ವಿಕ್ರಮ್ ಸಾರಾಭಾಯಿ: ಆಧುನಿಕ ಭಾರತದ ಮಹಾನ್ ಕನಸುಗಾರ

-ಮೋಹನದಾಸ್

ಲೇಖಕಿ ಅಮೃತಾ ಶಾರವರ ಈ ಹೊತ್ತಿಗೆ ಅತ್ಯಂತ ಸಮರ್ಥವಾಗಿ ವಿಕ್ರಮ್ ಸಾರಾಭಾಯಿಯೆಂಬ ಈ ಪರಮ ಸಾಧಕನ ಜೀವನವನ್ನು ಬಿಚ್ಚಿಟ್ಟಿದೆ. ಹಲವು ಮಜಲುಗಳ ಸಾಧನೆಯ ಮತ್ತು ಹಲವು ಆಯಾಮಗಳ ವ್ಯಕ್ತಿತ್ವ ವಿಶ್ಲೇಷಣೆಯ ಈ ಜೀವನಚರಿತ್ರೆ ನಿಜಕ್ಕೂ ಮಹನೀಯನೊಬ್ಬನ ಜೀವನವನ್ನು ಅರ್ಥೈಸುವ ರೀತಿಯ ಮಾದರಿಯಾಗಿದೆ.

ದಕ್ಷಿಣ ಭಾರತದಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ನಾವು ಸರ್ ಎಂ.ವಿಶ್ವೇಶ್ವರಯ್ಯನವರ ಅನನ್ಯ ಕೊಡುಗೆಯನ್ನು ಸ್ಮರಿಸುತ್ತೇವೆ. ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ಪೇಪರ್ ಮಿಲ್ಸ್, ಕನ್ನಂಬಾಡಿ ಕಟ್ಟೆ, ಶಿಂಷಾ ವಿದ್ಯುತ್ ಸ್ಥಾವರ, ಇನ್‍ಸ್ಟಿಟ್ಯೂಶನ್ ಆಫ್ ಎಂಜಿನಿಯರ್ಸ್, ಮೈಸೂರು ಬ್ಯಾಂಕ್ ಇತ್ಯಾದಿಯಾಗಿ ವಿಶ್ವೇಶ್ವರಯ್ಯನವರು ನಾಡಿಗೆ ಕೊಡುಗೆಯಾಗಿ ನೀಡಿದ ಹಲವಾರು ಸಾಂಸ್ಥಿಕ ಉಡುಗೊರೆಗಳನ್ನು ಆರ್ದವಾಗಿ ನೆನಪಿಸಿಕೊಳ್ಳುತ್ತೇವೆ. ವಿಶ್ವೇಶ್ವರಯ್ಯನವರು ನಮ್ಮ ನಡುವೆ ತಂದ ಆಧುನಿಕತೆ ಹಾಗೂ ವೈಜ್ಞಾನಿಕತೆಗಳನ್ನು ಕೊಂಡಾಡುತ್ತೇವೆ. ಅದೇ ರೀತಿಯಲ್ಲಿ ಇಡೀ ಭಾರತದ ಮಟ್ಟದಲ್ಲಿ ಸಾಂಸ್ಥಿಕ ಕೊಡುಗೆ ನೀಡಿದವರಲ್ಲಿ ವಿಜ್ಞಾನಿ ವಿಕ್ರಮ್ ಸಾರಾಭಾಯಿಯವರ ಸಾಧನೆ ಕೇವಲ ಜವಹರಲಾಲ್ ನೆಹರೂರವರ ನಂತರದಲ್ಲಿ ಸ್ಮರಿಸಬೇಕಾದ ಹೆಸರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲದಿರಬಹುದು.

ಲೇಖಕಿ ಅಮೃತಾ ಶಾರವರ ಈ ಹೊತ್ತಿಗೆ ಅತ್ಯಂತ ಸಮರ್ಥವಾಗಿ ವಿಕ್ರಮ್ ಸಾರಾಭಾಯಿಯೆಂಬ ಈ ಪರಮ ಸಾಧಕನ ಜೀವನವನ್ನು ಬಿಚ್ಚಿಟ್ಟಿದೆ. ಹಲವು ಮಜಲುಗಳ ಸಾಧನೆಯ ಮತ್ತು ಹಲವು ಆಯಾಮಗಳ ವ್ಯಕ್ತಿತ್ವ ವಿಶ್ಲೇಷಣೆಯ ಈ ಜೀವನಚರಿತ್ರೆ ನಿಜಕ್ಕೂ ಮಹನೀಯನೊಬ್ಬನ ಜೀವನವನ್ನು ಅರ್ಥೈಸುವ ರೀತಿಯ ಮಾದರಿಯಾಗಿದೆ. ಹಲವು ಹತ್ತು ಹೊಸತುಗಳನ್ನು ಒಳಗೊಂಡ ಸಾರಾಭಾಯಿ ಜೀವನದ ಸಾರ್ಥಕತೆ ಮತ್ತು ಮಹತ್ವವನ್ನು ಇದು ಅನಾವರಣಗೊಳಿಸಿದೆ.

ಅಹಮದಾಬಾದಿನ ಶ್ರೀಮಂತ ಮಿಲ್ ಮಾಲೀಕ ಕುಟುಂಬದಲ್ಲಿ ಅತ್ಯಂತ ಆದರ್ಶ ದಂಪತಿಗಳಾದ ಅಂಬಾಲಾಲ್ ಸಾರಾಭಾಯಿ ಮತ್ತ ರೇವಾರವರಿಗೆ 1919ರಲ್ಲಿ ಜನಿಸಿದ ವಿಕ್ರಮ್ ಜೊತೆಯಲ್ಲಿ ಹಿರಿಕಿರಿಯ ಏಳು ಜನ ಸಹೋದರ ಸಹೋದರಿಯರಿದ್ದರು. ಈ ಎಂಟೂ ಮಕ್ಕಳಿಗೆ ಸಾರಾಭಾಯಿ ಬಂಗಲೆಯಲ್ಲಿಯೇ ಖಾಸಗಿ ಶಾಲೆಯೊಂದನ್ನು ತೆರೆಯಲಾಗಿತ್ತು. ಅಂದಿನ ಕಾಲದಲ್ಲಿಯೇ ತಮ್ಮ ‘ಮನೆ ಶಾಲೆ’ಯಲ್ಲಿಯೇ ಪಿಹೆಚ್‍ಡಿ ಪದವಿ ಪಡೆದ ಶಿಕ್ಷಕರನ್ನು ಹೊಂದಿದ್ದ ವಿಕ್ರಮ್ ಸಾರಾಭಾಯಿ ವಿಜ್ಞಾನವನ್ನು ತಮ್ಮ ಐಚ್ಛಿಕವಾಗಿ ಆಯ್ಕೆ ಮಾಡಿದ್ದರು. ಮುಂದೆ ಮದುವೆಯಾದದ್ದು ಭರತನಾಟ್ಯ ಪ್ರವೀಣೆ ಮದರಾಸಿನ ಮೃಣಾಲಿನಿಯವರನ್ನು (ಇವರು ಐಎನ್‍ಎ ಖ್ಯಾತಿಯ ಕ್ಯಾಪ್ಟನ್ ಲಕ್ಷ್ಮಿ ಸೆಹಗಾಲ್‍ರವರ ಸಹೋದರಿ). ಈ ದಂಪತಿಯ ಕಾರ್ತಿಕೇಯ ಮತ್ತು ಮಲ್ಲಿಕಾ ಸಾರಾಭಾಯಿಯೆಂಬ ಮಕ್ಕಳೂ ಸಾಧಕರಾಗಿದ್ದ್ದು ವಿಶೇಷ.

ವಿಕ್ರಮ್ ಸಾರಾಭಾಯಿ ಜೀವನದ ವಿಶೇಷತೆಗಳು ಹಲವು. ಒಬ್ಬ ವಿಜ್ಞಾನಿಯಾಗಿ ಹಾಗೂ ಆಡಳಿತಗಾರನಾಗಿ ಅವರು ಹಲವು ಸಂಸ್ಥೆಗಳನ್ನು ಕಟ್ಟಲು ಪ್ರೇರಕರಾದರು. ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಅತ್ಯಂತ ಕಠಿಣ ಮತ್ತು ನಿ

ರಶಾದಾಯಕವೆಂದು ಅರಿತಿದ್ದೂ ಛಲಬಿಡದ ತ್ರಿವಿಕ್ರಮನಂತೆ ಕೆಲಸ ಮಾಡಿದರು. ಶ್ರೀಮಂತಿಕೆಯ ಉಪ್ಪರಿಗೆಯಲ್ಲಿ ಬೆಳೆದಿದ್ದರೂ ರೈತರ ಜೀವನ ಹಸನು ಮಾಡಬೇಕೆಂದು ಆಕಾಶವಾಣಿಯ ಮೂಲಕ ‘ಕೃಷಿ ದರ್ಶನ್’ ಎಂಬ ಕಾರ್ಯಕ್ರಮದ 

ರೂವಾರಿಯಾದರು. ಅಣುಶಕ್ತಿಯನ್ನು ಶಾಂತಿ ಮತ್ತು ಸಮರ ಉಪಯೋಗಗಳಿಗೆ ಎರಡಕ್ಕೂ ಬಳಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದ್ದರು.

ಹೋಮಿ ಭಾಭಾರವರಿಗೆ ಅತ್ಯಂತ ಸೂಕ್ತ ಶಿಷ್ಯನಾಗಿ ಅಟಾಮಿಕ್ ಎನರ್ಜಿ ಕಮಿಶನ್‍ನ ಪ್ರವರ್ತಕರಾಗಿದ್ದರು. ಭಾರತದ ಬಾಹ್ಯಾಕಾಶ ಯೋಜನೆಗಳ ಪಿತಾಮಹ ಎಂಬ ಹೆಸರು ಪಡೆದಿದ್ದರು. ತಮ್ಮ 52ನೇ ವಯಸ್ಸಿನಲ್ಲಿ 1971 ಇಸವಿಯಲ್ಲಿ ನಿಧನರಾದ ವಿಕ್ರಮ್ ಸಾರಾಭಾಯಿ ಒಂದು ಜೀವನದಲ್ಲಿ ಯಾರು ಏನು ಸಾಧಿಸಬೇಕು ಎಂದು ಆಶಿಸುತ್ತಾರೆಯೋ ಅದೆಲ್ಲವನ್ನೂ ಸಾಧಿಸಿ ತೋರಿಸಿದ್ದರು.

ವಿಕ್ರಮ್ ಸಾರಾಭಾಯಿ ಹುಟ್ಟುಹಾಕಿದ ಮತ್ತು ಪ್ರೇರೇಪಕರಾದ ಸಂಸ್ಥೆಗಳ ಪಟ್ಟಿಯೇ ನಿಮಗೆ ಅವರ ಸಾಧನೆ ಯಾವ ಮಟ್ಟದ್ದೆಂದು ತಿಳಿ ಹೇಳುತ್ತದೆ.

–           ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್,

            ಅಹಮದಾಬಾದ್.

–           ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್, ಅಹಮದಾಬಾದ್.

–           ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್, ಬೆಂಗಳೂರು.

–           ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ.

–           ಆಪರೇಶನ್ಸ್ ರಿಸರ್ಚ್ ಗ್ರೂಪ್

–           ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು.

–           ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್

–           ಕೊಚ್ಚಿಯ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್

–           ಶ್ರೀಹರಿಕೋಟಾದ ರಾಕೆಟ್ ಅಸಿಸ್ಟೆಡ್ ಟೇಕ್‍ಆಫ್ ಸೆಂಟರ್

–           ಕಲ್ಪಕಮ್‍ನ ರಿಯಾಕ್ಟರ್ ರಿಸರ್ಚ್ ಸೆಂಟರ್ ಇತ್ಯಾದಿ.

ಕೇವಲ 52 ವರ್ಷ ಬದುಕಿದ್ದ ವಿಕ್ರಮ್ ಸರಾಭಾಯಿ ತಮ್ಮ ಮೂವತ್ತು ವರ್ಷಗಳ ಪ್ರೌಢ ಜೀವನದಲ್ಲಿ 36ಕ್ಕೂ ಹೆಚ್ಚು ಸಂಸ್ಥೆಗಳ ಜನನಕ್ಕೆ ಕಾರಣರಾಗಿದ್ದರು. ಸರ್ಕಾರಿ ಮತ್ತು ಖಾಸಗಿ ವಲಯಗಳೆರಡೂ ಪೈಪೋಟಿಯಲ್ಲಿ ಕಾರ್ಯನಿರ್ವಹಿಸಬೇಕೆಂಬ ವಿಷಯದಲ್ಲಿ ಉತ್ಸುಕರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಹೇಗೆ ಶ್ರದ್ಧೆ ಮತ್ತು ಸಾಧನೆಯಿಂದ ಮುಂದಿನ ಪೀಳಿಗೆಗೆ ಪ್ರೇರೇಪಕರಾಗಬಹುದೆಂಬ ಮಾದರಿಯಾಗಿದ್ದರು. ನೆಹರೂರವರಂತೆ ಸಮಾಜವಾದಿ ಒಲವಿದ್ದರೂ ಉದಾರವಾದಿ ಮುಕ್ತ ಮಾರುಕಟ್ಟೆಯ ಪ್ರತಿಪಾದಕರಾಗಿದ್ದರು.

‘ಕುಂಬಾರನಿಗೆ ಒಂದು ವರ್ಷವಾದರೆ ಬಡಿಗೆಗೆ ಒಂದು ನಿಮಿಷ’ವಂತೆ. ಸಂಸ್ಥೆಗಳನ್ನು ಕಟ್ಟುವುದು ಕಷ್ಟದ ಕೆಲಸ. ಅದೇ ಸಂಸ್ಥೆಗಳನ್ನು ಹಾಳುಗೆಡವುವುದು ಸುಲಭ. ಹಲವು ಪ್ರಜಾಸತ್ತಾತ್ಮಕ ಸಂಸ್ಥೆಗಳು ನಶಿಸುತ್ತಿರುವ ಈ ಸಮಯದಲ್ಲಿ ಭಾರತದ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಜಗತ್ತಿಗೆ ಹಲವಾರು ಸಾಂಸ್ಥಿಕ ಕೊಡುಗೆಗಳನ್ನು ನೀಡಿದ ವಿಕ್ರಮ್ ಸಾರಾಭಾಯಿ ಅವರನ್ನು ನೆನೆಯುವುದು ಇಲ್ಲಿ ನಮ್ಮ ಉದ್ದೇಶ. ಅವರು ಕಟ್ಟಿದ ಹಲವಾರು ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದು ಅವರ ಹೆಸರನ್ನು ಅಜರಾಮರ ಮಾಡಿದ್ದರೂ ಸಾರಾಭಾಯಿ ಕುಟುಂಬದ ಸಾಧನೆಯನ್ನು ಅಲ್ಲಗಳೆಯುವ ಮತ್ತು ನಿರ್ಲಕ್ಷಿಸುವ ಹುನ್ನಾರ ನಡೆಯುತ್ತಿದೆ. ಗಾಜಿಗೆ ಮಸಿಬಳಿದು ಸೂರ್ಯನ ಕಿರಣಗಳನ್ನು ಗೇಲಿಮಾಡುವ ನಗೆಪಾಟಲಿನ ಕೆಲಸವೂ ನಡೆಯುತ್ತಿದೆ.

ಕನ್ನಡಿಗ ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಾವು ನೀಡಿರುವ ಗೌರವವನ್ನು ಅಪ್ರತಿಮ ಭಾರತೀಯ ಸಾಧಕ ವಿಕ್ರಮ್ ಸಾರಾಭಾಯಿಯವರಿಗೂ ನೀಡಬೇಕು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಆಸುಪಾಸಿನಲ್ಲಿ ವಿಕ್ರಮ್ ಸಾರಾಭಾಯಿಯವರ ಪುತ್ಥಳಿಯನ್ನು ಪ್ರತಿಷ್ಠಾಪಿಸಬೇಕು. ಹಾಗೆಯೇ ವಿಕ್ರಮ್ ಸಾರಾಭಾಯಿ ಹೆಸರಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಆಯೋಜನೆಯಾಗಬೇಕು.

Leave a Reply

Your email address will not be published.