ವಾದ-ವಾಗ್ವಾದ-ಸಂವಾದ

ವಾದವು ನಿರ್ದಿಷ್ಟ ಆಲೋಚನಕ್ರಮವನ್ನು ಪ್ರತಿಕ್ರಿಯೆಗಾಗಿ ಮುಂದಿಡುವ ಸ್ತರ. ವಾಗ್ವಾದವು ಹಲವು ಆಲೋಚನಕ್ರಮಗಳ ಮುಖಾಮುಖಿ ಮತ್ತು ಚರ್ಚೆ. ಸಂವಾದವು ಪರಸ್ಪರ ತಿದ್ದಿಕೊಂಡು ಕಲಿಯುವ ನಮ್ರತೆ. ವಿವಾದಗಳು ಕೇವಲ ಫಿತೂರಿಗಳು.

ರಹಮತ್ ತರೀಕೆರೆ

ನಮ್ಮ ಕಣ್ಣೆದುರು ದಿನನಿತ್ಯವೂ ನಡೆಯುವ ವಿದ್ಯಮಾನಗಳ ಹಿಂದೆ ಎರಡು ಪ್ರಮುಖ ಪ್ರೇರಣೆಗಳಿವೆ. ಒಂದು-ನಾವು ಬದುಕಲು ನಮ್ಮ ಭೌತಿಕ ಪರಿಸರದ ಒತ್ತಾಸೆಯಿಂದ ಏರ್ಪಡಿಸಿಕೊಂಡಿರುವ ರಚನೆಗಳು. ದುಡಿಮೆ, ಆಹಾರಕ್ರಮ, ಮನೆವಿನ್ಯಾಸ, ಉಡುಪು, ಮಾತುಕತೆ ಇತ್ಯಾದಿ. ಎರಡು-ಅಮೂರ್ತವಾದ ಚಿಂತನೆ, ನಂಬಿಕೆ, ಸಿದ್ಧಾಂತಗಳ ಪ್ರಭಾವದಿಂದ ರೂಪುಗೊಂಡಿರುವ ನಮ್ಮ ಆಲೋಚನೆ ಮತ್ತು ವರ್ತನೆಗಳು.

ದೇವರು-ಧರ್ಮ, ಸ್ವರ್ಗ-ನರಕ, ಜಾತಿ, ಗಂಡು-ಹೆಣ್ಣುಭೇದ, ಕಪ್ಪು-ಬಿಳಿಯ ತಾರತಮ್ಯಗಳ ಹಿಂದಿರುವುದು ಭೌತಿಕ ಪರಿಸರದ ಒತ್ತಾಸೆಯಲ್ಲ. ಒಂದು ವರ್ಗವು ತನ್ನ ಹಿತಾಸಕ್ತಿಗಾಗಿ ಸೃಷ್ಟಿಸಿದ ವಿಚಾರಗಳು. ನಮ್ಮ ಬಾಳಿನ ಬಹುತೇಕ ಆಯ್ಕೆ-ಇಷ್ಟಾನಿಷ್ಟಗಳನ್ನು ಪ್ರಭಾವಿಸುವುದು ಈ ಅಮೂರ್ತ ತತ್ವವಿಚಾರಗಳೇ. ಆದರೆ ಅವು ತಮ್ಮ ಮಾತುಕತೆ ವರ್ತನೆ ಆಯ್ಕೆಗಳ ಹಿಂದೆ ಇವೆಯೆಂಬ ಅರಿವು ಬಹಳಷ್ಟು ಜನರಿಗೆ ಇರುವುದಿಲ್ಲ. ಬಿಳಿಯ ಬಣ್ಣ ಸುಂದರವಾದುದು, ನಿಸರ್ಗವಿರುವುದು ಮನುಷ್ಯರ ಉಪಭೋಗಕ್ಕೆ, ಮಹಿಳೆಯರು ಗಂಡಸರ ಸಮನಲ್ಲ, ನಿರ್ದಿಷ್ಟ ಸಮುದಾಯಕ್ಕೆ ದೇಶನಿಷ್ಠೆಯಿಲ್ಲ, ನಿರ್ದಿಷ್ಟ ಭಾಷೆ ಶ್ರೇಷ್ಠ-ಇತ್ಯಾದಿ ಅನೇಕ ಗ್ರಹಿಕೆಗಳು, ನಮ್ಮ ನೇರ ಅನುಭವದಿಂದ ಬಂದವಲ್ಲ. ಸಮಾಜದಲ್ಲಿ ಚಾಲ್ತಿಯಲ್ಲಿರುವ ವಿಚಾರ-ನಡಾವಳಿಗಳನ್ನು ವಿಮರ್ಶೆಯಿಲ್ಲದೆ ಒಪ್ಪಿಕೊಂಡಿದ್ದರಿಂದ ಬಂದವು.

ಕರಿಯರು ಮೂಲತಃ ಸೋಮಾರಿಗಳು ವಂಚಕರು. ಅವರನ್ನು ದಂಡನೆಯ ಮೂಲಕವೇ ಸುಧಾರಿಸಬೇಕು, ಇದು ಬಿಳಿಯರ ಮೇಲಿರುವ ಹೊಣೆ ಎಂಬ ಜನಾಂಗವಾದಿ ಸಿದ್ಧಾಂತವಿದೆ. ಇದಕ್ಕೂ, ಈಚೆಗೆ ಅಮೆರಿಕದಲ್ಲಿ ಬಿಳಿಯ ಪೊಲೀಸನೊಬ್ಬನು ಕರಿಯ ವ್ಯಕ್ತಿಯ ಕೊರಳಮೇಲೆ ಮೊಳಕಾಲೂರಿ ಉಸಿರುಗಟ್ಟಿಸಿ ಕೊಂದದ್ದಕ್ಕೂ ಸಂಬಂಧ ಏರ್ಪಟ್ಟಿರುವುದು ಇದೇ ತರ್ಕದಲ್ಲಿ.

ದಲಿತರ ಮಹಿಳೆಯರ ಮುಸ್ಲಿಮರ ಆದಿವಾಸಿಗಳ ಮೇಲೆ, ಭಾರತದಲ್ಲಿ ಕೆಲವು ವರ್ಷಗಳಿಂದ ಆಗುತ್ತಿರುವ ಬೀದಿಹಲ್ಲೆಗಳ ಹಿಂದೆಯೂ, ಹೀಗೆ ವ್ಯವಸ್ಥಿತವಾಗಿ ಹುಟ್ಟಿಸಿ ಹರಡಿರುವ ತತ್ವವಿಚಾರಗಳಿವೆ. ವರ್ಣಭೇದನೀತಿ, ಪುರುಷವಾದ, ಕೋಮುವಾದ, ಝಿಯೊನಿಜಂ, ಸುನ್ನಿಮೂಲಭೂತವಾದ, ಫ್ಯಾಸಿಸಂ, ಮನುಷ್ಯಕೇಂದ್ರಿತ ಜಗತ್ತಿನ ಪರಿಕಲ್ಪನೆ, ಬಹುಸಂಖ್ಯಾತವಾದ, ವಸಾಹತುಶಾಹಿವಾದ, ಮಾರುಕಟ್ಟೆವಾದ, ಬಂಡವಾಳಶಾಹಿ ಅಭಿವೃದ್ಧಿ ಮೀಮಾಂಸೆ ಮುಂತಾದ ಪರಿಕಲ್ಪನೆಗಳು, ಹೀಗೇ ರೂಪುಗೊಂಡವು. ಸಮಸ್ಯೆಯೆಂದರೆ, ಇವು ಆಳಿಸಿಕೊಳ್ಳುವ ವರ್ಗದವರ ಸಾಮಾನ್ಯ ಜ್ಞಾನವಾಗಿಯೂ ಮಾರ್ಪಡುವುದು. ಇದೊಂದು ಬಗೆಯಲ್ಲಿ ಜಿಂಕೆಗಳು ಹುಲಿಯ ಸಿದ್ಧಾಂತವನ್ನು ತಮಗೂ ಒಳಿತೆಂದು ಒಪ್ಪಿಕೊಂಡಂತೆ. 

ಇಂತಹ ಪರಿಕಲ್ಪನೆ ಸಿದ್ಧಾಂತ ತತ್ವವಿಚಾರಗಳು, ಒಪ್ಪಿತ ಸಾಮಾನ್ಯ ಜ್ಞಾನವಾಗಿರುವ ಸಮಾಜದಲ್ಲಿ, ಅವನ್ನು ಪ್ರಶ್ನಿಸಬೇಕಾಗುವುದು; ವಿಮರ್ಶೆಗೆ ಒಡ್ಡಬೇಕಾಗುವುದು; ಅವನ್ನು ಒಡೆದು, ಸರ್ವರಿಗೂ ಸಮಾನತೆ ಸ್ವಾತಂತ್ರ್ಯ ಸಮೃದ್ಧಿ ನೀಡುವ ಆರೋಗ್ಯಕರವಾದ ಪರ್ಯಾಯ ತತ್ವವಿಚಾರ ಪರಿಕಲ್ಪನೆ ಕಟ್ಟಿಕೊಳ್ಳಬೇಕಾಗುವುದು. ಚರಿತ್ರೆಯನ್ನು ನೋಡಿದರೆ, ಆಳುವವರ್ಗದ ಆಲೋಚನಕ್ರಮದ ದಮನಕಾರಿ ಚಿಂತನೆ ಮತ್ತು ರಚನೆಗಳನ್ನು, ದಮನಿತರು ತಮ್ಮ ಅಸ್ತಿತ್ವಕ್ಕಾಗಿಯೂ ನ್ಯಾಯಬದ್ಧ ಹಕ್ಕಿಗಾಗಿಯೂ ಬಿಡುಗಡೆಗಾಗಿಯೂ ಮುಖಾಮುಖಿ ಮಾಡುತ್ತ ಬಂದಿರುವುದು ತಿಳಿಯುವುದು. ಬುದ್ಧನ ಧಮ್ಮ, ಸೂಫಿಸಂ, ಪ್ರೊಟೆಸ್ಟಂಟ್, ಶರಣಪಂಥ, ನಾಥಪಂಥ, ತಾವೊ, ಝೆನ್, ಅವಧೂತ-ಆರೂಢ ಇತ್ಯಾದಿ ಧರ್ಮ-ಪಂಥಗಳು ಒಂದು ಕಾಲಕ್ಕೆ ಹೀಗೆ ಹುಟ್ಟಿದ ಬಂಡುಕೋರ ಪರ್ಯಾಯಗಳೇ. ಮಾರ್ಕ್ಸ್ವಾದ ಪ್ರಜ್ಞಾಪ್ರಭುತ್ವ ಸಮಾಜವಾದ ಸಮಾನತಾವಾದ ಸ್ತ್ರೀವಾದ ಮುಂತಾದ ತತ್ವಸಿದ್ಧಾಂತಗಳು ರೂಪುಗೊಂಡಿದ್ದು ಹೀಗೆಯೇ.

ಸಾಮಾಜಿಕ ರಾಜಕೀಯ ಅಧಿಕಾರ ಹಾಗೂ ಸಂಪತ್ತಿನ ಮೇಲೆ ನಿಯಂತ್ರಣ ಪಡೆಯಲು ಅಧಿಕಾರಸ್ಥರು ಸದಾ ಯತ್ನಿಸುತ್ತಿರುತ್ತಾರೆ; ಅದೇ ಕಾಲಕ್ಕೆ ಅವರ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರವಾಗಿ ಸಮಾನತೆಯಿಂದ ಬದುಕಲು ಪ್ರಜ್ಞಾವಂತ ದುರ್ಬಲರು, ಪ್ರತಿಚಿಂತನೆ-ಪ್ರತಿಚಟುವಟಿಕೆ ಮಾಡುತ್ತಲೇ ಬಂದಿದ್ದಾರೆ. ಕಾಲಕ್ಕೆ ತಕ್ಕಂತೆ ಎರಡೂ ಬಣಗಳ ತತ್ವವಿಚಾರ, ಯುದ್ಧತಂತ್ರ ಬದಲಾಗುತ್ತಲೂ ಬಂದಿವೆ. ಇವು ನೇರ ಮುಖಾಮುಖಿಯಾದಾಗೆಲ್ಲ ಸಂಘರ್ಷ ಸಂಭವಿಸಿವೆ. ಸಮಾಜ ಬದಲಾಗಿದೆ. ನಾವು ಇಂದು ಜ್ಞಾನವೆಂದು ಕರೆಯಲಾಗುವ ಅನೇಕ ಬಗೆಯ ತಿಳಿವಳಿಕೆಗಳು ಈ ಬಗೆಯ ಚಾರಿತ್ರಿಕ ಸಂಘರ್ಷದ ಫಲ. ಸಮರ್ಥನೆ, ಭಿನ್ನಮತ, ಪ್ರಶ್ನೆಗಳ ಪ್ರಕ್ರಿಯೆಯ ಫಲಗಳು. ಹೀಗೆ ಮಥನ ಸಂಘರ್ಷಗಳಲ್ಲಿ ಹುಟ್ಟಿದ ತಿಳಿವಳಿಕೆಗಳು ಜನರ ಆಲೋಚನೆ ಕ್ರಿಯೆಗಳನ್ನು ಬದಲಿಸಿವೆ. ಜಗತ್ತನ್ನು ಚಲಿಸುವಂತೆ ಮಾಡಿವೆ.

ಇಂತಹ ಚಲನಶೀಲವಾದ ಆಲೋಚನಕ್ರಮ-ಪರಿಕಲ್ಪನೆ-ಸಿದ್ಧಾಂತಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ, ಮೂರು ಮುಖ್ಯ ವಿಧಾನಗಳು ಭಾಗವಹಿಸುತ್ತವೆ. ಅವನ್ನು ವಾದ-ವಾಗ್ವಾದ-ಸಂವಾದ ಎಂದು ಕರೆಯಬಹುದು. ಯಾವುದೇ ಒಂದು ಸಮಾಜ, ಧರ್ಮ, ರಾಜಕೀಯ ವ್ಯವಸ್ಥೆ, ಕುಟುಂಬ, ರಾಜಕೀಯ ಪಕ್ಷ, ಸಿದ್ಧಾಂತ, ವಿಶ್ವವಿದ್ಯಾಲಯ, ಜೀವಂತವಾಗಿ ಚಲನಶೀಲವಾಗಿ ಇದೆ ಎನ್ನುವುದನ್ನು ನಿರ್ಧರಿಸುವುದು ಈ ಮೂರು ಹಂತಗಳ ಪ್ರಕ್ರಿಯೆ.

  1. ವಾದವೆಂದರೆ, ತರ್ಕಬದ್ಧವಾಗಿ ಆಧಾರಸಮೇತವಾಗಿ ಲೋಕವನ್ನು ವಿವರಿಸುವ ನಿರ್ದಿಷ್ಟ ಚಿಂತನೆಯನ್ನು ಮಂಡಿಸುವುದು. ಈ ವಾದವು ಸಮಾಜದಲ್ಲಿ ಚಾಲ್ತಿಯಲ್ಲಿರುವ ಸ್ಥಗಿತವಾಗಿರುವ ತಿಳಿವಳಿಕೆಯನ್ನು ಸಹಜವಾಗಿಯೇ ಕದಡುವುದು. ಕವಿಗಳು ತಮ್ಮ ಎದುರಿಗಿರುವ ಲೋಕದಬದುಕು ಅಥವಾ ನಿಸರ್ಗದಿಂದ ಮಾತ್ರವಲ್ಲ, ಪಾರಂಪಾರಿಕ ಚರಿತ್ರೆ ಧರ್ಮ ಪುರಾಣಗಳನ್ನು ಕೂಡ, ಹೊಸ ಚಿಂತನೆಗೆ ತಕ್ಕಂತೆ ಬದಲಿಸಿ ಹೊಸಸೃಷ್ಟಿ ಮಾಡುವ ಹಕ್ಕಿದೆ ಎಂಬ ಪರಿಭಾವನೆಯಲ್ಲಿ, ಕುವೆಂಪು `ಶೂದ್ರತಪಸ್ವಿ’ ರಚಿಸಿದರು. ಅದೊಂದು ಬಗೆಯಲ್ಲಿ ಸೃಜನಶೀಲ ನೆಲೆಯ ವಾದಮಂಡನೆಯೇ ಆಗಿತ್ತು.
  2. ಮಾಸ್ತಿಯವರು ಇದನ್ನೊಪ್ಪಲಿಲ್ಲ. ಜನರ ಧಾರ್ಮಿಕ ಭಾವನೆ-ಶ್ರದ್ಧೆಗಳಲ್ಲಿ ಆಳವಾಗಿ ನೆಲೆಸಿರುವ ಪೌರಾಣಿಕ ಧಾರ್ಮಿಕ ನಕ್ಷೆಗಳನ್ನು, ಕವಿಗಳು ತಮ್ಮ ಸೃಜನಶೀಲ ಸ್ವಾತಂತ್ರ್ಯಕ್ಕಾಗಿ ಹೀಗೆ ಕದಲಿಸಬಾರದು ಎಂದು ಪ್ರತಿವಾದ ಹೂಡಿದರು. ಕುವೆಂಪು ತಮ್ಮ ನಿಲುವನ್ನು ಸಮರ್ಥಿಸಿಕೊಂಡು, ಮಾಸ್ತಿಯವರ ವಾದವನ್ನು ನಿರಾಕರಿಸುತ್ತ ಪ್ರತ್ಯುತ್ತರ ನೀಡಿದರು. ಇದು ವಾಗ್ವಾದ. ಈ ವಾಗ್ವಾದವು ಚರಿತ್ರೆ-ಪುರಾಣಗಳ ವಸ್ತುವನ್ನು ಬಳಸಿಕೊಳ್ಳುವ ಲೇಖಕರ ಸ್ವಾತಂತ್ರ್ಯ ಹಾಗೂ ಜನರ ಭಾವನೆಗಳ ಬಗೆಗಿದ್ದ ಕನ್ನಡದ ತಿಳಿವನ್ನು ವಿಸ್ತರಿಸಿತು. ಹೀಗೆಯೇ ಗಾಂಧಿ-ಅಂಬೇಡ್ಕರ್, ಗಾಂಧಿ-ಟಾಗೂರ್ ಅವರ ವಾಗ್ವಾದಗಳು ನಮ್ಮ ರಾಜಕೀಯ ಚಿಂತನೆಗಳನ್ನು ಹರಿತಗೊಳಿಸಿವೆ.
  3. ವಾದ-ಪ್ರತಿವಾದಗಳು ಕೆಲವೊಮ್ಮೆ ಹೊಸ ತಿಳಿವನ್ನು ಹುಟ್ಟಿಸದೆ ಹೋಗಬಹುದು. ಕಾರಣ, ಸತ್ಯವೇನೆಂದು ತಿಳಿದಿದ್ದರೂ ಕಕ್ಷಿದಾರರನ್ನು ಗೆಲ್ಲಿಸಬೇಕೆಂದು ಕೋರ್ಟಿನಲ್ಲಿ ವಕೀಲಿ ಮಾಡುವಂತೆ, ವಾದ-ಪ್ರತಿವಾದ ಮಾಡುವವರು ಹಠಕ್ಕೆ ಬಿದ್ದಿರುತ್ತಾರೆ. ಆಗದು ಅರ್ಥಪೂರ್ಣ ವಾಗ್ವಾದವಾಗದೆ ಜಗಳದ ಮಟ್ಟಕ್ಕೆ ನಿಂತುಬಿಡುತ್ತದೆ. ಸರ್ಕಾರ-ವಿರೋಧ ಪಕ್ಷಗಳ ನಡುವಿನ ಜಟಾಪಟಿಗಳಲ್ಲಿ ಹೆಚ್ಚಿನವು ಇಂಥವು. ಎದುರಾಳಿಯ ವಾದದಲ್ಲಿ ಇರುವ ನಿಜವನ್ನು ಅರಿಯುವ ಮುಕ್ತತೆ ನಮ್ರತೆಗಳಿದ್ದಾಗ; ತಮ್ಮ ವಾದದಲ್ಲಿರುವ ದೋಷಗಳನ್ನು ಮನಗಾಣುವ ಸ್ವವಿಮರ್ಶೆ ಇದ್ದಾಗ, ವಾಗ್ವಾದ ಸಂವಾದವಾಗುತ್ತದೆ. ಆಗ ತಿಳಿವಳಿಕೆ ಮತ್ತೆ ಚಿಗುರೊಡೆಯುತ್ತದೆ. ಹೊಳೆ ಹರಿಯಲು ಆರಂಭಿಸುತ್ತದೆ. ಹೀಗಲ್ಲದೆ, ತಮ್ಮ ವಾದಗಳ ತುದಿಗಳಿಗೆ ಅಂಟಿಕೊಂಡು ವಾದಿಸುವವರು ಒಂದು ಹಂತದ ಬಳಿಕ, ಕುಬ್ಜರಾಗುವ ಸಾಧ್ಯತೆಯಿದೆ. ಬಹಳಷ್ಟು ದೇಶಗಳ ನಡುವಣ ವೈಮನಸ್ಸುಗಳು ಹೀಗೆ ಸಂವಾದವಿಲ್ಲದೆ ಹಿಂಸೆಗೆ ಕಾರಣವಾಗಿವೆ. ಅನೇಕ ದಾರ್ಶನಿಕ ಪ್ರಸ್ಥಾನಗಳ ಸಹಜ ವಿಕಸನ ನಿಂತುಹೋಗಿ ಅವು ಜಡ ಸಂಪ್ರದಾಯಗಳಾಗಿರುವುದು, ಈ ಬಗೆಯ ಸಂವಾದರಹಿತ ಮನೋಭಾವದಿದಲೇ. ಇದರ ಫಲವಾದ ಜಡತೆಯನ್ನು ಧರ್ಮಗಳಲ್ಲಿ, ಸಮಾಜಗಳಲ್ಲಿ, ರಾಜಕೀಯ ಚಿಂತನೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕಾಣಬಹುದು.

ಹಲವಾರು ಧರ್ಮ ಸಂಸ್ಕೃತಿ ಭಾಷೆ ಚಿಂತನಾಕ್ರಮ ಇರುವ, ಇವುಗಳ ನಡುವೆ ತಾರತಮ್ಯ ಮತ್ತು ಶ್ರೇಣೀಕರಣಗಳೂ ಇರುವ, ಕುಟುಂಬ ಸಮುದಾಯ ಸಮಾಜ ರಾಜಕೀಯವ್ಯವಸ್ಥೆ ಅಥವಾ ದೇಶಗಳಲ್ಲಿ, ತಾತ್ವಿಕ ರಾಜಕೀಯ ಸೈದ್ಧಾಂತಿಕ ಭಿನ್ನಮತಗಳು ಹುಟ್ಟುವುದು ಸಹಜ. ಅವು ವಾದ-ವಿವಾದಗಳಾಗಿ ಬದಲಾಗುವುದು ಕೂಡ ಸಹಜ. ಆದರೆ ಅವು ಸಂವಾದವಾಗುತ್ತವೆಯೊ ವಿವಾದವಾಗುತ್ತವೆಯೊ ಎಂಬುದು ಪ್ರಶ್ನೆ. ದೇಶದ-ಸಮಾಜದ ಒಳಿತಿನ ವಿಶಾಲ ಉದ್ದೇಶಕ್ಕಾಗಿ, ಪರಸ್ಪರ ಬಿಟ್ಟುಕೊಡುವ ಮತ್ತು ಕಲಿಯುವ ಸಂವಾದ ಸಾಧ್ಯವಾಗಬೇಕು. ಇಲ್ಲಿಯೇ ಎರಡು ಸಂಗತಿಗಳನ್ನು ಸ್ಪಷ್ಟಪಡಿಸಬೇಕು.

  1. ಸಂವಾದವೆಂದರೆ, ಸೀಮಿತ ಸ್ವಾರ್ಥಕ್ಕಾಗಿ ಎದುರುಪಕ್ಷದ ಜತೆ ಮಾಡಿಕೊಳ್ಳುವ ರಾಜಿಯಲ್ಲ. ದುರ್ಬಲರು ತಮ್ಮ ನ್ಯಾಯಬದ್ಧ ಹಕ್ಕು ಭಿನ್ನಮತಗಳನ್ನು ಸಂಪೂರ್ಣವಾಗಿ ವಿಸರ್ಜಿಸದೆ ನಡೆಯುವ ವಿನಿಮಯ. ಇದು ಗೆದ್ದ ಠೇಂಕಾರವೂ ಸೋತ ಕೀಳರಿಮೆಯೂ ಇಲ್ಲದೆ ಪರಸ್ಪರ ಕಲಿವ ವಿನಯ. ವಸ್ತುಸತ್ಯ ಒಪ್ಪಿಕೊಳ್ಳುವ ದಿಟ್ಟತನ ಕೂಡ. ಎದುರಾಳಿಯೆಂದು ಪರಿಭಾವಿಸಲಾದ ಸಂಸ್ಕೃತಿ ಸಮಾಜ ಸಮುದಾಯ ರಾಜಕೀಯ ಚಿಂತನೆಗಳಿಂದ ಕಲಿಯದ ಶಠತ್ವವು, ರಾಜಕೀಯ ಸಾಮಾಜಿಕ ಧಾರ್ಮಿಕ ಸೈದ್ಧಾಂತಿಕ ಮೂಲಭೂತವಾದಗಳನ್ನು ಮಾತ್ರ ಹುಟ್ಟಿಸುತ್ತದೆ.
  2. ಸಂವಾದವು ತಾತ್ವಿಕವಾಗಿ ರಾಜಕೀಯವಾಗಿ ಸಮಾನ ಉದ್ದೇಶವುಳ್ಳ, ಆದರೆ ಹಿಡಿದ ಮಾರ್ಗದ ವಿಷಯದಲ್ಲಿ ಭಿನ್ನಮತವುಳ್ಳ ಎದುರಾಳಿಗಳ ಜತೆ ಮಾತ್ರ ಸಾಧ್ಯ. ದುರ್ಬಲರನ್ನು ಕೊಂದೇ ಬದುಕುವ ದುಷ್ಟಚಿಂತನೆ-ದುಷ್ಟಸಿದ್ಧಾಂತಗಳ ಜತೆಗಲ್ಲ. ಅವನ್ನು ಎದುರುಗೊಂಡು ನಿರ್ಮೂಲನೆಯೇ ಮಾಡಬೇಕು. ಆದರೆ ಅವುಗಳ ದುಷ್ಟ ಪ್ರಭಾವಕ್ಕೆ ವಿವೇಚನೆಯಿಲ್ಲದೆ ಜನರು ಒಳಗಾಗಿದ್ದಲ್ಲಿ, ಅವರನ್ನು ಬದಲಿಸಲು ಯತ್ನಿಸಬೇಕು. ಪರಂತು, ಉದ್ದೇಶಪೂರ್ವಕವಾದ ದುಷ್ಟತನ ಹಿಂಸೆ ಕ್ರೌರ್ಯದ ನೆಲೆಯ ಮೇಲೆ ನಿಂತಿರುವ ತತ್ವಸಿದ್ಧಾಂತಗಳ ಜತೆಗೆ ಸಂವಾದ ಸಾಧ್ಯವಿಲ್ಲ. ಜರ್ಮನಿಯ ಫ್ಯಾಸಿಸಂ ಜತೆ ಜಗತ್ತಿನ ಪ್ರಜಾಪ್ರಭುತ್ವವಾದಿ ಶಕ್ತಿಗಳು ಸಂವಾದ ಮಾಡಲಿಲ್ಲ.

ಎಲ್ಲಿ ಅರ್ಥಪೂರ್ಣ ವಾಗ್ವಾದ-ಸಂವಾದ ಸಾಧ್ಯವಿಲ್ಲವೊ, ಅಲ್ಲಿ ವಿವಾದಗಳು ಹುಟ್ಟುತ್ತವೆ. ಅದರಲ್ಲೂ ಬಲಿಷ್ಠರು ದುರ್ಬಲರನ್ನು ದಮನಿಸಲು, ಭಿನ್ನಮತವನ್ನು ಅಳಿಸಿಹಾಕಲು ವಿವಾದ ಹುಟ್ಟಿಸುವರು. ಸುಳ್ಳು ದ್ವೇಷಗಳಿಂದ ಕೂಡಿರುವ ವಿವಾದಗಳು, ಯುದ್ಧತಂತ್ರಗಳು ಕೂಡ. ನಿರ್ದಿಷ್ಟ ವ್ಯಕ್ತಿ, ಚಿಂತಕರ, ಲೇಖಕ-ಕಲಾವಿದರ, ಸಮುದಾಯದ ಅಥವಾ ದೇಶದ ಮೇಲೆ, ಧರ್ಮದ್ರೋಹ ದೇಶದ್ರೋಹ ಇತ್ಯಾದಿ ಆಪಾದನೆಯನ್ನು ಮಾಡುವ ಮೂಲಕ ಇದನ್ನು ಮಾಡಲಾಗಿದೆ. ಇರಾಕಿನಲ್ಲಿ ಜಗತ್ತನ್ನು ನಾಶಪಡಿಸುವ ಅಸ್ತ್ರಗಳಿವೆ ಎಂದು ಹುಟ್ಟಿಸಿದ ವಿವಾದದ ಹಿಂದೆ, ಅಮೆರಿಕಕ್ಕೆ ತನ್ನದೇ ಯೋಜನೆಗಳಿದ್ದವು. ಯಹೂದಿಗಳ ಬಗ್ಗೆ ಜರ್ಮನಿಯ ಫ್ಯಾಸಿಸ್ಟರು ಉದ್ದೇಶಪೂರ್ವಕವಾಗಿ ಪೂರ್ವಗ್ರಹಗಳನ್ನು ಹಬ್ಬಿಸಿದ್ದರು. ಅನೇಕ ವ್ಯಕ್ತಿತ್ವ, ಸಮುದಾಯ, ಸಂಸ್ಕೃತಿ, ಭಾಷೆ, ಸಿದ್ಧಾಂತಗಳ ನಾಶದ ಹಿಂದೆ, ಅವನ್ನು ವಿವಾದಕ್ಕೆ ಒಳಪಡಿಸಲಾದ ಚರಿತ್ರೆಯಿದೆ.

ವಾದವು ನಿರ್ದಿಷ್ಟ ಆಲೋಚನಕ್ರಮವನ್ನು ಪ್ರತಿಕ್ರಿಯೆಗಾಗಿ ಮುಂದಿಡುವ ಸ್ತರ. ವಾಗ್ವಾದವು ಹಲವು ಆಲೋಚನಕ್ರಮಗಳ ಮುಖಾಮುಖಿ ಮತ್ತು ಚರ್ಚೆ. ಸಂವಾದವು ಪರಸ್ಪರ ತಿದ್ದಿಕೊಂಡು ಕಲಿಯುವ ನಮ್ರತೆ. ವಿವಾದಗಳು ಕೇವಲ ಫಿತೂರಿಗಳು. 

*ಚಿಕ್ಕಮಗಳೂರು ಜಿಲ್ಲೆಯ ಸಮತಳ ಲೇಖಕರ ಹುಟ್ಟೂರು. ಸೂಫಿ, ನಾಥ, ಶಾಕ್ತ ಪಂಥಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ. ಕಾವ್ಯ, ವಿಮರ್ಶೆ, ಸಾಂಸ್ಕೃತಿಕ ಅಧ್ಯಯನದಲ್ಲಿ ಪರಿಣತರು. ಪ್ರಸ್ತುತ ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು.

Leave a Reply

Your email address will not be published.