ವಿತ್ತೀಯ ಹೊಣೆಗಾರಿಕೆಯಲ್ಲಿ ಹಳಿತಪ್ಪಿದ ಸರ್ಕಾರ

ರಾಜ್ಯ ಜಿಡಿಪಿ ಅನುಪಾತದಲ್ಲಿ ಕರ್ನಾಟಕ ಸರ್ಕಾರವು ಸಾಲ ಮಾಡಿ ತನ್ನ ಆಯವ್ಯಯವನ್ನು ಸರಿದೂಗಿಸುವ ಪ್ರಯತ್ನ ದೋಷಪೂರಿತವಾಗಿದೆ. ಬಜೆಟ್‍ನಲ್ಲಿಯ ಅಂಕಿಅಂಶಗಳು ‘ಜೇಬಿನ ಹಣ’ವಾಗಿದ್ದರೆ ಜಿಡಿಪಿಯ ಅಂಕಿಅಂಶಗಳು ‘ಕನ್ನಡಿ ಗಂಟು’ ಆಗಿದೆ. ಈ ಕನ್ನಡಿ ಗಂಟಿನ ಅನುಪಾತದಲ್ಲಿ ಸಾಲ ಮಾಡಿ ಜೇಬಿನ ಖರ್ಚನ್ನು ಸರಿದೂಗಿಸುವ ಹುನ್ನಾರ ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಲಿದೆ.

ಸಾಲಮನ್ನಾ ಮತ್ತಿತರ ಅವೈಜ್ಞಾನಿಕ ಬಾಬತ್ತುಗಳಿಗೆ ಹಣ ಮೀಸಲಿಟ್ಟ ಕುಮಾರಸ್ವಾಮಿ ಸರ್ಕಾರವು ಕಳೆದ ಎರಡು ಬಜೆಟ್ ನಿರೂಪಣೆಯಲ್ಲಿ ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. 2018-19ರ ಮತ್ತು 2019-20ರ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿಯವರು ತಮ್ಮ ಸರ್ಕಾರದಿಂದ ಪಡೆಯಲಾಗಿರುವ ಸಾಲದ ಪ್ರಮಾಣವನ್ನು ಸಮರ್ಥಿಸಿಕೊಳ್ಳುತ್ತಾ ಈ ಕೆಳಕಂಡಂತೆ ಹೇಳಿಕೊಂಡಿದ್ದಾರೆ.

2018-19ರ ಬಜೆಟ್ ಪತ್ರದಿಂದ ಉಲ್ಲೇಖ:

“181. ರಾಜಸ್ವ ಹೆಚ್ಚುವರಿಯನ್ನು 106 ಕೋಟಿ ರೂಗಳೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆಯು 40,753 ಕೋಟಿ ರೂಗಳಾಗುತ್ತದೆಂದು ನಿರೀಕ್ಷಿಸಲಾಗಿದ್ದು, ಅದು ರಾಜ್ಯದ ಆಂತರಿಕ ಉತ್ಪನ್ನದ ಶೆ.2.89 ರಷ್ಟಾಗಿರುತ್ತದೆ. 2018-19ರ ಕೊನೆಯಲ್ಲಿ 2,92,220 ಕೋಟಿ ರೂಗಳ ಒಟ್ಟು ಹೊಣೆಗಾರಿಕೆಗಳು ರಾಜ್ಯದ ಆಂತರಿಕ ಉತ್ಪನ್ನದ ಶೇ.20.75 ರಷ್ಟಾಗುತ್ತದೆಂದು ಅಂದಾಜು ಮಾಡಲಾಗಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ 2018-19ನೇ ವರ್ಷಕ್ಕೆ ನಿಗದಿಪಡಿಸಿರುವ ಶೇ.25ರ ಮಿತಿಯೊಳಗಿರುತ್ತದೆ. 182.ಆದ್ದರಿಂದ, ಎಲ್ಲಾ ಮೂರು ವಿತ್ತೀಯ ಪರಿಮಾಣಗಳು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮವು ನಿಗದಿಪಡಿಸಿರುವ ಮಿತಿಯೊಳಗಿರುತ್ತದೆ ಹಾಗೂ ಇದು ರಾಜ್ಯ ವಿತ್ತೀಯ ಶಿಸ್ತನ್ನು ಪ್ರತಿಬಿಂಬಿಸುತ್ತದೆ.”

2019-20ರ ಬಜೆಟ್ ಪತ್ರದಿಂದ ಉಲ್ಲೇಖ:

“352. ರಾಜಸ್ವ ಹೆಚ್ಚುವರಿಯನ್ನು 258 ಕೋಟಿ ರೂಗಳೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆಯು 42,051 ಕೋಟಿ ರೂಗಳಾಗುತ್ತದೆಂದು ನಿರೀಕ್ಷಿಸಲಾಗಿದ್ದು, ಅದು ರಾಜ್ಯದ ಆಂತರಿಕ ಉತ್ಪನ್ನದ ಶೆ.2.65 ರಷ್ಟಾಗಿರುತ್ತದೆ. 2019-20ರ ಕೊನೆಯಲ್ಲಿ 3,27,209 ಕೋಟಿ ರೂಗಳ ಒಟ್ಟು ಹೊಣೆಗಾರಿಕೆಗಳು ರಾಜ್ಯದ ಆಂತರಿಕ ಉತ್ಪನ್ನದ ಶೇ.20.60 ರಷ್ಟಾಗುತ್ತದೆಂದು ಅಂದಾಜು ಮಾಡಲಾಗಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ 201920ನೇ ವರ್ಷಕ್ಕೆ ನಿಗದಿಪಡಿಸಿರುವ ಶೇ.25ರ ಮಿತಿಯೊಳಗಿರುತ್ತದೆ.182.ಆದ್ದರಿಂದ, ಎಲ್ಲಾ ಮೂರು ವಿತ್ತೀಯ ಪರಿಮಾಣಗಳು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮವು ನಿಗದಿಪಡಿಸಿರುವ ಮಿತಿಯೊಳಗಿರುತ್ತದೆ ಹಾಗೂ ಇದು ರಾಜ್ಯ ವಿತ್ತೀಯ ಶಿಸ್ತನ್ನು ಪ್ರತಿಬಿಂಬಿಸುತ್ತದೆ.”

2018-19ರ ಮತ್ತು 2019-20 ರ ಬಜೆಟ್ ಒಕ್ಕರಣೆಗಳೆರಡರಲ್ಲೂ ಮುಖ್ಯಮಂತ್ರಿಯವರು ತಾವು ಬಜೆಟ್ ವೆಚ್ಚ ಸರಿದೂಗಿಸಲು ಮಾಡಿರುವ ಸಾಲವನ್ನು ಸಮರ್ಥಿಸಿಕೊಳ್ಳಲು ರಾಜ್ಯ ಜಿಡಿಪಿಯ ಮೊರೆ ಹೋಗಿದ್ದಾರೆ. ವಾರ್ಷಿಕ ಸಾಲ ಪ್ರಮಾಣವು ರಾಜ್ಯ ಜಿಡಿಪಿಯ ಶೇಕಡಾ 3 ಕ್ಕಿಂತ ಕಡಿಮೆಯಿದೆಯೆಂದು ಹಾಗೂ ಇದುವರೆಗಿನ ಸಾಲ/ದಾಯಿತ್ವದ ಕ್ಯುಮುಲೇಟಿವ್ ಹೊಣೆಗಾರಿಕೆಯು ರಾಜ್ಯ ಜಿಡಿಪಿಯ ಶೇಕಡಾ 20 ಕ್ಕಿಂತ ಕಡಿಮೆಯಿದೆಯೆಂದು ಹೇಳಿಕೊಂಡಿದ್ದಾರೆ. ಮೇಲಾಗಿ ತಮ್ಮ ಸರ್ಕಾರವು ವಿತ್ತೀಯ ಶಿಸ್ತಿನ ಪರಿಮಿತಿಯನ್ನು ದಾಟಿಲ್ಲವೆಂದು ಹೇಳಿಕೊಂಡಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಾಲದ ಪ್ರಮಾಣ ಮತ್ತು ಅದಕ್ಕೆ ತಕ್ಕಂತೆ ಕಟ್ಟಬೇಕಿರುವ ಬಡ್ಡಿಯ ಪ್ರಮಾಣವನ್ನು ರಾಜ್ಯ ಜಿಡಿಪಿಯ ಅನುಪಾತದಲ್ಲಿ ಸಮಜಾಯಿಸಿಕೊಳ್ಳುವುದು ಸರಿಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.

ರಾಜ್ಯ ಜಿಡಿಪಿ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಒಂದು ವರ್ಷದ ಸಮಯದಲ್ಲಿ ಒಟ್ಟು ಉತ್ಪಾದನೆಯಾಗುವ ಎಲ್ಲಾ ಪದಾರ್ಥ ಗಳು ಹಾಗೂ ಸೇವೆಗಳ ಮಾರುಕಟ್ಟೆ ಮೌಲ್ಯವೇ ಈ ರಾಜ್ಯ ಜಿಡಿಪಿ. ಇದರಲ್ಲಿ ಕೃಷಿ ಉತ್ಪನ್ನಗಳಿಂದ ಹಿಡಿದು ಹೆಚ್‍ಎಎಲ್ ಸಂಸ್ಥೆಯು ತಯಾರಿಸಿದ ವಿಮಾನಗಳವರೆಗೆ ಹಾಗೂ ಬೆಂಗಳೂರಿನ ಸಾಫ್ಟ್‍ವೇರ್ ಸಂಸ್ಥೆಗಳು ನೀಡುವ ಸೇವೆಗಳ ಮಾರುಕಟ್ಟೆ ಮೌಲ್ಯಗಳೆಲ್ಲವೂ ಸೇರುತ್ತವೆ. ಬೇರೆ ರಾಜ್ಯಗಳ ಹೋಲಿಕೆಯಲ್ಲಿ ಕರ್ನಾಟಕದ ಜಿಡಿಪಿ ಬೆಳವಣಿಗೆ ಉತ್ತಮವಾಗಿದೆ. ರಾಜ್ಯಗಳ ಜಿಡಿಪಿ ಅಂಕಿಅಂಶಗಳು ಈ ಕೆಳಕಂಡಂತಿವೆ. 

ಬಜೆಟ್‍ಅನುಪಾತದಲ್ಲಿರಾಜ್ಯ ಸರ್ಕಾರದ ಸಾಲ ಮತ್ತು ಬಡ್ಡಿ (ರೂ. ಕೋಟಿಗಳಲ್ಲಿ)

15-16 (ನಿಖರ) 16-17 (ನಿಖರ) 17-18 (ನಿಖರ) 18-19 (ಸುಧಾರಿತ) 19-20 (ಅಂದಾಜು)
ಬಜೆಟ್‍ಗಾತ್ರ 1,38,318 1,62,180 1,78,865 2,05,376 2,23,680
ವಾರ್ಷಿಕಸಾಲ 21,484   31,283 26,453 46,330 48,876
ಇದುವರೆಗಿನ ಸಾಲ 1,75,623    2,11,070 2,33,057 2,69,798 3,08,819
ವಾರ್ಷಿಕಬಡ್ಡಿ 10,746   12,033 13,929 15,595 19,060
ವಾರ್ಷಿಕ ಬಜೆಟ್‍ಗಾತ್ರದಲ್ಲಿ ಸಾಲದಅನುಪಾತ 15.53%    19.29% 14.79% 22.56% 21.85%
ವಾರ್ಷಿಕ ಬಜೆಟ್‍ಗಾತ್ರದಲ್ಲಿ ಬಡ್ಡಿಯಅನುಪಾತ 7.77%   7.42% 7.78% 7.59% 8.52%

 

ಭಾರತ ಸರ್ಕಾರದ ಸಂಖ್ಯಾಶಾಸ್ತ್ರ ಮತ್ತು ಯೋಜನೆ ಜಾರಿ ಮಂತ್ರಾಲಯದಲ್ಲಿ ಕ್ರೂಢೀಕರಿಸಲಾಗುವ ಈ ರಾಜ್ಯ ಜಿಡಿಪಿ ಅಂಕಿಅಂಶಗಳು ಸ್ಥೂಲವಾಗಿ ಮತ್ತು ಅಂದಾಜಿನ ಲೆಕ್ಕವಾಗಿರುತ್ತವೆ. ಕೃಷಿ-ತೋಟಗಾರಿಕೆಯ ಒಟ್ಟು ವ್ಯಾಪಾರ ವಹಿವಾಟಿನ ಅಂಕಿಅಂಶಗಳಾಗಲಿ ಅಥವಾ ಸಣ್ಣ-ಮಧ್ಯಮ-ಗುಡಿ ಕೈಗಾರಿಕೆ ಮತ್ತು ವ್ಯಾಪಾರ ಅಹಿವಾಟಿನ ಅಂಕಿಅಂಶಗಳಾಗಲಿ ನಿಖರವಾಗಿ ದೊರೆಯುವುದು ಸಾಧ್ಯವಿಲ್ಲ. ಆದಾಗ್ಯೂ ಇದನ್ನು ವರ್ಷದಿಂದ ವರ್ಷಕ್ಕೆ ಭಾರತ ಸರ್ಕಾರ ಪ್ರಕಟಿಸುತ್ತಾ ಬಂದಿದೆ. 18-19 ರ ಅಂಕಿಅಂಶಗಳು ಪ್ರಕಟವಾಗಲು ಇನ್ನೂ ಹಲವು ತಿಂಗಳುಗಳೇ ಬೇಕಿದೆ. 2019-20 ರ ಅಂಕಿಅಂಶಗಳ ಕ್ರೂಢೀಕರಣೆಯು 2020 ರ ವರ್ಷದ ಕೊನೆಯವರೆಗೆ ಸಾಗಲಿದೆ.

ರಾಜ್ಯಜಿಡಿಪಿಯ ಕೆಲವು ನಿದರ್ಶನಗಳು (ರೂ.ಕೋಟಿಗಳಲ್ಲಿ)

2011-12 ರಲ್ಲಿ   2014-15 ರಲ್ಲಿ 2017-18 ರಲ್ಲಿ
ಬಿಹಾರ   2,47,144 3,42,950  4,87,628
ಪಶ್ಚಿಮ ಬಂಗಾಳ   5,20,485 7,18,081 10,20,857
ಕರ್ನಾಟಕ   6,06,010 9,12,646 12,68,880
ಉತ್ತರ ಪ್ರದೇಶ    7,24,049 10,11,789 13,75,607
ತಮಿಳುನಾಡು   7,51,485 10,72,677 14,27,073
ಮಹಾರಾಷ್ಟ್ರ  12,80,369 17,80,721 24,96,505

 

ರಾಜ್ಯವಾರು ಜಿಡಿಪಿಯ ಅಂಕಿಅಂಶಗಳ ಅನಿಶ್ಚಿತತೆಯ ಜೊತೆಗೆ ಸರ್ಕಾರಿ ಆಯವ್ಯಯದ ಮಾನದಂಡವನ್ನು ಈ ಅನಿರ್ದಿಷ್ಟ ಲೆಕ್ಕಾಚಾರದ ಜೊತೆಗೆ ಸೇರಿಸುವ ಅಸಮಂಜಸತೆಯೂ ನಮ್ಮ ಮುಂದಿದೆ. ಜಿಡಿಪಿ ಅಂಕಿಅಂಶಗಳು ಬೇರೊಬ್ಬರ ಆದಾಯದ ವಿವರಗಳು. ಇವು ಸರ್ಕಾರದ ಆದಾಯಕ್ಕೆ ಮಾನದಂಡವೇನಲ್ಲ. ಉದಾಹರಣೆಗೆ ಕೃಷಿಯಿಂದ ಸರ್ಕಾರಕ್ಕೆ ಬರುವ ತೆರಿಗೆ ಆದಾಯ ಶೂನ್ಯ. ಕೈಗಾರಿಕೆ-ಸೇವಾಕ್ಷೇತ್ರಗಳಿಂದ ರಾಜ್ಯ ಸರ್ಕಾರಕ್ಕೆ ಬರುವ ಆದಾಯವೂ ಅಷ್ಟಕ್ಕಷ್ಟೆಯೇ. ಬೆಂಗಳೂರಿನ ಡಿಜಿಟಲ್ ಉದ್ಯಮಗಳು ಆದಾಯತೆರಿಗೆ-ಜಿಎಸ್‍ಟಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತವೆ. ಕೇಂದ್ರವು ತನ್ನ ತೆರಿಗೆ ಆದಾಯವನ್ನು ರಾಜ್ಯಗಳ ನಡುವೆ ವಿಂಗಡಣೆ ಮಾಡುವ ಮಾನದಂಡವೂ ಕರ್ನಾಟಕದ ಪರವಾಗಿಲ್ಲ. ಉದ್ಯಮಗಳಿಂದ ಮತ್ತು ಸಂಬಳದಾರರಿಂದ ಸಾರಿಗೆ, ಅಬಕಾರಿ, ನೋಂದಣಿ ಶುಲ್ಕ ಮತ್ತಿತರ ಪರೋಕ್ಷ ಆದಾಯಗಳು ರಾಜ್ಯ ಸರ್ಕಾರಕ್ಕೆ ಬರಬಹುದಾದರೂ ಇವುಗಳ ಸಂಗ್ರಹಣೆಯಲ್ಲಿ ತನ್ನದೇ ಆದ ಮಿತಿಯಿದೆ. ರಾಜ್ಯ ವ್ಯಾಟ್ ಮತ್ತು ಜಿಎಸ್‍ಟಿ ತೆರಿಗೆ ಹಣದಲ್ಲಿನ ಪಾಲು ಹಂಚಿಕೆಯಲ್ಲಿಯೂ ಕೇಂದ್ರದ ನೀತಿ ರಾಜ್ಯಕ್ಕೆ ಪೂರಕವಾಗೇನಿಲ್ಲ.

ಹೀಗಾಗಿ ರಾಜ್ಯ ಜಿಡಿಪಿ ಅನುಪಾತದಲ್ಲಿ ಕರ್ನಾಟಕ ಸರ್ಕಾರವು ಸಾಲ ಮಾಡಿ ತನ್ನ ಆಯವ್ಯಯವನ್ನು ಸರಿದೂಗಿಸುವ ಪ್ರಯತ್ನ ದೋಷಪೂರಿತವಾಗಿದೆ. ಬಜೆಟ್‍ನಲ್ಲಿಯ ಅಂಕಿಅಂಶಗಳು ‘ಜೇಬಿನ ಹಣ’ವಾಗಿದ್ದರೆ ಜಿಡಿಪಿಯ ಅಂಕಿಅಂಶಗಳು ‘ಕನ್ನಡಿ ಗಂಟು’ ಆಗಿದೆ. ಈ ಕನ್ನಡಿ ಗಂಟಿನ ಅನುಪಾತದಲ್ಲಿ ಸಾಲ ಮಾಡಿ ಜೇಬಿನ ಖರ್ಚನ್ನು ಸರಿದೂಗಿಸುವ ಹುನ್ನಾರ ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಲಿದೆ. ಇದನ್ನು ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ವಿತ್ತಮಂತ್ರಿಗಳು ಬಹುಬೇಗ ಅರಿತರೆ ಒಳಿತು.

ಇದಕ್ಕೆ ಹೊರತಾಗಿ ರಾಜ್ಯದ ಸಾಲ ಮತ್ತು ಬಡ್ಡಿಯ ಪ್ರಮಾಣಗಳ ಮಿತಿಯನ್ನು ರಾಜ್ಯದ ಬಜೆಟ್ ಗಾತ್ರದ ಅನುಪಾತದಲ್ಲಿ ನೋಡೋಣ. ಈ ಜೊತೆಗಿನ ಕೋಷ್ಟಕದಲ್ಲಿನ ಅಂಕಿಅಂಶಗಳು ಸಾಲ ಮತ್ತು ಬಡ್ಡಿಯ ಅನಾರೋಗ್ಯಕರ ಬೆಳವಣಿಗೆಯ ದಿಕ್ಕು ತೋರಿಸುತ್ತವೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಬಜೆಟ್‍ನ 15% ರಷ್ಟಿದ್ದ ವಾರ್ಷಿಕ ಸಾಲ ಇದೀಗ 22% ಅನ್ನು ಮೀರಿದೆ. ಸಾಲಮನ್ನಾ ಜಾರಿಯಲ್ಲಿ ಈ ಸಾಲದ ಅನುಪಾತ ಮತ್ತಷ್ಟು ಹೆಚ್ಚಲಿದೆ. ಕಳೆದ ಕೆಲವೆರೆಡು ವರ್ಷಗಳಲ್ಲಿ ಹೆಚ್ಚಿದ ಸಾಲದ ಹೊರೆಯಿಂದ ವಾರ್ಷಿಕ ಬಡ್ಡಿಯ ಪ್ರಮಾಣವೂ ಹೆಚ್ಚಿದೆ. ಕಳೆದ ಐದು ವರ್ಷಗಳಲ್ಲಿ ಇದು ಶೇಕಡಾ ಒಂದರಷ್ಟು ಹೆಚ್ಚಾಗಿದ್ದರೂ ಮುಂದಿನ ದಿನಗಳಲ್ಲಿ ಇದು ಬಜೆಟ್ ಗಾತ್ರದ ಶೇಕಡಾ ಹತ್ತನ್ನು ಮೀರಿಸುವುದರಲ್ಲಿ ಸಂದೇಹವಿಲ್ಲ. ಈ ಬಡ್ಡಿಯ ಹೊರೆಯ ಜೊತೆಗೆ ಅಸಲು ಮರುಪಾವತಿಯ ಹೊಡೆತವೂ ಸೇರಿದರೆ ಕರ್ನಾಟಕ ಸರ್ಕಾರದ ಐಚ್ಛಿಕ ವೆಚ್ಚಗಳು ಕ್ರಮೇಣ ಇಳಿಕೆಯಾಗಲಿವೆ. ಸರ್ಕಾರಿ ಸ್ವತ್ತನ್ನು ನಿರ್ಮಿಸಬಲ್ಲ ‘ಕ್ಯಾಪಿಟಲ್’ ವೆಚ್ಚಗಳನ್ನು ನಾವು ಕೈಬಿಡಬೇಕಾದ ಪರಿಸ್ಥಿತಿಯೂ ಬರಬಹುದು.

ಕಾಲ ಮಿಂಚುವ ಮೊದಲೇ ಕುಮಾರಸ್ವಾಮಿಯವರು ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ಅಧಿಕಾರಿಗಳು ರಾಜಕಾರಣಿಗಳಿಗೆ ತಿಳುವಳಿಕೆ ಹೇಳಬೇಕು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಮಂತ್ರಿಗಳ ತಪ್ಪು ನಿರ್ಧಾರಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲವಾದಲ್ಲಿ ಕರ್ನಾಟಕ ಸರ್ಕಾರ ಸಾಲದಸುಳಿಯ ಮೃತ್ಯುಜಾಲಕ್ಕೆ ಸಿಕ್ಕಿಹಾಕಿಕೊಳ್ಳುವುದು ಶತಸಿದ್ಧ.

Leave a Reply

Your email address will not be published.