ವಿಜಯಶಂಕರ ಅವರ ‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಕವಿಪರ ವಕೀಲನಾದ ವಿಮರ್ಶಕ!

ಲೇಖಕರು ಇಲ್ಲಿಯ ಬರಹಗಳನ್ನು ವಿಮರ್ಶಾ ಲೇಖನಗಳೆಂದು ಕರೆದುಕೊಂಡಿದ್ದಾರೆ. ಆದರೆ ಈ ಕೃತಿಯ ಬಹುದೊಡ್ಡ ಮಿತಿಯೆಂದರೆ ಕೇವಲ ಪರಿಚಯಾತ್ಮಕ ಜಾಡಿನಲ್ಲಿಯೇ ಸಾಗಿರುವುದು. ಅದಕ್ಕಾಗಿಯೇ ಏನೋ ವಿಜಯಶಂಕರ ಅವರಿಗೆ ಹೊಸ ಒಳನೋಟಗಳನ್ನು ನೀಡಲು ಸಾಧ್ಯವಾಗಿಲ್ಲ.

– ಡಾ.ಸುಭಾಷ್ ರಾಜಮಾನೆ 

 

ಎಚ್ಚೆಸ್ವಿ ಕಾವ್ಯ ಸಾತತ್ಯ

ಎಸ್.ಆರ್. ವಿಜಯಶಂಕರ

ಪುಟ: 164 ಬೆಲೆ: ರೂ 100

ಪ್ರಕಾಶನ: ಚಿಂತನ ಚಿತ್ತಾರ

2, ಮುಡಾ ಕಾಂಪ್ಲೆಕ್ಸ್, ಒಂದನೇ ಬ್ಲಾಕ್

ರಾಮಕೃಷ್ಣನಗರ, ಮೈಸೂರು-570022

ಲೇಖಕರಾದ ಎಸ್.ಆರ್.ವಿಜಯಶಂಕರ ಅವರು ತಮ್ಮನ್ನು ತಾವು ಅಂಕಣಕಾರರೆಂದೇ ಗುರುತಿಸಿಕೊಂಡವರು. ಹಲವು ವರ್ಷಗಳಿಂದ ಅನೇಕ ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆಯುತ್ತಲೇ ಬಂದಿದ್ದಾರೆ. ಅವರು ಹಲವು ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಕೃತಿಯು ಮೈಸೂರಿನ ‘ಚಿಂತನ ಚಿತ್ತಾರ’ ಪ್ರಕಾಶನದಿಂದ 2019ರಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಅಭಿಪ್ರಾಯಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

ಕಲಬುರ್ಗಿಯಲ್ಲಿ ಜರುಗಿದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಎಚ್.ಎಸ್.ವೆಂಕಟೇಶಮೂರ್ತಿಯವರು. ‘ಚಿಂತನ ಚಿತ್ತಾರ’ದ ಪ್ರಕಾಶಕರಾದ ನಿಂಗರಾಜು ಚಿತ್ತಣ್ಣನವರ್ ಅವರು ಆ ಸಮ್ಮೇಳನದ ಹೊತ್ತಿಗೆ ಎಚ್ಚೆಸ್ವಿಯವರ ಕುರಿತು ಪುಸ್ತಕವೊಂದನ್ನು ಹೊರತರಲು ನಿರ್ಧರಿಸುತ್ತಾರೆ. ವಿಜಯಶಂಕರರು ಈ ಮುಂಚೆ ಎಚ್ಚೆಸ್ವಿಯವರ ಕಾವ್ಯದ ಬಗ್ಗೆ ಬೇರೆ ಬೇರೆ ಪತ್ರಿಕೆಯ ಅಂಕಣಗಳಲ್ಲಿ ಆಗಾಗ ಬರೆದಿದ್ದ ಲೇಖನಗಳನ್ನು ಪ್ರಕಾಶಕರಿಗೆ ನೀಡುತ್ತಾರೆ. ಅವರ ಇತರೆ ಪುಸ್ತಕಗಳಲ್ಲಿ ಹಂಚಿ ಹೋಗಿದ್ದ ಲೇಖನಗಳನ್ನೂ ಒಟ್ಟುಗೂಡಿಸಿ ಕೊಡುತ್ತಾರೆ. ಎಚ್ಚೆಸ್ವಿಯವರು ಸಮ್ಮೇಳನಾಧ್ಯಕ್ಷರಾದ ಸಂದರ್ಭದಲ್ಲಿ ವಿಜಯಶಂಕರರು ಅವರೊಂದಿಗೆ ನಡೆಸಿದ ಎರಡು ಸಂದರ್ಶನ ಲೇಖನಗಳನ್ನೂ ಇದರೊಂದಿಗೆ ಸೇರಿಸಿದ್ದಾರೆ. ಹಾಗಾಗಿ ಈ ಕೃತಿಯು ಈಗಷ್ಟೇ ಅಧ್ಯಯನದ ಫಲವಾಗಿ ಬಂದದ್ದಲ್ಲ. ಕಳೆದ ಹತ್ತಾರು ವರ್ಷಗಳಲ್ಲಿ ಅವರು ಬರೆದ ಲೇಖನಗಳನ್ನು ಒಂದೆಡೆ ಸಂಕಲಿಸಲಾಗಿದೆ. ಇದೆಲ್ಲವನ್ನೂ ಲೇಖಕರು ಸದರಿ ಕೃತಿಯ ತಮ್ಮ ಮೊದಲ ಮಾತಿನಲ್ಲಿ ಹೇಳಿಕೊಂಡಿದ್ದಾರೆ. ಇದು ‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಎಂಬ ಕೃತಿಯು ರೂಪುಗೊಂಡಿರುವ ಬಗೆಯಾಗಿದೆ.

‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಪುಸ್ತಕವು ತುಂಬ ಅಂದವಾಗಿ ಮುದ್ರಿತವಾಗಿದೆ. ಸಚ್ಚಿದಾನಂದ ಅವರು ಮಾಡಿರುವ ಮುಖಪುಟ ವಿನ್ಯಾಸವು ಆಕರ್ಷಕವಾಗಿದೆ. ನೂರೈವತ್ತು ಪುಟಗಳ ಪುಸ್ತಕದ ಬೆಲೆ ನೂರು ರೂಪಾಯಿ ಇದೆ. ಪುಸ್ತಕಗಳ ಬೆಲೆಯು ದುಬಾರಿಯಾಗಿರುವ ಇಂದಿನ ಕಾಲದಲ್ಲಿ ಇದು ಓದುಗರ ಕೈಗೆಟುಕುವಂತಿದೆ. ಈ ಕೃತಿಯ ನಿರೂಪಣೆಯ ಭಾಷೆಯಲ್ಲಾಗಲಿ, ಸಂವಹನದಲ್ಲಾಗಲಿ ಯಾವುದೇ ತೊಡಕಿಲ್ಲ. ಇದು ಸರಾಗವಾಗಿ ಓದಿಸಿಕೊಂಡು ಹೋಗುವುದರಲ್ಲಿಯೂ ಯಾವುದೇ ಸಮಸ್ಯೆಯಿಲ್ಲ. ವಿಜಯಶಂಕರ ಅವರು ಇಲ್ಲಿಯ ಬರಹಗಳನ್ನು ವಿಮರ್ಶಾ ಲೇಖನಗಳೆಂದು ಕರೆದುಕೊಂಡಿದ್ದಾರೆ. ಇವುಗಳನ್ನು ಪರಿಚಯಾತ್ಮಕ ಲೇಖನಗಳೆಂದು ಕರೆಯುವುದೇ ಸೂಕ್ತವೆನಿಸುತ್ತದೆ. ಈಗಾಗಲೇ ಎಚ್ಚೆಸ್ವಿಯವರು ತಮ್ಮ ಕವಿತೆ, ಭಾವಗೀತೆ, ಮಕ್ಕಳ ಕವಿತೆ, ನಾಟಕ, ಅನುವಾದ, ಅಂಕಣ ಬರಹ, ಸಿನಿಮಾ ಹಾಡುಗಳ ಬರವಣಿಗೆಯ ಮೂಲಕ ಚಿರಪರಿಚತರೇ ಆಗಿದ್ದಾರೆ. ಈ ಕೃತಿಯ ಬಹುದೊಡ್ಡ ಮಿತಿಯೆಂದರೆ ಕೇವಲ ಪರಿಚಯಾತ್ಮಕ ಜಾಡಿನಲ್ಲಿಯೇ ಸಾಗಿರುವುದುದಾಗಿದೆ. ಅದಕ್ಕಾಗಿಯೇ ಏನೋ ವಿಜಯಶಂಕರ ಅವರಿಗೆ ಹೊಸ ಒಳನೋಟಗಳನ್ನು ನೀಡಲು ಸಾಧ್ಯವಾಗಿಲ್ಲ.

ವಿಜಯಶಂಕರ ಅವರು ಕವಿಗಳಾದ ವೆಂಕಟೇಶಮೂರ್ತಿಯವರ ಆಪ್ತ ಸ್ನೇಹಿತರಾಗಿದ್ದರಿಂದಲೋ ಏನೋ ಅವರ ಬಗ್ಗೆ ಆರಾಧನೆಯ ಭಾವನೆ ಇದ್ದಿರಬಹುದು. ಅದಕ್ಕಾಗಿಯೇ ಅವರ ಕಾವ್ಯದ ಕುರಿತು ಯಾವುದೇ ಸಾಮಾಜಿಕ, ಸಾಂಸ್ಕೃತಿಕ, ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಂಡಂತೆ ಕಾಣುವುದಿಲ್ಲ. ಅವರು ಎಚ್ಚೆಸ್ವಿಯವರ ಕಾವ್ಯವು ತಮ್ಮ ಕಾಲದ ಜನಸಮುದಾಯಗಳ ಯಾವ ರೀತಿಯ ಸಂಕಟ, ನೋವು, ತಲ್ಲಣ, ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಿದೆ ಎನ್ನುವ ತಾತ್ವಿಕ ಪ್ರಶ್ನೆಗಳನ್ನು ಎದುರುಗೊಂಡಿಲ್ಲ. ನಮ್ಮದು ಹೇಳಿಕೇಳಿ ತೀವ್ರ ಅಸಮಾನತೆಯ ಮತ್ತು ಶ್ರೇಣಿಕೃತವಾದ ಸಾಮಾಜಿಕ ವ್ಯವಸ್ಥೆಯಾಗಿದೆ. ಇಂತಹ ವ್ಯವಸ್ಥೆಯ ವಿರುದ್ಧವಾಗಿ ಅವರ ಕಾವ್ಯವು ಕೊಂಚವಾದರು ಬಂಡುಕೋರತನವನ್ನು ತೋರಿದೆಯೇ ಎನ್ನುವಂತಹ ಪ್ರಶ್ನೆಯನ್ನೇ ವಿಜಯಶಂಕರ ಅವರು ಮರೆಮಾಚಿದ್ದಾರೆ. ಅದಕ್ಕಾಗಿಯೇ ಇಲ್ಲಿಯ ಲೇಖನಗಳಲ್ಲಿ ಅವರ ಅಭಿಪ್ರಾಯಗಳು ಪ್ರಾಮಾಣಿಕವಾಗಿ ವ್ಯಕ್ತವಾಗಿವೆ ಎಂದೆನ್ನಿಸುವುದಿಲ್ಲ.

‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಕೃತಿಯ ಬಹುತೇಕ ಲೇಖನಗಳು ತೌಲನಿಕ ಚರ್ಚೆಯ ಮಾದರಿಯಲ್ಲಿವೆ. ಈ ಲೇಖನಗಳು ಎಚ್ಚೆಸ್ವಿಯವರ ಕಾವ್ಯವು ಆಧುನಿಕ ಕನ್ನಡ ಕಾವ್ಯ ಪರಂಪರೆಯ ಹಿರೀಕರ ಕಾವ್ಯಕ್ಕಿಂತ ಹೇಗೆ ವಿಶಿಷ್ಟವಾಗಿದೆ ಎಂಬುದರ ಚರ್ಚೆಯಿದೆ. ವಿಜಯಶಂಕರ ಅವರು ಎಚ್ಚೆಸ್ವಿಯವರ ಕಾವ್ಯವು ಕುವೆಂಪು, ಬೇಂದ್ರೆ, ಪು.ತಿ.ನ., ಅಡಿಗ ಮೊದಲಾದವರ ಕಾವ್ಯಕ್ಕಿಂತ ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಅವರು ಹಟಕ್ಕೆ ಬಿದ್ದವರಂತೆ ಎಚ್ಚೆಸ್ವಿಯವರನ್ನು ಕನ್ನಡದ ಬಹಳ ಮಹತ್ವದ ಕವಿಯೆಂದು ಸಾಬೀತುಪಡಿಸಲು ಹೆಣಗಾಡಿದಂತೆ ತೋರುತ್ತದೆ. ಅವರು ತಮ್ಮ ಲೇಖನಗಳುದ್ದಕ್ಕೂ ಎಚ್ಚೆಸ್ವಿಯವರನ್ನು ಕನ್ನಡ ಅಭಿಜಾತ ಪರಂಪರೆಯೊಂದಿಗೆ ಸಾತತ್ಯ ಹೊಂದಿರುವ ಅತ್ಯಂತ ಮುಖ್ಯರಾದ ಕವಿಯೆಂದು ಸಾಧಿಸಲು ಪ್ರಯತ್ನಿಸಿದ್ದಾರೆ. ವಿಜಯಶಂಕರ ಅವರು ಈ ಲೇಖನಗಳಲ್ಲಿ ಎಚ್ಚೆಸ್ವಿಯವರು ಯಾವ ಬಗೆಯ ಅಭಿಜಾತ ಪರಂಪರೆಯ ವಾರಸುದಾರರಾಗಿದ್ದಾರೆ ಎಂಬುದನ್ನು ವಿವರಿಸುವ ಗೋಜಿಗೆ ಹೋಗಿಲ್ಲ.

ವಿಮರ್ಶಕನೊಬ್ಬ ಕವಿಯ ಆರಾಧನೆಗೆ ಬಲಿಯಾದರೆ ನಿಷ್ಠುರವಾದ ವಿಮರ್ಶೆಯೇ ಸಾಧ್ಯವಾಗುವುದಿಲ್ಲ. ಆಗ ವಿಮರ್ಶೆಯೆಂದರೆ ಬರಿ ಕವಿಯೊಬ್ಬನ ಕಾವ್ಯದ ಸಮರ್ಥನೆ ಆಗಿಬಿಡುವ ಅಪಾಯವಿರುತ್ತದೆ. ವಿಜಯಶಂಕರ ಅವರು ಇಂತಹ ಸೂಕ್ಷ್ಮವಾದ ಎಚ್ಚರಿಕೆಯನ್ನು ಪ್ರಜ್ಞಾಪೂರ್ವಕವೋ ಅಪ್ರಜ್ಞಾಪೂರ್ವಕವೋ ಬದಿಗೆ ಸರಿಸಿದ್ದಾರೆ. ಆದ್ದರಿಂದಲೇ ಎಚ್ಚೆಸ್ವಿ ಕಾವ್ಯದ ಬಗ್ಗೆ ತಮ್ಮ ಬರಹಗಳಲ್ಲಿ ಒಂದೇ ಒಂದು ತಕರಾರು ಎತ್ತಲು ಅವರಿಂದ ಸಾಧ್ಯವಾಗಿಲ್ಲ. ಎಷ್ಟೋ ಕಡೆಯಲ್ಲಿ ಕವಿಯ ಹೇಳಿಕೆಗಳನ್ನು ಅನಾಮತ್ತಾಗಿ ಎತ್ತಿಕೊಂಡು ಅವುಗಳಿಗೆ ಪೂರಕವಾಗಿಯೇ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತಾರೆ. ಕಾವ್ಯವನ್ನು ವಿವರಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ಏಕಮುಖಿಯಾಗಿ ಕವಿಯ ಪ್ರಶಂಸೆಗೆ ನಿಂತುಬಿಡುತ್ತಾರೆ. ಇದರಿಂದಾಗಿ ಅವರು ಕಾವ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿ ಮೌಲ್ಯಮಾಪನ ಮಾಡುವ ವಿಮರ್ಶಾತ್ಮಕ ಧೋರಣೆಯನ್ನು ಬಿಟ್ಟುಕೊಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.  

ಇಲ್ಲಿಯ ಲೇಖನಗಳಲ್ಲಿ ಎಚ್ಚೆಸ್ವಿಯವರ ಕಾವ್ಯದೊಂದಿಗೆ ವಾಗ್ವಾದ ನಡೆಸುವ ಗಟ್ಟಿಯಾದ ತಾತ್ವಿಕತೆಯಿಲ್ಲ; ಲೇಖಕರು ಅಪ್ಪಿತಪ್ಪಿಯು ಕೂಡ ಎಚ್ಚೆಸ್ವಿ ಕಾವ್ಯಕ್ಕೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಹೋಗದಿರುವುದು ಅಚ್ಚರಿಯಾಗುತ್ತದೆ. ಹೀಗಾಗಿ ವಿಜಯಶಂಕರ ಅವರ ಲೇಖನಗಳು ಕಾವ್ಯದ ಪರವಾದ ವಕಾಲತ್ತು ನಡೆಸುವ ವಕೀಲನಂತೆ ಕಂಡು ಬರುತ್ತವೆ. ಇಂತಹ ಸಂಗತಿಗಳು ಸಾಮಾನ್ಯ ಓದುಗರ ಗಮನಕ್ಕೆ ಬರದೇ ಇರುವುದಿಲ್ಲ. ಹಾಗೆ ನೋಡಿದರೆ ಸಾಹಿತ್ಯದ ಓದುಗರು ಸೂಕ್ಷ್ಮ ಸಂವೇದನೆಯನ್ನು ಹೊಂದಿರುತ್ತಾರೆ. ಓದುಗರು ಕೂಡ ಒಂದು ಬಗೆಯಲ್ಲಿ ವಿಮರ್ಶಕರೇ ಆಗಿರುತ್ತಾರೆ. ಕವಿಯೊಬ್ಬ ಎಷ್ಟೇ ದೊಡ್ಡವನಾದರೂ ಆತನ ಕಾವ್ಯಕ್ಕೂ ಮಿತಿಗಳಿರುತ್ತವೆ. ಬರೆದದ್ದೆಲ್ಲವು ಮುಖ್ಯವಾಗಿರುವುದಿಲ್ಲ; ಬರೆದದ್ದೆಲ್ಲ ಶ್ರೇಷ್ಠವೂ ಆಗಿರುವುದಿಲ್ಲ. ವಿಜಯಶಂಕರ ಅವರು ಎಚ್ಚೆಸ್ವಿಯವರ ಬಗ್ಗೆ ಗೌರವವಿಟ್ಟುಕೊಂಡೇ ಅವರ ಕಾವ್ಯದ ಒಂದಿಷ್ಟು ಮಿತಿಗಳನ್ನಾದರೂ ಗುರುತಿಸಬಹುದಿತ್ತು.

‘ಎಚ್.ಎಸ್.ವೆಂಕಟೇಶಮೂರ್ತಿ ಅವರ ಸುನೀತಗಳು’ ಎಂಬ ಲೇಖನದಲ್ಲಿ ಸಾನೆಟ್‌ನ ಚಾರಿತ್ರಿಕ ಸಂಗತಿಗಳ ಒಂದು ಚರ್ಚೆಯಿದೆ. ಇದರಲ್ಲಿ ಎಚ್ಚೆಸ್ವಿಯವರು ಯಾರನ್ನೆಲ್ಲ ಕುರಿತು ಸುನೀತಗಳನ್ನು ಬರೆದಿದ್ದಾರೆ ಎನ್ನುವುದರ ವಿವರಣೆಯು ಇದೆ. ಈ ಲೇಖನದಲ್ಲಿ ಎಚ್ಚೆಸ್ವಿಯವರು ಬರೆದಿರುವ ಸುನೀತಗಳ ಎರಡೆರಡು ಸಾಲುಗಳನ್ನು ಪ್ರಸ್ತಾಪಿಸಿ ವಿವರಣೆಯನ್ನು ನೀಡಲಾಗಿದೆ. ಎಚ್ಚೆಸ್ವಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾನೆಟ್‌ಗಳ ಸಂಗ್ರಹ’ ಎಂಬ ಸುನೀತಗಳ ಸಂಪಾದನೆಯ ಕೃತಿಗಾಗಿ ಅವರು ಬರೆದಿದ್ದ ಪ್ರಸ್ತಾವನೆಯನ್ನು ಈ ಕೃತಿಯ ಅನುಬಂಧದಲ್ಲಿ ನೀಡಲಾಗಿದೆ.

ಇದರ ಜೊತೆಯಲ್ಲಿಯೇ ಇಲ್ಲಿ ಪ್ರಸ್ತಾಪಿಸಬೇಕಾದ ಮತ್ತೊಂದು ಸಂಗತಿಯೆಂದರೆ ಎಚ್ಚೆಸ್ವಿಯವರು ‘ಕನ್ನಡ ಪುಸ್ತಕ ಪ್ರಾಧಿಕಾರ’ಕ್ಕಾಗಿ ‘ಟಿ.ಎಸ್. ವೆಂಕಣ್ಣಯ್ಯನವರ ಸಮಗ್ರ ಸಾಹಿತ್ಯ’ವನ್ನು ಸಂಪಾದಿಸಿ ಕೊಟ್ಟಿದ್ದಾರೆ. ವಿಜಯಶಂಕರ ಅವರು ಇದರ ಬಗ್ಗೆ ತಮ್ಮ ಅಂಕಣದಲ್ಲಿ ಬರೆದ ಲೇಖನವನ್ನೂ ಇದರಲ್ಲಿ ತುರುಕಿದ್ದಾರೆ. ‘ಎಚ್ಚೆಸ್ವಿ ಕಾವ್ಯ ಸಾತತ್ಯ’ ಎನ್ನುವ ಶೀರ್ಷಿಕೆಯ ಈ ಕೃತಿಯಲ್ಲಿ ಈ ಎರಡು ಲೇಖನಗಳನ್ನು ಸೇರಿಸಿದ್ದರ ಔಚಿತ್ಯವೇನು ಎಂಬುದು ಗೊತ್ತಾಗುವುದಿಲ್ಲ. ಇದರಿಂದಾಗಿ ಈ ಕೃತಿಯ ಸ್ವರೂಪವೇ ಅಸ್ಪಷ್ಟವಾಗಿರುವುದರಿಂದ ಅದಕ್ಕೊಂದು ಖಚಿತವಾದ ಫೋಕಸ್ ಇಲ್ಲವಾಗಿದೆ. ಈ ಕೃತಿಯು ಒಂದು ರೀತಿಯಲ್ಲಿ ಕಲಸುಮೇಲೋಗರ ಆಗಿಬಿಟ್ಟಿದೆ.

ಕಲಬುರ್ಗಿ ಸಾಹಿತ್ಯ ಸಮ್ಮೇಳನ ನಡೆಯುವ ಪೂರ್ವದಲ್ಲಿ ವಿಜಯಶಂಕರ ಅವರು ಎಚ್ಚೆಸ್ವಿಯವರೊಂದಿಗೆ ನಡೆಸಿದ ಎರಡು ಸಂದರ್ಶನಗಳು ಇದರಲ್ಲಿವೆ. ಈ ಎರಡು ಸಂದರ್ಶನಗಳಲ್ಲೂ ಅನುಕೂಲಸಿಂಧು ಪ್ರಶ್ನೆಗಳನ್ನು ಕೇಳಲಾಗಿದೆ. ಸಂದರ್ಶಕರು ಕೇಳುವ ಪ್ರಶ್ನೆಗಳಲ್ಲಿಯೇ ನಿರೀಕ್ಷಿತ ಉತ್ತರಗಳಿವೆ. ಅದೇ ಸಂದರ್ಭದಲ್ಲಿ ‘ಮಂಗನ ಬ್ಯಾಟೆ’ ಖ್ಯಾತಿಯ ಪರಿಸರವಾದಿ ಲೇಖಕರಾದ ಕಲ್ಕುಳಿ ವಿಠ್ಠಲ ಹೆಗಡೆಯವರು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಹೊತ್ತಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಸರ್ಕಾರದಿಂದ ಹಣ ಬಿಡುಗಡೆ ಮಾಡುವುದನ್ನು ತಡೆಹಿಡಿದರು. ಅದೇ ಸಂದರ್ಭದಲ್ಲಿ ಕಲಬುರ್ಗಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎಚ್.ಎಸ್. ವೆಂಕಟೇಶಮೂರ್ತಿಯವರು ಇದರ ಬಗ್ಗೆ ಚಕಾರವೆತ್ತಲಿಲ್ಲ. ಅವರು ಇದರ ಬಗ್ಗೆ ತಮ್ಮ ಅಧ್ಯಕ್ಷ ಸ್ಥಾನದಿಂದಲೂ ಪ್ರಭುತ್ವವನ್ನು ಪ್ರಶ್ನಿಸಲಿಲ್ಲ. ಕನಿಷ್ಠ ಪಕ್ಷ ಇದರ ಕುರಿತು ತಮ್ಮ ಅಭಿಪ್ರಾಯವನ್ನೂ ಹೇಳಲಿಲ್ಲ.

ಇಂತಹ ಸಂಗತಿಗಳು ಕವಿಯೊಬ್ಬ ಬರೆಯುವ ಕವಿತೆಯಷ್ಟೇ ಮಹತ್ವದವು ಆಗಿರುತ್ತವೆ. ಈ ಕಾರಣಕ್ಕಾಗಿಯೇ ಕುವೆಂಪು, ಬೇಂದ್ರೆ, ಚಂಪಾ, ಸಿದ್ಧಲಿಂಗಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಎಸ್.ಜಿ.ಸಿದ್ಧರಾಮಯ್ಯ, ಎನ್ಕೆ ಹನುಮಂತಯ್ಯ ಅವರಂತಹ ಕವಿಗಳು ಮುಖ್ಯರಾಗುತ್ತಾರೆ. ಈ ಹಿನ್ನೆಲೆಯಲ್ಲಿಯೇ ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ರಹಮತ್ ತರೀಕೆರೆ, ಬಂಜಗೆರೆ ಜಯಪ್ರಕಾಶ್ ಮೊದಲಾದ ಲೇಖಕರು ಮುಖ್ಯರಾಗುತ್ತಾರೆ.

ಈ ಕೃತಿಯ ಲೇಖಕರು ತಮ್ಮ ಈ ಮೊದಲಿನ ಲೇಖನಗಳನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದಿ ಬರೆದಿದ್ದರೆ ಕೃತಿಯ ಸ್ವರೂಪವು ಬದಲಾಗುವ ಸಾಧ್ಯತೆಯಿತ್ತು. ಕೊನೆಯ ಪಕ್ಷ ಕಾವ್ಯದ ಗಂಭೀರವಾದ ಚರ್ಚೆಯಾದರೂ ಸಾಧ್ಯವಾಗುತ್ತಿತ್ತು. ‘ಸಾತತ್ಯ’ ಎನ್ನುವ ಪರಿಕಲ್ಪನೆಯನ್ನು ಎಚ್ಚೆಸ್ವಿಯವರ ಕಾವ್ಯದ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳುವ ಅಗತ್ಯವಿತ್ತು. ಒಂದು ವೇಳೆ ಒಂದು ಪುಟ್ಟ ಲೇಖನದಲ್ಲಿ ಈ ‘ಸಾತತ್ಯ’ ಎಂಬುದರ ಆಯಾಮಗಳನ್ನು ವಿಶ್ಲೇಷಿಸಿದ್ದರೆ ಇಡೀ ಕೃತಿಗೆ ಒಂದು ಸ್ಪಷ್ಟವಾದ ಗ್ರಹಿಕೆ ಸಿಗುತ್ತಿತ್ತು. ಹೀಗಾಗಿ ಎಚ್ಚೆಸ್ವಿಯವರ ಕಾವ್ಯ ಸಾತತ್ಯದ ಸ್ವರೂಪವನ್ನು ಖಚಿತವಾಗಿ ಗುರುತಿಸುವ ದಾರಿಗಳೇ ಕಳೆದು ಹೋದಂತಾಗಿದೆ. ಲೇಖಕರು ತಮ್ಮ ಹಳೆಯ ಲೇಖನಗಳನ್ನೇ ಸೇರಿಸಿದ್ದರಿಂದ ಸದರಿ ಕೃತಿಯು ದಿಕ್ಕು ದೆಸೆಯಿಲ್ಲದೇ ಹರಿದುಕೊಂಡು ಹೋಗುವ ಹಳ್ಳದಂತಾಗಿದೆ. ಕೃತಿಯ ಒಟ್ಟಾರೆ ಬಂಧವೇ ಅತ್ಯಂತ ಶಿಥಿಲವಾಗಿದೆ.     

*ಲೇಖಕರು ಬೆಳಗಾವಿ ಜಿಲ್ಲೆ ನಂದಗಾಂವದವರು. ಮೈಸೂರು ವಿವಿಯಿಂದ ಎಂಎ, ಹಂಪಿ ಕನ್ನಡ ವಿವಿಯಿಂದ ಪಿಎಚ್‌ಡಿ ಪಡೆದಿದ್ದಾರೆ. ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಿನಿಮಾ, ಫೋಟೋಗ್ರಫಿ ಹಾಗೂ ಅನುವಾದದಲ್ಲಿ ಆಸಕ್ತಿ.

Leave a Reply

Your email address will not be published.