಿ ನಿಲುವುಗಳನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ತುರುಕಿರುವುದರಿಂದ ಕೃತಿಗೆ ಯಾವುದೇ ಸಾಂಸ್ಕøತಿಕ ಮಹತ್ವವಿಲ್ಲ.

-ಸುಭಾಷ್ ರಾಜಮಾನೆ

ತೇಜೋ ತುಂಗಭದ್ರಾ

(ಕಾದಂಬರಿ)

ವಸುಧೇಂದ್ರ

ಪ್ರಕಟನೆ: 2019, ಪು.464

ಬೆಲೆ: ರೂ.380

ಪ್ರಕಾಶನ: ಛಂದ ಪುಸ್ತಕ, ಬೆಂಗಳೂರು

ವಸುಧೇಂದ್ರ ಅವರ ‘ತೇಜೋ ತುಂಗಭದ್ರಾ’ (2019) ಗತಕಾಲದ ಚರಿತ್ರೆಯ ಒಂದು ನಿರ್ದಿಷ್ಟ ಕಾಲಘಟ್ಟವನ್ನು ಆಧರಿಸಿ ರಚನೆಯಾದ ಕಾದಂಬರಿ. ಈ ಕೃತಿಯ ಕಥಾ ಚೌಕಟ್ಟಿಗೆ ಎರಡು ದೇಶಗಳ ನದಿಗಳನ್ನು ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. ಹದಿನೈದನೇ ಶತಮಾನದ ಪೋರ್ಚುಗಲ್‍ನಲ್ಲಿ ಹರಿಯುವ ತೇಜೋ ನದಿಯ ದಡದಲ್ಲಿರುವ ಲಿಸ್ಬನ್ ನಗರ ಹಾಗೂ ಕರ್ನಾಟಕದಲ್ಲಿನ ತುಂಗಭದ್ರಾ ತಟದಲ್ಲಿರುವ ವಿಜಯನಗರಕ್ಕೂ ಒಂದು ನಂಟನ್ನು ಬೆಸೆಯಲಾಗಿದೆ. ಇವುಗಳ ಜೊತೆಯಲ್ಲಿ ಗೋವಾಗೂ ಒಂದು ಸಂಬಂಧವನ್ನು ಕಲ್ಪಿಸಲಾಗಿದೆ.

ಸದರಿ ಕಾದಂಬರಿಯಲ್ಲಿ ಪ್ರಭುತ್ವಗಳು ವ್ಯಾಪಾರ-ವಾಣಿಜ್ಯಕ್ಕಾಗಿ ನಡೆಸಿದ ಕ್ರೌರ್ಯದ ಹಲವು ಮುಖಗಳನ್ನು ನಿರೂಪಿಸಲಾಗಿದೆ. ರಾಜಕಿಯ ಶಕ್ತಿಯಿರುವ ಪ್ರಭುತ್ವಕ್ಕೆ ಅವಕಾಶಗಳ ಬಾಗಿಲುಗಳನ್ನು ತೆರೆಯುವ ಸಾಧನವಾಗಿ ಒದಗುವ ಧರ್ಮ ಹಾಗೂ ಅದರ ದೌರ್ಜನ್ಯಕ್ಕೆ ಬಲಿಪಶುಗಳಾಗಿ ನಲುಗಿ ಹೋಗುವ ಅನ್ಯಧರ್ಮಿಯರ ಬದುಕಿನ ಸಂಕಷ್ಟಗಳನ್ನು ಬಿಚ್ಚಿಟ್ಟಿದೆ. ಆದರೆ ಕಾದಂಬರಿಯು ಬಹುತೇಕವಾಗಿ ಪ್ರಭುತ್ವದ ನೆಲೆಯಿಂದಲೇ ನಿರೂಪಣೆಗೊಂಡಿದೆ. ಈ ಕೃತಿಯು ಅನೇಕ ಬಗೆಗಳಲ್ಲಿ ಆಳ್ವಿಕೆ ನಡೆಸುವ ಪ್ರಭುತ್ವದ ಪರವಾಗಿದೆ. ಕಾದಂಬರಿಯಲ್ಲಿ ಬರುವ ಈ ಸನ್ನಿವೇಶವನ್ನು ಗಮನಿಸಬಹುದು. ಕೃಷ್ಣದೇವರಾಯನಿಗೆ ಗಂಡು ಸಂತಾನವಿಲ್ಲದ್ದಕ್ಕಾಗಿ ಶಿಲ್ಪಿ ಕೇಶವನನ್ನು ತೆಂಕ ಪದ್ಧತಿಗೆ ಒಪ್ಪಿಸಿ ಆತನೊಂದಿಗೆ ಗುಟ್ಟಾಗಿ ಒಪ್ಪಂದವನ್ನು ಮಾಡಿಕೊಳ್ಳುವಂತೆ ಮಾಡಲಾಗುತ್ತದೆ. ಕೇಶವನಿಂದ ಕೃಷ್ಣದೇವರಾಯನ ರಾಣಿಯೊಬ್ಬಳಿಗೆ ಗಂಡು ಮಗುವಾದಾಗ ಆತ ಸ್ವಯಂ ತನ್ನ ಕೈಯಿಂದಲೇ ರುಂಡವನ್ನು ಛೇದಿಸಿಕೊಳ್ಳುವ ಭಯಾನಕ ಆಚರಣೆಯೊಂದು ತೆಂಬಕಪುರದ ದೇವಸ್ಥಾನದ ಮುಂದೆ ಸಾರ್ವಜನಿಕವಾಗಿ ನಡೆಯುತ್ತದೆ.

ಕೇಶವನ ಬಲಿದಾನದ ಸಂದರ್ಭದಲ್ಲಿ ಕಾದಂಬರಿಯ ನಿರೂಪಕ ಹೀಗೆ ಹೇಳುತ್ತಾನೆ:

ಕೇಶವನ ನಿರ್ಜೀವ ರುಂಡದಲ್ಲಿ ನಗೆಯಿತ್ತು. ಮುಖದಲ್ಲಿ ಒಂದಿಷ್ಟು ಖೇದವಾಗಲಿ, ದುಗುಡವಾಗಲಿ, ಆತಂಕವಾಗಲಿ ಇರಲಿಲ್ಲ. ಸಾಮ್ರಾಜ್ಯಕ್ಕಾಗಿ ದೇಹತ್ಯಾಗ ಮಾಡಿದವನ ಮನಸ್ಸಲ್ಲಿ ಸಂಪೂರ್ಣ ಸಮ್ಮತಿಯಿತ್ತೆಂಬುದನ್ನು ಅದು ನಿರೂಪಿಸುತ್ತಿತ್ತು. ರುಂಡವನ್ನು ನೋಡಿದ ಜನರು ದೇವರನ್ನೇ ಕಂಡಷ್ಟು ಸಂಭ್ರಮದಲ್ಲಿ ಅದಕ್ಕೆ ಗದ್ಗದಿತರಾಗುತ್ತಾ ಕೈ ಮುಗಿದರು. ‘ಹರ ಹರ ಮಹಾದೇವಎಂದು ಭಕ್ತಿ ಆವೇಶದಿಂದ ಘೋಷಿಸಿದರು. ಅದಕ್ಕೆ ಹಿಡಿಹಿಡಿ ಹೂಗಳನ್ನು ಉಗ್ಗಿದರು. ದೇಶಭಕ್ತಿಗೆ ಮಿಗಿಲಾದ ಇನ್ಯಾವ ಭಕ್ತಿಯನ್ನು ಮನುಷ್ಯ ತೋರಿಸಬಲ್ಲ? ಒಂದು ಸಾಮ್ರಾಜ್ಯದ ಒಳಿತಿಗಾಗಿ ಮಾಡುವ ತ್ಯಾಗ ಯಾವ ರಾಜಸೂಯಯಾಗಕ್ಕೆ ಕಡಿಮೆ? ನಮ್ಮೆಲ್ಲರ ಯೋಗಕ್ಷೇಮ ನೋಡಿಕೊಳ್ಳುವ ಮಹಾಪ್ರಭುಗಳ ಒಳಿತಿಗಾಗಿ ಪ್ರಜೆಯೊಬ್ಬ ಇಷ್ಟೂ ಮಾಡದಿದ್ದರೆ ಅದು ಸಾಧುವೆ?” (ಪು. 352).

ಇಲ್ಲಿ ಕಾದಂಬರಿಯು ಕೇಶವನ ಆತ್ಮಹತ್ಯೆಯನ್ನು ದೇಶಭಕ್ತಿ ಎಂದು ಗುಣಗಾನ ಮಾಡುತ್ತಿದೆ. ಕೇಶವ ಹತ್ಯೆ ಮಾಡಿಕೊಳ್ಳುವಾಗ ಆತನ ಹೆಂಡತಿ ಹಂಪಮ್ಮನಿಗೆ ಕಿಂಚಿತ್ತೂ ವೇದನೆಯಾಗಲಿಲ್ಲವೆ? ಅವಳೇಕೆ ಪ್ರಶ್ನಿಸಲಿಲ್ಲ? ಹಂಪಮ್ಮನ ತಂದೆ ತಾಯಿಗಳಿಗೂ ತಮ್ಮ ಮಗಳು ವಿಧವೆಯಾಗಲು ಸಮ್ಮತಿಯಿತ್ತೆ? ಇಂತಹ ಪ್ರಶ್ನೆಗಳನ್ನು ಹಲವು ದೃಷ್ಟಿಕೋನಗಳಿಂದ ನೋಡುವ ಸಾಧ್ಯತೆಗಳನ್ನು ಕಾದಂಬರಿ ಬಿಟ್ಟು ಕೊಟ್ಟಿದೆ. ಅಷ್ಟರ ಮಟ್ಟಿಗೆ ಅದು ಆಳುವ ಪ್ರಭುತ್ವದ ಪರವಾಗಿ ವಕಾಲತ್ತು ನಡೆಸಿ ಸಾಮಾನ್ಯ ವ್ಯಕ್ತಿಯೊಬ್ಬನ ಹತ್ಯೆಗೆ ಸ್ವಾಮಿನಿಷ್ಠೆಯನ್ನು ಹಾಗೂ ದೇಶಭಕ್ತಿಯನ್ನು ಆರೋಪಿಸುತ್ತಿದೆ. ಪ್ರಭುತ್ವಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಚರಿತ್ರೆಯುದ್ದಕ್ಕೂ ಇಂತಹ ಜನರ ಬಲಿದಾನವನ್ನು ಅವರಿಂದಲೇ ಸಮ್ಮತಿಯನ್ನು ಪಡೆಯುವ ಕುತಂತ್ರಗಳನ್ನು ಮಾಡುತ್ತಲೇ ಬಂದಿವೆ. ಹಾಗಾಗಿ ವಸುಧೇಂದ್ರ ಅವರ ಕಾದಂಬರಿಯು ರಾಜಮಹಾರಾಜರ ಕೇಂದ್ರಿತವಾಗಿಯೇ ಕಟ್ಟಿರುವ ಚರಿತ್ರೆಗಿಂತ ಬೇರೆಯೇನಲ್ಲ.

ಕಾದಂಬರಿಯು ಪುರೋಹಿತಶಾಹಿಯನ್ನು, ಬ್ರಾಹ್ಮಣ್ಯವನ್ನು, ಹಿಂದುತ್ವವನ್ನು, ದೈವವಾದವನ್ನು ಹಾಗೂ ಸನಾತನ ಮೌಲ್ಯಗಳನ್ನು ಶ್ರೇಷ್ಠವೆಂದು ವಾದಿಸುವ ಹಾಗೂ ಅವುಗಳನ್ನು ಎತ್ತಿ ಹಿಡಿಯುವ ಅವಕಾಶಗಳನ್ನು ಬಿಟ್ಟು ಕೊಡುವುದಿಲ್ಲ. ಲಿಸ್ಬನ್ ನಗರದಿಂದ ಭಾರತಕ್ಕೆ ಬರುವ ವಾಸ್ಕೋ ಡ ಗಾಮಾನ ನಾವೆಯಲ್ಲಿ ಗೇಬ್ರಿಯಲ್ ಬರುತ್ತಾನೆ. ಅಲ್ಲಿ ಆತನಿಗೆ ಜಾಕೋಮ್‍ನ ಪರಿಚಯವಾಗುತ್ತದೆ. ಅವರಿಬ್ಬರ ನಡುವೆ ಆಪ್ತ ಬಾಂಧವ್ಯ ಬೆಳೆದಾಗ ಜಾಕೋಮ್ ತಾನು ಕೇರಳದವನೆಂದು ಹಾಗೂ ವಾಸ್ಕೋ ಡಿ ಗಾಮಾ ಮೊದಲು ಅಲ್ಲಿಗೆ ಬಂದಾಗ ಮೂರು ಜನ ಬ್ರಾಹ್ಮಣರನ್ನು ನಾವೆಯಲ್ಲಿ ಕರೆದೊಯ್ದ ಸನ್ನಿವೇಶವನ್ನು ಹೀಗೆ ವರ್ಣಿಸುತ್ತಾನೆ:

ನಮ್ಮ ನಾಡಿನಲ್ಲಿ ಬ್ರಾಹ್ಮಣ ಸತ್ತರೆ ಗಂಧದ ಕಟ್ಟಿಗೆಯ ಮೇಲೆ ದೇಹವನ್ನು ಇಟ್ಟು, ಘಮಘಮಿಸುವ ಆಕಳ ತುಪ್ಪದಲ್ಲಿ ಸುಡುತ್ತಾರೆ. ಆದರಿಲ್ಲಿ ಬ್ರಾಹ್ಮಣನನ್ನು ಮೀನುಗಳಿಗೆ ಆಹಾರವಾಗಲು ನೀರೊಳಕ್ಕೆ ಬಿಟ್ಟದ್ದು ಕಂಡು ನನಗೆ ದುಃಖವಾಯ್ತು. ಉನ್ನತ ಜಾತಿಯವರನ್ನು ನಾವೆಷ್ಟೇ ದ್ವೇಷಿಸಿದರೂ, ವ್ಯಕ್ತಿಯ ಸಾವಿನ ಮುಂದೆ ಎಲ್ಲ ದ್ವೇಷಅಹಂಕಾರಗಳೂ ಅರ್ಥಹೀನ ಅನ್ನಿಸುತ್ತವೆ. ನಾವಷ್ಟೇ ಏಕೆ, ಭಾರತದ ಸಂಸ್ಕøತಿಯ ಗಂಧಗಾಳಿಯಿಲ್ಲದ, ಸಾಕಷ್ಟು ಯುದ್ಧ ಸಾವುಗಳನ್ನು ಕಂಡ ಪೋರ್ಚುಗೀಸ್ ನಾವಿಕರೂ ಇದನ್ನು ಕಂಡು ಕಣ್ಣು ತೇವ ಮಾಡಿಕೊಂಡರು.”

ಇಲ್ಲಿ ಕಾದಂಬರಿಕಾರ ವಸುಧೇಂದ್ರ ಅವರು ಜಾಕೋಮ್‍ನ ಮೂಲಕ ಬ್ರಾಹ್ಮಣರ ಸಾವಿಗೆ ಅಂತಃಕರಣದಿಂದ ಮಿಡಿಯುವಂತೆ ಮಾಡಿದ್ದಾರೆ. ಜಾಕೋಮ್‍ನಿಂದ ಬ್ರಾಹ್ಮಣರು ಭೂಮಿಯ ಮೇಲಿನ ದೇವತೆಗಳೆಂದು ಹೇಳಿಸುತ್ತಾರೆ. ವಸುಧೇಂದ್ರ ಅವರು ಅನ್ಯ ಧರ್ಮಿಯರ ಬಗ್ಗೆ, ಅದರಲ್ಲೂ ಮುಸಲ್ಮಾನರ ಹತ್ಯೆಗಳ ಬಗ್ಗೆ ಎಷ್ಟೊಂದು ಪೂರ್ವಗ್ರಹ ಪೀಡಿತರಾಗಿದ್ದಾರೆ ಎಂಬುದನ್ನು ಗಮನಿಸಬಹುದು.

ಕೃಷ್ಣದೇವರಾಯ ನಾಗಲಾಪುರದ ಸಮೀಪದಲ್ಲಿ ಕೆರೆಯೊಂದನ್ನು ಕಟ್ಟಿಸಿದಾಗ ನೀರು ಬರಲಿಲ್ಲವಂತೆ. ಮಹಾರಾಜರು ರಾಜಪುರೋಹಿತರ ಬಳಿ ಆತಂಕವನ್ನು ತೋಡಿಕೊಂಡಾಗಿನ ಸಂದರ್ಭದಲ್ಲಿ ನಿರೂಪಕನ ಮಾತುಗಳು ಹೀಗಿವೆ:

ಅರವತ್ತು ಮಾನವ ಬಲಿ ಕೊಟ್ಟರೇನೇ ಕೆರೆಯಲ್ಲಿ ನೀರು ಉಕ್ಕುವುದು ಎಂದು ಪುರೋಹಿತರು ಕವಡೆ ಎಸೆದು ಹೇಳಿದರಂತೆ. ಬ್ರಾಹ್ಮಣರ ಮಾತಿಗೆ ವಿರೋಧ ಹೇಳಿ ಬದುಕಿದವರುಂಟೆ? ಮಹಾರಾಜರು ಅಪ್ಪಣೆ ಕೊಡಿಸಿಯೇ ಬಿಟ್ಟರು. ಸೆರೆಯಲ್ಲಿ ಸಿಕ್ಕಿ ಬಿದ್ದಿದ್ದ ಶತ್ರು ಸೈನಿಕರಲ್ಲಿ ಅರವತ್ತು ಜನರಿಗೆ ಸರಪಳಿ ಬಿಗಿದು ಕೆರೆ ಏರಿಗೆ ತಂದಿದ್ದಾಯ್ತು. ಒಂದಿಷ್ಟು ಜನ ತುರುಕ ಸೈನಿಕರು, ಉಳಿದವರು ಕಳಿಂಗ ಯುದ್ಧದಲ್ಲಿ ಸೋತ ಸೈನಿಕರು. ಬಲಿಕೊಡುವ ಪ್ರಾಣಿ ಯಾವ ಧರ್ಮದ್ದಾದರೆ ಏನು? ಸಾಲಾಗಿ ಒಂದೊಂದೆ ತಲೆಯನ್ನು ಕಡಿದು ಉರುಳಿಸಿದ್ದಾಯ್ತು…”

ಮೀನುಗಾರರ, ತುರುಕರ, ಸೆರೆಯಾಳುಗಳ ಜೀವಕ್ಕೆ ಕವಡೆ ಕಿಮ್ಮತ್ತು ಇಲ್ಲ; ಅದೇ ಬ್ರಾಹ್ಮಣರ ಸಾವಿನ ವಿಷಯ ಬಂದಾಗ ದಿಢೀರನೇ ಭಾರತೀಯ ಸಂಸ್ಕೃತಿಯ ಬಗ್ಗೆ ಚರ್ಚೆಯಾಗುತ್ತದೆ. ಆದ್ದರಿಂದ ಕಾದಂಬರಿಯ ನಿರೂಪಣೆಯಲ್ಲಿಯೇ ಬ್ರಾಹ್ಮಣರ ಹಾಗೂ ಪುರೋಹಿತಶಾಹಿಯ ಕುರಿತು ಪಕ್ಷಪಾತದ ಧೋರಣೆಯನ್ನು ತಾಳಲಾಗಿದೆ. ಯಾರೇ ಆಗಲಿ ಕಾದಂಬರಿಯನ್ನು ಒಂದಿಷ್ಟು ಸೂಕ್ಷ್ಮವಾದ ಹಾಗೂ ನಿಕಟವಾದ ಓದಿಗೆ ಒಳಪಡಿಸಿದರೆ ಈ ಬಗೆಯ ತಾರತಮ್ಯದ ನಿಲುವುಗಳು ಕೃತಿಯುದ್ದಕ್ಕೂ ತುಂಬಿಕೊಂಡಿದ್ದು ಕಾಣಿಸುತ್ತದೆ. ತೆಂಬಕಪುರದ ಅರ್ಚಕ ಅಂಣಂಭಟ್ಟ ಸನಾತನ ಮೌಲ್ಯಗಳನ್ನು ಪಸರಿಸುವ ವ್ಯಕ್ತಿಯಾಗಿದ್ದಾನೆ. ಇಡೀ ಆ ಊರಿನ ಪಾರುಪತ್ಯವೇ ಅವನ ಮುಖಾಂತರ ನಡೆಯುತ್ತದೆ. ಕಾದಂಬರಿಯು ಸನಾತನ ಮೌಲ್ಯಗಳನ್ನು ಪೋಷಿಸುವ ಬ್ರಾಹ್ಮಣ್ಯವನ್ನು ಹಾಗೂ ಅದರ ಪಾವಿತ್ರ್ಯವನ್ನು ಏಕಮುಖಿಯಾಗಿ ಎತ್ತಿ ಹಿಡಿಯಲು ಹೋಗಿರುವುದರಿಂದ ಇದರಲ್ಲಿ ಯಾವುದೇ ಪ್ರಗತಿಶೀಲ ಮೌಲ್ಯಗಳಿಲ್ಲ. ಸೃಜನಶೀಲ ಕೃತಿಯಲ್ಲಿ ಸಮಾನತೆಯ ಮೌಲ್ಯಗಳನ್ನು ಗಾಳಿಗೆ ತೂರಿ ಕರ್ಮಠ ಬ್ರಾಹ್ಮಣ್ಯವನ್ನು ಪ್ರತಿಪಾದಿಸುವ ಮಟ್ಟಕ್ಕೆ ಇಳಿದಿರುವುದು ಸ್ಪಷ್ಟವಾಗಿದೆ.

ಕಾದಂಬರಿಯ ಬಗ್ಗೆ ಹೇಳಲೇಬೇಕಾದ ಮತ್ತೊಂದು ಮುಖ್ಯ ಸಂಗತಿಯೆಂದರೆ ಇದು ಪುರುಷ ಪ್ರಧಾನತೆಯ ಗ್ರಹಿಕೆಗಳಿಂದಲೇ ರೂಪಿತವಾಗಿದೆ. ಈ ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳ ಪ್ರಜ್ಞೆಯು ಪುರುಷಾಧೀನ ನೆಲೆಯಿಂದಲೇ ನಿರ್ಮಿಸಲಾಗಿದೆ. ಪುರುಷ ಪಾತ್ರಗಳಿಗೆ ಹೋಲಿಸಿದರೆ ಇಲ್ಲಿನ ಬೆಲ್ಲಾ, ತೆಂಬಕ್ಕ, ಗುಣಸುಂದರಿ, ಚಂಪಕ್ಕ, ಹಂಪಮ್ಮ, ಅಗ್ವೇದ, ಸತ್ಯಕ್ಕ -ಇವರೆಲ್ಲರೂ ಪುರುಷ ಪ್ರಧಾನತೆಯ ನೆರಳಿನಲ್ಲಿಯೇ ಬದುಕನ್ನು ಸವೆಸುವವರಾಗಿದ್ದಾರೆ. ಇವರಲ್ಲಿ ಹಂಪಮ್ಮ ಸತಿ ಸಹಗಮನದ ಚಿತೆಯಲ್ಲಿ ಬಿದ್ದು ಸಾಯಲು ಸಿದ್ಧಳಾದವಳು ಕೊನೆಯ ಗಳಿಗೆಯಲ್ಲಿ ತನ್ನ ಹೊಟ್ಟೆಯಲ್ಲಿ ಮಗುವಿದೆ ಎಂಬುದರ ಅರಿವಾಗಿ ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಓಡಿ ಹೋಗುವ ಧೈರ್ಯವನ್ನು ಪ್ರದರ್ಶಿಸುತ್ತಾಳೆ. ಆಕೆ ತನಗಾಗಿ ನಡೆದ ‘ಪೆಣ್‍ಬುಯ್ಯಲ್’ (ಕನ್ಯೆಗಾಗಿ ನಡೆಯುವ ಕುಸ್ತಿ) ಕಾಳಗದಲ್ಲಿ ಕೇಶವ ಮಾಪಳ ನಾಯಕನನ್ನು ಒಂದೇ ಏಟಿಗೆ ಕತ್ತು ತಿರುಗಿಸಿ ಹತ್ಯೆ ಮಾಡಿದಾಗ ಅವನ ಹೆಂಡತಿ ತೆಂಬಕ್ಕ ಸತಿ ಪದ್ಧತಿಯ ನೆಪದಲ್ಲಿ ಜೀವಂತ ಸಮಾಧಿಯಾಗುತ್ತಾಳೆ. ಆಕೆ ತನ್ನ ಮಗಳು ಈಶ್ವರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹಂಪಮ್ಮನಿಗೆ ವಹಿಸುತ್ತಾಳೆ.

ಕೇಶವ ತೆಂಕದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಾಗ ಹಂಪಮ್ಮ ಸತಿ ಸಹಗಮನಕ್ಕಾಗಿ ಸಿದ್ಧಳಾಗುವ ಸಂದರ್ಭದಲ್ಲಿ ದೇವದಾಸಿ ಗುಣಸುಂದರಿಗೆ ಹೇಳುವ ಮಾತುಗಳು ಹೀಗಿವೆ:

ಈವತ್ತಿನಿಂದ ಈಶ್ವರಿಯ ಜವಾಬ್ದಾರಿ ನೀನು ನೋಡಿಕೋಅವರಮ್ಮಗೆ ನಾನು ಮಾತು ಕೊಟ್ಟಿದ್ದೆ. ಆದರೆ ಮಾತು ಪೂರ್ತಿ ನಡೆಸಲು ತೆಂಬಕಸ್ವಾಮಿ ಅವಕಾಶ ಕೊಡಲಿಲ್ಲ. ಅವಳ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ರವಾನಿಸದಿದ್ದರೆ ಮೇಲಿರುವ ತೆಂಬಕ್ಕನ ಮನಸ್ಸು ನೋಯುತ್ತದೆ, ಶಾಪ ಕೊಡುತ್ತಾಳೆ. ಆದರೆ ಒಂದು ಮಾತು. ನನ್ನಂತೆ ಅವಳನ್ನು ಯಾರಿಗೂ ಮದುವೆ ಮಾಡಿಕೊಡಬೇಡ; ಮುತ್ತೈದೆಯಾಗಿ ಮಾಡುವುದು ಬೇಡ. ಆಕೆಗೆ ಹಾಡುವುದನ್ನು ಕಲಿಸು, ನರ್ತಿಸುವುದನ್ನು ಕಲಿಸು, ಗ್ರಂಥಗಳನ್ನು ಓದುವುದನ್ನು ಕಲಿಸುಆಕೆಯನ್ನು ದೇವದಾಸಿ ಮಾಡು.”

ಹಂಪಮ್ಮ ಮಗು ಈಶ್ವರಿಯನ್ನು ದೇವದಾಸಿಯನ್ನಾಗಿಸಲು ನೀಡುವ ಸಲಹೆಯನ್ನು ಗಮನಿಸಿದರೆ ಕಾದಂಬರಿಯ ನಿಲುವು ಏನೆಂಬುದು ತಿಳಿಯದೇ ಇರುವುದಿಲ್ಲ. ಹೆಂಗಸರು ಹಾಡುವ ಹಾಗೂ ಕುಣಿಯುವ ದೇವದಾಸಿ ಪದ್ಧತಿ ಪ್ರಭುತ್ವದ ಭಾಗವಾಗಿಯೇ ನಿರ್ಮಿತವಾಗಿರುವುದು. ಆದರೆ ಇದನ್ನು ಹೆಣ್ಣಿನ ಮೂಲಕವೇ ಮುಂದುವರೆಯುವಂತೆ ನೋಡಿಕೊಳ್ಳಲಾಗುತ್ತದೆ. ಕಾದಂಬರಿಯಲ್ಲಿ ಯಾವ ಮಹಿಳೆಯು ಕೂಡ ಗಂಡು ಯಜಮಾನಿಕೆಯನ್ನು ಪ್ರತಿರೋಧಿಸಿ ನಿಲ್ಲುವುದಿಲ್ಲ. ಹಾಗಾಗಿ ಇಲ್ಲಿಯ ಮಹಿಳೆಯರನ್ನು ಗಂಡು ವ್ಯವಸ್ಥೆಯ ಪಡಿಯಚ್ಚುಗಳಾಗಿಯೇ ವರ್ತಿಸುವಂತೆ ಮಾಡಲಾಗಿದೆ. ಇದರಿಂದಾಗಿ ವಸುಧೇಂದ್ರ ಅವರು ಹೆಣ್ಣಿನ ದೃಷ್ಟಿಕೋನದಿಂದ ಚರಿತ್ರೆಯನ್ನು ಹಾಗೂ ಪ್ರಭುತ್ವವನ್ನು ನೋಡಲು ಸಾಧ್ಯವಾಗಿಲ್ಲ. ಇದು ಕಾದಂಬರಿಯು ಅತಿ ದೊಡ್ಡ ಮಿತಿಯೂ ಹೌದು; ಲೇಖಕರ ಲೋಕ ದೃಷ್ಟಿಯಲ್ಲಿರುವ ಸಂಕುಚಿತ ಮನೋಧರ್ಮವೂ ಹೌದು.

ಯಾವ ನಿಟ್ಟಿನಿಂದ ನೋಡಿದರೂ ವಸುಧೇಂದ್ರ ಅವರು ತಮ್ಮ ಕಾದಂಬರಿಯನ್ನು ಅತ್ಯಂತ ಸಾಂಪ್ರದಾಯಿಕ ಹಾಗೂ ಜಡ ವೈದಿಕ ಮೌಲ್ಯಗಳಿಗೆ ಬದ್ಧವಾಗಿಯೇ ರಚಿಸಿದ್ದಾರೆ. ಒಂದು ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಹಾಗೂ ಅದರ ವಕ್ತಾರರಾಗಿಯೇ ಕಥಾನಕವನ್ನು ನಿರೂಪಿಸಿದ್ದಾರೆ. ಇದು ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಎಸ್.ಎಲ್. ಭೈರಪ್ಪನವರ ‘ದಾಟು’ ಕಾದಂಬರಿಯನ್ನು ನೆನಪಿಸುತ್ತದೆ. ನೂರಾ ಇಪ್ಪತ್ತು ವರ್ಷಗಳ ಕನ್ನಡ ಕಾದಂಬರಿಗಳ ಚರಿತ್ರೆಯಲ್ಲಿ ತೀರ ಸವಕಲಾದ ದಾರಿಯಲ್ಲಿ ನಡೆಯುವ ಲೇಖಕರು ತಮ್ಮ ಪ್ರತಿಗಾಮಿ ನಿಲುವುಗಳನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ತುರುಕಿರುವುದರಿಂದ ಈ ಕೃತಿಗೆ ಯಾವುದೇ ಸಾಂಸ್ಕøತಿಕ ಮಹತ್ವವಿಲ್ಲ.

ರಾಹುಲ ಸಾಂಕೃತ್ಯಾಯನ ಅವರು ಹಿಂದಿಯಲ್ಲಿ 1942ರಲ್ಲಿ ಪ್ರಕಟಿಸಿದ ‘ವೋಲ್ಗಾ ಗಂಗಾ’ (ಕನ್ನಡದಲ್ಲಿ ನವಕರ್ನಾಟಕ ಪ್ರಕಾಶನದಿಂದ 1978ರಲ್ಲಿ ಬಿ.ಎಂ. ಶರ್ಮಾ ಅವರು ಅನುವಾದಿಸಿದ್ದಾರೆ) ಕೃತಿಯಲ್ಲಿ ರಷ್ಯಾದ ವೋಲ್ಗಾ ಮತ್ತು ಭಾರತದ ಗಂಗಾ ನದಿಗಳ ಬಯಲಿನ ಕ್ರಿ.ಪೂ. 6000 ದಿಂದ ಕ್ರಿ.ಶ. 1942ರ ವರೆಗಿನ ಮಾನವ ಸಮಾಜದ ಐತಿಹಾಸಿಕ, ಆರ್ಥಿಕ, ರಾಜನೈತಿಕದ ಏಳುಬೀಳುಗಳ ಕಥನವಿದೆ. ಸಾಂಕೃತ್ಯಾಯನ ಅವರ ಕೃತಿಯ ಹರವು ಮಾತ್ರವೇ ವಿಸ್ತøತವಾದದ್ದಲ್ಲ; ಅದು ಸಾಮಾಜಿಕ ಹಾಗೂ ರಾಜಕೀಯ ಪ್ರಭುತ್ವವನ್ನು ಮೀರಿ ಮಾನವ ಜನಾಂಗದ ಕಥನವಾಗಿ ರೂಪುತಾಳಿದೆ. ಮನುಷ್ಯನ ಸಣ್ಣತನ, ಅಹಂಕಾರ, ಮೋಸ, ವಂಚನೆಗಳನ್ನು ವಿಡಂಬಿಸಲಾಗಿದೆ. ‘ವೋಲ್ಗಾ ಗಂಗಾ’ದ ಹಾಗೆಯೇ ಶೀರ್ಷಿಕೆಯಲ್ಲಿ ಸಾಮ್ಯ ಹೊಂದಿರುವ ‘ತೇಜೋ ತುಂಗಭದ್ರಾ’ ಕೃತಿಯು ಜೀವವಿರೋಧಿ ನಿಲುವುಗಳನ್ನು ಪ್ರತಿಪಾದಿಸುತ್ತದೆ.

ಈ ಕಾದಂಬರಿಯ ಬಂಧ ಹಾಗೂ ತಂತ್ರದ ದೃಷ್ಟಿಯಿಂದ ನೋಡಿದರೆ ಕತೆಯ ಬಹುತೇಕ ಭಾಗವು ನಿರೂಪಕನಿಂದಲೇ ಹೇಳಲ್ಪಟ್ಟಿದೆ. ಕತೆಯನ್ನು ಓದುಗರ ಕುತೂಹಲ ತಣಿಸುವಂತೆ ರೋಚಕವಾಗಿ ನಿರೂಪಿಸಲು ಹೆಚ್ಚಿನ ಒತ್ತು ಬಿದ್ದಿದೆ. ಚರಿತ್ರೆಯ ಘಟನೆಗಳನ್ನು ರಾಜಕೀಯ ಪ್ರಭುತ್ವಕ್ಕೆ ಹಾಗೂ ಆ ಕಾಲದ ಕಟ್ಟುಪಾಡುಗಳಿಗೆ ಅನುಗುಣವಾಗಿಯೇ ನಿರೂಪಿಸುವುದಾಗಿದ್ದರೆ ಪಂಪನ ‘ವಿಕ್ರಮಾರ್ಜುನ ವಿಜಯ’, ರನ್ನನ ‘ಸಾಹಸಭೀಮ ವಿಜಯ’ ಹಾಗೂ ಕುಮಾರವ್ಯಾಸನ ‘ಕರ್ನಾಟ ಭಾರತ ಕಥಾಮಂಜರಿ’ ಮಹಾಕಾವ್ಯಗಳನ್ನು ಇಂದಿನ ವರ್ತಮಾನದಲ್ಲಿ ಓದುವ ಅಗತ್ಯವೇ ಬೀಳುತ್ತಿರಲಿಲ್ಲ. ಈ ಕವಿಗಳು ತಮ್ಮ ಕಾವ್ಯದ ಮೂಲಕ ತಮ್ಮ ಕಾಲದ ಮೌಲ್ಯಗಳನ್ನು ನಿಷ್ಠುರವಾಗಿಯೇ ಅನುಸಂಧಾನ ಮಾಡಿದ್ದಾರೆ. ಆದರೆ ವಸುಧೇಂದ್ರ ಅವರ ಕಾದಂಬರಿ ಕೇವಲ ಪ್ರಭುತ್ವ ಪ್ರಣೀತ ಚರಿತ್ರೆಯ ನೆರಳಾಗಿದೆಯೇ ಹೊರತು ಜನಸಾಮಾನ್ಯರ ನೋವು ನಲಿವುಗಳನ್ನು ಅವರದ್ದೇ ನೆಲೆಯಿಂದ ಶೋಧಿಸಿ ನೋಡಲು ಸಾಧ್ಯವಾಗಿಲ್ಲ.

Leave a Reply

Your email address will not be published.