ವಿಜ್ಞಾನ ಬರಹಗಾರರಿಗೆ ಉಪಯುಕ್ತ ಕೈಪಿಡಿ

-ಶಂಕರಗೌಡ ವೈ ಪಾಟೀಲ

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ

ಪ್ರಧಾನ ಸಂಪಾದಕರು: ಟಿ.ಎಸ್.ನಾಗಾಭರಣ

ಸಂಪಾದಕರು: ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ

ಪ್ರಥಮ ಮುದ್ರಣ: 2020

ಪುಟ: 142 ಬೆಲೆ: ರೂ.100

ಪ್ರಕಾಶನ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.

‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ-ಕೈಪಿಡಿ’ ಪುಸ್ತಕವು ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನು ಬರೆಯಬೇಕೆನ್ನುವ, ಬರೆಯುತ್ತಿರುವ ವಿದ್ಯಾರ್ಥಿಗಳಿಗೆ, ಲೇಖಕರಿಗೆ ಮತ್ತು ಸಂಶೋಧಕರಿಗೆ ಒಂದು ಅತ್ಯುತ್ತಮ ಕೈದೀವಿಗೆಯಾಗಿದೆ. ಈಗಾಗಲೇ ಕನ್ನಡದಲ್ಲಿ ವಿಪುಲವಾಗಿ ವೈಜ್ಞಾನಿಕ ಲೇಖನ ಮತ್ತು ವಿಜ್ಞಾನ ಪುಸ್ತಕಗಳನ್ನು ಬರೆದು ಪಕ್ವವಾಗಿರುವ ಲೇಖಕರು ಈ ಕೃತಿಯನ್ನು ಸಾಮೂಹಿಕವಾಗಿ ರಚಿಸಿದ್ದಾರೆ. ತಮ್ಮ ಆದ್ಯತೆ, ಶೈಲಿ ಮತ್ತು ಅನುಭವದ ಸಾರವನ್ನು ತಮ್ಮ ತಮ್ಮ ಅಧ್ಯಾಯಗಳಲ್ಲಿ ಸರಳಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಇಲ್ಲಿರುವ ಒಂಬತ್ತು ಅಧ್ಯಾಯಗಳು ಬಿಡಿಬಿಡಿ ಲೇಖನಗಳಲ್ಲ. ಬದಲಾಗಿ ಅಧ್ಯಾಯದಿಂದ ಅಧ್ಯಾಯಕ್ಕೆ ಆಲೋಚನಾ ಲಹರಿ ಸರಾಗವಾಗಿ ಹರಿದುಹೋಗುವಂತೆ ರೂಪಿಸಲಾಗಿರುವ ಪ್ರಬುದ್ಧ ಲೇಖನಗಳ ಗುಚ್ಛ. ಹೀಗಾಗಿ ಇದನ್ನು ಬಳಸುವವರಿಗೆ ಇದು ಸರಳ ಮಾರ್ಗದರ್ಶಿಯಾಗಿದೆ ಎಂದು ಹೇಳಬಹುದು. ಎಂಟು ಜನ ಪ್ರಸಿದ್ಧ ಅನುಭವಿ ಲೇಖಕರು ಇದಕ್ಕೆ ನೀಡಿರುವ ಕೊಡುಗೆಯೇ ಸಾಕಷ್ಟು ಪ್ರಾತಿನಿಧಿಕವಾಗಿದೆ. ಇಲ್ಲಿರುವ ಅಧ್ಯಾಯಗಳ ಕ್ರಮವನ್ನು ಗಮನಿಸಿದಾಗ ಈ ಪುಸ್ತಕದ ವೈಶಿಷ್ಟö್ಯ ಅರ್ಥವಾಗುತ್ತದೆ:

‘ವಿಜ್ಞಾನ ಸಂವಹನ ತತ್ವಗಳು, ತಂತ್ರಗಳು’ ಎಂಬ ಮೊದಲನೇ ಅಧ್ಯಾಯವನ್ನು ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ ಬರೆದಿದ್ದಾರೆ. ಇಲ್ಲಿ ಸಾಹಿತ್ಯ ನಿರ್ಮಾಣವನ್ನೂ ಒಳಗೊಂಡ ಹಾಗೆ ಒಟ್ಟಾರೆ ಸಂವಹನಗಳ ತತ್ವಗಳ ಕುರಿತು ಜಿಜ್ಞಾಸೆ ಇದೆ. ತತ್ವಗಳು ಕಾರ್ಯಾತ್ಮಕವಾಗಿ ಪ್ರಯೋಜನಕ್ಕೆ ಬರುವ ರೀತಿಯಲ್ಲಿ ತಂತ್ರಗಳನ್ನೂ ಚರ್ಚಿಸಲಾಗಿದೆ. ಪತ್ರಿಕೆ, ರೇಡಿಯೋ, ವಿಡಿಯೋ, ನಾಟಕ, ಕರಪತ್ರ, ಭಿತ್ತಿಪತ್ರ ಯಾವುದೇ ರೀತಿಯ ಮಾಧ್ಯಮಕ್ಕಾಗಿ ವಿಜ್ಞಾನ ಸಾಮಗ್ರಿಯನ್ನು ಸಿದ್ಧಪಡಿಸುವಾಗಲೂ ಪ್ರಯೋಜನಕ್ಕೆ ಬರುವ ಕೆಲವು ಹೊಳಹುಗಳನ್ನು ಈ ಅಧ್ಯಾಯ ನೀಡುತ್ತದೆ.

‘ವಿಜ್ಞಾನ ಪಾರಿಭಾಷಿಕ ಪದಗಳು; ಬಳಕೆ, ಸೃಷ್ಟಿ’ ಎಂಬ ಎರಡನೇ ಅಧ್ಯಾಯವನ್ನು ಡಾ.ನಾ.ಸೋಮೇಶ್ವರ ಅವರು ಬರೆದಿದ್ದಾರೆ. ಪಾರಿಭಾಷಿಕ ಪದಗಳು ಎಂದರೇನು? ಅವುಗಳ ಗುಣಲಕ್ಷಣಗಳೇನು? ಪಾರಿಭಾಷಿಕ ಪದಕೋಶದ ಬಳಕೆ ಹೇಗೆ? ಅದರ ವಿಶೇಷತೆ ಏನು? ಪಾರಿಭಾಷಿಕ ಪದಕೋಶಗಳ ಸೃಷ್ಟಿಯ ವಿಧಾನಗಳು ಯಾವುವು? ಪಾರಿಭಾಷಿಕ ಪದಗಳನ್ನು ಬಳಸುವಾಗ ಇರುವ ಅಂತಾರಾಷ್ಟಿçÃಯ ವಿಜ್ಞಾನ ಪದಗಳು, ಅಂಕಿ ಸಂಖ್ಯೆಗಳು, ಚಿಹ್ನೆಗಳು, ತೂಕ ಮತ್ತು ಅಳತೆಯ ಮೂಲಮಾನಗಳು ಮುಂತಾದ ವಿಷಯಗಳ ಬಗ್ಗೆ ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

‘ಡಿಜಿಟಲ್ ಸನ್ನಿವೇಶದಲ್ಲಿ ಪಾರಿಭಾಷಿಕ ಪದಗಳ ಬಳಕೆ’ ಎಂಬ ಮೂರನೇ ಅಧ್ಯಾಯವನ್ನು ಡಾ.ಯು.ವಿ.ಪವನಜ ಅವರು ಬರೆದಿದ್ದಾರೆ. ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಬಗೆಗಿನ ಸಾಹಿತ್ಯ ಸೃಷ್ಟಿ ತಕ್ಕ ಮಟ್ಟಿಗೆ ಆಗುತ್ತಿದೆ. ಆದರೆ ಇದು ಸಾಲದು. ಇನ್ನೂ ಬಹಳಷ್ಟು ಆಗಬೇಕಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಬೆಳೆಯಬೇಕಾದರೆ, ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಸಾಹಿತ್ಯ ನಿರ್ಮಾಣ ದೊಡ್ಡಮಟ್ಟದಲ್ಲಿ ಆಗಬೇಕಾಗಿದೆ ಎಂಬ ಆಶಯವನ್ನಿಟ್ಟುಕೊಂಡು ಲೇಖಕರು ಈ ಅಧ್ಯಾಯ ಬರೆದಿದ್ದಾರೆ.

‘ವಿಜ್ಞಾನ ಸಂವಹನಕ್ಕಾಗಿ ಲಭ್ಯವಿರುವ ಸಾಧನ, ಸಲಕರಣೆ, ಸಂಪನ್ಮೂಲಗಳು’ ಎಂಬ ನಾಲ್ಕನೇ ಅಧ್ಯಾಯವನ್ನು ಟಿ.ಜಿ.ಶ್ರೀನಿಧಿ ಬರೆದಿದ್ದಾರೆ. ವಿಜ್ಞಾನ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ನಮ್ಮ ಜೀವನದ ಎಲ್ಲ ಅಂಶಗಳನ್ನೂ ಪ್ರಭಾವಿಸುತ್ತಿವೆ. ನಮಗೆ ಬೇಕೋ, ಬೇಡವೋ ಪ್ರತಿ ಹೆಜ್ಜೆಯಲ್ಲೂ ನಾವು ಈ ಆವಿಷ್ಕಾರಗಳ ನೆರವು ಪಡೆದುಕೊಳ್ಳುತ್ತೇವೆ. ಅವು ನೀಡುವ ಸವಲತ್ತುಗಳನ್ನೂ ಸಮರ್ಥವಾಗಿ ಬಳಸಿಕೊಳ್ಳಬೇಕೆಂದರೆ, ಈ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಹೀಗಿರುವುದರಿಂದಲೇ ವಿಜ್ಞಾನ ಸಂವಹನಕ್ಕೆ ಇದೀಗ ಎಲ್ಲಿಲ್ಲದ ಮಹತ್ವ ಬಂದಿದೆ, ಎಂಬ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಲೇಖಕರು ಈ ಅಧ್ಯಾಯದಲ್ಲಿ ವಿಜ್ಞಾನ ಸಂವಹನದ ಪ್ರಕ್ರಿಯೆ, ಮಾಹಿತಿ ಸಂಗ್ರಹ, ಸಂವಹನ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

‘ಪತ್ರಿಕೆಗಳಿಗೆ ಬರೆಯುವುದು ಹೇಗೆ?’ ಎಂಬ ಐದನೇ ಅಧ್ಯಾಯವನ್ನು ನಾಗೇಶ ಹೆಗಡೆ ಬರೆದಿದ್ದಾರೆ. ಜನಸಾಮಾನ್ಯರ ಮಟ್ಟಕ್ಕೆ ಇಳಿದು ವಿಷಯವನ್ನು ನೋಡದಿದ್ದರೆ, ಜನಸಾಮಾನ್ಯರಿಗೆ ನೀವು ವಿಜ್ಞಾನವನ್ನು ಬರೆಯಲು ಸಾಧ್ಯವಿಲ್ಲ. ನೋಡುವ ಕಣ್ಣಿದ್ದರೆ ನೀವಿರುವ ಊರಿನಲ್ಲೇ ಜನಸಾಮಾನ್ಯರ ಜ್ಞಾನದ ಮಟ್ಟವನ್ನು ಹೆಚ್ಚಿಸುವ ಅದೆಷ್ಟೋ ವಿಜ್ಞಾನ ವಿಷಯಗಳು ಕಣ್ಣಿಗೆ ಬೀಳಬಹುದು. ಜಾಗತಿಕ ಮಟ್ಟದ ಸಾಧನೆ-ಸಂಶೋಧನೆ ಮಾಡಿದ ವ್ಯಕ್ತಿಗಳು ನಮ್ಮ ಆಸುಪಾಸಿನಲ್ಲಿಯೇ ಇರಬಹುದು. ಅರಿಯುವ ಕುತೂಹಲ ಇರಬೇಕು.

‘ರೇಡಿಯೋಗಾಗಿ ವಿಜ್ಞಾನ ಬರೆಯುವುದು ಹೇಗೆ?’ ಎಂಬ ಏಳನೇ ಅಧ್ಯಾಯವನ್ನು ಸುಮಂಗಲಾ ಎಸ್.ಮುಮ್ಮಿಗಟ್ಟಿ ಬರೆದಿದ್ದಾರೆ. ರೇಡಿಯೋಗಾಗಿ ವಿಜ್ಞಾನವನ್ನು ಬರೆಯುವಾಗ ಇರುವ ಸಾಧ್ಯತೆಗಳು, ಇತಿಮಿತಿಗಳು, ವಿಷಯದ ಆಯ್ಕೆ, ಬರೆಯುವ ಹಂತಗಳು, ಬರವಣಿಗೆಯ ಶೈಲಿ, ಇದಾದ ನಂತರ ಇವುಗಳನ್ನು ಧ್ವನಿ ಮಾಧ್ಯಮದಲ್ಲಿ ಅಳವಡಿಸುವ ವಿಧಾನ, ಹಿನ್ನೆಲೆ ಸಂಗೀತ, ಮುಂತಾದ ವಿಷಯಗಳನ್ನು ಉದಾಹರಣೆಗಳೊಂದಿಗೆ ಇಲ್ಲಿ ಚರ್ಚಿಸಿದ್ದಾರೆ.

‘ಅನುವಾದ: ಭಾಷೆ-ಸಂಸ್ಕೃತಿಗಳ ಮುಖಾಮುಖಿ’ ಎಂಬ ಒಂಬತ್ತನೇ ಅಧ್ಯಾಯವನ್ನು ಪ್ರೊ.ಪಿ.ಆರ್‌ನಾಗರಾಜು ಬರೆದಿದ್ದಾರೆ. ಸಾಹಿತ್ಯ ಕೃತಿಯ ಅನುವಾದಕ್ಕೂ, ಜನಪ್ರಿಯ ವಿಜ್ಞಾನ ಕೃತಿಯ ಅನುವಾದಕ್ಕೂ ಅಂತರವಿದೆ. ಕೆಲವು ಸಾಮಾನ್ಯ ಸಮಸ್ಯೆಗಳೂ ಇವೆ. ಏಕೆಂದರೆ, ಅನುವಾದವೆಂದರೆ ಎರಡು ಭಾಷೆಗಳ ಶಬ್ದಗಳ ಸಮಾಂತರ ಓಟ/ಹೆಣಿಗೆ ಎನಿಸಿದರೂ ವಾಸ್ತವವಾಗಿ ಅದು ಎರಡು ಸಂಸ್ಕೃತಿಗಳ ಮುಖಾಮುಖಿ ಎಂಬ ಅನೇಕ ಅಂಶಗಳನ್ನು ಅತ್ಯಂತ ಸ್ಥೂಲವಾಗಿ ಹಾಗೂ ಸಮರ್ಪಕವಾಗಿ ಹೆಣೆದಿದ್ದಾರೆ.

ಒಟ್ಟಾರೆ ಈ ಪುಸ್ತಕವು ಕನ್ನಡ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯವನ್ನು ನಿರ್ಮಾಣ ಮಾಡುವವರಿಗೆ ಒಂದು ಅತ್ಯುತ್ತಮ ಕೈಪಿಡಿ.

Leave a Reply

Your email address will not be published.